

ಸಂಖ್ಯೆಗಳ ಹಿನ್ನೆಲೆಯಲ್ಲಿರುವ ಭಾವದಿಂದ ಪ್ರೇರಿತರಾಗದ ಸಂಖ್ಯಾಮಂದಮತಿಗಳು, ಸಂಖ್ಯಾಮುಗ್ಧರು’. - ಇದು ಖ್ಯಾತ ವಿಜ್ಞಾನಲೇಖಕ ದಿವಂಗತ ಜಿ.ಟಿ.ನಾರಾಯಣ ರಾವ್ (ಜಿಟಿಎನ್) ಅವರ ‘ಫರ್ವ ಯಕ್ಷಪ್ರಶ್ನೆ ಮತ್ತು ಇತರ ವಿಜ್ಞಾನ ಲೇಖನಗಳು’ ಪುಸ್ತಕದ ಲೇಖನವೊಂದರಿಂದ ಆಯ್ದ ಭಾಗ. ಗಣಿತವೆಂದರೆ ಗಾವುದ ದೂರ ಓಡುವವರಿಗೆ ದೊಡ್ಡದೊಡ್ಡ ಸಂಖ್ಯೆಗಳು, ಸೂತ್ರಗಳು ಹೇಗೆ ತಲೆಸುತ್ತು ಬರಿಸುತ್ತವೆಂಬ ಸೋದಾಹರಣ ವ್ಯಾಖ್ಯಾನ. ಇದರಲ್ಲಿ ಜಿಟಿಎನ್ ‘ಒಗ್ಗದಿಕೆ’ ಎಂಬ ಪದ ಬಳಸಿದ್ದಾರೆ, allergy ಎಂಬ ಆಂಗ್ಲಪದಕ್ಕೆ ಸಂವಾದಿಯಾಗಿ.
ಅದು ಅವರೇ ಟಂಕಿಸಿದ ಪದವೇನಲ್ಲ, ಆದರೆ ಒಳ್ಳೆಯ ಅತಿಸೂಕ್ತ ಕನ್ನಡ ಪದ. ಆ ಕಾಲದಲ್ಲಿ ವ್ಯಾಪಕವಾಗಿಯೇ ಬಳಕೆಯಲ್ಲಿತ್ತೆಂದು ಕಾಣುತ್ತದೆ. ಕಸ್ತೂರಿ ಮಾಸಪತ್ರಿಕೆಯ 1969ರ ಏಪ್ರಿಲ್ ಸಂಚಿಕೆಯಲ್ಲಿ ಗೂರಲು ಉಬ್ಬಸದ ಬಗೆಗಿನ ಲೇಖನದಲ್ಲಿ ಡಾ.ಡಿ.ಎಸ್.ಶಿವಪ್ಪ ‘ಯಾವುದೇ ವಸ್ತುವಿಗೆ ಒಗ್ಗದಿಕೆ(ಅಲರ್ಜಿ), ಸೊಂಕಿಲು, ಲೋಳ್ಪರೆಗಳಲ್ಲಾಗುವ ಬದಲಾವಣೆ, ಮನದ ಚಿಂತೆಗಳು, ಮೈಯಲ್ಲಿನ ಚೋದನಿಕ(ಹಾರ್ವೇನ್)ಗಳ ಏರುಪೇರು, ತನ್ನಿಯಮಿಕ(ಆಟೊನಾಮಿಕ್) ನರಗೆಲಸಗಳ ಅಸ್ತವ್ಯಸ್ತತೆ ಮುಂತಾದ ಹಲವಾರು ಕಾರಣಗಳಿಂದ ಉಬ್ಬಸ ಬರಬಹುದು...’ ಎಂದಿದ್ದಾರೆ. ಒಗ್ಗದಿಕೆ ಪದಕ್ಕೆ ಆವರಣಗಳೊಳಗೆ ಅಲರ್ಜಿ ಎಂದು ನಮೂದಿಸಿದ್ದಾರೆ. 1988ರ ಮೇ ತಿಂಗಳ ‘ಬಾಲವಿಜ್ಞಾನ’ ಪತ್ರಿಕೆಯ ಒಂದು ಲೇಖನದಲ್ಲಿ ‘ಅಲರ್ಜಿ ಎನ್ನುವುದನ್ನು ಒಗ್ಗದಿಕೆ ಎನ್ನಬಹುದು’ ಎಂದಿದ್ದಾರೆ ಲೇಖಕಿ ಶ್ರೀಮತಿ ಹರಿಪ್ರಸಾದ್. ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಲ್ಲಿಯೂ ‘ಒಗ್ಗದಿಕೆ: ಒಂದು ಪ್ರಭೇದದ ವ್ಯಕ್ತಿಗಳ ಮೇಲೆ ಪರಕೀಯ ವಸ್ತುವಿನ ಪ್ರಭಾವ ಸಾಮಾನ್ಯವಾಗಿ ನಿರೀಕ್ಷಿಸಿದಂತೆ ಒಂದೇ ಬಗೆಯದಾಗಿರಬೇಕು. ಹಾಗಲ್ಲದೇ ಆ ಪ್ರಭೇದದ ಕೆಲವರ ದೇಹಗಳ ಅಂಗಾಂಶಗಳು ತೀರ ಭಿನ್ನವಾದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರೆ ಅವರು ಆ ಪರಕೀಯ ವಸ್ತುವನ್ನು ಕುರಿತು ಒಗ್ಗದಿಕೆ(ಅಲರ್ಜಿ) ಹೊಂದಿರುವರು ಎನ್ನಲಾಗುತ್ತದೆ. ಆದ್ದರಿಂದ ಒಗ್ಗದಿಕೆ ಎನ್ನುವುದು ವ್ಯಕ್ತಿವಿಶಿಷ್ಟವಾದ ಒಂದು ಲಕ್ಷಣ. ಉದಾಹರಣೆಯಾಗಿ ಪರಾಗಜನಿತಜ್ವರ (ಹೇ-ಫೀವರ್), ಆಸ್ತಮಾ, ಇಸಬು(ಎಕ್ಸೀಮ), ಸಂಪರ್ಕದಿಂದ ಒದಗುವ ಚರ್ಮಪ್ರತಿಕ್ರಿಯೆ (ಕಾಂಟ್ಯಾಕ್ಟ್ ಡರ್ಮಟೈಟಿಸ್), ಔಷಧಗಳಿಗೆ ಪ್ರತಿಕ್ರಿಯೆಗಳು- ಮುಂತಾದುವುನ್ನು ಹೆಸರಿಸಬಹುದು’ ಎಂಬ ವಿವರಣೆ ಸಿಗುತ್ತದೆ.
ಅಂದರೆ, ವೈದ್ಯಕೀಯವಾಗಿಯೂ ಸಾಮಾನ್ಯ ವಿಷಯಗಳಲ್ಲೂ allergy ಎನ್ನುವುದಕ್ಕೆ ‘ಒಗ್ಗದಿಕೆ’ ಪದ ಒಗ್ಗುತ್ತದೆ ಅಂತಾಯ್ತು. ಪದರಚನೆಯೂ ಸಮರ್ಪಕವಾಗಿಯೇ ಇದೆ. ಒಗ್ಗು ಎಂದರೆ ಸೇರು, ರೂಢಿಯಾಗು, ಹೊಂದಿಕೊಳ್ಳು ಇತ್ಯಾದಿ. ಒಗ್ಗದ ಅಥವಾ ಒಗ್ಗದ್ದು ಎಂದರೆ ಹೊಂದಿಕೊಳ್ಳಲಾಗದ್ದು. ಭಾವಸೂಚಕ ನಾಮಪದವಾಗಿಸಿದರೆ ‘ಒಗ್ಗದಿಕೆ’ ಆಗುತ್ತದೆ. ಇದೇ ಪದವನ್ನು ಸೂಚಿಸಿದವರು: ಸುರೇಂದ್ರ ಪೈ, ರಾಜೇಂದ್ರ ಶಿವಬಸಪ್ಪ, ಬಾಲಕೃಷ್ಣ ಭಟ್, ಪ್ರಭುಪ್ರಸಾದ್ ನಡುತೋಟ, ಸುಬ್ಬಣ್ಣ ಎನ್.ಕೆ, ಸೀತಾ ವ್ಯಾಸಮುದ್ರಿ, ಡಾ.ಸಂಗಮೇಶ ಸುರಭಿ, ಎಂ.ಕೆ.ಬದರೀನಾಥ್, ವಿಜಯೇಂದ್ರ ರಾವ್, ಶಂಕರ ಎನ್.ವಿ, ಶಿವಕುಮಾರ್ ಸಿಂಗಟಗೆರೆ. ಇನ್ನೆರಡು ಅಕ್ಷರಗಳನ್ನು ಸೇರಿಸಿ ‘ಒಗ್ಗದಿರುವಿಕೆ’ ಎಂದವರು: ಮುಕುಂದ ಚಿಪಳೂಣಕರ್, ಶಾಂತಿನಿ ಮಂಜುನಾಥ್, ಪಾರ್ವತಿ ರಾಮನ್, ಉಷಾ ಕಿರಣ್, ಸಣ್ಣಪ್ಪ ನಾಯಕ್, ಪ್ರಮೋದ ಕಟ್ಟಿ, ಡಾ.ಕಾರ್ತಿಕ ಜೆ.ಎಸ್, ಸತೀಶ್ ಸಿ ಬಗ್ಗವಳ್ಳಿ, ರಂಜಿತಾ ಹಿರೇಮಠ, ಶಾರದಾ ಸಿ ಅಂಗಡಿ, ಅಪ್ಪುಮುತ್ಯ, ದಾಮೋದರ ಭಟ್, ವಿಲಾಸ ಹುದ್ದಾರ್, ಲೀಲಾವತಿ ಮಿಸ್ಕಿನ್, ಸುಜಾತಾ ಕುಲಕರ್ಣಿ, ಅರುಣಕುಮಾರ್ ಪಡುಕೋಣೆ. ‘ಒಗ್ಗದ’ ಅಥವಾ ‘ಒಗ್ಗದ್ದು’ ಎಂದರಷ್ಟೇ ಸಾಲದೇ ಎನ್ನುವವರು: ಆರ್.ವಿ.ಮೂರ್ತಿ, ಆನಂದರಾಮ ಶಾಸ್ತ್ರೀ, ಲಕ್ಷ್ಮಣ ಎನ್.ಶೆಟ್ಟಿ, ರಾಧಾ ಬಾಲಕೃಷ್ಣ, ಡಾ.ಸುರೇಶ ಸೊಣ್ಣಪ್ಪ, ವಿನಾಯಕ ಅವರಾದಿ, ಗೌತಮ ಮಾಡಗೇರಿ, ಚಿದಾನಂದ ಬಿರಾದಾರ, ಕಾಡೇಶ ವಿ.ಬಿ, ಶಿವಾನಂದ ಸಂಡೂರ್, ಕಡ್ಡಿ ಕೊಟ್ರೇಶ, ಷಡಕ್ಷರಮುನಿ ಸ್ವಾಮೀಜಿ, ಶ್ರೀಕರ ಭಂಡಾರ್ಕರ್. ಅಂದಹಾಗೆ ಆಂಗ್ಲದಲ್ಲಿ ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ allergy ಪದಬಳಕೆ 1906ರಲ್ಲಿ ಆರಂಭವಾದದ್ದು ಆಸ್ಟ್ರಿಯಾ ದೇಶದ ಶಿಶುವೈದ್ಯ ಡಾ.ಕ್ಲೆಮನ್ಸ್ ವೊನ್ ಪರ್ಕ್ವೆ ಎಂಬಾತನಿಂದ.
ಕಳೆದ ಸಲ ಕೇಳಿದ್ದ ಎರಡನೆಯ ಪದ risk. ಇದು ಐರೋಪ್ಯ ಭಾಷೆಗಳಲ್ಲಿ ಫ್ರೆಂಚ್, ಇಟಾಲಿಯನ್, ಸ್ಪಾನಿಷ್, ಜರ್ಮನ್ ಎಂದಿರುವುದು, ಇಂಗ್ಲಿಷ್ಗೆ ಬಂದಾಗ risk ಆದದ್ದೆಂದು ಭಾಷಾತಜ್ಞರ ಅಭಿಪ್ರಾಯ. ಅರೇಬಿಕ್ ಪದದಿಂದ ಬಂದದ್ದೆಂದು ಇನ್ನು ಕೆಲವರ ವಾದ. ಅದರಲ್ಲೂ ಹುರುಳಿದೆ, ಏಕೆಂದರೆ ಅರೇಬಿಕ್ನಲ್ಲಿ ಆ ಪದದ ಅರ್ಥದ ಹಿಂದೆ ದೈವೇಚ್ಛೆಯಂತೆ ಆಗುವಂಥದ್ದು ಎಂಬ ಭಾವವಿದೆಯಂತೆ. ಅಪಾಯದ ಅಥವಾ ಹಾನಿ-ನಷ್ಟಗಳ ಸಂಭವನೀಯತೆ, ಸಾಧ್ಯತೆಗಳ ಪರಿಗಣನೆ. ಮುಖ್ಯವಾಗಿ ಸಮುದ್ರಯಾನದಲ್ಲಿ, ನೌಕೆಯು ಉದ್ದೇಶಿತ ಗುರಿ ಮುಟ್ಟಬೇಕೇನೋ ನಿಜ, ಆದರೆ ಚಂಡಮಾರುತ, ಹಿಮಗಡ್ಡೆಗಳಂಥ ಯಾವುದೇ ಅಪಾಯ ಯಾವಾಗ ಸಂಭವಿಸುತ್ತದೆಂದು ಯಾರಿಗೆ ಗೊತ್ತು!? ಸೂಕ್ಷ್ಮವಾಗಿ ಗಮನಿಸಬೇಕಾದ್ದೇನೆಂದರೆ risk ಅಂದರೇನೇ ಅಪಾಯ ಅಲ್ಲ. ಅಪಾಯವಿರಬಹುದೆಂದು ಗೊತ್ತಿದ್ದರೂ ಏನನ್ನೋ ಸಾಧಿಸಲು ಮುನ್ನುಗ್ಗುವ ಪ್ರವೃತ್ತಿ. ಕ್ರಿಕೆಟ್ ಆಟದಿಂದ ಉದಾಹರಣೆ ತೆಗೆದುಕೊಳ್ಳುವುದಾದರೆ ರನ್ಔಟ್ ಆಗುವ ಅಪಾಯವಿದ್ದರೂ ಒಂದು-ಎರಡು ರನ್ ಗಳಿಕೆಗಾಗಿ ದಾಂಡಿಗರು ಮುನ್ನುಗ್ಗುತ್ತಾರಲ್ಲ, ಅವರಿಗೆ ರಿಸ್ಕ್ನ ಅರಿವಿರುತ್ತದೆ, ಆದರೂ ಓಡುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ, ಜೀವವಿಮೆ ಲೆಕ್ಕಾಚಾರ ಮುಂತಾದ ಹಣಕಾಸು ವಿಚಾರಗಳಲ್ಲಿ ರಿಸ್ಕ್ ಅಂಶ ಅತ್ಯಂತ ಮುಖ್ಯವಾಗುತ್ತದೆ. ಐದನೆಯ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಲ್ಲಿ ವಿ.ಸೀತಾರಾಮಯ್ಯ ಅವರದೊಂದು ಕವಿತೆಯಿತ್ತು, ‘ಪರೀಕ್ಷೆಯ ಸಮಯ’ ಎಂಬ ಶೀರ್ಷಿಕೆ. ‘ಸತ್ವವನು ಪರಕಿಸುವ ಸಮಯ ಬಂದಿಹುದು ಬಲ ಕುಶಲ ಸಾಹಸಗಳಿವೆ ನೋಡು... ಆರು ಯೋಜನ ನೀರನೀಜಿ ಬರಬಲ್ಯಾ ನೂರು ಮೈಲಿಯ ಓಟ ಓಡಬಲ್ಯಾ ಮೇರು ಹಿಮಗಿರಿ ಶಿಖರವೇರಬಲ್ಯಾ ವೈರಿಶಿಬಿರದೊಳರಿಯ ಮುತ್ತಬಲ್ಯಾ...’ ಎಂದು ಕೆಲವು ಸಾಲುಗಳು. ಅದರಲ್ಲಿರುವ ಸವಾಲುಗಳೆಲ್ಲ ದುಸ್ತರ, ಆದರೆ ಅಸಾಧ್ಯವೇನಲ್ಲ. ಅಪಾಯದ ಅರಿವಿದ್ದರೆ, ರಿಸ್ಕ್ ತಗೊಳ್ಳುವ ಎದೆಗಾರಿಕೆಯಿದ್ದರೆ ಸಾಧ್ಯವೇ.
ಆಂಗ್ಲ-ಕನ್ನಡ ಶಬ್ದಕೋಶದಲ್ಲಿ ್ಟಠk ಅಂದರೆ ಕೇಡಾಗುವ ಸಂಭವ, ನಷ್ಟ ಸಂಭವ, ಅಪಾಯ ಸಂಭವ, ಗಂಡಾಂತರಕ್ಕೆ ಈಡಾಗುವುದು, ತಲೆಗೊಡುವುದು ಮುಂತಾದ ಅರ್ಥಗಳನ್ನು ಕೊಟ್ಟಿದ್ದಾರೆ. ಅಪಾಯಕ್ಕೆ ಸಿದ್ಧವಾಗಿ ಮುನ್ನುಗ್ಗು, ಒಂದು ಕೈ ನೋಡು, ಸಾಹಸ ಮಾಡು ಮುಂತಾಗಿ ನುಡಿಗಟ್ಟುಗಳ ರೀತಿಯದನ್ನೂ ಕೊಟ್ಟಿದ್ದಾರೆ. ಆದರೆ ಸಮಾನಾರ್ಥಕ ಒಂದೇ ಪದ ಕನ್ನಡದ್ದಾಗಲೀ, ಸಂಸ್ಕೃತ ಮೂಲದ್ದಾಗಲೀ ಕೊಟ್ಟಿಲ್ಲ. ಒಂದೇ ಪದ ಆಗಬೇಕಾದರೆ ಬಹುಶಃ ‘ಗಂಡಾಂತರ’ವನ್ನೇ ಆಯ್ದುಕೊಳ್ಳಬೇಕಾಗುತ್ತದೆ. ಪದಾರ್ಥ ಚಿಂತಾಮಣಿ ಗ್ರಂಥದಲ್ಲಿ ಪಾ.ವೆಂ.ಆಚಾರ್ಯರು ಗಂಡಾಂತರ ಪದವನ್ನು ಕುರಿತು ಮಾಡಿದ ವಿಶ್ಲೇಷಣೆಯಲ್ಲಿ, ‘ಅದೊಂದು ದೈವೀ ಅನಿಷ್ಟ. ನೈಸರ್ಗಿಕಕ್ಕಿಂತಲೂ ಅಲೌಕಿಕ, ಗ್ರಹ ದೇವತೆಗಳ ಆಗ್ರಹದಿಂದ ಬಂದ ತೊಡಕು, ಉಪದ್ರವ. ಜ್ಯೋತಿಷ್ಯಶಾಸ್ತ್ರದಲ್ಲಿ ಗಂಡಾಂತ ಎಂದರೆ- ಕರ್ಕಾಟಕ, ವೃಶ್ಚಿಕ, ಮೀನ ರಾಶಿಗಳ ಕೊನೆಯ ಅಂಶಗಳು (ಅನುಕ್ರಮವಾಗಿ ಆಶ್ಲೇಷಾ, ಜ್ಯೇಷ್ಠಾ, ರೇವತಿ ನಕ್ಷತ್ರಗಳ ಕೊನೆಯ ಪಾದಗಳು). ಇವು ಮಹಾ ಅನಿಷ್ಟದವು. ಗಂಡಾಂತದ ಘಳಿಗೆ ಮಹಾ ಅನಿಷ್ಟವಾದ್ದರಿಂದ, ಮಹಾ ಅನಿಷ್ಟವನ್ನೆಲ್ಲ ಗಂಡಾಂತವೆಂದು ಕರೆಯುವುದಾಯಿತು. ಕ್ರಮೇಣ ಅದಕ್ಕೊಂದು ರ ಸೇರಿಕೊಂಡು ಗಂಡಾಂತರವಾಯಿತು’ ಎಂದಿದ್ದಾರೆ.
ಸ್ವಾರಸ್ಯಕರವಾಗಿರುವ ಈ ಹಿನ್ನೆಲೆಯು ರಿಸ್ಕ್ ಪದದ ಅರೇಬಿಕ್ ಮೂಲದ ತಿರುಳನ್ನೇ ಅನುಮೋದಿಸುವಂತಿದೆ. ಒಟ್ಟಿನಲ್ಲಿ ಕಾಣದ ಕೈಯಿಂದೊದಗುವ ಕುತ್ತು, ಆದ್ದರಿಂದಲೇ ಅದೃಷ್ಟದಾಟ ಎನ್ನುವುದಂತೂ ನಿಜ. ‘ಗಂಡಾಂತರ’ ಪದ ಸೂಚಿಸಿದವರು: ಸುರೇಂದ್ರ ಪೈ, ಶಾಂತಿನಿ ಮಂಜುನಾಥ್, ಸಣ್ಣಪ್ಪ ನಾಯಕ್, ವಿನಾಯಕ ಅವರಾದಿ, ಪರಮೇಶ್ವರ ಭಟ್, ಭ.ನಿಂ.ಗೋಪಿನಾಥ್, ಬೊ.ನಾ.ಕೃಷ್ಣಮೂರ್ತಿ, ಶಾಂತಾರಾಮು, ಮನೋನ್ಮಣಿ ಕೆ.ವಿ, ನಾರಾಯಣ ಮಿಸ್ಕಿನ್, ವಿಲಾಸ ಹುದ್ದಾರ್, ಜಗದೀಶಚಂದ್ರ ಬಿ ಎಸ್, ಅಪ್ಪುಮುತ್ಯ. ಇತರ ಗಮನಾರ್ಹ ಪ್ರವೇಶಿಕೆಗಳೆಂದರೆ, ‘ದುಸ್ಸಾಹಸ’ (ಕೊಟ್ರಪ್ಪ ಹಂಸಾಗರ, ರಾಜಾರಾಮ ಕುರಂದವಾಡ, ಕೃಪಾ ಗೋಖಲೆ, ನಳಿನಿ ಭಟ್); ‘ನಷ್ಟಾತಂಕ’ (ವಸುಮತಿ ಮೈಸೂರು); ಸಕಂಟಕ (ವಸಂತ ಕುಮಾರ್).
ಕೊನೆಯದಾಗಿ scanning. ಎದುರಾಗಿ ಚೆನ್ನಾಗಿ ನೋಡುವುದು, eeing intently and clearly ಎಂಬ ಅರ್ಥವನ್ನು ಕೊಡುವ, ಕೇಶಿರಾಜನ ಶಬ್ದಮಣಿದರ್ಪಣದ ಒಂದು ಸೂತ್ರದಲ್ಲೂ ಬಳಕೆಯಾಗಿರುವ ‘ಅಭೀಕ್ಷಣ’ ಪದ ಬಹುಜನರ ಆಯ್ಕೆ. ಸೂಚಿಸಿದವರು: ಮಾರುತಿ ಜಿ, ರಂಜಿತಾ ಹಿರೇಮಠ, ಜ್ಯೋತಿ ಜಿ.ಕೃಷ್ಣ, ಸೀತಾ ವ್ಯಾಸಮುದ್ರಿ, ಸಂತೋಷ್ ಸಗರೆ, ಚನ್ನಪ್ಪ ಝುಳಕಿ, ಪ್ರೀತಮ್ ಕುಮಾರ, ಶಿವಕುಮಾರ ಹಿರೇಮಠ, ಶಿವಾನಂದ ಹುಬ್ಬಳ್ಳಿ, ಜಯರಾಮ್ ಮೈಸೂರು, ಶಾಂತಾರಾಮು, ಕೃಪಾ ಗೋಖಲೆ. ಸ್ವಾರಸ್ಯವೆಂದರೆ ಇಂಗ್ಲಿಷ್ನಲ್ಲಿ scanning ಪದಕ್ಕೆ to glance at or read hastily ಎಂಬ ಅರ್ಥವೂ ಇದೆ. ಆದ್ದರಿಂದ ‘ಕಣ್ಣಾಡಿಸು’ (ಅನುಷಾ ಭಟ್, ಸುಜಾತಾ ಕುಲಕರ್ಣಿ, ಪಿ.ಜೆ.ರಾಘವೇಂದ್ರ, ಶಿವಕುಮಾರ್ ಸಿಂಗಟಗೆರೆ, ಶೋಭಾ ಕುಮಾರಸ್ವಾಮಿ, ಭ.ನಿಂ.ಗೋಪಿನಾಥ್, ಡಾ ಸಂಗಮೇಶ ಸುರಭಿ); ‘ಕಣ್ಣೋಡಿಸು’ (ಜಿ.ನಾರಾಯಣ ರಾವ್, ಗಿರೀಶ ಕೆ.ಎಸ್, ವಿ.ಕೆ.ಹುಕ್ಕೇರಿ, ರಾಜೇಂದ್ರ ಶಿವಬಸಪ್ಪ); ‘ಬಿಡಿನೋಟ’ (ಡಾ.ಈಶ್ವರ ಮೆಣಶಿನಕಾಯಿ, ಎಂ.ಕೆ.ಬದರೀನಾಥ್); ‘ಪಡಿನೋಟ’ (ಆನಂದರಾಮ ಶಾಸ್ತ್ರೀ, ಕಲಾಮಣಿ ಹಾಸನ) ಪದಗಳೂ ಗಮನಾರ್ಹವೇ. ಸೂಚಿಸಿದವರೆಲ್ಲರೂ ಅಭಿನಂದನಾರ್ಹರೇ.
‘ಕಟ್ಟುವೆವು ನಾವು ಕನ್ನಡದ ಪದವೊಂದನು’ ಅಂಕಣದಲ್ಲಿ ಸವಾಲೆಂಬಂತೆ ಕೊಡುವ ಆಂಗ್ಲ ಪದಗಳನ್ನು ಯಾರು ನಿರ್ಧರಿಸುತ್ತಾರೆ ಎಂದು ಕೆಲವರಿಗೆ ಕುತೂಹಲವಿದೆ. ಕಳೆದ ನವೆಂಬರ್ನಲ್ಲಿ ಈ ಅಂಕಣ ಪ್ರತಿದಿನ ಪ್ರಕಟವಾಗುತ್ತಿದ್ದಾಗ ಹೆಚ್ಚಿನೆಲ್ಲ ಆಂಗ್ಲ ಪದಗಳನ್ನು ವಿಜಯವಾಣಿ ಸಂಪಾದಕೀಯ ವಿಭಾಗದವರೇ ಒದಗಿಸಿದ್ದರು. ಆದರೆ ಈಗ ಓದುಗರೂ ಸೂಚಿಸುತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ವಿಶ್ಲೇಷಣೆಗೊಂಡ ಮೂರೂ ಪದಗಳು ಮತ್ತು ಮುಂದಿನ ಕಂತಿಗೆಂದು ಕೆಳಗೆ ಕೊಟ್ಟಿರುವ ಪದಗಳು- ಇವೆಲ್ಲವನ್ನೂ ಮತ್ತು ಇಂಥದೇ ದೊಡ್ಡ ಪಟ್ಟಿಯೊಂದನ್ನು ಕಳುಹಿಸಿರುವವರು ಬೆಂಗಳೂರಿನ ನಾ.ಗುರುದತ್ತ. ಮೂಲತಃ ಹಾಸನದವರು. ‘ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಲ್ಲಿ ಶಿಕ್ಷಣ. ಹೈದರಾಬಾದ್ನಲ್ಲಿ ಭಾರತ ಸರ್ಕಾರದ ಇಸಿಐಎಲ್ (ಮತಯಂತ್ರ ತಯಾರಿಗೆ ಪ್ರಸಿದ್ಧ) ಸಂಸ್ಥೆಯಲ್ಲಿ 37 ವರ್ಷ ಸುದೀರ್ಘಸೇವೆ. ಹೆಚ್ಚುವರಿ ಮಹಾ ಪ್ರಬಂಧಕನಾಗಿ 2017ರಲ್ಲಿ ನಿವೃತ್ತಿ. ಚುಟುಕ, ಕವನ, ಸಣ್ಣಕತೆ, ನಗೆಬರಹ, ಅನುವಾದ ಇತ್ಯಾದಿ ಸಾಹಿತ್ಯಕೃಷಿ. ಕನ್ನಡ, ಆಂಗ್ಲ, ತೆಲುಗು ಭಾಷೆಗಳಲ್ಲಿ ಬರವಣಿಗೆ ಹವ್ಯಾಸ. ದೃಷ್ಟಿಲೋಪವಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಲಿಪಿಕಾರನಾಗಿ ಸಹಾಯ...’ ಮುಂತಾಗಿ ಕಿರುಪರಿಚಯದ ಕೊನೆಯಲ್ಲಿ ಅವರು ಬರೆದ ವಾಕ್ಯ ‘ಕನ್ನಡಕ್ಕೆ ಬೆಂಗಳೂರಿನಲ್ಲಿ ಆಗುತ್ತಿರುವ ಅನ್ಯಾಯವನ್ನು ನೋಡಿ ಮನಸ್ಸು ಕುದಿಯುತ್ತದೆ’ ನಿಜಕ್ಕೂ ಮಾರ್ವಿುಕ. ಅಂದಮೇಲೆ ಈ ಅಂಕಣದ ಬಗೆಗೆ ಅವರ ಆಸಕ್ತಿ, ಕಾಳಜಿ ಸಹಜವಾದದ್ದೇ. ಇದು ಇತರರಿಗೂ ಪ್ರೇರಣೆಯಾಗಲಿ.