ಕರೊನಾ ನಿಯಂತ್ರಣ ವಿಚಾರದಲ್ಲಿ ದ್ವಂದ್ವ ನಿಲುವು ಸಲ್ಲದು

Janamatha1
Published on

2020ರ ಡಿಸೆಂಬರ್ ನಂತರ ವೈರಸ್ ಹರಡುವಿಕೆ ಸ್ವಲ್ಪಮಟ್ಟಿಗೆ ಕಮ್ಮಿಯಾಗುತ್ತಾ ಬಂದಿದ್ದರಿಂದ ಲಾಕ್​ಡೌನ್​ನಂತಹ ಕೆಲವು ಕಠಿಣ ನಿಯಮಗಳನ್ನು ಸಡಿಲಿಸಲಾಯಿತು. ಕಳೆದೊಂದು ತಿಂಗಳಿಂದ ಕರೋನಾ 2ನೇ ಅಲೆ 2 ಪಟ್ಟು ದೊಡ್ಡದಾಗಿ ಮತ್ತು ಹೆಚ್ಚು ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶ್ವದಲ್ಲಿ ಕರೋನಾ 2ನೇ ಅಲೆ ಹರಡುವಿಕೆಯಲ್ಲಿ ಭಾರತ ಬ್ರೆಜಿಲ್ ನಂತರ 2ನೇ ಸ್ಥಾನದಲ್ಲಿದೆ. ತಜ್ಞರು ಸೋಂಕು ನಿಯಂತ್ರಣದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಸೂಚನೆ ನೀಡಿದ್ದರೂ ರಾಜ್ಯ ಸರ್ಕಾರಗಳು ಪಾಲಿಸುತ್ತಿಲ್ಲ. ರಾಜ್ಯ ಸರ್ಕಾರ ಮುಂದಿನ 18 ದಿನಗಳವರೆಗೆ ಕೆಲವು ನಿರ್ಬಂಧಗಳ ಮಾರ್ಗಸೂಚಿ ಪ್ರಕಟಿಸಿದೆ. ಕರ್ನಾಟಕವು ಕರೊನಾ ಹೆಚ್ಚಿರುವ ಮಹಾರಾಷ್ಟ್ರ, ಕೇರಳ ಗಡಿಗಳಿಗೆ ಹೊಂದಿಕೊಂಡಿದೆ ಎಂಬುದನ್ನು ಮರೆಯಬಾರದು. ಮನರಂಜನೆಗಿಂತ ಜೀವ ಮುಖ್ಯ. ಕೋವಿಡ್ ಕೇಂದ್ರ ಮತ್ತು ಲ್ಯಾಬ್​ಗಳ ಸಂಖ್ಯೆ ಹೆಚ್ಚಿಸಬೇಕು. ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಹೆಚ್ಚಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಜನರು ಲಸಿಕಾ ಕೇಂದ್ರಗಳಿಗೆ ಬರುವಂತೆ ಜಾಗೃತಿ ಮೂಡಿಸಲು ಅಭಿಯಾನ ಬಹಳ ಮುಖ್ಯ. ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತವಾಗಿ ಲಸಿಕೆಯ ವ್ಯವಸ್ಥೆ ಮಾಡಬೇಕು. ಮಾರ್ಗಸೂಚಿ ಪಾಲನೆ ವಿಷಯದಲ್ಲಿ ಎಲ್ಲರಿಗೂ ಒಂದೇ ನಿಯಮ ಅನ್ವಯಿಸುವಂತೆ ರೂಪಿಸಬೇಕು. ಚುನಾವಣೆ ರ್ಯಾಲಿಗಳಲ್ಲಿ ಲಕ್ಷಾಂತರ ಜನರು ಸೇರುವ ಅವಕಾಶ ಕಲ್ಪಿಸುವುದರಿಂದ ಮಾಸ್ಕ್ ಧರಿಸುವುದು ಇತ್ಯಾದಿ ಸೂಚನೆಗಳನ್ನು ಗಾಳಿಗೆ ತೂರುವುದನ್ನು ಕಂಡು ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ, ನಿಯಮ ರೂಪಿಸುವ ಸರ್ಕಾರವೇ ನಿಯಮಗಳನ್ನು ಪಾಲಿಸುತ್ತಿಲ್ಲ. ಮುಂಚಿನಂತೆ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಸುವುದು ಮತ್ತು ಅಂತರ ಕಾಯ್ದುಕೊಳ್ಳುವಿಕೆ ಬಹಳ ಮುಖ್ಯ. ಎಚ್ಚರಿಕೆ ತಪ್ಪಿದರೆ, ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಕರೋನಾ ನಿಗ್ರಹ ಮಾರ್ಗಸೂಚಿ ಪರಿಪಾಲನೆಯಲ್ಲಿ ದ್ವಂದ್ವ ನಿಲುವು ಸಲ್ಲದು.

| ಪಂಪಾಪತಿ ಹಿರೇಮಠ ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net