

ಒಂದು ದಿನ ಮುಂಜಾನೆ ಅಂದಿನ ಪತ್ರಿಕೆಯನ್ನು ಓದುತ್ತಿದ್ದೆ. ಅದರಲ್ಲಿ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ಬರೆದ ಸಣ್ಣ ಮಾಹಿತಿ ಆಕರ್ಷಿಸಿತು. ಪಂಚಾಂಗ ಎಂದರೆ ಪಂಚ-ಅಂಗಗಳಿಂದ ಕೂಡಿದ ಗಣಿತದ ಗಣಿ. ಅವೆೆಂದರೆ- ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ. ಇವು ನಿತ್ಯವೂ ಬದಲಾವಣೆ ಆಗುತ್ತವೆ. ಇದರೊಟ್ಟಿಗೆ ವಿಷ ಮತ್ತು ಅಮೃತ ಘಳಿಗೆಗಳು ಬದಲಾಗುತ್ತಾ ಹೋಗುತ್ತವೆ. ‘ಏತೇಷಾಂ ಸ್ಮರಣಾನ್ನಿತ್ಯಂ ಗಂಗಾಸ್ನಾನಫಲಂ ಲಭೇತ್’ ಅದನ್ನು ಸ್ಮರಣೆ ಮಾಡುವುದರಿಂದ ಹಾಗೂ ಮತ್ತೊಬ್ಬರು ಹೇಳುವುದನ್ನು ಆಲಿಸುವುದರಿಂದ ತುಂಬಾ ಉಪಯೋಗವಿದೆ. (ಏನೆಂದರೆ ತಿಥಿಯನ್ನು ಬಿಟ್ಟು ಬಿಡಬಹುದು, ಅಮೃತ ಘಳಿಗೆಯನ್ನು ಸೇರಿಸಿಕೊಳ್ಳಬಹುದು). ಈ ಪಂಚಾಂಗ ಶ್ರವಣದಿಂದ ಸಂಪತ್ತು, ಆಯುಷ್ಯ ಸಿಗುತ್ತದೆ, ಪಾಪನಾಶ, ರೋಗನಿವಾರಣೆಯಾಗುತ್ತದೆ. ದೈನಂದಿನ ಪಂಚಾಂಗದಲ್ಲಿ ತೋರಿಬರುವ ನಕ್ಷತ್ರ, ಘಳಿಗೆಗಳು ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆಂದು ಗಮನಿಸಬಹುದು.
ನಾವು ಸಂಕಲ್ಪಿಸಿದ ಕಾರ್ಯದಲ್ಲಿ ಜಯ ಸಾಧಿಸಲು ಕರಣ ಮೊದಲಾದ (ಕರಣಾತ್ ಚಿಂತಿತಂ ಕಾರ್ಯಂ) ಐದು ಅಂಶಗಳ ಜೊತೆಗೆ ಹದಿನೈದು ದಿನಗಳಿಗೆ ಬದಲಾಗುವ ಎರಡು ಪಕ್ಷಗಳು ಪರಿಣಾಮ ಬೀರುತ್ತವೆೆ ಎಂದು ಹೇಳುತ್ತಾರೆ. ನಮ್ಮ ಜೀವನಕ್ಕೆ ಸಂಬಂಧಪಟ್ಟಂತೆ ಆಗುವ ಬದಲಾವಣೆಗಳಿಗೆ ಈ ಖಗೋಲದ ಭ್ರಮಣೆ ಹೇಗೆ ಕಾರಣವಾಗುತ್ತವೆ ಎಂದು ತಿಳಿಯಬೇಕಾಗುತ್ತದೆ. ಈ ಜ್ಞಾನದಿಂದ ವೈದ್ಯರು ರೋಗ ಪತ್ತೆಮಾಡಲು ಪರೀಕ್ಷೆ ನಡೆಸಿದಂತೆ ಜಾತಕ ಪರಿಶೀಲಿಸಿ ಸೂಚನೆ ಪಡೆಯಬಹುದು.
ಕೆಲವರು ನಿತ್ಯದ ಸಮಸ್ಯೆಗಳಿಗೆ, ಸೋಲು-ನಷ್ಟಗಳಿಗೆ ‘ನನಗೆ ಆಗದವರು ಕೆಟ್ಟದ್ದನ್ನು ಬಯಸಿ ದುರಾಚಾರದ ಕೆಲಸ ಮಾಡಿದ್ದಾರೆ. ಅವರು ಮಾಡಿರುವ ಮಾಟ, ಕೃತ್ರಿಮ ಅಥವಾ ಇನ್ನಿತರ ದೋಷಗಳಿಂದ ಕಷ್ಟ ಬಂದಿದೆ’ ಎಂದು ಭಾವಿಸುತ್ತಾರೆ.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಶಾಪದೋಷದ ಮಾತಿದೆ. ನಮ್ಮ ಹಿರಿಯರು ಯಾರಾದರೂ ಸಿಟ್ಟಿಗೆದ್ದು ಶಾಪ ಹಾಕಿದ್ದಿದ್ದರೆ, ವ್ಯವಹಾರದಲ್ಲಿ ಇನ್ನೊಬ್ಬರಿಗೆ ಮೋಸ ಮಾಡಿದಾಗ ಅವರು ‘ನೀವು ನನಗೆ ತುಂಬಾ ಮೋಸ ಮಾಡಿದ್ದೀರಿ, ನಾನು ಇಂತಹ ದೇವರಿಗೆ ದೂರು ಕೊಡುತ್ತೇನೆ’ ಎಂತಲೋ ಅಥವಾ ‘ನೀವು ಹಾಳಾಗಿ ಹೋಗಿ, ಉದ್ಧಾರ ಆಗುವುದಿಲ್ಲ’ ಎನ್ನುವ ಇತ್ಯಾದಿ ಶಾಪಗಳಿಂದಲೋ ದೋಷ ಬಂದಿರಬಹುದೇ ಎಂದು ಮನಸ್ಸು ಚಿಂತನೆಗೆ ತೊಡಗುತ್ತದೆ. ಹೀಗಾಗಿ ಅನೇಕ ಸಂದರ್ಭದಲ್ಲಿ ನಾವು ಕಸ್ತೂರಿಮೃಗದಂತೆ ಆಗಿಬಿಡುತ್ತೇವೆ. ಕಸ್ತೂರಿ ಮೃಗಕ್ಕೆ ಬಾಲದ ಹತ್ತಿರ ಸುವಾಸನೆ ಬರುವಂತಹ ಒಂದು ಗಡ್ಡೆ ಇರುತ್ತದೆ. ಆದರೆ ಸುಗಂಧವು ತನ್ನಲ್ಲಿಯೇ ಇದೆ ಎಂಬುದನ್ನು ಅರಿಯದೆ, ಈ ಸುವಾಸನೆ ಎಲ್ಲಿಂದ ಬರುತ್ತದೆ ಎಂದು ತಿಳಿದುಕೊಳ್ಳಲು ಅದು ಓಡಾಡುತ್ತಿರುತ್ತದೆ. ನಮ್ಮೊಳಗೆ ಸುಗುಣಗಳು, ದುರ್ಗಣಗಳು, ವ್ಯಾವಹಾರಿಕ ಸೋಲು-ಗೆಲುವುಗಳು ಇರುತ್ತವೆ. ನಮ್ಮಿಂದ ಇನ್ನೊಬ್ಬರಿಗೆ ಒಳ್ಳೆಯದಾದರೆ ಶ್ಲಾಘನೆ ಬರುತ್ತದೆ. ಅದೇ ರೀತಿ ಶಿಕ್ಷಕರಿಗೆ, ‘ಯಥಾಯೋಗ್ಯವಾಗಿ ನಾನು ಶಿಕ್ಷಣ ಕೊಟ್ಟಿದ್ದೇನೆ. ನನ್ನ ವಿದ್ಯಾರ್ಥಿ ಒಳ್ಳೆಯ ಸ್ಥಾನ-ಮಾನಕ್ಕೆ ಹೋಗಿದ್ದರೆ ಅವನು ಕೃತಜ್ಞತೆ ಸಲ್ಲಿಸಿದರೆ ನನಗೆ ಅದೇ ದೊಡ್ಡ ಪುಣ್ಯ’ ಎನ್ನುವ ಭಾವನೆ ಬರುತ್ತದೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದ ಪ್ರಗತಿ ಹೊಂದಿದಾತ ಬಂದು ಕೃತಜ್ಞತೆ ಹೇಳಿದಾಗ, ಸಂತೋಷ ಆಗುತ್ತದೆ. ಅದೇ ರೀತಿಯಲ್ಲಿ ‘ಸ್ವಾಮಿ ನೀವು ಸರಿಯಾದಂತಹ ಸಹಕಾರ ನೀಡದ್ದರಿಂದ ನಾನು ಇಂದು ಕಷ್ಟದಲ್ಲಿದ್ದೇನೆ’ ಎಂದಾಗ ಮನಸ್ಸು ಸಂಕುಚಿತವಾಗುತ್ತದೆ. ಪರೋಪಕಾರ ಮಾಡುವುದರಿಂದ ನಮಗೆ ಏನು ಪುಣ್ಯ ಪ್ರಾಪ್ತಿಯಾಗುತ್ತದೆ, ಇನ್ನೊಬ್ಬರಿಗೆ ಹಿತವಾಗುತ್ತದೆ ಇದು ನಾವು ಕೊಡುವಂತಹ ಸುಗಂಧ. ದುರ್ಗಂಧ ಎನ್ನುವಂತಹದ್ದು ಯಾರದೋ ಅವಕಾಶವನ್ನು ಕೀಳುವಂತಹದ್ದು, ಅಧರ್ಮ, ಅನ್ಯಾಯ ಮಾಡುವುದು.
ಪುಣ್ಯ ಎನ್ನುವಂತಹದ್ದು ಯಮಧರ್ಮರಾಯ ಬರೆದಿಡುವಂತಹ ಲೆಕ್ಕಾಚಾರ ಎಂಬ ನಂಬಿಕೆ ಇದೆ. ಅಂದರೆ ನಾವು ಇಲ್ಲಿ ಏನು ಸದ್ಗುಣ ಸತ್ಕಾರ್ಯ ಮಾಡಿದರೂ ಮತ್ತು ಏನೇ ತಪ್ಪು, ಅಕಾರ್ಯಗಳನ್ನು ಮಾಡಿದರೂ ಯಮಲೋಕದ ಚಿತ್ರಗುಪ್ತನ ಪುಸ್ತಕದಲ್ಲಿ ದಾಖಲಾಗುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಪುಣ್ಯ ಸಂಚಯ ಆಗುತ್ತದೆ. ಹಿಂಸೆ ಮಾಡಿದರೆ ತಪ್ಪು ಮಾಡಿದರೆ ನಮಗೆ ಅದರಿಂದ ಪಾಪಪ್ರಜ್ಞೆ, ಪಾಪ ಸಂಚಯವಾಗುತ್ತದೆ ಎಂಬ ಭಾವನೆ ಇರುತ್ತದೆ. ರಾವಣ ಅಥವಾ ದುರ್ಯೂೕಧನ ಅಧಿಕಾರಾವಧಿಯ ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಳ್ಳಲಿಲ್ಲ.ಹಾಗೂ ಅಧರ್ಮ ಕಾರ್ಯಗಳನ್ನು ಮಾಡಿದರು. ಹೀಗಾಗಿ ಅವರಿಗೆ ಪಾಪಸಂಚಯ ಆಯಿತು. ಇವೆಲ್ಲವನ್ನು ತಿಳಿದಂತಹ ರಾಮಾಯಣದಲ್ಲಿನ ರಾಮ, ಮಹಾಭಾರತದಲ್ಲಿ ಪಾಂಡವರು ಮಾಟ-ಮಂತ್ರಗಳ ಪರಿಹಾರಕ್ಕೆ ಹೋಗಲಿಲ್ಲ. ಬದಲು ಭಗವಂತನಿಗೆ ಶರಣಾದರು. ಹಾಗೆಂದು ಪಾಂಡವರು ನಡೆದ ದಾರಿ ವನವಾಸದ್ದೇ. ಎಷ್ಟೇ ಕಷ್ಟ ಬಂದರೂ ಕೊನೆಗೆ ಸುಖ ಇತ್ತು.
ಮಹಾಭಾರತದಲ್ಲಿ ಧರ್ಮರಾಯನ ನಡೆ ಅನೇಕ ಮಂದಿಗೆ ರುಚಿಸದಿರಬಹುದು. ಭೀಮನ ಆವೇಶಕ್ಕೆ ಸರಿಯಾದ ಅವಕಾಶ ದೊರಕಿದ್ದರೆ ಮಹಾಭಾರತ ಘಟಿಸದಂತೆ ಅಂದೇ, ಅಲ್ಲೇ ಮುಗಿಸಿಬಿಡುತ್ತಿದ್ದ ಎಂದು ಕೆಲವರಲ್ಲಿ ಭಾವನೆಗಳು ಇವೆ. ಆದರೆ, ನ್ಯಾಯಮಾರ್ಗ ಹಿಡಿದವರು ಯಾವತ್ತೂ ವಿಚಲಿತರಾಗಬೇಕಾಗಿಲ್ಲ. ತಮ್ಮದಾರಿಯನ್ನು ಬಿಡಬೇಕಾಗಿಲ್ಲ. ಮತ್ತು ಭಗವಂತನಲ್ಲಿ ಅಚಲವಾದ ನಂಬಿಕೆ ಇಟ್ಟುಕೊಂಡು ನಡೆದುಕೊಳ್ಳಬೇಕೆಂಬುದೇ ಇದರ ಸಂದೇಶ. ದ್ರೌಪದಿಯ ವಸ್ತ್ರಾಪಹರಣ ಕಾಲದಲ್ಲಿ ಪಾಂಡವರು ಅಸಹಾಯಕರಾಗಿದ್ದರು. ತನ್ನ ಮಾನ ಕಾಪಾಡಲು ಆಕೆ ಕೃಷ್ಣನನ್ನು ಕರೆಯುತ್ತಾಳೆ. ಕೃಷ್ಣ ಬರುವುದಿಲ್ಲ. ಕೊನೆಗೆ ಹತಾಶಳಾಗಿ ಕೃಷ್ಣನನ್ನು ನೆನೆಯುತ್ತಾ ಮೂರ್ಛಿತಳಾಗುತ್ತಾಳೆ. ಆಗ ಭಗವಂತ ಆಕೆಯ ವಸ್ತ್ರವನ್ನು ಅಕ್ಷಯವನ್ನಾಗಿಸುತ್ತಾನೆ. ಯಾವಾಗ ದ್ರೌಪದಿಯು ತನ್ನನ್ನು ರಕ್ಷಿಸಿಕೊಳ್ಳಲಾಗದೆ ಕೃಷ್ಣನನ್ನು ಬೇಡುತ್ತಾಳೋ, ಆಗ ಹೆಂಡತಿ ಜೊತೆಗೆ ಪಗಡೆ ಆಡುತ್ತಿದ್ದ ಭಗವಂತನು ಭಕ್ತೆಯನ್ನು ಕೂಡಲೇ ಕಾಪಾಡುತ್ತಾನೆ. ಧರ್ಮದ ದಾರಿಯಲ್ಲಿ ನಡೆಯುತ್ತಿದ್ದರೆ, ಸಜ್ಜನರ ಸಂಘದಲ್ಲಿ ಇದ್ದುದಾದರೆ ನಾವು ಸೋಲಬೇಕಾಗಿಲ್ಲ ಅಥವಾ ಕಷ್ಟವನ್ನು ಎದುರಿಸಲು ಹಿಂಜರಿಯಬೇಕಾಗಿಲ್ಲ ಎಂಬ ಸಂದೇಶವನ್ನು ಎಲ್ಲರೂ ಸ್ವೀಕರಿಸಬೇಕಾಗಿದೆ.
ಶ್ರೀಕ್ಷೇತ್ರಕ್ಕೆ ಅನೇಕ ಮಂದಿ ಬಂದು ‘ನಾವು ಒಳ್ಳೆಯ ರೀತಿಯಲ್ಲಿ ಕೃಷಿ ಮಾಡಿದ್ದೇವೆ. ಆದರೆ ಫಸಲು ಬರುತ್ತಿಲ್ಲ. ಇದಕ್ಕೆ ಕಾರಣ ಏನು’ ಎಂದು ವಿಚಾರಿಸಿದಾಗ ಒಬ್ಬರು ಜ್ಯೋತಿಷ್ಯರು, ಮಾರ್ಗದರ್ಶಕರು ನಿನಗೆ ಮಾಟ ಮಾಡಿದ್ದಾರೆ. ಆದ್ದರಿಂದ ನಿನಗೆ ಫಸಲು ಸರಿಯಾಗಿ ಬರುತ್ತಾ ಇಲ್ಲವೆಂದು ಹೇಳಿದರೆಂದು ದುಃಖ ತೋಡಿಕೊಳ್ಳುತ್ತಾರೆ. ಬಿತ್ತಿದ ಬೀಜದ ಪರಿಶುದ್ಧತೆ ಏನು? ಸರಿಯಾದ ಆರೈಕೆಯಾಗಿದೆಯೇ ಎಂಬಿತ್ಯಾದಿ ವಿಷಯಗಳನ್ನು ಬಿಟ್ಟು, ಅದು ಮಾಟದ್ದೆ ಪ್ರಭಾವ ಎಂದು ಭಾವಿಸುತ್ತಾನೆ. ಆರೋಗ್ಯವಾಗಿದ್ದ ವ್ಯಕ್ತಿ ಮನೆಯಲ್ಲಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೊಳಗಾದರೆ ಮೊದಲು ಮನಸ್ಸು ಓಡುವಂಥದ್ದು ಹೀಗೆ ಆಗಲು ಯಾರದ್ದೋ ಕೈಚಳಕವಿರಬಹುದು. ಯಾರಾದರೂ ಮಾಟ ಮಾಡಿಸಿರಬಹುದು...ಹೀಗೆ. ಅಂತಹ ಸಂಧರ್ಭದಲ್ಲಿ ಅವರು ಕ್ಷೇತ್ರಕ್ಕೆ ಬರುತ್ತಾರೆ. ಅವರ ಮನಸ್ಸನ್ನು ಒಲಿಸಿಕೊಂಡು, ಮಾರ್ಗದರ್ಶನ ಕೊಟ್ಟು ಭಗವಂತನ ಕಡೆಗೆ ಅವರ ಮನಸ್ಸನ್ನು ಸ್ಥಿರವಾಗಿ ಮಾಡುವಂಥದ್ದು ನಮ್ಮ ಕರ್ತವ್ಯ. ವೈಜ್ಞಾನಿಕ ದೃಷ್ಟಿಕೋನ ಇಟ್ಟುಕೊಂಡು ಸಮಸ್ಯೆ ಪರಿಹರಿಸಿದ ಕುರಿತು ನಮ್ಮ ಕ್ಷೇತ್ರದಲ್ಲಿ ಅನೇಕ ಉದಾಹರಣೆಗಳಿವೆೆ. 1969ನೇ ಇಸವಿಯಲ್ಲಿ ನನಗೆ ಪಟ್ಟ ಆದ ಆರಂಭದಲ್ಲಿ ನಮ್ಮ ಹಟ್ಟಿಯಲ್ಲಿ ಅನೇಕ ಜಾನುವಾರುಗಳು ಇದ್ದವು. ಎಮ್ಮೆ ಅಥವಾ ಹಸು ಹುಲ್ಲು ತಿಂದಿಲ್ಲ, ನೀರು, ನೀರಾಗಿ ಸೆಗಣಿ ಹಾಕುತ್ತಿದೆ.. ಇತ್ಯಾದಿ ಸಂದರ್ಭಗಳು ಬಂದಾಗ ಕೆಲಸಗಾರರು ನೇರವಾಗಿ ಹಳ್ಳಿಯ ವೈದ್ಯರ ಕಡೆಗೆ ಹೋಗುತ್ತಿದ್ದರು. ವೈದ್ಯರು ಬಂದು ಹಸುಗಳ ಕುತ್ತಿಗೆಗೆ ನೂಲು ಕಟ್ಟುತ್ತಿದ್ದರು. ಕೆಲವು ಬಾರಿ ಅವುಗಳಿಗೆ ಏನೋ ಮಂತ್ರದ ನೀರನ್ನು ಕುಡಿಸಲು ಪ್ರಯತ್ನ ಪಡುತ್ತಿದ್ದರು. ಮೊದಮೊದಲು ಇದು ಹಳ್ಳಿಯ ಸಹಜ ಪ್ರತಿಕ್ರಿಯೆ- ಪ್ರಕ್ರಿಯೆ ಎಂದು ಭಾವಿಸುತ್ತಿದ್ದೆ.
ಉಜಿರೆಯಲ್ಲಿ ರತ್ನಮಾನಸ ಎಂಬ ವಿದ್ಯಾರ್ಥಿನಿಲಯ ಪ್ರಾರಂಭವಾದಾಗ ಅಲ್ಲಿ ವೈಜ್ಞಾನಿಕವಾಗಿ ಜಾನುವಾರುಗಳ ರಕ್ಷಣೆ ಮಾಡಲಾಗುತ್ತಿತ್ತು. ಜಾನುವಾರುಗಳ ಅನಾರೋಗ್ಯಕ್ಕೆ ಕಾರಣ ವಿವೇಚಿಸಿ ಅದಕ್ಕೆ ವೈಜ್ಞಾನಿಕ ಕಾರಣ ಹುಡುಕಿ ಸರಿಯಾದ ಔಷಧ ಕೊಡಲು ಪ್ರಾರಂಭಿಸಲಾಯಿತು. ನಮ್ಮ ದೃಷ್ಟಿಯಲ್ಲಿ ಧೋರಣೆಯಲ್ಲಿ ಬದಲಾವಣೆ ಆಯಿತು.
ಒಮ್ಮೆ ನಾನು ಒಂದು ಹಳ್ಳಿಗೆ ಭೇಟಿ ಇತ್ತಾಗ ಅಲ್ಲಿ ಜಮೀನಿನಲ್ಲಿ ಉಳುಮೆ ಮಾಡುವಂತಹ ಸಮಯದಲ್ಲಿ ಹತ್ತಾರು ಸಾವಿರ ರೂಪಾಯಿ ಬೆಲೆೆ ಬಾಳುವ ಕೋಣ ಒಮ್ಮೆಲೆ ಬಿದ್ದು ಬಿಟ್ಟಿತ್ತು. ರೈತ ತಕ್ಷಣ ಹಳ್ಳಿಯ ವೈದ್ಯನ ಕಡೆಗೆ ಓಡುತ್ತಾನೆ. ರೈತನ ಮಗ ರತ್ನಮಾನಸದಲ್ಲಿದ್ದ. ರಜೆಯಲ್ಲಿ ಅವನು ಮನೆಗೆ ಬಂದಿದ್ದ. ಅವನು ಕೂಡಲೇ ದೂರದ ಪೇಟೆಗೆ ಹೋಗಿ ಗೋವೈದ್ಯರನ್ನು ಕರೆದುಕೊಂಡು ಬರುತ್ತಾನೆ. ಗೋ ವೈದ್ಯರು ಕೋಣಕ್ಕೆ ಇಂಜೆಕ್ಷನ್ ಕೊಟ್ಟು ಅದನ್ನು ಎದ್ದು ನಿಲ್ಲಿಸುತ್ತಾರೆ. ‘ಮಾಟ ಆಗಿದೆ ಎಂದು ತಿಳಿದು ಕೋಣಕ್ಕೆ ನೂಲು ಕಟ್ಟಲು, ಬರೆಎಳೆಯಲು ಹಳ್ಳಿಯ ವೈದ್ಯರ ಕಡೆ ಹೋಗಿದ್ದೆ. ಆದರೆ ನನ್ನ ಮಗ ರತ್ನಮಾನಸದ ವಿದ್ಯಾರ್ಥಿ ನಿಲಯದಲ್ಲಿ ಶಿಕ್ಷಣ ಪಡೆದಿದ್ದರಿಂದ ಗೋವೈದ್ಯರ ಬಳಿ ಹೋಗಿ ಕೋಣವನ್ನು ಉಳಿಸಿದ’ ಎಂದು ರೈತ ಹೇಳಿದ.
ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಿರ್ದಿಷ್ಟ ವ್ಯಕ್ತಿಯೋರ್ವನು ಕಂಬವನ್ನು ಏರಿ ಆ ವರ್ಷದ ಫಲವನ್ನು ಹೇಳಿ ಕೆಳಗೆ ಬೀಳುತ್ತಾನೆ. ಬ್ರಿಟಿಷ್ ಸರ್ಕಾರ ಈ ವರದಿಯನ್ನು (ರಾಷ್ಟ್ರದಲ್ಲಿ ಇತರ ಕಡೆಗಳಲ್ಲೂ ನಡೆಯುವ) ತರಿಸಿಕೊಳ್ಳುತ್ತಿತ್ತಂತೆ. ನಾನು ತಿಳಿದಂತೆ, ಒಂದು ವರ್ಷದಲ್ಲಿ ‘ಮುತ್ತುಗಳು ಉದುರ್ಯಾವ’ ಎಂದು ನುಡಿಯಾದರೆ, ಜೋಳದ ಕಣಗಳು ನಷ್ಟವಾದಾವು-ಬರಗಾಲ ಬಂದೀತು ಎಂಬ ಅರ್ಥದಲ್ಲಿ ಸರ್ಕಾರ ಆ ವರ್ಷದಲ್ಲಿ ಉಗ್ರಾಣಗಳಲ್ಲಿ ಹೆಚ್ಚು ಜೋಳ ಕಾಳುಗಳ ಸಂಗ್ರಹ ಮಾಡಿಕೊಳ್ಳುತ್ತಿತ್ತಂತೆ.
ಈಗ ಹಳ್ಳಿಗಳಲ್ಲಿ ಮನುಷ್ಯರಿಗಾಗಲಿ, ಪ್ರಾಣಿಗಳಿಗಾಗಲಿ, ಕೃಷಿಗಾಗಲಿ ರೋಗ ಬಂದರೆ ಅಥವಾ ಕೃಷಿ ಉತ್ಪನ್ನ, ಆದಾಯ ಕಡಿಮೆ ಆದರೆ ಅದಕ್ಕೆ ಕಾರಣವನ್ನು ಹುಡುಕಿ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುತ್ತಾರೆ. ವೈಜ್ಞಾನಿಕ ಚಿಂತನೆ ಬೆಳೆದಿದೆ. ಜೊತೆಗೆ ಭಕ್ತಿಯಿಂದ ದೇವರ ಪ್ರಸಾದವನ್ನೂ ತಂದು ಹಾಕುತ್ತಾರೆ. ಉದಾಹರಣೆಗೆ ಗಿಡ ನೆಡುವ ಜಾಗ ಆಯ್ಕೆ ಮಾಡುವಾಗ ಅಲ್ಲಿ ವಾಸ್ತುಶುದ್ಧಿ ಇದೆಯೋ, ಜಲ ಸಮೃದ್ಧಿ ಇದೆಯೋ ಎಂದು ಅವಲೋಕಿಸುತ್ತಾರೆ. ಹಿಂದಿನ ಕಾಲದಲ್ಲಿ ಇಂತಹ ನಿರ್ದಿಷ್ಟ ಕಾಲದಲ್ಲೇ ಬೀಜ ನೆಡಬೇಕು, ಕೃಷಿ ಮಾಡಬೇಕು ಅನ್ನುವ ಲೆಕ್ಕಾಚಾರ ಇತ್ತು. ಈಗ ಈ ಪ್ರಕೃತಿ ಬದಲಾಗಿದೆ. ಮಳೆ ಬರುವಂತಹ ಕಾಲಗಳು ಕೂಡ ಬದಲಾಗಿದೆ.
ಜ್ಯೋತಿಷ್ಯ, ಜಾತಕ, ಯೋಗ, ಕಾಲದ ಬಗ್ಗೆ ನಂಬಿಕೆ ಇರಲಿ. ಅದರಲ್ಲಿ ಶಕ್ತಿ ಮತ್ತು ಸತ್ವ ಇದೆ. ಆದರೆ ಅದನ್ನು ಎಷ್ಟು ಅವಲಂಬಿಸಬೇಕು ಎಂಬ ವಿವೇಕ ಹಾಗೂ ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳೋಣ. ಸರ್ವರಿಗೂ ಒಳ್ಳೆಯ ಯೋಗಗಳು ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)