ಫಲವಿಲ್ಲದ ಚಿಕಿತ್ಸೆಯೇ ಇಲ್ಲ!: ಧನ್ವಂತರಿ

Ayurveda
Published on
ನಗರ ಪ್ರದೇಶಗಳಲ್ಲಿ ಮನೆಗಳನ್ನು ನಿರ್ವಿುಸಿ ವಿಕ್ರಯಿಸುವವರು ಏನೆಲ್ಲಾ ಸೌಲಭ್ಯಗಳು ಆ ಮನೆಯನ್ನು ಕೊಂಡುಕೊಂಡರೆ ಲಭ್ಯವಾಗುತ್ತದೆ ಎಂದು ಪಟ್ಟಿಮಾಡಿ ಹೇಳುತ್ತಾರೆ. ಇತ್ತೀಚಿನ ದಶಕದ ಹೊಸ ಬೆಳವಣಿಗೆಯೆಂದರೆ ಅಪಾರ್ಟ್​ವೆುಂಟ್​ನಿಂದ ಅನತಿ ದೂರದಲ್ಲಿ ಪ್ರಸಿದ್ಧ ಶಾಲೆಗಳಿವೆ, ವಿಮಾನ ನಿಲ್ದಾಣವಿದೆ ಇತ್ಯಾದಿ ಹೇಳುತ್ತಾ ಸರ್ವಸುಸಜ್ಜಿತ ಆಸ್ಪತ್ರೆಯನ್ನೂ ಆ ಪಟ್ಟಿಗೆ ಸೇರಿಸಿರುತ್ತಾರೆ! ಮನೆಯ ಕಿಟಕಿ ತೆರೆದರೆ ಎದುರಿನಲ್ಲೇ ಇಂತಹ ಬೃಹತ್ ಆಸ್ಪತ್ರೆಗಳು ಸದಾ ಕಾಣುತ್ತಿದ್ದರೂ ಜನರ ಆರೋಗ್ಯ ಬವಣೆಗಳು ತಪ್ಪಿಲ್ಲ, ಬದುಕೇ ದುಸ್ತರವಾಗಿರುವುದೂ ಇದೆ. ಸಕಲ ವ್ಯವಸ್ಥೆಗಳು ಸನಿಹದಲ್ಲೇ ಇದ್ದರೂ ದೂರದಲ್ಲಿರುವ ವೈದ್ಯರಲ್ಲಿಗೆ ತೆರಳುವುದು ರೂಢಿಯಲ್ಲಿದೆ. ತಮಗೆ ಹಿತವೆನಿಸುವ ವೈದ್ಯರಲ್ಲಿಗೆ ತೆರಳಿ ಚಿಕಿತ್ಸೆ ಪಡೆಯಲು ಜನರು ಹಾತೊರೆಯುತ್ತಾರೆ ಹೊರತು ದೊಡ್ಡ ಆಸ್ಪತ್ರೆ, ಕಟ್ಟಡಗಳಿಗಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಯಾವ ವ್ಯವಸ್ಥೆ ಹತ್ತಿರದಲ್ಲಿರುತ್ತದೋ ಅಲ್ಲಿಗೆ ಹೋಗುವುದಿದೆ. ಈಗಂತೂ ಮೆಡಿಕಲ್ ಟೂರಿಸಮ್ ಕಾಲ. ದೇಶದಲ್ಲಿರುವ ಚಿಕಿತ್ಸಾ ವ್ಯವಸ್ಥೆಗಳನ್ನೆಲ್ಲಾ ಧಿಕ್ಕರಿಸಿ ಅನ್ಯ ದೇಶಕ್ಕೆ ಹೋಗಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಹಂತಕ್ಕೆ ನಾವು ತಲುಪಿದ್ದೇವೆ. ಆಯುರ್ವೆದ ಚಿಕಿತ್ಸೆ ಪಡೆಯುವವರಂತೂ ತಮ್ಮ ನಗರ, ರಾಜ್ಯಗಳ ಪ್ರಸಿದ್ಧ ಚಿಕಿತ್ಸಾ ಕೇಂದ್ರಗಳನ್ನೆಲ್ಲಾ ಪಕ್ಕಕ್ಕೆ ಸರಿಸಿ ದೂರದ ಹಳ್ಳಿಯಲ್ಲಿರುವ, ಚಿಕಿತ್ಸೆಗಾಗಿ ಹೋಗಿ ತಲುಪಲು ಸರಿಯಾದ ರಸ್ತೆಯೇ ಇಲ್ಲದ ವೈದ್ಯರಲ್ಲಿಗೆ ತೆರಳಿ ಹಿತಾನುಭೂತಿಯಿಂದ ರೋಗ ನಿವಾರಣೆ ಮಾಡಿಕೊಳ್ಳುವುದನ್ನೂ ನೋಡುತ್ತೇವೆ. ಶ್ರೇಷ್ಠ ಚಿಕಿತ್ಸೆ ಎಂದರೆ ಅದು ಕೇವಲ ಸೌಲಭ್ಯವಲ್ಲ, ತಂತ್ರಜ್ಞಾನವಲ್ಲ, ಸುಖದ ವ್ಯವಸ್ಥೆಯಲ್ಲ, ಐಷಾರಾಮವಲ್ಲ, ವೈಜ್ಞಾನಿಕ ದಾಖಲೆಗಳಲ್ಲ, ಅಂಕಿಸಂಖ್ಯೆಗಳ ಪ್ರತಿಪಾದನೆಯಲ್ಲ ಎಂಬುದು ಬಹಳ ಸ್ಪಷ್ಟ. ಅದಿಲ್ಲವಾಗಿದ್ದಲ್ಲಿ ಆಸ್ಪತ್ರೆಗಳ ಪಕ್ಕದಲ್ಲಿ ವಾಸಿಸುತ್ತಿರುವವರಿಗೆ ಮಾತ್ರ ನೆಮ್ಮದಿ ಇರುತ್ತಿತ್ತು. ಆದರೆ ವಸ್ತುಸ್ಥಿತಿಯೇ ಬೇರೆ.

ಶಿವಮೊಗ್ಗ ಜಿಲ್ಲೆಯ ಸಿಗಂಧೂರು ಸಮೀಪದ ತುಮರಿ ಎಂಬುದು ಕುಗ್ರಾಮ. ಈ ತುಮರಿ ಪ್ರಾಂತ್ಯದಲ್ಲಿ ಕನಿಷ್ಠ ಐನೂರು ಮನೆಗಳಿವೆ. ಶರಾವತಿ ಹಿನ್ನೀರಿನಿಂದ ಮುಳುಗಡೆಯಾದ ಪ್ರದೇಶದಿಂದಾಗಿ ಇಲ್ಲಿಗೆ ನೀರು ದಾಟಿ ತೆರಳಲು ಬಾರ್ಜ್ ವ್ಯವಸ್ಥೆಯಿದೆ. ಸಂಜೆ ಆರು ಗಂಟೆಯ ನಂತರ ಅಲ್ಲಿರುವವರು ಹೊರಗೆ ಹೋಗಬೇಕಾದರೆ ಅಥವಾ ಹೊರಗಿನಿಂದ ಯಾರಾದರೂ ಗ್ರಾಮ ಪ್ರವೇಶಿಸಬೇಕಾದರೆ ಆ ಬಾರ್ಜೂ ಇಲ್ಲ. ಗ್ರಾಮದಲ್ಲಿ ಒಂದು ಪ್ರಾಥಮಿಕ ಚಿಕಿತ್ಸಾ ಕೇಂದ್ರವಿದೆ. ಅಲ್ಲಿ ವೈದ್ಯರು ಬಂದರೆ ಮಾತ್ರ ಚಿಕಿತ್ಸೆ, ಹಗಲು ಹೊತ್ತಿನಲ್ಲಿ ಮಾತ್ರ ಈ ಸೌಲಭ್ಯ. ಅದೂ ವೈದ್ಯರು ರಜೆ ಹಾಕದೆ ಕರ್ತವ್ಯಕ್ಕೆ ಹಾಜರಾದ ದಿನ ಮಾತ್ರ! ಆಸ್ಪತ್ರೆ ಬಿಡಿ, ದೊಡ್ಡ ಹೋಟೆಲ್​ಗಳೂ ಇಲ್ಲ. ಕನಿಷ್ಠ 75 ಕಿಲೋ ಮೀಟರ್ ಕ್ರಮಿಸಿ ಸಾಗರ ತಲುಪಿ ವೈದ್ಯಕೀಯ ವ್ಯವಸ್ಥೆ ಪಡೆಯಬಹುದು. ರಾತ್ರಿ ಯಾರಿಗಾದರೂ ಆರೋಗ್ಯದ ತೊಂದರೆಯಾದರೆ ಯಾರು ಗತಿ? ಪರಿಸ್ಥಿತಿ ಹೀಗಿದ್ದರೂ ಅಲ್ಲಿನ ಜನ ನೆಮ್ಮದಿಯಿಂದ ನಿದ್ರೆ ಮಾಡುತ್ತಾರೆ, ಸಂತೃಪ್ತ ಬದುಕನ್ನು ಮುನ್ನಡೆಸುತ್ತಿದ್ದಾರೆ.

ನಗರ ಪ್ರದೇಶಗಳಲ್ಲಿ ಆಸ್ಪತ್ರೆಗಳ ಸಮೂಹದ ಮಧ್ಯೆಯೇ ದಿನಕಳೆಯುತ್ತಿರುವವರಿಗೆ ಇಷ್ಟೊಂದು ಆರೋಗ್ಯ ನೆಮ್ಮದಿ ಇದೆಯೇ ಎಂಬುದು ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಯಶಸ್ವೀ ಚಿಕಿತ್ಸೆ, ಉತ್ಕೃಷ್ಠ ಚಿಕಿತ್ಸೆ ಎಂಬುದು ಅಷ್ಟೊಂದು ಸುಲಭದಲ್ಲಿ ವ್ಯಾಖ್ಯಾನ ಮಾಡಲು ಸಾಧ್ಯವಿರುವ ವಿಚಾರವಲ್ಲ. ಫಲಪ್ರದ ಚಿಕಿತ್ಸೆಗೆ ಸಾವಿರಾರು ಮುಖಗಳಿವೆ.

ಚಿಕಿತ್ಸೆಯು ಸರ್ವಾಂಗೀಣವಾಗಿ ಯೋಜಿಸಲ್ಪಟ್ಟು ಯಶಸ್ವಿ ಎನಿಸಿಕೊಳ್ಳಬೇಕಾದರೆ ವೈದ್ಯರ ಪ್ರಯತ್ನ, ರೋಗಿಯ ಪ್ರಯತ್ನ ಎರಡೂ ನ್ಯೂನತೆಗಳಿಲ್ಲದೆ ಪರಿಪೂರ್ಣವಾಗಿರಲೇಬೇಕು. ಮನಸ್ಸಿನಲ್ಲಿ ಯೋಚಿಸಿದ ಮಾತ್ರಕ್ಕೆ ಅಭೀಷ್ಟಗಳೆಲ್ಲ ಸಿದ್ಧಿಯಾಗುವುದಿಲ್ಲ. ಫಲ ಸಿಗಬೇಕಾದರೆ ಅದಕ್ಕೆ ತಕ್ಕುದಾದ ಪ್ರಯತ್ನಗಳಿರಬೇಕು. ನಿದ್ರಿಸುತ್ತಿರುವ ಸಿಂಹದ ಬಾಯಿಗೆ ಅದರ ಆಹಾರವಾದ ಮೃಗಗಳು ತನ್ನಿಂದ ತಾನೇ ಬಂದು ಬೀಳುವುದಿಲ್ಲ. ವನರಾಜನಾದರೇನು, ಆಹಾರ ಪ್ರಾಪ್ತಿಗೆ ಸಿಂಹದ ಸ್ವಪ್ರಯತ್ನ ಇರಲೇಬೇಕು ಎಂಬ ಸುಭಾಷಿತದ ಮಾತೂ ಇಲ್ಲಿ ಗಮನೀಯ. ಚಿಕಿತ್ಸೆಗೆ ಹಿತ, ಪಥ್ಯ, ಪ್ರಾಯಶ್ಚಿತ್ತ, ಭಿಷಗ್​ಜಿತ, ಭೇಷಜ, ಶಮನ, ಶಸ್ತ, ಪ್ರಕೃತಿಸ್ಥಾಪನ, ಔಷಧ, ವ್ಯಾಧಿಹರ, ಸಾಧನ ಎಂಬ ಹಲವಾರು ಸಮಾನಾರ್ಥಕ ಪದಗಳನ್ನು ಆಯುರ್ವೆದ ಹೇಳಿದೆ. ಇಂತಹ ಚಿಕಿತ್ಸೆ ನೀಡುವುದರಿಂದ ಕೆಲವೊಮ್ಮೆ ಧರ್ಮ ಅರ್ಜನೆ ಆಗುತ್ತದೆ. ಕೆಲವು ಸಂದರ್ಭಗಳಲ್ಲಿ ಗೆಳೆತನ ಪ್ರಾಪ್ತಿಯಾಗುತ್ತದೆ, ಮತ್ತೆ ಕೆಲವೊಮ್ಮೆ ಧನವನ್ನು ತಂದು ಕೊಡುತ್ತದೆ, ಕೆಲವು ಬಾರಿ ಯಶಸ್ಸು, ಗೌರವಗಳನ್ನು ನೀಡುತ್ತದೆ. ಜತೆಗೆ ಚಿಕಿತ್ಸೆಯ ಅಭ್ಯಾಸ, ಅನುಭವ, ಪರಿಣತಿಗಳನ್ನಂತೂ ನೀಡಿಯೇ ನೀಡುತ್ತದೆ. ಆದುದರಿಂದ ಚಿಕಿತ್ಸೆ ಎಂದೂ ನಿಷ್ಪಲ ಆಗುವುದಿಲ್ಲ ಎಂಬ ಆಯುರ್ವೆದ ಸುಭಾಷಿತವು ಮಾರ್ವಿುಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net