

ಪರೋಪಕಾರಿ ಚಿತ್ರಕ್ಕಾಗಿ ಆರ್.ಎನ್.ಜಯಗೋಪಾಲ್ ಬರೆದ ‘ಕಣ್ಣು ರೆಪ್ಪೆ ಒಂದನೊಂದು ಮರೆವುದೇ ಅವು ಎಂದಾದರೂ ಅಗಲಿ ಬೇರೆ ಇರುವುದೇ...’ ಹಾಡು ಹಳೆಕಾಲದ ಅರ್ಥಗರ್ಭಿತ ಕನ್ನಡ ಚಿತ್ರಗೀತೆಗಳನ್ನು ಸವಿಯುವವರಿಗೆ ಸದಾ ನೆನಪಲ್ಲಿರುವಂಥದ್ದೇ. ತೆರೆಯ ಮೇಲೆ ನಮ್ಮೆಲ್ಲರ ನೆಚ್ಚಿನ ಅಣ್ಣಾವ್ರು ಮತ್ತು ಜಯಂತಿ. ಹಿನ್ನೆಲೆಯಲ್ಲಿ ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ. ಉಪೇಂದ್ರಕುಮಾರ್ ಸಂಗೀತ ನಿರ್ದೇಶನದಲ್ಲಿ ಆ ಚಿತ್ರದ ಇನ್ನೆರಡು ಹಾಡುಗಳು- ‘ಗುಟ್ಟೊಂದ ಹೇಳುವೆ ಪುಟಾಣಿ ಮಕ್ಕಳೇ’, ಮತ್ತು ‘ಜೋಕೆ ನಾನು ಬಳ್ಳಿಯ ಮಿಂಚು...’ ಕೂಡ ಜನಮನ ಗೆದ್ದವುಗಳೇ. ಈಗೇಕೆ ಇದೆಲ್ಲ ಪ್ರವರ, ವಿಶೇಷವಾಗಿ ಕಣ್ಣು ರೆಪ್ಪೆ ಹಾಡು ನೆನಪಾಯ್ತೆಂದರೆ ಕಳೆದ ಸರ್ತಿಯ ಅಂಕಣದಲ್ಲಿ ಕೇಳಿದ್ದ wipers ಪದಕ್ಕೆ ಓದುಗರೊಬ್ಬರು ‘ಗಾಜುರೆಪ್ಪೆ’ ಎಂಬ ಸುಂದರವಾದೊಂದು ಕನ್ನಡ ಪದವನ್ನು ಕಟ್ಟಿದ್ದಾರೆ! ಅವರ ಹೆಸರು ಕೃಷ್ಣ ಬರ್ವೆ.
ನನ್ನದೇ ಹುಟ್ಟೂರಿನ ಹಿರಿಯರು, ನನಗೆ ಪರಿಚಿತರು. ಯಕ್ಷಗಾನ ಭಾಗವತಿಕೆ, ಕಥೆ-ಕವಿತೆಗಳ ಒಂದಷ್ಟು ಅಕ್ಷರಕೃಷಿ ಮಾಡಿರುವ ಕವಿಹೃದಯದವರು. ಆದ್ದರಿಂದ ಅವರು ಸೂಚಿಸಿರುವ ‘ಗಾಜುರೆಪ್ಪೆ’ ಕವಿಕಲ್ಪನೆಯ ರೀತಿಯದಿರುವುದು ಆಶ್ಚರ್ಯವೇನಿಲ್ಲ. ನಮ್ಮ ಕಣ್ಣುಗಳಿಗೆ ರೆಪ್ಪೆಗಳಿದ್ದಂತೆ ವಾಹನದ ಮುಂಭಾಗದ ಗಾಜಿಗೆ ವೈಪರ್ಗಳು. ಕಾರ್ಯೋದ್ದೇಶದಲ್ಲಿ ಮಾತ್ರ ಸೂಕ್ಷ್ಮವಾದೊಂದು ವ್ಯತ್ಯಾಸವಿದೆ. ಕಣ್ಣಿನ ರೆಪ್ಪೆಗಳನ್ನು ಒಮ್ಮೆ ಮುಚ್ಚಿ ತೆರೆಯುವುದೆಂದರೆ ಅದುವರೆಗೆ ಒಣಗಿದ ಕಣ್ಣುಗುಡ್ಡೆಗಳಿಗೆ ನೀರು (ಕಣ್ಣೀರು) ಲೇಪಿಸಿ ಒದ್ದೆಗೊಳಿಸುವುದು. ಇಲ್ಲಿ ತದ್ವಿರುದ್ಧ. ವಾಹನದಲ್ಲಿ ವೈಪರ್ ಆನ್ ಮಾಡಿದರೆ ಅದುವರೆಗೆ ಒದ್ದೆಯಿರುವ ಗಾಜನ್ನು ನೀರು ಸರಿಸಿ ಒಣಗಿಸುವುದು. ಆದರೂ ಮನಸ್ಸಲ್ಲಿ ಮೂಡುವ ಚಿತ್ರಣ ತುಂಬ ಹೋಲಿಕೆಯುಳ್ಳದ್ದೇ ಆದ್ದರಿಂದ ಗಾಜುರೆಪ್ಪೆ ಒಳ್ಳೆಯ ಆಯ್ಕೆ.
ಕಾಲುಗಳನ್ನು ಒರೆಸಲಿಕ್ಕೆ ಬಾಗಿಲ ಮುಂದೆ ಕಾಲೊರೆಸು ಇರುವಂತೆ, ವಾಹನದ ಗಾಜನ್ನು ಒರೆಸುವ ಸಲಕರಣೆ ‘ಗಾಜೊರೆಸು’ ಎಂಬ ತರ್ಕಬದ್ಧ ಆಲೋಚನೆ ಮಂಡಿಸಿದವರು. ರಂಗನಾಥ ಟಿ.ಕೆ, ಕೃಷ್ಣಮೂರ್ತಿ ಎಸ್, ಶಿವಲೀಲಾ ಬಿ.ಎಸ್, ಚೈತ್ರಾ ಕೆ, ವಸಂತಕುಮಾರ್ ಕಲ್ಯಾಣಿ, ವಿ.ಪಿ.ಹೆಗಡೆ, ಮನೋನ್ಮಣಿ ಕೆ.ವಿ, ರೇವತಿ ಜೋಶಿ, ಸೂರಿ ಲಿಂಗದಹಳ್ಳಿ, ಕಡ್ಡಿ ಕೊಟ್ರೇಶ, ವಿಲಾಸ ಹುದ್ದಾರ, ಕಲ್ಪನಾ ಚನ್ನರಾಯಪಟ್ಟಣ, ಶೋಭಾ ಕುಮಾರಸ್ವಾಮಿ, ಮತ್ತು ಪ್ರಕಾಶ ಕುಲಕರ್ಣಿ. ‘ಒರೆಸುಕಡ್ಡಿ’ ಆಗಬಹುದೆಂದವರು: ಮೈ.ಸು. ಶ್ರೀನಿವಾಸಬಾಬು, ಮಂಜುಳಾ ಎಸ್.ಎನ್, ಮಹಾಂತೇಶ ಇಂಚಲ, ವಿದ್ಯಾಶಂಕರ ಶರ್ಮ, ಡಾ.ನಂದಾ ಆಚಾರ್ಯ ಪೈ, ಸಂಧ್ಯಾ ಅಡಿಗ, ಡಾ.ಜಿ.ಎಸ್. ವೇಣುಗೋಪಾಲ್, ಕೆ.ಎ.ಶ್ರೀಹರ್ಷ, ರವಿಕುಮಾರ್ಎಸ್.ಎಂ, ರಾಜೇಂದ್ರ ಕಳಸಣ್ಣವರ, ಮತ್ತು ಡಾ.ಕಶ್ಯಪ್ ಬಿಆರ್ಎಸ್. ಹಾಗೆಯೇ ‘ನಿರ್ಜಲಕ’ (ದತ್ತಾತ್ರಿ ಸಾಮಗ, ಡಾ.ಎಚ್.ರಾಜೇಶ್ವರಿ) ಮತ್ತು ‘ತೀಡಕ’ (ಪಿ.ಜೆ.ರಾಘವೇಂದ್ರ) ಎಂಬೆರಡು ಪ್ರವೇಶಿಕೆಗಳೂ ಗಮನಾರ್ಹವಾಗಿವೆ.
wipers ಎಂದರೆ ವಾಹನದ ಗಾಜಿನ ಮೇಲೆ ನೀರು ನಿಲ್ಲದಂತೆ ಒರೆಸುವ ಸಲಕರಣೆಯೇ ಆಗಬೇಕಿಲ್ಲ, ಒಟ್ಟಾರೆಯಾಗಿ ಒರೆಸುವ ಯಾವುದಕ್ಕೂ ಅನ್ವಯವಾಗಬಹುದು. ಇಂಗ್ಲಿಷ್ನಲ್ಲೂ ಹಿಂದೆಲ್ಲ wiper ಎಂದರೆ ಒರೆಸುವ ಕೆಲಸಗಾರ ಅಥವಾ ಒರೆಸುವ ಬಟ್ಟೆ/ಪರಿಕರ ಎಂಬರ್ಥದಲ್ಲೇ ಬಳಕೆಯಿದ್ದದ್ದಂತೆ. ಇಪ್ಪತ್ತನೆಯ ಶತಮಾನದ ಆರಂಭದಿಂದಷ್ಟೇ ವಾಹನಗಳ ಗಾಜಿನ ಒರೆಸುವಿಕೆ ಮುಖ್ಯವಾಯಿತು. ಹಾಗಾಗಿ ‘ಒರೆಸಣಿಗೆ’ ಎಂಬ ಪದ, ಎ.ಬಿ.ಪ್ರಕಾಶ್ ಅವರು ಸೂಚಿಸಿರುವುದು ಚೆನ್ನಾಗಿದೆ. ಬಾಚಲಿಕ್ಕೆ ಬಾಚಣಿಗೆ ಇದ್ದಂತೆ ಒರೆಸಲಿಕ್ಕೆ ಒರೆಸಣಿಗೆ. ‘ಒರೆಸಲಗು’ ಎಂಬ ಇನ್ನೊಂದು ಪದ, ಬೆಂಗಳೂರಿನ ಅಪ್ಪು ಮುತ್ಯ ಅವರು ಸೂಚಿಸಿರುವುದು ಕೂಡ ಅತ್ಯುತ್ತಮವಾಗಿದೆ. ವ್ಯಾಕರಣಬದ್ಧವಾಗಿಯೂ ಇದೆ. ‘ಒರೆಸುವ ಅಲಗು’ ಗಮಕಸಮಾಸವಾಗಿ, ಅಥವಾ ‘ಒರೆಸು+ಅಲಗು’ ಲೋಪಸಂಧಿಯಾಗಿ ಒರೆಸಲಗು ಎಂದಾಗುತ್ತದೆ. ಇಂಗ್ಲಿಷ್ನಲ್ಲೂ windshield wiper blades ಎನ್ನುವಲ್ಲಿ ಅಲಗು ಆ ಸಲಕರಣೆಯ ಮುಖ್ಯ ಭಾಗ. ಅಪ್ಪು ಮುತ್ಯ ‘ಕಟ್ಟುವೆವು ನಾವು...’ ಅಂಕಣದ ಆರಂಭದಿಂದಲೂ ಉತ್ಸಾಹದಿಂದ ಭಾಗವಹಿಸುತ್ತಿರುವವರು.
ನಿವೃತ್ತ ಜೀವನದಲ್ಲಿ ವಿಜಯವಾಣಿಯ ದೈನಂದಿನ ಪದಬಂಧ ಮತ್ತು ಸುಡೊಕು ತುಂಬುವ, ಈಗ ಕನ್ನಡಪದ ಕಟ್ಟುವ ಚಟುವಟಿಕೆಯನ್ನು ಹವ್ಯಾಸವಾಗಿಸಿಕೊಂಡವರು. ಆಗಾಗ ಕನ್ನಡಕ್ಕೆ ಸಣ್ಣಪುಟ್ಟ ಭಾಷಾಂತರಗಳನ್ನು ಮಾಡುತ್ತಾರಂತೆ. ಇದು ಭಾಷೆಯ ಬಗೆಗಿನ ಋಣವನ್ನು ಕಿಂಚಿತ್ತಾದರೂ ತೀರಿಸಿದಂತೆ ಎಂದು ಅವರ ನಿಲುವು. ಕಳೆದ ಸಲ ಕೇಳಿದ್ದ Solo ಪದಕ್ಕೆ ಬಹುಮತದ (ನೂರಕ್ಕೂ ಹೆಚ್ಚು ಪ್ರವೇಶಿಕೆಗಳ) ಆಯ್ಕೆ ‘ಏಕವ್ಯಕ್ತಿ’. ಸೂಚಿಸಿದವರು: ಮಲ್ಲಿಕಾ ಭಟ್, ಹೇಮಾ ಸ್ವಾಮಿ, ನರಸಿಂಹಯ್ಯ ಬಾಳಿಲ, ಡಾ.ಗಣಪತಿ ಎಂ.ಬಿ, ಕಮಲಾಕರ ಬಿ.ಎಸ್, ಎಚ್.ಹಿರಿಯಣ್ಣ, ಮಧುರಾ ಮಂಗಳೂರು, ಛಾಯಾ ದಾವಣಗೆರೆ, ಡಾ.ಶ್ರೀನಿವಾಸ ಹರಪನಹಳ್ಳಿ, ಮಂಜೇಶ್ ತುರುವೇಕೆರೆ, ಕಾಡೇಶ ವಿ.ಬಿ, ಮಮತಾ ನಾಗರಾಜ್, ಶ್ಯಾಮಲ ಎನ್.ಕೆ, ವಿಜಯಲಕ್ಷ್ಮಿ ಶಿವಮೊಗ್ಗ, ಚಂದ್ರಿಕಾ ಹೆಗಡೆ, ಅನುಪ ಸಪ್ರೆ, ಕಾತ್ಯಾಯಿನಿ ಪಂಡಿತ್, ಸಂಜಯ ಕುಲಕರ್ಣಿ, ಸತ್ಯಮಾಧವ ಲಿಂಗದಹಳ್ಳಿ, ವೇದವತಿ ಕೆ.ವಿ, ಶಶಿಕಲಾ ನರೇಂದ್ರನಾಥ, ವಸುಮತಿ ಮೈಸೂರು, ರೇಖಾ ಹೆಗಡೆ, ಎ.ಪಿ.ಉಡುಪ, ಉಷಾಕಿರಣ್ ಅತ್ತಾವರ, ಡಾ.ರವಿಕುಮಾರ ಕುಲಕರ್ಣಿ ಮುಂತಾದವರು.
‘ಏಕಾಂಗಿ’ (ಚೈತ್ರಾ ಲಿಂಗದಹಳ್ಳಿ, ಎಚ್.ಕೆ.ಶ್ರೀಪಾದ, ಸದಾಶಿವಯ್ಯ ಜಿರ್ಲಿಮಠ, ಧೀರೇಂದ್ರ ಬೀಳಗಿ, ಸುಜಾತಾ ಸಾಠೆ, ಅಜಿತ್ ಗಣೇಶ್, ವಿಜಯಾ ಪಾಟೀಲ್, ಭೀಮಾಶಂಕರ ಬುಗಡೆ, ಸೋಮಶೇಖರ ಪಾಟೀಲ್, ದೇವೇಂದ್ರ ಕಡೂರು, ವಿನಯಾ ಹೊಸೂರು, ಕೆ.ಎ. ಭಟ್, ಪ್ರಕಾಶ ಉಮರಾಣಿ, ಸುಧಾ ಗೌರಿಶಂಕರ್, ಗಿರಿಜಾ ಹನಗೊಂದಿಮಠ ಮುಂತಾದವರು), ಮತ್ತು ‘ಏಕಾಕಿ’ (ನರಹರಿ ಟಿ.ಕೆ, ಮಂಜುನಾಥ ಹೆಗಡೆ, ಯಮನಪ್ಪ ಕೊಟ್ನಿಕಲ್, ನಿತ್ಯಾನಂದ ಬ್ರಹ್ಮಾವರ, ದಾಮೋದರ ಭಟ್ ಮುಂತಾದವರು) ಸಹ ಅನೇಕರಿಂದ ಸೂಚಿಸಲ್ಪಟ್ಟಿವೆ. ‘ಏಕಲ’ ಎಂದು ಸೂಚಿಸಿದವರು: ಶಿವಶಂಕರ ಪ್ರಭು ಮತ್ತು ಸುರೇಂದ್ರ ಪೈ. ಯುಗಲ ಎಂದರೆ ಜಂಟಿ; ಏಕಲ ಎಂದರೆ ಒಂಟಿ! ಇವೆಲ್ಲ ಸಂಸ್ಕೃತದವಾದರೆ ಅಚ್ಚಕನ್ನಡದ ‘ಒಬ್ಬಂಟಿ’ ಸರಿಯಾಗುತ್ತದೆಂದವರು, ವಿನಾಯಕ ಕಾಮತ್, ನಾಗಮಣಿ ಹಂಪಾಳಿ, ವಾಸುದೇವ ಭಟ್, ವನಜಾಕ್ಷಿ ಮತ್ತೂರು, ಜಿ.ಕೆ ಶಶಿಕಲಾ, ವಿ.ವಿಜಯೇಂದ್ರ ರಾವ್, ಎಸ್.ಆರ್. ರಾವಳ ಮುಂತಾದವರು.
ಇಂಗ್ಲಿಷ್ನ solo ಮೂಲತಃ ಲ್ಯಾಟಿನ್ನ solus ಪದದಿಂದ ಬಂದದ್ದು. Piece of music by one voice or instrument ಎಂಬರ್ಥದಲ್ಲಿ ಗಾಯನ ಅಥವಾ ಸಂಗೀತಕ್ಕೆ ಸಂಬಂಧಿಸಿರುವುದು. ಈ ದೃಷ್ಟಿಯಿಂದ ತಮಿಳು ಮತ್ತು ಮಲಯಾಳಂಗಳಲ್ಲಿ ವ್ಯಾಪಕ ಬಳಕೆಯಲ್ಲಿರುವ ‘ತನಿ’ ಪದ ಸಂಗೀತಕ್ಷೇತ್ರಕ್ಕೆ ಹೆಚ್ಚು ಸರಿಹೊಂದುತ್ತದೆ. ತನಿ-ಆವರ್ತನ ಅಂದರೆ ಸಂಗೀತಕಛೇರಿಯಲ್ಲಿ ಗಾಯನ ಪ್ರಸ್ತುತಿಯ ಬಳಿಕ ಪಕ್ಕವಾದ್ಯದವರು ಸರದಿಯಂತೆ ಒಬ್ಬೊಬ್ಬರಾಗಿ ವಾದ್ಯಗಳನ್ನು ನುಡಿಸುವುದು. ಕಸಾಪ ನಿಘಂಟುವಿನಲ್ಲಿ ‘ತನಿ’ ಪದಕ್ಕೆ ಒಂಟಿಯಾಗಿರುವಿಕೆ, ಪ್ರತ್ಯೇಕವಾಗಿರುವಿಕೆ ಎಂಬ ಅರ್ಥಗಳನ್ನು ಕೊಟ್ಟಿದ್ದಾರೆ. ಉದಾಹರಣೆಗೆ: ಪಿಟೀಲು ಒಂದು ಪಕ್ಕವಾದ್ಯವಾಗಿಯಷ್ಟೇ ಅಲ್ಲದೆ ತನಿಕಛೇರಿಗೂ ಉಪಯುಕ್ತವಾಗಿದೆ. ತನಿ ಪದವನ್ನು ಸೂಚಿಸಿರುವ ತನಿ ಓದುಗರು ವಿಲಾಸಿನಿ ಭಟ್.
ಕೊನೆಯದಾಗಿ Lobby ಪದದ ವಿಶ್ಲೇಷಣೆ. ನಾಲ್ಕೈದು ಶತಮಾನಗಳ ಹಿಂದೆ ಇಂಗ್ಲಿಷ್ನಲ್ಲಿ ಈ ಪದಕ್ಕೆ ‘ಛಾವಣಿಯಿರುವ ಕಾಲುದಾರಿ’ (covered walkway) ಎಂಬ ಅರ್ಥವಿದ್ದದ್ದಂತೆ. ಧರ್ಮಶಾಲೆ ಅಥವಾ ಆರಾಧನಾಸ್ಥಳದ ಆವರಣದಲ್ಲಿ ನಡೆದಾಡುವಾಗ ನೆರಳಿನ ವ್ಯವಸ್ಥೆ. ಮೂಲಪದ ಲ್ಯಾಟಿನ್ನ laubia ಅರ್ಥದ್ದು. ಕ್ರಮೇಣ ಧಾರ್ವಿುಕ ಸ್ಥಳಗಳ ಅಥವಾ ಸಾರ್ವಜನಿಕ ಕಟ್ಟಡಗಳ ಪ್ರವೇಶಾಂಗಣಕ್ಕೂ ಅದೇ ಬಳಕೆಯಾಗತೊಡಗಿತು. ಅಧಿಕಾರಕೇಂದ್ರಿತ ಭವನಗಳ ಮೊಗಸಾಲೆಯನ್ನೂ lobby ಎನ್ನಲಾಯಿತು. ಅಲ್ಲಿಯತನಕ ಅದು ನಾಮಪದವಾಗಿಯೇ ಇತ್ತು. ಯಾವಾಗ ಆಡಳಿತ ವ್ಯವಸ್ಥೆಯ ಮೇಲೆ ಪ್ರಭಾವ ಬೀರಬಲ್ಲವರು, ವಶೀಲಿಬಾಜಿ ಮಾಡಬಲ್ಲವರು ಅಂತಹ ಮೊಗಸಾಲೆಗಳಲ್ಲಿ ಠಳಾಯಿಸತೊಡಗಿದರೋ ಅವರ ಪ್ರಕ್ರಿಯೆಯನ್ನೂ lobby ಎನ್ನಲಾಯಿತು.
ನಾಮಪದ ಇದ್ದದ್ದು ಕ್ರಿಯಾಪದವಾಯ್ತು. ‘1869ರಿಂದ 1877ರವೆರೆಗೆ ಅಮೆರಿಕದ ಅಧ್ಯಕ್ಷನಾಗಿದ್ದ ಯುಲಿಸಿಸ್ ಎಸ್ ಗ್ರಾಂಟ್, ಶ್ವೇತಭವನದ ಪಕ್ಕದಲ್ಲಿರುವ ವಿಲ್ಲಾರ್ಡ್ ಹೋಟೆಲ್ನ ಪ್ರವೇಶಾಂಗಣದಲ್ಲಿ ಆರಾಮಕುರ್ಚಿಯಲ್ಲಿ ಕುಳಿತು ಸಿಗಾರ್ ಸೇದುತ್ತ ಬ್ರಾಂಡಿ ಸೇವಿಸುತ್ತ ಬಿಡುವಿನ ವೇಳೆಯನ್ನು ಆನಂದಿಸುತ್ತಿದ್ದನು. ಪ್ರಭಾವಿ ವ್ಯಕ್ತಿಗಳು ಅಲ್ಲಿಗೆ ಬಂದು ಅಧ್ಯಕ್ಷನನ್ನು ಭೇಟಿಯಾಗಿ ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಅಂಥವರನ್ನು ಯುಲಿಸಿಸ್ ಗ್ರಾಂಟ್ lobbyists ಎಂದು ಕರೆಯುತ್ತಿದ್ದನು. ಆಮೇಲೆ ಅದು ವಿಶ್ವವ್ಯಾಪಿಯಾಯ್ತು’ ಅಂತಲೂ ಒಂದು ಪ್ರತೀತಿಯಿದೆ. ಈಗಂತೂ lobby ಪದ ಕಟ್ಟಡದ ಮುಖಮಂಟಪ ಅಥವಾ ಮೊಗಸಾಲೆ ಎಂಬರ್ಥದಲ್ಲಿ ನಾಮಪದ ರೀತಿಯಲ್ಲಿ ಬಳಕೆಯಾಗುವುದಕ್ಕಿಂತ, ಆಡಳಿತಯಂತ್ರದ ಮೇಲೆ ಪ್ರಭಾವ ಬೀರು ಎಂಬ ಕ್ರಿಯಾಪದ ಬಳಕೆಯೇ ಹೆಚ್ಚು. ಹಾಗಾಗಿ ‘ಪ್ರಭಾವ ಬೀರು’ವನ್ನು ಸಮಾನಾರ್ಥಕವೆಂದು ಪರಿಗಣಿಸಬೇಕಾಗುತ್ತದೆ. ಸೂಚಿಸಿದವರು: ಬಿ.ಆರ್.ಚಂದ್ರಮೌಳಿ, ಭಾಗ್ಯಶ್ರೀ ಕೆ.ಸಿ, ಪ್ರಮೋದ ಕುಲಕರ್ಣಿ, ಆನಂದ ಗೋಡಸೆ, ಎನ್.ಎಚ್. ದೇಶಪಾಂಡೆ, ಶಾಂತಿನಿ ಮಂಜುನಾಥ್, ಶಿವಯೋಗಿ ಸ್ವಾಮಿ, ಅಂಜನಾ ಗುರುರಾಜ್, ಕೆ.ವಿ ಶ್ರೀನಿವಾಸಮೂರ್ತಿ, ಸುಜಯಾ ಬಿ.ಜಿ, ಐಶ್ವರ್ಯ ಮತ್ತು ಗಗನ ಮುಂತಾದವರು.
ಅರೇಬಿಕ್ ಮೂಲದಿಂದ ಹಿಂದಿ ಮತ್ತು ಮರಾಠಿಯ ಮೂಲಕ ಕನ್ನಡಕ್ಕೆ ಬಂದು ಈಗಾಗಲೇ ಬಳಕೆಯಲ್ಲಿರುವ ‘ವಶೀಲಿ’ ಆಗಬಹುದೆಂದವರು: ಪ್ರಭುಪ್ರಸಾದ್ ನಡುತೋಟ, ಸೀತಾರಾಮ ರಾವ್, ಆರ್.ವಿ.ಮೂರ್ತಿ, ಬಿ.ವಿ.ಕುಲಕರ್ಣಿ, ವಿನಾಯಕ ಭಟ್ ತದ್ದಲಸೆ, ಅರ್ಚನಾ ಅಶೋಕ್, ಜಿ.ಎಚ್.ಸಂಕಪ್ಪ, ಗಿರೀಶ್ ಎ.ವಿ, ಸತ್ಯ ಹರಿಹಳ್ಳಿ, ಎಂ.ಕೆ ರಮೇಶ್, ಸತೀಶ ಕಬೇಕೋಡಿ, ಡಾ.ಸಂಗಮೇಶ ಸುರಭಿ, ನಾಗೇಶ ಫಾಟಕ್, ನರೇಂದ್ರನಾಥ ಎಚ್.ಎಂ ಮುಂತಾದವರು. ‘ಪುಸಲಾವಣೆ’ (ದತ್ತಾತ್ರಿ ಸಾಮಗ, ಮೈ.ಸು.ಶ್ರೀನಿವಾಸಬಾಬು) ಸಹ ಸರಿಹೊಂದುವಂತಿದೆ. ಒಟ್ಟು ಉದ್ದೇಶ ಏನಾದರೂ ಲಾಭದ್ದೇ ಇರುವುದರಿಂದ ಇಂಗ್ಲಿಷ್ ಪದಕ್ಕೆ ಧ್ವನಿಸಾದೃಶ್ಯವಾಗಿ ‘ಲಾಭಿ’ ಎಂದೇ ಹೇಳಬಾರದೇಕೆ ಎನ್ನುವ ವಿಶ್ವನಾಥ ಮೊಸಳೆಯವರ ಅಭಿಪ್ರಾಯದಲ್ಲೂ ತಥ್ಯವಿದೆ.
ಇನ್ನು, ಕಳೆದಸಲ ಆಯ್ಕೆಯಾಗಿದ್ದ ಅಂಟಿಕೆ (sticker) ಪದದ ಬಗ್ಗೆ ಪೂರಕವಾಗಿ ಇಬ್ಬರು ಓದುಗರು ಬರೆದಿದ್ದಾರೆ. ‘ಮಲೆನಾಡಿನಲ್ಲಿ ಅಂಟಿಕೆ-ಪಂಟಿಕೆ ಎಂಬ ಜಾನಪದ ಕಲೆಯೊಂದಿದೆ. ದೀಪಾವಳಿಯ ಪಾಡ್ಯದಿಂದ ತದಿಗೆಯವರೆಗೆ ಮೂರೂ ದಿವಸಗಳ ಸಂಜೆ ಏಳು ಗಂಟೆ ಹೊತ್ತಿಗೆ ಶುರುವಾಗಿ ರಾತ್ರಿಯಿಡೀ ನಡೆಯುತ್ತದೆ. ಇದೊಂದು ಗುಂಪು ಗಾಯನ. ಗಾಯಕರು ಎರಡು ತಂಡಗಳಲ್ಲಿ ಬಂದು ಹಾಡಲು ಪ್ರಾರಂಭಿಸುತ್ತಾರೆ. ಒಂದು ತಂಡ ಒಂದು ಚರಣವನ್ನು ಹಾಡುತ್ತಿದ್ದಂತೆಯೇ ಅದರ ಕೊನೆಯ ಸಾಲುಗಳಿಂದ ಇನ್ನೊಂದು ತಂಡ ಹಾಡನ್ನು ಮುಂದುವರಿಸುತ್ತಿದೆ. ಚರಣದಿಂದ ಚರಣಕ್ಕೆ ಹಾಡುಗಳನ್ನು ಅಂಟಿಸುವುದರಿಂದ ಅಂಟಿಕೆ’ ಎಂದು ಬರೆದಿದ್ದಾರೆ ಎನ್.ಎಸ್.ಚಿದಂಬರ. ‘ಅಂಟಿಕೆ-ಪಂಟಿಕೆ ತಂಡದವರು ದೀವಳಿಗೆಯ ಹಾಡು ಹೇಳುತ್ತ ದೀಪ ಹಿಡಿದು ಮನೆಮನೆಗೆ ತೆರಳಿ ತಾವು ತಂದ ದೀಪದಿಂದ ಮನೆಯವರು ನೀಡಿದ ಹಣತೆಗೆ ದೀಪ ಅಂಟಿಸುವ ಪದ್ಧತಿಯಿದೆ. ಆದ್ದರಿಂದಲೇ ಅಂಟಿಕೆ ಎಂಬ ಹೆಸರು’ ಎಂದು ರಮೇಶ ಕಾರಂತ ಬರೆದಿದ್ದಾರೆ. ಇಬ್ಬರಿಗೂ ಧನ್ಯವಾದಗಳು.
2. Safety pin: ಸೂಜಿ ಅಲ್ಲ, ಗುಂಡುಸೂಜಿಯೂ ಅಲ್ಲ. ನಿತ್ಯೋಪಯೋಗಿಯೇ, ಇಲ್ಲಿಯವರೆಗೂ ಇಂಗ್ಲಿಷಲ್ಲೇ ಗುರುತಿಸಿದೆವು, ಈಗಿನ್ನು ಕನ್ನಡದಲ್ಲಿ ಏನನ್ನೋಣ?
3. Shuttle: ನಿಯತವಾಗಿ ಎರಡು ಸ್ಥಳಗಳ ನಡುವೆ ಸಂಚರಿಸುವ ಬಸ್ಸು, ರೈಲು, ವಿಮಾನ, ಅಷ್ಟೇಕೆ ಸ್ಪೇಸ್ ಶಟಲ್ ಸಹ ಇದೆ. ಆದರೆ ಇದಕ್ಕೊಂದು ಕನ್ನಡ ಪದ ಇಲ್ಲ!
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945