ನಮ್ಮೊಳಗಿದ್ದಾನೆ ಬಂಗಾರದ ಬುದ್ಧ: ಮನೋಲ್ಲಾಸ

Manollasa
Published on
| ಡಾ. ಎಚ್.ಬಿ. ಚಂದ್ರಶೇಖರ್

ಬೌದ್ಧ ದೇವಾಲಯವೊಂದರಲ್ಲಿ ವಯಸ್ಸಾದ ಸಂತರೊಬ್ಬರು ಹಲವು ವರ್ಷಗಳಿಂದ ಪೂಜಾಕಾರ್ಯ ಮಾಡುತ್ತಿದ್ದರು. ದೇಗುಲದ ಮುಂದಿನ ರಸ್ತೆಯನ್ನು ವಿಶಾಲಗೊಳಿಸಲು ದೆೇಗುಲವನ್ನು ಕೆಡವಿ, ಮೂರ್ತಿಯನ್ನು ಅದೇ ಊರಿನ ಇನ್ನೊಂದು ಕಡೆಗೆ ಸ್ಥಳಾಂತರ ಮಾಡಲಾಗುವ ವಿಷಯವನ್ನು ತಿಳಿದ ಸಂತರು ಆಘಾತಗೊಂಡರು. ಅದರಂತೆ ದೇಗುಲವನ್ನು ಕೆಡವಿ, ಮೂರ್ತಿಯನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಮೂರ್ತಿಗೆ ಅಲ್ಲಲ್ಲಿ ಹಾನಿಯಾಯಿತು. ಇದರಿಂದ ತೀವ್ರವಾಗಿ ಮನನೊಂದ ಸಂತರಿಗೆ ರಾತ್ರಿ ನಿದ್ರೆಯೇ ಬರುವುದಿಲ್ಲ. ಮಧ್ಯರಾತ್ರಿಯಲ್ಲಿ ಎದ್ದು, ಮೂರ್ತಿ ನೋಡಲು ಹೋದರು. ಹಾನಿಯಾದ ಮೂರ್ತಿಯ ಒಂದು ಭಾಗವನ್ನು ತಿಕ್ಕಿದಾಗ ಬಂಗಾರದ ಹೊಳಪು ಕಂಡಂತಾಯಿತು. ತಕ್ಷಣ, ಉಳಿ ತೆಗೆದುಕೊಂಡು ವಿಗ್ರಹದ ಹಾನಿಯಾದ ಭಾಗವನ್ನು ಕೆತ್ತಿದರು. ವಿಗ್ರಹದ ಮೇಲ್ಪದರ ಕಳಚಿತು. ನೋಡನೋಡುತ್ತಿದ್ದಂತೆ ಬಂಗಾರದ ಬುದ್ಧನ ಮೂರ್ತಿ ಅವರ ಎದುರು ಸುಂದರವಾಗಿ ಮೈದಳೆಯಿತು. ಸಂತರ ಸಂತಸಕ್ಕೆ ಪಾರವೇ ಇಲ್ಲ. ನೂರಾರು ವರ್ಷಗಳಿಂದ ಮಣ್ಣಿನ ಮೂರ್ತಿ ಎಂದೇ ಭಾವಿಸಿದ್ದ ವಿಗ್ರಹದ ಒಳಗೆ ಬಂಗಾರದ ಮೂರ್ತಿ ಇತ್ತು!

5500 ಕೆಜಿ ಅಪ್ಪಟ ಬಂಗಾರದಿಂದ ಮಾಡಿದ ಥೈಲ್ಯಾಂಡ್​ನಲ್ಲಿನ ಬುದ್ಧನ ಮೂರ್ತಿಯ ಕಥೆ ಇದು. ಬರ್ವ ದೇಶದ ದಾಳಿಕೋರರಿಂದ ರಕ್ಷಿಸಲು ಈ ಮೂರ್ತಿಗೆ ಜೇಡಿಮಣ್ಣಿನ ಮಿಶ್ರಣವನ್ನು ಮೆತ್ತಿ, ಅನೇಕ ವರ್ಷಗಳ ಕಾಲ ಹಾಗೇ ಬಿಡಲಾಗಿತ್ತು. ನೂರಾರು ವರ್ಷಗಳ ಕಾಲ ಮಣ್ಣಿನ ಮೂರ್ತಿ ಎಂದೇ ಭಾವಿಸಿದ್ದ ಬುದ್ಧನ ವಿಗ್ರಹಕ್ಕೆ ಆಕಸ್ಮಿಕವಾಗಿ ಒದಗಿದ ಹಾನಿಯಿಂದ ಬಂಗಾರದ ಮೂರ್ತಿಯನ್ನು ಜಗತ್ತಿಗೆ ಪ್ರಕಟಿಸಲು ಸಾಧ್ಯವಾಯಿತು.

ಹೀಗೆ ನಮ್ಮೆಲ್ಲರೊಳಗೂ ಅಪ್ಪಟ ಬಂಗಾರದಿಂದ ಹೊಳೆಯುವ ಒಬ್ಬ ಅದ್ಭುತ ಬುದ್ಧನಿದ್ದಾನೆ. ಪ್ರಾಯಶಃ ಹೊರಜಗತ್ತಿನಿಂದ ರಕ್ಷಣೆ ಹೊಂದಲು ಅವನೂ ಭಯ, ಅಹಂಕಾರ, ಸಂಶಯ, ತಪ್ಪಿತಸ್ಥ ಭಾವನೆಗಳೆಂಬ ಜೇಡಿಮಣ್ಣಿನಿಂದ ಮುಚ್ಚಲ್ಪಟ್ಟಿದ್ದಾನೆ. ಋಣಾತ್ಮಕ ಆಲೋಚನೆ ಹಾಗೂ ಸ್ವಾರ್ಥ, ಲೋಭದ ಕಾರಣ ನಮ್ಮೊಳಗಿನ ಬಂಗಾರದ ಬುದ್ಧ ಬಾಹ್ಯಜಗತ್ತಿಗೆ ಪ್ರಕಟವಾಗುವುದೇ ಇಲ್ಲ. ನಮಗೆ ನಾವೇ ಹೇರಿಕೊಂಡಿರುವ ಸೀಮಿತ ಶಕ್ತಿ, ಸಾಮರ್ಥ್ಯಗಳ ಕುರಿತಾದ ನಂಬಿಕೆಗಳಿಂದ ನಮಗರಿವಿಲ್ಲದೇ ನಮ್ಮೊಳಗೆ ನೆಲೆನಿಂತಿರುವ ಬುದ್ಧ ಬಂಧಿಯಾಗಿರುತ್ತಾನೆ. ತನ್ನ ಬಿಡುಗಡೆಗಾಗಿ ಈ ಬಂಗಾರದ ಬುದ್ಧ ಆಗಾಗ್ಗೆ ಮನವಿ, ಬೇಡಿಕೆ ಸಲ್ಲಿಸುವುದನ್ನು ನಾವು ಗುರುತಿಸದೇ ಹೋಗುತ್ತೇವೆ. ಈ ಜಗತ್ತಿನಲ್ಲಿ ಅಸಂಖ್ಯ ಜನ ಸಾಧಾರಣವಾಗಿ ಬಾಳಿ, ಬದುಕಿ ತಮ್ಮೊಳಗೆ ಅಡಗಿರುವ ಮಹಾನ್ ಪ್ರತಿಭೆ, ಸೃಜನಶೀಲತೆ, ಸಕಾರಾತ್ಮಕ ಶಕ್ತಿಗಳನ್ನರಿಯದೆಯೇ, ಒಂದು ದಿನ ಈ ಜಗತ್ತಿನಿಂದ ಕಣ್ಮರೆಯಾಗುತ್ತಾರೆ. ಆ ರೀತಿ ಆಗಬಾರದೆಂದಲ್ಲಿ ಸ್ವಪ್ರಯತ್ನ, ಛಲ, ನಂಬಿಕೆಗಳೆಂಬ ಉಳಿಯ ಪೆಟ್ಟುಗಳು ಬೀಳಬೇಕು. ಸತ್ಯದ ದರ್ಶನ ಆಗಬೇಕು. ಆಗಲೇ, ಜೇಡಿಮಣ್ಣಿನಂತಿರುವ ಹೊರಸ್ವರೂಪ ಕಳಚಿ ಬಿದ್ದು, ಹೃದಯದೊಳಗೆ ಅಡಗಿರುವ ಬಂಗಾರದ ಬುದ್ಧ ಹೊರಜಗತ್ತಿಗೆ ಪ್ರಕಟವಾಗಿ, ಪ್ರಕಾಶಿಸುತ್ತಾನೆ.

(ಲೇಖಕರು ಡಿ.ಎಸ್.ಇ.ಆರ್.ಟಿ.ಯ ಹಿರಿಯ ಸಹಾಯಕ ನಿರ್ದೇಶಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net