

| ಸತ್ಯನಾರಾಯಣ ಭಟ್ಟ
ಯಾವತ್ತೂ ಯಾರನ್ನೂ ಅನ್ಯಥಾ ಭಾವಿಸದೆ ಎಲ್ಲರನ್ನೂ ಸಮರಸವಾಗಿ ನೋಡಿದ ಆ ಭಾಷೆ ಅನೇಕ ದಶಕಗಳ ತರುವಾಯ ಇಂದು ಮತ್ತೆ ಮನೆಮಾತಾಗಲು ಪ್ರಾರಂಭಿಸಿದೆ. ಲಕ್ಷಾಂತರ ಜನರು ಈ ಭಾಷೆಯನ್ನು ಕಲಿತು ತಮ್ಮ ಮನ, ಮನೆಯನ್ನು ತುಂಬಿಸಿಕೊಳ್ಳಲು ತವಕಿಸುತ್ತಿದ್ದಾರೆ. ಜಗತ್ತಿನ ಪ್ರಾಚೀನ ಜನಾಂಗವೊಂದು ತನ್ನ ಪೂರ್ವಜರ ಭಾಷೆಯನ್ನು ಮತ್ತೆ ಬೆಳಗಿಸಲು ಪ್ರಾರಂಭಿಸಿದೆ. ಮನೆಮಾತಾಗುತ್ತಿರುವ ಆ ಭಾಷೆ ಯಾವುದಾಗಿರಬಹುದು? ಅದೇ ನಮ್ಮೆಲ್ಲ ಭಾಷೆಗಳಿಗೆ ಮಾತೃಸ್ಥಾನದಲ್ಲಿರುವ ಮತ್ತು ನಮ್ಮ ಈ ಸನಾತನ ಪರಂಪರೆಯ ವಾಹಕವಾದ ದೇವಭಾಷೆ ಸಂಸ್ಕೃತ.
300 ವರ್ಷಗಳ ಹಿಂದೆಯಷ್ಟೇ ಈ ಭಾಷೆಯ ಕಲಿಕೆಗೆ ಹಳ್ಳಿ-ಹಳ್ಳಿಯಲ್ಲಿಯೂ ಶಾಲೆಗಳಿದ್ದವು. ಯಾರು ಬೇಕಾದರೂ ಬಂದು ಗುರುವಿನ ಹತ್ತಿರ ಸಾಂಗೋಪಾಂಗವಾಗಿ ವೇದ-ಉಪನಿಷತ್ತು, ಕಾವ್ಯ, ಪುರಾಣ, ವಿವಿಧ ಶಾಸ್ತ್ರಗ್ರಂಥಗಳನ್ನೂ ಕಲಿಯಬಹುದಿತ್ತು. ಅಲ್ಲಿ ಕಲಿಕೆಗೆ ಜಾತಿ, ಮತಗಳ ನಿರ್ಬಂಧವಿರಲಿಲ್ಲ. ಅದರಿಂದಾಗಿ ಸಮಾಜ ಸಮರಸವಾಗಿ ಬಾಳುವೆ ನಡೆಸುತ್ತಿತ್ತು. ಹಾಗೆ ನೋಡಿದರೆ ವೇದಕಾಲದಿಂದ ಇಂದಿನವರೆಗೂ ಬೆಳೆದು ಬಂದ ನಮ್ಮೆಲ್ಲರ ಚಿಂತನೆಗೆ ಅಡಿಪಾಯವಾದ ಮಾಧ್ಯಮ ಭಾಷೆಯೇ ಸಂಸ್ಕೃತ. ಮಾನವ ಅರಿತಿರುವ ಭಾಷೆಗಳಲ್ಲಿ ಹೆಚ್ಚು ವಿಕಾಸಗೊಂಡ ಮತ್ತು ಭಾಷಾವಿಜ್ಞಾನದ ದೃಷ್ಟಿಯಿಂದ ಹೆಚ್ಚು ವೈಜ್ಞಾನಿಕವಾದ ಭಾಷೆ ಕೂಡ ಇದುವೇ.
2015ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಸ್ಕೃತದ ವಿಕಾಸದ ದೃಷ್ಟಿಯಿಂದ 10 ವರ್ಷಗಳ ಯೋಜನೆಯನ್ನು ರೂಪಿಸಲು ಎನ್.ಗೋಪಾಲಸ್ವಾಮಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಅದರ ಕ್ರೀಯಾನ್ವಯನ ಕೂಡ ಅತ್ಯಲ್ಪ ಪ್ರಮಾಣದಲ್ಲಿ ನಡೆಯುತ್ತಿದೆ. ಈ ಮಧ್ಯದಲ್ಲಿ 2020ರ ನೂತನ ಶಿಕ್ಷಣ ನೀತಿ ಕೂಡ ಪ್ರಕಟವಾಗಿದೆ. ನೂತನ ಶಿಕ್ಷಣ ನೀತಿಯಿಂದ ಸಂಸ್ಕೃತ ಭಾಷೆಯ ವಿಕಾಸ ಯಾವ ಪ್ರಮಾಣದಲ್ಲಿ ಆಗಲಿದೆ ಎನ್ನುವುದು ಇನ್ನಷ್ಟೇ ಅರಿವಿಗೆ ಬರಬೇಕು.
ಸರ್ವಸಾಮಾನ್ಯರಿಗೆ ಸಂಸ್ಕೃತ ಕಲಿಕೆಗೆ ದಶಕಗಳ ಕಾಲ ಮುಚ್ಚಿದ್ದ ಬಾಗಿಲನ್ನು ತೆರೆಯುವ ಕಠಿಣ ಪ್ರಯಾಸಕ್ಕೆ ನಮ್ಮ ನಾಡಿನ ಕೆಲ ಯುವ ಸಂಸ್ಕೃತ ವಿದ್ವಾಂಸರು 1981ರಲ್ಲಿ ಚಾಲನೆ ನೀಡಿದರು. ಅವರ ಪರಿಶ್ರಮದ ಫಲವಾಗಿ ದೇವಭಾಷೆಯ ದೀಪ ನಿಧಾನವಾಗಿ ನಾಡಿನಾದ್ಯಂತ ಬೆಳಗಲು ಪ್ರಾರಂಭಿಸಿತು. ಸುರಭಾರತಿ ಬಗ್ಗೆ ಸಾಮಾನ್ಯ ಜನರಲ್ಲಿ ಹುದುಗಿದ್ದ ಪ್ರೀತಿ, ಪ್ರೇಮ, ವಿಶ್ವಾಸದ ಪರಿಣಾಮವಾಗಿ ಸಮಾಜದೆಲ್ಲೆಡೆಯಿಂದ ವ್ಯಾಪಕ ಜನಬೆಂಬಲ ವ್ಯಕ್ತವಾಯಿತು. ಈ ರೀತಿ ಭಾಷೆಯೊಂದು ಜನಾಂದೋಲನವಾಗಿ ರೂಪುಗೊಂಡು ಸಮಾಜ ಸೇವಾಕಾರ್ಯದ ಒಂದು ಭಾಗವಾಯಿತು. ತೊಂಬತ್ತರ ದಶಕದಲ್ಲಿ ಸಂಸ್ಕೃತಭಾರತಿ ಸಂಘಟನೆಯ ಹೆಸರಿನಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾದ ಸಂಸ್ಕೃತ ಭಾಷೆಯ ಪುನರುತ್ಥಾನದ ಕಾರ್ಯ ದೇಶ-ವಿದೇಶಗಳಿಗೂ ಪಸರಿಸಿತು. ಪ್ರಸಕ್ತ ಹತ್ತಾರು ಆಯಾಮಗಳ ಮೂಲಕ ಜಗತ್ತಿನಾದ್ಯಂತ ಸರ್ವಸಾಮಾನ್ಯರಿಗೆ ಉಚಿತವಾಗಿ ಸರಳ ಮತ್ತು ವಿನೂತನ ಪದ್ಧತಿಯ ಮೂಲಕ ಸಂಸ್ಕೃತವನ್ನು ಕಲಿಸುವ ಕೈಂಕರ್ಯದಲ್ಲಿ ಸಂಸ್ಕೃತಭಾರತಿ ತನ್ನನ್ನು ತೊಡಗಿಸಿಕೊಂಡಿದೆ. ಯಾವುದೇ ಪ್ರದೇಶ, ಯಾವುದೇ ಜನಾಂಗದ ಜನರು ಮನ ಮತ್ತು ಮನೆಬಾಗಿಲನ್ನು ತೆರೆದು ಸಂಸ್ಕೃತವನ್ನು ತುಂಬಿಸಿಕೊಳ್ಳಲು ಹತ್ತಾರು ರೀತಿಯ ಉಪಕ್ರಮಗಳಿಗೆ ಮುನ್ನುಡಿ ಬರೆದಿದೆ. ಅವುಗಳಲ್ಲಿ ಪ್ರಮುಖವಾದವು.
ಸಂಸ್ಕೃತ ಸಂಭಾಷಣ ಶಿಬಿರ: ಯಾವುದೇ ಜಾತಿ, ಮತ, ಭಾಷೆ, ವಯಸ್ಸಿನ ಭೇದವಿಲ್ಲದೆ ಎಲ್ಲರಿಗೂ ಇಲ್ಲಿ ಮುಕ್ತಪ್ರವೇಶ. ಈ ರೀತಿಯ ಶಿಬಿರಗಳ ಮೂಲಕವೇ ಈ ಸಂಘಟನೆಯ ಜಾಲ ದೇಶದ ಮೂಲೆ-ಮೂಲೆಗಳಿಗೂ ಮತ್ತು ಜಗತ್ತಿನ 20ಕ್ಕೂ ಹೆಚ್ಚಿನ ದೇಶಗಳಿಗೆ ವಿಸ್ತರಿಸಿದೆ. ಇಲ್ಲಿಯವರೆಗೆ 1.40 ಲಕ್ಷ ಸಂಭಾಷಣ ಶಿಬಿರಗಳ ಮೂಲಕ 90 ಲಕ್ಷ ಜನರಿಗೆ ಸಂಸ್ಕೃತದಲ್ಲಿ ಮಾತನಾಡುವ ಕಲೆಯನ್ನು ಕಲಿಸಲಾಗಿದೆ. ಇದೆಲ್ಲ ಸಾಧ್ಯವಾದುದು ಸೇವಾರೂಪದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಯುಕರ್ತರ ಪರಿಶ್ರಮದಿಂದ. ‘ಸೇವಾ ಹಿ ಪರಮೋ ಧರ್ಮಃ’ ‘ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ’ ಇದು ಈ ಸಂಘಟನೆಯ ಕಾರ್ಯಕರ್ತರ ಅಂತರಂಗದ ತತ್ತ್ವವಾಗಿದ್ದರೆ ‘ಸಂಸ್ಕೃತೇನ ಸಂಭಾಷಣಂ ಕುರು, ಜೀವನಸ್ಯ ಪರಿವರ್ತನಂ ಕುರು’ ಎಂಬುದು ಮನದಾಳದ ನುಡಿ.
ಸಂಸ್ಕೃತ ಬಾಲಸಂಸ್ಕಾರ ಕೇಂದ್ರ:ಆಧುನಿಕ ಯುಗದ ಮಕ್ಕಳಿಗೆ ನಮ್ಮ ಸಂಸ್ಕೃತಿ, ಜೀವನಮೌಲ್ಯಗಳ ಶಿಕ್ಷಣವನ್ನು ಸಂಸ್ಕೃತದ ಮೂಲಕ ನೀಡುವ ಯೋಜನೆಯೇ ಸಂಸ್ಕೃತ ಬಾಲಕೇಂದ್ರ. ಸಂಸ್ಕೃತ ಸಂಭಾಷಣೆ, ಸುಭಾಷಿತ, ಭಗವದ್ಗೀತೆ, ಸ್ತೋತ್ರಗಳನ್ನು ಮಕ್ಕಳಿಗೆ ಆಟದ ಮೂಲಕ ಕಲಿಸಿಕೊಡಲಾಗುವುದು. ಬಾಲಸಂಸ್ಕಾರ ಕೇಂದ್ರಗಳ ಮೂಲಕ ಪ್ರತಿವರ್ಷ ಸಾವಿರಾರು ಮಕ್ಕಳಿಗೆ ಜೀವನಮೌಲ್ಯದ ಶಿಕ್ಷಣವನ್ನು ನೀಡಲಾಗುತ್ತಿದೆ.
ಅಂಚೆ ತೆರಪಿನ ಸಂಸ್ಕೃತ ಶಿಕ್ಷಣ (https://samskritashikshanam.in): ಪ್ರವೇಶ, ಪರಿಚಯ, ಶಿಕ್ಷಾ, ಕೋವಿದ ಎಂಬ ನಾಲ್ಕು ಹಂತಗಳೊಂದಿಗೆ, ಸರಳ, ಆಕರ್ಷಕ ಪಠ್ಯಕ್ರಮವನ್ನು ಹೊಂದಿರುವ 2 ವರ್ಷಗಳ ಯೋಜನೆ. ಕನ್ನಡ, ಇಂಗ್ಲಿಷ್ ಸೇರಿ ದೇಶದ 10 ಪ್ರಾಂತೀಯ ಭಾಷಾ ಮಾಧ್ಯಮದ ಮೂಲಕ ಕಲಿಕೆಗೆ ಅವಕಾಶ ಉಂಟು. ಸಂಸ್ಕೃತದಲ್ಲಿ ಮಾತನಾಡಲು, ಬರೆಯಲು, ಓದಲು ಸುಲಭವಾಗಿ ಕಲಿಯಬಹುದು. ಜೊತೆಗೆ ನಾವು ದಿನನಿತ್ಯ ಬಳಸುವ ಸಂಸ್ಕೃತ ಶ್ಲೋಕ, ಸುಭಾಷಿತ, ಸ್ತೋತ್ರ, ಭಗವದ್ಗೀತೆಯ ಅರ್ಥ ನಮಗೆ ಸುಲಭವಾಗಿ ಅರಿವಿಗೆ ಬರುವಂತೆ ಪಠ್ಯಕ್ರಮ ರೂಪಿಸಲಾಗಿದೆ. ಸಂಸ್ಕೃತದಲ್ಲಿ ಉಲ್ಲೇಖವಾಗಿರುವ ವೈಜ್ಞಾನಿಕ ಅಂಶಗಳ ಹೇರಳ ಮಾಹಿತಿಯನ್ನೂ ನೀಡಲಾಗಿದೆ. ಈ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ 1.25 ಲಕ್ಷ ಜನರು ಸಂಸ್ಕೃತವನ್ನು ಕಲಿತಿದ್ದಾರೆ.
ಸಂಸ್ಕೃತ ಸಾಹಿತ್ಯ ಪ್ರಕಾಶನ (https://samskritabharati.in/bookstore): ಸಂಸ್ಕೃತ ಓದುಗರ, ಲೇಖಕರ ಸಂಖ್ಯೆ ಹೆಚ್ಚಿಸುವ ದೃಷಿಯಿಂದ ಪ್ರಾರಂಭವಾದ ಯೋಜನೆ ಇದು. ಅನುವಾದ ಸಾಹಿತ್ಯ, ಕಥಾಸಾಹಿತ್ಯ, ವೈಚಾರಿಕ ಸಾಹಿತ್ಯ, ಮಕ್ಕಳ ಸಾಹಿತ್ಯ ಮತ್ತು ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ 300ಕ್ಕೂ ಹೆಚ್ಚಿನ ಸಂಸ್ಕೃತ ಪುಸ್ತಕಗಳನ್ನು ಈ ಯೋಜನೆಯ ಅಡಿ ಪ್ರಕಾಶಿಸಿ ಓದುಗರಿಗೆ ನೀಡಲಾಗಿದೆ. ಇವುಗಳಲ್ಲಿ ಹತ್ತಾರು ಗ್ರಂಥಗಳು ಆರಕ್ಕೂ ಹೆಚ್ಚಿನ ಮುದ್ರಣಗಳನ್ನು ಕಂಡಿರುವುದು ವಿಶೇಷ. ವಿದ್ಯಾಲಯ ಶಿಕ್ಷಣದಲ್ಲಿ ಸಂಸ್ಕೃತವನ್ನು ತರುವ ಉದ್ದೇಶದಿಂದ ನರ್ಸರಿ ತರಗತಿಯಿಂದ ಏಳನೇ ತರಗತಿಯವರೆಗಿನ ಮಕ್ಕಳ ಅಧ್ಯಯನಕ್ಕೆ ಅನುಕೂಲವಾಗುವ ಸರಳ ಸಂಸ್ಕೃತ ಪಠ್ಯಪುಸ್ತಕಗಳನ್ನು ಸಂಸ್ಕೃತಭಾರತಿ ಹೊರತಂದಿದೆ. ದೇಶದ ಸಾವಿರಾರು ಶಾಲೆಗಳು ಸಂಸ್ಕೃತ ಕಲಿಕೆಗೆ ಈ ಪುಸ್ತಕಗಳನ್ನು ಉಪಯೋಗಿಸುತ್ತಿವೆ. ‘ಸಂಭಾಷಣಸಂದೇಶ’ ಸಂಸ್ಕೃತ ಮಾಸ ಪತ್ರಿಕೆ (https://sambhashanasandesha.in) ರಚನಾತ್ಮಕವಾಗಿ ಕೆಲಸ ಮಾಡುತ್ತ, ಉತ್ತಮ ವಿಚಾರಗಳನ್ನು ತಲುಪಿಸುತ್ತಿದೆ.
ಸಂಸ್ಕೃತ ವಿಕಿಪೀಡಿಯಾ (https://sa.wikipedia.org):ವಿಕಿಪೀಡಿಯಾ ಸ್ವಾಯತ್ತ ಅಂತರ್ಜಾಲ ಮಾಧ್ಯಮ ಸಂಸ್ಥೆ. ವಿಕಿಪೀಡಿಯಾ ಮುಖ್ಯ ಅಂತರ್ಜಾಲ ಪುಟದ ಅಂಗವಾಗಿ ವಿಕಿಸೋರ್ಸ್, ವಿಕಿಸುಭಾಷಿತ, ವಿಕಿಶಬ್ದಕೋಷ, ವಿಕಿಸೂಕ್ತಿ, ವಿಕಿಬುಕ್ಸ್ ಮುಂತಾದ ಹಲವು ವಿಭಾಗಗಳು ಕಾರ್ಯ ನಿರ್ವಹಿಸುತ್ತವೆ. ಜಗತ್ತಿನ 280ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಉಪಲಭ್ಯವಿರುವ ಏಕಮಾತ್ರ ಜಾಲಪುಟ ವಿಕಿಪೀಡಿಯಾ. ಸಂಸ್ಕೃತವೂ ಇದರಲ್ಲಿ ಒಂದು. 2011ರಿಂದ ಸಂಸ್ಕೃತವಿಕಿಯ ವಿಷಯ ವರ್ಧನೆಯ ಕಾರ್ಯದಲ್ಲಿ ಸಂಸ್ಕೃತಭಾರತಿ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಸ್ಕೃತ ವಾಙ್ಮಯದಲ್ಲಿ ಉಪಲಭ್ಯವಿರುವ ಪ್ರಾಚೀನ ಸಾಹಿತ್ಯ ಮತ್ತು ಆಧುನಿಕ ವಿಷಯಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಸಂಸ್ಕೃತದ ಮೂಲಕವೇ ಅಂತರ್ಜಾಲದಲ್ಲಿ ಎಲ್ಲರಿಗೂ ಸಿಗುವಂತೆ ಮಾಡುವುದೇ ಈ ಜಾಲಪುಟದ ಪ್ರಮುಖ ಉದ್ದೇಶ. ಸದ್ಯ ಸಂಸ್ಕೃತವಿಕಿಯಲ್ಲಿ ಆಧುನಿಕ ಜಗತ್ತಿನ ವಿಭಿನ್ನ ವಿಷಯಗಳಿಗೆ ಸಂಬಂಧಿಸಿದ 11,500ಕ್ಕೂ ಮಿಕ್ಕ ಲೇಖನಗಳು ಓದುಗರಿಗೆ ಲಭ್ಯ. ವಿಕಿಸೋರ್ಸ್ (sa.wikisource.org) ಜಾಲಪುಟದಲ್ಲಿ ವೇದ, ಉಪನಿಷತ್, ದರ್ಶನ, ಕಾವ್ಯ, ಇತಿಹಾಸ, ಶಾಸ್ತ್ರಗ್ರಂಥಗಳಿಗೆ ಸಂಬಂಧಿಸಿದ 800 ಗ್ರಂಥಗಳು ಸಂಶೋಧಕರಿಗೆ ಲಭ್ಯ. ವಿಕಿಸುಭಾಷಿತದಲ್ಲಿ (sa.wikiquote.org) ಲೌಕಿಕನ್ಯಾಯ, ವೇದಸೂಕ್ತಿ, ಚಾಟುಶ್ಲೋಕ, ಸುಭಾಷಿತಗಳಿಗೆ ಸಂಬಂಧಿಸಿದ 5000 ಸೂಕ್ತಿಗಳು ಲಭ್ಯ. ವಿಕಿಶಬ್ದಕೋಷದಲ್ಲಿ (sa.wiktionary.org) ಸಂಸ್ಕೃತ ವಾಙ್ಮಯದಲ್ಲಿ ಈಗ ಉಪಲಭ್ಯವಿರುವ ಎಲ್ಲ ಪ್ರಮುಖ ಶಬ್ದಕೋಶಗಳು ಸಿಗುತ್ತವೆ.
ಪ್ರತಿವರ್ಷ ಈ ರೀತಿಯ ಹಲವು ಉಪಕ್ರಮಗಳನ್ನು ಅನೇಕರು ತೆರೆಯುತ್ತಿದ್ದಾರೆ. 40 ವರ್ಷಗಳ ಹಿಂದಷ್ಟೇ ಒಂದು ಬಾಗಿಲನ್ನು ತೆರೆಯುವುದು ಕೂಡ ಕಷ್ಟಸಾಧ್ಯ ಎನ್ನುವ ಸ್ಥಿತಿಯಿತ್ತು. ಆದರೆ ಇಂದು ನೂರಾರು, ಸಾವಿರಾರು ಬಾಗಿಲುಗಳು ದೇವಭಾಷೆಯಾದ ಸಂಸ್ಕೃತದ ಕಲಿಕೆಗೆ ತೆರೆದುಕೊಂಡಿರುವುದು ನಿಜಕ್ಕೂ ವಿಸ್ಮಯವೇ. ಸಂಸ್ಕೃತಭಾರತಿ, ಸಂಸ್ಕೃತ ವಿಶ್ವವಿದ್ಯಾಲಯಗಳು, ಶೋಧಸಂಸ್ಥಾನಗಳು, ಗುರುಕುಲಗಳು ಇತರ ಅನೇಕ ಭಾಷಾಪ್ರೇಮಿ ಸಂಘ-ಸಂಸ್ಥೆಗಳು ಸಂಸ್ಕೃತದ ಕಲಿಕೆಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಇವರೆಲ್ಲರ ಜೊತೆಗೆ ವ್ಯಕ್ತಿಗತವಾಗಿ ಕೂಡ ಅನೇಕರು ತಮ್ಮ ಪ್ರತಿಭೆ, ಅನುಭವವನ್ನು ಸಂಸ್ಕೃತದ ಬೆಳವಣಿಗೆಗೆ ನೀಡುತ್ತಿದ್ದಾರೆ. ಇವರೆಲ್ಲರ ಪರಿಶ್ರಮದ ಫಲವಾಗಿ ಸಂಸ್ಕೃತ ಭಾಷೆ ವಿಶ್ವಮಾನ್ಯತೆ ಗಳಿಸುತ್ತಿದೆ.
(ಲೇಖಕರು ಸಂಸ್ಕೃತ ಭಾರತೀಯ ಅಖಿಲ ಭಾರತ ಕಾರ್ಯದರ್ಶಿ)