

ವಂದೇ ಮಾತರಂ ಘೋಷಣೆ ಮತ್ತು ಗೀತೆ ಭಾರತದಲ್ಲಿ ಸೃಷ್ಟಿಸಿದ ಸಂಚಲನ ಅಸಾಧಾರಣ. ತಾಯ್ನಾಡನ್ನು ಸಾಕ್ಷಾತ್ ಭಗವತಿಯ ರೂಪದಲ್ಲಿ ಕಂಡು ವಂದಿಸುವ ಈ ಗೀತೆಯ ಪ್ರತಿ ಸಾಲು ದೇಶಭಕ್ತಿಯ ಅಮೃತವನ್ನು ಉಣಬಡಿಸುತ್ತದೆ. ಹಾಗಾಗಿಯೇ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕ್ರಾಂತಿಕಾರಿಗಳು ‘ವಂದೇ ಮಾತರಂ’ ಎಂದು ಹೆಮ್ಮೆಯಿಂದ ಘೋಷಿಸುತ್ತ, ನೇಣಿಗೆ ಕೊರಳೊಡ್ಡಿದರು. ಆ ಮೂಲಕ ಸ್ವಾತಂತ್ರ್ಯ ಹೋರಾಟದ ಪಥದಲ್ಲಿ ಮತ್ತೆ ಸಾವಿರಾರು ಕ್ರಾಂತಿಕಾರಿಗಳು ಸೇರಿಕೊಳ್ಳುತ್ತಿದ್ದರು. ಹೀಗೆ, ರಾಷ್ಟ್ರೀಯತೆಯ ಭಾವವನ್ನು ಬಡಿದೆಬ್ಬಿಸುವ ವಂದೇ ಮಾತರಂ ಗೀತೆಯನ್ನು ಬಂಕಿಮಚಂದ್ರ ಚಟರ್ಜಿ ಅವರು ರಚಿಸಿ 150 ವರ್ಷಗಳು ಪೂರ್ಣಗೊಂಡಿದ್ದು, ಈ ರಾಷ್ಟ್ರೀಯ ಗೀತೆಯ ಪ್ರೇರಣಾಭಾವದ ಅವಲೋಕನ ಇಲ್ಲಿದೆ.
ಅದು 1905ರ ಸಮಯ. ದೇಶದಲ್ಲಿ ಸ್ವಾತಂತ್ರ ಸಂಗ್ರಾಮ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ವಂದೇ ಮಾತರಂ (ತಾಯಿ ವಂದಿಸುವೆ) ಗೀತೆ ದೇಶದ ಉದ್ದಗಲಕ್ಕೂ ಪ್ರಖ್ಯಾತಿ ಪಡೆಯತೊಡಗಿತು. ಮಹರ್ಷಿ ಅರವಿಂದರು ವಂದೇ ಮಾತರಂ ಗೀತೆಯನ್ನು ಭಾರತೀಯರ ಅಭಿವ್ಯಕ್ತಿಯ ಸಂಕೇತವೆಂದು ಹಾಡಿ ಹೊಗಳಿದರು. ಬಂಗಾಳಿ ಮತ್ತು ಸಂಸ್ಕೃತದಲ್ಲಿದ್ದ ಈ ಗೀತೆಯನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದರು. ಗಾಂಧೀಜಿಯವರು ನಡೆಸುತ್ತಿದ್ದ ಎಲ್ಲ ಸಭೆಗಳಲ್ಲೂ ವಂದೇ ಮಾತರಂ ಪ್ರಾರ್ಥನೆಯಾಗಿತ್ತು. 1905ರಲ್ಲಿ ಬ್ರಿಟಿಷರು ಬಂಗಾಳದ ವಿಭಜನೆ ಮಾಡಿದ ಸಮಯದಲ್ಲಿ ಗೀತೆಯನ್ನು ಎಲ್ಲ ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಯಾವುದೇ ಜಾತಿ-ಮತ ಭೇದವಿಲ್ಲದೆ ಎಲ್ಲರೂ ಹಾಡತೊಡಗಿದರು. ಈ ಗೀತೆ ಮತ್ತು ಘೋಷಣೆಯ ಪ್ರಖ್ಯಾತಿ ಬ್ರಿಟಿಷರಲ್ಲಿ ಆತಂಕ ಮೂಡಿಸಿತು. ಯುವ ಸ್ವಾತಂತ್ರ್ಯ ಹೋರಾಟಗಾರ ಖುದಿರಾಂ ಬೋಸ್ ಗಲ್ಲಿಗೇರುವಾಗ ಮೊಳಗಿಸಿದ ಘೊಷಣೆ ವಂದೇ ಮಾತರಂ. ಅಂದಿನಿಂದ ಭಗತ್ ಸಿಂಗ್, ಉದಮ್ ಸಿಂಗ್ ಮುಂತಾದ ಎಲ್ಲ ಕ್ರಾಂತಿಕಾರರ ಘೊಷಣೆ ಒಂದೇ.. ವಂದೇ ಮಾತರಂ.
‘ವಂದೇ ಮಾತರಂ’ ಗೀತೆಯನ್ನು ಕೊಡುಗೆಯಾಗಿ ನೀಡಿದ ಮಹಾಕವಿ ಬಂಕಿಮಚಂದ್ರ ಚಟರ್ಜಿ, ದೇಶಧರ್ಮನಿಷ್ಠರನ್ನು ಭುವಿಗೆ ಪರಿಚಯಿಸಿದ ಬಂಗಾಳದಲ್ಲಿ 1838 ಜೂನ್ 27ರಂದು ಜನಿಸಿದರು. ಉನ್ನತ ಸರ್ಕಾರಿ ಹುದ್ದೆಯಲ್ಲಿದ್ದ ಅಪ್ಪನ ಶಿಸ್ತಿನ ಬದುಕು, ಪ್ರೇಮಮಯೀ ವ್ಯಕ್ತಿತ್ವದ ಅಮ್ಮನ ಸಂಸ್ಕಾರಕೇಂದ್ರಿತ ಶಿಕ್ಷಣ ಜೀವನಕ್ಕೊಂದು ಪಥವನ್ನು ತೋರಿಸಿತು. ಅಪಾರ ಬುದ್ಧಿಶಕ್ತಿಯ ಬಂಕಿಮರನ್ನು ಸಂಸ್ಕೃತಸಾಹಿತ್ಯ ಆಕರ್ಷಿಸಿತು. ಕಲ್ಕತ್ತ ವಿಶ್ವವಿದ್ಯಾಲಯದಿಂದ ಪದವೀಧರರಾದ ಆರಂಭದ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರು. ಅತ್ಯುನ್ನತ ಅಂಕಗಳೊಂದಿಗೆ ಬಿ. ಎ. ಪದವಿಗಳಿಸಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿ, ಮುಂದೆ ಡೆಪ್ಯುಟಿ ಕಲೆಕ್ಟರ್ ಆಗಿ ನಿವೃತ್ತರಾದರು. ಅಧಿಕಾರಿ ಹುದ್ದೆಯಲ್ಲಿದ್ದರೂ ಸಾಹಿತ್ಯಕೃಷಿಯನ್ನೂ ಮುಂದುವರಿಸಿದರು. ಅವರ ‘ದುರ್ಗೆಶ ನಂದಿನಿ’ ಬಂಗಾಳಿ ಭಾಷೆಯ ಮೊದಲ ಕಾದಂಬರಿ. ಬ್ರಿಟಿಷರ ಅಹಂಕಾರದ ನಡುವೆ ಸ್ವಾಭಿಮಾನದ ಗರ್ವದೊಂದಿಗೆ ಮೂವತ್ತೆರಡು ವರ್ಷ ಸರ್ಕಾರಿ ನೌಕರಿಗೈದು ಕಪ್ಪುಚುಕ್ಕೆಯಿಲ್ಲದ ಸಾರ್ಥಕ ಜೀವನ ನಡೆಸಿ ಮುಂದಿನ ತಲೆಮಾರಿಗೆ ಮಾದರಿಯಾದರು. ಬಂಕಿಮಚಂದ್ರ ಚಟರ್ಜಿ ಬರಹಗಾರರಾಗಿ ಮೂಡುವ ಹೊತ್ತಿಗೆ ಭಾರತ ಬ್ರಿಟಿಷರ ನಿದ್ದೆಗೆಡಿಸಿತ್ತು. 1857ರ ಸ್ವಾತಂತ್ರ್ಯಸಂಗ್ರಾಮವಂತೂ ಆಂಗ್ಲರಲ್ಲಿ ಅಭದ್ರತೆಯ ವಾತಾವರಣವನ್ನು ಸೃಷ್ಟಿಸಿತ್ತು. ಅಜೇಯ ಭಾರತದ ಕ್ರಾಂತಿಗಾಥೆಗೆ ಜೀವತುಂಬಿದ ಲಕ್ಷಲಕ್ಷ ಹೋರಾಟಗಾರರಿಗೆ ಸ್ಪೂರ್ತಿಸ್ಥಾನವಾದ ಬಂಗಾಳ ಸಹಜವಾಗಿಯೇ ಬಂಕಿಮರ ಸಾಹಿತ್ಯಬದುಕಿಗೆ ಸ್ಪೂರ್ತಿ ತುಂಬಿತು. ರಾಜಾರಾಮ ಮೋಹನರಾಯರು, ಈಶ್ವರಚಂದ್ರ ವಿದ್ಯಾಸಾಗರರ ಸಾಮಾಜಿಕ ಕ್ರಾಂತಿ, ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಮಾರ್ಗದರ್ಶನ ದೊಡ್ಡ ಶಕ್ತಿಯಾಗಿ ಆವಿರ್ಭವಿಸಿತು. 1872ರಿಂದ ‘ವಂಗದರ್ಶನ’ವೆಂಬ ಮಾಸಿಕ ಪತ್ರಿಕೆಯನ್ನು ಆರಂಭಿಸಿ ಕಥೆ, ಕವನ, ಕಾದಂಬರಿ, ಚಿತ್ರಬರಹಗಳ ರಸದೌತಣವನ್ನುಣಬಡಿಸಿದರು. ಪ್ರಾಚೀನ ಮೌಲ್ಯಗಳಡಿಯಲ್ಲಿ ಆಧುನಿಕತೆಯ ಸ್ಪರ್ಶವನ್ನು ನೀಡಿ ಬಂಗಾಳಿ ಜನರ ಅಸ್ಮಿತೆಯ ಪ್ರಕಾಶಕ್ಕೆ ‘ವಂಗದರ್ಶನ’ ಅಡಿಗಲ್ಲಾಯಿತು. ಭಾಷಾಭಿಮಾನದ ಜತೆಗೆ ರಾಷ್ಟ್ರಾಭಿಮಾನ, ಅಧ್ಯಾತ್ಮದೊಡನೆ ವಿಜ್ಞಾನ ಬೆರೆಸುವ ಬಂಕಿಮರ ಪ್ರಯತ್ನವನ್ನು ಕವಿ ರವೀಂದ್ರನಾಥ ಟ್ಯಾಗೋರರು ಮುಕ್ತಕಂಠದಿಂದ ಹೊಗಳಿದರು. ಭಗವದ್ಗೀತೆಯ ಬಗ್ಗೆ ವ್ಯಾಖ್ಯಾನ ಬರೆದು ಹಿಂದಿನ ಭಾರತದ ದಾರ್ಶನಿಕರು ತಮ್ಮ ಉದಾತ್ತ ಚಿಂತನೆಗಳಿಂದ ತತ್ವಜ್ಞಾನವನ್ನು ಬೆಳೆಸಿದ ರೀತಿಯನ್ನು ತೋರಿಸಿ ಭಾರತೀಯರು ಪಾಶ್ಚಾತ್ಯ ತತ್ವಗಳಿಗೆ ಜೋತುಬೀಳುವುದನ್ನು ತಪ್ಪಿಸಿದರು.
ಮಾತೃಭೂಮಿಯನ್ನು ಬಂಕಿಮಚಂದ್ರರು ಆರಾಧ್ಯದೈವ ‘ದುರ್ಗಾ’ ಎಂಬಂತೆ ಭಾವಿಸಿ ಸ್ತೋತ್ರ ಮಾಡಿದ್ದಾರೆ. ಅವಳು ‘ಸುಜಲಾ’, ‘ಸುಫಲಾ’- ನಮಗೆ ನೀರನ್ನು (ಹಾಲು), ಆಹಾರವನ್ನು ಕೊಟ್ಟು ಸಾಕುತ್ತಿರುವವಳು; ಅವಳು ‘ಸುಮಧುರ ಭಾಷಿಣಿ’- ಅವಳ ಮಾತು ಹಿತ, ಪ್ರಿಯ. ಹಾಗೆಯೇ ಅವಳು ಖಡ್ಗ ಹಿಡಿದಿರುವ ‘ರಿಪುಬಲವಾರಿಣಿ’ (ಶತ್ರು ಸಂಹಾರಕಳು). ಹಾಗಾಗಿಯೇ, ಈ ಗೀತೆ ಭಾರತದ ರಾಷ್ಟ್ರೀಯತೆಯ, ಸನಾತನ ಸಂಸ್ಕೃತಿಯ ದ್ಯೋತಕವಾಯಿತು.
ಹಿಂದೂ-ಮುಸ್ಲಿಂ ಸಂಖ್ಯಾಧಾರದಲ್ಲಿ 1905ರಲ್ಲಿ ಬಂಗಾಲವನ್ನು ವಿಭಜಿಸಲು ಹವಣಿಸಿದ ಕರ್ಜನ್ನನ ದುಸ್ಸಾಹಸದ ವಿರುದ್ಧ ದೇಶವಾಸಿಗಳನ್ನು ಒಗ್ಗೂಡಿಸಿದ್ದು ವಂದೇ ಮಾತರಂ ಘೊಷಣೆ. ವಂದೇ ಮಾತರಂ ಅದೆಷ್ಟು ಜನಪ್ರಿಯವಾಯಿತೆಂದರೆ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನ ಹುಟ್ಟು-ಸಂಘರ್ಷದ ಬದುಕು-ವೀರೋಚಿತ ಅಂತ್ಯಕ್ಕೆ ಈ ಮಂತ್ರದುಚ್ಚಾರ ಅನಿವಾರ್ಯವಾಗಿತ್ತು. ನಿಗಿನಿಗಿ ತಾರುಣ್ಯದ ಪರ್ವಕಾಲದಲ್ಲಿ ಹೌತಾತ್ಮ್ಯದ ಶಿಖರವೇರಿದ ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್, ಮದನ್ ಲಾಲ್ ಧಿಂಗ್ರಾ ಮೊದಲಾದ ಸಹಸ್ರ ಸಹಸ್ರ ಕ್ರಾಂತಿಕಾರಿ ಕಂಠಗಳಿಂದ ಮೊಳಗಿದ ಅಮರಗಾನ ವಂದೇ ಮಾತರಂ. ಬಿಪಿನ್ ಚಂದ್ರಪಾಲ್, ಲಾಲಾ ಲಜಪತರಾಯರು ವಂದೇ ಮಾತರಂ ಹೆಸರಿನಲ್ಲಿ ಪುರವಣಿಗಳನ್ನು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ದೇಶದ ಆಧ್ಯಾತ್ಮಿಕ ಅಖಂಡತೆ, ಸಾಂಸ್ಕೃತಿಕ ಅನನ್ಯತೆ, ರಾಷ್ಟ್ರೀಯ ದೃಷ್ಟಿಕೋನಗಳಿಗೆ ಬೆಳಕಾಗಿರುವುದು ಬಂಕಿಮರ ಲೇಖನಿಯಿಂದ ಮೂಡಿಬಂದ ವಂದೇ ಮಾತರಂ.
ಭಾರತಕ್ಕೆ ಸ್ವಾತಂತ್ರ್ಯ ದೊರಕಿದ (15.08.1947) ಬಳಿಕ 26.01.1950ರಂದು ರವೀಂದ್ರನಾಥ ಟ್ಯಾಗೋರರ ‘ಜನಗಣಮನ ಅಧಿನಾಯಕ ಜಯಹೇ| ಭಾರತ ಭಾಗ್ಯವಿಧಾತ’ ಮತ್ತು ಬಂಕಿಮಚಂದ್ರರ ‘ವಂದೇ ಮಾತರಂ’ ಕವನಗಳನ್ನು ಭಾರತದ ಅಧಿಕೃತ ಗೀತೆಗಳೆಂದು ಸಂವಿಧಾನವು ಒಪ್ಪಿಕೊಂಡು ಒಂದನ್ನು National Anthem ಎಂದೂ, ಇನ್ನೊಂದನ್ನು National Song ಎಂದೂ ಗುರುತಿಸಿ, ಎರಡಕ್ಕೂ ಸಮಾನಗೌರವದ ಸ್ಥಾನ ನೀಡಿತು.
ದೇಶಾಭಿಮಾನದ ದ್ಯೋತಕ ಆನಂದಮಠ
ಆನಂದಮಠ ಕಾದಂಬರಿ ಬರೆಯಲು ಪ್ರಚೋದನೆ ಉತ್ತರ ಬಂಗಾಳದಲ್ಲಿ 1773-74ರಲ್ಲಿ ನಡೆದ ‘ಸಂನ್ಯಾಸಿ ವಿದ್ರೋಹ’ ಎಂದೇ ಪ್ರಸಿದ್ಧವಾಗಿರುವ ‘ಸಿಪಾಯಿ ದಂಗೆ’. ಆ ದಂಗೆಯಲ್ಲಿ ಭಾಗವಹಿಸಿದ ಆಯುಧಧಾರಿ ಸಿಪಾಯಿಗಳು ಸಂನ್ಯಾಸಿಗಳೇ ಆಗಿದ್ದರು. 1700ರ ಸುಮಾರಿನಲ್ಲಿ ಬಂಗಾಳವು ಮುಸ್ಲಿಮರ ವಶದಲ್ಲಿತ್ತು. ಆಗ ಅನೇಕ ಹಿಂದೂಗಳು ಬಲಾತ್ಕಾರದ ಮತಾಂತರಕ್ಕೆ ಒಳಗಾದರು ಅಥವಾ ಕೊಲೆಗೀಡಾದರು. ಹಲವು ದೇವಾಲಯಗಳು ನಾಶವಾದವು. ಮುಸ್ಲಿಮರನ್ನು ಸೋಲಿಸಿ ಇಂಗ್ಲಿಷರು ಬಂಗಾಳವನ್ನು ವಶಪಡಿಸಿಕೊಂಡರೂ ಹಿಂದಿನ ವಿಧ್ವಂಸಕ ಕಾರ್ಯ ಮುಂದುವರಿಯಿತು. ಇದನ್ನು ನೋಡಿ ಕೋಪಾವಿಷ್ಟರಾದ ‘ನಾಗಾ’ ಸಂಪ್ರದಾಯದ ಸಂನ್ಯಾಸಿಗಳು ಅವರ ವಿರುದ್ಧ ದಂಗೆ ಎದ್ದು ಆಯುಧಧಾರಿಗಳಾಗಿ ತಿರುಗಿಬಿದ್ದರು. ಒಂದು ಕೈಯಲ್ಲಿ ‘ಶಾಸ್ತ್ರ’, ಇನ್ನೊಂದು ಕೈಯಲ್ಲಿ ‘ಶಸ್ತ್ರ’- ಇದು ಅವರ ನೀತಿಯಾಗಿತ್ತು. ಆ ‘ಸಿಪಾಯಿ ದಂಗೆ’ ವಿಫಲವಾದರೂ ಅದು ಜನರ ಮನಸ್ಸಿನ ಸಾತ್ವಿಕ ಕೋಪವನ್ನು ಹೆಚ್ಚಿಸಿ ಅವರಲ್ಲಿ ದೇಶಾಭಿಮಾನ ಮೂಡಲು ಕಾರಣವಾಯಿತು. ಅಂತಹ ‘ಸಿಪಾಯಿದಂಗೆ’ಯೇ ಒಂದು ರೀತಿಯಲ್ಲಿ ಬಂಕಿಮಚಂದ್ರರು ‘ಆನಂದಮಠ’ ಕಾದಂಬರಿ ಬರೆಯಲು ಪ್ರಚೋದನೆಯಾಯ್ತು. ಇದನ್ನು ಅವರೇ ಕೃತಿಯಲ್ಲಿ ಸೂಚಿಸಿದ್ದಾರೆ.
ಬಂಕಿಮಚಂದ್ರ ಚಟರ್ಜಿ ರಚಿತ ವಂದೇ ಮಾತರಂನ 150ನೇ ವರ್ಷವನ್ನು ದೇಶಾದ್ಯಂತ ವಿಶಿಷ್ಟವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.