ಮರೆಯಲಾಗದ ಭಾರತರತ್ನ ಶಾಸ್ತ್ರೀಜಿ

jayanatjhi
Published on

| ಮಯೂರಲಕ್ಷ್ಮೀ

 ಭಾರತದ ಇತಿಹಾಸದಲ್ಲಿ ಸದಾ ಅಮರರಾಗಿರುವ ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ‘ಜೈ ಜವಾನ್, ಜೈ ಕಿಸಾನ್’ ಎಂಬ ಘೊಷಣೆಯನ್ನು ನೀಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಸ್ವತಂತ್ರ ಭಾರತದ ಎರಡನೇ ಪ್ರಧಾನಿ. 1904ರ ಅಕ್ಟೋಬರ್ 2ರಂದು ಉತ್ತರಪ್ರದೇಶದ ಮೊಘಲ್​ಸರಾಯ್ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ, ಪಂಡಿತ ಜವಾಹರಲಾಲ್ ನೆಹರು ಅವರ ನಂತರ ಭಾರತದ ಎರಡನೇ ಪ್ರಧಾನಮಂತ್ರಿಯಾಗಿ ಭಾರತದ ರಾಜಕೀಯದಲ್ಲಿಯೇ ಒಂದು ಅಮೂಲ್ಯರತ್ನವಾಗಿ ಹೊರಹೊಮ್ಮಿದರು. ಶಾಸ್ತ್ರಿಯವರ ತಂದೆ ಶಾಲಾ ಶಿಕ್ಷಕರಾಗಿದ್ದರು. ಮಗ ಕೇವಲ 2 ವರ್ಷದವನಿದ್ದಾಗಲೇ ತಂದೆ ವಿಧಿವಶರಾದರು. ಈ ಕಾರಣದಿಂದ, ಶಾಸ್ತ್ರಿ ಅವರು ಬಾಲ್ಯದಲ್ಲಿ ತಾಯಿ ಹಾಗೂ ಅಜ್ಜನ ಆಶ್ರಯದಲ್ಲಿ ಬೆಳೆದರು. ಆ ದಿನಗಳಲ್ಲಿ ಹಸಿವು, ಬಡತನ ಮತ್ತು ಕಷ್ಟದ ಪರಿಸ್ಥಿತಿಯಲ್ಲೇ ಆತ್ಮವಿಶ್ವಾಸ, ಶ್ರದ್ಧೆ ಮತ್ತು ಸಮರ್ಪಣೆಯಿಂದ ಸಾಧನೆಯ ಹಾದಿಯನ್ನು ರೂಪಿಸಿಕೊಂಡರು.

ಕಲೆ, ಸಂಸ್ಕೃತಿ ಮತ್ತು ವಿವಿಧ ಧಾರ್ವಿುಕ ನಂಬಿಕೆಗಳನ್ನು ಗೌರವಿಸುತ್ತ ಸರಳ ಜೀವನಶೈಲಿ, ಧೈರ್ಯ, ಪ್ರಾಮಾಣಿಕತೆ ಮತ್ತು ವಿನಯಶೀಲತೆಯು ಅವರ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು ತಂದಿತು. ಸದಾ ಸತ್ಯದ ಹಾದಿಯಲ್ಲಿಯೇ ನಡೆದರು. ಉಪ್ಪಿನ ಸತ್ಯಾಗ್ರಹ ಚಳವಳಿಯಲ್ಲಿ ಶಾಸ್ತ್ರೀಜಿ ಪ್ರಮುಖ ಪಾತ್ರ ವಹಿಸಿದ್ದರು. 1930ರಲ್ಲಿ ಎರಡೂವರೆ ವರ್ಷ ಜೈಲಿನಲ್ಲಿದ್ದರು. 1946ರವರೆಗೆ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತೆ ಜೈಲಿನಲ್ಲಿದ್ದರು. ಮುಂದೆ ಶಾಸ್ತ್ರಿ ಅವರನ್ನು ಉತ್ತರಪ್ರದೇಶದಲ್ಲಿ ಪಂಡಿತ್ ಗೋವಿಂದ ವಲ್ಲಭ ಪಂತ್ ಅವರ ಸಂಪುಟದಲ್ಲಿ ಗೃಹ ಮತ್ತು ಸಾರಿಗೆ ಸಚಿವರಾಗಿ, 1947ರಲ್ಲಿ ಪಂತ್ ಅವರ ಸಂಸದೀಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಅವರು ಗೃಹಸಚಿವ ರಾಗಿದ್ದಾಗ ಜನಸಂದಣಿಯನ್ನು ಚದುರಿಸಲು ಲಾಠಿ ಚಾರ್ಜ್ ಬದಲು ನೀರಿನ ಜೆಟ್​ಗಳನ್ನು ಮೊದಲ ಬಾರಿ ಬಳಸಲಾಯಿತು.

1951ರಲ್ಲಿ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. 1952ರಲ್ಲಿ ಕೇಂದ್ರದಲ್ಲಿ ನೆಹರು ಸಂಪುಟದಲ್ಲಿ ರೈಲ್ವೆ ಮತ್ತು ಸಾರಿಗೆ ಸಚಿವರಾದರು. ದೇಶದಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ನಿರ್ವಾಹಕರಾಗಲು ಅವಕಾಶ ಮಾಡಿಕೊಟ್ಟರು. ನಂತರ ರೈಲು ಅಪಘಾತದ ಸಂದರ್ಭದಲ್ಲಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. 1961ರಲ್ಲಿ ಗೃಹ ಸಚಿವರಾದ ಶಾಸ್ತ್ರಿ, 1964ರಲ್ಲಿ ನೆಹರು ನಿಧನಾನಂತರ ಪ್ರಧಾನಿಯಾದರು. ಆಗ ಭಾರತದಲ್ಲಿ ಆಹಾರದ ಕೊರತೆ, ಬಡತನ, ಬರ ಇದ್ದವು. ಹಾಗಾಗಿ, ವಾರದಲ್ಲಿ ಒಂದು ದಿನ (ಸೋಮವಾರ) ಉಪವಾಸ ಕೈಗೊಳ್ಳುವಂತೆ ಅವರು ದೇಶದ ನಾಗರಿಕರಿಗೆ ಮನವಿ ಮಾಡಿದರು. ತಾವೂ ಇದನ್ನು ಪಾಲಿಸಿದರು. ಹಸಿರುಕ್ರಾಂತಿ ಮತ್ತು ಶ್ವೇತಕ್ರಾಂತಿಯ ಶ್ರೇಯಸ್ಸು ಶಾಸ್ತ್ರಿ ಅವರಿಗೆ ಸಲ್ಲುತ್ತದೆ. ಭಾರತೀಯ ಆಹಾರ ನಿಗಮ (ಎಫ್​ಸಿಐ) ಮತ್ತು ರಾಷ್ಟ್ರೀಯ ಹಾಲು ಅಭಿವೃದ್ಧಿ ಮಂಡಳಿ (ಎನ್​ಡಿಡಿಬಿ) ಸ್ಥಾಪನೆ ಆಗಿದ್ದು ಅವರ ಅವಧಿಯಲ್ಲೇ. 1965ರಲ್ಲಿ ಶಾಸ್ತ್ರಿ ನೇತೃತ್ವದಲ್ಲಿ ಭಾರತವು ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿತು. ಯುದ್ಧ ಮತ್ತು ಹಸಿವಿನ ಆ ಸಂದರ್ಭದಲ್ಲಿ, ದೇಶದ ಸೈನಿಕರು ಮತ್ತು ರೈತರನ್ನು ಪೋ›ತ್ಸಾಹಿಸಲು ಅವರು ‘ಜೈ ಜವಾನ್ ಜೈ ಕಿಸಾನ್’ ಎಂಬ ಘೊಷಣೆ ನೀಡಿ ದರು. 1966ರ ಜ. 11ರಂದು ತಾಷ್ಕೆಂಟ್ ಘೊಷ ಣೆಗೆ ಸಹಿ ಹಾಕಿದ ನಂತರ, ಶಾಸ್ತ್ರಿ ನಿಗೂಢವಾಗಿ ಮೃತಪಟ್ಟರು. ಅದರ ಹಿಂದಿನ ನಿಜವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನವನ್ನು ಪಡೆದ ಮೊದಲ ವ್ಯಕ್ತಿ ಲಾಲ್​ಬಹದ್ದೂರ್ ಶಾಸ್ತ್ರಿ.

(ಲೇಖಕರು ಉಪನ್ಯಾಸಕರು)

ಸರಳ ಜೀವನ: ಶಾಸ್ತ್ರೀಜಿ ಚಿಕ್ಕ ಮನೆಯಲ್ಲಿ ಸರಳ ಜೀವನ ನಡೆಸುತ್ತಿದ್ದರು. ಬಿಳಿ ಧೋತಿ, ಕುರ್ತಾ ಧರಿಸುತ್ತಿದ್ದರು. ಸಚಿವರಾಗಿದ್ದಾಗಲೂ ಅವರಲ್ಲಿ ಸ್ವಂತ ಕಾರಿರಲಿಲ್ಲ. ಸೈಕಲ್, ಸಾರ್ವಜನಿಕ ಸಾರಿಗೆ ಬಳಸಿ ಕಚೇರಿಗೆ ಹೋಗುತ್ತಿದ್ದರು. ವೈಯಕ್ತಿಕ ಲಾಭಕ್ಕಾಗಿ ಎಂದೂ ತಮ್ಮ ಸ್ಥಾನಮಾನ ಬಳಸಿಕೊಳ್ಳಲಿಲ್ಲ. ಹಣಕ್ಕೆ ತೊಂದರೆ ಇದ್ದರೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಿಲ್ಲ. ಪ್ರಧಾನಿಯಾದ ನಂತರ, ಕಾರು ಖರೀದಿಸಲು ಬ್ಯಾಂಕಿನಿಂದ ಸಾಲ ತೆಗೆದುಕೊಂಡರು. ತಮ್ಮಕುಟುಂಬದವರು ಉಪಯೋಗಿಸಿದ ದೂರವಾಣಿಯ ಬಿಲ್ಲನ್ನೂ ಸ್ವಂತ ಹಣದಿಂದ ಪಾವತಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net