

ತುರ್ತು ಪರಿಸ್ಥಿತಿಯಲ್ಲಿ ನ್ಯಾಯ ವ್ಯವಸ್ಥೆಯನ್ನೂ ಕಲುಷಿತಗೊಳಿಸುವ ಪ್ರಯತ್ನ ನಡೆಯಿತು. ಚುನಾವಣೆಗೆ ಸಂಬಂಧಿಸಿದ ಕಾಯ್ದೆಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ, ತಿದ್ದುಪಡಿ ಮಾಡಲಾಯಿತು. ಇಂದಿರಾ ಗಾಂಧಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಚುನಾವಣಾ ಮೇಲ್ಮನವಿಯಲ್ಲಿ ಅವರಿಗೆ ಅನುಕೂಲ ಮಾಡಿಕೊಡುವ ಏಕೋದ್ದೇಶದಿಂದ ಈ ತಿದ್ದುಪಡಿಗಳನ್ನು ಜಾರಿಗೊಳಿಸಲಾಗಿತ್ತು. Nations which do not remember their past are condemned to repeat it.
ದೇಶದ ಪ್ರಸಿದ್ಧ ನ್ಯಾಯವಾದಿ ನಾನಿ ಪಾಲ್ಖಿವಾಲಾ ಆಗಾಗ ಉಲ್ಲೇಖಿಸುತ್ತಿದ್ದ ಎಚ್ಚರಿಕೆಯ ಮಾತಿದು. ಇದೀಗ 50 ವರ್ಷಗಳನ್ನು ಪೂರೈಸಿರುವ ಎಮರ್ಜೆನ್ಸಿಯೆಂಬ ಗ್ರಹಣದ ಕೆಲವು ಆಯಾಮಗಳನ್ನು ಈ ಮಾತಿನ ಹಿನ್ನೆಲೆಯಲ್ಲಿ ಅವಲೋಕಿಸಿ, ಮುಂದೆಂದೂ ಅಂತಹ ಕ್ರೌರ್ಯ ಮರುಕಳಿಸದಂತೆ ಜಾಗ್ರತೆ ವಹಿಸುವುದು ಸೂಕ್ತವಷ್ಟೇ ಅಲ್ಲ ನಮ್ಮ ಕರ್ತವ್ಯವೂ ಹೌದು. ಅಧಿಕಾರದ ದುರ್ಬಳಕೆ, ಸರ್ವಾಧಿಕಾರ, ಪತ್ರಿಕಾ ಸ್ವಾತಂತ್ರ್ಯದ ಕಗ್ಗೊಲೆ, ನ್ಯಾಯಾಂಗದ ಮೇಲೆ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ತುಳಿತದಂತಹ ಹೇಯ ಕೃತ್ಯಗಳನ್ನು ಕಂಡ ಆ ಕರಾಳ ದಿನಗಳ ಸಂಕ್ಷಿಪ್ತ ವಿಶ್ಲೇಷಣೆ ಈಗ ಪ್ರಸ್ತುತ.
ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಚುನಾವಣೆಯಲ್ಲಿನ ಆಯ್ಕೆಯನ್ನು ರದ್ದುಗೊಳಿಸಿ, ಅವರು ಆರು ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಹುದ್ದೆಗೆ ಅರ್ಹರಲ್ಲ ಎಂದು ಘೋಷಿಸಿದ ನ್ಯಾಯಾಲಯದ ತೀರ್ಪು ಇಷ್ಟೆಲ್ಲ ಅನಾಹುತಗಳಿಗೆ ನಾಂದಿ ಹಾಡಿತು. 1975ರ ಜೂನ್ 12ರಂದು ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಅವರು ಪ್ರಕಟಿಸಿದ ತೀರ್ಪು ಅದು. 1971ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಯ್ಬರೇಲಿಯಿಂದ ಚುನಾಯಿತರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಇಂದಿರಾ ಗಾಂಧಿ ಅವರ ಆಯ್ಕೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವರು ರಾಜ್ ನಾರಾಯಣ್. ಇಂದಿರಾ ಚುನಾವಣೆ ಗೆಲ್ಲಲು ಭ್ರಷ್ಟ ಮಾರ್ಗಗಳನ್ನು (corrupt practices) ಅನುಸರಿಸಿದ್ದು ಸಾಬೀತಾಗಿದೆಯೆಂದು ನ್ಯಾಯಾಲಯ ತೀರ್ಪು ನೀಡಿತು.
ಈ ತೀರ್ಪಿನ ಪ್ರಕಾರ ಇಂದಿರಾ ತಕ್ಷಣವೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಹೈಕೋರ್ಟ್ 20 ದಿನಗಳವರೆಗೆ ತನ್ನ ತೀರ್ಪನ್ನು ತಡೆಗೊಳಿಸಿದ ಕಾರಣ ಅವರು ಪ್ರಧಾನಿಯಾಗಿ ಮುಂದುವರಿಯಲು ಅವಕಾಶವಾಯಿತು. ಇಂದಿರಾ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಆ ತೀರ್ಪಿಗೆ ತಡೆಯಾಜ್ಞೆ ಕೋರಿದರು. ಕೋರ್ಟಿಗೆ ಬೇಸಿಗೆ ರಜೆಯ ಕಾಲವದು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಜೂನ್ 24ರ ಮಧ್ಯಾಹ್ನ ತಡೆಯಾಜ್ಞೆ ಬಗ್ಗೆ ಆದೇಶ ಹೊರಡಿಸಿದರು. ಮೇಲ್ನೋಟಕ್ಕೆ ಆದೇಶ ಇಂದಿರಾ ಪರವಾಗಿ ಕಾಣಿಸಿದರೂ, ಪ್ರಧಾನಿಯಾಗಿ ಅವರು ಮುಂದುವರಿಯುವುದು ಪ್ರಶ್ನಾರ್ಹ ಎಂಬ ಅಂಶವನ್ನು ಧ್ವನಿಸುತ್ತಿತ್ತು. ಇಂದಿರಾ ಲೋಕಸಭೆ ಸದಸ್ಯರಾಗಿ ಮುಂದುವರಿದರೂ, ಪ್ರಧಾನಿ ಹುದ್ದೆಯ ಕಾರಣದಿಂದಾಗಿ ಮಾತ್ರ ಸಂಸತ್ತಿನಲ್ಲಿ ಮಾತನಾಡಬಹುದೇ ಹೊರತು ಮತ ಚಲಾಯಿಸಲು ಅರ್ಹರಲ್ಲವೆಂಬುದು ಅದರ ಸಾರಾಂಶವಾಗಿತ್ತು.
ಸುಪ್ರೀಂಕೋರ್ಟಿನ ಈ ಮಧ್ಯಂತರ ಆದೇಶ ಇಂದಿರಾಗೆ ಬಿಸಿತುಪ್ಪವಾಯಿತು. ಅಟಲ್ ಬಿಹಾರಿ ವಾಜಪೇಯಿ, ಲಾಲ್ಕೃಷ್ಣ ಆಡ್ವಾಣಿ, ಜಯಪ್ರಕಾಶ್ ನಾರಾಯಣ್ (ಜೆಪಿ) ಅವರಂತಹ ಅನೇಕ ಪ್ರಸಿದ್ಧ ನಾಯಕರು ಇಂದಿರಾ ವಿರುದ್ಧ ಹರಿಹಾಯ್ದರು. ಪ್ರಧಾನಿ ಹುದ್ದೆಯಿಂದ ಇಂದಿರಾ ಕೆಳಗಿಳಿಯಬೇಕೆಂದು ಆಗ್ರಹಿಸಿ ವಿರೋಧ ಪಕ್ಷಗಳು ಪ್ರತಿಭಟನೆ ತೀವ್ರಗೊಳಿಸಿದವು. ಜನರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಇಂತಹ ಪರಿಸ್ಥಿತಿಯಲ್ಲೇ ಇಂದಿರಾ ತನ್ನ ಸ್ವಂತ ಲಾಭಗಳಿಗಾಗಿ ಇಡೀ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು. ಕೇಂದ್ರ ಸಂಪುಟದ ಅನುಮೋದನೆಯಿಲ್ಲದೆ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರಿಂದ ತುರ್ತು ಪರಿಸ್ಥಿತಿ ಹೇರುವ ಘೊಷಣೆ ಹೊರಡಿಸಿದ್ದು. ಕೇಂದ್ರ ಸಚಿವರಿಗೆ, ಅಧಿಕಾರಿಗಳಿಗೆ ಎಮರ್ಜೆನ್ಸಿಯ ಬಗ್ಗೆ ಸೂಚನೆ ಸಿಕ್ಕಿದ್ದು ಜೂನ್ 26ರ ಮುಂಜಾನೆ. ಅಂದು ಬೆಳಗ್ಗೆ 8ಕ್ಕೆ ಯಾವುದೇ ಮುನ್ಸೂಚನೆಯಿಲ್ಲದೇ ರೇಡಿಯೋ ಮೂಲಕ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಇಂದಿರಾ ಗಾಂಧಿ ದೇಶಕ್ಕೆ ಈ ದೌರ್ಭಾಗ್ಯಕರ ಸುದ್ದಿಯನ್ನಿತ್ತರು.
ಪತ್ರಿಕಾ ಸ್ವಾತಂತ್ರ್ಯದ ವಿನಾಶ: 1975ರ ಜೂನ್ 25ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಇಂದಿರಾ ರಾಜೀನಾಮೆಗೆ ಬೇಡಿಕೆ ಮುಗಿಲಿಗೇರಿತ್ತು. ಅಂದೇ ಮಧ್ಯರಾತ್ರಿ ದೇಶದ ಮೇಲೆ ಎಮರ್ಜೆನ್ಸಿ ಹೇರಲಾಯಿತು. ಜೂನ್ 26ರಂದು ಬಹಳಷ್ಟು ಪತ್ರಿಕೆಗಳು ಪ್ರಜೆಗಳ ಕೈಸೇರಲಿಲ್ಲ. ಪತ್ರಿಕಾ ಸ್ವಾತಂತ್ರ್ಯವೇ ಈ ಕರಾಳಕಾಂಡಕ್ಕೆ ಮೊದಲ ಬಲಿ ಆಯಿತು. ಹಿಂದಿನ ರಾತ್ರಿಯೇ ಪತ್ರಿಕೆಗಳ ಕಚೇರಿಗಳಿಗೆ ವಿದ್ಯುತ್ ಸರಬರಾಜು ನಿಲ್ಲಿಸಲಾಗಿತ್ತು. ಹಲವು ಪತ್ರಿಕೆಗಳ ಕಚೇರಿಗಳ ಮೇಲೆ ದಾಳಿ ನಡೆಸಿ ಮುದ್ರಿತ ಪ್ರತಿಗಳನ್ನು ಜಪ್ತಿ ಮಾಡಿ ಅವು ಹೊರಬರದಂತೆ ತಡೆಯಲಾಯಿತು. ನೂರಾರು ಪತ್ರಕರ್ತರನ್ನೂ ನಿರ್ದಾಕ್ಷಿಣ್ಯವಾಗಿ ಬಂಧಿಸಲಾಯಿತು.
‘ಮದರ್ಲ್ಯಾಂಡ್’ ಪತ್ರಿಕೆಯ ಕೆ.ಆರ್. ಮಲ್ಕಾನಿ ದೆಹಲಿಯಲ್ಲಿ ಬಂಧಿತರಾದ ಮೊದಲಿಗರು. ಸೆನ್ಸಾರ್ಶಿಪ್ ಅನ್ನು ವ್ಯಾಪಕವಾಗಿ ಹೇರಿ ತುರ್ತಪರಿಸ್ಥಿತಿಯ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ ತಾಕೀತು ಮಾಡಲಾಯಿತು. ಜೂನ್ 26ರಂದು ಬೆಂಗಳೂರಿನಲ್ಲಿದ್ದ ವಾಜಪೇಯಿ, ಆಡ್ವಾಣಿ ಮುಂತಾದವರನ್ನು ಬಂಧಿಸಲಾಯಿತು. ಅವರ ಪತ್ರಿಕಾ ಹೇಳಿಕೆ ಪ್ರಕಟವಾಗಲೇ ಇಲ್ಲ. ಪತ್ರಿಕೆಗಳ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಲು ಜೂ. 28ರಂದು ಆಂಗ್ಲ ಪತ್ರಿಕೆಯೊಂದರಲ್ಲಿ ಸಂಪಾದಕೀಯದ ಸ್ಥಳವನ್ನು ಖಾಲಿ ಬಿಡಲಾಗಿತ್ತು. ಮತ್ತೊಂದು ಆಂಗ್ಲ ಪತ್ರಿಕೆಯಲ್ಲಿ ಶ್ರದ್ಧಾಂಜಲಿಯ ಅಂಕಣದಲ್ಲಿ ವ್ಯಂಗ್ಯವಾಗಿ ಹೀಗೆ ಪ್ರಕಟಿಸಲಾಗಿತ್ತು- O'Cracy, D.E.M., beloved husband of T. Ruth, loving father of L.I. Bertie, brother of Faith, Hope and Justicia, expired on June 26.
.
ಅಧಿಕಾರದ ದುರ್ಬಳಕೆ: ಸರ್ಕಾರದ ವಿರುದ್ಧ ದನಿಯೆತ್ತಿದ ಎಲ್ಲ ನಾಯಕರನ್ನೂ ಬಂಧಿಸಿ ಜೈಲಿಗಟ್ಟಲಾಯಿತು. ಆಂತರಿಕ ಭದ್ರತೆ ಕಾಪಾಡುವ ಕಾಯ್ದೆ (Maintenance of Internal Security Act) ಎಂಬ ಅಮಾನವೀಯ ಕಾನೂನಿನ ದುರ್ಬಳಕೆ ಮಾಡಿ ಅಮಾಯಕ ಜನರನ್ನು ಪೊಲೀಸರು ಬಂಧಿಸಿ, ಹಿಂಸಿಸಲು ಪೂರ್ಣಾಧಿಕಾರ ಕೊಡಲಾಯಿತು. ಜಾರ್ಜ್ ಫರ್ನಾಂಡಿಸ್ ಅವರನ್ನು ಪೊಲೀಸರು ಸರಪಳಿಯಲ್ಲಿ ಕಟ್ಟಿ ಜೈಲಿನಲ್ಲಿಟ್ಟಿರುವ ಚಿತ್ರ ವ್ಯಾಪಕವಾಗಿ ಹರಿದಾಡಿತು. ಎಮರ್ಜೆನ್ಸಿ ಕೊನೆಗೊಳ್ಳುವ ವೇಳೆಯಲ್ಲಿ ಜೈಲಿನೊಳಗಿಂದಲೇ ಚುನಾವಣೆ ಸ್ಪರ್ಧಿಸಿದರು ಫರ್ನಾಂಡಿಸ್. ಅವರ ಒಡನಾಡಿ ಸ್ನೇಹಲತಾ ರೆಡ್ಡಿ ಎಂಬ ನಟಿ ಜೈಲಿನಿಂದ ಬಿಡುಗಡೆಗೊಂಡರೂ, ಪೊಲೀಸರು ನೀಡಿದ್ದ ಚಿತ್ರಹಿಂಸೆಯಿಂದ ಸಾವಿಗೀಡಾದರು. ಅವರಂತೆಯೇ ಲೆಕ್ಕವಿಲ್ಲದಷ್ಟು ಅಮಾಯಕರು ಪೊಲೀಸರ ಅಮಾನುಷ ಕೃತ್ಯಗಳಿಗೆ ಬಲಿಯಾದರು.
ಸರ್ವಾಧಿಕಾರದ ಪರಮಾವಧಿ: ಪ್ರಜೆಗಳ ಮೇಲೆರಗಿದ ದೌರ್ಜನ್ಯವಲ್ಲದೆ ನ್ಯಾಯ ವ್ಯವಸ್ಥೆಯನ್ನೂ ಕಲುಷಿತಗೊಳಿಸುವ ಪ್ರಯತ್ನ ಲಜ್ಜಾರಹಿತವಾಗಿ ನಡೆಯಿತು. ಚುನಾವಣೆಗೆ ಸಂಬಂಧಿಸಿದ ಕಾಯ್ದೆಗಳು ಹಾಗೂ ಸಂವಿಧಾನಕ್ಕೂ ತಮ್ಮ ಅನುಕೂಲಕ್ಕೆ ತಕ್ಕಂತೆ, ಅದೂ ಹಿಂದಿನ ದಿನಾಂಕದಿಂದ ಜಾರಿಗೆ ಬರುವಂತೆ ತಿದ್ದುಪಡಿ ಮಾಡಲಾಯಿತು. ಇಂದಿರಾ ಗಾಂಧಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಚುನಾವಣಾ ಮೇಲ್ಮನವಿಯಲ್ಲಿ ಅವರಿಗೆ ಅನುಕೂಲ ಮಾಡಿಕೊಡುವ ಏಕೋದ್ದೇಶದಿಂದ ಈ ತಿದ್ದುಪಡಿಗಳನ್ನು ಜಾರಿಗೊಳಿಸಲಾಗಿತ್ತು. ಸಂಸತ್ತಿನ ಕಾರ್ಯಕಲಾಪದ ಸಮಯದಲ್ಲಿ ಬಹಳಷ್ಟು ವಿರೋಧ ಪಕ್ಷಗಳ ಸಂಸದರನ್ನು ಜೈಲಿನಲ್ಲಿಟ್ಟಿದ್ದಲ್ಲದೆ ಪ್ರಶ್ನೋತ್ತರ ಸಮಯವನ್ನೂ ರದ್ದುಗೊಳಿಸಲಾಗಿತ್ತು.
ಸಂವಿಧಾನದ 39ನೇ ತಿದ್ದುಪಡಿಯ ಮೂಲಕ ‘ಪ್ರಧಾನಿಯಾದ ವ್ಯಕ್ತಿಯ ಚುನಾವಣೆಯ ಸಿಂಧುತ್ವವನ್ನು ಸಂಸತ್ತು ಇನ್ನು ಮುಂದೆ ರೂಪಿಸಬಹುದಾದ ಕಾನೂನಿನಡಿಯಲ್ಲಿನ ಪ್ರಾಧಿಕಾರದ ಮುಂದೆ ಪ್ರಶ್ನಿಸಬಹುದೇ ಹೊರತಾಗಿ ಯಾವೊಂದು ಪ್ರಾಧಿಕಾರವೂ ಪರೀಕ್ಷಿಸುವಂತಿಲ್ಲ’ ಎಂದು ವಿಧಿಸಲಾಯಿತು. ಅಂತೆಯೇ ಸಂಸತ್ತು ರೂಪಿಸಬಹುದಾದ ಅಂತಹ ಕಾನೂನಿನ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಆದಿಯಾಗಿ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎಂದೂ ವಿಧಿಸಲಾಯಿತು. ಸಂವಿಧಾನದ 38ನೇ ತಿದ್ದುಪಡಿಯ ಮೂಲಕ ಎಮರ್ಜೆನ್ಸಿ ಜಾರಿಯಲ್ಲಿರುವಾಗ ಸಂವಿಧಾನದಡಿ ಧೃಢೀಕರಿಸಿರುವ ಮಾನವ ಹಕ್ಕುಗಳನ್ನು ಮೊಟಕುಗೊಳಿಸಬಹುದೆಂದು ವಿಧಿಸಲಾಯಿತು. ಅರ್ಥಾತ್ ಯಾವೊಬ್ಬ ಪ್ರಜೆ ಬಂಧಿತನಾದರೆ ಅಂತಹ ಬಂಧನದ ಸಿಂಧುತ್ವವನ್ನು ಪರೀಕ್ಷಿಸಿ ಜಾಮೀನು ನೀಡುವ ಅಧಿಕಾರವೂ ಯಾವುದೇ ನ್ಯಾಯಾಲಯಕ್ಕೆ ಇಲ್ಲವಾಯಿತು.
ಅದೇ 38ನೇ ತಿದ್ದುಪಡಿಯ ಮೂಲಕ ಎಮರ್ಜೆನ್ಸಿ ಹೇರಿರುವ ರಾಷ್ಟ್ರಪತಿಗಳ ಆದೇಶವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲವೆಂದೂ ವಿಧಿಸಲಾಯಿತು. ಮೂಲಭೂತ ಮಾನವ ಹಕ್ಕುಗಳನ್ನು ದೃಢಪಡಿಸುವ ನಮ್ಮ ಸಂವಿಧಾನಕ್ಕೆ ಇದಕ್ಕಿಂತಲೂ ದೊಡ್ಡ ಅಪಚಾರ ಊಹಿಸಲಸದಳ. ವಿಷಾದಕರ ಸಂಗತಿ ಏನೆಂದರೆ ಅಂದಿನ ಬಹುತೇಕ ನ್ಯಾಯಾಧೀಶರೂ ಮಾನವ ಹಕ್ಕುಗಳನ್ನು ಎತ್ತಿಹಿಡಿಯದೇ ಸರ್ಕಾರದ ದೌರ್ಜನ್ಯವನ್ನು ಸಮರ್ಥಿಸಿದ್ದರು. 1976ರ Habeas Corpus ಎಂದೇ ಪ್ರಸಿದ್ಧವಾಗಿರುವ ಪ್ರಕರಣದಲ್ಲಿ ಸರ್ಕಾರದ ದೌರ್ಜನ್ಯಗಳನ್ನು ಧೈರ್ಯವಾಗಿ ಖಂಡಿಸಿ ತೀರ್ಪಿತ್ತಿದ್ದ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರನ್ನು ಬದಿಗೊತ್ತಿ ಅವರಿಗಿಂತ ಕಿರಿಯರನ್ನು ಭಾರತದ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ಖನ್ನಾ ತಮ್ಮ ಪದವಿಗೆ ರಾಜೀನಾಮೆ ಇತ್ತರು. ಮುಂದಿನ ದಿನಗಳಲ್ಲಿ ಖನ್ನಾ ಅವರ ಭಿನ್ನಾಭಿಪ್ರಾಯದ ತೀರ್ಪೆ ದೇಶದ ಕಾನೂನಾಗಿದ್ದು ಹರ್ಷದಾಯಕ.
ಎಮರ್ಜೆನ್ಸಿಯೆಂಬ ಗ್ರಹಣ ಬಿಟ್ಟಿದ್ದು 1977ರಲ್ಲಿ. ಆ ಕರಾಳ ದಿನಗಳ ದುಷ್ಕೃತ್ಯಗಳನ್ನು ನಂತರದ ಸಮಯದಲ್ಲಿ ಪ್ರಜೆಗಳು ಚುನಾವಣೆಯ ಮೂಲಕ ಖಂಡಿಸಿದ ರೀತಿ ನಿಜಕ್ಕೂ ಆಶಾದಾಯಕ. ಸಂವಿಧಾನಕ್ಕೆ ಎಸಗಿದ್ದ ಅಪಚಾರಗಳನ್ನೂ 44ನೇ ತಿದ್ದುಪಡಿ ಮೂಲಕ ಸರಿಪಡಿಸಲಾಯಿತು. ಸರ್ವಾಧಿಕಾರವನ್ನು ದೇಶದ ಪ್ರಜೆಗಳು ಸಹಿಸುವುದಿಲ್ಲವೆಂಬ ದಿಟ್ಟ ಸಂದೇಶವನ್ನು ಜನಾದೇಶದ ಮೂಲಕ ಸಾರಿದರು. ಭವ್ಯ ಭಾರತ ಮತ್ತೊಮ್ಮೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ ಮೆರೆಯಿತು. ಅನ್ಯಾಯದ ವಿರುದ್ಧ ದನಿ ಎತ್ತುವ ಭಾರತೀಯರ ಧರ್ಮಬದ್ಧತೆ ಮತ್ತು ದೃಢ ಸಂಕಲ್ಪಗಳೇ ನಮಗೆ ಶ್ರೀರಕ್ಷೆ.