ಜೀವ ಕಸಿಯುತ್ತಿರುವ ಟ್ರಿಪ್ಪಿಂಗ್ ಜಂಪ್

jump feb 2020
Published on

ಜೀವಕ್ಕೆ ಅಪಾಯ ತಂದೊಡ್ಡುವ ಅನೇಕ ವಿಡಿಯೋ ಗೇಮ್ಸ್​  ಈಗಾಗಲೇ ನೂರಾರು ಮಕ್ಕಳ ಜೀವ ತೆಗೆದಿವೆ. ಅದಕ್ಕೆ ಇನ್ನೊಂದು ಸೇರ್ಪಡೆ ‘ಟ್ರಿಪ್ಪಿಂಗ್ ಜಂಪ್’. ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿರುವ ಈ ಸಾವಿನ ಆಟ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಆದರೆ ಮಕ್ಕಳೇ ನೆನಪಿಡಿ... ನಿಮಗಿರುವುದು ಒಂದೇ ಜೀವ. ಇಂಥ ಭಯಾನಕ ಆಟವಾಡಿ ಜೀವ ಕಳೆದುಕೊಳ್ಳಬೇಡಿ, ಬೇರೆಯವರ ಜೀವವನ್ನೂ ತೆಗೆಯಬೇಡಿ.

ನೀವು ಸುಮ್ಮನೆ ನಡೆದು ಹೋಗುತ್ತಿರುವಾಗ, ನಿಮ್ಮ ಅರಿವಿಗೆ ಬಾರದಂತೆ ಯಾರಾದರೂ ಬಂದು ಕಾಲಿಗೆ ಅಡ್ಡಹಾಕಿದರೆ ಏನಾಗುತ್ತದೆ? ನೀವು ಮುಗ್ಗುರಿಸಿ ಬಿದ್ದು ಭಾರಿ ಅನಾಹುತ ಮಾಡಿಕೊಳ್ಳಬಹುದು ಅಲ್ಲವೆ? ಬಿದ್ದ ಹೊಡೆತಕ್ಕೆ ನಿಮ್ಮ ಮುಖಕ್ಕೆ ಭಾರಿ ಏಟು ಬೀಳಬಹುದು, ಕೈ ಕಾಲುಗಳ ಮೂಳೆ ಮುರಿಯಬಹುದು, ತಲೆಬುರುಡೆಯೂ ಒಡೆದುಹೋಗಬಹುದು, ಶಾಶ್ವತವಾಗಿ ಅಂಗವಿಕಲ ಆಗಬಹುದು, ಮಿದುಳಿಗೆ ಪೆಟ್ಟು ಬಿದ್ದರೆ ಬುದ್ಧಿ ಕೂಡ ಸ್ಥಿಮಿತ ಕಳೆದುಕೊಂಡು ಬುದ್ಧಿಮಾಂದ್ಯ ಆಗಬಹುದು, ಇನ್ನೂ ಏಟು ಹೆಚ್ಚಾದರೆ ಸಾಯಲೂಬಹುದು!

ಇದನ್ನು ಕೇಳಿದರೆ ಮೈಯೆಲ್ಲಾ ಝುಂ ಅನ್ನುತ್ತದೆಯಲ್ಲವೆ? ಅಷ್ಟಕ್ಕೂ ಇದನ್ನು ಹೇಳುತ್ತಿರುವ ಕಾರಣವಿಷ್ಟೇ. ಇದೇ ರೀತಿಯ ಅನಾಹುತ ಸೃಷ್ಟಿಸುವ ಆಟವೊಂದು ಇದೀಗ ವಾಟ್ಸ್​ಆಪ್, ಫೇಸ್​ಬುಕ್​ಗಳಲ್ಲಿ ಹರಿದಾಡುತ್ತಿದ್ದು, ಇದು ಈಗಾಗಲೇ ಇಬ್ಬರು ಮಕ್ಕಳ ಜೀವ ಪಡೆದಿದೆ. ಇನ್ನೂ ಕೆಲವು ಮಕ್ಕಳು, ಯುವಕರು ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ.

ಹೌದು. ಈ ಹಿಂದೆ ಕೀಕಿ, ಬ್ಲೂವೇಲ್, ಮೋಮೋ ಚಾಲೆಂಜ್ ಎಂಬ ಹೆಸರಿನಲ್ಲಿ ಜೀವಕ್ಕೆ ಕುತ್ತಾಗುತ್ತಿದ್ದ ಆಟಗಳ ದಾರಿಯಲ್ಲಿಯೇ ಇನ್ನೊಂದು ಆಟ ಶುರುವಾಗಿದೆ. ಇದರ ಹೆಸರು ಟ್ರಿಪ್ಪಿಂಗ್ ಜಂಪ್ ಅಥವಾ ಸ್ಕಲ್ ಬ್ರೇಕರ್ ಚಾಲೆಂಜ್ ಎಂದು. ‘ಸ್ಕಲ್ ಬ್ರೇಕರ್’ ಹೆಸರೇ ಸೂಚಿಸುವಂತೆ ತಲೆ ಬುರುಡೆಯನ್ನು ಒಡೆಯುವ ಆಟವಿದು.

ಬೇರೆ ಬೇರೆ ದೇಶಗಳಲ್ಲಿ ಈ ವಿಕೃತ ಆಟ ಭಾರಿ ಪ್ರಚಾರ ಗಳಿಸುತ್ತಿದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಈ ಭಯಾನಕ ಆಟವಾಡಿ ಅದರ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ನಂತರ ಅದನ್ನು ಟಿಕ್​ಟಾಕ್, ಫೇಸ್​ಬುಕ್, ಟ್ವಿಟರ್ ಹಾಗೂ ವಾಟ್ಸ್​ಆಪ್ ಮೂಲಕ ಹರಿಬಿಡುತ್ತಿದ್ದಾರೆ. ಹಿಂಸಾತ್ಮಕ ಪ್ರವೃತ್ತಿ ಇರುವ ಮಕ್ಕಳಿಗೆ ಇದೊಂದು ರೀತಿಯಲ್ಲಿ ಆನಂದ ನೀಡುವ ಕಾರಣ, ಅವರೂ ಈ ಆಟದ ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ನಂತರ ತಾವೂ ಆಡುವ ಮೂಲಕ ಬೇರೆಯವರ ಜೀವ ತೆಗೆಯುತ್ತಿದ್ದಾರೆ, ಇಲ್ಲವೇ ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ.

ಶುರುವಾಗಿದ್ದು ಎಲ್ಲಿ?

ದಕ್ಷಿಣ ಅಮೆರಿಕದಲ್ಲಿ ಈ ಆಟ ಮೊದಲು ಶುರುವಾಯಿತು. ಆರಂಭದಲ್ಲಿ ಮೋಜಿಗಾಗಿ ಬೀಳಿಸುವಂತೆ ಮಕ್ಕಳು ನಾಟಕವಾಡುತ್ತಿದ್ದರು. ಆದರೆ ಆಟ ಹೆಚ್ಚೆಚ್ಚು ಪ್ರಚಾರ ಗಳಿಸುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚೆಚ್ಚು ವೈರಲ್ ಆಗುತ್ತಿದ್ದಂತೆಯೇ, ಆಟಗಾರರನ್ನು ನಿಜವಾಗಿಯೂ ನೆಲಕ್ಕೆ ಬೀಳಿಸುವ ಮಟ್ಟಿಗೆ ಹೋಯಿತು. ರಷ್ಯ, ಯುರೋಪ್​ಗಳಲ್ಲಿ ಈ ಸಾವಿನ ಚಾಲೆಂಜ್​ಗಳು ಮೋಜಿನ ರೂಪದಲ್ಲಿ ಹೆಚ್ಚುತ್ತಿದ್ದು ಇದೀಗ ಭಾರತಕ್ಕೂ ಕಾಲಿಟ್ಟಿದೆ.

ನೀವೇನು ಮಾಡಬೇಕು?

ಈ ಆಟದ ಭೀಕರತೆಯ ಅರಿವು ನಿಮಗಾಗಿದೆಯಲ್ಲವೆ? ಒಂದು ವೇಳೆ ಎಲ್ಲಿಯಾದರೂ ಈ ವಿಡಿಯೋ ನೋಡಿದ್ದರೆ ಅದನ್ನು ಅಲ್ಲಿಯೇ ಮರೆತುಬಿಡಿ. ಯಾವತ್ತಿಗೂ, ಎಲ್ಲಿಯೂ ಇದನ್ನು ಟ್ರೖೆ ಮಾಡಲು ಹೋಗಬೇಡಿ. ಅದೇ ರೀತಿ, ನಿಮ್ಮ ಸ್ನೇಹಿತರು ಅಥವಾ ಯಾರಾದರೂ ‘ಟ್ರಿಪ್ಪಿಂಗ್ ಜಂಪ್ ಮಾಡೋಣ ಬಾ’ ಎಂದು ಕರೆದರೆ, ನೀವು ಯಾವತ್ತಿಗೂ ಹೋಗಲೇಬೇಡಿ. ಯಾರಾದರೂ ನಿಮಗೆ ಫೋರ್ಸ್ ಮಾಡಿದರೆ ಶಾಲೆಯಲ್ಲಿ ನಿಮ್ಮ ಶಿಕ್ಷಕರು ಅಥವಾ ಮನೆಯಲ್ಲಾದರೆ ಪಾಲಕರ ಗಮನಕ್ಕೆ ತನ್ನಿ. ಒಂದು ವೇಳೆ ಯಾರಾದರೂ ಈ ರೀತಿಯ ಆಟ ಆಡುತ್ತಿರುವುದನ್ನು ನೀವು ಶಾಲೆಯಲ್ಲಿ ನೋಡಿದರೆ ಸುಮ್ಮನೆ ಕುಳಿತುಕೊಳ್ಳಬೇಡಿ. ಆ ಬಗ್ಗೆಯೂ ಶಿಕ್ಷಕರ ಗಮನಕ್ಕೆ ತನ್ನಿ. ಈ ರೀತಿ ಆಟ ಆಡುವವರು ಅಥವಾ ಆಟಕ್ಕೆ ಉತ್ತೇಜಿಸುವವರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವಾಲಯವು ಈಗಾಗಲೇ ಶಾಲಾ- ಕಾಲೇಜುಗಳಿಗೆ ಸೂಚನೆ ನೀಡಿರುವ ಕಾರಣ, ನೀವು ಈ ಬಗ್ಗೆ ಶಿಕ್ಷಕರಿಗೆ ಹೇಳಬಹುದಾಗಿದೆ.

ಜೀವಕ್ಕೆ ಅಪಾಯ ಹೇಗೆ?

ಇದು ಮೂವರು ಸೇರಿ ಆಡುವ ಆಟ. ಇಬ್ಬರು ಸೇರಿ ಒಬ್ಬನನ್ನು ಬೀಳಿಸುತ್ತಾರೆ. ಮೂರು ಮಂದಿ ಅಕ್ಕಪಕ್ಕ ಸಾಲಾಗಿ ನಿಲ್ಲುತ್ತಾರೆ. ಅಕ್ಕ-ಪಕ್ಕದಲ್ಲಿ ಇರುವವರು ಮೊದಲು ಜಂಪ್ ಮಾಡುತ್ತಾರೆ. ನಂತರ ಮಧ್ಯದಲ್ಲಿರುವವನು ಜಂಪ್ ಮಾಡಲು ಶುರು ಮಾಡಿದಾಗ ಅವನ ಕಾಲಿಗೆ ಅಕ್ಕಪಕ್ಕದವರು ತೊಡರುಗಾಲು ಹಾಕುತ್ತಾರೆ. ಆಗ ಮಧ್ಯದಲ್ಲಿರುವವನಿಗೆ ಯಾವುದೇ ಸಪೋರ್ಟ್ ಇಲ್ಲದೆ ನೆಲಕ್ಕೆ ಬೀಳುತ್ತಾನೆ. ಇದೇ ಆಟ. ಕೇಳಲು, ಓದಲು ಇದು ಮಜ ಎನಿಸಬಹುದು. ಆದರೆ ಈ ಆಟ ಅದೆಷ್ಟು ಭಯಾನಕ ಎಂದರೆ ಮಧ್ಯದಲ್ಲಿ ಇರುವವನು ದಿಢೀರನೆ ಬಿದ್ದು ತಲೆ ಬುರುಡೆ ಒಡೆದುಹೋಗಿರುವ ಘಟನೆಗಳು ವರದಿಯಾಗಿವೆ. ಗೊತ್ತಿದ್ದೂ ಗೊತ್ತಿದ್ದೂ ಇಂಥದ್ದೊಂದು ಆಟವಾಡಿದರೆ, ಅಕ್ಕಪಕ್ಕ ಇರುವವರಿಗೆ ಭಾರಿ ಪ್ರಮಾಣದ ಶಿಕ್ಷೆ ಕೂಡ ಆಗುತ್ತದೆ ನೆನಪಿರಲಿ!

ಪಾಲಕರಿಗೆ ಕಿವಿಮಾತು

ಸ್ಕಲ್ ಬ್ರೇಕರ್ ವಿಡಿಯೋ ಈಗ ವಾಟ್ಸ್​ಆಪ್​ಗಳಲ್ಲಿಯೂ ಟಿಕ್​ಟಾಕ್ ಮೂಲಕ ಹರಿದಾಡುತ್ತಿದೆ. ಇಂಥ ವಿಡಿಯೋ ಬಂದರೆ ಕೂಡಲೇ ಅದನ್ನು ಡಿಲೀಟ್ ಮಾಡಿ. ಒಂದೇ ರೀತಿಯ ವಿಡಿಯೋ ಮಕ್ಕಳು ನೋಡುತ್ತಿದ್ದರೆ ಅದು ಅವರ ಮುಗ್ಧ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಈ ಆಟದ ಭೀಕರತೆಯ ಬಗ್ಗೆ ಮಕ್ಕಳಿಗೆ ತಿಳಿಹೇಳಿ. ಅವರೇನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ನಿಧಾನವಾಗಿ ಬುದ್ಧಿ ಹೇಳುವ ಅವಶ್ಯಕತೆ ಇದೆ. ಅದೇ ರೀತಿ, ನಿಮ್ಮ ಮಕ್ಕಳ ಶಾಲೆಯ ಶಿಕ್ಷಕರ ಜತೆಯೂ ಈ ಬಗ್ಗೆ ರ್ಚಚಿಸಿ, ಇಂಥ ಭಯಾನಕ ಆಟದ ಕುರಿತು ಮಕ್ಕಳಿಗೆ ಎಚ್ಚರಿಕೆ ಮೂಡಿಸುವಂತೆ ಮನವಿ ಮಾಡಿಕೊಳ್ಳಿ.

ಮಕ್ಕಳ ಸಾವು

ಕಳೆದ ವಾರ ಅಮೆರಿಕದಲ್ಲಿ ಇಬ್ಬರು ಮಕ್ಕಳು ಸತ್ತಿರುವ ಬಗ್ಗೆ ವರದಿಯಾಗಿದೆ. 10 ವರ್ಷದ ಓಹಿಯೊ ತನ್ನ ಸ್ನೇಹಿತೆಯರ ಜತೆ ಈ ಆಟವಾಡುತ್ತ ವಿಡಿಯೋ ಮಾಡುತ್ತಿದ್ದಳು. ಆಕೆ ಬಿದ್ದ ರಭಸಕ್ಕೆ ತಲೆ ಒಡೆದುಹೋಗಿದ್ದು, ಸ್ಥಳದಲ್ಲಿಯೇ ಮೃತಳಾಗಿದ್ದಾಳೆ. ಅದೇ ರೀತಿ, 16 ವರ್ಷದ ಇಮಾನ್ಯೂಯೆಲ್ ಮಿಡಿರೋಸ್ ಎಂಬಾತನಿಗೆ ಆತನ ಸ್ನೇಹಿತರು ಈ ಆಟವಾಡಲು ಒತ್ತಾಯ ಮಾಡಲು ಕರೆದಿದ್ದರು. ಆಟದ ಅರಿವೇ ಇಲ್ಲದಿದ್ದ ಆತ ಸ್ನೇಹಿತರು ಹೇಳಿದಂತೆ ಜಂಪ್ ಮಾಡಲು ಶುರು ಮಾಡಿದ. ಕಾಲಿಗೆ ತೊಡರು ಹಾಕುತ್ತಿದ್ದಂತೆಯೇ ಆತ ಬಿದ್ದು ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ. ಇವೆರಡು ಸದ್ಯ ಸಾವಿನ ಪ್ರಕರಣಗಳಾಗದರೆ, ಹಲವಾರು ಆಸ್ಪತ್ರೆಗಳಲ್ಲಿ ಯುವಕರು ಮತ್ತು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಚೇತನಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net