ಔಷಧ ಸೇವನೆಯ ಕಾಲ ವೈವಿಧ್ಯ!

ayurveda
Published on
ಜಗದೊಳಿತಿಗೆ ಮಾನವ ಸ್ನೇಹಿಯಾದ ಅನೇಕ ವಿಧದ ಔಷಧಗಳನ್ನು ಪ್ರಪಂಚಕ್ಕೆ ಅರುಹಿದ ಆಯುರ್ವೆದದ ವೈದ್ಯವಿಜ್ಞಾನಿ ಋಷಿಗಳು ಕಾರ್ಯಪ್ರವೃತ್ತಿಯ ಆಧಾರದಲ್ಲಿ ಏಳು ವಿಭಾಗಮಾಡಿ ಕಷಾಯ ಗುಣಗಳನ್ನು ಸಪ್ತ ವಿಧ ಕಷಾಯಗಳೆಂದು ವಿವರಿಸಿದ್ದಾರೆ. ಯಾವ ಹೊತ್ತಿನಲ್ಲಿ ಕಷಾಯಗಳನ್ನು ಸೇವಿಸುತ್ತೇವೆಯೋ ಅದನ್ನು ಅವಲಂಬಿಸಿ ಔಷಧದ ಗುಣಧರ್ಮದಲ್ಲಿ ಬದಲಾವಣೆ ಕಂಡುಬರುತ್ತದೆ ಎಂಬ ಸ್ವಾರಸ್ಯಕರ ವಿಚಾರವನ್ನು ತಿಳಿಹೇಳಿದ್ದಾರೆ. ಜೀರ್ಣ ಪ್ರಕ್ರಿಯೆಯನ್ನು ಸರಿಪಡಿಸುವ ಗುರಿಯಿದ್ದಾಗ ರಾತ್ರಿ ಸೇವಿಸುವ ಕಷಾಯವು ಪಾಚನ ಕಷಾಯ ಎನಿಸಿಕೊಳ್ಳುತ್ತದೆ. ಶರೀರದ ಶುದ್ಧೀಕರಣ ಆಗಬೇಕಿದ್ದಾಗ ಸೂರ್ಯೋದಯಕ್ಕಿಂತ ಮುಂಚಿತವಾಗಿ ತೆಗೆದುಕೊಂಡರೆ ಅದು ಶೋಧನ ಕಷಾಯ. ದೇಹದಲ್ಲಿನ ಒಣತ್ವವನ್ನು ಹೋಗಲಾಡಿಸಿ ಹೃದಯಕ್ಕೆ ಹಿತ ಉಂಟುಮಾಡುವ ನಿರೀಕ್ಷೆಯಿದ್ದಾಗ ಪ್ರಾತಃಕಾಲದಲ್ಲಿ ನೀಡುವುದು ಕ್ಲೇದನ ಕಷಾಯ. ರೋಗ ಶಮನವೇ ಪ್ರಧಾನ ಉದ್ದೇಶವಾಗಿದ್ದಾಗ ಮಧ್ಯಾಹ್ನದ ಮೊದಲು ಸಂಶಮನ ಅಥವಾ ಶಮನ ಕಷಾಯ. ರೋಗಿಯ ಹಸಿವು ಹೆಚ್ಚಿಸಲು ನೀಡಲಾಗುವ ಕಷಾಯ ಮಧ್ಯಾಹ್ನದ ಮೇಲೆ ಉಪಯೋಗಿಸುವುದು, ದೀಪನ ಕಷಾಯ. ಶರೀರದ ಧಾತು-ಅಂಗಾಂಗಗಳ ಬೆಳವಣಿಗೆ ಹಾಗೂ ಸದೃಢತೆಗೆ ಬಳಸುವ ತರ್ಪಣ ಕಷಾಯವನ್ನು ಪ್ರಾತಃಕಾಲದಲ್ಲಿ ಉಪಯೋಗಿಸಬೇಕು. ಶರೀರವನ್ನು ಹಗುರ ಮಾಡುವ, ಕೃಶಗೊಳಿಸುವ ಕಷಾಯಗಳು ಶೋಷಣ ಕಷಾಯವನ್ನು ರಾತ್ರಿ ಮಲಗುವ ಮುಂಚೆ ಬಳಸಿಕೊಳ್ಳಬೇಕು ಎಂದು ಭೈಷಜ್ಯ ರತ್ನಾವಲೀ ಗ್ರಂಥದಲ್ಲಿ ವಿಮಶಿಸಲಾಗಿದೆ. ಒಂದೇ ಔಷಧವನ್ನು ಪ್ರಯೋಗ ಕಾಲದಲ್ಲಿ ವ್ಯತ್ಯಯ ಮಾಡಿಕೊಂಡು ಅಪೇಕ್ಷಿತ ಪರಿಣಾಮವನ್ನು ಹೇಗೆ ಪಡೆಯಬಹುದೆಂಬ ವಿಶಿಷ್ಟ ಚಿಂತನೆ ಒಂದು ಮಗ್ಗುಲಾದರೆ ದಿನದ ಯಾವ ಕಾಲದಲ್ಲಿ ಸೇವಿಸಿದರೆ ಆ ಔಷಧವು ಅತಿಹೆಚ್ಚು ಪರಿಣಾಮಕಾರಿ ಎಂಬ ವಿಚಾರ ಆಯುರ್ವೆದದ ಚಿಕಿತ್ಸಾ ಪರಿಪಕ್ವತೆ ಹಾಗೂ ವೈಜ್ಞಾನಿಕ ದೃಷ್ಟಿಕೋನದ ಇನ್ನೊಂದು ಮುಖವಾಗಿದೆ.

ಔಷಧಗಳ ಸೇವನೆಯ ಹೊತ್ತಿಗೆ ಸಂಬಂಧಿಸಿ ಪ್ರಾಚೀನ ವೈದ್ಯವಿಜ್ಞಾನಿಋಷಿಗಳು ಕುತೂಹಲಕಾರಿ ಸಂಗತಿಗಳನ್ನು ಉಪದೇಶಿಸಿದ್ದಾರೆ. ಆಧುನಿಕ ವೈದ್ಯವಿಜ್ಞಾನವು ಆಹಾರದ ಮೊದಲು, ಆಹಾರದ ನಂತರ, ಆಗಾಗ, ಅಗತ್ಯವಿದ್ದಾಗ, ರಾತ್ರಿ ಮಲಗುವ ಮುಂಚೆ ಹೀಗೆ ಐದು ಕಾಲಗಳನ್ನಷ್ಟೇ ಹೇಳಿದೆ. ಆಯುರ್ವೆದದ ಗ್ರಂಥಗಳಲ್ಲಿ ಹನ್ನೊಂದು ಔಷಧ ಸೇವನಾ ಕಾಲಗಳನ್ನು ಪರಾಮಶಿಸಲಾಗಿದೆ. ಚರಕ ಸಂಹಿತೆಯಲ್ಲಿ ಒಂಬತ್ತು, ಸುಶ್ರುತ ಸಂಹಿತೆಯಲ್ಲಿ ಹತ್ತು, ಅಷ್ಟಾಂಗ ಸಂಗ್ರಹ ಗ್ರಂಥದಲ್ಲಿ ಹನ್ನೊಂದು ಕಾಲಗಳನ್ನು ಔಷಧ ಸೇವನೆಗೆ ಯುಕ್ತವೆಂದು ನಿರ್ದೇಶಿಸಿದ್ದಾರೆ.

ಅಭಕ್ತ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಔಷಧ ಸೇವನೆ. ಪ್ರಾಗ್​ಭಕ್ತ: ಆಹಾರ ಸೇವನೆಗೆ ಮೊದಲು ಔಷಧದ ಸೇವನೆ. ಅಂದರೆ 48 ನಿಮಿಷಗಳ ಅವಧಿಯಲ್ಲಿ ಎಂಬುದಾಗಿ ಗ್ರಾಹ್ಯವಾಗುತ್ತದೆ. ಅಧೋಭಕ್ತ: ಆಹಾರ ತೆಗೆದುಕೊಂಡ ಬಳಿಕ ಅಂದರೆ ಆಹಾರ ಸೇವನೆ ಮುಗಿಸಿದ 48 ನಿಮಿಷಗಳ ಒಳಗಾಗಿ ಎಂದರ್ಥ. ಮಧ್ಯಭಕ್ತ: ಆಹಾರ ಸೇವನೆಯ ಮಧ್ಯದ ಸಮಯದಲ್ಲಿ. ಅಂತರ್​ಭಕ್ತ : ಎರಡು ಮುಖ್ಯ ಆಹಾರ ಸೇವನೆಯ ಮಧ್ಯದ ಸಮಯದಲ್ಲಿ. ಸಾಮುದ್ಗ: ಆಹಾರ ತೆಗೆದುಕೊಳ್ಳುವುದರ ಮೊದಲು ಹಾಗೂ ನಂತರ ಎರಡು ಬಾರಿ ಔಷಧವನ್ನು ಸೇವಿಸುವುದು. ಸಮಭಕ್ತ: ಆಹಾರದ ಜೊತೆ ಮಿಶ್ರಣ ಮಾಡಿ ಸೇವಿಸುವುದು. ಇದಕ್ಕೆ ಸಭಕ್ತ, ಸಂಯುಕ್ತ ಭಕ್ತ ಎಂಬ ಹೆಸರುಗಳೂ ಇವೆ. ಔಷಧವನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಲು ಹೇಸುವವರಲ್ಲಿ ಹಾಗೂ ಚಿಕ್ಕ ಮಕ್ಕಳಲ್ಲಿ ಇದು ಅನುಕೂಲಕರ ವಿಧಾನ. ಮುಹುರ್​ವುುಹು : ಆಗಾಗ ಔಷಧವನ್ನು ನೀಡುವುದು. ಇಲ್ಲಿ ಆಹಾರದ ವೇಳೆಗೂ ಔಷಧಕ್ಕೂ ನೇರ ಸಂಬಂಧವಿಲ್ಲ. ವಾಂತಿ, ಬಿಕ್ಕಳಿಕೆ, ಅತಿ ಬಾಯಾರಿಕೆ, ಅಸ್ತಮಾ, ವಿಷಬಾಧೆ, ಮುಂತಾದ ಸಂದರ್ಭಗಳಲ್ಲಿ ಔಷಧವನ್ನು ಆಗಾಗ ನೀಡಲಾಗುತ್ತದೆ. ಸಗ್ರಾಸ : ಭೋಜನದ ಮೊದಲ ತುತ್ತಿನೊಂದಿಗೆ ಸೇವಿಸುವುದು. ಪಚನಕ್ಕೆ ಸಂಬಂಧಿಸಿದ ರೋಗಗಳಲ್ಲಿ, ಹಸಿವು ಹೆಚ್ಚಿಸುವ ಅಗತ್ಯವಿದ್ದಾಗ ಹಾಗೂ ಲೈಂಗಿಕಶಕ್ತಿ ವರ್ಧಕ ಔಷಧಗಳನ್ನು ಈ ರೀತಿಯಲ್ಲಿ ನೀಡುವುದು ಪದ್ಧತಿ. ಗ್ರಾಸಾಂತರ : ಗ್ರಾಸ ಅಂದರೆ ತುತ್ತು. ಊಟದಲ್ಲಿ ಎರಡು ತುತ್ತುಗಳ ಮಧ್ಯೆ ಬಳಸುವುದು. ಹೃದಯರೋಗಗಳಲ್ಲಿ, ಪ್ರಾಣವಾಯುವಿನ ವ್ಯತ್ಯಯದಲ್ಲಿ ಇಂತಹ ಕ್ರಮವನ್ನು ಕಾಣಬಹುದು. ನಿಶಾ: ಕಣ್ಣು, ಕಿವಿ, ಮೂಗುಗಳ ವ್ಯಾಧಿಗಳಿದ್ದಾಗ, ವಾಂತಿಯಿದ್ದಾಗ, ಮಾನಸಿಕ ರೋಗಗಳಲ್ಲಿ ಹಾಗೂ ನಿದ್ರೆಗೆ ಸಂಬಂಧಿಸಿದ ತೊಂದರೆಗಳಲ್ಲಿ ಔಷಧಿಗಳನ್ನು ರಾತ್ರಿಯ ಊಟದ ಬಳಿಕ ಮಲಗುವ ಮುನ್ನ ನೀಡುವುದಿದೆ. ಇಂತಹ ವಿಶಿಷ್ಟ, ವಿವಿಧತೆಯ ವಿವರಗಳನ್ನು ನೋಡಿದಾಗ ಪ್ರತಿಯೊಂದು ಸೂಕ್ಷ್ಮ ವಿಚಾರಗಳಿಗೂ ಆಯುರ್ವೆದ ನೀಡಿದ ಮಹತ್ವ ಗೋಚರವಾಗುತ್ತದೆ. ಚಿಕಿತ್ಸೆಯ ಯಶಸ್ಸು ಹಾಗೂ ಆರೋಗ್ಯದ ಮರ್ಮ ಚಿಕಿತ್ಸೆಯ ಪ್ರತಿಯೊಂದು ಹೆಜ್ಜೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net