ಟೆಕ್​ಲೋಕ: ಸಾಹಿತ್ಯ ಮತ್ತು ತಂತ್ರಜ್ಞಾನ

Techloka 11 Feb 20
Published on
ಹೊಸ ಸಂಗತಿಗಳಿಗೆ ವಿರೋಧ ಎದುರಾಗುವುದು ಅಪರೂಪವೇನಲ್ಲ. ಬಹಳಷ್ಟು ಸಾರಿ ಆ ವಿರೋಧ ತಪ್ಪೂ ಆಗಿರುವುದಿಲ್ಲ.

ಟಿ.ವಿ ಪರಿಚಯವಾದ ಸನ್ನಿವೇಶವನ್ನೇ ನೋಡಿ. ಅದು ಓದುವ ಅಭ್ಯಾಸವನ್ನು ಹಾಳುಮಾಡುತ್ತಿದೆ ಎಂಬ ಆರೋಪ ಬಹಳ ಬೇಗನೆ ಕೇಳಿಬಂತು. ಟಿ.ವಿಗೆ ‘ಸೋಮಾರಿ ಪೆಟ್ಟಿಗೆ’ಯೆಂಬ ನಾಮಕರಣವೂ ಆಯಿತು. ಇನ್ನು ಕಂಪ್ಯೂಟರ್, ಅಂತರ್ಜಾಲ ಹಾಗೂ ಮೊಬೈಲ್ ಫೋನ್​ಗಳ ಬಗೆಗಂತೂ ಹೇಳುವುದೇ ಬೇಡ. ಟಿ.ವಿಯಿಂದಲೇ ಸಾಕಷ್ಟು ಕಡಿಮೆಯಾಗಿದ್ದ ಓದುವ ಅಭ್ಯಾಸ ಇದೀಗ ಇನ್ನಷ್ಟು ಹದಗೆಟ್ಟಿದೆ ಎನ್ನುವ ಆರೋಪವನ್ನು ನಾವು ಈಗ ಕೆಲ ವರ್ಷಗಳಿಂದ ಕೇಳುತ್ತಿದ್ದೇವೆ.

ಇದು ನಿಜವೂ ಹೌದು. ಓದುವ ಹವ್ಯಾಸ ಹಿಂದಿನ ಕಾಲದಷ್ಟು ವ್ಯಾಪಕವಾಗಿಲ್ಲ, ನಮ್ಮ attention span ಈಗ ವಿಪರೀತ ಕಡಿಮೆಯಾಗಿದೆ, ಬರಹಗಳನ್ನು ಓದಿ ಆಸ್ವಾದಿಸಲು ಸಮಯವೇ ಇಲ್ಲ.

ಇದೆಲ್ಲ ಎಲ್ಲರಿಗೂ ಗೊತ್ತು. ಆದರೆ ಈ ಪರಿಸ್ಥಿತಿ ಬದಲಾಯಿಸಲು ನಾವೇನು ಮಾಡಬಹುದು? ಒಂದು ಉಪಾಯ ಹೀಗಿದೆ: ತಂತ್ರಜ್ಞಾನದಿಂದಾಗಿ ಸಾಹಿತ್ಯಕ್ಕೆ ತೊಂದರೆಯಾಗುತ್ತಿದೆ ಎನ್ನುವುದಾದರೆ ಆ ತೊಂದರೆಯನ್ನು ದೂರಮಾಡಲು ನಾವು ಆ ತಂತ್ರಜ್ಞಾನವನ್ನೇ ಬಳಸಿಕೊಳ್ಳಬಹುದು!

ಅದು ಹೇಗೆ? ತಂತ್ರಜ್ಞಾನಕ್ಕೆ ಹೇಳಿ ಕಾದಂಬರಿ ಬರೆಸಲು ಆಗುತ್ತದೆಯೇ ಎನ್ನಬೇಡಿ. ಏಕೆಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನ ಬಳಸಿ ರಚಿಸಿದ "1 the Road' ಎಂಬ ಇಂಗ್ಲಿಷ್ ಕಾದಂಬರಿ 2018ರಲ್ಲೇ ಪ್ರಕಟವಾಗಿತ್ತು. ನಮ್ಮ ಕಾದಂಬರಿಕಾರರು ಸಾಹಿತ್ಯ ಕೃಷಿಗೆ ತಮ್ಮ ಕಲ್ಪನೆ ಮತ್ತು ಅಧ್ಯಯನಗಳನ್ನು ಬಳಸಿಕೊಂಡರೆ ಈ ಕಾದಂಬರಿ ಬರೆದ ಕಂಪ್ಯೂಟರ್ ಅನೇಕ ಸೆನ್ಸರುಗಳ ಸಹಾಯ ಪಡೆದುಕೊಂಡಿತ್ತು. ಅಮೆರಿಕದ ನ್ಯೂಯಾರ್ಕ್​ನಿಂದ ನ್ಯೂ ಆರ್ಲನ್ಸ್​ವರೆಗಿನ ಕಾರು ಪ್ರಯಾಣದಲ್ಲಿ ಈ ಕಂಪ್ಯೂಟರ್ ಹಾಗೂ ಸೆನ್ಸರ್​ಗಳು ಗಮನಿಸಿದ ಸಂಗತಿಗಳ ಹೂರಣವೇ ಕಾದಂಬರಿಯ ವಸ್ತು.

ಕಂಪ್ಯೂಟರೇ ಬರೆದ ಕಾದಂಬರಿ ಓದಿಸಿಕೊಳ್ಳುತ್ತದೋ ಇಲ್ಲವೋ ಎನ್ನುವುದು ರ್ಚಚಿಸಬೇಕಾದ ವಿಷಯ. ಆದರೆ ಒಂದಷ್ಟು ರೀತಿಯ ಬರಹಗಳನ್ನು ಕಂಪ್ಯೂಟರ್​ಗಳು ಈಗಾಗಲೇ ಬರೆಯುತ್ತಿವೆ ಎನ್ನುವುದು ನಿಜ.

ಕಂಪ್ಯೂಟರ್ ಬರಹಗಾರರ ಕೈವಾಡ ಇದೀಗ ಹೆಚ್ಚು ಕಾಣಸಿಗುತ್ತಿರುವುದು ಇಂಗ್ಲಿಷಿನ ಸುದ್ದಿಮನೆಗಳಲ್ಲಿ. ನಿರ್ದಿಷ್ಟ ಸೂತ್ರಗಳಿಗೆ ಒಗ್ಗುವಂತಹ ವರದಿ ಅಥವಾ ಬರಹಗಳನ್ನು (ಉದಾ: ಸಂಸ್ಥೆಗಳ ತ್ರೖೆಮಾಸಿಕ ಆರ್ಥಿಕ ಫಲಿತಾಂಶ) ಇಂತಹ ಕಂಪ್ಯೂಟರ್ ಬರಹಗಾರ ತಂತ್ರಾಂಶಗಳು ಈಗಾಗಲೇ ಸಿದ್ಧಪಡಿಸುತ್ತಿವೆ ಹಾಗೂ ಜಾಗತಿಕ ಸುದ್ದಿಸಂಸ್ಥೆಗಳು ಅವನ್ನು ಪ್ರಕಟಿಸುತ್ತಿವೆ. ಈ ಅಭ್ಯಾಸಕ್ಕೆ ಸ್ವಯಂಚಾಲಿತ ಪತ್ರಿಕೋದ್ಯಮ (‘ಆಟೋಮೇಟೆಡ್ ಜರ್ನಲಿಸಂ’) ಎಂಬ ಹೆಸರನ್ನೂ ಕೊಡಲಾಗಿದೆ.

ಹೀಗೆಲ್ಲ ಹೇಳಿದಾಗ ಇನ್ನೊಂದು ಪ್ರಶ್ನೆ ಮೂಡುವುದು ಸಾಧ್ಯ. ಈಗ ಇರುವ ಬರಹಗಳನ್ನೇ ಜನ ಓದುತ್ತಿಲ್ಲ ಎಂದಾಗ ತಂತ್ರಾಂಶ ಬಳಸಿ ಇನ್ನಷ್ಟು ಬರಹ ಸೃಷ್ಟಿಸಿದರೆ ಅದರಿಂದ ಏನು ಉಪಯೋಗ?

ಹೌದು, ಹೊಸ ಓದುಗರನ್ನು ಸಾಹಿತ್ಯದ ಕಡೆಗೆ ಸೆಳೆಯಲು ಹಾಗೂ ಸಾಹಿತ್ಯ ಸೃಷ್ಟಿಯ ಕೆಲಸವನ್ನು ಸುಲಭ ಮಾಡಿಕೊಳ್ಳಲು ಕೂಡ ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಸಾಧ್ಯ. ಮೊಬೈಲಿನಲ್ಲೇ ಮುಳುಗಿರುವ ಹೊಸ ತಲೆಮಾರಿಗೆ ಪುಸ್ತಕದ ರುಚಿ ಹತ್ತಿಸಲು ಇ-ಪುಸ್ತಕಗಳನ್ನು ನೀಡುವುದು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಅಷ್ಟೇ. ಬಹುಮಾಧ್ಯಮದ (ಮಲ್ಟಿಮೀಡಿಯಾ) ರುಚಿ ಹತ್ತಿಸಿಕೊಂಡವರು ಸುದೀರ್ಘ ಬರಹಗಳನ್ನು ಓದಲಾರರು ಎನ್ನುವುದಾದರೆ ಅಂತಹವರಿಗೆ ಪುಸ್ತಕಗಳನ್ನು ಕೇಳಿಸುವುದು (ಆಡಿಯೋ ಬುಕ) ಕೂಡ ಸಾಧ್ಯವಿದೆ. ವಿಡಿಯೋ ವೀಕ್ಷಣೆಯನ್ನೇ ಹೆಚ್ಚಾಗಿ ಇಷ್ಟಪಡುವ ವರ್ಗವನ್ನು ತಲುಪಲು ಪುಸ್ತಕ ಪರಿಚಯಗಳನ್ನು ವಿಡಿಯೋ ರೂಪದಲ್ಲೇ ನೀಡಬಹುದು, ಅವನ್ನು ಸಮಾಜ ಜಾಲಗಳಲ್ಲೇ ಪ್ರಕಟಿಸಿ ಹೆಚ್ಚು ಜನರಿಗೆ ತಲುಪುವಂತೆ ಮಾಡಬಹುದು. ಈ ಎಲ್ಲ ಪ್ರಯತ್ನಗಳೂ ಇದೀಗ ಕನ್ನಡದಲ್ಲಿ ಪ್ರಾರಂಭವಾಗಿವೆ ಎನ್ನುವುದು ವಿಶೇಷ.

ಅಂತರ್ಜಾಲದ ವ್ಯಾಪ್ತಿ ಹೆಚ್ಚಿದಂತೆ ಸ್ಥಳೀಯ ಭಾಷೆಗಳಲ್ಲಿನ ಮಾಹಿತಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಬೇಡಿಕೆಯ ಸಾಕಷ್ಟು ದೊಡ್ಡ ಪಾಲು ಅನುವಾದಗಳಿಂದ ಪೂರೈಕೆಯಾಗಬೇಕು. ಅನುವಾದದ ಪ್ರಕ್ರಿಯೆಯಲ್ಲೂ ತಂತ್ರಜ್ಞಾನದ ನೆರವು ಗಣನೀಯವಾಗಬಲ್ಲದು. ಅನುವಾದವೆಂದರೆ ಗೂಗಲ್ ಟ್ರಾನ್ಸ್ ಲೇಟ್ ಮಾತ್ರವೇ ಅಲ್ಲ, ಅನುವಾದ ಕ್ಷೇತ್ರದಲ್ಲಿ ಜಾಗತಿಕವಾಗಿ ಬಳಕೆಯಾಗುವ ಇಅಖ (ಕಂಪ್ಯೂಟರ್ ಏಡೆಡ್ ಟ್ರಾನ್ಸ್ ಲೇಷನ್) ಸಾಧನ-ಸಲಕರಣೆಗಳೂ ವೃತ್ತಿಪರರ ನೆರವಿಗೆ ಬರಬಲ್ಲವು. ಹವ್ಯಾಸಿ ಅನುವಾದಕರೂ ಸುಲಭವಾಗಿ ಬಳಸಬಲ್ಲ ವೇದಿಕೆಗಳ ಕೊಡುಗೆಯೂ ಕಡಿಮೆಯೇನಲ್ಲ (ಉದಾ: ಮಕ್ಕಳ ಕತೆಗಳನ್ನು ಅನುವಾದಿಸಲು ನೆರವಾಗುವ ‘ಸ್ಟೋರಿವೀವರ್’ ಜಾಲತಾಣ).

ಹೊಸ ಸಾಹಿತ್ಯದ ಸೃಷ್ಟಿ ಹಾಗೂ ಅನುವಾದಗಳ ಜತೆಗೆ ಹಿಂದಿನ ಬರಹಗಳನ್ನು ಉಳಿಸಿಡುವುದು ಕೂಡ ಮಹತ್ವದ ಕೆಲಸ. ಮುದ್ರಿತ ಪುಸ್ತಕಗಳನ್ನು ಡಿಜಿಟಲ್ ರೂಪಕ್ಕೆ ತಂದು ಉಳಿಸಿಡುವುದು, ಕೃತಿಸ್ವಾಮ್ಯ ಅವಧಿ ಮುಗಿದ ಪುಸ್ತಕಗಳನ್ನು ಮುಕ್ತವಾಗಿ ಪ್ರಕಟಿಸುವುದು, ಹಿಂದಿನ ಸಾಹಿತ್ಯವನ್ನು ವಿಶ್ಲೇಷಿಸಿ ಹೆಚ್ಚಿನ ಅಧ್ಯಯನ ಸಾಧ್ಯವಾಗಿಸುವುದು ಸೇರಿದಂತೆ ತಂತ್ರಜ್ಞಾನದ ನೆರವಿನಿಂದ ನಾವು ಅನೇಕ ಕೆಲಸಗಳನ್ನು ಮಾಡಿಕೊಳ್ಳುವುದು ಸಾಧ್ಯವಿದೆ. ಈ ನಿಟ್ಟಿನಲ್ಲಿ ಇಂಟರ್​ನೆಟ್ ಆರ್ಕೆವ್, ವಿಕಿಮೀಡಿಯ ಕಾಮನ್ಸ್ ಮುಂತಾದ ಜಾಗತಿಕ ಕಾರ್ಯಕ್ರಮಗಳು ನಡೆಸಿರುವ ಪ್ರಯತ್ನಗಳಲ್ಲಿ ಕನ್ನಡವೂ ಸ್ಥಾನ ಪಡೆದುಕೊಂಡಿದೆ. ಒಟ್ಟಾರೆಯಾಗಿ, ಸಾಹಿತ್ಯ ಸೃಷ್ಟಿಯ ಕೆಲಸವನ್ನು ತಂತ್ರಜ್ಞಾನಕ್ಕೆ ವಹಿಸಿಕೊಡುವ ತುತ್ತತುದಿಯ ಆಲೋಚನೆಗಿಂತ, ನಮ್ಮ ಕೆಲಸದ ಪರಿಣಾಮವನ್ನು ಅಧಿಕಗೊಳಿಸುವುದಕ್ಕೆ (CAT) ತಂತ್ರಜ್ಞಾನವನ್ನು ಬಳಸುವ ಈ ಉದಾಹರಣೆಗಳು ಹೆಚ್ಚು ಬೇಗನೆ ಹಾಗೂ ಹೆಚ್ಚು ಸಮರ್ಥವಾಗಿ ನಮ್ಮ ನೆರವಿಗೆ ಬರಬಲ್ಲವು. ಅಂತಹ ಸಾಧ್ಯತೆಗಳ ಬಗ್ಗೆ ಕುತೂಹಲ ಹಾಗೂ ಅವುಗಳ ನೆರವನ್ನು ಪಡೆದುಕೊಳ್ಳುವ ಆಸಕ್ತಿಯೊಂದನ್ನು ನಾವು ಬೆಳೆಸಿಕೊಂಡರೆ ಸಾಕು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net