

ನೌರು... ಬಹುಶಃ ಭೂಪಟದಲ್ಲಿ ಹೀಗೊಂದು ರಾಷ್ಟ್ರವಿರುವ ಕುರಿತು ನಿಮ್ಮ ಅರಿವಿಗೆ ಈ ಹಿಂದೆ ಬಂದಿರುವ ಸಾಧ್ಯತೆ ಕಡಿಮೆಯೇ. ಆಸ್ಟ್ರೇಲಿಯಾದ ಈಶಾನ್ಯದ ಗಡಿಯಿಂದ ಸುಮಾರು ಮೂರು ಸಾವಿರ ಕಿಮೀ ದೂರದಲ್ಲಿ ದಕ್ಷಿಣ ಪೆಸಿಫಿಕ್ ಸಮುದ್ರದ ಮಧ್ಯೆ ಸ್ಥಿತವಾಗಿರುವ ಇಪ್ಪತ್ತೊಂದು ಚದರ ಕಿಮೀ ವಿಸ್ತಾರದ ಈ ದ್ವೀಪವು ಜಗತ್ತಿನ ಅತ್ಯಂತ ಪುಟ್ಟ ದ್ವೀಪರಾಷ್ಟ್ರವೂ ಹೌದು. ಈ ದ್ವೀಪದ ಮೇಲೆ ನಿಂತು ನೋಡಿದರೆ ಸುತ್ತಲೂ ಸಮುದ್ರವೋ ಸಮುದ್ರ. ಅಲ್ಲಿನ ಜನಸಂಖ್ಯೆಗೆ ಸಾಕಾಗುವಷ್ಟು ಪ್ರಮಾಣದಲ್ಲಿದ್ದ ಹಿನ್ನೀರು ಕೃಷಿ ಕಾರ್ಯದಿಂದ ಹೊಟ್ಟೆ ಹೊರೆಯಲು ಸಾಕಾಗುವಷ್ಟು ದವಸ ಧಾನ್ಯಗಳನ್ನು ಅಲ್ಲೇ ಬೆಳೆಯಲಾಗುತ್ತಿದ್ದ ಕಾರಣ ಸ್ಥಳೀಯರು ಯಾರ ಗೊಡವೆಗೂ ಹೋಗದೇ ತಮ್ಮ ಪಾಡಿಗೆ ಶಾಂತಜೀವನ ನಡೆಸುತ್ತಿದ್ದರು. ಈ ದ್ವೀಪದ ದಾರಿಯಲ್ಲಿ ಹಾದುಹೋಗುತ್ತಿದ್ದ ಹಡಗುಗಳು ಕೆಲವೊಮ್ಮೆ ನಿಂತು ಇಲ್ಲಿಯವರು ತಯಾರಿಸುತ್ತಿದ್ದ ಶೇಂದಿಯನ್ನು ತಮ್ಮಲ್ಲಿನ ಆಹಾರ ಧಾನ್ಯ, ಹಣ್ಣು ಹಂಪಲುಗಳ ಜೊತೆಗೆ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯ ಇತ್ತಾದರೂ ಅದು ಒಂದು ಹಂತಕ್ಕಷ್ಟೇ ಸೀಮಿತವಾಗಿತ್ತು.
ಅದು 1899ನೇ ಇಸವಿಯ ಒಂದು ದಿನ. ತೋಟಗಾರಿಕೆ ಮತ್ತು ವಾಣಿಜ್ಯ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಪೆಸಿಫಿಕ್ ಐಲ್ಯಾಂಡ್ ಕಂಪನಿಯ ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಮುಖ್ಯ ಕಚೇರಿಯಲ್ಲಿ ಕುಳಿತಿದ್ದ ಆಲ್ಬರ್ಟ್ ಎಲ್ಲಿಸ್ ಎಂಬಾತನಿಗೆ ತನ್ನ ಸಹೋದ್ಯೋಗಿ ಬಳಸುತ್ತಿದ್ದ ಪೇಪರ್ ವೇಯ್ಟ್ ಗಮನ ಸೆಳೆಯಿತು. ಅದನ್ನೆತ್ತಿಕೊಂಡು ತನ್ನ ಕಣ್ಣಿಂದಲೇ ಸ್ಕಾ್ಯನ್ ಮಾಡುತ್ತಲೇ ಮೂಲದ ಕುರಿತು ವಿಚಾರಿಸಿದಾಗ ಅದು ಆತ ಹಿಂದೊಮ್ಮೆ ನೌರು ದ್ವೀಪಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ನೆನಪಿಗೆಂದು ತಂದಿದ್ದ ಮರದ ತುಂಡು ಎಂಬುದು ಗೊತ್ತಾಯಿತು. ಹೇಳಿ ಕೇಳಿ ಆಲ್ಬರ್ಟ್ ಒಬ್ಬ ಭೂವಿಜ್ಞಾನಿ. ಆತನಿಗ್ಯಾಕೋ ಆ ಪೇಪರ್ ವೇಯ್ಟ್ಗೆ ಮರದ ತುಂಡೆಂಬ ಒಕ್ಕಣೆ ಒಪ್ಪಿಗೆಯಾಗಲಿಲ್ಲ. ಆ ರಾತ್ರಿಪೂರ್ತಿ ನಿದ್ದೆ ಮಾಡದ ಆತ ಮರುದಿನ ಮುಂಜಾನೆ ಸೀದಾ ಕಂಪನಿಯ ಮುಖ್ಯಸ್ಥರಿಗೆ ಆ ಪೇಪರ್ ವೇಯ್ಟ್ ತೋರಿಸಿ ಇದು ಫಾಸ್ಪೇಟ್ನ ಶಿಲೆಯೆಂದೂ, ನೌರು ಇಂತಹ ಶಿಲೆಗಳ ಆಗರವಾಗಿರುವ ಸಾಧ್ಯತೆಯಿದ್ದು ಹಾಗಾದಲ್ಲಿ ಅದು ಕಂಪನಿಯ ಭಾಗ್ಯದ ಬಾಗಿಲನ್ನು ತೆರೆಯಲಿದೆಯೆಂದೂ ಒಪ್ಪಿಸಲು ಪ್ರಯತ್ನಿಸಿದ. ಆದರೆ ಅಂದ್ಯಾಕೋ ಆಲ್ಬರ್ಟ್ನ ನಸೀಬು ಆತನಿಗೆ ಸಾಥ್ ನೀಡಲಿಲ್ಲ.
ಆದರೂ ಛಲ ಬಿಡದ ಮಹಾಮೊಂಡ ಆಲ್ಬರ್ಟ್ ತನ್ನ ಪ್ರಯತ್ನ ಮುಂದುವರೆಸುತ್ತಲೇ ಇದ್ದ. ಕೊನೆಗೊಂದು ದಿನ ಈತನ ಕಾಟ ತಡೆಯಲಾರದೇ ಕಂಪನಿಯು 1901ರಲ್ಲಿ ನೌರು ದ್ವೀಪಕ್ಕೆ ಭೇಟಿ ನೀಡಲು ಹಡಗೊಂದರ ವ್ಯವಸ್ಥೆ ಮಾಡಿ ಆಲ್ಬರ್ಟ್ ನೇತೃತ್ವದಲ್ಲಿ ತಂಡವೊಂದನ್ನು ಅಲ್ಲಿಗೆ ಕಳಿಸಿತು. ನೌರುವಿನಲ್ಲಿ ಕಾಲಿಟ್ಟ ತಂಡಕ್ಕೆ ಆಲ್ಬರ್ಟ್ನ ಊಹೆ ಸರಿಯಾಗಿದ್ದುದನ್ನು ಅರ್ಥೈಸಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ಇಡೀ ದ್ವೀಪವೇ ಫಾಸ್ಪೇಟ್ನ ಶಿಲೆಗಳಿಂದ ತುಂಬಿ ಹೋಗಿರುವುದನ್ನು ಕಂಡುಕೊಂಡ ಅವರು ವಾಪಸ್ಸು ಬಂದು ಈ ವರದಿಯನ್ನು ತಮ್ಮ ಕಂಪನಿಯ ಹಿರಿಯರಿಗೆ ಒಪ್ಪಿಸಿದರು. ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಈ ಎಲ್ಲ ಚಟುವಟಿಕೆಗಳ ಬಗ್ಗೆ ಏನೂ ಅರಿವಿಲ್ಲದೇ ತಮ್ಮ ಪಾಡಿಗೆ ಸೇಂದಿ ಕುಡಿದು ಕಡಲತೀರದಲ್ಲಿ ಮೈಒಡ್ಡಿ ಮಲಗಿದ್ದ ನೌರು ದ್ವೀಪದ ಜನರಿಗೆ ಒಂದು ಸಣ್ಣ ಪೇಪರ್ ವೇಯ್ಟ್ ತಮ್ಮ ಜೀವನವನ್ನೇ ಬದಲಾಯಿಸಬಲ್ಲದೆಂಬ ಸಣ್ಣ ಸುಳಿವೂ ಅಂದು ಸಿಕ್ಕಿರಲಿಲ್ಲ.
ನೌರು ದ್ವೀಪದಲ್ಲಿ ಕಂಡುಬಂದಿದ್ದ ಫಾಸ್ಪರಸ್ ದಿಬ್ಬಗಳಿಗೆ ಶತಮಾನಗಳ ಇತಿಹಾಸವಿದೆ. ಅತ್ಯಂತ ಪ್ರಶಾಂತವಾದ ಮತ್ತು ಅತ್ಯಂತ ಸ್ವಚ್ಛ ಪರಿಸರದಲ್ಲಿ ಯಾವುದೇ ಗೌಜು ಗಲಾಟೆಯಿರದ ಈ ದ್ವೀಪ ಇದೇ ಕಾರಣಕ್ಕೆ ಸ್ಥಳೀಯ ಪಕ್ಷಿ ಸಂಕುಲದ ಅತ್ಯಂತ ಮೆಚ್ಚಿನ ತಾಣವೂ ಹೌದು. ಹೀಗಾಗಿ ಸಮುದ್ರ ಮಧ್ಯದಲ್ಲಿ ಸೂರು ಮತ್ತು ಹೆರಿಗೆಮನೆಯನ್ನಾಗಿ ಈ ಸುಂದರ ದ್ವೀಪವನ್ನು ಕಡಲ ಹಕ್ಕಿಗಳು ಆಯ್ದುಕೊಂಡಿದ್ದವು. ಮೂಲತಃ ನೌರು ದ್ವೀಪದಲ್ಲಿದ್ದುದು ಸುಣ್ಣದ ಕಲ್ಲಿನ ದಿಬ್ಬಗಳು. ಈ ದಿಬ್ಬಗಳ ಪೊಟರೆಯೊಳಗೆ ತಮ್ಮ ಸೂರನ್ನು ಕಟ್ಟಿಕೊಂಡಿದ್ದ ಕಡಲ ಹಕ್ಕಿಗಳು ಇಲ್ಲಿಯೇ ತಮ್ಮ ಹಿಕ್ಕೆಯನ್ನು ವಿಸರ್ಜಿಸುತ್ತಿದ್ದವು. ಕಡಲಹಕ್ಕಿಗಳ ಹಿಕ್ಕೆಗಳಲ್ಲಿ ಫಾಸ್ಪೇಟ್ ಹೆಚ್ಚಿನ ಪ್ರಮಾಣದಲ್ಲಿದ್ದು ಸಾವಿರಾರು ವರ್ಷಗಳಿಂದ ಈ ದಿಬ್ಬಗಳ ಮೇಲೆ ಹಕ್ಕಿಗಳು ವಿಸರ್ಜಿಸಿದ್ದ ಹಿಕ್ಕೆಗಳು ಸಂಗ್ರಹವಾಗುತ್ತ ಸುಣ್ಣದ ಕಲ್ಲಿನ ದಿಬ್ಬಗಳನ್ನು ಫಾಸ್ಪೇಟ್ ದಿಬ್ಬಗಳನ್ನಾಗಿ ಮಾರ್ಪಡಿಸಿದ್ದವು.
ನೌರುವಿನಿಂದ ವಾಪಸ್ಸು ಬಂದ ಆಲ್ಬರ್ಟ್ ಎಲ್ಲಿಸ್ ಒಂದೇ ದಿನದಲ್ಲಿ ಕಂಪನಿಯ ನೀಲಿಕಣ್ಣಿನ ಹುಡುಗನಾಗಿದ್ದ. ಕೃಷಿ, ಔಷಧ, ಆಹಾರ ಹೀಗೆ ಹಲವು ಉದ್ಯಮಗಳಲ್ಲಿ ಬಳಕೆಯಾಗುತ್ತ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದ ಫಾಸ್ಪೇಟ್ನ ದೊಡ್ಡ ಖಜಾನೆ ಸಿಕ್ಕಿದ್ದೇ ತಡ ಪೆಸಿಫಿಕ್ ಐಲ್ಯಾಂಡ್ ಕಂಪನಿ ತನ್ನ ಹೆಸರನ್ನು ಪೆಸಿಫಿಕ್ ಫಾಸ್ಪೇಟ್ ಕಂಪನಿಯೆಂದು ಬದಲಾಯಿಸಿಕೊಂಡು ಆ ಸಮಯದಲ್ಲಿ ನೌರುವಿನಲ್ಲಿ ಆಡಳಿತ ನಡೆಸುತ್ತಿದ್ದ ಜರ್ಮನಿಯ ಜೊತೆಗೆ ಫಾಸ್ಪೇಟ್ ಗಣಿಗಾರಿಕೆಯ ಒಪ್ಪಂದ ಕುದುರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರ ಫಲವಾಗಿ 1905ರಲ್ಲಿ ನೌರುವಿನಿಂದ ಹೊರಟ ಮೊದಲ ಫಾಸ್ಪೇಟ್ ತುಂಬಿದ ಬೋಟು ಸಮುದ್ರದ ತೂಫಾನಿನಲ್ಲಿ ಸಿಲುಕಿ ಮಗುಚಿ ಬಿದ್ದರೂ ಧೃತಿಗೆಡದ ಕಂಪನಿ ಮತ್ತೆ ದಂಡೆತ್ತಿ ಬಂದು ಇಲ್ಲಿಂದ ಫಾಸ್ಪೇಟ್ ತುಂಬಿಕೊಂಡು ಹೋಗುವಲ್ಲಿ ಯಶಸ್ವಿಯಾಯಿತು. ಇದು ಮುಂದಿನ ಹತ್ತು ವರ್ಷಗಳ ಕಾಲ ಸತತವಾಗಿ ನಡೆಯಿತು. 1914ರಲ್ಲಿ ಮೊದಲ ಮಹಾಯುದ್ಧದ ಆರಂಭದಲ್ಲಿ ಆಸ್ಟ್ರೇಲಿಯಾ ನೌರುವಿನ ಆಡಳಿತವನ್ನು ಜರ್ಮನಿಯಿಂದ ಕಸಿದುಕೊಂಡು ತನ್ನ ತಾಬೆಗೆ ತೆಗೆದುಕೊಂಡಿತು. ನೌರುವಿನ ಫಾಸ್ಪೇಟ್ ಖಜಾನೆಯ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿದ್ದ ಆಸ್ಟ್ರೇಲಿಯಾ, ದ್ವೀಪವು ತನ್ನ ತೆಕ್ಕೆಗೆ ಬರುತ್ತಿದ್ದಂತೆಯೇ ಅಲ್ಲಿ ದೊಡ್ಡ ಮಟ್ಟದಲ್ಲಿ ಗಣಿಗಾರಿಕೆಯನ್ನು ಆರಂಭಿಸಲು ಭಾರಿ ಯಂತ್ರಗಳನ್ನು ನುಗ್ಗಿಸಿತು. ಇದರ ಪರಿಣಾಮ ನೌರುವಿನ ವಾರ್ಷಿಕ ಫಾಸ್ಪೇಟ್ ಗಣಿಗಾರಿಕೆ ಎರಡು ಲಕ್ಷ ಮೆಟ್ರಿಕ್ ಟನ್ಗೇರಿತು. ಈ ದಂಧೆಯಲ್ಲಿ ಪಾಲುದಾರರಾಗಿದ್ದ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಬ್ರಿಟನ್ ದೇಶಗಳು ತಮ್ಮ ರೈತರ ಅನುಕೂಲಕ್ಕಾಗಿ ಕಡಿಮೆ ಬೆಲೆಗೆ ಮಾರುವ ವ್ಯವಸ್ಥೆಯನ್ನು ರೂಪಿಸಿಕೊಂಡವು. ನಡುವಿನ ಅಲ್ಪ ಸಮಯ ಜಪಾನ್ ನೌರುವಿನ ಮೇಲೆ ಆಕ್ರಮಣ ನಡೆಸಿ ಗಣಿಗಾರಿಕೆಯ ಮೇಲೆ ಪ್ರಾಬಲ್ಯ ಪಡೆದದ್ದು ಬಿಟ್ಟರೆ 1968ರಲ್ಲಿ ನೌರು ಸ್ವಾತಂತ್ರ್ಯ ಪಡೆಯುವವರೆಗೂ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಬ್ರಿಟನ್ ಒಟ್ಟಾಗಿ ಅಲ್ಲಿನ ಫಾಸ್ಪೇಟ್ ಸಂಪತ್ತನ್ನು ಲೂಟಿ ಮಾಡಿದವು.
ಫಾಸ್ಪೇಟ್ ಹುಡುಕಿಕೊಂಡು ಬಂದ ಆಲ್ಬರ್ಟ್ ಎಲ್ಲಿಸ್ ನೌರುವಿನ ಮೇಲೆ ಕಾಲಿಟ್ಟ ನಂತರ ಅಲ್ಲಿನ ಜನಜೀವನ ಸಂಪೂರ್ಣ ಬದಲಾಯಿತು. ಸುಂದರ ಪರಿಸರದಲ್ಲಿ ಹಾಯಾಗಿದ್ದ ಸ್ಥಳೀಯರು ತಾವು ಬಿತ್ತಿ ಬೆಳೆಯುತ್ತಿದ್ದ ಹೊಲಗಳನ್ನು ದುಡ್ಡಿನ ಆಸೆಗೆ ಬಿದ್ದು ಗಣಿಧಣಿಗಳಿಗೆ ಮಾರಿದರು. ತಾವೆಂದೂ ಕೇಳರಿಯದಷ್ಟು ಹಣವನ್ನು ಫಾಸ್ಪೇಟ್ ಅವರಿಗೆ ಪರಿಚಯಿಸಿತ್ತು. ನೌರುವಿನ ತುಂಬ ಝುಣಝುಣ ಕಾಂಚಾಣದ್ದೇ ಸದ್ದು. ದಶಕಗಳ ಕಾಲ ಗಣಿಗಾರಿಕೆ ನಡೆದ ಪರಿಣಾಮ ಕುಂತಲ್ಲೇ ಕೈತುಂಬ ಹಣ ನೋಡಿದ ನವಪೀಳಿಗೆ ದುಡಿಯುವುದನ್ನು ಮರೆತು ಶೋಕಿ, ಚೈನಿಯ ಸಂಪ್ರದಾಯದತ್ತ ವಾಲಿತು. ಯುವಜನರಲ್ಲಿ ಕೆಲವರು ವಿದೇಶಗಳಲ್ಲಿ ಆಸ್ತಿ ಖರೀದಿಸಿದರೆ ಮತ್ತೆ ಹಲವರು ಮನೆ-ತೋಟಗಳನ್ನು ಗಣಿಧಣಿಗಳಿಗೆ ಮಾರಿ ಊರನ್ನೇ ತೊರೆದರು. ವಿದೇಶಿ ಕಾರು, ಬೈಕುಗಳು ಈ ಪುಟ್ಟ ದ್ವೀಪದ ಚಿಕ್ಕ ರಸ್ತೆಗಳ ಮೇಲೆ ಮೆರೆದಾಡಿದವು. ಗಣಿಗಾರಿಕೆ ನಡೆಸಲು ಬಂದ ವಿದೇಶಿ ಯಂತ್ರಗಳು ನೌರುವಿನ ಒಡಲನ್ನು ಬಗೆದು ಪರಿಸರವನ್ನು ಸಂಪೂರ್ಣ ಗಬ್ಬೆಬ್ಬಿಸುತ್ತಿರುವುದನ್ನು ನೋಡಿದರೂ, ಪ್ರತಿಭಟಿಸಲು ಯಾರಿಗೂ ಪುರುಸೊತ್ತೇ ಇರಲಿಲ್ಲ. ಶತಮಾನಗಳಿಂದ ಈ ಪ್ರಶಾಂತ ದ್ವೀಪವನ್ನು ತಮ್ಮ ಮನೆ ಮಾಡಿಕೊಂಡಿದ್ದ ಕಡಲ ಹಕ್ಕಿಗಳು ಯಂತ್ರಗಳ ಭರಾಟೆಗೆ ಹೆದರಿ ಜಾಗ ಖಾಲಿ ಮಾಡಿದವು. ಒಂದು ಕಾಲದಲ್ಲಿ ಸೌಂದರ್ಯದ ಖನಿಯೆಂದು ಹೆಸರು ಪಡೆದಿದ್ದ ಈ ದ್ವೀಪವು ಗಣಿಗಾರಿಕೆಗೆ ನಲುಗಿ ಬೆಂಡಾಗಿ ಹೋಯಿತು.
1968ರಲ್ಲಿ ನೌರುವಿಗೆ ಸ್ವಾತಂತ್ರ್ಯ ದೊರಕಿದಾಗ ಅಲ್ಲಿದ್ದ ಫಾಸ್ಪೇಟ್ನ ಹೆಚ್ಚಿನ ಪಾಲು ಖಾಲಿಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಹೊಸ ಸರ್ಕಾರ ದೂರಗಾಮಿ ಯೋಜನೆಗಳನ್ನು ಹಮ್ಮಿಕೊಂಡು ಪರಿಸರ ಮತ್ತು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಬದಲು ಅಳಿದುಳಿದ ಫಾಸ್ಪೇಟ್ನ ಗಣಿಗಾರಿಕೆಯನ್ನು ಮುಂದುವರೆಸಿ ತನ್ನ ಖಜಾನೆಯನ್ನು ತುಂಬಿಸುವತ್ತ ಗಮನಹರಿಸಿತು. ನಾಗರಿಕರಿಗೆ ಯಾವುದೇ ತೆರಿಗೆ ವಿಧಿಸದೇ, ಉಚಿತ ವಿದ್ಯಾಭ್ಯಾಸ, ಉಚಿತ ಆರೋಗ್ಯ ವ್ಯವಸ್ಥೆ ಹೀಗೆ ಹಲವು ಭಾಗ್ಯಗಳನ್ನು ನೀಡಿತು. ಇಂತಹ ಪ್ರಮಾದಗಳನ್ನು ಅಳಿದುಳಿದ ಫಾಸ್ಪೇಟ್ನ ರಫ್ತು ಸರಿತೂಗಿಸುತ್ತಿದ್ದುದರಿಂದ ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಆದರೆ 2005ರ ವೇಳೆಗೆ ಅಲ್ಲಿನ ಫಾಸ್ಪೇಟ್ ಸಂಪತ್ತು ಸಂಪೂರ್ಣ ಖಾಲಿಯಾದಾಗ ಸರ್ಕಾರ ಹೌಹಾರಿತು. ಖಾಲಿಯಾದ ಖಜಾನೆಯನ್ನು ತುಂಬಲು ಆಸ್ಟ್ರೇಲಿಯಾಕ್ಕೆ ಮೊರೆ ಹೋದಾಗ ಅವರು ಹಾಕಿದ ಕರಾರಿನಂತೆ ಅಲ್ಲಿನ ಅಫ್ಘಾನಿ ಮತ್ತು ಇರಾನಿ ನಿರಾಶ್ರಿತರಿಗೆ ತಮ್ಮಲ್ಲಿ ಆಶ್ರಯ ನೀಡುವಂತಹ ಮೂರ್ಖ ನಿರ್ಧಾರವನ್ನು ಮಾಡಿತು. ಇವೆಲ್ಲದರ ಪರಿಣಾಮ ಇದೀಗ ನೌರುವಿನಲ್ಲಿ ಸೂತಕದ ಛಾಯೆ. ದುಡಿಮೆ, ತೆರಿಗೆಯೆಂದರೆ ಏನೆಂದು ಕೇಳುವ ಯುವಸಮೂಹ, ಬಿಟ್ಟಿ ಭಾಗ್ಯಗಳನ್ನೇ ನಂಬಿ ಕಾಲಕಳೆದ ನಾಗರಿಕರು ಇವರೆಲ್ಲ ಇದೀಗ ಈ ಪುಟ್ಟ ದ್ವೀಪಕ್ಕೆ ಹೊರೆಯಾಗಿದ್ದಾರೆ. ಇನ್ನು ಇಲ್ಲಿಯ ಪರಿಸರದ ಬಗ್ಗೆಯಂತೂ ಕೇಳಲೇಬೇಡಿ. ಎಲ್ಲೆಂದರಲ್ಲಿ ಧೂಳು, ರಾಡಿ. ಬಿತ್ತುವ ಬೆಳೆಯುವ ಕುರಿತು ಕನಸಿನಲ್ಲೂ ಯೋಚಿಸುವ ಹಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ತಾನು ಮಾಡಿದ ತಪ್ಪುಗಳ ಭಾರದಿಂದ ಮುಳುಗುತ್ತಿರುವ ನೌರು ಇದೀಗ ಕೊನೆಯ ಪ್ರಯತ್ನವೆಂಬಂತೆ ಪೆಸಿಫಿಕ್ ಸಾಗರದ ತಳಕ್ಕೆ ಕಣ್ಣಿಟ್ಟಿದೆ.
ಆಳಸಮುದ್ರ ಗಣಿಗಾರಿಕೆ ಸದ್ಯ ಹೆಚ್ಚು ಸದ್ದು ಮಾಡುತ್ತಿದ್ದು ಆರಂಭದ ಲಕ್ಷಣಗಳನ್ನು ನೋಡಿದರೆ ಅದು ಶೀಘ್ರದಲ್ಲೇ ಮತ್ತಷ್ಟು ಗೌಜು ಗದ್ದಲಕ್ಕೆ ಕಾರಣವಾಗಲಿದೆ. ನವಯುಗದ ಉಪಕರಣಗಳಾದ ಇ-ವಾಹನಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ಬ್ಯಾಟರಿಗಳಿಗೆ ಮತ್ತು ಆ ನಿಟ್ಟಿನಲ್ಲಿ ನಡೆಯುತ್ತಿರುವ ಸಂಶೋಧನೆಗಳಿಗೆ ತಾಮ್ರ, ನಿಕ್ಕಲ್, ಸೀಸ, ಕೋಬಾಲ್ಟ್ ಮತ್ತು ಮ್ಯಾಂಗನೀಸ್ನಂತಹ ಖನಿಜಗಳ ಜರೂರತ್ತು ಇದೀಗ ಹಲವು ಪಟ್ಟು ಹೆಚ್ಚಾಗಿದೆ. ಭೂಮಿಯ ಮೇಲೆ ಇವುಗಳ ಗಣಿಗಾರಿಕೆಗೆ ಸೀಮಿತ ಅವಕಾಶವಿರುವ ಕಾರಣ ಜಾಗತಿಕ ಸಾಗರದಲ್ಲಿ ಅವುಗಳ ಉಪಲಬ್ಧತೆ ಭೂಮಿಗಿಂತ ಹಲವು ಪಟ್ಟು ಹೆಚ್ಚು ಎಂಬ ಸುದ್ದಿ ಗಣಿಲಾಬಿಗೆ ಸುಗಮ ಸಂಗೀತದಂತೆ ಕೇಳಿಸಿದೆ. ಹೀಗಾಗಿ ಭಾರತವೂ ಸೇರಿದಂತೆ ವಿಶ್ವಾದ್ಯಂತ ಸಾಗರ ಲೂಟಿ ಅಭಿಯಾನದತ್ತ ಇದೀಗ ಅವರ ಚಿತ್ತ ನೆಟ್ಟಿದೆ.
ಕೆನಡಾ ಮೂಲದ ಸಂಸ್ಥೆಯೊಂದರ ಜೊತೆ ಆಳಸಮುದ್ರ ಗಣಿಗಾರಿಕೆಯ ಒಡಂಬಡಿಕೆ ಮಾಡಿಕೊಂಡಿರುವ ನೌರು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ನೌರು ಸೇರಿದಂತೆ ಹವಾಯಿ, ಕಿರಿಬಾಟಿ, ಮೆಕ್ಸಿಕೋ ಆಸುಪಾಸಿನ ಕ್ಲಾರಿಯಾನ್ ಕ್ಲಿರ್ಪ³ನ್ ಪ್ರದೇಶವೆಂದು ಹೇಳಲಾಗುವ ದಕ್ಷಿಣ ಪೆಸಿಫಿಕ್ ಸಮುದ್ರದ ತಳದಲ್ಲಿ ಪಾಲಿ ಮೆಟಾಲಿಕ್ ನಾಡ್ಯೂಲ್ಸ್, ಅಂದರೆ ವೈವಿಧ್ಯಮಯ ಲೋಹಗಳ ಉಂಡೆಗಳು ಭಾರಿಪ್ರಮಾಣದಲ್ಲಿ ಲಭ್ಯವಿವೆ. ಈ ಉಂಡೆಗಳು ತಯಾರಾಗಿದ್ದು ಸಮುದ್ರದ ನೀರಿನಲ್ಲಿರುವ ಅತ್ಯಲ್ಪ ಪ್ರಮಾಣದಲ್ಲಿರುವ ಖನಿಜಗಳು ಸಮುದ್ರದತಳದಲ್ಲಿ ಕುಳಿತಿರುವ ಕಲ್ಲು, ಚಿಪ್ಪುಗಳ ಮೇಲೆ ಶತಮಾನಗಳಿಂದ ನಿಧಾನವಾಗಿ ಶೇಖರಣೆಯಾಗುವ ಮೂಲಕ. ಸಮುದ್ರದ ಮೇಲ್ಮೈನ ಕೆಳಗೆ ನಾಲ್ಕರಿಂದ ಆರು ಕಿಮೀನಷ್ಟು ಕೆಳಗೆ ತಾಮ್ರ, ನಿಕ್ಕಲ್, ಸೀಸ, ಕೋಬಾಲ್ಟ್ ಮತ್ತು ಮ್ಯಾಂಗನೀಸನ್ನು ಹೇರಳ ಪ್ರಮಾಣದಲ್ಲಿ ಹೊಂದಿರುವ ಈ ಲಾಡುಗಳನ್ನು ಹೊರತೆಗೆಯಲು ನೌರು ತಯಾರಾಗುತ್ತಿದೆ. ಈ ಬೆಳವಣಿಗೆಗಳ ನಡುವೆ ಕೆಲದಿನಗಳ ಹಿಂದೆಯಷ್ಟೆ ಆಳಸಮುದ್ರ ಗಣಿಗಾರಿಕೆಗೆ ತೊಡಕಾಗಿರುವ ಅಂತಾರಾಷ್ಟ್ರೀಯ ನಿಬಂಧನೆಗಳನ್ನು ಸರಳಗೊಳಿಸಿ ಈ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ. ನಾರ್ವೆ, ಕುಕ್ ದ್ವೀಪಗಳು, ಬ್ರೆಜಿಲ್, ಭಾರತ ಹೀಗೆ ಸಾಗರವನ್ನು ಹೊಂದಿಕೊಂಡಿರುವ ದೇಶಗಳು ಈಗಾಗಲೇ ಆಳಸಮುದ್ರ ಗಣಿಗಾರಿಕೆಗೆ ತಮ್ಮ ಆಸಕ್ತಿ ತೋರಿವೆ.
ಇದಕ್ಕೆ ಹಲವೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಅದು ಬರುವ ದಿನಗಳಲ್ಲಿ ಸಾಗರದಡಿಯಲ್ಲಿ ಅಲ್ಲೋಲಕಲ್ಲೋಲ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ವಿಪರ್ಯಾಸವೆಂದರೆ ತಮ್ಮ ಭೂತ ಮತ್ತು ವರ್ತಮಾನವನ್ನು ಗಣಿಗಾರಿಕೆಯಿಂದ ಹಾಳುಗೆಡವಿದ ನೌರುವಿನಂತಹ ದೇಶ ಇದೀಗ ಈ ಭವಿಷ್ಯದ ತಂತ್ರಜ್ಞಾನದ ಮುಂಚೂಣಿಯಲ್ಲಿದೆ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)