ಶಿಕ್ಷಕಿಯಾಗಲು ಹೊರಟು ಸಾಹಿತಿಯಾದ ಕಥೆ...

ವಿಜಯವಾಣಿ (5)
Published on

ತಮ್ಮ ಸಮುದಾಯದವರಿಂದಲೇ ಬಹಿಷ್ಕಾರ | ಬೆಂಕಿಯಿಂದ ಬಾಣಲೆಗೆ ಬಿದ್ದಿದ್ದ ಬಾನು

| ಶಿವಾನಂದ ತಗಡೂರು, ಬೆಂಗಳೂರು

ಕನ್ನಡದ ಹೆಮ್ಮೆಯ ಸಾಹಿತಿ ಬಾನು ಮುಷ್ತಾಕ್ ಸವೆಸಿದ ಬದುಕಿನ ಹಾದಿ ಅಷ್ಟು ಸುಲಭವಾಗಿಯೇನೂ ಇರಲಿಲ್ಲ. ಮುಸ್ಲಿಂ ಸಮುದಾಯದೊಳಗಿನ ಕೆಲವು ಸಂಪ್ರದಾಯಗಳ ಬಗ್ಗೆ ಧೈರ್ಯವಾಗಿ ಬರೆದು, ಬೆಳಕು ಚೆಲ್ಲಿದ್ದ ಬಾನು ಅವರನ್ನು ಆ ಸಮುದಾಯದ ಕಟ್ಟಾ ಸಂಪ್ರದಾಯವಾದಿಗಳು ಒಪ್ಪಿರಲಿಲ್ಲ. ಅವರಿಗೆ ಸಮಾಜದಿಂದಲೇ ಬಹಿಷ್ಕಾರ ಹಾಕಿದ್ದರು. ಪ್ರಾರ್ಥನಾ ಮಂದಿರಗಳಲ್ಲಿ ಘೋಷಣೆಗಳು ಮೊಳಗಿದಾಗ ಅವರ ಬದುಕು ಅಕ್ಷರಶಃ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು. ಅಂಥ ಸಂದರ್ಭಗಳನ್ನು ಎದುರಿಸಿದ ಬಾನು ಅವರು ಬೆಂಕಿಯ ಮಳೆಯಲ್ಲಿಯೇ ಈಜಿ, ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದು ಮಾತ್ರ ಅಚ್ಚರಿ.

ಎಂಬತ್ತರ ದಶಕದಲ್ಲಿ ತನ್ನ ಸಮುದಾಯದ ಹೆಣ್ಣು ಮಗಳೊಬ್ಬಳು ಅಕ್ಷರ ಲೋಕಕ್ಕೆ ಕಾಲಿಟ್ಟಿದ್ದನ್ನೇ ನಿಬ್ಬೆರಗಾಗಿ ನೋಡಿದ್ದ ಅಂದಿನ ಮುಸ್ಲಿಂ ಸಮಾಜದಲ್ಲಿ ಬಾನು ಮುಷ್ತಾಕ್ ಅವರಿಗೆ ಪ್ರೋತ್ಸಾಹ ಸಿಕ್ಕಿದ್ದಕ್ಕಿಂತ ಹೆಚ್ಚಾಗಿ ಹೆಜ್ಜೆ ಹೆಜ್ಜೆಗೂ ಸವಾಲುಗಳು ಎದುರಾಗಿದ್ದೇ ಜಾಸ್ತಿ. ಆ ಕಷ್ಟದ ಸವಾಲುಗಳನ್ನೇ ಅವರು ಮೆಟ್ಟಿಲಾಗಿಸಿಕೊಂಡು ಒಂದೊಂದೇ ಹೆಜ್ಜೆ ಇಡುತ್ತ ಬಂದ ರೀತಿ ಹಾಸನದಲ್ಲಿ ಈಗಲೂ ಮನೆ ಮಾತು.

ಕನಸಾಗಿ ಉಳಿದ ನೌಕರಿ: ಕೌಟುಂಬಿಕ ನಿರ್ಬಂಧಗಳ ವಾತಾವರಣದ ಎಲ್ಲೆ ಮೀರಿ ಓದು ಮುಗಿಸಿ ಪದವಿ ಪಡೆದ ಬಾನು ಅವರ ಬಳಿಗೆ ಸರ್ಕಾರಿ ನೌಕರಿ ಅರಸಿಕೊಂಡು ಬಂದಿತ್ತು. ಸಕಲೇಶಪುರ ತಾಲೂಕಿನ ಬೆಳಗೋಡು ಶಾಲೆಗೆ ಶಿಕ್ಷಕಿಯಾಗಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡರು; ಅಷ್ಟರಲ್ಲಿ ಮದುವೆ ಆಯಿತು. ಗಂಡನ ಮನೆ ಸೇರಿದ ಬಾನು ಅವರನ್ನು ಉದ್ಯೋಗಕ್ಕೆ ಕಳುಹಿಸಲು ಆ ಕುಟುಂಬದವರು ಒಪ್ಪಲಿಲ್ಲ. ಪತಿ ಮುಷ್ತಾಕ್ ಅವರ ಜೊತೆಗೆ ಹೋಗಿ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ಬಂದರು. ನಂತರ ಕುಟುಂಬದ ಜವಾಬ್ದಾರಿ ಹೊತ್ತರು.

ಮೂರು ಮಕ್ಕಳ ತಾಯಿಯಾದರೂ ಅವರ ಮನಸ್ಸು ಬರವಣಿಗೆ ಮೇಲೆಯೇ ನೆಟ್ಟಿತ್ತು. ಓದು ಮತ್ತು ಬರವಣಿಗೆ ಬಗ್ಗೆ ತುಂಬ ತುಡಿತ ಹೊಂದಿದ್ದ ಬಾನುಗೆ ಪತಿ ಮುಷ್ತಾಕ್ ಬೆಂಬಲವಾಗಿ ನಿಂತರು. ಆಗ ಹಿರಿಯ ಪತ್ರಕರ್ತ ಲಂಕೇಶ್ ಅವರ ಸಂಪರ್ಕ ದೊರೆತು, ಅವರ ಅಕ್ಷರ ಲೋಕದ ಪಯಣಕ್ಕೆ ಅದೃಷ್ಟದ ಬಾಗಿಲು ತೆರೆಸಿತು. ಹಾಸನದಿಂದ ಲಂಕೇಶ್ ಪತ್ರಿಕೆಗೆ ಒಂದು ದಶಕ ಕಾಲ ವರದಿಗಾರ್ತಿಯಾಗಿ ಕೆಲಸ ಮಾಡಿದ ಬಾನು ಮುಷ್ತಾಕ್, ಅದರ ಜೊತೆಜೊತೆಗೇ ಕತೆ, ಕವನ ಬರೆಯಲಾರಂಭಿಸಿದರು. ಬಂಡಾಯ ಸಾಹಿತ್ಯ ಅವರ ಬರವಣಿಗೆಗೆ ಮತ್ತೊಂದು ಮೆರುಗು ನೀಡಿತು. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಸಂಪರ್ಕದ ಮೂಲಕ ರೈತ ಸಂಘಟನೆಯಲ್ಲಿ ಗುರುತಿಸಿಕೊಂಡರು. ಅಷ್ಟೆ ಅಲ್ಲ, ದಲಿತ ಸಂಘಟನೆಯಲ್ಲಿಯೂ ತೊಡಗಿಸಿಕೊಂಡರು. ಇದರಿಂದಾಗಿ ಅವರ ವ್ಯಕ್ತಿತ್ವ ಇನ್ನಷ್ಟು ಮಾಗಲು ಕಾರಣವಾಯಿತು. ವಕೀಲರಾಗಿ ಮಾತ್ರವಲ್ಲ, ಹಾಸನದ ನಗರಸಭೆ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಎರಡು ಬಾರಿ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದು ವಿಶೇಷ.

ಬಾನು ಮುಷ್ತಾಕ್ ಬರೆದ ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಅವರು ಮಾಡಿದ ಹಸೀನಾ ಚಿತ್ರಕ್ಕೆ ಮೂರು ರಾಷ್ಟ್ರ ಪ್ರಶಸ್ತಿಗಳು ಬಂದದ್ದು ಅವರ ಸಾಹಿತ್ಯ ಕೃಷಿಗೆ ಮತ್ತೊಂದು ಮೆರುಗು ನೀಡಿತು. ಸುದೀರ್ಘ ಅವಧಿಯ ಅವರ ಸಾಹಿತ್ಯ ಕೃಷಿಗೆ ಬುಕರ್ ಪ್ರಶಸ್ತಿ ಒಲಿದು ಬಂದಿರುವುದು ಅವರೊಳಗೆ ಮೇಳೈಸಿರುವ ಸೌಹಾರ್ದತೆಗೆ ಇನ್ನೊಂದು ಮೆರುಗು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net