

ಶಿಸ್ತುಬದ್ಧ ಜೀವನಕ್ಕೆ ಉಳಿತಾಯ ಎನ್ನುವುದು ಅತ್ಯವಶ್ಯ. ಅದರಲ್ಲೂ ಭಾರತೀಯರ ಜೀವನಕ್ರಮದಲ್ಲಿ ಉಳಿತಾಯಕ್ಕೆ ಹೆಚ್ಚಿನ ಮಹತ್ವವಿದೆ. ಬದುಕಿನಲ್ಲಿ ಕಷ್ಟಕಾಲ ಎದುರಾದಾಗ, ಸೋತಾಗ ಉಳಿತಾಯ ಸಹಾಯಕ್ಕೆ ಬರುತ್ತದೆ ಎಂಬ ನಂಬಿಕೆ ಎಲ್ಲರದು. ಹಾಗಾಗಿ ಗಳಿಸಿದ್ದೆಲ್ಲವನ್ನೂ ಖರ್ಚು ಮಾಡುವ ಬದಲು ನಾಳೆಗಾಗಿ ಒಂದಿಷ್ಟನ್ನು ತೆಗೆದಿಡುವ ಸಂಪ್ರದಾಯ ಹಿಂದಿನಿಂದಲೂ ಬೆಳೆದುಬಂದಿದೆ.
ಒಮ್ಮೆ ಒಬ್ಬ ಮಹಿಳೆ ಬಂದು ತನ್ನ ಕಷ್ಟ ಹೇಳಿಕೊಂಡರು. ‘ಸ್ವಾಮಿ, ನನ್ನ ಗಂಡ ತೀರಾ ಕುಡಿತದ ಚಟದಿಂದ ಎಲ್ಲವನ್ನೂ ಕಳೆದುಕೊಳ್ಳುವಂತಾಗಿದೆ. ದುಡಿದು ತಂದ ಹಣವನ್ನೆಲ್ಲ ಕುಡಿತದಲ್ಲೇ ಖಾಲಿ ಮಾಡುತ್ತಾರೆ, ಸಂಸಾರ ಸಾಗಿಸುವುದೇ ಕಷ್ಟವಾಗಿದೆ ಸ್ವಾಮಿ, ಸಂಪಾದನೆ ಮಾಡಿದರೂ ಹಣ ಉಳಿಯುತ್ತಿಲ್ಲ’ ಎಂದು ಅಳಲು ತೋಡಿಕೊಂಡಳು.
‘ಜೀವನಕ್ಕೆ ಏನು ಮಾಡುತ್ತೀ’ ಎಂದು ಕೇಳಿದಾಗ ‘ಅಲ್ಲಿ ಇಲ್ಲಿ ಮನೆಗೆಲಸಕ್ಕೆ ಹೋಗುತ್ತೇನೆ, ದುಡಿದು ತಂದ ದುಡ್ಡಿನಿಂದ ಮನೆಗೆ ದಿನಸಿ ತರುತ್ತೇನೆ. ಆಮೇಲೆ ಉಳಿದ ಚಿಲ್ಲರೆ ಹಣವನ್ನು ಗಂಡನಿಗೆ ತಿಳಿಯದ ಹಾಗೆ ಸಾಸಿವೆ ಡಬ್ಬದಲ್ಲಿ ಇಡುತ್ತೇನೆ, ಈಗ ಅದೇ ಹಣ ಉಪಯೋಗಿಸಿಕೊಂಡು ತಮ್ಮಲ್ಲಿಗೆ ಬಂದಿದ್ದೇನೆ. ನನ್ನ ಗಂಡ ಸರಿಯಾಗಬೇಕು, ಕುಟುಂಬದ ಜವಾಬ್ದಾರಿ ವಹಿಸುವಂತಾಗಬೇಕು, ತಾವೇ ಒಂದು ದಾರಿ ತೋರಿಸಿ’ ಎಂದು ಅಲವತ್ತುಕೊಂಡಳು. ಆತನ ಕುಡಿತ ಬಿಡಿಸುವ ಸಲುವಾಗಿ ಧರ್ಮಸ್ಥಳ ಮದ್ಯವರ್ಜನ ಶಿಬಿರಕ್ಕೆ ಸೇರಿಸುವಂತೆ ಸಲಹೆ ನೀಡಿದೆ. ಕೆಲ ತಿಂಗಳ ಬಳಿಕ ಆಕೆ ಮತ್ತೆ ಶ್ರೀಕ್ಷೇತ್ರಕ್ಕೆ ಬಂದು, ‘ತಮ್ಮ ಸಲಹೆಯಂತೆ, ಮಂಜುನಾಥ ಸ್ವಾಮಿಯ ಅನುಗ್ರಹದಂತೆ, ಗಂಡನನ್ನು ಶಿಬಿರಕ್ಕೆ ಸೇರಿಸಿದೆ. ಈಗ ಗಂಡ ಮದ್ಯವ್ಯಸನ ಮುಕ್ತರಾಗಿದ್ದಾರೆ. ನಾವಿಬ್ಬರೂ ದುಡಿಯುತ್ತಿದ್ದೇವೆ. ಮಕ್ಕಳನ್ನು ಶಾಲೆಗೆ ಸೇರಿಸಿದ್ದೇವೆ, ಒಳ್ಳೆಯ ಜೀವನ ನಡೆಸುತ್ತಿದ್ದೇವೆ ಸ್ವಾಮಿ’ ಎಂದಾಗ, ನನಗೂ ಅತೀವ ಆನಂದವಾಯಿತು.
ನಮ್ಮ ಹಿರಿಯರ ಕಾಲದ ನೆನಪು ಸದಾ ನಮಗೆ ಮರುಕಳಿಸುತ್ತದೆ. ಹಿಂದಿನ ಕಾಲದಲ್ಲಿ ಹಣ ಕೂಡಿಡಲು ಈಗಿನಂತೆ ಬ್ಯಾಂಕ್ ಅಕೌಂಟ್ ಆಗಲಿ, ಡಿಜಿಟಲ್ ವ್ಯಾಲೆಟ್ ಆಗಲಿ ಇರಲಿಲ್ಲ. ಕೆಲವೇ ಕೆಲವು ಜನರಷ್ಟೇ ಬ್ಯಾಂಕ್ ವ್ಯವಹಾರ ನಡೆಸುತ್ತಿದ್ದರು. ಹಣ ಕೂಡಿಡುವುದೆಂದರೆ ಮನೆಯ ಕಪಾಟಿನಲ್ಲಿ ಅಥವಾ ಕಬ್ಬಿಣದ ಟ್ರಂಕ್ನಲ್ಲಿ ಹಣವನ್ನು ಜೋಡಿಸುವುದಷ್ಟೇ ಆಗಿತ್ತು. ಇನ್ನು ಮಕ್ಕಳಿಗೆ ಡಬ್ಬಿಯೊಂದನ್ನು ಕೊಟ್ಟು ಮನೆಯಲ್ಲಿ ಅಥವಾ ಬೇರೆ ಯಾರಾದರೂ ದುಡ್ಡು ಕೊಟ್ಟರೆ, ಈ ಡಬ್ಬಿಯಲ್ಲಿ ಹಾಕಿಡಬೇಕು ಎಂದು ತಿಳಿಸುತ್ತಿದ್ದರು. ಆ ಡಬ್ಬಿಗೆ ಒಂದು ಚಿಕ್ಕ ರಂಧ್ರವಿರುತ್ತಿತ್ತು. ಅದರ ಮೂಲಕ ದುಡ್ಡು ಹಾಕಲು ಮಾತ್ರ ಸಾಧ್ಯವಾಗುತ್ತಿತ್ತು. ದುಡ್ಡು ತೆಗೆಯಬೇಕಾದರೆ ಡಬ್ಬಿಯನ್ನೇ ಒಡೆಯಬೇಕಿತ್ತು. ಮನೆಗೆ ಬಂದ ನೆಂಟರಿಷ್ಟರಿಗೆಲ್ಲ ಆ ಡಬ್ಬಿಯನ್ನು ತೋರಿಸಿ ಪರೋಕ್ಷವಾಗಿ ಹಣ ಕೊಡಿ ಎಂದು ಬೇಡಿಕೆ ಇಡುವ ಚೂಟಿ ಮಕ್ಕಳೂ ಇದ್ದರು. ಅಕ್ಕ-ತಮ್ಮ, ಅಣ್ಣ ಹೀಗೆ 2-3 ಮಕ್ಕಳಿದ್ದರೆ ಅವರ ನಡುವೆ ಯಾರಲ್ಲಿ ಹೆಚ್ಚು ಹಣ ಸಂಗ್ರಹವಾಗುವುದು ಎಂಬ ಸ್ಪರ್ಧೆಯೂ ಏರ್ಪಡುತ್ತಿತ್ತು. ಹೀಗೆ ಉಳಿತಾಯವನ್ನು ಎಳವೆಯಲ್ಲೇ ಕಲಿಸಲಾಗುತ್ತಿತ್ತು. ಹಾಗೆ ಸಣ್ಣ ಪ್ರಾಯದಲ್ಲೇ ಉಳಿತಾಯದ ಬಗ್ಗೆ ಕಲಿತರೆ ಮುಂದೆ ಹಣವನ್ನು ವಿನಾಕಾರಣ ಪೋಲು ಮಾಡುವ ಮನಸ್ಥಿತಿ ಬೆಳೆಯದೆ ಜವಾಬ್ದಾರಿ ಬೆಳೆಯುತ್ತದೆ.
‘ಹನಿ ಹನಿ ಕೂಡಿ ಹಳ್ಳ’ ಎಂಬಂತೆ ಚಿಕ್ಕ ಚಿಕ್ಕ ಉಳಿತಾಯಗಳೇ ಮುಂದೆ ಬೃಹತ್ತಾಗುತ್ತದೆ. ಉಳಿತಾಯ ಮಾಡುವುದರಿಂದ ಜೀವನಕ್ಕೆ ಒಂದು ಆರ್ಥಿಕ ಭದ್ರತೆ ಒದಗುತ್ತದೆ. ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಮೂಲಕವೂ ಮಹಿಳೆಯರಿಗೆ ಆರ್ಥಿಕ ಶಿಸ್ತಿನ ಬಗ್ಗೆ ತಿಳಿಸಿ ಅನೇಕ ಕುಟುಂಬಗಳು ಸದೃಢವಾಗಿವೆ ಎಂದು ಅನೇಕರು ಶ್ರೀಕ್ಷೇತ್ರಕ್ಕೆ ಆಗಮಿಸಿ ನನ್ನನ್ನು ಭೇಟಿಯಾದಾಗ ತಿಳಿಸುತ್ತಾರೆ. ಅದೆಲ್ಲವೂ ನನಗೆ ಅತೀವ ಸಂತಸವನ್ನುಂಟು ಮಾಡುತ್ತದೆ.
ಉಳಿತಾಯ ಎನ್ನುವುದು ಕೇವಲ ಹಣಕಾಸಿಗೆ ಮಾತ್ರ ಸಂಬಂಧಿಸಿದ್ದಲ್ಲ, ಬದಲಾಗಿ ಧಾರ್ವಿುಕವಾಗಿಯೂ ಪುಣ್ಯ ಸಂಚಯನ ಮಾಡುವುದು ಅತಿ ಅಗತ್ಯ. ಧರ್ಮ ಮಾರ್ಗದಲ್ಲಿ ಜೀವನ ಸಾಗಿಸುವುದು, ದಾನ ಧರ್ವದಿ ಕ್ರಿಯೆಗಳನ್ನು ಮಾಡುವುದು, ಅರಿಷಡ್ವರ್ಗಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಪಂಚೇಂದ್ರಿಯಗಳ ಆಸೆಗೆ ಬೀಳದೆ ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬಂತೆ ಈ ಶರೀರದ ಮೂಲಕ ಇತರರಿಗೆ ಒಳಿತನ್ನು ಮಾಡಿದರೆ ಪುಣ್ಯ ಪ್ರಾಪ್ತಿಯಾಗುವುದು. ‘ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮ ಮನೆ’ ಎಂಬ ಕವಿ ವಾಣಿಯಂತೆ ನಾವು ಇಲ್ಲಿಗೆ ಸತ್ಕರ್ಮಗಳನ್ನು ಮಾಡಲು ಬಂದಿದ್ದೇವೆ. ಇಲ್ಲಿ ನಾವು ಮಾಡುವ ಪುಣ್ಯ ಕ್ರಿಯೆಗಳೇ ನಮ್ಮ ಉಳಿತಾಯ. ಲೌಕಿಕವಾದ ಯಾವುದೇ ಸಿರಿ ಸಂಪತ್ತು ನಮ್ಮ ಕಾಲಾನಂತರ ನಮ್ಮ ಬಳಿ ಇರುವುದಿಲ್ಲ, ಬದಲಾಗಿ ನಾವು ಮಾಡಿದ ಒಳ್ಳೆಯ ಕೆಲಸಗಳೇ ನಮ್ಮ ಪುಣ್ಯವಾಗಿ ನಮ್ಮ ಜೊತೆಗಿರುತ್ತವೆ. ಅದೇ ನಮ್ಮ ಜೀವನದ ಉಳಿತಾಯವಾಗಿರುತ್ತದೆ. ಉಳಿತಾಯ ಖಾತೆಯಲ್ಲಿ ಪುಣ್ಯವು ಅಧಿಕವಾಗಿದ್ದು ಪಾಪವು ಕನಿಷ್ಠವಾಗಿದ್ದರೆ ಅದೇ ಸಾರ್ಥಕ ಜೀವನ ಎನಿಸುತ್ತದೆ.
ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎನ್ನುವಂತೆ ಅತಿ ಆಸೆ ಹೊಂದದೆ ಜೀವನದಲ್ಲಿ ಗಳಿಸಿದ್ದರಲ್ಲಿ ಒಂದಿಷ್ಟನ್ನಾದರೂ ದಾನ ಮಾಡಬೇಕು. ಆಗ ಬದುಕಿನಲ್ಲಿ ಪುಣ್ಯ ಸಂಚಯವಾಗುತ್ತದೆ. ಈ ಬಗ್ಗೆ ನಮಗೆ ಅನೇಕ ಪುರಾಣೇತಿಹಾಸ ಕಥೆಗಳು ಲಭ್ಯವಾಗುತ್ತವೆ. ಅತ್ಯಂತ ಮನ ಮಿಡಿಯುವ ಒಂದು ಕಥೆ ಎಂದರೆ ಒಂದು ಪಾರಿವಾಳಕ್ಕಾಗಿ ತನ್ನ ದೇಹವನ್ನೇ ತ್ಯಾಗ ಮಾಡಲು ಹೊರಟ ಒಬ್ಬ ರಾಜನ ಕಥೆ.
ಒಮ್ಮೆ ಇಂದ್ರನ ಆಸ್ಥಾನದಲ್ಲಿ ಒಂದು ಚರ್ಚೆ ನಡೆಯುತ್ತಿತ್ತು. ಭೂಲೋಕದಲ್ಲಿ ತ್ಯಾಗಮಯಿ ರಾಜರು ಯಾರೂ ಇಲ್ಲ ಎಂಬ ವಾದ ನಡೆಯುತ್ತಿತ್ತು. ಮೇಘರಥ ಎಂಬ ರಾಜನು ಧರ್ಮ ನಿಷ್ಠೆಯಿಂದ ಬಾಳುತ್ತ ಪುಣ್ಯ ಸಂಚಯ ಮಾಡುತ್ತಿದ್ದಾನೆ ಎಂಬ ಮಾತು ಕೇಳಿ ಬಂತು. ಈ ಬಗ್ಗೆ ಪರೀಕ್ಷಿಸಿ ಎಂದು ದೇವತೆಗಳಿಗೆ ಇಂದ್ರ ಸೂಚಿಸಿದಾಗ, ದೇವತೆಗಳಲ್ಲಿ ಒಬ್ಬರು ಪಾರಿವಾಳ ರೂಪದಲ್ಲಿ, ಮತ್ತೊಬ್ಬರು ಗಿಡುಗನ ರೂಪದಲ್ಲಿ ಅವನ ಆಸ್ಥಾನ ಪ್ರವೇಶಿಸಿದರು. ಪಾರಿವಾಳವು ತೆರೆದ ಕಿಟಕಿಯ ಮೂಲಕ ಹಾರಿ ಸಭಾಂಗಣದೊಳಗೆ ಸುತ್ತಲು ಪ್ರಾರಂಭಿಸಿತು. ರಾಜ ಆ ಪಾರಿವಾಳವನ್ನು ನೋಡಿ ಚಕಿತನಾದ. ಪಾರಿವಾಳ ಅಲ್ಲಿಗೆ ಭಯದಿಂದ ಬಂದಿದೆ ಎಂದು ರಾಜನಿಗೆ ಅರಿವಾಯಿತು. ಅದೇ ಕ್ಷಣದಲ್ಲಿ, ಗಿಡುಗವೂ ರಾಜನ ಆಸ್ಥಾನಕ್ಕೆ ಹಾರಿ ಬಂತು. ಅದು ಪಾರಿವಾಳವನ್ನೇ ಹುಡುಕುತ್ತಾ ಬಂದಿದೆ ಎಂದು ರಾಜನಿಗೆ ಅನ್ನಿಸಿತು. ಆಶ್ರಯ ಅರಸಿಬಂದ ಪಾರಿವಾಳದ ರಕ್ಷಣೆಗೆ ರಾಜ ನಿಂತ.
‘ಆ ಪಾರಿವಾಳ ನನ್ನ ಬೇಟೆ’ ಎಂದು ಗಿಡುಗ ಹೇಳಿತು. ಆದರೆ ರಾಜ ‘ಈ ಪಾರಿವಾಳ ಈಗ ನನ್ನ ರಕ್ಷಣೆಯಲ್ಲಿದೆ. ನಿನಗೆ ಬೇರೆ ಆಹಾರ ನೀಡುತ್ತೇನೆ’ ಎಂದ. ಒಂದು ಬುಟ್ಟಿ ಸಿಹಿತಿಂಡಿಗಳನ್ನು ತರಲು ತನ್ನ ಸೇವಕರಿಗೆ ಆದೇಶಿಸಿದ. ಆದರೆ ಗಿಡುಗ, ‘ನನಗೆ ಮಾಂಸ ಬೇಕು’ ಎಂದು ಹೇಳಿತು. ಆಗ ರಾಜ, ‘ಈ ಪಾರಿವಾಳದ ಮಾಂಸದ ಬದಲು ನನ್ನ ಸ್ವಂತ ಮಾಂಸ ಕೊಡುತ್ತೇನೆ’ ಎಂದ.
ಆಸ್ಥಾನದಲ್ಲಿದ್ದವರೆಲ್ಲರೂ ಇದನ್ನು ಕೇಳಿದ ದಿಗ್ಭಾ›ಂತರಾದರು. ಬೇರೆ ಯಾವುದಾದರೂ ಪ್ರಾಣಿಯ ಮಾಂಸ ನೀಡೋಣ ಎಂಬ ಎಲ್ಲರ ಸಲಹೆಯನ್ನು ರಾಜ ತಿರಸ್ಕರಿಸಿ, ‘ಇತರ ಪ್ರಾಣಿಯನ್ನು ಕೊಂದು ಗಿಡುಗನ ಹಸಿವು ನೀಗಿಸುವುದು ಅಪರಾಧ. ಪಾರಿವಾಳ ನನ್ನ ಬಳಿ ಬಂದು ಆಶ್ರಯ ಪಡೆದಿದೆ ಮತ್ತು ಅದನ್ನು ರಕ್ಷಿಸುವುದು ಮತ್ತು ಈ ವಿಚಾರದಲ್ಲಿ ಇತರ ಯಾರಿಗೂ ಹಾನಿಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಹಾಗಾಗಿ ನನ್ನ ತೊಡೆಯ ಮಾಂಸ ಕೊಡುತ್ತೇನೆ’ ಎಂದು ಹೇಳಿ, ತನ್ನ ತೊಡೆಯಿಂದ ಮಾಂಸದ ತುಂಡನ್ನು ಕತ್ತರಿಸಿ ಗಿಡುಗಕ್ಕೆ ಅರ್ಪಿಸಿದ. ಆದರೆ ‘ಪಾರಿವಾಳದ ತೂಕದಷ್ಟೇ ಮಾಂಸ ಬೇಕು’ ಎಂದು ಗಿಡುಗ ಕೇಳಿತು. ರಾಜ ತಕ್ಕಡಿ ತರಿಸಿದ. ಪಾರಿವಾಳವನ್ನು ಅದರಲ್ಲಿರಿಸಿ ಅಷ್ಟೇ ತೂಕದ ತನ್ನ ಮಾಂಸವನ್ನು ತಕ್ಕಡಿಗೆ ಹಾಕತೊಡಗಿದ. ಆದರೆ ತನ್ನ ದೇಹದ ಎಷ್ಟೇ ಮಾಂಸವನ್ನು ಕತ್ತರಿಸಿ ತಕ್ಕಡಿಗೆ ಹಾಕಿದರೂ ಪಾರಿವಾಳದ ತೂಕಕ್ಕೆ ಸಮವಾಗುತ್ತಿರಲಿಲ್ಲ. ಕಡೆಗೆ ತನ್ನ ದೇಹವನ್ನೇ ಸಮರ್ಪಿಸಲು ರಾಜ ಮುಂದಾದ. ಆ ಕೂಡಲೇ ಪಾರಿವಾಳ, ಗಿಡುಗನ ರೂಪದಲ್ಲಿದ್ದ ದೇವತೆಗಳು ತಮ್ಮ ವಾಸ್ತವ ರೂಪಕ್ಕೆ ಮರಳಿ, ತಾವು ನಡೆಸಿದ ಪರೀಕ್ಷೆಯಲ್ಲಿ ರಾಜ ಜಯ ಸಾಧಿಸಿದ ಬಗ್ಗೆ ತಿಳಿಸಿ ಆತನನ್ನು ಹರಸಿ ಅದೃಶ್ಯರಾದರು. ಈ ಮೂಲಕ ಆತ ಧರ್ಮಕಾರ್ಯಗಳನ್ನು ನಡೆಸುತ್ತ ಉತ್ತಮವಾಗಿ ಬದುಕು ಸಾಗಿಸಿದ. ಪ್ರತಿಯೊಬ್ಬರೂ ತಮಗೆ ಸಾಧ್ಯವಾದಷ್ಟು ಪುಣ್ಯ ಕಾರ್ಯಗಳಲ್ಲಿ ತೊಡಗಿಕೊಂಡರೆ ಉತ್ತಮ ಮೋಕ್ಷ ಪ್ರಾಪ್ತಿಯಾಗುತ್ತದೆ.
ನಮ್ಮ ಪೂರ್ವಜರು ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದರೂ ನೆಮ್ಮದಿಯ ನಾಳೆಗಾಗಿ ಒಂದು ಹಿಡಿ ಅಕ್ಕಿಯಾದರೂ ಇರಲಿ ಎಂದು ತೆಗೆದಿರಿಸುತ್ತಿದ್ದರು. ಪಾಲಕರು ಈಗಲೂ ಬಡತನ ತಮಗೆ ಮಾತ್ರ ಸಾಕು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು, ಉತ್ತಮ ಅರ್ಥಪೂರ್ಣವಾದ ಬದುಕು ಕಟ್ಟಿಕೊಡಬೇಕು ಎಂದು ಹಂಬಲಿಸುತ್ತಾರೆ. ಅಷ್ಟೇ ಅಲ್ಲ, ಆ ನಿಟ್ಟಿನಲ್ಲಿ ತಮ್ಮ ಜೀವನದಲ್ಲಿ ಗಳಿಸಿದ್ದರಲ್ಲಿ ಒಂದಿಷ್ಟನ್ನಾದರೂ ಮಕ್ಕಳಿಗಾಗಿ ಉಳಿತಾಯ ಮಾಡಬೇಕು ಎಂಬ ಕನಸು, ಆಕಾಂಕ್ಷೆಯನ್ನು ಹೊಂದುತ್ತಾರೆ.
ಹಿಂದಿನ ಕಾಲದಲ್ಲಿ ಬೆಳೆದ ಬೆಳೆ, ಆಹಾರ ಧಾನ್ಯಗಳನ್ನು ಸಂರಕ್ಷಿಸಲು ಗೋಡೌನ್, ಶೈತ್ಯಾಗಾರ ಮುಂತಾದ ವ್ಯವಸ್ಥೆಗಳಿರಲಿಲ್ಲ. ಬದಲಾಗಿ ತಮ್ಮ ಪರಿಸರದಲ್ಲಿ ದೊರೆಯುವ ವಸ್ತುಗಳನ್ನು ಉಪಯೋಗಿಸಿಕೊಂಡು ಆಹಾರ ವಸ್ತುಗಳನ್ನು, ಧಾನ್ಯ, ಬೀಜಗಳನ್ನು ಸಂರಕ್ಷಿಸುತ್ತಿದ್ದರು. ಭತ್ತವನ್ನು ಕಣಜ, ಹಗೇವುಗಳಲ್ಲಿ ಸಂರಕ್ಷಿಸುತ್ತಿದ್ದರು. ಸೂಕ್ತ, ಆಯ್ದ ತರಕಾರಿಗಳನ್ನು ಸಂಗ್ರಹಿಸಿ ಒಣಗಿಸಿ, ಅವುಗಳ ಬೀಜಗಳನ್ನು ಕಾಪಿಡುತ್ತಿದ್ದರು. ಮಳೆಗಾಲದ ಆರಂಭದಲ್ಲಿ, ನಾಟಿ ಸಮಯದಲ್ಲಿ ತೆಗೆದು ಬಿತ್ತಿ ಮತ್ತೆ ಫಸಲು ಪಡೆಯುತ್ತಿದ್ದರು. ನೆಂಟರಿಷ್ಟರು ಕೇಳಿದರೆ ಅವರಿಗೂ ಕೊಟ್ಟು ಅವರಲ್ಲಿ ಬೇರೆ ತರಕಾರಿ ಬೀಜಗಳಿದ್ದರೆ ತಾವು ಪಡೆಯುತ್ತಿದ್ದರು.
ಉಳಿತಾಯ ಯೋಜನೆಯು ಭವಿಷ್ಯದ ಹಿತದೃಷ್ಟಿಯಿಂದ ಬಹಳ ಒಳ್ಳೆಯದು. ಅಗತ್ಯವಾಗಿ ಮಾಡಲೇಬೇಕಾದುದು. ಉಳಿತಾಯವು ಹಣದ ರೂಪದಲ್ಲಿ ಮಾತ್ರವಲ್ಲ ಭೂಮಿ, ಸಂಪತ್ತು, ಬಂಗಾರ ಮಾತ್ರವಲ್ಲದೆ ವಿಮೆ ಮುಂತಾಗಿ ಅನೇಕ ರೀತಿಗಳಲ್ಲೂ ಮಾಡಬಹುದಾಗಿದೆ.
ಕಷ್ಟಕಾಲಕ್ಕೆ ಕೂಡಿಟ್ಟ ಹಣವೇ ನೆರವಾಗುವುದು, ಮಾಡಿಟ್ಟ ಬಂಗಾರವನ್ನು ಅಡವಿಟ್ಟು ಆರ್ಥಿಕ ಪರಿಸ್ಥಿತಿ ಸರಿದೂಗಿಸಬಹುದು. ಅನಾರೋಗ್ಯಕ್ಕೆ ಒಳಗಾದಾಗ ವಿಮೆಯ ಹಣದಿಂದ ಚಿಕಿತ್ಸೆ ಪಡೆಯಬಹುದು, ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕೂಡಿಟ್ಟವುಗಳಿಂದ ಬದುಕನ್ನು ಸರಿದೂಗಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ನಮ್ಮ ಜೀವನಕ್ಕಾಗಿ ಮಾತ್ರವಲ್ಲದೆ ನಮ್ಮವರಿಗೋಸ್ಕರವೂ ಮಾಡಬೇಕಾದ ಉಳಿತಾಯಗಳು ಅನೇಕ ಇವೆ. ನೀರು, ಗಾಳಿ, ಭೂಮಿ, ಪರಿಸರವನ್ನು ಉಳಿತಾಯ ಮಾಡಬೇಕು. ಅವನ್ನು ಸುಸ್ಥಿತಿಯಲ್ಲಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮದಾಗಿದೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)