ನಾಗನೆಂದರೆ ದೈವೀಗುಣದ ಶಕ್ತಿ

untitled-design-4-6887bb796ab9e
Published on

| ಗಣೇಶ ಭಟ್ಟ

ಭಾರತೀಯರಾದ ನಾವು ನಮಗೆ ಆಶ್ರಯ ನೀಡಿದ ಭೂಮಿಯನ್ನೂ ಪೂಜಿಸುವವರು. ಈ ಭೂಮಿಯಲ್ಲಿರುವ ಪ್ರಾಣಿ, ಪಕ್ಷಿ, ವೃಕ್ಷ ಮುಂತಾದವುಗಳಷ್ಟೇ ಅಲ್ಲ, ಅಣು ರೇಣು ತೃಣ ಕಾಷ್ಟಗಳಲ್ಲೂ ದೇವರನ್ನು ಕಂಡವರು. ಅಂತೆಯೇ ‘ಸರ್ಪ’ದ ಮಹಿಮೆಯನ್ನು ಅರಿತು ಪ್ರಾಚೀನ ಕಾಲದಿಂದ ಪೂಜಿಸಿಕೂಂಡು ಬಂದಿದ್ದೇವೆ.

ಪುರಾಣಗಳ ಪ್ರಕಾರ, ದಕ್ಷ ಪ್ರಜಾಪತಿಯ ಮಗಳಾದ ಕದ್ರು ಹಾಗೂ ಕಶ್ಯಪ ಮಹರ್ಷಿಯಿಂದ ಹುಟ್ಟಿದವುಗಳೇ ಸರ್ಪಗಳು. ಅನಂತ, ವಾಸುಕಿ, ಶೇಷ, ತಕ್ಷಕ ಮುಂತಾದ ಹೆಸರಿನಿಂದ ಖ್ಯಾತರಾದ ಇವು, ಕದ್ರುವಿನ ಪುತ್ರರಾದ ಸರ್ಪರಾಜರು, ಅಮೃತಕ್ಕಾಗಿ ದೇವ-ದಾನವರು ಮಂದರ ಪರ್ವತವನ್ನೇ ಕಡೆಗೋಲನ್ನಾಗಿ ಮಾಡಿಕೊಂಡು, ಕ್ಷೀರಸಾಗರವನ್ನು ಕಡೆಯುವಾಗ ವಾಸುಕಿ ಸರ್ಪವು ಕಡೆಗೋಲಿಗೆ ಹಗ್ಗವಾಗಿದ್ದು, ಅಮೃತದ ಉದ್ಭವಕ್ಕೆ ಕಾರಣವಾಯಿತು. ಶೇಷ ಸರ್ಪವು ಬಲತಾಯಿಯಾದ ವಿನತೆಯ ವಿಷಯದಲ್ಲಿ ತನ್ನ ತಾಯಿ ಕದ್ರು ಮಾಡಿದ ಅಪರಾಧಕ್ಕೆ ಬಹಳ ನೊಂದು, ಬ್ರಹ್ಮನಿಂದ ಭೂಭಾರ ಹೊರುವ ಸಾಮರ್ಥ್ಯ ಪಡೆದು ಭೂಮಿಯನ್ನು ಹೊತ್ತು, ಒಂದಂಶದಿಂದ ಪಾತಾಳದಲ್ಲಿಯೂ, ಇನ್ನೊಂದು ಅಂಶದಿಂದ ಮಹಾವಿಷ್ಣುವಿನ ಹಾಸಿಗೆಯಾಗಿಯೂ ಇರುವುದು. ಸರ್ಪವು ಶಿವನ ಕೊರಳ ಆಭರಣವಾಗಿ, ತ್ರಿಪುರಸಂಹಾರ ಕಾಲದಲ್ಲಿ ಶಿವನ ಧನಸ್ಸಿನ ಹಗ್ಗವಾಗಿ, ಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ದುರ್ಯೋಧನನ ರಥದ ಧ್ವಜದ ಚಿಹ್ನೆಯಾಗಿ, ಪ್ರತಿಯೊಬ್ಬರಲ್ಲಿಯೂ ಇರುವ ಷಟ್ಚಕ್ರದ ಕುಂಡಲಿನೀ ಶಕ್ತಿಯ ಪ್ರತೀಕವಾಗಿ, ತ್ರೇತಾಯುಗದ ಲಕ್ಷ್ಮಣ- ದ್ವಾಪರಯುಗದ ಬಲರಾಮ, ಕೃತಯುಗದ ಸುಬ್ರಹ್ಮಣ್ಯನ ಅವತಾರ ಸ್ವರೂಪಿಯಾದ ಸರ್ಪವು ಭಾರತೀಯರಾದ ನಮಗಷ್ಟೇ ಅಲ್ಲ, ನೇಪಾಳ, ಇಂಡೋನೇಷ್ಯಾ ಮುಂತಾದ ರಾಷ್ಟ್ರದವರಿಗೂ ಪೂಜಾರ್ಹವಾಗಿದೆ.

ನಿರ್ಣಯ ಸಿಂಧುವಿನ ಪ್ರಕಾರ

ಶ್ರಾವಣೇ ಪಂಚಮೀ ಶುಕ್ಲಾ ಸಂಪೋ›ಕ್ತಾ ನಾಗಪಂಚಮೀ |

ತಾಂಪರಿತ್ಯಜ್ಯ ಪಂಚಮ್ಯಶ್ಚತುರ್ಥಿ ಸಹಿತಾಹಿತಾಃ ||

ಸರ್ಪಗಳ ಆರಾಧನೆಗೆ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮೀ ಪ್ರಶಸ್ತ ದಿನವಾಗಿದ್ದು, ಇದನ್ನು ನಾಗಪಂಚಮಿಯಾಗಿ ಆಚರಿಸುವರು.

ಪೌರಾಣಿಕ ಹಿನ್ನೆಲೆ: ಸರ್ಪಗಳ ಆರಾಧನೆ ವೇದಕಾಲದಿಂದಲೂ ಇದೆ. ಋಗ್ವೇದದಲ್ಲಿ ಸರ್ಪಸೂಕ್ತವಿದೆ. ಕೃಷ್ಣ ಯಜುರ್ವೆದದಲ್ಲಿ

ನಮೋಸ್ತು ಸರ್ಪೆಭ್ಯೋ ಯೇ ಕೇಚ ಪೃಥಿವೀಮನು|

ಯೇಂತರಕ್ಷೇ ಯೇ ದಿವಿ ತೇಭ್ಯಃ ಸರ್ಪಭ್ಯೋ ನಮಃ||

ಅಂದರೆ ಭುವಿ ದಿವಿ ಅಂತರಿಕ್ಷಗಳಲ್ಲಿರುವ, ಅಶ್ವತ್ಥ ವಟವೃಕ್ಷ ಗಳಲ್ಲಿರುವ, ನೀರಿನಲ್ಲಿರುವ ಎಲ್ಲ ಸರ್ಪಗಳಿಗೆ ನಮಸ್ಕಾರ ಎಂದು ಸ್ತುತಿ ಮಾಡಿ, ಅವು ನಮ್ಮ ಇಷ್ಟಾರ್ಥ ನೆರವೇರಿಸಲಿ ಎಂದು ಪ್ರಾರ್ಥಿಸಲಾಗಿದೆ. ಕಾಳಿಂಗ ಎನ್ನುವ ಸರ್ಪವು ನಂದಗೋಕುಲ ಸಮೀಪ ಹರಿಯುವ ಯಮುನಾ ನದಿಯಲ್ಲಿ ವಾಸವಾಗಿತ್ತು. ಕಾಳಿಂಗನಿಂದಾಗಿ ನದಿ ನೀರು ವಿಷವಾಗಿ ಗೋಕುಲ ನಿವಾಸಿಗಳಿಗೆ ತೊಂದರೆಯಾಗಿತ್ತು. ಕೃಷ್ಣನು ಕಾಳಿಂಗನನ್ನು ಮರ್ದಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಕೃಷ್ಣನು ಕಾಳಿಂಗನಿಗೆ ಅಭಯವಿತ್ತು ಅಲ್ಲಿಂದ ಕಳುಹಿಸಿದ. ‘ಯಾರು ಈ ದಿನ ನಾಗನನ್ನು ಆರಾಧಿಸುವರೋ ಅವರ ಕಷ್ಟಗಳು ನಿವಾರಣೆಯಾಗುವವು’ ಎಂದು ಸಾರಿದ. ಅಲ್ಲಿಂದ ಮೊದಲುಗೊಂಡು ನಾಗಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಪರೀಕ್ಷಿತ ರಾಜನು ಸರ್ಪದಂಶನದಿಂದ ಮರಣ ಹೊಂದಿದ. ಆತನ ಮಗ ಜನಮೇಜಯ ರಾಜನು ಇದರಿಂದ ಕೋಪಗೊಂಡು ಸರ್ಪ ಕುಲವನ್ನೇ ನಾಶಪಡಿಸುತ್ತೇನೆಂದು ‘ಸರ್ಪಸತ್ರ’ವನ್ನು ಕೈಗೊಂಡ. ಆಸ್ತಿಕ ಮಹರ್ಷಿಯು ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿ ಸರ್ಪಯಜ್ಞವನ್ನು ನಿಲ್ಲಿಸಿದ. ಜನಮೇಜಯನು ಸರ್ಪಯಜ್ಞ ನಿಲ್ಲಿಸಿದ ದಿನವೇ ಪಂಚಮಿಯಾಗಿತ್ತು.

ಆಚರಣೆ ವಿಧಾನ: ನಾಗಪಂಚಮಿಯಂದು ಪ್ರಾತಃಕಾಲದಲ್ಲಿ ನಿತ್ಯ ಕರ್ಮ ಸ್ನಾನ ಪೂರೈಸಿ, ನಾಗಬನದ ನಾಗಸನ್ನಿಧಿಗೆ ತೆರಳಿ ಅಲ್ಲಿಯ ಹುತ್ತ, ನಾಗವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡಿ, ಅರಿಶಿಣ- ರಕ್ತಚಂದನ ಲೇಪಿಸಿ, ಹೂವಿನಿಂದ ಅಲಂಕರಿಸಿ, ಅಕ್ಕಿ ಹಿಟ್ಟಿನಿಂದ ಮಾಡಿದ ರೊಟ್ಟಿ, ಸಿಹಿ ಕಜ್ಜಾಯ, ಅರಳು, ಹಾಲು- ಹಣ್ಣು- ಕಾಯಿಯನ್ನು ನೈವೇದ್ಯ ಮಾಡುವುದಲ್ಲದೆ, ತೆಂಗಿನ ಗರಿಯಿಂದ ಮಾಡಿದ ಸರ್ಪಾಕೃತಿಯನ್ನು ಸಮರ್ಪಿಸಿ, ಭಕ್ತಿ-ಶ್ರದ್ಧೆಯಿಂದ ಪ್ರಾರ್ಥಿಸುವರು. ಹೀಗೆ ನಾಗವನ್ನು ಪೂಜಿಸಿದರೆ,

ಯೇ ತಸ್ಯಾಂ ಪೂಜಯಂತೀಹ ನಾಗನ್ ಭಕ್ತಿಪುರಃಸರಾಃ |

ನ ತೇಷಾಂ ಸರ್ಪತೋ ವೀರ ಭಯಂಭವತಿ ಕುತ್ರಚಿತ್ ||

(ನಿರ್ಣಯ ಸಿಂಧು)

ನಾಗದೇವರು ನಮ್ಮೆಲ್ಲ ಇಷ್ಟಾರ್ಥಗಳನ್ನು ಈಡೇರಿಸುವುದಲ್ಲದೆ ವಿಷಬಾಧೆ, ಚರ್ಮರೋಗವನ್ನು ಹೋಗಲಾಡಿಸುವುದು, ಸಂತಾನಪ್ರಾಪ್ತಿ-ಧನಪ್ರಾಪ್ತಿ ಉಂಟಾಗಿ, ನಾಗನ ಅನುಗ್ರಹದಿಂದ ವರ್ಷಪೂರ್ತಿ ಸುಖ, ಸಂತೋಷ ನೆಲೆಸುವುದೆಂಬ ನಂಬಿಕೆ ಇದೆ. ಇನ್ನು ನಾಗಪಂಚಮಿ ವ್ರತ ಆಚರಿಸುವವರು, ಚತುರ್ಥಿ ದಿನ ವ್ರತ ಸಂಕಲ್ಪಿಸಿ, ಒಂದು ಹೊತ್ತು ಮಾತ್ರ ಆಹಾರ ಸ್ವೀಕರಿಸಿ, ನಾಗಪಂಚಮಿ ದಿನ ಪೂರ್ಣ ಉಪವಾಸವಿದ್ದು ನಾಗನನ್ನು ಪೂಜಿಸಿ, ರಾತ್ರಿ ಆಹಾರ ಸ್ವೀಕರಿಸುವರು. ಭಾರತದ ವಿವಿಧ ಭಾಗಗಳಲ್ಲಿ ಅಲ್ಲಿಯ ಸ್ಥಳೀಯ ಸಂಪ್ರದಾಯಕ್ಕೆ ಅನುಗುಣವಾಗಿ ಆಚರಣೆ ಭಿನ್ನ ಭಿನ್ನವಾಗಿದೆ. ಕೆಲವು ಭಾಗಗಳಲ್ಲಿ ಮನೆಯ ಮುಖ್ಯದ್ವಾರದ ಎರಡೂ ಪಾರ್ಶ್ವದಲ್ಲಿ ಗೋಮಯದಿಂದ ನಾಗನ ಚಿತ್ರ ಬರೆದು ಹಾಲು- ದೂರ್ವೆ- ದರ್ಭೆ- ಚಂದನ- ಹೂವುಗಳಿಂದ ಪೂಜಿಸುವರು. ಇನ್ನು ಕೆಲ ಕಡೆ ನಾಗನ ಬೆಳ್ಳಿ- ಬಂಗಾರದ ಪ್ರತಿಮೆಯನ್ನು ಪೂಜಿಸಿ ಕೃತಾರ್ಥರಾಗುವರು. ಉತ್ತರ ಕರ್ನಾಟಕದ ಭಾಗದಲ್ಲಿ ಈ ದಿನ ಸಹೋದರರು, ತಮ್ಮ ವಿವಾಹಿತ ಸಹೋದರಿಯನ್ನು ತವರಿಗೆ ಕರೆದು ಸತ್ಕರಿಸುವ ಸಂಪ್ರದಾಯವಿದೆ.

ವೈಜ್ಞಾನಿಕ ದೃಷ್ಟಿಕೋನ: ಶಾಸ್ತ್ರದಲ್ಲಿ ನಾಗಪಂಚಮಿಯಂದು ನಾಗವಿಗ್ರಹಕ್ಕೆ ಹಾಲಿನಿಂದ ಅಭಿಷೇಕ ಮಾಡಲು ಮಾತ್ರ ಹೇಳಿದ್ದಾರೆಯೇ ಹೊರತು, ಜೀವಂತ ಸರ್ಪಕ್ಕೆ ಹಾಲನ್ನು ಕುಡಿಸಲು ಎಲ್ಲಿಯೂ ಹೇಳಿಲ್ಲ. ಸರ್ಪ ಹಾಲನ್ನು ಕುಡಿದರೆ, ಅದಕ್ಕೆ ಅಜೀರ್ಣವಾಗಿ ಸಾಯಲೂಬಹುದು. ಆದ್ದರಿಂದ ಸರ್ಪಕ್ಕೆ ಹಾಲನ್ನು ಕುಡಿಸಿದ ಪುಣ್ಯಕ್ಕೆ ಬದಲಾಗಿ, ಸರ್ಪ ವಧೆ ಮಾಡಿದ ದೋಷವೇ ಅಧಿಕವಾಗಿ, ಮತ್ತೊಂದು ಅನರ್ಥಕ್ಕೆ ಕಾರಣವಾಗುವುದು. ಸರ್ಪವನ್ನು ಹಿಂಸಿಸಬಾರದು, ಕೊಲ್ಲಬಾರದು. ಸರ್ಪವನ್ನು ವಧಿಸಿದರೆ, ವಧಿಸಿದವರ ಕುಟುಂಬದಲ್ಲಿ ಮುಂದೆ ಕ್ಷೀಣ ಸಂತಾನ ಅಥವಾ ಸಂತಾನವೇ ಆಗದು ಎಂಬ ನಂಬಿಕೆ ವ್ಯಾಪಕವಾಗಿದೆ.

ಸರ್ಪವನ್ನು ಕೊಲ್ಲುವಾಗ, ಆ ಸರ್ಪವು ಕೊಂದವನನ್ನು ಉದ್ದೇಶಿಸಿ ನೋವಿನಿಂದ ಶಪಿಸುವುದು ಒಂದು ಕಡೆಯಾದರೆ, ಅದು ಸಾಯುವಾಗ ಸೂಸುವ ಅಥವಾ ಹೊರ ಹಾಕುವ ಪ್ರಭಾವವು ಕೊಂದವನ ವಂಶವಾಹಿನಿ ಮೇಲೆ ನೇರ ಪರಿಣಾಮ ಬೀರುವುದಲ್ಲದೆ, ಆತನ ಮುಂದಿನ ತಲೆಮಾರಿಗೂ ಮುಂದುವರಿಯುವುದು. ಅದಕ್ಕಾಗಿ ಯಾವುದೇ ಕಾರಣದಿಂದ ಸರ್ಪ ಮರಣ ಹೊಂದಿದರೂ, ಅದರ ಕೆಟ್ಟ ಪರಿಣಾಮ ಸಮೀಪ ಹೋದ ಎಲ್ಲರ ಮೇಲೆ ಆಗುವುದು ಎಂಬ ಕಾರಣಕ್ಕೆ ಮೃತ ಸರ್ಪವನ್ನು ದಹನ ಮಾಡಿದರೆ (ಸರ್ಪಸಂಸ್ಕಾರ) ಪುಣ್ಯ ಎಂದು ಧಾರ್ವಿುಕತೆಯ ಒಟ್ಟಿಗೆ ಜೋಡಿಸಿದರು. ಈ ರೀತಿಯದಾದ ಸರ್ಪ ಸಂಬಂಧಿ ದೋಷ ಪರಿಹಾರಕ್ಕಾಗಿ ನಾಗಪ್ರತಿಷ್ಠೆ, ಸರ್ಪಸಂಸ್ಕಾರ, ಆಶ್ಲೇಷಬಲಿ ಇತ್ಯಾದಿ ವಿಧಾನಗಳನ್ನು ಶಾಸ್ತ್ರ ಸೂಚಿಸಿದ್ದು. ಇದರಿಂದ ಅನೇಕರು ಪರಿಹಾರ ಪಡೆದುಕೊಂಡಿದ್ದೂ ಇದೆ. ಭಾರತೀಯ ಪರಂಪರೆಯ ಆಸ್ತಿಕರಾದ ನಮಗೆ ನಾಗರೆಂದರೆ ಕೇವಲ ಸಾಮಾನ್ಯ ಸರೀಸೃಪ ಅಲ್ಲ, ಅದು ದೈವೀಗುಣವನ್ನು ಹೊಂದಿರುವ ಶಕ್ತಿಯಾಗಿದೆ.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net