ಸಮುದ್ರ ಪಂಪಿಗೆ ಸಿಕ್ಕಿಲ್ಲ ರಿಪೇರಿ ಭಾಗ್ಯ

ವಿಜಯವಾಣಿ (4)
Published on

ಆಸ್ಟ್ರೇಲಿಯಾದ ಕಡಲತೀರವೊಂದರಲ್ಲಿ 2024ರ ನವಂಬರ್ ತಿಂಗಳಿನ ಎರಡನೇ ವಾರದಲ್ಲಿ ವಿರಮಿಸುತ್ತಿದ್ದ ಜನರಿಗೆ ದೂರದಲ್ಲಿ ಹಡಗೊಂದು ತನ್ನ ಕೊಳಚೆ ಟ್ಯಾಂಕ್​ನಿಂದ ನೀರನ್ನು ಹೊರಬಿಡುತ್ತ ಬಿಂದಾಸ್ ಆಗಿ ಓಡಾಡುತ್ತಿರುವುದು ಕಂಡು ಬಂತು. ಇದನ್ನು ಸ್ಥಳೀಯರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು. ಆದರೆ, ಅವರುಗಳು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಅದೊಂದು ‘ವ್ಹೇಲ್ ಎಕ್ಸ್’ ಎಂಬ ಸಂಸ್ಥೆಯೊಡನೆ ಅಲ್ಲಿನ ಸರ್ಕಾರವು ಸಾಗರದಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆಯ ಭಾಗವಾಗಿತ್ತು.

ಸಾಗರದಲ್ಲಿ ಮೈಕ್ರೋ ಪ್ಲಾಸ್ಟಿಕ್ ಮತ್ತು ತೈಲ ಸೋರಿಕೆಯಿಂದ ಆಗುತ್ತಿರುವ ಭಾನಗಡಿಗಳಿಂದ ಸಾಗರವನ್ನು ಮಲಿನಮುಕ್ತವನ್ನಾಗಿಸಲು ಹಲವು ದೇಶಗಳು, ಸಂಘಸಂಸ್ಥೆಗಳು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಇಂತಹುದರಲ್ಲಿ ಸರ್ಕಾರಿ ಪ್ರಾಯೋಜಕತ್ವದಲ್ಲಿ ಮತ್ತೆ ಕೊಳಚೆಯನ್ನು ಸೇರಿಸುವ ದರ್ದು ಏಕೆ ಬಂತು ಎಂಬ ಪ್ರಶ್ನೆಗೆ ಉತ್ತರ ನಮ್ಮನ್ನು ಸಾಗರದ ತಳಕ್ಕೆ ಕರೆದುಕೊಂಡು ಹೋಗುತ್ತದೆ.

‘ಇದ್ರೂ ಸಾವಿರ ಬಿದ್ರೂ ಸಾವಿರ’ ಇದು ಬದುಕಿದಾಗಲೂ ಮತ್ತು ಮರಣಾನಂತರವೂ ಬಹುಪಯೋಗಿಯಾಗಿರುವ ಆನೆಯ ಕುರಿತು ಬಳಸಲಾಗುವ ಪ್ರಸಿದ್ಧ ನುಡಿಗಟ್ಟು. ಮೌಲ್ಯದ ದೃಷ್ಟಿಯಿಂದ ನೋಡಿದಾಗ ಆನೆಗಳು ಭೂಮಿಗಾದರೆ ತಿಮಿಂಗಲಗಳು ಸಾಗರಕ್ಕೆ. ಆದರೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಹಲವು ತೊಂದರೆಗಳ ನಡುವೆಯೂ ಆನೆಗಳ ಪರಿಸ್ಥಿತಿ ತಿಮಿಂಗಲಗಳಿಗಿಂತ ಉತ್ತಮವಾಗಿದೆ. ಆರ್ಕ್ಟಿಕ್​ನ ಕೊರೆಯುವ ತಣ್ಣಗಿನ ನೀರಿನ ಸಾಗರದಿಂದ ಭೂಮಧ್ಯ ರೇಖೆಯ ಬೆಚ್ಚಗಿನ ನೀರಿನ ತನಕ ಆರಾಮವಾಗಿ ಓಡಾಡಿಕೊಂಡಿದ್ದ ಸುಮಾರು ಎಪ್ಪತ್ತು ಜಾತಿಯ ತಿಮಿಂಗಲಗಳ ಸಂಖ್ಯೆ ಇದೀಗ ಮಾನವನ ಶಿಕಾರಿಯ ಕಾರಣ ಕುಸಿಯುತ್ತಿದೆ. ಅದರಲ್ಲೂ ಕೆಲವು ಜಾತಿಯ ತಿಮಿಂಗಲಗಳಂತೂ ತಮ್ಮ ಕೊನೆಯ ದಿನಗಳನ್ನೆಣಿಸುತ್ತಿವೆ.

ಮಾನವನಿಂದ ತಿಮಿಂಗಲಗಳ ಶಿಕಾರಿಗೆ ದೊಡ್ಡ ಇತಿಹಾಸವೇ ಇದೆ. ಸುಮಾರು ಸಾವಿರ ವರ್ಷಗಳ ಹಿಂದೆ ಡೆನ್ಮಾರ್ಕಿನ ಭಾಗವಾಗಿರುವ ಗ್ರೀನ್​ಲ್ಯಾಂಡ್ ಪ್ರದೇಶದಲ್ಲಿ ವಿಪರೀತ ಚಳಿ ಬೀಳುತ್ತಿದ್ದ ಕಾರಣಕ್ಕೆ ಅಲ್ಲಿ ವಾಸಿಸುತ್ತಿದ್ದ ಎಸ್ಕಿಮೋಗಳನ್ನು ಸೇರಿಸಿದಂತೆ ಸ್ಥಳೀಯರಿಗೆ ಆಹಾರಕ್ಕಾಗಿ ಏನೂ ಬೆಳೆಯುವ ಸಾಧ್ಯತೆಗಳಿರಲಿಲ್ಲ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಅವರುಗಳು ಆಹಾರವಾಗಿ ಕಂಡುಕೊಂಡಿದ್ದು ತಿಮಿಂಗಲಗಳ ಮಾಂಸದ ಅಡುಗೆ. ಸಾಗರದ ಈ ಭಾಗದಲ್ಲಿ ಹೇರಳವಾಗಿ ಸಿಗುತ್ತಿದ್ದ ಈ ಸ್ತನಿಯ ಮಾಂಸದ ರುಚಿ ಕಂಡಿದ್ದೇ ಸೈ ಊಟ, ತಿಂಡಿ ಹೀಗೆ ಎಲ್ಲದಕ್ಕೂ ಅದನ್ನೇ ಬಳಸುವ ಹೊಸ ಟ್ರೆಂಡು ಸ್ಥಳೀಯರಲ್ಲಿ ಆರಂಭವಾಯಿತು. ಕಬ್ಬಿಣಾಂಶ ಮತ್ತು ಪೋ›ಟೀನ್ ಹೊಂದಿರುವ ಮಾಂಸದ ಜೊತೆಗೆ ವಿಟಾಮಿನ್ ಎ, ಸಿ ಮತ್ತು ಡಿಗಳನ್ನು ಭರಪೂರವಾಗಿ ಹೊಂದಿರುವ ಅದರ ಕೊಬ್ಬು ಸಹ ಅವರುಗಳ ತಾಟಿನಲ್ಲಿ ಖಾದ್ಯವಾಗಿ ಜಾಗ ಗಿಟ್ಟಿಸಿಕೊಂಡಿತು. ಇಷ್ಟು ಸಾಲದಕ್ಕೆ ಈ ಕೊಬ್ಬಿನಿಂದ ಮೋಂಬತ್ತಿಗಳನ್ನು ತಯಾರಿಸಬಹುದೆಂದು ಯಾರೋ ಕಂಡುಹಿಡಿದರು. ಮತ್ಯಾರೋ ತಿಮಿಂಗಲಗಳ ಮೂಳೆಗಳಿಂದ ಹಾರೆ ಪಿಕಾಸೆಯಂತಹ ಸಾಧನಗಳ ಜೊತೆಗೆ ಆತ್ಮರಕ್ಷಣೆಯ ಆಯುಧಗಳನ್ನೂ ತಯಾರಿಸಬಹುದೆಂದು ನಿರೂಪಿಸಿದರು.

ಇದು ತಿಮಿಂಗಲಗಳ ಮಾರಣಹೋಮದ ಆರಂಭವಾದರೂ ಒಂದು ಪ್ರದೇಶಕ್ಕೆ ಸೀಮಿತವಾಗಿದ್ದ ಕಾರಣ ಒಟ್ಟಾರೆಯಾಗಿ ಒಂದು ಹಂತಕ್ಕಿಂತ ಹೆಚ್ಚಿನ ಪ್ರಭಾವ ಬೀರಿರಲಿಲ್ಲ. ಆದರೆ ನಿಜವಾದ ಅರ್ಥದಲ್ಲಿ ಈ ತಿಮಿಂಗಲಗಳ ಅಂತ್ಯದ ಮುನ್ನುಡಿ ಬರೆದದ್ದು ಎರಡನೇ ಮಹಾಯುದ್ಧ. ಯುದ್ಧದ ಏಟಿಗೆ ನಲುಗಿ ಸುಸ್ತಾಗಿದ್ದ ಜಪಾನಿನಲ್ಲಿ ಆಹಾರಕ್ಕೂ ತತ್ವಾರವಾಗಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜಪಾನೀಯರಿಗೆ ತಿಮಿಂಗಲಗಳು ಸೋವಿ ಆಹಾರವಾಗಿ ಕಂಡವು. ಇದು ಭಾರಿ ಪ್ರಮಾಣದಲ್ಲಿ ತಿಮಿಂಗಲಗಳ ಹತ್ಯೆಗೆ ಕಾರಣವಾಗಿ ಜಪಾನನ್ನು ಅತಿಹೆಚ್ಚು ಪ್ರಮಾಣದಲ್ಲಿ ಅವುಗಳ ಮಾಂಸವನ್ನು ಭಕ್ಷಿಸುವ ರಾಷ್ಟ್ರಗಳ ಪಟ್ಟಿಗೆ ಸೇರಿಸಿತು. ಇದು ಎಷ್ಟರ ಮಟ್ಟಿಗೆ ಹೆಚ್ಚಿತೆಂದರೆ ಅಲ್ಲಿನ ಶಾಲೆಗಳ ಮಧ್ಯಾಹ್ನದ ಊಟದ ತಾಟಿನಲ್ಲೂ ತಿಮಿಂಗಲಗಳ ಖಾದ್ಯ ಕಂಡವು. ಈ ಸಂಪ್ರದಾಯ ಈಗಲೂ ಮುಂದುವರಿದಿದ್ದು , ಜಪಾನ್ ತಿಮಿಂಗಲಗಳ ಹತ್ಯೆ ಮತ್ತು ಮಾಂಸದ ಭಕ್ಷಣೆಯಲ್ಲಿ ಇಂದಿಗೂ ಮೊದಲ ಸ್ಥಾನದಲ್ಲಿದೆ.

ಇದು ಮಾಂಸ ಭಕ್ಷಣೆಯ ಕತೆಯಾದರೆ ತಿಮಿಂಗಲಗಳ ಕೊಬ್ಬಿನ ಬಳಕೆ ಮೇಣದ ಬತ್ತಿಯ ತಯಾರಿಕೆಯ ವ್ಯಾಪ್ತಿಯನ್ನು ಮೀರಿ ಮೋಟಾರು ತೈಲ, ಸೌಂದರ್ಯವರ್ಧಕಗಳು, ಸೋಪು ಹೀಗೆ ಹತ್ತುಹಲವು ದಿನಬಳಕೆಯ ವಸ್ತುಗಳ ತಯಾರಿಕೆಯಲ್ಲಿ ಬಳಕೆಯಾಗಿದ್ದೇ ತಡ ಈ ಎಲ್ಲ ತಯಾರಿಕಾ ಘಟಕಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುವ ಮಧ್ಯವರ್ತಿಗಳು ಹುಟ್ಟಿಕೊಂಡರು. ಇಲ್ಲಿ ಹಣ ಮಾಡಿಕೊಳ್ಳುವ ಅವಕಾಶವನ್ನು ಕಂಡ ಉದ್ಯಮಿಗಳು ಈ ದೋ ನಂಬರ್ ಜಾಲವನ್ನು ಮತ್ತಷ್ಟು ವಿಸ್ತರಿಸಿದರು. ‘ಅಗತ್ಯತೆಯೇ ಎಲ್ಲ ಆವಿಷ್ಕಾರಗಳ ತಾಯಿ’ ಎನ್ನುವುದಕ್ಕೆ ಈ ಕ್ಷೇತ್ರವು ಅಪವಾದವಾಗಲಿಲ್ಲ.

ನಾರ್ವೆ ದೇಶದ ಸ್ವೆಂಡ್ ಫಾಯ್ನ್  ಎಂಬ ಹಡಗು ವಿನ್ಯಾಸಕಾರ ಸಮುದ್ರದ ಮಧ್ಯದಲ್ಲಿ ತೇಲುತ್ತಿರುವ ಹಡಗಿನಲ್ಲಿಯೇ ದೊಡ್ಡ ತಿಮಿಂಗಲಗಳನ್ನು ಹಿಡಿದು ಅಲ್ಲಿಯೇ ಅವುಗಳನ್ನು ಕುಯ್ದು ರಫ್ತು ಮಾಡಲು ಬೇಕಾಗಿರುವ ರೀತಿಯಲ್ಲಿ ಪ್ಯಾಕಿಂಗ್ ಮಾಡುವ ವ್ಯವಸ್ಥೆಯಿರುವ ಹೊಸ ಹಡಗನ್ನೊಂದು ರೂಪಿಸಿದ. ಅಲ್ಲಿಯವರೆಗೆ ತಿಮಿಂಗಲಗಳನ್ನು ಹಿಡಿದ ನಂತರ ಮಾಂಸವನ್ನು ಸಂಸ್ಕರಿಸಲು ಸಮುದ್ರದ ತೀರದವರೆಗೆ ಕೊಂಡೊಯ್ಯಬೇಕಿದ್ದ ಕಾರಣ ಮಧ್ಯಮ ಗಾತ್ರದ ತಿಮಿಂಗಲಗಳನ್ನಷ್ಟೇ ಹಿಡಿಯುತ್ತಿದ್ದ ಶಿಕಾರಿಗಳಿಗೆ ಈ ನೂತನ ಆವಿಷ್ಕಾರದಿಂದ ಹೊಸ ಸಾಧ್ಯತೆಯೊಂದು ತೆರೆದು ಅದು ತಿಮಿಂಗಲಗಳ ಪಾಲಿಗೆ ಮತ್ತಷ್ಟು ಮಾರಕವಾಯಿತು.

ಕೆಲವು ದೇಶಗಳು ತಿಮಿಂಗಲಗಳ ಹತ್ಯೆಯನ್ನು ನಿಷೇಧಿಸಿದ್ದರೂ ಅದು ಆ ದೇಶದ ಭೂಖಂಡಕ್ಕಷ್ಟೆ ಸೀಮಿತವಾಗಿದ್ದು, ಸಾಗರವು ಆ ಕಾನೂನಿನ ವ್ಯಾಪ್ತಿಯ ಹೊರಗಿರುವ ಕಾರಣ ತೀರಕ್ಕೆ ತಿಮಿಂಗಲವನ್ನು ತರದೆ ಸಾಗರದ ಮಧ್ಯದಲ್ಲೇ ಸಂಸ್ಕರಿಸುವ ಮೂಲಕ ಕಾನೂನಾತ್ಮಕ ನ್ಯೂನತೆಯನ್ನು ಬಳಸಿ ವ್ಯವಸ್ಥಿತವಾಗಿ ತಿಮಿಂಗಲಗಳ ಬೇಟೆಯನ್ನು ನಡೆಸುವ ಸ್ವಾತಂತ್ರ್ಯವನ್ನು ಸ್ವೆಂಡ್ ಫಾಯ್್ನ ಆವಿಷ್ಕಾರವು ಶಿಕಾರಿಗಳಿಗೆ ನೀಡಿತು. ಈ ಶಿಕಾರಿಗಳ ಜಾಲವಿಂದು ದೊಡ್ಡದಾಗಿ ಬೇರು ಬಿಟ್ಟಿದೆ. ತಿಮಿಂಗಲಗಳ ಮಾಂಸದ ರಫ್ತು ಹಲವು ದೇಶಗಳ ಆರ್ಥಿಕತೆಯಲ್ಲಿ ಗಣನೀಯ ಕೊಡುಗೆ ನೀಡುತ್ತಿದೆ.

ತಿಮಿಂಗಲಗಳ ಮೇಲೆ ನಡೆದ ಈ ದೌರ್ಜನ್ಯದ ಪರಿಣಾಮದಿಂದ ಅವುಗಳ ಸಂಖ್ಯೆ ಕುಸಿಯುತ್ತ ಹೋಗಿ ಕೆಲವು ಜಾತಿಯವು ಇನ್ನೇನು ಕಣ್ಮರೆಯಾಗಲಿವೆ ಎಂಬ ವಿಷಯ ಹೊರಬಂದು ಹಲವು ಸಂಘಸಂಸ್ಥೆಗಳು ಪ್ರತಿರೋಧಿಸಿದ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳು ಇದಕ್ಕೊಂದು ಲಗಾಮು ಹಾಕುವ ಅಂತಾರಾಷ್ಟ್ರೀಯ ಕಾನೂನನ್ನು ತರುವ ನಿಟ್ಟಿನಲ್ಲಿ ಶ್ರಮಿಸಿದವು. ಇದಕ್ಕೆ ಮೊದಲು ಹಲವರಿಂದ ವಿರೋಧ ವ್ಯಕ್ತವಾದರೂ 1986ರಲ್ಲಿ ವಾಣಿಜ್ಯಿಕ ಕಾರಣಗಳಿಗಾಗಿ ತಿಮಿಂಗಲಗಳನ್ನು ಬೇಟೆಯಾಡುವುದನ್ನು ನಿಷೇಧಿಸಲಾಯಿತು. ಆದರೆ ಸಂಶೋಧನಾ ಕಾರ್ಯಗಳಿಗಾಗಿ ಅವುಗಳನ್ನು ಕೊಲ್ಲಬಹುದೆಂದು ಇದೇ ಕಾನೂನಿಗೆ ವಿನಾಯ್ತಿ ನೀಡಿ ಜಪಾನನಂತಹ ದೇಶಗಳಿಗೆ ಅನುವು ಮಾಡಿಕೊಡಲಾಗಿದೆ. ಹೀಗಾಗಿ ಈ ಕಾನೂನೇ ದುರ್ಬಲವಾಗಿದ್ದು, ತಿಮಿಂಗಲಗಳ ಸಂಖ್ಯೆ ಕುಸಿಯುತ್ತಲೇ ಸಾಗಿದೆ.

ಮುಕ್ಕಾಲು ಭೂಮಿಯನ್ನು ಆವರಿಸಿಕೊಂಡಿರುವ ಸಾಗರವು ಭೂಲೋಕದ ಅರ್ಧದಷ್ಟು ಆಮ್ಲಜನಕದ ಉತ್ಪತ್ತಿಗೆ ಕಾರಣವಾಗಿರುವುದಷ್ಟೇ ಅಲ್ಲದೆ ಭೂಮಿಯಲ್ಲಿ ಮಾನವನ ಚಟುವಟಿಕೆಯಿಂದ ಉತ್ಪತ್ತಿಯಾಗುವ ಇಂಗಾಲದ ಡೈ ಆಕ್ಸೆ ೖಡ್​ನ ಒಟ್ಟು ಶೇಕಡ ಮೂವತ್ತರಷ್ಟನ್ನು ಹೀರಿಕೊಳ್ಳುತ್ತದೆ. ಸಾಗರದ ಇಂಗಾಲದ ಡೈ ಆಕ್ಸೆ ೖಡ್​ನ ಹೀರುವಿಕೆಯಲ್ಲಿ ತಿಮಿಂಗಲಗಳದ್ದೂ ನೇರ ಮತ್ತು ಪರೋಕ್ಷವಾದ ಭೂಮಿಕೆಯಿದೆ. ಜಲಚರಗಳ ಪೈಕಿ ಹಲವು ಇಂಗಾಲದ ಡೈ ಆಕ್ಸೆ ೖಡ್​ನ್ನು ಜೀರ್ಣಿಸಿಕೊಳ್ಳುವ ಮತ್ತು ಹಿಡಿದಿಟ್ಟುಕೊಳ್ಳುವ ಕ್ಷಮತೆಯನ್ನು ಹೊಂದಿವೆ. ಅಂಥವುಗಳಲ್ಲಿ ತಿಮಿಂಗಲಗಳೂ ಒಂದು. ಸರಿಸುಮಾರು ಇನ್ನೂರರಿಂದ ಮುನ್ನೂರು ವರ್ಷಗಳ ಕಾಲ ಬದುಕುವ ತಿಮಿಂಗಲಗಳಲ್ಲಿ ಕೆಲ ಭಾರಿ ಗಾತ್ರದವು ತಮ್ಮ ದೇಹದಲ್ಲಿ ಅಂದಾಜು ಮೂವತ್ಮೂರು ಟನ್​ನಷ್ಟು ಇಂಗಾಲದ ಡೈ ಆಕ್ಸೈಡ್​ನ್ನು ಹಿಡಿದಿಟ್ಟುಕೊಳ್ಳುತ್ತವೆ.

ತಮ್ಮ ಮರಣದ ನಂತರ ಕುಸಿದು ಬಿದ್ದು ಸಮುದ್ರದ ತಳದಲ್ಲಿ ಸೇರುವ ತಿಮಿಂಗಲಗಳ ಈ ಸ್ವಭಾವಕ್ಕೆ ತಿಮಿಂಗಲ ಪತನ ಎಂದರೆ ‘ವ್ಹೇಲ್ ಫಾಲ್’ ಎಂದು ಹೆಸರು. ಅವುಗಳ ವಿಶೇಷವೆಂದರೆ ಬಿದ್ದಲ್ಲೇ ನಿಧಾನವಾಗಿ ಕೊಳೆಯುವ ಅವುಗಳು ಮರಣಾನಂತರವೂ ತಮ್ಮ ದೇಹದಲ್ಲಿರುವ ಇಂಗಾಲದ ಡೈ ಆಕ್ಸೈಡ್​ನ್ನು ತಮ್ಮಲ್ಲೇ ಕಾಪಿಟ್ಟುಕೊಳ್ಳುತ್ತವೆ. ಇದು ಸಾಗರದಲ್ಲಿ ಇಂಗಾಲದ ಡೈ ಆಕ್ಸೈಡ್​ನ ಹೀರುವಿಕೆಯಲ್ಲಿ ತಿಮಿಂಗಲಗಳ ನೇರ ಭೂಮಿಕೆಯಾದರೆ ಜೊತೆಗೆ ಮತ್ತೊಂದು ಪರೋಕ್ಷ ಪಾತ್ರವೂ ಇದೆ. ತನ್ನ ಆಹಾರಕ್ಕಾಗಿ ಸಾಗರದ ತಳಭಾಗಕ್ಕೆ ಲಗ್ಗೆಯಿಟ್ಟು ಬೇಟೆಯಾಡುವ ತಿಮಿಂಗಲಗಳು ನಂತರ ಹೆಚ್ಚಿನ ಆಮ್ಲಜನಕವನ್ನು ಹೀರಿಕೊಳ್ಳಲು ಮೇಲ್ಭಾಗಕ್ಕೆ ಬರುತ್ತವೆ.

ಹೀಗೆ ಬರುವ ಈ ಜಲಚರಗಳು ಅಲ್ಲೇ ಮೂತ್ರ ಮತ್ತು ಮಲವಿಸರ್ಜನೆಯನ್ನು ಮಾಡುತ್ತವೆ. ಈ ಪ್ರಕ್ರಿಯೆಗೆ ‘ವ್ಹೇಲ್ ಪಂಪ್’ (ತಿಮಿಂಗಲ ಪಂಪು) ಎಂದು ಕರೆಯುತ್ತಾರೆ. ತಿಮಿಂಗಲಗಳು ಸಾಗರದ ತಳಭಾಗದಲ್ಲಿ ತಿಂದುಂಡುವ ಆಹಾರವು ಪೋಷಕತ್ವವನ್ನು ಹೊಂದಿರುವ ಕಾರಣಕ್ಕೆ ಅವುಗಳ ಮಲವೂ ಫಲವತ್ತಾಗಿರುತ್ತದೆ. ಈ ತ್ಯಾಜ್ಯವು ಸಮುದ್ರದಲ್ಲಿ ತೇಲುತ್ತ ಬೆಳೆಯುವ ಹುಲ್ಲು, ಪಾಚಿ ಮತ್ತು ಫೈಟೋಪ್ಲಾಂಕ್ಟನ್​ನಂತಹ ಏಕಕೋಶಜೀವಿಗಳಿಗೆ ಗೊಬ್ಬರವಾಗಿದೆ. ಫೈಟೋಪ್ಲಾಂಕ್ಟನ್ ಎಂಬ ಏಕಕೋಶಜೀವಿಯಂತೂ ಸಮುದ್ರದಲ್ಲಿ ಅತಿಹೆಚ್ಚು ಇಂಗಾಲದ ಡೈ ಆಕ್ಸೆ ೖಡ್ ಹೀರುವಿಕೆಗೆ ಕಾರಣವಾಗಿದೆ. ಹೀಗಾಗಿ ತಿಮಿಂಗಲಗಳು ಓಡಾಡಿಕೊಂಡಿರುವ ಜಾಗದಲ್ಲಿ ಹುಲ್ಲು, ಪಾಚಿ ಮತ್ತು ಏಕಕೋಶಜೀವಿಗಳು ಹುಲುಸಾಗಿ ಬೆಳೆದು ಆ ಮೂಲಕ ಇಂಗಾಲದ ಡೈ ಆಕ್ಸೈಡ್​ನ ಹೀರುವಿಕೆಗೆ ತಿಮಿಂಗಲಗಳು ಪರೋಕ್ಷವಾಗಿ ಕಾರಣವಾಗುತ್ತವೆ.

ಸಾಗರದಲ್ಲಿ ಇಂಗಾಲದ ಡೈ ಆಕ್ಸೈಡ್​ನ ಹೀರುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ತಿಮಿಂಗಲಗಳ ಸಂಖ್ಯೆ ಮಾನವನ ಹಸ್ತಕ್ಷೇಪದ ಕಾರಣ ಕುಸಿಯುತ್ತಿದ್ದಂತೆಯೇ ಅವುಗಳ ತ್ಯಾಜ್ಯದ ಮೇಲೆಯೇ ನಿರ್ಭರವಾಗಿರುವ ಹುಲ್ಲು, ಪಾಚಿ ಮತ್ತು ಫೈಟೋಪ್ಲಾಂಕ್ಟನ್​ಗಳು ಪೋಷಕತ್ವವಿಲ್ಲದೆ ಸಾಯುತ್ತಿವೆ. ಮತ್ತೊಂದೆಡೆ ತಿಮಿಂಗಲಗಳನ್ನು ಉಳಿಸುವ ಕಾನೂನಾತ್ಮಕ ಪ್ರಯತ್ನಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿವೆ. ಇಂತಹುದರಲ್ಲಿ ಸಾಗರದ ಇಂಗಾಲದ ಡೈ ಆಕ್ಸೈಡ್ ಹೀರುವಿಕೆಯ ಕ್ಷಮತೆಯನ್ನು ಉಳಿಸಲು ಬದಲಿ ಪ್ರಯೋಗಗಳಲ್ಲಿ ಈ ತ್ಯಾಜ್ಯ ವಿಸರ್ಜನೆಯೂ ಒಂದು. ಆದರೆ ಈ ಕೃತಕ ತಿಮಿಂಗಲ ತ್ಯಾಜ್ಯದ ಕ್ರಮದಿಂದ ಒಂದು ರೀತಿಯಲ್ಲಿ ಸಮುದ್ರದ ಮಾಲಿನ್ಯವೇ ಆಗಿರುವುದರಿಂದ ಇದಕ್ಕೆ ಕಾನೂನು ತೊಡಕುಗಳು ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚೆಂಬುದು ಪರಿಣತರ ಅಂಬೋಣ. ಒಟ್ಟಿನಲ್ಲಿ ಕೆಟ್ಟಿರುವ ಸಮುದ್ರದ ಪಂಪು ರಿಪೇರಿಯಾಗುವ ಕಾಲ ಮತ್ತಷ್ಟು ದೂರವಾಗುವ ಸಾಧ್ಯತೆಗಳೇ ಹೆಚ್ಚಾಗಿದೆ.

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net