

| ವಿ.ಕೆ.ರವೀಂದ್ರ ಕೊಪ್ಪಳ
ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ನೆರವಾಗಲು 108 ಆಂಬುಲೆನ್ಸ್ಗಳಿವೆ. ಇದೇ ಮಾದರಿಯಲ್ಲಿ ಪಶುಗಳ ತುರ್ತು ಚಿಕಿತ್ಸೆಗೆ ನೆರವಾಗಲು ಪಶು ಸಂಜೀವಿನಿ ಯೋಜನೆ ರೂಪಿಸಲಾಗಿತ್ತು. ಆದರೆ ಸರ್ಕಾರದ ನಿರಾಸಕ್ತಿ ಪರಿಣಾಮವಾಗಿ ಯೋಜನೆ ಪ್ರಯೋಜನವಿಲ್ಲದಂತಾಗಿದೆ. ತರಾತುರಿಯಲ್ಲಿ ಆಂಬುಲೆನ್ಸ್ ಖರೀದಿಸಿರುವ ಸರ್ಕಾರ ಸಿಬ್ಬಂದಿ ನೇಮಿಸದ ಕಾರಣ ವಾಹನಗಳು ನಿಂತಲ್ಲೇ ಧೂಳು ಹಿಡಿಯುವಂತಾಗಿದೆ. ಕಳೆದೆರೆಡು ತಿಂಗಳಿಂದ ರಾಜ್ಯಾದ್ಯಂತ ಚರ್ಮಗಂಟು ರೋಗ ಜಾನುವಾರುಗಳನ್ನು ಬೆಂಬಿಡದೆ ಕಾಡುತ್ತಿದೆ. ರೋಗ ನಿಯಂತ್ರಣ ನೆಪದಲ್ಲಿ ಜಾನುವಾರು ಸಂತೆಗೆ ಬ್ರೇಕ್ ಹಾಕಲಾಗಿದೆ. ರಾಸುಗಳನ್ನು ಇತ್ತ ಇಟ್ಟುಕೊಳ್ಳಲಾಗದೆ, ಅತ್ತ ಮಾರಲೂ ಆಗದೆ ರೈತರು ಪರಿತಪಿಸುತ್ತಿದ್ದಾರೆ.
ಪಶುಪಾಲನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಗ್ರಾಮೀಣ ಜಾನುವಾರುಗಳಿಗೆ ಚಿಕಿತ್ಸೆ ಲಭಿಸುತ್ತಿಲ್ಲ. 400 ಪಶು ವೈದ್ಯರನ್ನು ನೇಮಿಸುವುದಾಗಿ ಕಳೆದೆರೆಡು ವರ್ಷದಿಂದ ಭರವಸೆ ನೀಡುತ್ತಿರುವ ಸರ್ಕಾರ ಭರ್ತಿ ಮಾಡುತ್ತಿಲ್ಲ. ಕಳೆದ ಜುಲೈನಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ವಿವಿಧೆಡೆ ಯೋಜನೆ ಜಾಹೀರಾತುಗಳಷ್ಟೇ ಜನರ ಕಣ್ಣಿಗೆ ಕಾಣುತ್ತಿದ್ದು, ಸೇವೆ ದೊರೆಯುತ್ತಿಲ್ಲ. 108 ಮಾದರಿಯಲ್ಲಿ ಕಾಲ್ ಸೆಂಟರ್ ರಚಿಸಿದ್ದು, ಜಾನುವಾರು ತುರ್ತು ಸಂದರ್ಭದಲ್ಲಿ ರೈತರು 1962 ಸಂಖ್ಯೆಗೆ ಕರೆ ಮಾಡಿದಲ್ಲಿ ಅವರು ಇರುವೆಡೆ ಸಂಜೀವಿನಿ ವಾಹನ ತೆರಳಿ ಚಿಕಿತ್ಸೆ ನೀಡಲಿದೆ. ಪ್ರತಿ ವಾಹನದಲ್ಲಿ ಪಶು ವೈದ್ಯ, ಸಹಾಯಕ ಹಾಗೂ ಚಾಲಕ ಇರಬೇಕು. ವಾಹನ ಲೋಕಾರ್ಪಣೆಯಾಗಿ 4 ತಿಂಗಳು ಕಳೆದರೂ ಸಿಬ್ಬಂದಿ ನೇಮವಾಗಿಲ್ಲ.
ಮುಂದೆ ಬಾರದ ಏಜೆನ್ಸಿಗಳು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಯೋಜನೆ ರೂಪುಗೊಂಡಿದ್ದು, ಅನ್ಯ ರಾಜ್ಯಗಳಲ್ಲಿ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಿಸಲಾಗಿದೆ. ಒಂದು ವಾಹನಕ್ಕೆ ಮೂವರು ಸಿಬ್ಬಂದಿ ಇರುವ ಕಾರಣ ಪ್ರತಿ ತಿಂಗಳು ಕೋಟ್ಯಂತರ ರೂ. ವಹಿವಾಟು ನಡೆಸಬೇಕಿದೆ. ಈ ಕಾರಣಕ್ಕೆ ರಾಜ್ಯದಲ್ಲಿ ಗುತ್ತಿಗೆ ಪಡೆಯಲು ಏಜೆನ್ಸಿಗಳು ಮುಂದೆ ಬರುತ್ತಿಲ್ಲ. ಈಗಾಗಲೆ ಎರಡು ಬಾರಿ ಟೆಂಡರ್ ಕರೆದರೂ ಒಂದೇ ಸಂಸ್ಥೆ ಅರ್ಜಿ ಸಲ್ಲಿಸಿದ್ದರಿಂದ ತಿರಸ್ಕಾರಗೊಂಡಿದೆ.