ನಿಮ್ಮ ಕೈಲೇ ಇದೆ ಉಳಿತಾಯ ಮಂತ್ರ

Putani
Published on

ದೊಡ್ಡವರು ಮಾತ್ರ ಹಣ ಉಳಿತಾಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು ಎಂದಿಲ್ಲ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಮಾತಿಗೆ ಪೂರಕವಾಗಿ ಚಿಕ್ಕಂದಿನಿಂದಲೇ ಉಳಿತಾಯ, ಮಿತವ್ಯಯದ ಪಾಠ ಕಲಿತರೆ ದೊಡ್ಡವರಾದಾಗ ದೊಡ್ಡ ಮಟ್ಟದಲ್ಲಿ ಉಳಿತಾಯದ ಹಾದಿ ಹಿಡಿಯಬಹುದು. ಮಕ್ಕಳು ಯಾವ ರೀತಿಯಲ್ಲಿ ಉಳಿತಾಯ ಮಾಡಬಹುದು, ಹೇಗೆ ಮಿತವ್ಯಯದ ಪಾಲನೆ ಮಾಡುವುದು ಎಂಬ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.

ದುಡ್ಡು ಕೈಗೆ ಬಂದ್ರೆ ಸಾಕು ಬೇಕುಗಳ ಪಟ್ಟಿ ದೊಡ್ಡದಾಗಿಬಿಡುತ್ತದೆ. ಟಾಯ್ ತಗೋಬೇಕು, ಚಾಕೊಲೇಟ್ ತಗೊಬೇಕು ಎಂಬಿತ್ಯಾದಿ ಆಸೆ ಮೂಡುವುದು ಕೂಡ ಸಹಜ. ಆದರೆ, ಬೇಕುಗಳಿಗೆ, ಆಸೆಗಳಿಗೆ ಕೊಂಚ ಬ್ರೇಕ್ ಹಾಕಿದ್ರೆ ಪಾಕೆಟ್ ಮನಿ ಪೋಲಾಗೋದನ್ನು ತಡೆಯಬಹುದು. ಪಾಕೆಟ್ ಮನಿ ಉಳಿಸಿದ್ರೂ ಲಕ್ಷಾಧೀಶರಾಗಬಹುದು. ಕೆಲವು ಬ್ಯಾಂಕುಗಳಲ್ಲಿ ಮಕ್ಕಳಿಗಾಗಿಯೇ ಇಂತಹ ಉಳಿತಾಯ ಖಾತೆಗಳಿವೆ. ಇಂತಹ ಬ್ಯಾಂಕ್ ಖಾತೆ ತೆರೆದು ಪ್ರತಿ ತಿಂಗಳ ಪಾಕೆಟ್ ಮನಿ ಅಲ್ಲಿ ಠೇವಣಿ ಇರಿಸಲು ಅಪ್ಪ-ಅಮ್ಮನಿಗೆ ಹೇಳಿ. ಶಾಲೆ ಮುಗಿಯುವ ಹೊತ್ತಿಗೆ ನೀವು ಲಕ್ಷಾಧೀಶರಾಗಬಹುದು.

ನಿಮ್ಮ ಕೈಲಿ ಈಗ ಅಪ್ಪ-ಅಮ್ಮ ಕೊಟ್ಟ ಪಾಕೆಟ್ ಮನಿ 1,000 ರೂಪಾಯಿ ಇದೆ ಅಂತ ಇಟ್ಕೊಳ್ಳಿ. ಇದನ್ನು ಹಾಗೆಯೇ ಉಳಿಸಿದ್ರೆ ನೀವು ಹತ್ತನೇ ತರಗತಿ ಮುಗಿಸುವ ಹೊತ್ತಿಗೆ ಎಷ್ಟು ದುಡ್ಡು ಉಳಿತಾಯ ಆಗಿರುತ್ತೆ?

ನಿಮ್ಮ ಹತ್ರ ಇರುವ ದುಡ್ಡು - 1,000 ರೂಪಾಯಿ

ಪ್ರತಿ ತಿಂಗಳ ಪಾಕೆಟ್ ಮನಿ - 500 ರೂಪಾಯಿ

ಎಷ್ಟು ವರ್ಷ ಹಣ ಉಳಿಸ್ತೀರಿ- 10 ವರ್ಷ

ಉಳಿತಾಯ ಎಷ್ಟು - 61,000 ರೂಪಾಯಿ.

ಇದೇ ಹಣವನ್ನು ಸರಾಸರಿ ಶೇಕಡ 10ರಷ್ಟು ಬಡ್ಡಿ ಒದಗಿಸುವ ಮ್ಯೂಚುವಲ್ ಫಂಡ್ ಉತ್ಪನ್ನದಲ್ಲಿ ವ್ಯವಸ್ಥಿತವಾಗಿ ಹೂಡಿಕೆ ಮಾಡಿದ್ರೆ ಎಷ್ಟಾಗಬಹುದು? ಆಗ ಉಳಿತಾಯದ ಹಣ - 1,07,781 ರೂಪಾಯಿ. ಅಂದರೆ ಬಡ್ಡಿಯಾಗಿ ಸಿಕ್ಕಿದ ಹಣ - 46,781 ರೂಪಾಯಿ. ಇದರ ಹೊರತಾಗಿ, ಶಾಲೆಗಳಲ್ಲಿ ಸಂಚಯಿಕಾ ಎಂಬ ಸ್ಕೂಲ್ ಬ್ಯಾಂಕಿಂಗ್ (ಸರ್ಕಾರದ ಯೋಜನೆ) ಜಾರಿಯಲ್ಲಿದ್ದರೆ ಇಲ್ಲೂ ನೀವು ಖಾತೆ ತೆರೆದು ಹಣ ಉಳಿಸಬಹುದು. ಇದಕ್ಕೆ ಶಾಲೆಯಲ್ಲಿ ಮುಖ್ಯಶಿಕ್ಷಕರನ್ನು ಭೇಟಿ ಮಾಡಿ ಮಾಹಿತಿ ಪಡೆಯುವುದು ಉತ್ತಮ.

ಸಾಮಾನ್ಯವಾಗಿ ಎಲ್ಲ ಬ್ಯಾಂಕ್ ಗಳಲ್ಲೂ ಮಕ್ಕಳಿಗಾಗಿ ಆರ್ ಡಿ ಅಕೌಂಟ್ ತೆರೆಯಲು ಅವಕಾಶ ಇರುತ್ತದೆ. ಇದಕ್ಕೆ ಇಂತಿಷ್ಟೇ ಹಣ ಹಾಕಬೇಕೆಂದೇನಿಲ್ಲ. ಅಲ್ಲದೇ ವಿಮಾ ಸಂಸ್ಥೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆಂದೇ ಸಾಕಷ್ಟು ಯೋಜನೆಗಳಿರುತ್ತವೆ. ಅಲ್ಲಿ ಪ್ರತಿ ವರ್ಷ ಇಂತಿಷ್ಟು ಹಣವನ್ನು ಸೇವ್ ಮಾಡಬಹುದು. ಮಕ್ಕಳಿಗೆ 18 ವರ್ಷ ಆಗುವಾಗ ಉತ್ತಮ ಮೊತ್ತ ಕೈ ಸೇರುತ್ತದೆ. ಇನ್ನು, ಪಾಲಕರು ಮಕ್ಕಳ ಮುಂದೆ ತಮ್ಮ ಆಸ್ತಿ ಪ್ರದರ್ಶನ ಮಾಡುವ ಗೋಜಿಗೆ ಹೋಗದೆ ತಾವು ನೀಡಿದ ಪಾಕೆಟ್ ಮನಿಯ ಲೆಕ್ಕ ಕೇಳುವುದು ಒಳಿತು. | ಸಿಎ ನಾರಾಯಣ ಭಟ್ ಬೆಂಗಳೂರು

ಪುಟಾಣಿಗಳಿಗೆ ಮಿತವ್ಯಯದ ಟಿಪ್ಸ್

* ಹಿಂದಿನ ವರ್ಷ ಬಳಸಿದ ಪುಸ್ತಕದಲ್ಲಿ ಉಳಿದ ಹಾಳೆಗಳನ್ನು ಪ್ರತ್ಯೇಕಿಸಿ ರಫ್ ಬರವಣಿಗೆಗೆ ಬಳಸಬಹುದು. ಇದರಿಂದ ಈ ವರ್ಷ ಹೊಸ ರಫ್ ನೋಟ್ ಬುಕ್ ಖರೀದಿಸುವುದು ತಪು್ಪತ್ತದೆ.

* ವರ್ಷಕ್ಕೆ ಒಂದೇ ಸ್ಕೂಲ್ ಬ್ಯಾಗ್ ಎಂಬ ಯೋಜನೆ ಹಾಕಿಕೊಂಡು, ಶಾಲಾ ಬ್ಯಾಗನ್ನು ಜಾಗೃತೆಯಿಂದ ನಿರ್ವಹಿಸಬೇಕು. ಎಲ್ಲೆಂದರಲ್ಲಿ ಬಿಸಾಕದೆ, ಬೇಕಾಬಿಟ್ಟಿ ಪುಸ್ತಕ ತುರುಕದೇ ಇದ್ದರೆ ಬ್ಯಾಗ್ ವರ್ಷ ಪೂರ್ತಿ ಖುಷಿಯಾಗಿರುತ್ತದೆ.

* ಬಹಳಷ್ಟು ಮಕ್ಕಳಿಗೆ ಪೆನ್ಸಿಲ್ ಅನ್ನು ಅನವಶ್ಯಕವಾಗಿ ಶಾರ್ಪ್ ಮಾಡುವ ಚಾಳಿ ಇರುತ್ತದೆ. ಇದನ್ನು ನಿಯಂತ್ರಿಸಿದಲ್ಲಿ ವರ್ಷಕ್ಕೆ ನಿಮಗೆ ಎಷ್ಟು ಪೆನ್ಸಿಲ್ಸ್ ಉಳಿತಾಯ ಆಗುತ್ತದೆ ಎಂಬುದನ್ನು ಯೋಚಿಸಿ!

* ಪಾಕೆಟ್ ಮನಿ ಎಂದು ನೆಂಟರು ಕೊಟ್ಟ ಉಡುಗೊರೆ ಹಣವನ್ನು ಅನವಶ್ಯಕವಾಗಿ ವ್ಯಯ ಮಾಡದೆ ಪಿಗ್ಗಿ ಬ್ಯಾಂಕ್ ಗೆ ಹಾಕುವ ಅಭ್ಯಾಸ ರೂಢಿಸಿಕೊಂಡು, ವರ್ಷಕ್ಕೊಮ್ಮೆ ಅದರಲ್ಲಿರುವ ಹಣದಿಂದಲೇ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳಬಹುದು.

* ವೀಕೆಂಡ್ ಮಾಲ್, ಶಾಪಿಂಗ್ ನಂತಹ ಅನವಶ್ಯಕ ಆಡಂಬರ ಜೀವನಕ್ಕೆ ಕೊಂಚ ಬ್ರೇಕ್ ಹಾಕಿದರೆ ನಿಮಗೆ ಅರಿವಿಲ್ಲದೇ ಸಾವಿರಾರು ರೂ. ಸಂಗ್ರಹವಾಗುತ್ತದೆ.

* ಕೆಲ ಮಕ್ಕಳಿಗೆ ಪ್ರತಿ ತಿಂಗಳಿಗೆ ಒಂದು ಹೊಸ ಬಟ್ಟೆ ಖರೀದಿಸುವ ಉಮೇದು ಇರುತ್ತದೆ. ಇದಕ್ಕೆ ಬ್ರೇಕ್ ಹಾಕಿ ಅಗತ್ಯವಿದ್ದಲ್ಲಿ ಮಾತ್ರ ಬಟ್ಟೆ ಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬಹುದು.

* ಮನೆಯಲ್ಲಿ ಅನವಶ್ಯಕವಾಗಿ ಫ್ಯಾನ್, ಲೈಟ್ ಉರಿಯುತ್ತಿದ್ದರೆ, ನಲ್ಲಿಯಲ್ಲಿ ನೀರು ಸೋರುತ್ತಿದ್ದರೆ ಅದನ್ನು ನಿಲ್ಲಿಸಿ ವಾಟರ್ ಬಿಲ್, ಕರೆಂಟ್ ಬಿಲ್ ಮಿತವಾಗಿ ಬರುವಂತೆ ಮಾಡಬಹುದು. ಇದು ನೀವು ಮನೆಗೆ ನೀಡುವ ಕೊಡುಗೆಯೂ ಆಗುತ್ತದೆ. ? ಶಾಲಾ ದಿನಗಳಲ್ಲಿ ಬರುವ ಸ್ಕಾಲರ್ ಶಿಪ್ ಗಳನ್ನು ವ್ಯಯ ಮಾಡದೆ, ಖಾತೆಯಲ್ಲೇ ಉಳಿತಾಯ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net