

ಯಾವುದೇ ಒಂದು ತತ್ತ್ವದ ಅನುಯಾಯಿಗಳು ಆಗಿಂದಾಗ್ಗೆ ಸಭೆ ಸೇರಿ ವಿಚಾರ ಹಾಗೂ ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವುದು ಸಹಜವಷ್ಟೇ. ಇದರಿಂದಾಗಿ ಆ ತತ್ತ್ವದ ಬಗ್ಗೆ ಅವರ ಜ್ಞಾನ ಹಾಗೂ ವಿಶ್ವಾಸಗಳು ವೃದ್ಧಿಯಾಗುತ್ತವೆ. ಇಂತಹ ಸಭಾಕೇಂದ್ರಗಳು ಅನುಯಾಯಿಗಳ ತತ್ತ್ವನಿಷ್ಠೆಯನ್ನು ಸಂರಕ್ಷಿಸುವುದು ಮಾತ್ರವಲ್ಲದೆ, ಆ ತತ್ತ್ವವನ್ನು ಸಮಾಜದ ಇತರರಿಗೂ ಪ್ರಸಾರ ಮಾಡುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತವೆ. ಸನಾತನ ಧರ್ಮದ ಸಂರಕ್ಷಣೆ ಹಾಗೂ ಪ್ರಸಾರ ಕಾರ್ಯದಲ್ಲಿ ದೇವಸ್ಥಾನಗಳು ಇಂತಹ ಪಾತ್ರವನ್ನು ಪ್ರಾಚೀನಕಾಲದಿಂದಲೂ ವಹಿಸುತ್ತ ಬಂದಿವೆ.
ಸನಾತನ ಧರ್ಮವು ನಿರ್ಗಣ-ನಿರಾಕಾರ ಪರಬ್ರಹ್ಮತತ್ತ್ವದ ಕುರಿತಾಗಿ ಉಪದೇಶಿಸುವುದು ಮಾತ್ರವಲ್ಲದೆ, ಅದನ್ನು ಅನೇಕ ರೂಪ-ನಾಮಗಳಲ್ಲಿ ಸಗುಣ-ಸಾಕಾರವಾಗಿ ಆರಾಧಿಸುವುದನ್ನೂ ಅಂಗೀಕರಿಸುತ್ತದೆ. ಈ ಬಗ್ಗೆ ನಾವು ಹಿಂದೆ ಪ್ರಕಟವಾದ ‘ಸನಾತನ ಧರ್ಮದಲ್ಲಿ ಸಾಕಾರ-ನಿರಾಕಾರ ಉಪಾಸನೆ’ ಎಂಬ ಲೇಖನದಿಂದ ತಿಳಿದುಕೊಂಡಿದ್ದೇವೆ. ದೇವಸ್ಥಾನಗಳ ನಿರ್ವಣದ ಪ್ರಥಮ ಉದ್ದೇಶವೆಂದರೆ, ಸಗುಣ-ಸಾಕಾರ ರೂಪದಲ್ಲಿ ಭಗವಂತನ ಆರಾಧನೆ. ದೇವಸ್ಥಾನಗಳ ನಿರ್ವಣ-ನಿರ್ವಹಣೆ ಹಾಗೂ ಪೂಜಾವಿಧಾನಗಳ ಬಗ್ಗೆ ಆಗಮಶಾಸ್ತ್ರದಿಂದ ತಿಳಿದುಕೊಳ್ಳಬಹುದು. ಆದರೆ ಈ ಲೇಖನದ ಉದ್ದೇಶ, ಸನಾತನ ಧರ್ಮದ ಸಂರಕ್ಷಣೆ ಹಾಗೂ ಪ್ರಸಾರಗಳಲ್ಲಿ ದೇವಸ್ಥಾನಗಳ ಪಾತ್ರವನ್ನು ವಿಶ್ಲೇಷಿಸುವುದಾಗಿದೆ.
ಜ್ಞಾನಕೇಂದ್ರ: ಯಾವುದೇ ತತ್ತ್ವಜ್ಞಾನವನ್ನು ಕಲಿತು ತಿಳಿದುಕೊಳ್ಳಲು ಅತ್ಯುತ್ತಮ ಸಾಧನವೆಂದರೆ, ಅದರ ಪ್ರತ್ಯಕ್ಷ ಅನುಭವ; ಇದನ್ನೇ ಅನುಭಾವವೆಂದು ಕರೆಯುತ್ತಾರೆ. ಅನುಭಾವದ ಮೂಲಕ ತತ್ತ್ವಜ್ಞಾನದ ಸತ್ಯದರ್ಶನವಾಗುತ್ತದೆ. ಇಂತಹ ಅನುಭಾವ ಪಡೆಯಲು ಸಹಕಾರಿಯಾದ ವಾತಾವರಣವನ್ನು ದೇವಸ್ಥಾನಗಳು ಸೃಷ್ಟಿಸುತ್ತವೆ. ಯಾವುದೇ ದೇವಸ್ಥಾನದಲ್ಲಿ ಪ್ರಮುಖ ಚಟುವಟಿಕೆಯೆಂದರೆ ಭಗವಂತನ ಒಂದು ರೂಪ-ನಾಮವನ್ನು ವಿಧಿ-ನಿಯಮಗಳ ಪ್ರಕಾರ ಆರಾಧಿಸುವುದು. ಜೊತೆಯಲ್ಲಿಯೇ ದೇವಸ್ಥಾನಗಳು ತತ್ತ್ವಜ್ಞಾನಪೋಷಣೆ ಹಾಗೂ ಪ್ರಸಾರಗಳ ಕೇಂದ್ರಸ್ಥಾನಗಳಾಗಿ ಸಮುದಾಯದ ಮೂಲ ಸಾಮಾಜಿಕ-ಸಾಂಸ್ಕೃತಿಕ ಸ್ವರೂಪವನ್ನು ರಕ್ಷಿಸುತ್ತ ಬಂದಿವೆ.
ದೇವಸ್ಥಾನವು ಆಯಾ ಊರಿನ ಆಧ್ಯಾತ್ಮಿಕ ಕೇಂದ್ರ ಮಾತ್ರವಲ್ಲದೆ, ಅದು ಗುರುಕುಲದ ರೂಪದಲ್ಲಿ ಶಿಕ್ಷಣ ಕೇಂದ್ರವೂ ಆಗಿತ್ತು. ಪ್ರಾಚೀನ ಕಾಲದಿಂದ, ಇಂದಿಗೆ ಎರಡು ಶತಮಾನಗಳ ಹಿಂದಿನವರೆಗೂ ಈ ವಿದ್ಯಮಾನವು ಭಾರತದಲ್ಲಿ ಸಾರ್ವತ್ರಿಕವಾಗಿ ಪ್ರಚಲಿತವಾಗಿತ್ತು. ಇಂತಹ ಗುರುಕುಲಗಳಲ್ಲಿ ಗುರು ಅಥವಾ ಆಚಾರ್ಯನು ಊರಿನ ಎಲ್ಲ ಮಕ್ಕಳಿಗೆ ಮೊದಲನೆಯ ಮೂರು ಅಥವಾ ಐದು ವರ್ಷಗಳವರೆಗೆ ಮೂಲಭೂತ ಶಿಕ್ಷಣವನ್ನು ನೀಡುತ್ತಿದ್ದ. ಸಾಕ್ಷರತೆ ಹಾಗೂ ಸಂಖ್ಯಾಜ್ಞಾನಗಳನ್ನು ಮಕ್ಕಳಲ್ಲಿ ಮೂಡಿಸುವುದೇ ಈ ಶಿಕ್ಷಣದ ಮೂಲ ಉದ್ದೇಶವಾಗಿತ್ತು. ಗುರುಕುಲದ ಈ ಶಿಕ್ಷಣದ ನಂತರ ಮಕ್ಕಳು ತಂದೆ ಅಥವಾ ಅಜ್ಜನಿಂದ ಕುಲವೃತ್ತಿಗಳನ್ನು ಕಲಿಯುತ್ತಿದ್ದರು. ರೈತನ ಮಗ ವ್ಯವಸಾಯ ಕಲಿತರೆ, ಕುಂಬಾರನ ಮಗ ಕುಂಬಾರಿಕೆ ಕಲಿಯುತ್ತಿದ್ದ. ಭಾರತೀಯ ಸಮಾಜದಲ್ಲಿ ಶಿಕ್ಷಣವು ಉಚ್ಚವರ್ಗದ ಮಕ್ಕಳಿಗೆ ಮಾತ್ರ ಸೀಮಿತವಾಗಿತ್ತೆಂದು ವಾದಿಸುವುದು ತಪ್ಪು. 1826ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಆಂಗ್ಲ ಅಧಿಕಾರಿ ಥಾಮಸ್ ಮನ್ರೊ ನಡೆಸಿದ ಸಮೀಕ್ಷೆಯಲ್ಲಿ ಇದು ವಿಶದವಾಗುತ್ತದೆ. ಬಹುಕಾಲದವರೆಗೆ ಗೌಪ್ಯವಾಗಿಡಲ್ಪಟ್ಟ ಈ ಸಮೀಕ್ಷೆಯ ವರದಿಯನ್ನು ಇತಿಹಾಸಕಾರ ಧರ್ಮಪಾಲ್ The Beautiful Tree ಕೃತಿಯಲ್ಲಿ ಪ್ರಕಟಿಸಿದ್ದಾರೆ. ಈ ವರದಿಯ ಸುಂದರ ಅಂಶವೆಂದರೆ, ದೇವಸ್ಥಾನದ ಗುರುಕುಲವು ಉಚಿತವಾಗಿ ಶಿಕ್ಷಣ ನೀಡುತ್ತಿತ್ತು. ಗುರುಕುಲ ನಿರ್ವಹಣೆಯ ವೆಚ್ಚವನ್ನು ದೇವಸ್ಥಾನವೇ ವಹಿಸಿಕೊಳ್ಳುತ್ತಿತ್ತು. ಯಾವುದೇ ಸಾಮಾಜಿಕ-ಆರ್ಥಿಕ ಭೇದಭಾವವಿಲ್ಲದೆ ಸಮಾಜದ ಎಲ್ಲ ಮಕ್ಕಳಿಗೂ ಇಂತಹ ಶಿಕ್ಷಣ ಲಭ್ಯವಾಗುತ್ತಿತ್ತು.
ಆಗ ಮದ್ರಾಸ್ ಪ್ರೆಸಿಡೆನ್ಸಿಯು ಒಡಿಶಾದ ಗಂಜಾಂ ಜಿಲ್ಲೆಯಿಂದ ಹಿಡಿದು ದಕ್ಷಿಣ ಭಾರತದ ಪ್ರದೇಶವನ್ನೆಲ್ಲ ಒಳಗೊಂಡಿತ್ತು. ಅಲ್ಲಿಯ ಜನಸಂಖ್ಯೆ 1,28,50,941. ಅಲ್ಲಿನ ಗುರುಕುಲ ಪಾಠಶಾಲೆಗಳ ಸಂಖ್ಯೆ 12,498. ಮೇಲಿನ ಸಮೀಕ್ಷೆ ಪ್ರಕಾರ ಪ್ರತಿ ಸಾವಿರ ಜನಸಂಖ್ಯೆಗೆ ಒಂದು ಪಾಠಶಾಲೆಯಿತ್ತು. ಸಾಂಪ್ರದಾಯಿಕವಾಗಿ ಗ್ರಾಮದ ಪ್ರತಿ ದೇವಸ್ಥಾನವೂ ಗುರುಕುಲ ಅಥವಾ ಮಠವನ್ನು ನಡೆಸುತ್ತಿತ್ತು. ಒಂದು ಗ್ರಾಮದಲ್ಲಿ ಸರಾಸರಿ ಶೇಕಡ 35ರಷ್ಟು ಭೂಮಿ ಆ ದೇವಸ್ಥಾನದ ಅಧೀನದಲ್ಲಿತ್ತು. ಇದಕ್ಕೆ ಯಾವುದೇ ಭೂಕಂದಾಯ ವಿಧಿಸುತ್ತಿರಲಿಲ್ಲ. ಈ ಭೂಮಿಯಿಂದ ಬರುವ ಆದಾಯದಿಂದ ದೇವಸ್ಥಾನದ ಎಲ್ಲ ಕಾರ್ಯಕ್ರಮ, ಉತ್ಸವ ಹಾಗೂ ಪಾಠಶಾಲೆಯ ವೆಚ್ಚವನ್ನು ನಿರ್ವಹಿಸಲಾಗುತ್ತಿತ್ತು. ಮಾತ್ರವಲ್ಲದೆ ಪ್ರತಿಯೊಂದು ದೇವಸ್ಥಾನದಲ್ಲಿಯೂ ‘ಸರಸ್ವತೀ ಭಂಡಾರ’ ಹೆಸರಿನ ಗ್ರಂಥಾಲಯವಿತ್ತು. ಈ ಗ್ರಂಥಾಲಯದಲ್ಲಿ ವೇದೋಪನಿಷತ್ತು ಹಾಗೂ ಇತರ ಧರ್ಮಗ್ರಂಥಗಳು ಮಾತ್ರವಲ್ಲದೆ, ಸ್ಥಳೀಯ ಸಾಹಿತ್ಯಕ್ಕೆ ಸಂಬಂಧಿಸಿದ ತಾಳೆಗರಿ ಗ್ರಂಥಗಳೂ ಇದ್ದವು.
ಐದನೆಯ ವರ್ಷದ ಐದನೆಯ ತಿಂಗಳಿನ ಐದನೆಯ ದಿನದಂದು ಮಗನನ್ನು ಗುರುಕುಲಕ್ಕೆ ಸೇರಿಸುವುದು ಮಂಗಳಕರವೆಂದು ಆಗ ಜನರು ನಂಬಿದ್ದರು. ಕೆಲವು ದೇವಸ್ಥಾನಗಳಲ್ಲಿ ವಿದ್ಯಾರ್ಥಿಗಳಿಗೆ ಆಹಾರವನ್ನು ಪ್ರಸಾದರೂಪದಲ್ಲಿ ಉಚಿತವಾಗಿ ನೀಡುತ್ತಿದ್ದರು. ಪ್ರತಿ ಕುಟುಂಬ ಮಕ್ಕಳನ್ನು ಕನಿಷ್ಠ ಮೂರು ವರ್ಷಗಳ ಕಾಲ ಗುರುಕುಲಕ್ಕೆ ಕಳುಹಿಸುತ್ತಿತ್ತು. ಈ ಅವಧಿಯಲ್ಲಿ ಪ್ರತಿ ಬಾಲಕನೂ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನಗಳನ್ನು ಕಲಿಯುತ್ತಿದ್ದ. ತದನಂತರ ತನ್ನ ಕುಲವೃತ್ತಿ ಕಲಿಯುತ್ತಿದ್ದ. ಬಾಲಕಿಯರ ಶಿಕ್ಷಣ ಸಾಮಾನ್ಯವಾಗಿ ಮನೆಯಲ್ಲಿಯೇ ನಡೆಯುತ್ತಿತ್ತು.
ಹಿಂದಿನ ಲೇಖನ, ‘ಸನಾತನ ಧರ್ಮದಲ್ಲಿ ಕಲೆಗಳ ಪಾತ್ರ’ದಲ್ಲಿ ಸಂಗೀತ, ನೃತ್ಯ, ನಾಟಕ, ಹರಿಕಥೆ ಇತ್ಯಾದಿ ಪ್ರದರ್ಶನ ಕಲೆಗಳ ಮೂಲಕ ಸನಾತನ ಧರ್ಮದ ಅತ್ಯುನ್ನತ ಸತ್ಯಗಳನ್ನು ಜನಸಾಮಾನ್ಯರಿಗೆ ಹೇಗೆ ತಲುಪಿಸಲಾಗುತ್ತಿತ್ತೆಂಬುದನ್ನು ತಿಳಿದುಕೊಂಡಿದ್ದೇವೆ. ದೇವಸ್ಥಾನಗಳು ಇಂತಹ ಪ್ರದರ್ಶನ ಕಲೆಗಳಿಗೆ ಅಗತ್ಯವಾದ ವೇದಿಕೆ ಒದಗಿಸುತ್ತಿದ್ದವು. ತನ್ಮೂಲಕ ದೇವಸ್ಥಾನಗಳು ಕಲಾವಿದರ ಪೋಷಣೆ ಮಾಡುವುದಲ್ಲದೆ, ತಾತ್ವಿಕ ಹಾಗೂ ಸಾಂಸ್ಕೃತಿಕ ಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುತ್ತ, ಗ್ರಾಮಗಳ ಆಧ್ಯಾತ್ಮಿಕ, ಸಾಮಾಜಿಕ, ಬೌದ್ಧಿಕ ಹಾಗೂ ಕಲಾಕೇಂದ್ರಬಿಂದುಗಳಾಗಿದ್ದವು.
ಆರ್ಥಿಕೋನ್ನತಿಯ ಕೇಂದ್ರಗಳು: ಪ್ರತಿ ದೇವಸ್ಥಾನವೂ ಒಬ್ಬ ಸಾಂಪ್ರದಾಯಿಕ ವೈದ್ಯ ಹಾಗೂ ಸೂಲಗಿತ್ತಿಗೆ ಆಶ್ರಯ ಸ್ಥಾನವಾಗಿದ್ದು, ಅವರ ಜೀವನನಿರ್ವಹಣೆಗೆ ಅಗತ್ಯವಾದ ಧನ ಅಥವಾ ಸಾಮಗ್ರಿಗಳನ್ನು ಆ ದೇವಸ್ಥಾನದ ಭೂಮಿಯ ಆದಾಯದಿಂದ ಪೂರೈಸಲಾಗುತ್ತಿತ್ತು. ಇದರಿಂದಾಗಿ ಗ್ರಾಮದ ಸರ್ವ ಜನರಿಗೂ ಮೂಲಭೂತ ಆರೋಗ್ಯ ಸೇವೆಗಳು ಉಚಿತವಾಗಿ ಲಭ್ಯವಾಗುತ್ತಿದ್ದವು. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ, ಆಯಾ ಪ್ರದೇಶದ ನೀರಾವರಿ ಹಾಗೂ ಸಾರ್ವಜನಿಕ ಕಟ್ಟಡ ನಿರ್ಮಾಣ ಹಾಗೂ ನಿರ್ವಹಣೆಯನ್ನು ದೇವಸ್ಥಾನಗಳೇ ಮಾಡುತ್ತಿದ್ದವು. ಪ್ರಾಕೃತಿಕ ವಿಕೋಪಗಳಿಂದುಂಟಾದ ವಿಪತ್ತುಗಳ ಪರಿಹಾರ ಕಾರ್ಯದಲ್ಲಿಯೂ ದೇವಸ್ಥಾನಗಳು ಮಹತ್ತರ ಪಾತ್ರ ವಹಿಸುತ್ತಿದ್ದವು. ಈ ಕಾರ್ಯಗಳಿಗೆ ಅಗತ್ಯವಾದ ಧನವನ್ನು ಜನರು ಹಾಗೂ ಯಾತ್ರಾರ್ಥಿಗಳು ಕಾಣಿಕೆಗಳ ರೂಪದಲ್ಲಿ ನೀಡುತ್ತಿದ್ದರು.
ದೊಡ್ಡ ದೇವಸ್ಥಾನಗಳು ಹಲವು ವೃತ್ತಿಪರ ನುರಿತ ಸಿಬ್ಬಂದಿಗೆ ಆಶ್ರಯಸ್ಥಾನಗಳಾಗಿದ್ದವು. ಚೋಳರ ಕಾಲದ ಹತ್ತನೆಯ ಶತಮಾನದ ಒಂದು ಶಿಲಾಶಾಸನದ ಪ್ರಕಾರ, ಆ ಪ್ರದೇಶದ ಒಂದು ದುರ್ಗಾ ದೇವಸ್ಥಾನದಲ್ಲಿ ಇಂತಹ ನುರಿತ ವೃತ್ತಿಪರರ 63 ಸ್ಥಾನಗಳಿದ್ದವು. ಅಲ್ಲಿ ಒಬ್ಬ ಪ್ರಧಾನ ಆಚಾರ್ಯರ ಜೊತೆಗೆ ನಾಲ್ಕು ಮಂದಿ ಆಚಾರ್ಯರು, ಒಂಬತ್ತು ಸಂಗೀತಗಾರರು, ಇಪ್ಪತ್ನಾಲ್ಕು ನೃತ್ಯಕಲಾವಿದರು, ಒಬ್ಬ ಜ್ಯೋತಿಷಿ, ಆಡಳಿತಗಾರನ ಜೊತೆಗೆ ಒಬ್ಬ ಲೆಕ್ಕಪರಿಶೋಧಕ, ಇಬ್ಬರು ಪುಷ್ಪಹಾರಗಳನ್ನು ಸಿದ್ಧಗೊಳಿಸುವವರು, ಒಬ್ಬ ಅಗಸ, ಕಮ್ಮಾರ, ಬಡಗಿ ಹಾಗೂ ಮೂವರು ಕಾವಲುಗಾರರು ಇದ್ದರು. ಇದಲ್ಲದೆ ಹಲವು ಕುಟುಂಬಗಳು ಹೂಗಿಡಗಳನ್ನು ಕೃಷಿಮಾಡಿ ಬೆಳೆಸುವ ಕಾರ್ಯದಲ್ಲಿ ನಿರತವಾಗಿದ್ದವು. ಉತ್ಸವಗಳ ಸಂದರ್ಭಗಳಲ್ಲಿ ದೇವಸ್ಥಾನಗಳು ಜಾತ್ರೆ, ಸಂತೆ ಹಾಗೂ ಮಾರುಕಟ್ಟೆಗಳನ್ನು ನಿಯೋಜಿಸಿ ಸ್ಥಳೀಯ ರೈತರು ಹಾಗೂ ಕುಶಲಕರ್ವಿುಗಳಿಗೆ ಉತ್ಪಾದನೆ ಮಾರಲು ಅವಕಾಶಗಳನ್ನು ಕಲ್ಪಿಸುತ್ತಿದ್ದವು. ಹೀಗೆ ದೇವಸ್ಥಾನಗಳ ಸುತ್ತಮುತ್ತ ಸುಲಭವಾಗಿ ವ್ಯಾಪಾರವು ಸಾಗುತ್ತಿತ್ತು.
ದೇವಸ್ಥಾನಗಳು ಕ್ಷೇತ್ರಾಧಿದೇವತೆಯ ಹೆಸರಿನಲ್ಲಿ ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದವು. ಇಂದಿಗೂ ನಮ್ಮ ಸಂಪ್ರದಾಯದ ಪ್ರಕಾರ ಕ್ಷೇತ್ರಾಧಿದೇವತೆಯನ್ನು ‘ಜೀವಂತ ವ್ಯಕ್ತಿ’ (Living Entity) ಆಗಿ ಪರಿಗಣಿಸುವುದು ಮಾತ್ರವಲ್ಲದೆ, ನ್ಯಾಯಾಲಯಗಳು ಕೂಡ ಕ್ಷೇತ್ರಾಧಿದೇವತೆಯನ್ನು ಶಾಸನಬದ್ಧ ವ್ಯಕ್ತಿ (Legal Person) ಎಂದು ಅಂಗೀಕರಿಸುತ್ತವೆ. ಅಂದಿನ ರಾಜರೂ ರಾಜ್ಯದ ಅಧಿದೇವತೆಯನ್ನು ರಾಜ್ಯದ ನಿಜವಾದ ಒಡೆಯ ಅಥವಾ ಸ್ವಾಮಿಯೆಂದು ಭಾವಿಸಿ, ತಾವು ಆ ಅಧಿದೇವತೆಯ ಪರವಾಗಿ ರಾಜ್ಯಭಾರವನ್ನು ನಿರ್ವಹಿಸುವ ರಕ್ಷಕರೆಂದು ತಿಳಿಯುತ್ತಿದ್ದರು. ರಾಜರು ದೇವಸ್ಥಾನಗಳ ನಿರ್ವಹಣೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ, ದೇವಸ್ಥಾನಗಳ ವೆಚ್ಚಗಳಿಗೆ ಅಗತ್ಯವಾದ ಆದಾಯವು ದೇವಸ್ಥಾನದ ಭೂಮಿಗಳಿಂದ ಸರಿಯಾಗಿ ಬರುವಂತೆಯೂ ನೋಡಿಕೊಳ್ಳುತ್ತಿದ್ದರು ಹಾಗೂ ಅದಕ್ಕಾಗಿ ರಾಜ್ಯಭಂಡಾರದಿಂದ ಕಾಣಿಕೆಗಳನ್ನು ನೀಡುತ್ತಿದ್ದರು. ಕೇರಳದ ತಿರುವನಂತಪುರದ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಅಲ್ಲಿಯ ರಾಜವಂಶಸ್ಥರು ಈಗಲೂ ಆ ಅಧಿದೇವತೆಗೆ ಸೇವೆ ಸಲ್ಲಿಸುತ್ತಾರೆ. ಈ ಪದ್ಧತಿ ಭಾರತದೇಶದಲ್ಲಿ ಅನೇಕ ದೇವಸ್ಥಾನಗಳಲ್ಲಿ ಇಂದಿಗೂ ಮುಂದುವರಿದಿದೆ. ಹೀಗೆ ರಾಜರಿಂದ ಬೆಂಬಲಿಸಲ್ಪಟ್ಟ ದೇವಸ್ಥಾನಗಳು ಸನಾತನ ಧರ್ಮದ ಉನ್ನತ ಸತ್ಯಗಳನ್ನು ಸಮಾಜದಲ್ಲಿ ಜೀವಂತವಾಗಿಡುವುದು ಮಾತ್ರವಲ್ಲದೆ, ಹಲವು ರೀತಿಗಳಲ್ಲಿ ಜನಸೇವೆಯ ಕೇಂದ್ರಗಳಾಗಿದ್ದವು.
ಕಾಲಾನುಕ್ರಮವಾಗಿ, ಸನಾತನ ಧರ್ಮವನ್ನು ಒಪ್ಪದ ಹಲವು ಪರಕೀಯರ ಅತಿಕ್ರಮಣಕ್ಕೊಳಗಾದ ಭಾರತದಲ್ಲಿ ದೇವಸ್ಥಾನಗಳ ಸುಂದರ ವ್ಯವಸ್ಥೆ ಹಾನಿಗೊಳಗಾಯಿತು. ದೇವಸ್ಥಾನಗಳ ಆಶ್ರಯದಲ್ಲಿ ನಡೆಯುತ್ತಿದ್ದ ಹಲವು ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಬೌದ್ಧಿಕ ಸೇವಾ ಕಾರ್ಯಕ್ರಮಗಳು ಸ್ಥಗಿತಗೊಂಡವು. ಇಂತಹ ಅತಿಕ್ರಮಣಕಾರರು ದೇವಸ್ಥಾನಗಳನ್ನು ವಿರೂಪಗೊಳಿಸಿ ನಾಶಮಾಡಿದ್ದಲ್ಲದೆ, ದೇವಸ್ಥಾನದ ಸ್ವಾಧೀನದಲ್ಲಿದ್ದ ಭೂಮಿಗಳನ್ನೆಲ್ಲ ತೆರವುಗೊಳಿಸಿ, ಆರ್ಥಿಕ ಸಂಕಷ್ಟಕ್ಕೀಡು ಮಾಡಿದರು. ಇದರಿಂದಾಗಿ ವಿರೂಪವಾಗದೆ ಉಳಿದ ದೇವಸ್ಥಾನಗಳಲ್ಲಿ ಕೂಡ ಶಿಕ್ಷಣ, ಸಂಸ್ಕೃತಿ ಹಾಗೂ ಸಮಾಜಸೇವೆಯ ರಂಗದಲ್ಲಿ ನಡೆಯುತ್ತಿದ್ದ ಸೇವೆಗಳು ಸಂಪೂರ್ಣವಾಗಿ ನಿಂತುಹೋಗುವ ಪರಿಸ್ಥಿತಿಯುಂಟಾಯಿತು. ಹೀಗಾಗಿ ಜನರು ದೇವಸ್ಥಾನಗಳಿಂದ ದೂರವಾಗಿ ಸನಾತನ ಧರ್ಮದ ಸಂಸ್ಕೃತಿಗೆ ಬಲವಾದ ಪೆಟ್ಟು ಬಿದ್ದಿತು. ಇಂದೂ ಹೆಚ್ಚಿನ ದೇವಸ್ಥಾನಗಳು ಆರ್ಥಿಕವಾಗಿ ಕ್ಷೀಣವಾಗಿದ್ದು, ಅವು ಯಾವುದೇ ಸಮಾಜಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಅಲ್ಲಿ ಯಾವುದೇ ಜನಸಮೂಹಗಳು ಸೇರದೆ, ದೇವಸ್ಥಾನಗಳು ಸಾಮಾಜಿಕ ಔಚಿತ್ಯ ಕಳೆದುಕೊಳ್ಳುವಂತಾಗಿದೆ.
ನಾವು ಇಂದು ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಲು ಒಂದು ಪ್ರಧಾನ ಮಾರ್ಗವೆಂದರೆ, ದೇವಸ್ಥಾನಗಳಲ್ಲಿ ಶಿಕ್ಷಣ, ಆರೋಗ್ಯಸೇವೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳನ್ನು ಪ್ರಾರಂಭಿಸಿ, ಅವು ಮತ್ತೆ ಸಾಮಾಜಿಕ ಔಚಿತ್ಯವನ್ನು ಗಳಿಸಿಕೊಳ್ಳುವಂತೆ ಮಾಡುವುದು. ಇಲ್ಲದಿದ್ದರೆ ದೇವಸ್ಥಾನಗಳು ಕೇವಲ ಭಗವದ್ವಿಶ್ವಾಸ ಹಾಗೂ ಭಗವದಾರಾಧನೆಯ ಕೇಂದ್ರಗಳಾಗಿ ಉಳಿಯಬಹುದಷ್ಟೆ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)