ಭಗವದ್ ಸ್ಮರಣೆ ಎಂಬುದು ಹೃನ್ಮಂದಿರದ ನಂದಾದೀಪ

ramakrishna Paramahamsa
Published on

ಭಕ್ತ ಎಂದಾಕ್ಷಣ ಎಷ್ಟು ಬಾರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾನೆ? ಎಷ್ಟು ಬಾರಿ ಪೂಜೆ, ಅರ್ಚನೆ, ಇತ್ಯಾದಿಗಳಲ್ಲಿ ನಿರತನಾಗುತ್ತಾನೆ, ಎಷ್ಟು ಸಮಯ ವಿಷ್ಣು ಸಹಸ್ರನಾಮ, ಶ್ರೀ ಲಲಿತಾ ಸಹಸ್ರನಾಮ, ಶ್ರೀ ಶಿವಸಹಸ್ರ ನಾಮಾದಿಗಳನ್ನು ಪಠಿಸುತ್ತಾನೆ? ಇತ್ಯಾದಿಯ ಬದಲಾಗಿ ಎಷ್ಟು ಶ್ರದ್ಧಾ, ಭಕ್ತಿಯಿಂದ ಹೃದಯಾಂತರಾಳದಲ್ಲಿ ಭಗವಂತನನ್ನು ಸ್ಥಾಪಿಸಿ ಸದಾ ಸ್ಮರಣೆಯಲ್ಲಿ, ಚಿಂತನೆಯಲ್ಲಿ ತಲ್ಲೀನನಾಗಿದ್ದಾನೆ ಎಂಬುದು ಮುಖ್ಯ.

ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಅತಿ ಮುಖ್ಯವಾದ ಉಪದೇಶವೆಂದರೆ ಶುದ್ಧ ಹೃದಯ. ತಮ್ಮಲ್ಲಿಗೆ ಧಾವಿಸುವ ಭಕ್ತರಿಗೆ ಉಪದೇಶಿಸುತ್ತಿದ್ದ ಅಮೃತವಾಣಿ ಇದಾಗಿತ್ತು. ಮೊದಲು ಹೃದಯ ತದನಂತರ ಬಾಹ್ಯ ಎನ್ನುತ್ತಿದ್ದರು. ನಿಜಕ್ಕೂ ಹೃದಯಪದ್ಮ ಎಂಬ ಅದ್ಭುತವಾದ ಅಂಶವನ್ನು ಸರಿಯಾಗಿ ಅರಿತವರು ಪರಿಶುದ್ಧ ಹೃದಯಿಗಳಾಗಿ ತಮ್ಮ ಹೃನ್ಮಂದಿರದಲ್ಲಿ ಭಗವಂತನನ್ನು ಸ್ಥಾಪಿಸಿಕೊಂಡು ನಿಜವಾದ ಅರ್ಥದಲ್ಲಿ ಸದ್ಭಕ್ತರು ಎಂದೆನಿಸಿಕೊಂಡು ಭಗವಂತನನ್ನು ವರಿಸುತ್ತಿದ್ದರು, ಅರ್ಚಿಸುತ್ತಿದ್ದರು, ಭಜಿಸುತ್ತಿದ್ದರು. ಭಕ್ತಿ ಸೂತ್ರವನ್ನು ವಿವರಿಸುವಾಗ ಶ್ರೀರಾಮಾನುಜಾಚಾರ್ಯರು ‘ತೈಲ ಧಾರಾವತ್’ ಎಂಬ ಪದವನ್ನು ಉಪಯೋಗಿಸುತ್ತಾರೆ. ಅಂದರೆ ಹೇಗೆ ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ತೈಲವನ್ನು ಸುರಿಯುವಾಗ ನಿರಂತರವಾಗಿ ಹರಿಯುತ್ತದೆಯೋ ಹಾಗೆಯೇ ನಿರ್ಮಲ ಚಿತ್ತದಿಂದ ಭಕ್ತನು ಭಗವನ್ನಾಮ ಸ್ಮರಣೆಯನ್ನು ಎಡಬಿಡದೆ ನಿರಂತರವಾಗಿ ನಡೆಸಿಕೊಂಡು ಬರುವುದೇ ನಿಜವಾದ ಅರ್ಥದಲ್ಲಿ ನಿತ್ಯ ನಾಮ ಸ್ಮರಣೆ. ಈ ಅಂಶವನ್ನು ರಾಮಕೃಷ್ಣರು ಹೇಳುವ ರೀತಿ ಇದು: ‘ಭಗವನ್ನಾಮದಲ್ಲಿ ರುಚಿಯಿರಲಿ. ಭಗವಂತನ ನಾಮ ಜಪಿಸುತ್ತಿರಬೇಕು. ಯಾವುದು ನಾಮವೋ ಅದೇ ಭಗವಂತ ನಾಮವೂ, ನಾಮಿಯೂ ಅಭಿನ್ನ ಎಂದರಿತು ಸರ್ವದಾ ಪ್ರೀತಿ ಸಹಿತವಾಗಿ ದುರ್ಗಾನಾಮವನ್ನೋ, ಕೃಷ್ಣ ನಾಮವನ್ನೋ, ಶಿವನಾಮವನ್ನೋ, ರಾಮ ನಾಮವನ್ನೋ ಜಪಿಸುತ್ತ ಭಗವಂತನನ್ನು ಕರೆಯಲೊಲ್ಲೆಯೇಕೆ? ನಾಮವೇನು ಕಮ್ಮಿಯೇ? ಅವನು ಮತ್ತು ನಾಮವು ಭಿನ್ನವಲ್ಲ’.

ರಾಮಕೃಷ್ಣರು ಈ ಸರಳ ಸಂದೇಶದ ಮೂಲಕ ಸಾಮಾನ್ಯ ಮನುಜನೂ ಭಗವಂತನನ್ನು ಪಡೆಯಬಹುದು ಎಂಬ ಮಹಾನ್ ತತ್ತ್ವವನ್ನು ತಿಳಿಸಿದ್ದಾರೆ. ಪರಮಹಂಸರು ಭಗವನ್ನಾಮ ಜಪದ ಬಗ್ಗೆ ಹೀಗೆ ತಿಳಿಸುತ್ತಾರೆ: ‘ಪ್ರಾಚೀನ ಕಾಲದಲ್ಲಿ ಜನರು ಯೋಗ, ಯಾಗ, ತಪಸ್ಸುಗಳನ್ನು ಮಾಡುತ್ತಿದ್ದರು. ಈಗ ಕಲಿಯುಗದ ಜೀವಕ್ಕೆ ಪ್ರಾಣವೆಲ್ಲ ಆಹಾರದಲ್ಲಿದೆ. ಮನಸ್ಸು ದುರ್ಬಲ. ಏಕಾಗ್ರ ಮನಸ್ಸಿನಿಂದ ಹರಿನಾಮವೊಂದನ್ನು ಜಪಿಸಿದರೂ ಸಾಕು, ಎಲ್ಲ ದುಃಖ ಕಷ್ಟಗಳೂ ದೂರವಾಗಿಬಿಡುತ್ತವೆ’. ರಾಮಕೃಷ್ಣರ ಈ ನುಡಿಗಳು ಈ ಯುಗಕ್ಕೆ ಸರಿಯಾಗಿ ಮುಕ್ತಿ ಮಾರ್ಗ ತೋರಿದಂತೆಯೇ ಸರಿ.

ಅದೊಂದು ಸತ್ಸಂಗದ ಸಂದರ್ಭ. ಪರಮಹಂಸರು ಹೃದಯಮಂದಿರದ ಪ್ರದೀಪವನ್ನು ವಿವರಿಸುತ್ತಾರೆ. ‘ಧ್ಯಾನದ ಸಮಯದಲ್ಲಿ ಮಾತ್ರ ದೇವರ ಆಲೋಚನೆ ಮಾಡಿ ಉಳಿದ ಸಮಯದಲ್ಲಿ ಯಾವಾಗಲೂ ದೇವಿಯ ವಿಗ್ರಹದ ಸಮೀಪದಲ್ಲಿ ಒಂದು ನಂದಾ ದೀಪ ಉರಿಯುತ್ತಿರುವುದನ್ನು ನೋಡಿಲ್ಲವೇ? ಅದು ಎಂದೂ ಆರಿ ಹೋಗಲು ಅವಕಾಶ ಕೊಡಬಾರದು. ಅದೇನಾದರೂ ಆರಿ ಹೋದರೆ ಆ ಮನೆಯವರಿಗೇನಾದರೂ ವಿಪತ್ತು ಬರುವುದು. ಹಾಗೆಯೇ ಇಷ್ಟ ದೇವತೆಯನ್ನು ಹೃದಯಕಮಲದಲ್ಲಿ ಸ್ಥಾಪಿಸಿದ ಮೇಲೆ ಆತನ ಸ್ಮರಣೆಯೆನ್ನುವ ದಿವ್ಯ ನಂದಾದೀವಿಗೆಯನ್ನು ಯಾವಾಗಲೂ ಉರಿಸುತ್ತಿರಬೇಕು. ಪ್ರಾಪಂಚಿಕ ಚಟುವಟಿಕೆಗಳ ಮಧ್ಯದಲ್ಲಿಯೂ ಅನವರತವೂ ಆಂತರ್ಯದಲ್ಲಿ ದಿವ್ಯ ದೀಪ ಬೆಳಗುತ್ತಿದೆಯೇ, ಇಲ್ಲವೇ ಎಂದು ಜಾಗರೂಕರಾಗಿರಬೇಕು’ ಎಂದು ಬೋಧಿಸುತ್ತಾರೆ. ಪರಮಹಂಸರ ಮಹಾನ್ ಉಪದೇಶಗಳಲ್ಲಿ ಅತ್ಯಂತ ಮಹತ್ತರವಾದ ವಿಚಾರವೇ ಈ ಹೃನ್ಮಂದಿರ. ಬಹುಶಃ ಪರಮಹಂಸರು ಈ ಆಧುನಿಕ ಯುಗಕ್ಕೆ ನೀಡಿರುವ ತ್ರಿವಿಧ ಸೂತ್ರ ಎಂದರೆ ಶುದ್ಧ ಹೃದಯ, ಶುದ್ಧ ಭಕ್ತಿ ಮತ್ತು ಶುದ್ಧ ಮನಸ್ಸು. ‘ಮುಕ್ತಿ ಮಾರ್ಗದ ಮೂಲ ಗುರಿಯೇ ಭಗವದ್ ಸಾಕ್ಷಾತ್ಕಾರ. ಅದನ್ನು ಪಡೆಯುವ ಸುಲಭ ಮಾರ್ಗವೆಂದರೆ ಈ ಮೂರು ಅಂಶಗಳನ್ನು ನೆನಪಿಟ್ಟುಕೊಂಡು ಶುದ್ಧ ಹೃದಯ, ಮನಸ್ಸು ಹಾಗೂ ಭಕ್ತಿಯ ಪಡೆದಾಗಲೇ ಸಾಕ್ಷಾತ್ಕಾರ ಎಂದು ಅವರು ಸಾರಿ ಸಾರಿ ತಿಳಿಸುತ್ತಿದ್ದರು.

‘ನೀವು ಹೃದಯವೆಂಬ ದೇವಸ್ಥಾನದಲ್ಲಿ ಭಗವಂತನೆಂಬ ಮೂರ್ತಿಯನ್ನು ಸ್ಥಾಪನೆ ಮಾಡಬೇಕಾದರೆ, ಅಂದರೆ, ಅವನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾದರೆ, ಸುಮ್ಮನೆ ಬಾಹ್ಯಾಡಂಬರ ಮಾಡಿದಲ್ಲಿ ಪ್ರಯೋಜನವೇನು? ಮೊದಲು ಮನಸ್ಸು ಶುದ್ಧ ಮಾಡಿಕೊಳ್ಳಬೇಕು. ಆಗ ಭಗವಂತನು ತಾನೇ ತಾನಾಗಿ ಬಂದು ನೆಲೆಸುತ್ತಾನೆ. ಅಪವಿತ್ರವಾದ ಸ್ಥಳದಲ್ಲಿ ಯಾವ ವಿಗ್ರಹವನ್ನೂ ಪ್ರತಿಷ್ಠೆ ಮಾಡುವುದಕ್ಕಾಗದು. ಮೊದಲು ಹೃದಯ ಶುದ್ಧಿ, ನಂತರ ಹೃನ್ಮಂದಿರದಲ್ಲಿ ಭಗವಂತನ ಪ್ರತಿಷ್ಠಾಪನೆ, ನಂತರ ನಿರಂತರ ಸ್ಮರಣೆ. ಮೊದಲು ನಿನ್ನ ಆತ್ಮದ ಅಂತರಾಳದಲ್ಲಿ ನೀನು ಮುಳುಗಿ ಅಲ್ಲಿ ಹುದುಗಿರುವ ಅರ್ನ್ಯಘ ಭಗವಂತನನ್ನು ಪಡೆ, ನಂತರ ಬೇರೆ ಎಲ್ಲಾ ವಿಚಾರಗಳು’ ಎಂಬುದಾಗಿ ಭಕ್ತರಿಗೆ ಹೃನ್ಮಂದಿರದ ಬಗ್ಗೆ ರಾಮಕೃಷ್ಣರು ಪರಿಪೂರ್ಣ ತಿಳುವಳಿಕೆ ನೀಡುತ್ತಾರೆ. ಹೃದಯ ಮಂದಿರದಲ್ಲಿ ಮೊದಲು ಭಕ್ತಿಯೆಂಬ ಪವಿತ್ರ ನಂದಾದೀಪವನ್ನು ಭಗವದ್ ಸ್ಮರಣೆಯ ಮೂಲಕ ಬೆಳಗಿಸಿಕೊಳ್ಳಬೇಕು. ಇದೇ ನಿಜವಾದ ಅರ್ಥದಲ್ಲಿ ಹೃನ್ಮಂದಿರದ ಜ್ಯೋತಿ.

(ಲೇಖಕರು: ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು) (ಪ್ರತಿಕ್ರಿಯಿಸಿ: vvsudina@gmail.com, swajapa@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net