ಸನಾತನ ಧರ್ಮದಲ್ಲಿ ಸುಖದ ಅನ್ವೇಷಣೆ

Column F
Published on
ಮಾನವನು ಅನುಭವಿಸಬಹುದಾದ ಅತ್ಯುನ್ನತ ಸ್ತರದ ಸಂತೋಷಕ್ಕೆ ಆಧಾರವಾಗಿರುವುದು ಅವನ ಅಂತರಂಗದ ಕೇಂದ್ರವಾದ ಆನಂದಮಯಕೋಶ. ಮಾನವನ ಸುಖಾನ್ವೇಷಣೆೆಯು ಈ ಆನಂದದ ಅನುಭವದಲ್ಲಿ ಅಂತ್ಯವಾಗುತ್ತದೆ. ಆದರೆ ಇದನ್ನು ಅನುಭವಿಸಲು ಸ್ವಾರ್ಥಚಿಂತನೆಗಳನ್ನು ತ್ಯಜಿಸಬೇಕಾಗುತ್ತದೆ.

‘ಸುಖ’ ಎಂಬ ಪದವನ್ನು ತಿಳಿಯದ ವ್ಯಕ್ತಿಯಿಲ್ಲ. ಆದರೆ ಸುಖದ ನಿಜವಾದ ಅರ್ಥವನ್ನು ತಿಳಿದವರು ಕೆಲವೇ ಮಂದಿ. ಇನ್ನು ನಿಜವಾದ ಸುಖವನ್ನು ಅನುಭವಿಸಿದವರಂತೂ ಅತ್ಯಂತ ವಿರಳವೆಂದೇ ಹೇಳಬಹುದು. ಬಹುತೇಕ ಮಂದಿ ಸುಖವೆಂದರೆ ಸಂಕಟದ ಪರಿಹಾರವೆಂದೋ ಅಥವಾ ಕೆಲವು ಭೌತಿಕ ಯಾ ಮಾನಸಿಕ ಅನುಭವಗಳಿಂದ ಲಭಿಸುವ ಸಂತೋಷವೆಂದೋ ಭ್ರಮಿಸುತ್ತಾರೆ. ಆದರೆ ಸನಾತನ ಧರ್ಮದ ಪ್ರಕಾರ, ಸುಖವೆಂದರೆ ಕೇವಲ ತಾತ್ಕಾಲಿಕ ಸಂತೋಷದ ಭಾವನೆಯ ಸ್ಥಿತಿಯಲ್ಲ. ಹಾಗೆ ನೋಡಿದರೆ ಸುಖವು ಒಂದು ಭಾವನೆಯೇ ಅಲ್ಲ, ಅದೊಂದು ದ್ವಂದ್ವಾತೀತವಾದ ಸಮತ್ವದ ಸ್ಥಿತಿ; ಈ ಸ್ಥಿತಿಯಲ್ಲಿರುವ ವ್ಯಕ್ತಿಯ ಮನಸ್ಸಿನಲ್ಲಿ ಜೀವನದ ಬದಲಾಗುವ ಅನುಕೂಲಕರ ಅಥವಾ ಪ್ರತಿಕೂಲಕರ ಸನ್ನಿವೇಶಗಳಿಂದ ಯಾವುದೇ ಏರು-ಪೇರುಗಳಾಗುವುದಿಲ್ಲ.

ಮಾನವನು ಜೀವನದಲ್ಲಿ ಅನುಭವಿಸಬಹುದಾದ ಸಂತೋಷದ ವಿವಿಧ ಸ್ತರಗಳನ್ನು ಸನಾತನ ಧರ್ಮವು ಗುರುತಿಸುತ್ತದೆ. ಆದರೆ ನಿಜವಾದ ಸುಖವೆಂದರೆ ತಾತ್ಕಾಲಿಕ ಸಂತೋಷಗಳನ್ನು ಮೀರಿದ ಒಂದು ಸ್ಥಿತಿ. ಕ್ರಿಮಿ-ಕೀಟಗಳಿಂದ ಹಿಡಿದು ಬುದ್ಧಿವಂತರಾದ ಮಾನವರವರೆಗೆ ಎಲ್ಲಾ ಜೀವಿಗಳೂ ಇಂತಹ ಸುಖವನ್ನೇ ತಮ್ಮ ಜೀವನಗಳಲ್ಲಿ ಅರಸುತ್ತಿವೆಯೆಂಬುದು ಸರ್ವವಿದಿತ. ಈ ಸುಖಾನ್ವೇಷಣೆಯ ಬಗ್ಗೆ ಸನಾತನ ಧರ್ಮವು ಏನು ಹೇಳುತ್ತದೆಯೆಂಬುದನ್ನು ತಿಳಿದುಕೊಳ್ಳೋಣ.

ತೈತ್ತರೀಯೋಪನಿಷತ್ತಿನ ‘ಭೃಗುವಲ್ಲಿ’ಯಲ್ಲಿ ಬಹುರಸವತ್ತಾದ ಒಂದು ಘಟನೆಯಿದೆ. ಯುವಕನಾದ ಭೃಗುವು ಬ್ರಹ್ಮವಿದ್ಯೆಯನ್ನು ಕಲಿಯಲು ತನ್ನ ತಂದೆ ವರುಣನ ಬಳಿಗೆ ಬಂದು ವಿಶ್ವಮೂಲಸತ್ಯವಾದ ಪರಬ್ರಹ್ಮನ ಬಗ್ಗೆ ಪ್ರಶ್ನಿಸುತ್ತಾನೆ. ಸತ್ಯವನ್ನು ಕೇವಲ ಉಪದೇಶದ ಮೂಲಕ ತಿಳಿಯಲು ಸಾಧ್ಯವಿಲ್ಲವೆಂದೂ, ಸ್ವತಃ ತಾನೇ ಮನನ-ತಪಸ್ಸುಗಳ ಮೂಲಕ ಸತ್ಯವನ್ನರಿಯಬೇಕೆಂದೂ, ಮಗನಿಗೆ ತಿಳಿಸಿದ ವರುಣನು, ‘ಯಾವುದರಿಂದ ಸರ್ವ ಜೀವಿಗಳೂ ಉದ್ಭವಿಸಿವೆಯೋ, ಯಾವುದರ ಆಧಾರದ ಮೇಲೆ ಅವು ಜೀವಿಸುತ್ತವೆಯೋ, ಅಂತ್ಯದಲ್ಲಿ ಯಾವುದರಲ್ಲಿ ಅವು ಐಕ್ಯವಾಗುತ್ತವೆಯೋ, ಅದೇ ಬ್ರಹ್ಮ. ಅದನ್ನು ನೀನು ಮನನ ಹಾಗೂ ತಪಸ್ಸಿನಿಂದ ತಿಳಿದುಕೋ’ ಎಂದು ಅವನನ್ನು ಪ್ರೋತ್ಸಾಹಿಸುತ್ತಾನೆ.

ಮನನ-ತಪಸ್ಸುಗಳನ್ನು ಆಶ್ರಯಿಸಿದ ಭೃಗುವು ಸ್ವಲ್ಪ ಕಾಲದ ನಂತರ ಹಿಂತಿರುಗಿ ಬಂದು, ‘ಅನ್ನವೇ ಬ್ರಹ್ಮ (ಅನ್ನಂ ಬ್ರಹ್ಮೇತಿ ವ್ಯಜಾನಾತ್). ಏಕೆಂದರೆ ಸರ್ವ ಜೀವಿಗಳೂ ಆಹಾರದಿಂದಲೇ ಹುಟ್ಟಿ, ಆಹಾರದ ಆಧಾರದ ಮೇಲೆಯೇ ಬದುಕಿ, ಕೊನೆಯಲ್ಲಿ ಆಹಾರವನ್ನೇ ಸೇರುತ್ತವೆ. (ಆಹಾರಚಕ್ರದಲ್ಲಿ ಒಂದು ಜೀವಿಯು ಇನ್ನೊಂದು ಜೀವಿಗೆ ಆಹಾರವಷ್ಟೇ!)’ ಎಂದು ವರುಣನಲ್ಲಿ ಅರುಹುತ್ತಾನೆ. ಇದರಿಂದ ತೃಪ್ತನಾಗದ ತಂದೆಯು ಮಗನನ್ನು ಪುನಃ ತಪಸ್ಸು ಮಾಡಲು ಕಳುಹಿಸುತ್ತಾನೆ. ವಿಧೇಯನಾದ ಭೃಗುವು ಇನ್ನೂ ಕೆಲವು ಕಾಲ ತಪಸ್ಸನ್ನಾಚರಿಸಿ ಬಂದು, ತಾನು ಕಂಡುಕೊಂಡ ಸತ್ಯವನ್ನು ತಂದೆಯಲ್ಲಿ ಬಿನ್ನವಿಸುತ್ತಾನೆ, ‘ಪ್ರಾಣವೇ ಸತ್ಯ (ಪ್ರಾಣೋ ಬ್ರಹ್ಮೇತಿ ವ್ಯಜಾನಾತ್). ಪ್ರಾಣಶಕ್ತಿಯೇ ಎಲ್ಲಾ ಜೀವಿಗಳಿಗೆ ಉಗಮ, ಆಧಾರ ಹಾಗೂ ಅಂತಿಮ ಗಮ್ಯ.’ ಇದರಿಂದಲೂ ತಂದೆಗೆ ತೃಪ್ತಿಯಾಗಲಿಲ್ಲ. ಮಗನು ತಂದೆಯ ಆಣತಿಯಂತೆ ಮತ್ತೆ ತಪಸ್ಸಿಗೆ ತೆರುಳುತ್ತಾನೆ. ಭೃಗುವಿನ ಮೂರನೆಯ ತೀರ್ವನವೆಂದರೆ, ‘ಮನಸ್ಸೇ ಬ್ರಹ್ಮ (ಮನೋ ಬ್ರಹ್ಮೇತಿ ವ್ಯಜಾನಾತ್). ಮನಸ್ಸೇ ಜಗತ್ತಿನ ಎಲ್ಲಾ ವಿದ್ಯಮಾನಗಳಿಗೂ ಮೂಲ.’ ಇದರಿಂದಲೂ ತೃಪ್ತನಾಗದ ವರುಣನು ಪುನಃ ಮಗನನ್ನು ಇನ್ನೂ ಆಳವಾದ ತಪಸ್ಸಿಗೆ ಪ್ರೇರೇಪಿಸುತ್ತಾನೆ. ಶ್ರದ್ಧೆಯ ಪ್ರತಿರೂಪವೇ ಆದ ಮಗನ ಮುಂದಿನ ಸಂಶೋಧನೆಯೆಂದರೆ, ‘ವಿಜ್ಞಾನ ಅಥವಾ ಮೇಧಾಶಕ್ತಿಯೇ ಬ್ರಹ್ಮ (ವಿಜ್ಞಾನಂ ಬ್ರಹ್ಮೇತಿ ವ್ಯಜಾನಾತ್). ಏಕೆಂದರೆ ವಿಶ್ವದ ಹಿಂದಿರುವ ಮೇಧಾಶಕ್ತಿಯು ಸರ್ವ ಜೀವಿಗಳ ಜನನ, ಜೀವನ ಹಾಗೂ ಮರಣಗಳನ್ನು ನಿಯಂತ್ರಿಸುತ್ತದೆ.’ ಮಗನ ಪ್ರಗತಿಯ ಬಗೆಗೆ ವರುಣನು ಸಂತೋಷಿಸಿದ್ದು ನಿಜ; ಆದರೆ ಸಂಪೂರ್ಣ ತೃಪ್ತನಾಗಲಿಲ್ಲ. ಇನ್ನೂ ಗಹನವಾದ ಧ್ಯಾನ ಮಾಡಲು ಮಗನನ್ನು ಪ್ರೋತ್ಸಾಹಿಸುತ್ತಾನೆ. ಅತ್ಯಂತ ಶ್ರದ್ಧೆಯಿಂದ ತಪಸ್ಸಿನಲ್ಲಿ ಮುಳುಗಿದ ಭೃಗುವಿಗೆ, ‘ಆನಂದವೇ ಬ್ರಹ್ಮ (ಆನಂದಂ ಬ್ರಹ್ಮೇತಿ ವ್ಯಜಾನಾತ್)’ ಎಂಬ ಸತ್ಯವು ಗೋಚರವಾಗುತ್ತದೆ. ಈ ಆನಂದದಲ್ಲಿ ತನ್ಮಯನಾದ ಭೃಗುವು ತಂದೆಯ ಬಳಿಗೆ ಬರಲೇ ಇಲ್ಲ. ವರುಣನೇ ಹುಡುಕಿಕೊಂಡು ಹೋಗಿ ಆನಂದದಲ್ಲಿ ಮೈಮರೆತ ಮಗನನ್ನು ಕಂಡು, ‘ಈಗ ನೀನು ಸತ್ಯವನ್ನು ತಿಳಿದುಕೊಂಡಿದ್ದೀಯೇ!’ ಎಂದು ತೃಪ್ತನಾಗಿ ಉಚ್ಚರಿಸುತ್ತಾನೆ.ವಿಶ್ವದ ಸೃಷ್ಟಿಗೆ ಆನಂದವೇ ಮೂಲ, ಆನಂದವೇ ಆಧಾರ ಹಾಗೂ ಅಂತಿಮ ಗಮ್ಯ. ಆದ್ದರಿಂದಲೇ ಎಲ್ಲ ಜೀವಿಗಳೂ ಇಂತಹ ಆನಂದವನ್ನೇ ಅರಸುತ್ತವೆ ಹಾಗೂ ಇಂತಹ ಆನಂದವು ಲಭ್ಯವಾದಾಗ ಮಾತ್ರ ಪರಿಪೂರ್ಣತೆಯನ್ನು ಪಡೆಯುತ್ತವೆ.

ಈ ಸ್ವಾರಸ್ಯಕರವಾದ ಘಟನೆಯಲ್ಲಿ ಮಾನವನು ಅನುಭವಿಸಬಹುದಾದ ಸಂತೋಷದ ಐದು ಸ್ತರಗಳನ್ನು ಕಂಡುಕೊಳ್ಳಬಹುದು. ಇದರಲ್ಲಿ ಮೊದಲನೆಯದು ದೈಹಿಕ ಸಂತೋಷ. ಮಾನವನ ವ್ಯಕ್ತಿತ್ವದ ಅತ್ಯಂತ ಹೊರಗಿನ ಪದರವಾದ ಅನ್ನಮಯ ಕೋಶವೇ ಈ ದೇಹ. ದೇಹಕ್ಕೆ ಆಹಾರ ಸಿಕ್ಕಿದರೆ ಸಂತೋಷ, ಇಲ್ಲದಿದ್ದರೆ ಹಸಿವಿನ ದುಃಖ. ಇದೇ ರೀತಿಯಲ್ಲಿ ನಿದ್ರೆ ಹಾಗೂ ದೇಹವನ್ನು ಕಳೆದುಕೊಳ್ಳುತ್ತೇವೆಂಬ ಭಯದಿಂದ ಬಿಡುಗಡೆ ಅಥವಾ ಭದ್ರತೆಯ ಭಾವನೆ ಹಾಗೂ ಮೈಥುನದ ತೃಷ್ಣೆ. ಇವುಗಳಿಂದ ಸಿಕ್ಕುವ ದೈಹಿಕ ಸಂತೋಷವು ಅಲ್ಪ ಹಾಗೂ ತಾತ್ಕಾಲಿಕ. ಇದರಿಂದ ಯಾವ ಜೀವಿಗಳೂ ಪರಿಪೂರ್ಣ ಸುಖವನ್ನು ಪಡೆಯಲು ಸಾಧ್ಯವಿಲ್ಲ. ಅಂತ್ಯದಲ್ಲಿ ಮಣ್ಣಿನಲ್ಲಿ ಸೇರಿಹೋಗುವ ದೇಹವು ಅಸೀಮಿತ ದುಃಖಕ್ಕೆ ಆಹ್ವಾನ. ಇದನ್ನೇ ಅಲ್ಲಮಪ್ರಭುಗಳು ‘ಸಾಸಿವೆಯೆಷ್ಟು ಸುಖಕ್ಕಾಗಿ ಸಾಗರದಷ್ಟು ಕಷ್ಟ ನೋಡಾ!’ ಎಂದು ಹೇಳಿದ್ದಾರೆ.

ಮಾನವನ ಸಂತೋಷದ ಎರಡನೆಯ ಸ್ತರವೆಂದರೆ ಪ್ರಾಣಭಯದಿಂದ ಮುಕ್ತನಾಗಿರುವುದು ಹಾಗೂ ಪ್ರಾಣವನ್ನು ರಕ್ಷಿಸಿಕೊಳ್ಳಲು ಸತತವಾಗಿ ಪ್ರಯತ್ನಿಸುವುದು. ಇದಕ್ಕೆ ಆಧಾರ ಮಾನವನ ವ್ಯಕ್ತಿತ್ವದ ಒಳಗಿನ ಪದರಗಳಲ್ಲಿ ಮೊದಲನೆಯದಾದ ಪ್ರಾಣಮಯ ಕೋಶ. ಪ್ರಾಣವನ್ನು ಉಳಿಸಿಕೊಂಡು ಭದ್ರತೆಯ ಜೀವನವನ್ನು ನಡೆಸಬೇಕೆಂಬುದು ಎಲ್ಲ ಜೀವಿಗಳ ಆಶಯ. ಇಂತಹ ಭದ್ರತೆಯ ಜೀವನಕ್ಕಾಗಿ ಮಾನವರು ಸಂಪತ್ತು ಹಾಗೂ ಅಧಿಕಾರಗಳ ಬೆನ್ನು ಹತ್ತುತ್ತಾರೆ. ಈ ಭದ್ರತೆಯೂ ಕ್ಷಣಿಕವಾದುದೇ. ಸಂಪತ್ತು, ಅಧಿಕಾರ ಹಾಗೂ ಕೊನೆಯಲ್ಲಿ ಜೀವನವೇ ಅಸ್ಥಿರ.

ಮಾನವನ ಒಳಗಿನ ಪದರಗಳ ಪೈಕಿ ಎರಡನೆಯದಾದ ಮನೋಮಯ ಕೋಶವು ಅವನು ಅನುಭವಿಸುವ ಇನ್ನೊಂದು ಸ್ತರದ ಸಂತೋಷಕ್ಕೆ ಆಧಾರ (ದೇಹವು ಒಂದು ಕಂಪ್ಯೂಟರಿನ ಹಾರ್ಡ್​ವೇರ್ ಇದ್ದಂತೆ; ಮನಸ್ಸು ಸಾಫ್ಟ್​ವೇರ್ ಇದ್ದಂತೆ). ಈ ಸಂತೋಷವು ಅವನಿಗೆ ಇತರ ಮಾನವರ ಸ್ನೇಹ-ಪ್ರೀತಿಗಳಲ್ಲಿ ದೊರೆಯುತ್ತದೆ. ಇದಕ್ಕಾಗಿ ಬಂಧು-ಮಿತ್ರರನ್ನು ಕಟ್ಟಿಕೊಂಡು ಕುಟುಂಬಜೀವಿಯಾಗಿ ಸಮಾಜದಲ್ಲಿ ಬದುಕುತ್ತಾನೆ. ಇದಲ್ಲದೆ ಸಾಹಿತ್ಯ, ಸಂಗೀತ ಹಾಗೂ ಲಲಿತ ಕಲೆಗಳಿಂದಲೂ ಮನಸ್ಸಿಗೆ ಸಂತೋಷ-ಉಲ್ಲಾಸಗಳು ಲಭಿಸುತ್ತವೆ. ಈ ಸಂತೋಷವು ದೈಹಿಕ ಸಂತೋಷಕ್ಕಿಂತ ಉಚ್ಚವಾದುದು. ಆದರೆ ಇದು ಕೂಡ ತಾತ್ಕಾಲಿಕವೇ.

ಮಾನವನ ನಾಲ್ಕನೆಯ ಸ್ತರದ ಸಂತೋಷಕ್ಕೆ ಆಧಾರ ವಿಜ್ಞಾನಮಯಕೋಶ ಅಥವಾ ಮೇಧಾಶಕ್ತಿ. ಮೇಧಾಶಕ್ತಿಯ ಉಪಯೋಗದಿಂದ ಸಮಾಜಕ್ಕೆ ಉಪಯೋಗವಾಗುವ ಕೊಡುಗೆಗಳನ್ನು ಕೊಟ್ಟಾಗ ಈ ಸಂತೋಷದ ಅನುಭವಾಗುತ್ತದೆ. ವಿಜ್ಞಾನಿಗಳು, ಸಂಶೋಧಕರು ಹಾಗೂ ಇತರ ಸೃಜನಾಶೀಲ ವ್ಯಕ್ತಿಗಳು ಇಂತಹ ಸಂತೋಷವನ್ನೇ ಅರಸುತ್ತಿರುತ್ತಾರೆ. ಇವರಿಗೆ ದೈಹಿಕ ಸಂತೋಷ, ಭದ್ರತೆ ಹಾಗೂ ಕೌಟುಂಬಿಕ ಮತ್ತು ಸಾಮಾಜಿಕ ಜೀವನದ ಪರಿವೆಯೇ ಇರುವುದಿಲ್ಲ. ಸದಾಕಾಲ ತಮ್ಮ ಮೇಧಾಶಕ್ತಿಯನ್ನು ಉಪಯೋಗಿಸುವುದರಲ್ಲೇ ಇವರ ಸಂತೋಷವಿರುತ್ತದೆ.

ಮಾನವನು ಅನುಭವಿಸಬಹುದಾದ ಅತ್ಯುನ್ನತ ಸ್ತರದ ಸಂತೋಷಕ್ಕೆ ಆಧಾರವಾಗಿರುವುದು ಅವನ ಅಂತರಂಗದ ಕೇಂದ್ರವಾದ ಆನಂದಮಯಕೋಶ. ಮಾನವನ ಸುಖಾನ್ವೇಷಣೆೆಯು ಈ ಆನಂದದ ಅನುಭವದಲ್ಲಿ ಅಂತ್ಯವಾಗುತ್ತದೆ. ಆದರೆ ಇದನ್ನು ಅನುಭವಿಸಲು ಮಾನವನು ದೈಹಿಕ ತೃಷ್ಣೆ, ಭೋಗಲಾಲಸೆಗಳನ್ನು, ಸಂಪತ್ತು-ಅಧಿಕಾರಗಳ ವ್ಯಾಮೋಹವನ್ನು ಹಾಗೂ ಎಲ್ಲಾ ರೀತಿಯ ಸ್ವಾರ್ಥಪರವಾದ ಚಿಂತನೆಗಳನ್ನು ತ್ಯಜಿಸಬೇಕಾಗುತ್ತದೆ. ಪರಿಪೂರ್ಣ ನಿಸ್ವಾರ್ಥಪರತೆಯನ್ನು ಆಶ್ರಯಿಸಿ ಸರ್ವ ಜೀವಿಗಳನ್ನು ಪ್ರೀತಿಸಿ ಎಲ್ಲರ ಸುಖಕ್ಕಾಗಿ ಹಾತೊರೆಯುವುದು ಇಂತಹ ವ್ಯಕ್ತಿಗಳ ಸ್ವಭಾವ. ಇದರಿಂದ ಲಭ್ಯವಾಗುವ ಆನಂದವು ಶಾಶ್ವತವಾದದ್ದು; ಅಂತರಂಗದಿಂದಲೇ ಹೊರಹೊಮ್ಮುವ ಆನಂದವನ್ನು ಅನುಭವಿಸುವ ಇವರ ಜೀವನದಲ್ಲಿ ಯಾವುದೇ ಪರಾವಲಂಬನೆಯಿರುವುದಿಲ್ಲ. ಇತರರಿಂದ ಇವರು ಏನನ್ನೂ ನಿರೀಕ್ಷಿಸುವುದಿಲ್ಲ, ಆಶಿಸುವುದಿಲ್ಲ. ಬದಲಿಗೆ ತಮ್ಮಲ್ಲಿರುವ ಎಲ್ಲವನ್ನೂ ಇತರರ ಸುಖಕ್ಕಾಗಿ ಧಾರೆಯೆರೆಯಲು ಸದಾ ಸಿದ್ಧರಾಗಿರುತ್ತಾರೆ.

ಮಾನವನ ಐದು ಸ್ತರಗಳ ಈ ಸಂತೋಷಾನ್ವೇಷಣೆೆಯನ್ನು ಮಾಸ್ಲೋವಿನ ‘ಕ್ರಮಾನುಗತ ಅವಶ್ಯಕತೆಗಳ ಶ್ರೇಣಿ’ಗೆ (Maslow’s ‘Hierarchy of Needs’) ಹೋಲಿಸಬಹುದು. ಅನ್ನಮಯ ಕೋಶಕ್ಕೆ ಸಂಬಂಧಿಸಿದ ದೈಹಿಕ ಅವಶ್ಯಕತೆಗಳು (Physiological Needs), ಪ್ರಾಣಮಯ ಕೋಶಕ್ಕೆ ಸಂಬಂಧಿಸಿದ ಭದ್ರತೆಯ ಅವಶ್ಯಕತೆಗಳು (Security Needs), ಮನೋಮಯ ಕೋಶಕ್ಕೆ ಸಂಬಂಧಿಸಿದ ಸಾಮಾಜಿಕ ಅವಶ್ಯಕತೆಗಳು (Social Needs), ವಿಜ್ಞಾನಮಯ ಕೋಶಕ್ಕೆ ಸಂಬಂಧಿಸಿದ ಆತ್ಮತೃಪ್ತಿಯ ಅವಶ್ಯಕತೆ (Esteem Needs) ಹಾಗೂ ಆನಂದಮಯ ಕೋಶಕ್ಕೆ ಸಂಬಂಧಿಸಿದ ಆತ್ಮ-ವಾಸ್ತವೀಕರಣ ಅವಶ್ಯಕತೆಗಳು (Self-actualisation Needs). ಆದರೆ ಕೊನೆಯ ಸ್ತರವಾದ ‘ಆತ್ಮ-ವಾಸ್ತವೀಕರಣ’ದ ಬಗ್ಗೆ ಮಾಸ್ಲೋವಿನ ಕಲ್ಪನೆಗೂ, ಸನಾತನ ಧರ್ಮದ ಗ್ರಹಿಕೆಗೂ ತುಂಬಾ ವ್ಯತ್ಯಾಸವಿದೆ.

ಮಾಸ್ಲೋವಿನ ಪ್ರಕಾರ ಮಾನವನ ವ್ಯಕ್ತಿತ್ವದ ಎಲ್ಲಾ ಸಾಮರ್ಥ್ಯಗಳೂ ಸಂಪೂರ್ಣವಾಗಿ ಹೊರಹೊಮ್ಮಿದಾಗ ಅದುವೇ ಆತ್ಮ-ವಾಸ್ತವೀಕರಣವಾಗುತ್ತದೆ. ಆದರೆ ಇದರಲ್ಲಿ ಮಾನವನ ಅಂತರಂಗದಲ್ಲಿರುವ ದಿವ್ಯತ್ವದ ಅನಾವರಣವು ಸೇರಿಲ್ಲ. ಸನಾತನ ಧರ್ಮದಲ್ಲಿ ಮಾನವನು ದಿವ್ಯತೆಯ ಸಾಕ್ಷಾತ್ಕಾರದಿಂದ ಮಾತ್ರ ಪರಿಪೂರ್ಣನಾಗುತ್ತಾನೆ. ಇಂತಹ ಪರಿಪೂರ್ಣತೆಯಲ್ಲಿ ನಿಜವಾದ ಸುಖದ ಅನುಭವವಾಗುತ್ತದೆ. ಮಾನವ ಸಂತೋಷದ ಈ ಐದು ಸ್ತರಗಳನ್ನು ಇನ್ನೊಂದು ರೀತಿಯಲ್ಲಿ ನಾವು ಸಮಾಜದಲ್ಲಿ ಕಾಣಬಹುದು. ಒಂದು ವರ್ಗದವರು ಕೇವಲ ದೈಹಿಕ ಸಂತೋಷದಿಂದಲೇ ತೃಪ್ತರಾಗುವವರು. ಎರಡನೆಯ ವರ್ಗದವರಿಗೆ ಸಂಪತ್ತು ಹಾಗೂ ಸಾಮಾಜಿಕ ಗೌರವಗಳಿಂದ ಮಾತ್ರ ತೃಪ್ತಿ. ಮೂರನೇ ವರ್ಗದವರಿಗೆ ಅಧಿಕಾರ ಹಾಗೂ ಸ್ಥಾನ-ಮಾನಗಳಿಂದ ತೃಪ್ತಿ. ನಾಲ್ಕನೆಯ ವರ್ಗದವರಿಗೆ ಪಾಂಡಿತ್ಯ ಹಾಗೂ ಬೌದ್ಧಿಕ ಸಂತೋಷಗಳಲ್ಲಿ ತೃಪ್ತಿ. ಐದನೆಯ ವರ್ಗದವರು ಸಾಧು-ಸಂತರು; ಇವರಿಗೆ ಆತ್ಮಾನಂದದಲ್ಲಿಯೇ ತೃಪ್ತಿ.

ಈ ಐದು ಸ್ತರಗಳ ಸಂತೋಷಗಳ ಪೈಕಿ ಯಾವುದಕ್ಕಾಗಿ ಕೃಷಿಮಾಡಬೇಕೆಂಬ ಆಯ್ಕೆಯ ಸ್ವಾತಂತ್ರ್ಯು ಪ್ರತಿ ವ್ಯಕ್ತಿಗೂ ಇದ್ದೇ ಇದೆ. ಆದರೆ ಸನಾತನ ಧರ್ಮದ ಪ್ರಕಾರ ಮಾನವ ಜೀವನದ ಚರಮಗುರಿಯಾದ ಆತ್ಮಸಾಕ್ಷಾತ್ಕಾರವನ್ನು ಪಡೆದಾಗಲೇ ಮಾನವರಿಗೆ ಶಾಶ್ವತವಾದ ನಿಜಸುಖವು ಲಭಿಸುತ್ತದೆ. ಇದನ್ನೇ ಕಠೋಪನಿಷತ್ತಿನಲ್ಲಿ ಗುರುವಾದ ಯಮದೇವನು ಶಿಷ್ಯ ನಚಿಕೇತನಿಗೆ ಬೋಧಿಸಿದ್ದಾನೆ-

ಏಕೋ ವಶೀ ಸರ್ವಭೂತಾಂತರಾತ್ಮ

ಏಕಂ ರೂಪಂ ಬಹುಧಾ ಯಃ ಕರೋತಿ |

ತಮಾತ್ಮಸ್ಥಂ ಯೇನುಪಶ್ಯಂತಿ ಧೀರಾಃ

ತೇಷಾಂ ಸುಖಂ ಶಾಶ್ವತಂ ನೇತರೇಷಾಮ್ || (2.2.12)

‘ವಿಶ್ವಕ್ಕೆ ಒಡೆಯನಾದ ಪರಮಾತ್ಮನು ಸರ್ವಭೂತಗಳ ಅಂತರಾತ್ಮ. ಅವನೇ ವಿಶ್ವದಲ್ಲಿ ಬಹುರೂಪಿಯಾಗಿದ್ದಾನೆ. ಈ ಪರಮಾತ್ಮನನ್ನು ಅಂತರಂಗದಲ್ಲಿಯೇ ಕಂಡುಕೊಂಡ ಧೀರರಿಗೆ ಮಾತ್ರ ಶಾಶ್ವತ ಸುಖವು ಲಭಿಸುತ್ತದೆಯಲ್ಲದೆ, ಇತರರಿಗಲ್ಲ!’

(ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net