ನೋವಿನ ಕೂಗು ನೆರಳಾಗಬಯಸಿದ್ದ ಕವಿ

Sidd
Published on

"ಹೋರಾಟದ ಸಾಗರಕ್ಕೆ/ ಸಾವಿರಾರು ನದಿಗಳು' ಅಥವಾ "ದಲಿತರು ಬರುವರು ದಾರಿ ಬಿಡಿ/ ದಲಿತರ ಕೈಗೆ ರಾಜ್ಯ ಕೊಡಿ' ಮೊದಲಾದ ಹಲವಾರು ಸಾಲುಗಳ ಗುನುಗುವಿಕೆಯಿಂದಲೇ ಕರ್ನಾಟಕದಾದ್ಯಂತ ಕಳೆದ ಅರ್ಧ ಶತಮಾನದಲ್ಲಿ ಮನೆ ಮಾತಾಗಿರುವವರು ಕವಿ ಡಾ. ಸಿದ್ಧಲಿಂಗಯ್ಯ. ಅವರ "ಹೊಲೆಮಾದಿಗರ ಹಾಡು' ಸಂಕಲನ 1975ರಲ್ಲಿ ಪ್ರಕಟವಾದಾಗ ಅವರಿಗೆ ವಯಸ್ಸು 21 ವರುಷ. ಅದರಲ್ಲಿರುವ "ಇಕ್ರಲಾ ಒದೀರ್ಲಾ/ ಈ ನನ್​ ಮಕ್ಕಳ ಚರ್ಮ ಎಬ್ರಲಾ' ಎಂಬ ಒಂದು ಪದ ಕರ್ನಾಟಕವನ್ನು ಒಂದು ಕಾಲಕ್ಕೆ ನಡುಗಿಸಿಬಿಟ್ಟಿತ್ತು. ದಲಿತ ಸಾಹಿತ್ಯ ಹುಟ್ಟಿ ಮುಂದೆ ಬಂಡಾಯ ಸಾಹಿತ್ಯ ಬೆಳೆದು & ಎರಡೂ ಸಾಹಿತ್ಯ ಪರಸ್ಪರ ಪೂರಕವಾಗಿ ಕೊಡು&ಪಡೆ ಸಂಬಂಧಗಳಿಂದ ನವ್ಯದ ಬಳಿಕ ಮುಖ್ಯ ಸಾಹಿತ್ಯ ಚಳವಳಿಯಾಯಿತು. ಬಂಡಾಯ ಸಾಹಿತ್ಯ ಮತ್ತು ದಲಿತ ಸಾಹಿತ್ಯಕ್ಕೆ ಇರುವ ವ್ಯತ್ಯಾಸಗಳು ತೀರಾ ಗೌಣವಾದವುಗಳು ಎಂದು ಸಿದ್ಧಲಿಂಗಯ್ಯ ವಿವರಿಸುತ್ತಿದ್ದರು. ದಲಿತ ಸಾಹಿತ್ಯ ಕೆಳಸ್ತರದ ಸಾಹಿತಿಗಳ ಸೃಷ್ಟಿ, ಬಂಡಾಯ ಸಾಹಿತ್ಯ ಎಲ್ಲ ಜಾತಿ, ಜನವರ್ಗಗಳ ಶೋಷಿತರ ಪರವಾದ ಕ್ರಾಂತಿಕಾರೀ ಸಾಹಿತ್ಯ ಎನ್ನುತ್ತಿದ್ದರು. ಬಂಡಾಯ ಸಾಹಿತ್ಯ ಚಳವಳಿಯಲ್ಲಿ ದಲಿತರು, ಮಾರ್ಕ್ಸ್​ವಾದಿಗಳು, ಲೋಹಿಯಾವಾದಿಗಳು ಹೀಗೆ ಎಲ್ಲಾ ಎಡ ಮತ್ತು ಪ್ರಜಾಪ್ರಭುತ್ವ ಶಕ್ತಿಗಳು ಸೇರಿಕೊಂಡಿದ್ದಾರೆ ಎಂಬ ನಿಲುವು ಅವರದಾಗಿತ್ತು. ಸ್ವತ@ ಅಂಬೇಡ್ಕರ್​ವಾದ ಮತ್ತು ಮಾರ್ಕ್ಸ್​ವಾದ ಒಟ್ಟಾಗಿ ಇರುವ ವೈಚಾರಿಕ ಸಿದ್ಧಾಂತ ಸಾಧ್ಯವೆಂದು ನಂಬಿ ನಡೆಯುತ್ತಿದ್ದ ಸಿದ್ಧಲಿಂಗಯ್ಯನವರಿಗೆ ಈ ಗ್ರಹಿಕೆ ಸಹಜವಾಗಿತ್ತು.

ಸಿದ್ಧಲಿಂಗಯ್ಯನವರು ಕನ್ನಡ ಕವಿ. ದಲಿತ ಅಸ್ಮಿತೆ, ಹೋರಾಟ ಹಾಗೂ ಸಮಾನತೆಗಳ ಪರವಾಗಿ ಮತ್ತು ಶೋಷಣೆ, ಬಡತನಗಳ ವಿರುದ್ಧವಾಗಿ ತಮ್ಮ ಬರಹ ಮಾತು ಮತ್ತು ಕ್ರಿಯೆಗಳ ಮೂಲಕ ನಿಜವಾದ ಅರ್ಥದಲ್ಲಿ ಕೊನೆ ಉಸಿರಿನವರೆಗೂ ಅವರು ಕೆಲಸ ಮಾಡಿದರು. ಆಸ್ಪತ್ರೆಗೆ ಸೇರುವ ಎರಡು ದಿನಗಳ ಮೊದಲು ನನ್ನ ಪರಿಚಯದ ಗ್ರೂಪ್​ ಡಿ ಬಡ ನೌಕರನೊಬ್ಬನ ಕೆಲಸ ಮಾಡಿಕೊಟ್ಟಿದ್ದರು. ಅಂಬೇಡ್ಕರ್​ ಅವರ ಕಾನೂನು ಮತ್ತು ಸಾಂವಿಧಾನಿಕ ಕೊಡುಗೆಗಳ ಬಗ್ಗೆ ಇನ್ನಷ್ಟು ವಿವರವಾಗಿ ನನ್ನೊಡನೆ ಮುಂದಿನ ದಿನಗಳಲ್ಲಿ ಚರ್ಚಿಸಬೇಕು ಎಂದುದೇ ಅವರ ಮತ್ತು ನನ್ನ ಅಂದಿನ ಕೊನೆಯ ಭೇಟಿಯ ಕೊನೆ ಮಾತು. ಆ ಬಳಿಕ ಆಸ್ಪತ್ರೆ ಸೇರಿ ಸಾವು ಬದುಕಿನ ಹೋರಾಟದಲ್ಲಿ ಇದ್ದವರೊಡನೆ ಮುಂದೆ ಮಾತನಾಡುವುದು ಸಾಧ್ಯವಿರಲಿಲ್ಲ.

ಅವರ "ಪಂಚಮ' ಎಂಬ ನಾಟಕದ ಕೊನೆಯಲ್ಲಿ ಹಯವದನರಾಯರಿಗೆ ಹೊಡೆದು ತಾನು ಕೊಲೆಗಡುಕ ಅಲ್ಲ ಎಂದು ಪಂಚಮ ಹೇಳುವುದು ""ಇಡೀ ಜನಾ ಬದುಕಬೇಕಾದ್ರೆ ಮಾಡ್​ಬೇಕಾಗಿರೋ ಕೆಲ್ಸಾನ ನಾನು ಮಾಡ್ತಾ ಇದೀನಿ, ಅಷ್ಟೆ. ಖಂಡಿತವಾಗಿಯೂ ನಾನು ಹರಿಜನ ಅಲ್ಲ. ನಾನು ಹೊಲೆಮಾದಿಗ. ಪ್ರಪಂಚ ಇರೋವರೆಗೂ ಹೊಲೆಮಾದಿಗರು ನಿಮ್ಮ ಗುಲಾಮರಾಗಿರಬೇಕು ಅನ್ನೋದು ನಿಮ್​ ಇಷ್ಟ. ಆದ್ರೆ ಹೊಲೆಮಾದಿಗರು ಅದಕ್ಕೆ ತಯಾರಿಲ್ಲ'' ಎಂದು ಸಾರುತ್ತಾನೆ. ಈ ನೋವಿನ ಸ್ಪಷ್ಟ ಕಲ್ಪನೆಯಲ್ಲೇ ಅವರು ಅಂಬೇಡ್ಕರ್​ ಕವನದಲ್ಲಿ "ನಾಡ ನಡುವಿನಿಂದ ಸಿಡಿದ/ ನೋವಿನ ಕೂಗೆ/ ಆಕಾಶದ ಅಗಲಕ್ಕೂ/ ನಿಂತ ಆಲವೆ' ಎಂದರು. ನೋವಿನ ಕೂಗು ಆಲದ ನೆರಳಾಗುವುದನ್ನು ಹೇಗೆ ಸಾಧ್ಯ ಮಾಡಬಹುದು ಎಂಬುದೇ ಅವರ ಮಾರ್ಕ್ಸ್​ ಮತ್ತು ಅಂಬೇಡ್ಕರ್​ ಜೋಡಿ ಚಿಂತನೆಯ ಹುಡುಕಾಟವಾಗಿತ್ತು. ಅವರ ಕವನಗಳು ಕನ್ನಡ ಕಾವ್ಯದೊಡನೆ ನಿರಂತರವಾಗಿ ಮುಖಾಮುಖಿ ಆಗುತ್ತಿದ್ದವು. ಯುಗಾದಿ ಬಗ್ಗೆ ನಾಲ್ಕು ಕವನಗಳನ್ನು ಬರೆದಿರುವ ಸಿದ್ಧಲಿಂಗಯ್ಯನವರ ಕೆಲವು ಸಾಲುಗಳು, "" ಬೀದಿವಾಸಿಯ ಅಳಲು ಜೋಪಡಿಯ ಕತ್ತಲು/ ದಿನದಿನದ ಅನ್ನಕ್ಕೆ ಮಾರಿಕೊಳ್ಳುವ ಮಯ್ಯಿ/ ಆಸೆಯಲಿ ಚಾಚಿರುವ ಲಂಚಕೋರನ ಕೈಯಿ/ ಯುಗಯುಗವು ಕಳೆದರೂ ಅಳಿಯದೇನು'' ಎಂಬುದನ್ನು ಬೇಂದ್ರೆಯವರ ಯುಗಾದಿಗೆ ಮುಖಾಮುಖಿ ಮಾಡಿದರೆ ಸ್ಪಷ್ಟವಾಗುತ್ತದೆ. ಹಾಗೆಯೇ "ಕುರುಡು ಕಾಂಚಾಣ' ಕಾಲಲ್ಲಿ ಕಾಣದೆ ಇರುವ ಬಾಣಂತಿಯರ ಎಲುಬಿನ ಕಿರುಗೆಜ್ಜೆಯ ಜೊತೆ ""ದೊಡ್ಡ ಗೌಡರ ಬಾಗಿಲಿಗೆ/ ನಮ್ಮ ಮೂಳೆಯ ತ್ವಾರಣ''ವನ್ನೂ ಹೋಲಿಸಬಹುದು.

ಕವಿ ಸಿದ್ಧಲಿಂಗಯ್ಯ"ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾಕ್ಕೆ "ಗೆಳತಿ ಓ ಗೆಳತಿ/ ಅಪ್ಪಿಕೋ ಎನ್ನ ಅಪ್ಪಿಕೋ...' ಎಂಬ ಗೀತೆ ಬರೆದಾಗ ಅದರಲ್ಲಿರುವ "ಜಗದ ಗೊಂದಲ ಬೇಡ ನನಗೆ' ಎಂದಿರುವುದು ಸರಿಯೆ ಎಂಬ ಪ್ರಶ್ನೆ ಬಂದಾಗ ಹೇಳಿದ್ದರು& ""ಮೊದಲಿಗೆ ನಾನೊಬ್ಬ ಮನುಷ್ಯ. ನಂತರ ಕವಿ. ಅನಂತರ ಬಂಡಾಯ ಕವಿ. ಭಾವನೆ ಗಳಿಗೆ ನಾನೂ ಹೊರತಲ್ಲ.'' ತೀರಿಕೊಂಡ ಕವಿ ಸಿದ್ಧಲಿಂಗಯ್ಯ ತಮ್ಮ ಸಾಹಿತ್ಯ, ಚಿಂತನೆ ಮತ್ತು ನಡೆಸಿದ ಹೋರಾಟಗಳ ಮೂಲಕ ಸದಾ ನಮ್ಮೊಡನೆ ಇರುತ್ತಾರೆ.

| ಡಾ. ಎಸ್​.ಆರ್​. ವಿಜಯಶಂಕರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net