ಸಂಸ್ಕೃತಿ ಚಿಂತನೆ: ವ್ಯಕ್ತಿ ಪೂಜೆ ನಿಂದ್ಯವೋ? ವಂದ್ಯವೋ?

Ramakrishna
Published on
  • ಸುಬ್ರಹ್ಮಣ್ಯ ಸೋಮಯಾಜಿ

ಇಂದು ಲೋಕದಲ್ಲಿ ಅನೇಕ ವ್ಯಕ್ತಿಗಳನ್ನು ಪೂಜೆ ಮಾಡುವುದು ಕಂಡುಬರುತ್ತದೆ. ರಾಜಕೀಯ ಪ್ರಮುಖರನ್ನು ಅವರಿಂದಾಗಬೇಕಾದ ಅನುಕೂಲಗಳ ನಿರೀಕ್ಷೆಯಿಂದ ಪೂಜೆ ಮಾಡುತ್ತಾರೆ. ಸಿನಿಮಾ ತಾರೆಯರನ್ನು ಇಷ್ಟಪಟ್ಟು ಅವರನ್ನೂ ಪೂಜೆ ಮಾಡುವವರಿದ್ದಾರೆ. ಮತಗಳ ಪ್ರವರ್ತಕರನ್ನು, ಜಾತಿಗಳ ಪ್ರಮುಖರನ್ನು, ಸಿದ್ಧಾಂತಗಳ ನಿರೂಪಕರನ್ನು, ಆಧ್ಯಾತ್ಮಿಕ ಮಾರ್ಗದರ್ಶಕರನ್ನು... ಹೀಗೆ ವ್ಯಕ್ತಿ ಪೂಜೆ ಎಲ್ಲೆಲ್ಲೂ ನಡೆದಿದೆ. ನಾವು ಯಾರನ್ನು ಹೀರೋ ಎಂದುಕೊಳ್ಳುತ್ತೇವೋ ಅವರನ್ನೆಲ್ಲ ಪೂಜೆ ಮಾಡುವುದನ್ನು ನೋಡುತ್ತೇವೆ. ಹೀರೋ ವರ್ಶಿಪ್ ಎನ್ನುವ ಪದವೂ ಪ್ರಸಿದ್ಧವಾಗಿದೆ. ಹೀಗೆ ಪೂಜೆ ಮಾಡಿಸಿಕೊಳ್ಳುವುದು ದೊಡ್ಡಸ್ತಿಕೆಯ ಕುರುಹಾಗಿದೆ. ಎಷ್ಟೆಷ್ಟು ಹೆಚ್ಚು ಜನ ಪೂಜೆ ಮಾಡುತ್ತಾರೋ ಆಯಾ ವ್ಯಕ್ತಿಗಳದ್ದು ಅಷ್ಟಷ್ಟು ಹಿರಿಮೆ ಎಂಬಂತಾಗಿದೆ.

ಹೃದಯ ದೌರ್ಬಲ್ಯದ ಲಕ್ಷಣ: ಇನ್ನೊಂದೆಡೆ ಈ ಬಗೆಯ ವ್ಯಕ್ತಿ ಪೂಜೆ ನಿಂದನೀಯ, ಹೃದಯ ದೌರ್ಬಲ್ಯದ ಲಕ್ಷಣ, ವಿಚಾರವಂತರಿಗೆ ಸಲ್ಲದಿರುವುದು ಎಂಬ ಮಾತೂ ಕೇಳಿಬರುತ್ತಿದೆ. ‘‘ನಮ್ಮಂತೆ ಇರುವ ವ್ಯಕ್ತಿಗಳನ್ನು ಪೂಜಿಸುವುದು ಎಷ್ಟು ವಿಚಿತ್ರ? ಇದರಲ್ಲಿ ವಿವೇಕವಂತೂ ಇರಲು ಸಾಧ್ಯವಿಲ್ಲ. ಭಾವುಕರಾಗಿ ಯಾರ್ಯಾರನ್ನೋ ದೇವರನ್ನು ಪೂಜಿಸಿದಂತೆ ಪೂಜಿಸುವುದು ಬುದ್ಧಿಯ ದಿವಾಳಿತನವಲ್ಲದೆ ಮತ್ತೇನು? ವ್ಯಕ್ತಿಯನ್ನು ಪೂಜಿಸುವುದರಿಂದ ಅವನ ಅಹಂಕಾರ ಹೆಚ್ಚುತ್ತದೆ. ಪ್ರಜಾಪ್ರಭುತ್ವದಲ್ಲಂತೂ ಎಲ್ಲರೂ ಸಮಾನರು. ಯಾರೋ ಒಬ್ಬನನ್ನು ಶ್ರೇಷ್ಠ ಎಂದು ಪರಿಗಣಿಸಿ ಪೂಜಿಸುವುದೇ ಅಪರಾಧ. ಸನ್ಯಾಸಿಗಳನ್ನು, ಗುರುಗಳನ್ನು ಪಾದ ತೊಳೆದು ಪೂಜಿಸುವುದಂತೂ ಮತಿಹೀನತೆ, ಭಾವಾತಿರೇಕ. ಇವತ್ತಿನ ಆಧುನಿಕ ಜಗತ್ತಿನಲ್ಲಿ ಇಂತಹ ಕಲ್ಪನೆಯೇ ಅಸಹ್ಯ. ಗುಲಾಮಗಿರಿಯ ಸಂಕೇತ. ಭಗವಂತನನ್ನು ಪೂಜಿಸಬೇಕೇ ಹೊರತು, ವ್ಯಕ್ತಿಗಳನ್ನಲ್ಲ’’ ಎನ್ನುವವರು ಬೇಕಾದಷ್ಟು ಜನರಿದ್ದಾರೆ. ಹೌದು. ಇದೂ ಸರಿಯೆಂದೇ ಅನ್ನಿಸುತ್ತದೆ. ಆದರೂ ಈ ವಿಷಯವನ್ನು ವಿಚಾರಪೂರ್ವಕವಾಗಿ ಚಿಂತಿಸಬೇಕಾಗಿದೆ.

ಪೂಜೆ ಎಂದರೇನು?: ಪೂಜ್ ಧಾತು ಗೌರವ ಎಂಬ ಅರ್ಥವನ್ನು ಹೊಂದಿದೆ. ಪೂಜೆ ಎಂದರೆ ಗೌರವಿಸುವುದು. ಪರಿಚಿತರನ್ನು ನೋಡಿದಾಗ ಅವರೊಂದಿಗಿನ ಸಂಬಂಧದ ಮೇಲೆ ನಾವು ಕೊಡುವ ಗೌರವ ಅವಲಂಬಿತವಾಗಿದೆ. ಹಿರಿಯರಿಗೆ ಕೊಡುವ ಗೌರವ ಒಂದು ಬಗೆಯದಾದರೆ ಸಮಾನವಯಸ್ಕರಿಗೆ, ಸ್ನೇಹಿತರಿಗೆ ಕೊಡುವ ಗೌರವ ಬೇರೆ. ಭಗವಂತನಿಗೆ ಕೊಡುವ ಗೌರವವು ಪೂಜೆಯಾಗುತ್ತದೆ. ಗೌರವ ಕೊಡುವುದು ಅಭ್ಯಾಸ ಮಾಡಿ ಬರುವ ಕ್ರಿಯೆಯಲ್ಲ. ಸಹಜವಾಗಿ ನಾವು ಒಬ್ಬರನ್ನು ಕಂಡಾಗ ನಮ್ಮಲ್ಲಿ ಅಪ್ರಯತ್ನದಿಂದಾಗುವ ಕ್ರಿಯೆ ಅದು.

ದೇವರ ಪೂಜೆ ಎಂದರೇನು?: ಮಹರ್ಷಿಗಳು ಯೋಗ ಮಾರ್ಗದಲ್ಲಿ ಹಿಂದಕ್ಕೆ ಸಾಗಿ ಜೀವನದ ಮೂಲನೆಲೆಯಾದ ಭಗವಂತನನ್ನು ಕಂಡಾಗ ಅವರಲ್ಲಾದ ಸಹಜವಾದ ಪ್ರತಿಕ್ರಿಯೆಯೇ ಭಗವಂತನ ಪೂಜೆ. ಅದನ್ನು ಅವರು ಜೀವಲೋಕದ ಮೇಲಿನ ಕರುಣೆಯಿಂದ, ಎಲ್ಲರೂ ತಮ್ಮೊಳಗಿನ ಭಗವಂತನನ್ನು ಕಂಡು ಆನಂದಿಸುವಂತಾಗಲಿ ಎಂಬುದಕ್ಕಾಗಿ ಲೋಕದಲ್ಲಿ ತಂದಿದ್ದಾರೆ. ಆದರೆ ಭಗವಂತನನ್ನು ಪೂಜಿಸಿದಂತೆ ವ್ಯಕ್ತಿಗಳನ್ನೇಕೆ ಪೂಜಿಸಬೇಕು? ದೀಪವನ್ನು ತೆಗೆದುಕೊಂಡು ಬನ್ನಿ ಎಂದರೆ ಹಣತೆಯೊಂದಿಗೇ ತರಬೇಕಾಗುತ್ತದೆ. ಹಣತೆ ಇಲ್ಲದೆ ಬರಿಯ ದೀಪವನ್ನು ತರಲಾಗದು. ಎಳನೀರನ್ನು ತೆಗೆದುಕೊಂಡು ಬಾ ಎಂದರೆ ಹೊರಗಿನ ಮಟ್ಟೆ ಸಹಿತವಾಗಿಯೇ ತರಬೇಕು. ಹಾಗೆಯೇ ಭಗವಂತನೂ ವ್ಯಕ್ತಿಗಳ ಮೂಲಕ ನಮ್ಮ ಉದ್ಧಾರಕ್ಕಾಗಿ ವ್ಯಕ್ತನಾಗುವುದುಂಟು. ಆಗ ಅಂತಹ ವ್ಯಕ್ತಿಗಳು ದೀಪವನ್ನು ಹೊತ್ತ ಹಣತೆಯಂತೆ, ಎಳನೀರನ್ನು ಹೊತ್ತ ಮಟ್ಟೆಯಂತೆ, ಭಗವಂತನನ್ನು ಹೊತ್ತು ಪುಣ್ಯಶ್ಲೋಕರಾಗುತ್ತಾರೆ. ಅಂತಹ ವ್ಯಕ್ತಿಗಳ ಪೂಜೆ ಭಗವಂತನ ಪೂಜೆಯೇ. ತಮ್ಮೊಳಗೆ ಭಗವಂತನನ್ನು ತುಂಬಿಕೊಂಡ ವ್ಯಕ್ತಿಗಳಲ್ಲಿ ಭಗವಂತನೇ ವ್ಯಕ್ತವಾಗುತ್ತಾನೆ. ವ್ಯಕ್ತಿ ಪೂಜೆ ಬೇಕೇ, ಬೇಡವೇ ಎಂದು ನಿರ್ಧರಿಸಬೇಕಾದರೆ ಅವರು ಯಾವ ಭಾವವನ್ನು ವ್ಯಕ್ತಗೊಳಿಸುತ್ತಿದ್ದಾರೆ ಎಂಬುದನ್ನು ನೋಡಿ ನಿಶ್ಚಯಿಸಬೇಕಾಗುತ್ತದೆ.

ಭಗವಂತನೂ ತತ್ತ್ವಮಯ: ನಮ್ಮ ಮುಂದೆ ಭಗವಂತ ಕಾಣಿಸಿಕೊಳ್ಳಬೇಕಾದರೆ 24 ತತ್ತ್ವಗಳ ಜತೆಯಲ್ಲೇ ಕಾಣಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಅವನು ಅವ್ಯಕ್ತನಾಗಿಯೇ ಇದ್ದು ಬಿಡಬೇಕಾಗುತ್ತದೆ. ಅವನು ಹಾಗೆ ಕಾಣಿಸಿಕೊಂಡಾಗ ನಮಗೆ, ಇವನು ನಮ್ಮಂತೆಯೇ ಇದ್ದಾನಲ್ಲ ಎನಿಸಿಬಿಡುತ್ತದೆ. ಆದರೆ ಅವನು ನಮ್ಮ ಉದ್ಧಾರಕ್ಕಾಗಿ ನಮ್ಮಂತೆ ಕಾಣಿಸಿಕೊಂಡಿದ್ದಾನೆ ಎಂಬುದರ ಅರಿವಾಗುವವರೆಗೂ ನಾವು ಭ್ರಮೆಯಲ್ಲಿಯೇ ಇರುತ್ತೇವೆ. ಹಾಗೆಯೇ ತಮ್ಮ ತಪಸ್ಯೆಯಿಂದ ಭಗವಂತನನ್ನು ಕಂಡು ಅವನ ದರ್ಶನದ ಆನಂದವನ್ನು ಮೈಮನಸ್ಸುಗಳಲ್ಲೆಲ್ಲಾ ತುಂಬಿಕೊಂಡು ನಮಗೂ ಅದನ್ನು ಹರಿಸುವ ಶಕ್ತಿಯುಳ್ಳ ಜ್ಞಾನಿಗಳನ್ನು ಪೂಜಿಸಿದಾಗಲೂ ನಮಗೆ ಲೌಕಿಕವಾದ ವ್ಯಕ್ತಿಪೂಜೆ ಎನ್ನಿಸಬಾರದು.

ಶ್ರೀ ಕೃಷ್ಣನು ಗೀತೆಯಲ್ಲಿ ಅಪ್ಪಣೆ ಕೊಡಿಸಿದಂತೆ ‘ಅವಜಾನಂತಿ ಮಾಂ ಮೂಢಾಃ ಮಾನುಷೀ ತನುಮಾಶ್ರಿತಂ, ಪರಂಭಾವಮಜಾನಂತಃ ಮಮಭೂತ ಮಹೇಶ್ವರಂ’. ಮನುಷ್ಯನ ಶರೀರವನ್ನು ಹೊತ್ತು ಬಂದಿದ್ದ ಕಾರಣದಿಂದ ಕೃಷ್ಣನನ್ನೂ ಇತರರಂತೆಯೇ ಮನುಷ್ಯನೆಂದು ಅವನ ಕಾಲದಲ್ಲೂ ಭಾವಿಸಿದವರುಂಟು. ಆದರೆ ಆ ಮಾನುಷ ಭಾವದ ಹಿಂದಿನ ಪರಭಾವ, ಪರಾತ್ಪರ ಭಾವ ಆಗಲೂ ಜ್ಞಾನಿಗಳಿಗೆ ಮಾತ್ರ ಅನುಭವವಾಗಿದ್ದುದನ್ನು ಕಾಣುತ್ತೇವೆ. ವ್ಯಕ್ತಿಯು ಪರಭಾವವನ್ನು ವ್ಯಕ್ತಗೊಳಿಸುತ್ತಿದ್ದರೆ ನಮ್ಮ ಜೀವನದ ಉದ್ಧಾರಕ್ಕೆ, ಆ ಪರಭಾವಕ್ಕೆ ನಾವೂ ಏರುವುದಕ್ಕಾಗಿ ಅಂತಹ ವ್ಯಕ್ತಿಯ ಪೂಜೆ ಅವಶ್ಯವಾಗಿ ಮಾಡಬೇಕು. ಹಾಗಿಲ್ಲದೆ ನಮ್ಮಂತೆ ಇಂದ್ರಿಯಗ್ರಾಮಗಳಲ್ಲೇ ಸಂಚರಿಸುವ ವ್ಯಕ್ತಿಗಳನ್ನು ಪೂಜೆ ಮಾಡುವುದರಿಂದ ಯಾವ ಪ್ರಯೋಜನವೂ ಇರದು. ಮೇಲೆ ಹೇಳಿದಂತೆ ಅದು ಮತಿಹೀನತೆ, ಹೃದಯ ದೌರ್ಬಲ್ಯದ ಸಂಕೇತವಾಗುತ್ತದೆ. ಮಾತ್ರವಲ್ಲದೆ ದುರ್ಗಣಯುಕ್ತರಾದ ವ್ಯಕ್ತಿಗಳ ಪೂಜೆಯಿಂದ ನಮ್ಮಲ್ಲೂ ದುರ್ಗಣಗಳ ದುರಾಕ್ರಮಣ ನಡೆಯುವ ಅಪಾಯವಿರುತ್ತದೆ. ಅಂತಹ ವ್ಯಕ್ತಿಪೂಜೆ ನಿಜಕ್ಕೂ ನಿಂದನೀಯ. ಹಾಗೆಂದೇ ವ್ಯಕ್ತಿಪೂಜೆ ಬೇಕೇ ಬೇಡವೇ ಎಂಬುದಕ್ಕೆ ಉತ್ತರ ಬೇಕು ಬೇಡ ಎರಡೂ ಆಗುತ್ತದೆ.

ಪ್ರಾಣಪ್ರತಿಷ್ಠೆ: ದೇವಾಲಯದ ಶಿಲಾಮೂರ್ತಿಯನ್ನಾದರೋ ಜ್ಞಾನಿಗಳೇ ತಮ್ಮ ಪ್ರಾಣಪ್ರತಿಷ್ಠೆಯಿಂದ ಅದನ್ನು ಪೂಜಾಯೋಗ್ಯವನ್ನಾಗಿ ಮಾಡಿರುತ್ತಾರೆ. ಮಹಾಜ್ಞಾನಿಯಾದವನು ಪರಿಪೂರ್ಣ ಸ್ಥಿತಿಯಲ್ಲಿದ್ದುಕೊಂಡು ತನ್ನ ಪ್ರಾಣವನ್ನು ಅದರಲ್ಲಿ ಇಡಬೇಕು. ಅವನ ಆತ್ಮಶಕ್ತಿಯನ್ನು ಅಲ್ಲಿಡದಿದ್ದರೆ, ಅದು ಬರಿಯ ಕಲ್ಲು. ಎಂದ ಮೇಲೆ ಅಂತಹ ಚೈತನ್ಯಶಕ್ತಿಯು ಪೂರ್ತಿಯಾಗಿ, ಜೀವಂತವಾಗಿ ಕೆಲಸ ಮಾಡುತ್ತಿರುವ ಜ್ಞಾನಿಗಳನ್ನು ಪೂಜಿಸಲು, ನಮಗೆ ನಮ್ಮಂತೆಯೆ ಇರುವವರನ್ನು ಪೂಜಿಸುವುದು ಹೇಗೆ ಎನ್ನಿಸಿಬಿಡುತ್ತದೆ. ಅವರು ಗತಿಸಿ ಹೋಗಿ ಎಷ್ಟೋ ಕಾಲವಾಗಿ ನಂತರ ಶಿಲೆಯಾದ ಮೇಲೆಯೇ ನಮಗೆ ಇದು ದೇವರು ಎಂಬ ನಂಬಿಕೆ ಬರುವುದು. ಇದು ನಮ್ಮಲ್ಲಿರುವ ದೋಷ.

ಪೂಜನೀಯರನ್ನು ತಿಳಿಯುವುದು ಹೇಗೆ?

ನಾವು ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಸಂಕಲ್ಪ ಮಾಡಿದಾಗ ಅದಕ್ಕೆ ಸಂಬಂಧಿಸಿದ ವಿಷಯಗಳನ್ನೆಲ್ಲ ಹುಡುಕಿಕೊಂಡು ಹೋಗುತ್ತೇವಲ್ಲವೆ? ಡಾಕ್ಟರಾಗಬೇಕು ಎಂದರೆ ತತ್ಸಂಬಂಧವಾದ ವಿಷಯಗಳನ್ನು ಆಸ್ಥೆಯಿಂದ ಹುಡುಕಿ, ವಿದ್ಯಾಭ್ಯಾಸ ಮಾಡುತ್ತೇವೆ. ಹಾಗೆಯೇ ಜೀವನದ ಪರಮನೆಲೆಯನ್ನು ಹೊಂದುವ ಮಹದಾಸೆ ಇದ್ದರೆ, ಮಾರ್ಗದರ್ಶಕರನ್ನು ಹುಡುಕಿಕೊಂಡು ಹೋಗುತ್ತೇವೆ. ನಮ್ಮ ಆಸೆ ಎಷ್ಟು ಬಲವತ್ತರವಾಗಿದೆಯೋ ಅಷ್ಟು ಬೇಗ ನಮಗೆ ಅಂತಹ ವ್ಯಕ್ತಿಗಳು ಸಿಗುತ್ತಾರೆ. ಒಳ್ಳೆಯ ವೈದ್ಯರು ಸಿಗದೇ ರೋಗಿ ಮೋಸ ಹೋದಂತೆ ಇಲ್ಲಿಯೂ ಆಗಬಹುದು. ನೆಲೆಗಾಣುವ ನಮ್ಮ ಅಪೇಕ್ಷೆ ಎಷ್ಟು ಬಲಿಷ್ಟವೋ ಅದರ ಮೇಲೆ ನಮಗೆ ಅಂತಹ ಜ್ಞಾನಿಗಳು ದೊರೆಯುವುದೂ ನಿಂತಿದೆ. ಅನೇಕ ಬಾರಿ ಅಂತಹ ವ್ಯಕ್ತಿಗಳು ನಮ್ಮ ನಡುವೆಯೇ ಇದ್ದರೂ ನಮ್ಮ ಅರಿವಿಗೆ ಬರದಿರುವುದೂ ಉಂಟು. ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಭಗವಂತನ, ಜ್ಞಾನಿಗಳ ಹಿಂದಿನ ಶಕ್ತಿಯ ಅರಿವಾಗುವುದೂ ಅವರ ಕೃಪೆಯಿಂದ, ನಮ್ಮ ಸುಕೃತದಿಂದ.

ಜ್ಞಾನಿಗಳ ಪೂಜೆ ಹೃದಯ ದೌರ್ಬಲ್ಯವಲ್ಲ, ಹೃದಯವಂತಿಕೆ

ಜ್ಞಾನಿಗಳ ಪಾದ ತೊಳೆದು ಪೂಜೆ ಮಾಡುವುದು ಭಾವಾತಿರೇಕವಲ್ಲ, ಭಾವಗಾಂಭೀರ್ಯ. ನಿಜಕ್ಕೂ ನದಿ, ಜಲಾಶಯಗಳನ್ನು ತೀರ್ಥವಾಗಿ ಮಾಡುವವರೂ ಜ್ಞಾನಿಗಳೇ. ಅವರ ಆತ್ಮ ಸಂಕ್ರಮಣದಿಂದಲೇ ಆ ನೀರು ತೀರ್ಥವಾಗಿ ಪರಿಣಮಿಸುತ್ತದೆ. ಅಂಥವರ ಪುಣ್ಯ ಪಾದಗಳ ತೀರ್ಥ ಸೇವನೆ ನಮ್ಮನ್ನು ಭವ ಸಾಗರದಿಂದ ದಾಟಿಸುತ್ತದೆ. ಎಂದಮೇಲೆ ಅದು ಹೃದಯ ದೌರ್ಬಲ್ಯವಲ್ಲ. ಹೃದಯವಂತಿಕೆ. ಅದು ಅಪರಿಪೂರ್ಣತೆಯ ಪೂಜೆಯಲ್ಲ, ಬದಲಿಗೆ ಪರಿಪೂರ್ಣತೆಯೆಡೆಗೆ ಸಾಗಲು ನಾವಿಡುವ ಹೆಜ್ಜೆ. ಅಂತಹವರ ಪೂಜೆಯಿಂದ ಅವರ ಅಹಂಕಾರ ಹೆಚ್ಚುವುದಿಲ್ಲ, ನಮ್ಮ ಅಹಂಕಾರ ಕಡಿಮೆಯಾಗಿ ಮೈಮನಸ್ಸುಗಳು ಹಗುರವಾಗುತ್ತವೆ. ಅದು ಬುದ್ಧಿಯ ದಿವಾಳಿತನವಲ್ಲ. ವ್ಯವಸಾಯಾತ್ಮಕವಾದ ಬುದ್ಧಿವೈಭವ.

(ಲೇಖಕರು ಆಧ್ಯಾತ್ಮ ಚಿಂತಕರು ಹಾಗೂ ಪ್ರವಚನಕಾರರು, ಅಷ್ಟಾಂಗಯೋಗ ವಿಜ್ಞಾನ ಮಂದಿರಂ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net