

ಪ್ರವಾದಿ ಮುಹಮ್ಮದ್ ಪೈಗಂಬರರು ಅರೇಬಿಯಾದ ಮಕ್ಕಾ ಪಟ್ಟಣದಲ್ಲಿ ಕ್ರಿ.ಶ. 571ನೇ ಇಸವಿಯಲ್ಲಿ ಜನಿಸಿದರು. ಅವರ ಜನ್ಮ ಜಯಂತಿಗೆ ‘ಮೀಲಾದುನ್ನಬಿ’ ಎನ್ನಲಾಗುತ್ತದೆ. ಇಸ್ಲಾಮ್ ಧಾರ್ವಿುಕ ನಂಬಿಕೆಯ ಪ್ರಕಾರ ಮೀಲಾದುನ್ನಬಿ ಎಂಬುದು ಯಾವುದೇ ಹಬ್ಬವಲ್ಲ. ಇಸ್ಲಾಮ್ಲ್ಲಿ ಎರಡು ಹಬ್ಬಗಳು ಮಾತ್ರ ಇರುವುದು. ಒಂದು ರಮಝಾನ್ ಉಪವಾಸ ವ್ರತದ ನಂತರದ ಈದುಲ್ ಫಿತ್ರ್. ಇನ್ನೊಂದು ಹಜ್ನ ತಿಂಗಳಲ್ಲಿ ಇರುವ ಬಕ್ರೀದ್ ಅಥವಾ ಈದುಲ್ ಅಝ್ಹಾ.
ಪ್ರವಾದಿ ಮುಹಮ್ಮದ್(ಸ)ರ ಆಗಮನಕ್ಕಿಂತ ಮೊದಲು ಅರೇಬಿಯಾದ ಪರಿಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಅರಿತುಕೊಂಡರೆ, ಅವರ ಆದರ್ಶವನ್ನು ಬಹಳ ಸ್ಪಷ್ಟವಾಗಿ ಮನವರಿಕೆ ಮಾಡಲು ಸಾಧ್ಯವಾಗಬಹುದು. ಅಂಧಕಾರದಲ್ಲಿದ್ದ ಒಂದು ಸಮಾಜದೆಡೆಗೆ ಪ್ರವಾದಿಯವರು ನೇಮಿಸಲ್ಪಟ್ಟಿದ್ದರು. ಸಣ್ಣಪುಟ್ಟ ವಿಷಯಗಳಿಗೆ ಕೊಲೆಯಂತಹ ಭೀಕರ ಅಪರಾಧಗಳನ್ನು ಎಸಗುತ್ತಿದ್ದ, ಪ್ರತಿ ವಿಷಯವನ್ನೂ ಯುದ್ಧಕ್ಕೆ ಕಾರಣಗೊಳಿಸುತ್ತಿದ್ದ ಸಮಾಜವದು. ಇಂತಹ ಸಮಾಜದಲ್ಲಿ ಹೆಣ್ಣು ಬಹಳ ದಯನೀಯ ಸ್ಥಿತಿಯಲ್ಲಿದ್ದಳು. ಹೆಣ್ಣು ಹುಟ್ಟಿದ ಕೂಡಲೇ ಜೀವಂತ ಹೂಳಿಬಿಡುವುದು ಅಲ್ಲಿಯ ಸಂಪ್ರದಾಯವಾಗಿತ್ತು. ಹೆಣ್ಣಿಗೆ ಬದುಕುವ ಹಕ್ಕನ್ನು ನಿರಾಕರಿಸಲಾಗಿತ್ತು. ಹೆರುವ ಮತ್ತು ಭೋಗದ ವಸ್ತುವಾಗಿ ಹೊರತು ಬೇರಾವ ವಿಷಯದಲ್ಲೂ ಆಕೆಗೆ ಮಾನ್ಯತೆ ಇರಲಿಲ್ಲ. ಎಲ್ಲ ರೀತಿಯ ಕೆಡುಕುಗಳು ವ್ಯಾಪಕವಾಗಿದ್ದವು. ಇಂತಹ ಸಮಾಜವನ್ನು ಸರಿಪಡಿಸಲು ಅಲ್ಲಾಹನು ಪ್ರವಾದಿ ಮುಹಮ್ಮದ್(ಸ)ರನ್ನು ನೇಮಿಸಿದನು.
ಬಾಲ್ಯದಿಂದಲೇ ಪರಿಶುದ್ಧ ಜೀವನ ನಡೆಸಿಕೊಂಡು ಬಂದ ಮುಹಮ್ಮದ್(ಸ)ರು ಸಮಾಜದ ಕಣ್ಮಣಿಯಾಗಿದ್ದರು. ಅಬ್ದುಲ್ಲಾ ಮತ್ತು ಆಮಿನಾ ದಂಪತಿಗಳ ಪುತ್ರನ ನಡೆ-ನುಡಿ ಪ್ರತಿ ಮನೆಯಲ್ಲಿ ಚರ್ಚೆಯ ವಿಷಯವಾಗಿತ್ತು. ಬೆಳೆದು ಯುವಕರಾದಾಗ ‘ಅಮೀನ್’ (ಪ್ರಾಮಾಣಿಕ) ಮತ್ತು ‘ಸಾದಿಕ್’ (ಸತ್ಯಸಂಧ) ಎಂಬ ಬಿರುದಿನಿಂದ ಕರೆಯಲ್ಪಡುತ್ತಿದ್ದರು. ಜೀವನದಲ್ಲಿ ಒಂದೂ ಸುಳ್ಳನ್ನು ಆಡದ ಮತ್ತು ಸದಾ ಪ್ರಾಮಾಣಿಕರಾಗಿದ್ದ ಪ್ರವಾದಿ ಮುಹಮ್ಮದ್(ಸ)ರಿಗೆ ಈ ನಾಮಗಳು ಅನ್ವರ್ಥವಾಗಿದ್ದವು. ಈ ಲೋಕವೆಂಬುದು ಪರೀಕ್ಷಾಗೃಹ. ಆದುದರಿಂದ ‘ನೀನಿಲ್ಲಿ ಓರ್ವ ಯಾತ್ರಿಕನಂತೆ ಜೀವಿಸು’ ಎಂಬ ತಮ್ಮ ನುಡಿಯಂತೆ ಜೀವನವನ್ನು ನಡೆಸಿ ಮಾದರಿಯಾದರು. ರಾಜನಂತೆ ಜೀವನ ನಡೆಸುವ ಅವಕಾಶ ಸಿಕ್ಕಿದರೂ ಫಕೀರನಂತೆ ಬಾಳಿದರು. ಅವರು ಮಲಗಿರುವಾಗ ಚಾಪೆಯ ಗುರುತುಗಳು ದೇಹದ ಮೇಲೆ ಗೋಚರಿಸುತ್ತಿದ್ದವು. ಇದನ್ನು ಕಂಡ ದ್ವಿತೀಯ ಖಲೀಫಾ ಉಮರ್(ರ)ರವರು ‘ರೋಮ್ ಗ್ರೀಸ್ನ ಚಕ್ರವರ್ತಿಗಳು ಐಷಾರಾಮದ ಜೀವನವನ್ನು ಸಾಗಿಸುತ್ತಿರುವಾಗ, ಪ್ರವಾದಿಯವರು ತಮಗಾಗಿ ಒಂದು ಮೆತ್ತಗಿನ ಹಾಸಿಗೆಯನ್ನು ಉಪಯೋಗಿಸುವುದಿಲ್ಲವೇಕೆ?’ ಎಂಬ ಪ್ರಶ್ನೆಯನ್ನು ಕೇಳಿದರು. ‘ಈ ಜಗತ್ತಿನೊಂದಿಗೆ ನನ್ನದೇನು ಸಂಬಂಧ? ಒಂದು ಹೊತ್ತು ಮರದ ನೆರಳಿನಲ್ಲಿ ತಂಗುವ ಯಾತ್ರಿಕನಿಗಿಂತ ಹೆಚ್ಚಿನ ಮಹತ್ವ ಈ ಲೋಕಕ್ಕಿಲ್ಲ’ ಎಂಬುದನ್ನು ಮನದಟ್ಟು ಮಾಡಿಸಿ ಅವರನ್ನು ಸಮಾಧಾನಪಡಿಸಿದ್ದರು.
ಪ್ರವಾದಿ ಮುಹಮ್ಮದ್(ಸ)ರು 25 ವರ್ಷ ವಯಸ್ಸಿನ ತುಂಬು ಯುವಪ್ರಾಯದಲ್ಲಿ ತಮಗಿಂತ ವಯಸ್ಸಿನಲ್ಲಿ 15 ವರ್ಷ ಹಿರಿಯರಾಗಿದ್ದ ಎರಡುಬಾರಿ ವಿವಾಹವಾಗಿ ವಿಧವೆಯಾಗಿದ್ದ ಖದೀಜ ಎಂಬ ಮಹಿಳೆಯನ್ನು ವಿವಾಹವಾದರು. ಅವರು ಪರಿಶುದ್ಧ ಮಹಿಳೆ ಎಂದು ಮಕ್ಕಾದಲ್ಲಿ ಪ್ರಸಿದ್ಧಿ ಪಡೆದಿದ್ದರು. ಬಹಳ ಅನ್ಯೋನ್ಯವಾದ ದಾಂಪತ್ಯ ಜೀವನ ಅವರದಾಗಿತ್ತು. ಖದೀಜ ನಿಧನರಾದ ವರ್ಷವನ್ನು ‘ದುಃಖದ ವರ್ಷ’ ಎಂದು ಪ್ರವಾದಿಯವರು ಕರೆದಿರುವುದು ಅವರ ಅನುಪಮ ವೈವಾಹಿಕ ಜೀವನಕ್ಕೆ ಒಂದು ಉದಾಹರಣೆ. ಪತ್ನಿಯನ್ನು ಪ್ರೀತಿಸಬೇಕು, ಗೌರವಿಸಬೇಕು. ಆಕೆಯೊಂದಿಗೆ ಜಗಳವಾಡಬಾರದು. ‘ನಿಮ್ಮ ಮನೆಯವರಿಗೆ ಅತ್ಯುತ್ತಮನಾಗಿ ಇರುವವನೇ ನಿಮ್ಮ ಪೈಕಿ ಅತ್ಯುತ್ತಮ ವ್ಯಕ್ತಿ’ ಎಂದು ಜಗತ್ತಿಗೆ ಕಲಿಸಿಕೊಟ್ಟರು.
ಮೂಲತಃ ಇಸ್ಲಾಮ್ ಎಂಬುದು ಸತ್ಯವಿಶ್ವಾಸ ಮತ್ತು ಸತ್ಕರ್ಮಗಳ ಸಂಗಮದ ಇನ್ನೊಂದು ಹೆಸರು. ಆದುದರಿಂದಲೇ ಪವಿತ್ರ ಕುರಾನಿನಲ್ಲಿ ಅನೇಕ ಕಡೆ ಸತ್ಯವಿಶ್ವಾಸದ ಜೊತೆಜೊತೆಗೆ ಸತ್ಕರ್ಮದ ಪ್ರಸ್ತಾಪ ಬಂದಿದೆ. ಪ್ರವಾದಿ ಮುಹಮ್ಮದ(ಸ)ರು ‘ನಾನು ಕಳುಹಿಸಲ್ಪಟ್ಟಿರುವುದು ಸಚ್ಚಾರಿತ್ರ್ಯದ ಪೂರ್ತಿಕರಣಕ್ಕಾಗಿ’ ಎಂದು ಹೇಳಿಕೊಂಡಿದ್ದು, ತಮ್ಮ ಜೀವನದಲ್ಲಿ ಈ ಕಾರ್ಯವನ್ನು ಮಾಡಿ ತೋರಿಸಿದರು.
ಪ್ರವಾದಿಯವರು ಆದರ್ಶಮಯ ನ್ಯಾಯ ತೀರ್ವನವನ್ನು ನೀಡುತ್ತಿದ್ದರು. ಅಪರಾಧಿಗೆ ಶಿಕ್ಷೆ ನೀಡುವುದರ ಜೊತೆಗೆ, ಸಮಾಜದ ಮೇಲೆ ಅದು ಪ್ರಭಾವ ಬೀರಬೇಕೆಂಬುದು ಅವರ ಉದ್ದೇಶವಾಗಿತ್ತು. ಒಮ್ಮೆ ಗೌರವಾನ್ವಿತ ಕುಟುಂಬಕ್ಕೆ ಸೇರಿದ ಮಹಿಳೆಯನ್ನು ಕಳ್ಳತನದ ಆರೋಪದ ಮೇಲೆ ನ್ಯಾಯ ತೀರ್ವನಕ್ಕೆ ಕರೆತರಲಾಗಿತ್ತು. ವಿಚಾರಣೆ ನಡೆಸಿದಾಗ ಮಹಿಳೆ ಅಪರಾಧಿಯೆಂದು ಸಾಬೀತಾಯಿತು. ಆ ಸಮಯದ ಕಾನೂನಿನಂತೆ ಮಹಿಳೆಯ ಕೈ ಕಡಿಯಲು ಆದೇಶಿಸಲಾಯಿತು. ಗೌರವಾನ್ವಿತ ಕುಟುಂಬಕ್ಕೆ ಸೇರಿದ ಕಾರಣ ಶಿಕ್ಷೆಯಲ್ಲಿ ಕಡಿತ ಮಾಡಬೇಕೆಂಬ ವಾದವನ್ನು ಕೆಲವರು ಮುಂದಿಟ್ಟರು. ಆಗ ಅದನ್ನು ನಿರಾಕರಿಸುತ್ತಾ ಪ್ರವಾದಿಯವರು ‘ಒಂದುವೇಳೆ ನನ್ನ ಮಗಳು ಫಾತಿಮಾ ಕಳ್ಳತನ ಮಾಡಿದರೂ ಆಕೆಗೂ ಶಿಕ್ಷೆ ಅನ್ವಯವಾಗುವುದು’ ಎಂದರು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನಿಯಮವು ಅಪರಾಧಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲು ಕಾರಣವಾಯಿತು.
ಮನುಷ್ಯನ ಮನಃಪರಿವರ್ತನೆಯ ವಿವಿಧ ಮಜಲುಗಳನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಪ್ರವಾದಿಯವರಿಗೆ ಸಲ್ಲುತ್ತದೆ. ಮಕ್ಕಾ ವಿಜಯದ ಬಳಿಕ ಸೆರೆಸಿಕ್ಕ ವಿರೋಧಿ ಬಣದ ಎಲ್ಲರನ್ನೂ ಕೈದಿಗಳ ರೂಪದಲ್ಲಿ ಪ್ರವಾದಿಯವರ ಸಮ್ಮುಖದಲ್ಲಿ ಹಾಜರುಪಡಿಸಲಾಯಿತು. ಕೈದಿಗಳಲ್ಲಿ ಭಯ ಮನೆಮಾಡಿತ್ತು. ಏಕೆಂದರೆ ಕಳೆದ 21 ವರ್ಷಗಳಲ್ಲಿ ಪ್ರವಾದಿ ಮುಹಮ್ಮದರನ್ನು ವಿಧವಿಧವಾಗಿ ಪೀಡಿಸಿದವರು ಅವರಲ್ಲಿದ್ದರು. ಆದರೆ ಪ್ರವಾದಿಯವರು ಎಲ್ಲರಿಗೂ ಸಾರ್ವತ್ರಿಕ ಕ್ಷಮಾದಾನ ನೀಡಿದರು. ಯಾರೊಂದಿಗೂ ಪ್ರತೀಕಾರ ತೋರಿಸಲಿಲ್ಲ.
ಅಲ್ಲಾಹನು ಪ್ರವಾದಿ ಮುಹಮ್ಮದ್(ಸ)ರನ್ನು ‘ಮೃದುಹೃದಯಿ’ ಎಂದು ಕರೆದು ಗೌರವಿಸುತ್ತಾನೆ. ‘ಮುಗುಳ್ನಗೆ ದಾನ’ ಎಂದು ಕರೆದಿರುವ ಪ್ರವಾದಿಯವರು ಸರ್ವರನ್ನು ಮುಗುಳ್ನಗೆಯೊಂದಿಗೆ ಸ್ವಾಗತಿಸುವುದನ್ನು ಕಲಿಸಿದರು. ಈ ಮೂಲಕ ವಿಶ್ವ ಭ್ರಾತೃತ್ವವನ್ನು ಪರಿಚಯಿಸಿದರು.
‘ಜನರು ತಪು್ಪ ಕೆಲಸಗಳಲ್ಲಿ ನಿರತರಾಗಿರುವುದನ್ನು ಕಂಡು ಅವರು ನನ್ನ ಸಮುದಾಯಕ್ಕೆ ಸೇರಿದವರು ಎಂದು ಹೇಳಿ ತಪ್ಪನ್ನು ಸಮರ್ಥಿಸುವುದಾದರೆ ನೀವು ಕೋಮುವಾದಿಗಳು’ ಎಂದ ಪ್ರವಾದಿಯವರು, ‘ಕೋಮುವಾದವು ಇಸ್ಲಾಮಿನಲ್ಲಿ ಇಲ್ಲ’ ಎಂಬುದನ್ನು ಪ್ರತಿಪಾದಿಸಿದರು. ಕೋಮುವಾದಕ್ಕೆ ಬೆಂಬಲ ನೀಡುವ ಜನರನ್ನು ಬಾವಿಗೆ ಬೀಳುತ್ತಿರುವ ಒಂಟೆಯ ಹಗ್ಗವನ್ನು ಹಿಡಿದುಕೊಂಡ ಜನರಿಗೆ ಪ್ರವಾದಿಯವರು ಹೋಲಿಸಿದ್ದಾರೆ. ಅಂದರೆ ಅವರು ಒಂಟೆಯೊಂದಿಗೆ ಬಾವಿಗೆ ಬೀಳ ಹೊರಟವರಿಗೆ ಸಮಾನರಾಗಿದ್ದಾರೆ. ಸಮಾಜ, ಕುಟುಂಬವನ್ನು ಒಡೆಯುವಂತಹ, ಪರನಿಂದೆ ಮಾಡುವ, ಚಾಡಿಮಾತು ಹೇಳುವ, ಅಶ್ಲೀಲತೆಗಳನ್ನು ಹಬ್ಬಿಸುವ, ಸುಳ್ಳು ವದಂತಿಗಳನ್ನು ಹರಡಿಸುವ ವ್ಯಕ್ತಿಗಳನ್ನು ಪ್ರವಾದಿ ಮುಹಮ್ಮದರು ಕಟುವಾಗಿ ವಿಮಶಿಸಿದ್ದಾರೆ. ಇವುಗಳನ್ನೆಲ್ಲಾ ತೊರೆದರೆ ಕೌಟುಂಬಿಕ, ಸಾಮಾಜಿಕ ಜೀವನವು ಆದರ್ಶಮಯವಾಗಿ ಮಾರ್ಪಡುವುದರಲ್ಲಿ ಎರಡು ಮಾತಿಲ್ಲ.
ಮಹಿಳೆಯರಿಗೆ ಅತ್ಯುತ್ತಮ ಗೌರವಾದರ ಹಾಗೂ ಸ್ಥಾನಮಾನಗಳನ್ನು ನೀಡಿದ ಕೀರ್ತಿಯು ಪ್ರವಾದಿಯವರಿಗೆ ಸಲ್ಲುತ್ತದೆ. ‘ತಾಯಿಯ ಪಾದದಡಿಯಲ್ಲಿ ಸ್ವರ್ಗವಿದೆ’ ಎನ್ನುವ ಮೂಲಕ ತಾಯಿಯ ಸೇವೆ ಮಾಡಿ ಸ್ವರ್ಗವನ್ನು ಗಳಿಸಲು ಸಾಧ್ಯ. ಹೆಣ್ಣುಮಕ್ಕಳನ್ನು ಚೆನ್ನಾಗಿ ಪಾಲಿಸಿ ಪೋಷಿಸಿದರೆ, ಮಕ್ಕಳೇ ಸ್ವರ್ಗಕ್ಕೆ ಕಾರಣರಾಗುತ್ತಾರೆ. ‘ಪತ್ನಿಯೊಂದಿಗೆ ಅತ್ಯುತ್ತಮವಾಗಿ ವರ್ತಿಸುವವನು ಅತ್ಯುತ್ತಮನು’ ಎಂಬ ಮಾತುಗಳ ಮೂಲಕ ಹೆಣ್ಣನ್ನು ಪುರುಷನಿಗೆ ಸ್ವರ್ಗ ಗಳಿಸಲಿರುವ ದಾರಿ ಎಂಬುದಾಗಿ ಕಲಿಸಿಕೊಟ್ಟರು. ವ್ಯಾಪಾರ-ವ್ಯವಹಾರಗಳಲ್ಲಿ ಪ್ರಾಮಾಣಿಕರಾಗಿರುವವರು ನಾಳೆ ಪರಲೋಕದಲ್ಲಿ ಹುತಾತ್ಮರೊಂದಿಗೆ ಎಬ್ಬಿಸಲ್ಪ ಡುತ್ತಾರೆ ಎಂಬ ಶುಭವಾರ್ತೆಯನ್ನು ನೀಡಿದರು. ಬಡ್ಡಿಯನ್ನು ಸಂಪೂರ್ಣವಾಗಿ ನಿಷಿದ್ಧವೆಂದು ಸಾರಿರುವ ಪವಿತ್ರ ಕುರಾನ್ ವಚನಗಳ ಆಧಾರದಲ್ಲಿ ಅದರ ಲೆಕ್ಕ ಬರೆಯುವ, ಅದಕ್ಕೆ ಸಾಕ್ಷಿ ನಿಲ್ಲುವ ಎಲ್ಲ ಕೆಲಸಗಳನ್ನು ನಿಷಿದ್ಧ ಎಂದು ಸಾರಿದರು.
ಹಲ್ಲುಜ್ಜುವುದರಿಂದ ಹಿಡಿದು ದೇಶದ ಆಡಳಿತ ಚುಕ್ಕಾಣಿಯನ್ನು ನಡೆಸುವವರಿಗೆ ಯಾವ ವಿಷಯವನ್ನೂ ಪ್ರವಾದಿಯವರು ನಮಗೆ ಕಲಿಸದೆ ಬಿಟ್ಟಿಲ್ಲ. ಇದನ್ನು ನಾವು ಮನಸಾರೆ ಒಪ್ಪಿಕೊಂಡು ಅನುಸರಿಸುವುದಾದರೆ ಪ್ರಸ್ತುತ ಸಮಾಜ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಅದಕ್ಕೆ ಪ್ರಯತ್ನಿಸುವ ಪ್ರಾಮಾಣಿಕ ವ್ಯಕ್ತಿಗಳು ಇಂದಿನ ಅಗತ್ಯ.
(ಲೇಖಕರು ಮಲ್ಪೆಯ ಸಯ್ಯದಿನಾ ಅಬೂಬಕರ್ ಸಿದ್ದೀಕ್ ಜಾಮಿಯಾ ಮಸೀದಿ ಧರ್ಮಗುರುಗಳು)