

ಪ್ರಾಣಶಕ್ತಿಯ ಮಟ್ಟದಲ್ಲಿ ಜ್ಞಾನೋದಯಗೊಂಡಿರುವ ಅನೇಕ ಜನರನ್ನು ನಾವು ತಯಾರು ಮಾಡಿದ್ದೇವೆ. ಆದರೆ ಅವರ ಪ್ರಜ್ಞೆ ಇನ್ನೂ ಉನ್ನತ ಹಂತಕ್ಕೆ ಹೋಗಿಲ್ಲ. ನಾವು ಇದರ ಮೇಲೆ ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ, ಮನಸ್ಸು ನಿಧಾನವಾಗಿ ಪಕ್ವಗೊಳ್ಳುವಂತೆ ನೋಡಿಕೊಳ್ಳುತ್ತಿದ್ದೇವೆ. ನಾವೇನು ಅದಕ್ಕಾಗಿ ಅವಸರದಲ್ಲಿಲ್ಲ. ಅದು ತಾನಾಗಿಯೇ ಸಂಭವಿಸುತ್ತದೆ.
ನೀವು ಬದುಕುವ ರೀತಿಯನ್ನು ನೋಡಿದರೆ, ಹಲವಾರು ಬಾರಿ ನಿಮ್ಮ ಪ್ರವೃತ್ತಿವಶ ಭಾವನೆಗಳಿಂದ ಆಳಲ್ಪಡುತ್ತಿದ್ದೀರಿ ಎಂಬುದನ್ನು ಗಮನಿಸಬಹುದು. ಉದಾಹರಣೆಗೆ, ವಿಶೇಷ ಸಂದರ್ಭವಿದ್ದ ನಿರ್ದಿಷ್ಟ ದಿನದಂದು, ನಿಜವಾಗಿಯೂ ಶಾಂತಿಯುತವಾಗಿರಲು ಬಯಸಿರುತ್ತೀರಿ, ಆದರೆ ಆ ದಿನವೇ ಕೋಪವು ನಿಮ್ಮನ್ನು ಆಳಿರುತ್ತದೆ- ಅದು ಯಾವುದೇ ಕಾರಣವಿಲ್ಲದೆಯೇ ಆಗಿರಬಹುದು. ಇದು ಯಾರ ಅಥವಾ ಯಾವುದರ ಬಗ್ಗೆಯೂ ಇಲ್ಲ. ಇದು ಹೊರಬರುತ್ತಿರುವ ಪ್ರವೃತ್ತಿವಶ ಭಾವನೆ. ಸಾಮಾನ್ಯವಾಗಿ, ನಿಮ್ಮ ಸುತ್ತಲಿರುವವರು ಅದಕ್ಕೆ ಬಲಿಪಶುವಾಗುತ್ತಾರೆ. ವಾಸ್ತವವಾಗಿ, ಯಾರೂ ಆಗಬೇಕಿಲ್ಲ. ನೀವು ಮರಗಳ ಮೇಲೂ ಕೋಪಗೊಳ್ಳಬಹುದು!
ಜನರು ತಮ್ಮ ಇಡೀ ಜೀವನದುದ್ದಕ್ಕೂ ಇವುಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ, ಆದರೆ ಏನೂ ಬದಲಾಗುವುದಿಲ್ಲ. ಮನಸ್ಸಿನ ಕಾರ್ಯವಿಧಾನ ಮತ್ತು ಅದು ಕಾರ್ಯನಿರ್ವಹಿಸುವ ರೀತಿ ಕರ್ಮಕ್ಕೆ ಸಂಬಂಧಿಸಿದ್ದಾಗಿದೆ. ಇದಕ್ಕೆ ಕಾರಣ ಮನಸ್ಸು ಕೇವಲ ಒಂದು ಸಂಗ್ರಹಣೆಯಾಗಿದೆ. ನಿಮ್ಮಲ್ಲಿ ಯಾವ ರೀತಿಯ ಸಂಗ್ರಹಣೆ ಇದೆಯೋ, ಅದು ಆ ರೀತಿ ಕಾರ್ಯನಿರ್ವಹಿಸುತ್ತದೆ. ಬಲವಂತದ ಪ್ರವೃತ್ತಿಗಳನ್ನು ಮೀರಿ ಹೋಗುವುದು: ಮನಸ್ಸಿನೊಳಗೆ ನಿರ್ದಿಷ್ಟ ಪ್ರಕಾರದ ಸಂಗ್ರಹಣೆಯು ಸೃಷ್ಟಿಸುವ ಮಿತಿಗಳನ್ನು ಅಥವಾ ಒತ್ತಾಯದ ಪ್ರವೃತ್ತಿಗಳನ್ನು ಮೀರಿ ಹೋಗಬೇಕಾದರೆ, ‘ಮುಕ್ತ’ರಾಗಬಹುದಾದಂಥ ಪ್ರಜ್ಞೆಯ ಬೇರೊದು ಮಟ್ಟಕ್ಕೆ ಏರಬೇಕು. ಅಥವಾ ಮತ್ತೊಂದು ಮಾರ್ಗವೆಂದರೆ ನಿಮ್ಮ ಶಕ್ತಿಗಳನ್ನು ಪರಿವರ್ತಿಸುವುದು.
‘ಪ್ರಜ್ಞೆಯ ಉನ್ನತ ಮಟ್ಟಗಳಿಗೆ ಏರುವುದು’ ಎನ್ನುವುದು ಸಾಮಾನ್ಯವಾಗಿ ವಂಚನೆಯಿಂದ ಕೂಡಿರುತ್ತದೆ. ಪ್ರತಿಯೊಬ್ಬರೂ ತಾವು ‘ಅತ್ಯುನ್ನತ ಪ್ರಜ್ಞಾವಂತರು’ ಎಂದು ನಂಬಿರುತ್ತಾರೆ. ಅವರನ್ನು ಪರೀಕ್ಷೆಗೆ ಒಳಪಡಿಸಿದರೆ, ಶೋಚನೀಯವಾಗಿ ವಿಫಲರಾಗುತ್ತಾರೆ, ಏಕೆಂದರೆ ಮನಸ್ಸಿನ ಸ್ವಭಾವ ಅಂತಹದ್ದು, ಅದು ನಿಮ್ಮನ್ನು ಕೊನೆಯವರೆಗೂ ವಂಚಿಸಬಹುದು. ಮನಸ್ಸು ಸರಳವಾದ ಸಾಧನವಲ್ಲ. ಅದು ಬಹಳ ಸಂಕೀರ್ಣವಾಗಿದೆ. ‘‘ನಾನು ‘ಅದನ್ನು’ ಚೆನ್ನಾಗಿ ತಿಳಿದುಕೊಂಡಿದ್ದೇನೆ’ ಎಂದು ನೀವು ಭಾವಿಸಬಹುದು, ಆದರೆ ಇಪ್ಪತ್ತೈದು ವರ್ಷಗಳ ನಂತರ ನೀವು ಈವರೆಗೆ ನಿಮ್ಮನ್ನು ನೀವೇ ವಂಚಿಸಿಕೊಂಡಿರುವುದು ನಿಮಗೆ ಅರಿವಾಗುತ್ತದೆ. ಬಹುತೇಕ ಜನರು ತಮ್ಮ ಮನಸ್ಸಿನ ಒಂದು ಸಣ್ಣ ಭಾಗವನ್ನು ಬಳಸುತ್ತಿರುವುದರಿಂದ ಅದು ಸರಳವೆಂದು ಭಾವಿಸುತ್ತಾರೆ. ಇಲ್ಲವಾದರೆ, ಅದು ಬಹಳ ಸಂಕೀರ್ಣ ಸಾಧನವಾಗಿದೆ.
ಪ್ರಜ್ಞೆಯ ಮಟ್ಟವನ್ನು ಹೆಚ್ಚಿಸುವುದು ಅಸಾಧ್ಯವೇನಿಲ್ಲ, ಆದರೆ ಅದು ತುಂಬ ಸೂಕ್ಷ್ಮ. ತಮ್ಮ ಪರಿಸ್ಥಿತಿಗಳು ಸ್ವಲ್ಪ ಹೆಚ್ಚು ಅನುಕೂಲಕರವಾಗಿ ಇರುವುದರಿಂದ, ಜನರು ಅನೇಕ ಬಾರಿ ‘ನಾನು ಬದಲಾಗಿದ್ದೇನೆ’ ಎಂದು ನಂಬುತ್ತಾರೆ. ಪರಿಸ್ಥಿತಿಗಳು ತೀವ್ರವಾದರೆ, ಅವರು ಮತ್ತೆ ಅದೇ ಸ್ಥಳಕ್ಕೆ ಹಿಂತಿರುಗುತ್ತಾರೆ. ನೀವು ಇದನ್ನು ಗಮನಿಸಿದ್ದೀರಾ? ಯಾರೋ ಒಬ್ಬರು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರಬಹುದು ಮತ್ತು ಅವರಿಗೆ ಅದು ಇಷ್ಟವಾಗಿರುವುದಿಲ್ಲ, ಹಾಗಾಗಿ ಅವರು ನಿರಂತರವಾಗಿ ಕೋಪ ಮತ್ತು ಕಳವಳಗೊಂಡಿರುತ್ತಾರೆ. ನಂತರ ಅವರು ಹೊಸ ಕೆಲಸದ ಪರಿಸ್ಥಿತಿಗೆ ಹೋದಾಗ, ‘ಈಗ ನಾನು ಸರಿಯಾಗಿದ್ದೇನೆ. ನನ್ನೊಂದಿಗೆ ಎಲ್ಲವೂ ಸರಿಯಾಗಿದೆ’ ಎಂದು ಯೋಚಿಸುತ್ತಾರೆ. ಆದರೆ ಅದು ಹಾಗಿರುವುದಿಲ್ಲ. ಎಲ್ಲವೂ ಸರಿಯಾಗಿಲ್ಲ, ಹೊಸ ಪರಿಸ್ಥಿತಿಯಲ್ಲಿ ಸನ್ನಿವೇಶಗಳು ಒಳ್ಳೆಯದಾಗಿರುವುದರಿಂದ ಅವರು ಸರಿಯಾಗಿರುವಂತೆ ಕಾಣುತ್ತಾರೆ. ಸನ್ನಿವೇಶಗಳು ಮತ್ತೊಮ್ಮೆ ಕೆಟ್ಟರೆ- ಅದು ಇಂದೋ ಅಥವಾ ನಾಳೆಯೋ ಖಂಡಿತವಾಗಿಯೂ ಆಗುತ್ತದೆ- ಅವರು ಮತ್ತದೇ ಹಳೆಯ ಸ್ವಭಾವಕ್ಕೆ ಹಿಂತಿರುಗುತ್ತಾರೆ.
ಪ್ರಜ್ಞಾವಂತರಾಗುವುದು ಎಂದರೆ- ಬದುಕಿನ ಪ್ರಕ್ರಿಯೆಗಳಿಗೆ ಒಳಪಡದೇ ಇರುವುದು ಹೇಗೆಂದು ನೋಡುತ್ತೀರಿ ಎಂದರ್ಥ. ಬಾಹ್ಯ ಪರಿಸ್ಥಿತಿಗಳು ‘ನೀವು ಯಾರು’ ಎಂಬುದನ್ನು ನಿರ್ಧರಿಸುವುದಿಲ್ಲ. ಪ್ರಜ್ಞಾವಂತರಾಗುವುದು ಎಂದರೆ ಅದೇ. ನಿಮ್ಮ ಶಕ್ತಿಗಳನ್ನು ಪರಿವರ್ತಿಸುವುದು ನಿಶ್ಚಿತ ಮತ್ತು ಪ್ರಬಲವಾದ ಮಾರ್ಗವಾಗಿದೆ. ಏಕೆಂದರೆ ಇಲ್ಲಿ ನಿಮ್ಮನ್ನು ನೀವೇ ಮೋಸಗೊಳಿಸಲಾಗುವುದಿಲ್ಲ ಅಥವಾ ‘ಏನೇನನ್ನೋ’ ಊಹಿಸಿಕೊಳ್ಳಲಾಗುವುದಿಲ್ಲ. ನೀವು ‘ನಾನು ಸ್ವರ್ಗದಲ್ಲಿದ್ದೇನೆ’ ಎಂದು ಊಹಿಸಿಕೊಳ್ಳಬಹುದು, ಆದರೆ ಪ್ರಾಣಶಕ್ತಿಯನ್ನು ಸರಿಯಾಗಿ ನಿರ್ವಹಣೆ ಮಾಡದ ಹೊರತು ಮತ್ತು ನಿಜವಾಗಿಯೂ ಏನಾದರೂ ಸಂಭವಿಸದ ಹೊರತು ಪ್ರಾಣಶಕ್ತಿಯು ಸರಿಯಾದ ಚಾಲನೆಯಲ್ಲಿ ಇರುವುದಿಲ್ಲ. ಆದ್ದರಿಂದ ಇದು ಹೆಚ್ಚು ಖಚಿತವಾದ ಹಾದಿ- ಸ್ಥಿರವಾದ ನೆಲದ ಮೇಲೆ ನಡೆಯುತ್ತಿದ್ದೀರಿ ಎಂದರ್ಥ. ನಿಮಗೆ ಬೇಕಾಗಿರುವುದು ಸಮರ್ಪಣೆ ಮತ್ತು ನಿರ್ದಿಷ್ಟ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಮಾತ್ರ.
ಸರಿಯಾದ ತಿಳಿವಳಿಕೆ ಮತ್ತು ಮಾರ್ಗದರ್ಶನದೊಂದಿಗೆ ನಿಮ್ಮ ಪ್ರಾಣಶಕ್ತಿಯೊಂದಿಗೆ ಕೆಲಸ ಮಾಡಿದರೆ, ಪ್ರಾಣಶಕ್ತಿಯ ಮಟ್ಟದಲ್ಲಿ ಸುಲಭವಾಗಿ ಜ್ಞಾನೋದಯ ಪಡೆಯಬಹುದು. ನಿಮ್ಮ ಪ್ರಜ್ಞೆಯು ಇನ್ನೂ ಉನ್ನತ ಹಂತಗಳಿಗೆ ಹೋಗಿರಲಾರದು, ಆದರೆ ಪ್ರಾಣಶಕ್ತಿಯ ಮಟ್ಟದಲ್ಲಿ ಜ್ಞಾನೋದಯ ಸಾಧ್ಯವಾಗುತ್ತದೆ. ಪ್ರಾಣಶಕ್ತಿಯ ಮಟ್ಟದಲ್ಲಿ ಜ್ಞಾನೋದಯಗೊಂಡಿರುವ ಅನೇಕ ಜನರನ್ನು ನಾವು ತಯಾರು ಮಾಡಿದ್ದೇವೆ. ಆದರೆ ಅವರ ಪ್ರಜ್ಞೆ ಇನ್ನೂ ಉನ್ನತ ಹಂತಕ್ಕೆ ಹೋಗಿಲ್ಲ. ನಾವು ಇದರ ಮೇಲೆ ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ, ಮನಸ್ಸು ನಿಧಾನವಾಗಿ ಪಕ್ವಗೊಳ್ಳುವಂತೆ ನೋಡಿಕೊಳ್ಳುತ್ತಿದ್ದೇವೆ. ಹೀಗಾಗಿ, ಅವರು ಇನ್ನೂ ಮೂರ್ಖತನದ ಕೆಲಸಗಳನ್ನು ಮಾಡಬಹುದು, ಆದರೆ, ಪ್ರಾಣಶಕ್ತಿ ಒಂದು ನಿರ್ದಿಷ್ಟ ಶಿಖರವನ್ನು ತಲುಪಿರುವುದರಿಂದ, ಈ ಮೂರ್ಖತನದ ಕೆಲಸಗಳು ನಿಜವಾಗಿಯೂ, ಅವರ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ. ಅವು ಅವರ ಜೀವನವನ್ನು ಇನ್ನು ನಿಯಂತ್ರಿಸುವುದಿಲ್ಲ.
ಅಡುಗೆಮನೆಯಲ್ಲಿರುವ ಒಬ್ಬ ಜ್ಞಾನಿ: ತುಂಬ ಸುಂದರವಾದ ಒಂದು ಝೆನ್ ಕಥೆಯಿದೆ. ನೀವು ಈನೋ ಎಂಬ ಜನಪ್ರಿಯ ಗುರುವಿನ ಬಗ್ಗೆ ಕೇಳಿರಬಹುದು. ಈನೋ ಮೊದಲ ಬಾರಿಗೆ ಮೋನೆಸ್ಟ್ರಿಗೆ ಬಂದಾಗ, ಅಲ್ಲಿನ ಗುರುಗಳು ಅವನನ್ನು ನೋಡಿ ಘೊಷಿಸಿದರು, ‘ಈನೋಗೆ ಜ್ಞಾನೋದಯವಾಗಿದೆ’ ಎಂದು. ಮರುದಿನ ಅವರು ಈನೋವನ್ನು ಮುಂದಿನ 12 ವರ್ಷಗಳವರೆಗೆ ಅಡುಗೆಮನೆಯಲ್ಲಿ ಕೆಲಸಕ್ಕೆ ಹಾಕಿದರು, ಏಕೆಂದರೆ ಕೇವಲ ಅವನ ಪ್ರಾಣಶಕ್ತಿಯು ಜ್ಞಾನೋದಯಗೊಂಡಿತ್ತು, ಆದರೆ ಅವನ ಪ್ರಜ್ಞೆ ಉನ್ನತ ಹಂತಕ್ಕೆ ಹೋಗಿರಲಿಲ್ಲ. ಹಲವಾರು ರೀತಿಯಲ್ಲಿ ಇಂದು ನಮ್ಮ ಸುತ್ತಲೂ ನೂರಾರು ಜನರು ಪ್ರಾಣಶಕ್ತಿಯ ಮಟ್ಟದಲ್ಲಿ ಜ್ಞಾನೋದಯಗೊಂಡಿರುವವರು ಇದ್ದಾರೆ, ಆದರೆ ಅವರ ಪ್ರಜ್ಞೆ ಉನ್ನತ ಹಂತಕ್ಕೆ ಹೋಗಿಲ್ಲ; ನಾವೇನು ಅದಕ್ಕಾಗಿ ಅವಸರದಲ್ಲಿಲ್ಲ. ಅದು ತಾನಾಗಿಯೇ ಸಂಭವಿಸುತ್ತದೆ. ಅದು ನಿಧಾನವಾಗಿ ಪಕ್ವಗೊಳ್ಳುತ್ತದೆ.
ಶಿವನು ಹೇಳುತ್ತಾನೆ, ಯೋಗದಲ್ಲಿ ಮೇರುದಂಡ ಎಂದು ಕರೆಯಲ್ಪಡುವ ಬೆನ್ನುಹುರಿಯು ಒಮ್ಮೆ ಸ್ಪರ್ಶಿಸಲ್ಪಟ್ಟಿತೆಂದರೆ, ನಿಮ್ಮೊಳಗೂ ಮತ್ತು ನಿಮ್ಮ ಸುತ್ತಲೂ ಒಂದು ಕಾಂತಿ ಪ್ರಜ್ವಲಿತವಾಗುತ್ತದೆ. ನೀವು ಸುಷುಮ್ನಾ ನಾಡಿಯ ಮೇಲೆ ಪೂರ್ಣ ಗಮನವನ್ನು ಇಟ್ಟರೆ ಮತ್ತು ಅದನ್ನು ಸರಿಯಾಗಿ ಸ್ಪರ್ಶಿಸಿದರೆ, ಅದು ಸಕ್ರಿಯಗೊಂಡು ಕಾಂತಿಯನ್ನು ಸೂಸುತ್ತದೆ. ಒಮ್ಮೆ ಅದು ಪ್ರಜ್ವಲಿತವಾದರೆ, ಪ್ರಾಣಶಕ್ತಿ ಕೆಲವೇ ಸಮಯದಲ್ಲಿ ಪಕ್ವಗೊಂಡು ಜ್ಞಾನೋದಯವಾಗುತ್ತದೆ. ನಾವು ಬಹಳ ಸಮಯದಿಂದ ಕೆಲವು ನಿಕಟ ವ್ಯಕ್ತಿಗಳೊಂದಿಗೆ ಇದನ್ನೇ ಮಾಡುತ್ತಿರುವುದು. ಅವರಲ್ಲಿ ಜ್ಞಾನೋದಯ ಹೊಂದಿದ ವ್ಯಕ್ತಿಯ ಹೊಳಪು ಇರುತ್ತದೆ, ಆದರೆ ಜ್ಞಾನೋದಯಗೊಂಡ ವ್ಯಕ್ತಿಯ ಪ್ರಜ್ಞೆ ಇರುವುದಿಲ್ಲ. ಸುಮ್ಮನೇ ಶಾಂತವಾಗಿ ಕುಳಿತಾಗ ಶಕ್ತಿಯುತ ಚೇತನರಾಗಿರುತ್ತಾರೆ. ಬಾಯಿ ತೆರೆದರೆ ಮೂರ್ಖರಂತೆ ಆಗುತ್ತಾರೆ. ಅದು ಹಾಗೆಯೇ! ಇದನ್ನು ಸಾಧಿಸುವುದು ಸುಲಭ. ನಿಮಗೆ ಬೇಕಿರುವುದು ಸಮರ್ಪಣೆಯಷ್ಟೇ. ಅದರಲ್ಲೂ ಪ್ರತ್ಯಕ್ಷ ಗುರು ನಿಮ್ಮೊಡನೆ ಇರುವಾಗ, ಇದನ್ನು ಮಾಡುವುದು ತುಂಬ ಸುಲಭ.