ಚರ್ಚೆಯಿಲ್ಲದೆ ಸೊರಗುತ್ತಿದೆ ಸಂಸದೀಯ ವ್ಯವಸ್ಥೆ

Parliament
Published on
ಉತ್ತರದಾಯಿತ್ವವನ್ನು ಖಾತ್ರಿಪಡಿಸುವ ಮತ್ತೊಂದು ಮಾರ್ಗವೆಂದರೆ ಸಂಸತ್ತಿನ ಸಮಿತಿಗಳು. ಆದರೆ, ಭಾರತದಲ್ಲಿ, ದೀರ್ಘಾವಧಿಯ ಅಭಿವೃದ್ಧಿ ಯೋಜನೆಗಳು ಸಂಸದೀಯ ಪರಿಶೀಲನೆಗೆ ಒಳಪಡುವುದಿಲ್ಲ. ಕೇವಲ ವಾರ್ಷಿಕ ವೆಚ್ಚಗಳನ್ನು ಅನುಮೋದಿಸಲಾಗುತ್ತದೆ. ಸಮಿತಿಗಳ ಪರಿಶೀಲನೆಗೆ ಶಾಸನಗಳು ಒಳಪಟ್ಟಲ್ಲಿ ಸಾಕಷ್ಟು ಪರಿಣಾಮ ಕಾಣಬಹುದು.

ಸಂಸತ್ತಿನ ಮುಂಗಾರಿನ ಅಧಿವೇಶನದ ವೇಳೆ (2021) ಲೋಕಸಭೆಯಲ್ಲಿ 18 ಮಸೂದೆಗಳು ತಲಾ 34 ನಿಮಿಷಗಳ ಚರ್ಚೆಗಳೊಂದಿಗೆ ಅನುಮೋದನೆಗೊಂಡವು. ಅಗತ್ಯ ರಕ್ಷಣಾ ಸೇವೆಗಳ ಮಸೂದೆ (2021) ಬಗ್ಗೆ 12 ನಿಮಿಷ, ಇನ್ಸಾಲ್ವೆನ್ಸಿ ಮತ್ತು ಬ್ಯಾಂಕ್​ರಪ್ಟಿ ್ಸ ಕೋಡ್ (ತಿದ್ದುಪಡಿ) ಮಸೂದೆ (2021) ಮೇಲೆ ಕೇವಲ 5 ನಿಮಿಷದ ಚರ್ಚೆ ನಡೆಯಿತು. ಒಂದು ಮಸೂದೆಯನ್ನೂ ಸಂಸದೀಯ ಸಮಿತಿಗೆ ಕಳುಹಿಸಲು ಸರ್ಕಾರ ಮುಂದಾಗಲಿಲ್ಲ. ಈಚಿನ ದಿನಗಳಲ್ಲಿ ಧ್ವನಿಮತಕ್ಕೇ ಹೆಚ್ಚಿನ ಆದ್ಯತೆ ಸಿಗುತ್ತಿರುವುದರಿಂದ ಮತಗಳನ್ನು ದಾಖಲಿಸಲು ಸಂಸದರ ಒಟ್ಟುಗೂಡುವಿಕೆಯೂ ಕಾಣಲಿಲ್ಲ. ಆದರೆ, ಸಂಸತ್ತಿನ ಉತ್ಪಾದಕತೆ ಗಮನಾರ್ಹವಾಗಿದೆ. ಉದಾಹರಣೆಗೆ 2022ರ ಬಜೆಟ್ ಅಧಿವೇಶನದಲ್ಲಿ ಲೋಕಸಭೆ 129% ಉತ್ಪಾದಕತೆ ಕಂಡಿದೆ. ಆದರೆ ಚರ್ಚೆ ನಡೆಸುವ ಸಂಪ್ರದಾಯ ಮರೆಯಾಗುತ್ತಿದೆ. ಅಂದರೆ, ಸಂಸತ್ತು ಕೇವಲ ಅಂಚೆಕಚೇರಿ ರೀತಿ ಕೆಲಸ ಮಾಡುತ್ತಿದೆಯೇ?

ಶಾಸನದ ಮೇಲಿನ ಚರ್ಚೆ ಸಂಸದೀಯ ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣಗಳಲ್ಲೊಂದು. 2013ರಲ್ಲಿ ಅಮೆರಿಕದ ಸೆನೆಟ್ ಹೌಸ್​ನಲ್ಲಿ ಒಬಾಮಾಕೇರ್ ವಿರುದ್ಧ ಮಾತನಾಡಲು ಸೆನೆಟರ್ ಟೆಡ್ ಕ್ರೂಜ್ ಅವರಿಗೆ 21 ಗಂಟೆ 19 ನಿಮಿಷಗಳ ಕಾಲ ಅವಕಾಶ ನೀಡಲಾಗಿತ್ತು. ಸಂಸತ್ತು ಅಂಥ ಚರ್ಚೆಗಳಿಗೆ ಸಮಯ ಮೀಸಲಿಟ್ಟಾಗ, ಶಾಸನದ ಗುಣಮಟ್ಟ ಸುಧಾರಿಸುತ್ತದೆ. ಭಾರತದಲ್ಲಿ, ಕೃಷಿ ಕಾಯ್ದೆಗಳ ರದ್ದತಿ ಮಸೂದೆ (2021) ಕೇವಲ 8 ನಿಮಿಷಗಳಲ್ಲಿ (ಲೋಕಸಭೆಯಲ್ಲಿ 3, ರಾಜ್ಯಸಭೆಯಲ್ಲಿ 5 ನಿಮಿಷ) ಅಂಗೀಕರಿಸಲ್ಪಟ್ಟಿತು. ಸಂಸದರ ಉಪಸ್ಥಿತಿ ಇಲ್ಲಿ ಧ್ವನಿಮತಕ್ಕೆ ಮಾತ್ರ. ವಾಸ್ತವದಲ್ಲಿ, ಇದು ಒಳ್ಳೆಯ ಬೆಳವಣಿಗೆಯೇನಲ್ಲ. ಸಂವಿಧಾನವನ್ನು ರೂಪಿಸಲು ಭಾರತದ ಸಂವಿಧಾನ ಸಭೆಯ ಚರ್ಚೆಗಳು 166 ದಿನಗಳವರೆಗೆ ನಡೆದವು. ಸಂಸತ್ತಿನ ಕಾರ್ಯಕಲಾಪಗಳು ಉತ್ಕೃಷ್ಟತೆ ಕಂಡುಕೊಳ್ಳುವುದು ಮತ್ತು ಬಲಗೊಳ್ಳುವುದು ಮುಕ್ತ ಅಭಿಪ್ರಾಯ, ಚರ್ಚೆಗಳಿಗೆ ಅವಕಾಶವಿದ್ದಾಗ ಮಾತ್ರ. ಆದರೆ, ಈಗಿನ ವ್ಯವಸ್ಥೆಯಲ್ಲಿ ಸಂಸದರಿಗೆ ಆಳವಾದ ಸಂಶೋಧನೆ ನಡೆಸಲು ಸಾಕಷ್ಟು ಸಂಪನ್ಮೂಲಗಳು ಇಲ್ಲ. ಇದಕ್ಕಾಗಿ ಸಹಾಯಕರನ್ನು ನೇಮಿಸಿಕೊಳ್ಳಲು ಸರ್ಕಾರ ಸಂಸದರಿಗೆ ತಿಂಗಳಿಗೆ ತಲಾ 40 ಸಾವಿರ ರೂ.ಗಳ ಭತ್ಯೆ ನೀಡುತ್ತದೆ. ಯುನೈಟೆಡ್ ಕಿಂಗ್​ಡಮ್ಲ್ಲಿ ಸಂಸದರ ವೇತನ ಸರಾಸರಿ 84,144 ರೂ.ನಷ್ಟಿದೆ. ಸಹಾಯಕರನ್ನು ನೇಮಿಸಿಕೊಳ್ಳಲು 2021ರಲ್ಲಿ ಅವರಿಗೆ 1.93 ಲಕ್ಷದಿಂದ 2.16 ಲಕ್ಷ ರೂ.ವರೆಗೆ ಹೆಚ್ಚುವರಿ ಭತ್ಯೆ ನೀಡಲಾಯಿತು. ಪ್ರಜಾಪ್ರಭುತ್ವದ ಸ್ವಾಸ್ಥ್ಯ ಕಾಪಾಡಬೇಕಾದರೆ ಸಂಸತ್ತಿನಲ್ಲಿ ಚರ್ಚೆಯನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸಂಸದೀಯ ಸಂಶೋಧನೆಗಾಗಿ ಸರ್ಕಾರ ಹಣಕಾಸಿನ ನೆರವನ್ನು ಹೆಚ್ಚಿಸಬೇಕು.

ಬ್ರಿಟಿಷ್ ಪ್ರಧಾನಿಯು ಹೌಸ್ ಆಫ್ ಕಾಮನ್ಸ್​ನಲ್ಲಿ ಪ್ರತಿ ಬುಧವಾರ ಅಪರಾಹ್ನ 12ರಿಂದ 12.30ರವರೆಗೆ ಸಂಸದರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಸಂಸದರು ಯಾವ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುದು ಪ್ರಧಾನಿಗೆ ತಿಳಿದಿರುವುದಿಲ್ಲ. ಇಲ್ಲಿ ತನಿಖೆಯ ರೀತಿಯಲ್ಲಿ ಕೇಳುವ ಪ್ರಶ್ನೆಗಳು, ಉತ್ತರಿಸಲು ಪ್ರಧಾನಿ ತಡಬಡಾಯಿಸುವ ದೃಶ್ಯಗಳನ್ನು ಟಿವಿಯಲ್ಲಿ ನೋಡಬಹುದು. ಭಾರತದಲ್ಲಿ, ಹಲವು ಸಂದರ್ಭಗಳಲ್ಲಿ ಪ್ರಧಾನಮಂತ್ರಿ ಮತ್ತು ಮಂತ್ರಿಗಳಿಗೆ ಮುಂಚಿತವಾಗಿ ಪ್ರಶ್ನೆಗಳನ್ನು ನೀಡಲಾಗುತ್ತದೆ. ಕರೊನಾ ಲಾಕ್​ಡೌನ್ ಸಂಬಂಧ ಕೂಡ ಬ್ರಿಟನ್ ಸಂಸತ್ತಿನಲ್ಲಿ ಚರ್ಚೆ ನಡೆಯಿತು. ಈ ಬಗೆಯ ಪ್ರಕ್ರಿಯೆ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ (ಕರೊನಾ ಅವಧಿಯಲ್ಲಿ ಭಾರತದಲ್ಲಿ ಪ್ರಶ್ನೋತ್ತರ ಅವಧಿ ರದ್ದುಗೊಂಡಿದ್ದು ಗಮನಾರ್ಹ).

ಉತ್ತರದಾಯಿತ್ವವನ್ನು ಖಾತ್ರಿಪಡಿಸುವ ಮತ್ತೊಂದು ಮಾರ್ಗವೆಂದರೆ ಸಂಸತ್ತಿನ ಸಮಿತಿಗಳು. ಅಮೆರಿಕದಲ್ಲಿ ಸೆನೆಟ್ ಮತ್ತು ಸದನ ಸಮಿತಿಗಳು ಕಾನೂನುಗಳನ್ನು ಪರಿಶೀಲಿಸುತ್ತವೆ, ಸರ್ಕಾರಿ ನೇಮಕಾತಿಗಳನ್ನು ದೃಢೀಕರಿಸುತ್ತವೆ, ತನಿಖೆ, ವಿಚಾರಣೆಗಳನ್ನು ನಡೆಸುತ್ತವೆ. ಯುನೈಟೆಡ್ ಕಿಂಗ್​ಡಮ್ ಹೌಸ್ ಆಫ್

ಕಾಮನ್ಸ್​ನಲ್ಲಿ (2013ರಲ್ಲಿ) ನಾಗರಿಕರು ವೆಬ್​ಪೋರ್ಟಲ್ ಮೂಲಕ ಕರಡು ಶಾಸನಕ್ಕೆ ಕಾಮೆಂಟ್​ಗಳನ್ನು ಸೇರಿಸುವ ಅವಕಾಶ ಒದಗಿಸಿತ್ತು. ಇದರಲ್ಲಿ 1,000ದಷ್ಟು ಮಂದಿ 1,400ಕ್ಕೂ ಹೆಚ್ಚು ಕಾಮೆಂಟ್ ಮೂಲಕ ಸಲಹೆ ನೀಡಿದ್ದರು. ಭಾರತದಲ್ಲಿ, ದೀರ್ಘಾವಧಿಯ ಅಭಿವೃದ್ಧಿ ಯೋಜನೆಗಳು ಸಂಸದೀಯ ಪರಿಶೀಲನೆಗೆ ಒಳಪಡುವುದಿಲ್ಲ. ಕೇವಲ ವಾರ್ಷಿಕ ವೆಚ್ಚಗಳನ್ನು ಅನುಮೋದಿಸಲಾಗುತ್ತದೆ. ಸಮಿತಿಗಳ ಪರಿಶೀಲನೆಗೆ ಶಾಸನಗಳು ಒಳಪಟ್ಟಲ್ಲಿ ಸಾಕಷ್ಟು ಪರಿಣಾಮ ಕಾಣಬಹುದು. ನ್ಯೂಜಿಲೆಂಡ್​ನಲ್ಲಿ ಎಲ್ಲ ಮಸೂದೆಗಳನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ಕಳುಹಿಸಿಕೊಡಲಾಗುತ್ತದೆ. ಅಷ್ಟೇ ಅಲ್ಲ, ಸಾರ್ವಜನಿಕ ಅಭಿಪ್ರಾಯ ಪಡೆದುಕೊಳ್ಳುವ, ಸಲಹೆಗಾರರನ್ನು ಕರೆಸಿ ಮಾಹಿತಿ ಕೇಳುವ ಪ್ರಕ್ರಿಯೆಯೂ ಪರಿಣಾಮಕಾರಿಯಾಗಿ ನಡೆಯುತ್ತದೆ. ಅಂತಹ ಸಮಿತಿಗಳ ಪ್ರಮುಖ ವರದಿಗಳನ್ನು ಸಂಸತ್ತಿನಲ್ಲಿ ಮಂಡಿಸಿ, ರ್ಚಚಿಸಲಾಗುತ್ತದೆ.

ಸಂಸದೀಯ ಪ್ರಜಾಪ್ರಭುತ್ವದ ಮತ್ತೊಂದು ವೈಶಿಷ್ಟ್ಯವೆಂದರೆ ಸಂಸತ್ತಿನ ಸದಸ್ಯರನ್ನು ಪ್ರೋತ್ಸಾಹಿಸುವುದು. ಉದಾಹರಣೆಗೆ, ಖಾಸಗಿ ವಿಧೇಯಕ ಮಂಡನೆ ವಿಷಯದಲ್ಲಿ ಉತ್ತೇಜನ ಇತ್ಯಾದಿ. ಬ್ರಿಟನ್​ನಲ್ಲಿ 2019ರಿಂದ 7 ಖಾಸಗಿ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಅದೇ ರೀತಿ, ಕೆನಡಾ 6 ಮಸೂದೆಗಳನ್ನು ಅಂಗೀಕರಿಸಿದೆ; ಭಾರತದಲ್ಲಿ 1952ರಿಂದ ಇಲ್ಲಿಯವರೆಗೆ ಕೇವಲ 14 ಖಾಸಗಿ ಸದಸ್ಯ ಮಸೂದೆಗಳನ್ನು ಅಂಗೀಕರಿಸಲಾಗಿದೆ (ಅವುಗಳಲ್ಲಿ 6 ನೆಹರು ಅಧಿಕಾರದಲ್ಲಿದ್ದಾಗ ಅಂಗೀಕೃತಗೊಂಡವು). ರಘುನಾಥ್ ಸಿಂಗ್ ಅವರು ಪರಿಚಯಿಸಿದ ಕ್ರಿಮಿನಲ್ ಪೊ›ಸೀಜರ್ ಕೋಡ್ (ತಿದ್ದುಪಡಿ) ಮಸೂದೆಯು (1953) ಕೆಳ ನ್ಯಾಯಾಲಯಗಳು ಹೊರಡಿಸಿದ ಆದೇಶಗಳನ್ನು ತಡೆಹಿಡಿಯಲು ಅಥವಾ ರದ್ದುಗೊಳಿಸಲು ಉನ್ನತ ನ್ಯಾಯಾಲಯಗಳಿಗೆ ಅಧಿಕಾರ ನೀಡಲು ಪ್ರಯತ್ನಿಸಿತು ಎಂಬುದು ಗಮನಾರ್ಹ. ಭಾರತದಲ್ಲಿ ಖಾಸಗಿ ಸದಸ್ಯ ಮಸೂದೆಗಳ ಚರ್ಚೆ ಹಾಗೂ ಮತದಾನಕ್ಕೊಳಪಡಿಸಲು ಪೂರಕ ಕಾರ್ಯವಿಧಾನಗಳನ್ನು ರೂಪಿಸುವುದು ಇಂದಿನ ಅಗತ್ಯ.

ಸೀಮಿತ ಪ್ರಮಾಣದ ಅವಕಾಶ: ಭಾರತದ ಹೆಚ್ಚಿನ ಸಂಸದರಿಗೆ ತಮ್ಮ ಕ್ಷೇತ್ರಗಳಲ್ಲಿ ಬದಲಾವಣೆಗೆ ಚಾಲನೆ ನೀಡುವ ಅವಕಾಶ ಸೀಮಿತ ಪ್ರಮಾಣದಲ್ಲಿದೆ. ಸಂಸತ್ತಿನ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (Mಕಔಅಈ) ನಿಧಿ ಬಳಸಿಕೊಂಡು ಸಂಸದರು ಆಯ್ದ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವಂತೆ ಸ್ಥಳೀಯ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಬಹುದಷ್ಟೆ. ಭಾರತದಲ್ಲಿ ಅಂದಾಜು 6.38 ಲಕ್ಷ ಹಳ್ಳಿಗಳಿದ್ದು, ಸಂಸತ್ತಿನ ಪ್ರತಿ ಕ್ಷೇತ್ರದಲ್ಲಿ ಸರಾಸರಿ 1 ಸಾವಿರ ಹಳ್ಳಿಗಳಿವೆ. ತಲಾ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಸಮಾನವಾಗಿ ವಿಭಜಿಸಿದರೆ, ಪ್ರತಿ ಹಳ್ಳಿಗೆ 15 ಸಾವಿರ ರೂ. ಲಭ್ಯ ಆಗಬಹುದು. ಗ್ರಾಮಗಳ ಅಗತ್ಯಗಳನ್ನು ಪೂರೈಸಲು ಮತ್ತು ಮೌಲಸೌಕರ್ಯಗಳನ್ನು ವಿಸ್ತರಿಸಲು ಈ ಮೊತ್ತ ಯಾವುದಕ್ಕೂ ಸಾಕಾಗದು. ಈ ಹಣವನ್ನೂ ಕಳೆದ ಒಂದೂವರೆ ವರ್ಷದಿಂದ ಅಮಾನತಿನಲ್ಲಿಡಲಾಗಿದೆ. ಅಂದರೆ ಸರ್ಕಾರ 6,320 ಕೋಟಿ ರೂ. ಉಳಿತಾಯ ಮಾಡಿದೆ. ಫಿಲಿಪೈನ್ಸ್​ನಲ್ಲಿ, ಆದ್ಯತಾ ಅಭಿವೃದ್ಧಿ ಸಹಾಯ ನಿಧಿಯು ಸೆನೆಟರ್​ಗಳಿಗೆ ಸಣ್ಣ-ಪ್ರಮಾಣದ ಮೂಲ ಸೌಕರ್ಯಕ್ಕಾಗಿ ಹಣಕಾಸು ನೆರವನ್ನು ಒದಗಿಸುತ್ತದೆ. ಅಂತಹ ಯೋಜನೆಗಳು ಕ್ಷೇತ್ರದ ನಿರ್ದಿಷ್ಟ ಅಭಿವೃದ್ಧಿಗೆ ಸಹಕಾರಿಯಾಗಿ, ತಳಮಟ್ಟದ ಪ್ರಜಾಪ್ರಭುತ್ವವನ್ನು ಸಕ್ರಿಯಗೊಳಿಸುತ್ತವೆ.

ಚರ್ಚೆಗೆ ವಿರಳ ಅವಕಾಶ: ನಮ್ಮಲ್ಲಿ ಚರ್ಚೆಯನ್ನು ನಿಗ್ರಹಿಸುವ ಮತ್ತು ಸಂಸತ್ತಿನ ಸದಸ್ಯರ ಯೋಜನೆಗಳನ್ನು ಪೋ›ತ್ಸಾಹಿಸದಿರುವ ಅಪಾಯಕಾರಿ ಮಾನಸಿಕತೆ ಬೆಳೆದಿದೆ. ಪಕ್ಷಾಂತರ ವಿರೋಧಿ ಕಾನೂನು ಪಕ್ಷಾಂತರ ಮಾಡುವ ಸಂಸದ ಅಥವಾ ಶಾಸಕರನ್ನು ಶಿಕ್ಷಿಸುತ್ತದೆ. ಪಕ್ಷದ ವಿಪ್ ಅನ್ನು ಉಲ್ಲಂಘಿಸಿದರೆ ಸಂಸದರು ತಮ್ಮ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಸಂಸದ/ಶಾಸಕನಿಗೆ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ರಾಜಕೀಯ ಪಕ್ಷಗಳೇ ಸಂಸದರ ನಿಲುವನ್ನು ನಿರ್ಧರಿಸುತ್ತವೆ. 543 ಲೋಕಸಭಾ ಸ್ಥಾನಗಳಲ್ಲಿ, 250 ಮಂದಿ ತಮ್ಮನ್ನು ‘ರೈತ’ರೆಂದು ಹೇಳಿಕೊಂಡಿದ್ದಾರೆ. ಆದರೆ ಈ ರೈತರಲ್ಲಿ ಕೆಲವರಿಗೆ ಮಾತ್ರ ಕೃಷಿ ಕಾನೂನುಗಳ ಮೇಲಿನ ಚರ್ಚೆಯಲ್ಲಿ ದನಿ ಎತ್ತಲು ಸಾಧ್ಯವಾಯಿತು. ಸಂಸತ್ತಿನಂಥ ಘನವೆತ್ತ ವೇದಿಕೆಯಲ್ಲಿ ಸಂಸದ ತನ್ನ ಆತ್ಮಸಾಕ್ಷಿಗೆ ಪೂರಕವಾಗಿ ಮತ ಹಾಕುವುದು ಬಹಳ ಅಪರೂಪ!

ಭಾರತದ ಸಂಸತ್ತಿನ ಸದಸ್ಯನೊಬ್ಬ ಸರಾಸರಿ 25 ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಪ್ರತಿನಿಧಿಸುತ್ತಾನೆ. ಈ ಸಂಖ್ಯೆ ಬೋಟ್ಸಾ್ವನಾ, ಸ್ಲೊವೇನಿಯಾ, ಎಸ್ಟೋನಿಯಾ ಮತ್ತು ಭೂತಾನ್​ನಂಥ ದೇಶಗಳ ಜನಸಂಖ್ಯೆಗಿಂತ ದೊಡ್ಡದು. ಯುನೈಟೆಡ್ ಕಿಂಗ್​ಡಮ್ ವೆಸ್ಟ್​ಮಿನಿಸ್ಟರ್​ನಲ್ಲಿರುವ ಪ್ರತಿ ಸಂಸದರು ಸರಾಸರಿ 92 ಸಾವಿರ ನಾಗರಿಕರನ್ನು ಪ್ರತಿನಿಧಿಸುತ್ತಾರೆ. ಅಮೆರಿಕದ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ನ ಪ್ರತಿಯೊಬ್ಬ ಸದಸ್ಯರು 7 ಲಕ್ಷ ಜನರಿಗೆ ಜವಾಬ್ದಾರರಾಗಿರುತ್ತಾರೆ. ಇಷ್ಟು ದೊಡ್ಡ ಸಂಖ್ಯೆಗಳಿದ್ದಾಗ, ಯಾವುದೇ ಸಂಸದ ತನ್ನ ಮತದಾರರ ಹಿತಾಸಕ್ತಿಗಳನ್ನು ಸಮರ್ಪಕವಾಗಿ ಪ್ರತಿನಿಧಿಸಲು ಸಾಧ್ಯವಿಲ್ಲ. 2026ರ ವೇಳೆಗೆ ಲೋಕಸಭೆಯು ಸಾವಿರಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದಬಹುದು. ಪ್ರಾತಿನಿಧ್ಯವನ್ನು ಖಾತ್ರಿಪಡಿಸುವುದು ಮುಖ್ಯವಾದರೂ, ಸಂಸದರಿಗೆ ಮಾತನಾಡುವ ಸಮಯ ಬಹಳ ಕಡಿಮೆಯಿದೆ. 1956ರಲ್ಲಿ, ಫಿರೋಜ್ ಗಾಂಧಿಯವರು ಸಂಸತ್ ಕಲಾಪಗಳ ವರದಿಗಾರಿಕೆ ಕುರಿತ ಖಾಸಗಿ ಸದಸ್ಯರ ಮಸೂದೆ ಪರಿಚಯಿಸಿದರು; ಇದು ನಂತರದಲ್ಲಿ ಸಂಸತ್ ಕಲಾಪ (ಪ್ರಕಟಣೆಯ ರಕ್ಷಣೆ) ಕಾಯಿದೆ (1956) ಎಂದು ಪರಿಷ್ಕೃತಗೊಂಡಿತು. ನಮ್ಮ ಸಂಸತ್ತು ಹೊಸ ಭಾರತದ ಬದಲಾಗುತ್ತಿರುವ ಆಕಾಂಕ್ಷೆಗಳು, ಸಮಸ್ಯೆ-ಸವಾಲು ನಿಭಾಯಿಸುವ ಮತ್ತು ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುವ ವೇದಿಕೆಯಾಗಬೇಕು.

(ಲೇಖಕರು ಲೋಕಸಭಾ ಸದಸ್ಯರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net