

ಈಗ, ಈ ಅಂಕಣದ ಮಟ್ಟಿಗೆ ಕುಮಾರವ್ಯಾಸನ ಬಗೆಗಿನ ಕುವೆಂಪು ನುಡಿಯನ್ನು ಸ್ವಲ್ಪ ಬದಲಿಸಿ, ‘ಕುಮಾರವ್ಯಾಸನು ಹಾಡಿದನೆಂದರೆ, ಆಚ್ಚಛ್ಝಿಛಿಠಿಗೆ ಸಮಾನಾರ್ಥಕ ಕನ್ನಡಪದ ದೊರಕುವುದು’ ಎನ್ನಬಹುದು! ಏಕೆ ಗೊತ್ತೇ? ಕರ್ಣಾಟಭಾರತ ಕಥಾಮಂಜರಿಯ ದ್ರೋಣಪರ್ವದ ನಾಲ್ಕನೆಯ ಸಂಧಿಯಲ್ಲಿ ಬರುವ ಈ ಪದ್ಯವನ್ನು ಗಮನಿಸಿ: ‘ಹೊಗಲು ಬಲ್ಲನು ಹೊಕ್ಕವೊಲು ಹೆರ| ದೆಗೆಯಲರಿಯನು ವೀರ ಪಾರ್ಥನ| ಮಗನು ಮತ್ತಯ್ದನೆಯ ಸುಭಟರ ಕಾಣೆ ನಾನೆನುತ| ಅಗಿವ ಚಿಂತೆಯೊಳರಸ ಕದನದ| ದುಗುಡ ಭಾರದಲಿರಲು ಮುಂಗೈ| ನಿಗಳವನು ತಿರುಹುತ್ತ ನಸುನಗುತೆದ್ದನಭಿಮನ್ಯು||’
ಮಹಾಭಾರತ ಯುದ್ಧದ ಹದಿಮೂರನೆಯ ದಿನ. ಸಂಶಪ್ತಕರೊಡನೆ ಯುದ್ಧ ಮಾಡಲು ಅರ್ಜುನನು ಕೃಷ್ಣನೊಂದಿಗೆ ಹೋಗಿದ್ದನು. ದ್ರೋಣಾಚಾರ್ಯರು ಅಂದೇ ಸುಸಮಯವೆಂದು ಚಕ್ರವ್ಯೂಹ ರಚಿಸಿದರು. ಬಲರಾಮ, ಕೃಷ್ಣ ಮತ್ತು ಅರ್ಜುನ ಈ ಮೂವರಿಗಷ್ಟೇ ಚಕ್ರವ್ಯೂಹವನ್ನು ಭೇದಿಸಲಿಕ್ಕೆ ಗೊತ್ತಿದ್ದದ್ದು. ಅಭಿಮನ್ಯುವಿಗೆ ಒಳಗೆ ಹೋಗಲಿಕ್ಕಷ್ಟೇ ಗೊತ್ತು, ಹೊರಬರಲು ತಿಳಿಯದು. ಧರ್ಮರಾಜನಿಗೆ ಅದೇ ಚಿಂತೆ. ಆದರೆ ಅಭಿಮನ್ಯು ವೀರಾವೇಶದ ಠೀವಿಯಿಂದ, ತನ್ನ ಮುಂಗೈ ನಿಗಳವನ್ನು ತಿರುಹುತ್ತ ನಸುನಗುತ್ತ, ಮೇಲೆದ್ದನಂತೆ.
ಮುಂಗೈ ನಿಗಳ ಅಂದರೆ ಬೇರೇನಲ್ಲ, ಅಭಿಮನ್ಯು ಬಲಗೈಯಲ್ಲಿ ಧರಿಸಿದ್ದ ಬ್ರೇಸ್ಲೆಟ್! ನಿಗಳ ಪದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲಿ ಅರ್ಥ ‘ಕೈಗೆ ತೊಡುವ ಒಂದು ಬಗೆಯ ಆಭರಣ’ ಎಂದಿದೆ. ಪದಬಳಕೆಯ ಉದಾಹರಣೆಯಾಗಿ ಕುಮಾರವ್ಯಾಸನ ಈ ಪದ್ಯವನ್ನೇ ಕೊಡಲಾಗಿದೆ! ಸರಿ, ಕೈಗೆ ತೊಡುವ ಆಭರಣವೆಂದರೆ ಬಳೆ, ಕಡಗವೂ ಆಗಬಹುದಲ್ಲ? ನಿಗಳಕ್ಕೆ ಸರಪಳಿ ಎಂಬ ಅರ್ಥವನ್ನೂ ಕೊಟ್ಟಿರುವುದು ಅದು ಬಳೆ/ಕಡಗದಂತೆ ನಿರ್ದಿಷ್ಟವಾಗಿ ವೃತ್ತಾಕಾರದಲ್ಲಿರದೆ ಬ್ರೇಸ್ಲೆಟ್ನಂತೆ ಇರುತ್ತದೆನ್ನುವುದಕ್ಕೆ ಪುಷ್ಟಿ ಸಿಗುತ್ತದೆ. ನಿಗಳಬಂಧ, ನಿಗಳಮೋಕ್ಷ, ನಿಗಳನಿರೋಧ ಮುಂತಾದ ಪದಗಳಲ್ಲೂ ನಿಗಳವೆಂದರೆ ಸರಪಳಿ ಎಂದೇ ಅರ್ಥ. ಮುಂಗೈ ನಿಗಳವನು ತಿರುಹುತ್ತ ಮೇಲೆದ್ದನು ಎನ್ನುವಲ್ಲಿ ಬಳೆ/ಕಡಗ ಅಂತಾದರೆ ತಿರುಹುವುದೇನಿದೆ? ಅದು ಸರಪಳಿಯಂತಹ ರಚನೆಯಾದ್ದರಿಂದ ಜೋತುಬಿದ್ದಿರುವುದನ್ನು ಮೇಲಕ್ಕೆ ತಿರುಹಿ, ಆಯುಧ ಹಿಡಿಯಲಿಕ್ಕೆ ಸನ್ನದ್ಧನಾಗಿದ್ದಾನೆ ಅಭಿಮನ್ಯು.
‘ಸುಮಾರು 60 ವರ್ಷಗಳ ಹಿಂದೆ ಮಾಧ್ಯಮಿಕ ಶಾಲೆಯಲ್ಲಿ ಓದಿದ್ದ ಕನ್ನಡ ಪಠ್ಯದಲ್ಲಿ ಕುಮಾರವ್ಯಾಸ ವಿರಚಿತ ಮಹಾಭಾರತದ ಚಕ್ರವ್ಯೂಹಭೇದನ ಪದ್ಯದ ಸಾಲುಗಳು ನೆನಪಾಗಿ ಅಲ್ಲಿಂದ ಹೆಕ್ಕಿತೆಗೆದಿದ್ದೇನೆ’ ಎಂದು ಬಾಲ್ಯವನ್ನು ನೆನಪಿಸಿ ಕೊಳ್ಳುತ್ತ Braceletಗೆ ‘ಮುಂಗೈ ನಿಗಳ’ ಪದವನ್ನು ಸೂಚಿಸಿದವರು ಬೆಂಗಳೂರಿನ ಸಂಚಾರನಗರದಿಂದ ಶ್ರೀ+ರಾಂ. ಹೆಸರಿನಲ್ಲಿ ಅದೇನದು ಕೂಡಿಸು ಚಿಹ್ನೆ ಎಂದು ಕೇಳಿದ್ದಕ್ಕೆ ‘ಶ್ರೀ ಎಂದರೆ ನನ್ನ ಶ್ರೀಮತಿ, ರಾಂ ಎಂದರೆ ನಾನು ರಾಮಚಂದ್ರ’ ಎಂದು ತಿಳಿಸಿದ್ದಾರೆ. ಅಂತಹ ಹಿರಿಯ ದಂಪತಿಯು ಕುಮಾರವ್ಯಾಸ ಬಳಸಿದ್ದ ಪದವೊಂದನ್ನು ನೆನಪಿಸಿಕೊಂಡು ಅತಿಸೂಕ್ತವಾಗಿ ಸೂಚಿಸಿದ್ದಾರೆಂದರೆ ಅದನ್ನೇ ಆಯ್ದು ಮರುಬಳಕೆಗೆ ತರೋಣ.
ಅಂಕಣಕ್ಕೂ ಅದೊಂದು ಧನ್ಯತೆ. ಹಾಗೆಯೇ, ಪ್ರಫುಲ್ಲಾ ಕೆ. ಎಂಬವರು ಸೂಚಿಸಿದ ಕೈನೇವಳ, ಮುಂಗೈನೇವಳ, ಮುಂಗೈ ಅಡ್ಡಿಕೆ ಸಹ ಯೋಗ್ಯವಾದ ಪದಗಳು. ಮುಂಗೈಬಂದಿ(ಲಕ್ಷ್ಮಣ ಗೋರ್ಲಕಟ್ಟೆ), ಮುಂಗೈಸರ(ವೆಂಕೋಬರಾವ್ ಕೆಂಚನಪುರ, ಗೂಳ್ಯ ಜಯರಾಮಪ್ಪ, ಉಪೇಂದ್ರ ಸೋಮಯಾಜಿ, ಪದ್ಮಜಾ ಕೌಲಗಿ, ಡಿ.ಶ್ರೀಕಾಂತ್), ಮುಂಗೈಸರಪಣಿ(ಸತ್ಯ ಹರಿಹಳ್ಳಿ, ವಾಣಿ ಸತೀಶ್ಬಾಬು), ಮುಂಗೈಹಾರ(ಲಾರೆನ್ಸ್ ಡಿಸೋಜ) ಕೂಡ ಗಮನಾರ್ಹವೇ. ಉಚ್ಚಾರಣೆಗೆ ತುಸು ವಿಚಿತ್ರವಾದರೂ ಅರ್ಥಬದ್ಧವಾದ ‘ಬಳುಕುಬಳೆ’(ವಸಂತ ಕುಮಾರ್ ಕಲ್ಯಾಣಿ, ಸುಹಾಸ್ ಮಣಿಪಾಲ) ಸಹ ಕನ್ನಡದ ಬ್ರೇಸ್ಲೆಟ್ ಆಗಬಲ್ಲದು. ಅಷ್ಟೆಲ್ಲ ಕಷ್ಟವೇಕೆ, ಸರಳವಾಗಿ ‘ಕೈಸರ’ ಆಗಬಹುದಲ್ವಾ ಎಂದವರು: ಡಾ.ಸುರೇಶ ಸೊಣ್ಣಪ್ಪ, ಮಹಾ ಬಲೇಶ್ವರ ಹೆಗಡೆ, ಸಂತೋಷ ಸಗರೆ, ರಾಮಚಂದ್ರ ಜೋಯಿಸ, ಶ್ರೀಶಶಿಕಿರಣ್ ಪ್ರಭು, ಅರ್ಚನಾ ಸೊರೆಗಾಂವ್, ಶ್ರೀನಾಥ್ ಕೆ.ಟಿ., ಬದರಿನಾಥ ಇಬ್ರಾಂಪುರ, ಅಪ್ಪು ಮುತ್ಯ, ಸತೀಶ ಕಬೇಕೋಡಿ, ಮಮತಾ ಕುಂದಾಪುರ, ಎಂ.ಕೆ.ಜಗದೀಶ್, ಧೀರೇಂದ್ರ ಬೀಳಗಿ, ಮಂಜುನಾಥ ಶರ್ಮ, ಚಿಕ್ಕಮುನಿಸ್ವಾಮಿ ವೆಂಕಟೇಶ್, ಸುನಯನಾ ಮಾರ್ನಾಡು.
ಕಳೆದಸಲ ಕೇಳಿದ್ದ ಎರಡನೆಯ ಪದ Breaking News. ಈಗೀಗ ವಾಕರಿಕೆ ಬರುವಷ್ಟು ಬಳಕೆಯಾಗುತ್ತಿರುವುದು. ಆಂಗ್ಲ ಭಾಷೆಯಲ್ಲಿ ಇದರ ಬಳಕೆ ಹೇಗೆ ಆರಂಭವಾಯಿತು? ಜಾನ್ ಲೋಗಿ ಬಾಯರ್ಡ್ನು 1926ರಲ್ಲಿ ಟೆಲಿವಿಷನ್ನ ಆವಿಷ್ಕಾರ ಮಾಡಿದಾಗಲೇ ಹುಟ್ಟಿಕೊಂಡಿತೇ? ಇಲ್ಲ. ಇಂಗ್ಲಿಷ್ನಲ್ಲಿ break ಎಂದರೆ ಒಡೆದುಹಾಕು ಎಂಬರ್ಥದ ಕ್ರಿಯಾಪದವಷ್ಟೇ ಅಲ್ಲ, ಅದೊಂದು ನಾಮಪದವೂ ಆಗುತ್ತದೆ. ಚಿಕ್ಕದೊಂದು ಬದಲಾವಣೆ, ಸಾಗುತ್ತಿರುವ ಕೆಲಸಕ್ಕೊಂದು ತಾತ್ಕಾಲಿಕ ತಡೆ, ಅಥವಾ ವಿರಾಮ ಎಂಬರ್ಥದಲ್ಲಿ. ಉದಾಹರಣೆಗೆ coffee-break. ಇನ್ನು, ಸುದ್ದಿಯ ವಿಚಾರಕ್ಕೆ ಬಂದರೆ break ಪದಬಳಕೆ ಸುಮಾರು 750 ವರ್ಷಗಳಷ್ಟು ಹಿಂದೆಯೂ ಇತ್ತಂತೆ. ಯಾವುದೇ ಒಂದು ವಿದ್ಯಮಾನವನ್ನು, ಬೆಳವಣಿಗೆಯನ್ನು ಸಾರ್ವಜನಿಕರಿಗೆ ಮೊತ್ತಮೊದಲ ಬಾರಿ ತಿಳಿಯಪಡಿಸುವ ಪ್ರಕ್ರಿಯೆಯನ್ನು breaking ಎನ್ನಲಾಗುತ್ತಿತ್ತು.
ರೇಡಿಯೊ ಮತ್ತು ಟೆಲಿವಿಷನ್ ಆವಿಷ್ಕಾರದ ಬಳಿಕ ಅದು ಹೆಚ್ಚು ಪ್ರಸ್ತುತವಾಯಿತು. ಯಾವುದಾದರೂ ಅನಿರೀಕ್ಷಿತ ಘಟನೆ ಸಂಭವಿಸಿದಾಗ, ಆ ಹೊತ್ತಿನಲ್ಲಿ ರೇಡಿಯೊ/ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮಾಮೂಲಿ ಕಾರ್ಯಕ್ರಮವನ್ನು ಹಠಾತ್ತನೆ ನಿಲ್ಲಿಸಿ ಘಟನೆಯ ಸುದ್ದಿಯನ್ನು ಜನರಿಗೆ ತಿಳಿಸುವ ಕ್ರಮ breaking news ಎನಿಸಿಕೊಂಡಿತು. ಈಗ 24 ಗಂಟೆ ಕಾಲ ಸುದ್ದಿಗಳನ್ನೇ ರ್ಚವಿತಚರ್ವಣವಾಗಿ ಬಿತ್ತರಿಸುವ ಸುದ್ದಿವಾಹಿನಿಗಳಲ್ಲಿ breaking news ಪದಪುಂಜಕ್ಕೆ ಮೂಲ ಅರ್ಥ ಇಲ್ಲವಾಗಿದೆ. ಹೆಚ್ಚೆಂದರೆ ಇದೀಗ ತಾನೆ ಬಂದ ಸುದ್ದಿ ಎಂದಷ್ಟೇ ಹೇಳಬಹುದಾಗಿದೆ.
ಬಹುಮತದ ಆಯ್ಕೆ ‘ಸ್ಪೋಟಕ ಸುದ್ದಿ’ ಅಥವಾ ‘ಸುದ್ದಿ ಸ್ಪೋಟ’. ಸೂಚಿಸಿದವರು: ಶಂಕರ ಎನ್.ವಿ., ಲಕ್ಷಿ ್ಮಕಾಂತ ಪಾಟೀಲ, ಪ್ರಭುಪ್ರಸಾದ್ ನಡುತೋಟ, ವಿಶ್ವನಾಥ ಮೊಸಳೆ, ಡಾ.ಜಿ.ಎಸ್.ಸುರೇಶಬಾಬು, ದಾಮೋದರ ಭಟ್, ಬ್ರಹ್ಮ ವರ್ಧಮಾನ, ಜಿ.ಎಂ.ನಾಗರಾಜ, ನಿವೇದಿತಾ ರಾವ್, ರಮೇಶ ಕಾರಂತ, ಸೀತಾ ಶ್ರೀನಾಥ್, ಬೊ.ನಾ.ಕೃಷ್ಣಮೂರ್ತಿ, ಎಚ್.ಎನ್.ವಾಸುದೇವ ರಾವ್, ವಿದ್ಯಾಶಂಕರ ಶರ್ಮ, ಆರ್.ವಿ.ಮೂರ್ತಿ, ಕೃಪಾ ಗೋಖಲೆ, ನಳಿನಿ ಭಟ್, ನಟರಾಜು ಬಿ.ಎಸ್, ಕಮಲಾಕರ ಆರ್.ಎಸ್, ಸುಮಂತ ಪ್ರಭು, ಗಿರೀಶ್ ಶಿವಮೊಗ್ಗ, ಅನುರಾಧ ಎಚ್.ಬಿ, ಎಸ್.ಜಿ.ಕುಲಕರ್ಣಿ, ಅನಿಲಕುಮಾರ್ ಎಂ.ಕೆ, ಸುರೇಂದ್ರ ಪೈ, ರಾಜೀವ ಪಟವರ್ಧನ್, ಮಂಜುನಾಥ ಡಿ.ಎಸ್, ಭಾರತೀ ಪ್ರಸಾದ್, ಸುಹಾಸ್ ಮಣಿಪಾಲ ಮುಂತಾದವರು. ‘ಬಿಸಿಬಿಸಿ ಸುದ್ದಿ’ ಅಥವಾ ‘ಬಿಸಿ ಸುದ್ದಿ’ ಎಂದು ಸೂಚಿಸಿದವರು: ಭಾರತಿ ಶೆಣೈ, ಸುಜಾತಾ ಕುಲಕರ್ಣಿ, ಶಾಂತಿನಿ ಮಂಜುನಾಥ್, ದತ್ತಾತ್ರಿ ಸಾಮಗ, ಅನಸೂಯಾ ಪಾಟೀಲ, ಉದಯ ಜಾದೂಗಾರ್, ರಾಜೇಂದ್ರ ಶಿವಬಸಪ್ಪ, ವಾದಿರಾಜ ಕುಲಕರ್ಣಿ, ರೂಪಶ್ರೀ ಕುಮಾರ್, ಮಲ್ಲಿಕಾರ್ಜುನ ಹರ್ಲಾಪುರ, ಗುರುರಾಜ ಛೆಬ್ಬಿ, ರೇವತಿ ಜೋಶಿ, ಡಾ.ಶಂಕರ ಕಂದಗಲ್ಲ, ಸಾತ್ವಿಕ್ ಕೆಂಚರಡ್ಡಿ, ಪಂಪಾಪತಿ ಕೆ.ಆರ್, ಸುಜಿತ್ ಸಂಡೂರ್, ದೀಪಾ ಗೋರೆ, ಸಿ.ಎನ್.ರಾಮಮೋಹನ, ಅನುಷಾ ಭಟ್, ಪಂಪಣ್ಣ ಗೌಡ, ಎಂ.ಆರ್.ಸತ್ಯನಾರಾಯಣ ರಾವ್, ಹೇಮಾ ಸ್ವಾಮಿ ಮತ್ತಿತರರು.
ಕೊನೆಯದಾಗಿ Honeytrap. ಆಗಾಗ ಸುದ್ದಿಯಲ್ಲಿರುತ್ತದಾದರೂ ಪುರಾಣಕಾಲದಿಂದಲೂ ಪ್ರಚಲಿತವಿರುವ ತಂತ್ರವಿದು. ಪರಮೇಶ್ವರನಿಂದ ವರ ಪಡೆದ ಭಸ್ಮಾಸುರನು ತ್ರಿಲೋಕಗಳಿಗೂ ಕಂಟಕನಾದಾಗ ಅವನನ್ನು ಮುಗಿಸಲಿಕ್ಕೆ ಶ್ರೀಮನ್ನಾರಾಯಣನೇ ಮೋಹಿನಿ ರೂಪದಲ್ಲಿ ಬಂದದ್ದು ಹನಿಟ್ರ್ಯಾಪ್ ಅಲ್ಲದೆ ಮತ್ತಿನ್ನೇನು? ಪಾಶ್ಚಾತ್ಯ ಪುರಾಣಗಳಲ್ಲೂ, ಪ್ರಪಂಚಯುದ್ಧಗಳಲ್ಲೂ ಹನಿಟ್ರ್ಯಾಪ್ ನಡೆದಿತ್ತು. ಮೋಹದ ಬಲೆ ಬೀಸಲಿಕ್ಕೆ ಮೋಹಿನಿಯರ ಬಳಕೆಯಾಗಿತ್ತು. ಪುರುಷರದು ಅದೊಂದು ದೌರ್ಬಲ್ಯ ಎನ್ನುವುದನ್ನು ಒಂದು ಸುಭಾಷಿತದಲ್ಲಿ ತುಂಬ ಚೆನ್ನಾಗಿ ಹೇಳಲಾಗಿದೆ:
‘ವಿಶ್ವಾಮಿತ್ರಪರಾಶರಪ್ರಭೃತಯೋ ವಾತಾಂಬುಪರ್ಣಾಶನಾಃ| ತೇಠಪಿ ಸ್ತ್ರೀಮುಖಪಂಕಜಂ ಸುಲಲಿತಂ ದೃಷ್ಟೆ್ವೖವ ಮೋಹಂಗತಾಃ| ಶಾಲ್ಯನ್ನಂ ಸಘೃತಂ ಪಯೋದಧಿಯುತಂ ಭುಂಜಂತಿ ಯೇ ಮಾನವಾಃ| ತೇಷಾಮಿಂದ್ರಿಯನಿಗ್ರಹೋ ಯದಿ ಭವೇದ್ವಿಂಧ್ಯಸ್ತರೇತ್ಸಾಗರೇ||’ ಅಂದರೆ- ಕೇವಲ ಗಾಳಿ, ನೀರು, ಎಲೆಗಳನ್ನಷ್ಟೇ ಸೇವಿಸುತ್ತ ತಪಸ್ಸು ಮಾಡುತ್ತಿದ್ದ ವಿಶ್ವಾಮಿತ್ರ, ಪರಾಶರ ಮೊದಲಾದ ಮಹರ್ಷಿಗಳೂ ಸ್ತ್ರೀ ಮುಖಕಮಲವನ್ನು ನೋಡಿಯೇ ಮೋಹಗೊಂಡರು. ಇಂತಿರುವಾಗ ತುಪ್ಪ, ಹಾಲು, ಮೊಸರುಗಳಿಂದ ಕೂಡಿದ ಒಳ್ಳೆಯ ಅನ್ನವನ್ನು ಉಣ್ಣುವ ಮನುಷ್ಯರಿಗೆ ಒಂದುವೇಳೆ ಇಂದ್ರಿಯನಿಗ್ರಹ ಸಾಧ್ಯವಾಯಿತೆಂದರೆ ವಿಂಧ್ಯಪರ್ವತವು ಸಮುದ್ರದಲ್ಲಿ ತೇಲೀತು! ಅದು ಆಗದಹೋಗದ ಮಾತು.
ಹನಿಟ್ರ್ಯಾಪ್ಗೆ ಮಧುಜಾಲ ಎಂಬ ಪದವನ್ನು ಈಗಾಗಲೇ ಕೆಲವರು ಮಾಧ್ಯಮಗಳಲ್ಲೂ ಬಳಸತೊಡಗಿದ್ದಾರೆ. ಪದಶಃ ಅನುವಾದವಾಗಿ ಒಳ್ಳೆಯದೇ. ಹಾಗೆ ನೋಡಿದರೆ ‘ಜೇನುಬಲೆ’, ಅಥವಾ ಪ್ರಾಸಬದ್ಧವಾಗಿ ‘ಜೇನುಬೋನು’ ಸಹ ಆಗಬಹುದು. ಆದರೆ ಮೋಹಿನಿಯರ ಪಾತ್ರವಿರುವುದರಿಂದ ‘ಮೋಹಜಾಲ’ ಹೆಚ್ಚು ಸೂಕ್ತವೆನಿಸುತ್ತದೆ. ಸೂಚಿಸಿದವರು: ರಾಜಣ್ಣ ಎಚ್.ಎಂ (ಸುದ್ದಿಯಲ್ಲಿರುವವರಲ್ಲ!), ರಘುನಾಥ ಆಚಾರ್ಯ, ಸುಮಲತಾ ಗಡಿಯಪ್ಪನವರ, ಕೊಟ್ರಪ್ಪ ಹಮ್ಸಾಗರ, ಗುರುದತ್ತ ಎನ್, ರಾಘವೇಂದ್ರ ಎಚ್.ಎಸ್, ನರೇಂದ್ರನಾಥ್, ವೀರಮ್ಮ ಎಚ್.ಎಲ್, ಎಂ.ಕೆ.ರಮೇಶ್, ಪಾರ್ವತಿ ಹಮ್ಮಿಗಿ, ಮಲ್ಲಣ್ಣ ಅಂಗಡಿ, ಶೋಭಾ ಎನ್.ಸಿ, ಸುಧೀರ ಟಟಕಸಾಲಿ, ಪ್ರಭು ಸಿಂಗೋಡಿ, ಅಶ್ವಿನಿ ರಾಮಸ್ವಾಮಿ, ವೇಂಕಟೇಶ ಮನ್ನಾರಿ, ಸೀತಾ ವ್ಯಾಸಮುದ್ರಿ, ಶ್ರೀಕಾಂತ ಬೆಳವಾಡಿ, ಭ.ನಿಂ.ಗೋಪಿನಾಥ್, ವಿಲಾಸ ಹುದ್ದಾರ, ರಾಮನಾಥ ಮೊಸಳೆ, ಅಭಯ್ ನರಸಿಂಹ, ನಾಗೇಶ ಫಾಟಕ್.
ಕನ್ನಡ ಪದ ಕಟ್ಟುವ ಚಟುವಟಿಕೆಗೆ ಸಂಬಂಧಿಸಿದಂತೆ ಚಿಂತನಯೋಗ್ಯ ವಿಚಾರವೊಂದನ್ನು ಮಂಡಿಸಿದ್ದಾರೆ ಬೆಂಗಳೂರಿನಿಂದ ಸಂಸ್ಕೃತಭಾರತಿಯ ವಿದ್ವಾನ್ ಡಾ.ಜನಾರ್ದನ ಹೆಗಡೆ. ಅವರ ಪತ್ರದ ಒಕ್ಕಣೆ ಹೀಗಿದೆ: ‘‘ನಾವು ಆಯುವ/ಸೃಷ್ಟಿಸುವ ಶಬ್ದಗಳು ಎಂತಹವುಗಳಿರಬೇಕು ಎಂಬುದರ ಬಗ್ಗೆ ಆಳವಾಗಿ ಆಲೋಚಿಸಬೇಕು. ನಮ್ಮ ಆಯ್ಕೆ ಅಖಿಲ ಭಾರತದ ಹಿತವನ್ನು ಕಾಯುವಂತಿದ್ದರೆ ಒಳಿತು. ಕನ್ನಡಕ್ಕಾಗಿ ಪದಗಳನ್ನು ಸಂಗ್ರಹಿಸುತ್ತಿರುವುದರಿಂದ ಕನ್ನಡದ ಪದಗಳನ್ನೇ ಜೋಡಿಸಿ ಹೊಸದನ್ನು ಸೃಷ್ಟಿಸುವುದು ಅನುಚಿತವೇನಲ್ಲ.
ಆದರೆ ಅಲ್ಲಿಯೇ ಸಂಸ್ಕೃತದ ಹಿನ್ನೆಲೆಯ ಪದವೊಂದು ಸಿಗುವುದಾದರೆ ಅದನ್ನೇ ಆಯ್ದುಕೊಳ್ಳುವುದು ಸಮಂಜಸ. ಹೀಗೆ ಆಯ್ದಕೊಂಡಾಗ ಅದು ಬೇರೆಲ್ಲ ಭಾರತೀಯ ಭಾಷೆಗಳಲ್ಲೂ ಬಳಕೆಗೆ ಬರಬಹುದಾಗಿದೆ. ಇಂಗ್ಲಿಷ್ ಪದಕ್ಕೆ ಸಂವಾದಿಯಾದ ಭಾರತೀಯ ಪದವೊಂದು ಎಲ್ಲ ಭಾರತೀಯ ಭಾಷೆಗಳಿಗೂ ಬೇಕೇಬೇಕು; ಆ ಅಗತ್ಯವನ್ನೂ ಪೂರೈಸಿದಂತಾಗುತ್ತದೆ. ಭಾಷೆಗಳ ನಂಟು ಬಲಗೊಳ್ಳುತ್ತದೆ. ದೇಶದ ಏಕತೆಯ ಹಿನ್ನೆಲೆಯಲ್ಲಿ ಇದೊಂದು ಮಹತ್ತ ್ವ ಹೆಜ್ಜೆಯಾಗುತ್ತದೆ. ಕನ್ನಡದ ಪದಗಳನ್ನಷ್ಟೇ ತಂದರೆ ಪ್ರಾದೇಶಿಕತೆ ಬಲಗೊಳ್ಳುತ್ತ ಹೋಗುತ್ತದೆ. ಪ್ರಾದೇಶಿಕತೆ ಬಲಗೊಳ್ಳುವುದರ ಪರಿಣಾಮವನ್ನು ನಾವಿಂದು ತಮಿಳುನಾಡಿನಲ್ಲಿ ನೋಡಬಹುದಾಗಿದೆ. ಕರ್ನಾಟಕದಲ್ಲೂ ಅದರ ಕರಿನೆರಳು ತೋರಿಬರುತ್ತಿದೆ.
ಪ್ರಾಣವಾಯು, ಜಲಜನಕ, ಭಾಜ್ಯ, ಭಾಜಕ, ಭಾಗಲಬ್ಧ ಮುಂತಾದ ಪದಗಳನ್ನು ಚಾಲ್ತಿಗೆ ತರುವಾಗ ದೇಶದ ಏಕತೆಯನ್ನೇ ಹಿಂದಿನವರೂ ಬಲಗೊಳಿಸಬಯಸಿದ್ದರು. ನಾವೂ ಆ ಮಾರ್ಗವನ್ನೇ ಅನುಸರಿಸುವುದೊಳಿತು. ನಾನು ಅಪ್ಪಟ ಕನ್ನಡಿಗನೇ. ಕನ್ನಡ ಹೆಚ್ಚುಹೆಚ್ಚಾಗಿ ಬೆಳೆಯಬೇಕೆಂದು ಬಯಸುವವನೇ. ಅದರಲ್ಲೂ ಇಂಗ್ಲಿಷ್ ಪದಗಳನ್ನು ಎಗ್ಗಿಲ್ಲದೆ ಬಳಸುವುದನ್ನು ಕಂಡಾಗ ಮನಸ್ಸು ಖತಿಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡಕ್ಕಾಗಿ ಪದಗಳನ್ನು ಸಂಗ್ರಹಿಸುವ ಪ್ರಯತ್ನ ಸ್ತುತ್ಯವಾದುದೇ. ಇದರಿಂದ ಕೆಲವರಾದರೂ ಕನ್ನಡ ಪದಗಳನ್ನು ಬಳಸತೊಡಗಿಯಾರು. ಆದರೆ ಹೊಸ ಶಬ್ದಗಳನ್ನು ಆಯುವಾಗ ದೇಶದ ಏಕತೆಯ ಕಾಳಜಿಯೂ ಮನಸ್ಸಲ್ಲಿದರೆ ಒಳ್ಳೆಯದಲ್ಲವೇ?’’
1.Courier: ಅಂಚೆ ಅಥವಾ ಅಂಚೆಯಣ್ಣ ಎಂದಾಗ ಪತ್ರಗಳು ಮತ್ತು ಬಟವಾಡೆ ಮಾಡುವ ವ್ಯಕ್ತಿಯ ಚಿತ್ರಣ ಮನದಲ್ಲಿ ಮೂಡುತ್ತದೆಯಷ್ಟೆ. ಈಗಿನ ಧಾವಂತ ಯುಗದ ಕೊರಿಯರ್ಗೂ ಚಂದದ್ದೊಂದು ಕನ್ನಡ ಪದವಿರಲಿ.
2.Jam: ಟ್ರಾ್ಯಫಿಕ್ ಜಾಮ್ೆ ಸಂಚಾರ ಸಿಕ್ಕು ಎಂಬ ಪದ ಕಟ್ಟಿದ್ದೆವು, ಮೊನ್ನೆ ನವಂಬರ್ನಲ್ಲಿ. ಈಗ, ಹಣ್ಣುಗಳು ಮತ್ತು ಸಕ್ಕರೆಯಿಂದ ತಯಾರಿಸುವ ಈ ತಿನಿಸಿಗೊಂದು ಕನ್ನಡ ಪದ ಕಟ್ಟೋಣವೇ?
3.Viral: ಇದು ಕಾಯಿಲೆಗೆ ಸಂಬಂಧಪಟ್ಟಿದ್ದಲ್ಲ, ಸಾಮಾಜಿಕ ಮಾಧ್ಯಮಗಳಿಂದಾಗಿ ಇದ್ದಬಿದ್ದದ್ದೆಲ್ಲ ಕಾಳ್ಗಿಚ್ಚಿನಂತೆ ಹರಡುತ್ತದಲ್ಲ, ಅದಕ್ಕೊಂದು ಕನ್ನಡ ಪದ ಹುಡುಕಿ ಅದನ್ನೇ ವೈರಲ್ ಮಾಡೋಣ!
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945 (ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್, ಅಂಕಣ ಬರಹಗಾರರು)