

ವಿಜ್ಞಾನಲೋಕದಲ್ಲಿ ಸಂಚಲನ ಉಂಟುಮಾಡಿದ್ದ ಈ ತಂತ್ರಜ್ಞಾನವನ್ನು ಬಳಸಿ ಇದೀಗ ಪ್ರಯೋಗಗಳು ನಡೆಯುತ್ತಿದ್ದು ಅವುಗಳು ಮುಂಬರುವ ದಿನಗಳಲ್ಲಿ ನಾವೆಂದೂ ಊಹಿಸಿರದ ಹಲವು ಮೊದಲುಗಳಿಗೆ ಕಾರಣವಾಗಲಿವೆ. ಈ ಪ್ರಯೋಗಗಳ ಕುರಿತು ಅರಿತುಕೊಳ್ಳುವ ಮೊದಲು ಉಣ್ಣೆಯ ಬೃಹತ್ಗಜವನ್ನು ಮರಳಿ ಪರಿಚಯಿಸುವ ಯೋಜನೆಯ ಪ್ರಗತಿ ಕುರಿತು ತಿಳಿದುಕೊಳ್ಳೋಣ.
ಹತ್ತು ಸಾವಿರ ವರ್ಷಗಳ ಹಿಂದೆ ಉತ್ತರಧ್ರುವದ ಅತಿಶೀತಲ ವಾತಾವರಣದಲ್ಲಿ ಓಡಾಡಿಕೊಂಡಿದ್ದ ಉಣ್ಣೆಯ ಬೃಹತ್ಗಜವನ್ನು ಕ್ರಿಸ್ಪರ್ ತಂತ್ರಜ್ಞಾನವನ್ನು ಬಳಸಿ ಪುನರ್ ಸೃಷ್ಟಿಸುವ ಯೋಜನೆಯನ್ನು ಅಮೆರಿಕದ ದಲ್ಲಾಸ್ ಮೂಲದ ಕೋಲೊಸಲ್ ಸಂಸ್ಥೆ ಹಾಕಿಕೊಂಡಿದೆ. 2027ಕ್ಕೆ ಈ ಯೋಜನೆ ಕಾರ್ಯಗತಗೊಳ್ಳಲಿದೆ. ಈಗಾಗಲೇ ದೊರಕಿರುವ ಬೃಹತ್ಗಜಗಳ ಪಳೆಯಳಿಕೆಗಳಿಂದ ಅವುಗಳ ಡಿಎನ್ಎಗಳನ್ನು ಸಂಗ್ರಹಿಸಿ ಅವುಗಳ ವಂಶವಾಹಿಗಳನ್ನು ಕ್ರಿಸ್ಪರ್ ತಂತ್ರಜ್ಞಾನದ ಮೂಲಕ ಸಂಪಾದಿಸಿ ಉಣ್ಣೆಯ ಬೃಹತ್ಗಜದ ಭ್ರೂಣವೊಂದನ್ನು ತಯಾರಿಸಲಾಗುತ್ತದೆ.
ಹೀಗೆ ತಯಾರಾದ ಭ್ರೂಣವನ್ನು ಬೃಹತ್ಗಜಗಳ ಹತ್ತಿರದ ಸಂಬಂಧಿಯಾಗಿರುವ ಎಷಿಯಾಟಿಕ್ ಆನೆಗಳ ಗರ್ಭದಲ್ಲಿ ಬೆಳೆಸಲಾಗುತ್ತದೆ. ಆ ಆನೆ ಜನ್ಮ ನೀಡುವ ಮರಿಯಾನೆಯು ಬೃಹತ್ಗಜಕ್ಕೆ ತೀರ ಹತ್ತಿರದ ಗುಣ ಮತ್ತು ಚಹರೆಯನ್ನುಳ್ಳ ಮರಿಗಜವಾಗಲಿದೆ ಎಂಬುದು ಯೋಜನೆಯ ಹಿಂದಿರುವ ವಿಜ್ಞಾನಿಗಳ ಅಂಬೋಣ. ಅಷ್ಟಕ್ಕೂ ಈ ವಿಜ್ಞಾನಿಗಳು ಉಣ್ಣೆಯ ಬೃಹತ್ಗಜದ ಹಿಂದೆ ಬಿದ್ದಿರುವುದಕ್ಕೂ ಬಲವಾದ ಕಾರಣವುಂಟು.
ಅತಿ ಶೀತಲ ವಾತಾವರಣದಲ್ಲಿ ಮಣ್ಣು ಮತ್ತು ನೀರು ಮಿಳಿತವಾಗಿ ಹಿಮಮಣ್ಣಿನ ಸ್ಥಿತಿಯಲ್ಲಿ ಇರುವುದನ್ನು ಪರ್ವಫೋಸ್ಟ್ (ಕಛ್ಟಿಞಚ್ಛ್ಟಠಠಿ) ಎಂದು ಹೇಳಲಾಗುತ್ತದೆ. ಉತ್ತರ ಧ್ರುವದಲ್ಲಿ ಇಪ್ಪತ್ತೆರಡು ಮಿಲಿಯನ್ ಚದರ ಕಿಲೋಮೀಟರ್ ಪ್ರದೇಶವನ್ನು ಈ ಪರ್ವಫೋ›ಸ್ಟ್ ಆವರಿಸಿಕೊಂಡಿದ್ದು ಹಲವು ಲಕ್ಷವರ್ಷಗಳಿಂದ ಅದೇ ಸ್ಥಿತಿಯಲ್ಲಿದೆ. ಹಿಮದ ಜೊತೆಯಲ್ಲಿರುವ ಮಣ್ಣಿನಲ್ಲಿರುವ ಫಲವತ್ತತೆಯ ಪರಿಣಾಮ ಇಲ್ಲಿ ಕುರುಚಲು ಗಿಡಗಳು ಪೊದೆಗಳ ಜೊತೆಗೆ ಅಲ್ಲಲ್ಲಿ ಮರಗಿಡಗಳೂ ಬೆಳೆಯುತ್ತವೆ. ಬೇಸಿಗೆಯಲ್ಲಿ ಕರಗುವ ಮಂಜಿನ ಮೇಲ್ಪದರ ಸರೋವರವಾದರೆ ಅದರ ಕೆಳಗಿರುವ ಹಿಮವು ಮಣ್ಣಿನ ಸವಕಳಿಯಾಗದಂತೆ ತಡೆಯುತ್ತದೆ.
ಹಿಮದ ಪದರದ ಮೇಲೆ ತೇಲುವ ನೀರಿನ ಸರೋವರವು ಸ್ಥಳೀಯ ಜೀವಸಂಕುಲದ ದಾಹ ತೀರಿಸುತ್ತದೆ. ಹೀಗಾಗಿ ಮಂಜಿನ ಮರುಭೂಮಿಯಲ್ಲೂ ಜೀವವೈವಿಧ್ಯವನ್ನು ಪರ್ವಫೋ›ಸ್ಟ್ ಕಾಪಿಡುತ್ತಿದೆ. ಇದೀಗ ಜಾಗತಿಕ ತಾಪಮಾನ ಹೆಚ್ಚಳದಿಂದ ಈ ಹಿಮಮಣ್ಣು ಕರಗುತ್ತಿದ್ದು ಅದು ಒಂದು ಹಂತವನ್ನು ಮೀರಿದರೆ ಅದರೊಳಗೆ ಹಲವು ವರ್ಷಗಳಿಂದ ಹುದುಗಿ ಶೀತ ತಾಪಮಾನದ ಕಾರಣಕ್ಕೆ ಇನ್ನೂ ತಾಜಾ ಸ್ಥಿತಿಯಲ್ಲಿಯೇ ಇರುವ ಜೀವ ಮತ್ತು ಸಸ್ಯ ಸಂಕುಲದ ಅವಶೇಷಗಳು ಹೊರಗಿನ ವಾತಾವರಣಕ್ಕೆ ತೆರೆದುಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ಹಾಗಾದಲ್ಲಿ ಆ ಅವಶೇಷಗಳು ಕೊಳೆತು ಮಿಥೇನ್ ಮತ್ತು ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗಲು ಪ್ರಾರಂಭವಾಗುತ್ತದೆ.
ಒಂದು ಲೆಕ್ಕಾಚಾರದ ಪ್ರಕಾರ ಹೀಗೆ ಬಿಡುಗಡೆಯಾಗುವ ಶಾಖವರ್ಧಕ ಅನಿಲಗಳ ಪ್ರಮಾಣ ಇಡೀ ಭೂಮಿಯಲ್ಲಿ ಇರುವ ಕಾಡನ್ನು ಎರಡು ಬಾರಿ ಸುಟ್ಟರೆ ಹೊರಹೊಮ್ಮುವ ಪ್ರಮಾಣದಷ್ಟಾಗಲಿದೆ. ವಿಜ್ಞಾನಿಗಳು ಅಂದಾಜಿಸಿದಂತೆ ಜಾಗತಿಕ ತಾಪಮಾನದ ಹೆಚ್ಚಳ ಇದೇ ಪ್ರಮಾಣದಲ್ಲಿದ್ದರೆ 2100ರ ಹೊತ್ತಿಗೆ ಪರ್ವಫೋಸ್ಟ್ನ ಕರಗುವ ಪ್ರಕ್ರಿಯೆ ದೊಡ್ಡ ಪ್ರಮಾಣದಲ್ಲಿ ಆರಂಭವಾಗಲಿದೆ. ಹೀಗಾಗಿ ಈ ಪರ್ವಫೋಸ್ಟ್ನ ಕರಗುವ ಪ್ರಕ್ರಿಯೆ ಇಡೀ ಭೂಮಿಯ ಜೀವಸಂಕುಲದ ಮೇಲೆ ತೂಗುಗತ್ತಿಯಂತಿದ್ದು ಈ ಕಾರಣಕ್ಕೆ ಜಾಗತಿಕ ತಾಪಮಾನವನ್ನು ನಿಯಂತ್ರಣದಲ್ಲಿಡಲು ವಿಜ್ಞಾನಿಗಳು ಮತ್ತು ಪರಿಸರವಾದಿಗಳು ಸತತವಾಗಿ ಆಗ್ರಹಿಸುತ್ತಿದ್ದಾರೆ.
ಜಾಗತಿಕ ತಾಪಮಾನದ ನಿಯಂತ್ರಣವೇನೋ ಸರಿ. ಆದರೆ ಉತ್ತರ ಧ್ರುವದಲ್ಲಿ ಹಿಮಮಣ್ಣಿನ ಕರಗುವಿಕೆಗೆ ಕೆಲ ವಿಜ್ಞಾನಿಗಳ ತಂಡವು ನೀಡುತ್ತಿರುವ ಕಾರಣವೂ ಮಜವಾಗಿದೆ. ಅವರ ವಾದದ ಪ್ರಕಾರ ದಟ್ಟಹಿಮದ ಪದರಗಳು ಪರ್ವಫೋ›ಸ್ಟ್ ಮೇಲೆ ಆವರಿಸುವ ಪರಿಣಾಮದಿಂದ ಅದು ಉಷ್ಣನಿರೋಧಕದಂತೆ ಕೆಲಸಮಾಡಿ ಶೀತಲ ಮಾರುತಗಳು ಅವುಗಳವರೆಗೆ ತಲುಪದಂತೆ ಮಾಡುತ್ತಿವೆ. ಮೊದಲೆಲ್ಲ ಬೃಹತ್ಗಜಗಳು ಬದುಕಿದ್ದಾಗ ಚಳಿಗಾಲದಲ್ಲಿ ಬೀಳುವ ದಟ್ಟಹಿಮವನ್ನು ಸರಿಸಿ ನಡುವೆ ದಾರಿಮಾಡಿಕೊಂಡು ಓಡಾಡುತ್ತಿದ್ದ ಕಾರಣಕ್ಕೆ ಇದೇ ಶೀತಲ ಮಾರುತಗಳು ಹಿಮಮಣ್ಣನ್ನು ತಲುಪಿ ತಂಪಾಗಿಡುತ್ತಿದ್ದವು. ಆದರೆ ಇದೀಗ ಅವುಗಳ ಗೈರುಹಾಜರಿಯಲ್ಲಿ ಆ ಪ್ರಕ್ರಿಯೆ ಸ್ಥಗಿತಗೊಂಡಿರುವ ಕಾರಣಕ್ಕೆ ಹಿಮಮಣ್ಣಿನ ಕರಗುವಿಕೆ ಹೆಚ್ಚಾಗಿದೆಯಂತೆ.
ಹೀಗಾಗಿ ಅದಕ್ಕೆಲ್ಲ ಪರಿಹಾರವೆಂದರೆ ಕ್ರಿಸ್ಪರ್ ತಂತ್ರಜ್ಞಾನದ ಮೂಲಕ ಉಣ್ಣೆಯ ಬೃಹತ್ಗಜವನ್ನು ಮರಳಿ ತರುವುದು. ಅದ್ಯಾಕೋ ಕಾಗಕ್ಕ, ಗುಬ್ಬಕ್ಕನ ಕಥೆಯಂತಿರುವ ಈ ಯೋಜನೆಗೆ ಈಗಾಗಲೇ ಕೋಟಿಗಟ್ಟಲೆ ಪ್ರಾಯೋಜಕತ್ವವನ್ನು ಪಡೆದಿರುವ ‘ಬೃಹತ್ಗಜ ಬಚಾವೋ’ ತಂಡ ಈ ನಿಟ್ಟಿನಲ್ಲಿ ತನ್ನ ಮೊದಲ ಹೆಜ್ಜೆಯ ಯಶಸ್ಸಿನ ಕುರಿತು ಘೊಷಿಸಿಕೊಂಡಿದೆ. ಕಳೆದ ವಾರ ಕೋಲೊಸಲ್ ಸಂಸ್ಥೆ ಕ್ರಿಸ್ಪರ್ ತಂತ್ರಜ್ಞಾನವನ್ನು ಬಳಸಿ ಇಲಿಗಳ ವಂಶವಾಹಿಯನ್ನು ಮಾರ್ಪಡಿಸಿ ಥೇಟ್ ಬೃಹತ್ಗಜದ ಮೈಮೇಲಿರುವ ಉಣ್ಣೆಯನ್ನು ಹೊಂದಿರುವ ಇಲಿಗಳನ್ನು ಸೃಷ್ಟಿಸಿದೆ. ಬರಿ ಉಣ್ಣೆಯಷ್ಟೇ ಅಲ್ಲದೆ ಮೈಬಣ್ಣ ಮತ್ತು ಚಹರೆಗಳನ್ನೂ ಮಾರ್ಪಡಿಸಿರುವ ಈ ಯೋಜನೆಯ ವಿಜ್ಞಾನಿಗಳು ಇದು ಬೃಹತ್ಗಜವನ್ನು ಮರುಸೃಷ್ಟಿಸುವತ್ತ ಮೊದಲ ಯಶಸ್ಸೆಂದು ಸಂಭ್ರಮಿಸುತ್ತಿದ್ದಾರೆ.
ಈ ಯೋಜನೆಯ ಹಿಂದಿರುವ ವಿಜ್ಞಾನಿಗಳ ಪ್ರಕಾರ ಅವರು ಬೃಹತ್ಗಜದ ಡಿಎನ್ಎಯನ್ನು ಉಳಿದ ಆನೆಗಳ ಜೊತೆ ತುಲನೆ ಮಾಡಿ ಅವುಗಳಲ್ಲಿ ಬೃಹತ್ಗಜಗಳ ಮೈಬಣ್ಣ ಮತ್ತು ಅವುಗಳ ಮೈಮೇಲೆ ಬೆಳೆಯುವ ಉಣ್ಣೆಗೆ ಕಾರಣವಾಗುವ ವಂಶವಾಹಿಯನ್ನು ಪತ್ತೆಹಚ್ಚಿದ್ದಾರೆ. ನಂತರ ಈ ವಂಶವಾಹಿಗಳ ಜೊತೆಗೆ ಅತಿಶೀತಲ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಅವಶ್ಯವಾಗಿರುವ ಹೆಚ್ಚಿನ ಕೊಬ್ಬಿನ ಶೇಖರಣೆಗೆ ಕಾರಣವಾಗುವ ವಂಶವಾಹಿಗಳನ್ನೂ ಸೇರಿಸಿ ಒಟ್ಟು ಎಂಟು ವಂಶವಾಹಿಗಳನ್ನು ಪ್ರಯೋಗಶಾಲೆಯ ಇಲಿಗಳಲ್ಲಿ ಕ್ರಿಸ್ಪರ್ ತಂತ್ರಜ್ಞಾನದ ಮೂಲಕ ಸಂಪಾದಿಸಿದ್ದಾರೆ. ಇದರ ಪರಿಣಾಮವೇ ಈ ಉಣ್ಣೆ ಇಲಿಗಳು.
ಕೋಲೊಸಲ್ ಸಂಸ್ಥೆಯ ಈ ಕಾರ್ಯಕ್ಕೆ ನಿರೀಕ್ಷೆಯಂತೆ ವಿಜ್ಞಾನ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದು ಈಗಾಗಲೇ ಭೂಮಿಯಿಂದ ಅಳಿದು ಹೋಗಿರುವ ಜೀವಿಗಳನ್ನು ಮರಳಿ ತರುವಲ್ಲಿ ಒಂದು ದೊಡ್ಡ ಹೆಜ್ಜೆಯೆಂದು ಬಣ್ಣಿಸಿದರೆ, ಇನ್ನೂ ಕೆಲವರು ಇಲಿಗಳ ಬಣ್ಣ ಮತ್ತು ದೈಹಿಕ ರಚನೆಯ ಮಾರ್ಪಾಡಿನಿಂದಲೇ ಅವುಗಳು ಶೀತವಾತಾವರಣದಲ್ಲಿ ಬದುಕಬಲ್ಲವು ಎಂಬುದನ್ನು ಹೇಳಲಾಗದು.
ಅದಕ್ಕೆ ಸಾಕಷ್ಟು ಕಾಲಾವಕಾಶದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಮತ್ತೊಂದೆಡೆ ಬೃಹತ್ಗಜವನ್ನು ಮರುಸೃಷ್ಟಿಸಿ ಅವುಗಳನ್ನು ಉತ್ತರ ಧ್ರುವದಲ್ಲಿ ಓಡಾಡಿಸುವುದರ ಮೂಲಕ ಹಿಮಮಣ್ಣನ್ನು ಕಾಪಿಟ್ಟುಕೊಳ್ಳುವ ಯೋಜನೆಯೇ ಅಸಂಬದ್ಧ ಎಂಬ ಪುಕಾರೂ ಎದ್ದಿದೆ. ಅದೇನೇ ಇರಲಿ ಎಲ್ಲ ಹೊಸ ಆವಿಷ್ಕಾರಗಳಂತೆ ಕ್ರಿಸ್ಪರ್ ಎಂಬುದೂ ಎರಡು ಅಲುಗಿನ ಕತ್ತಿಯೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಕೋಲೊಸಲ್ ಸಂಸ್ಥೆಯ ಆವಿಷ್ಕಾರದ ಹಿನ್ನೆಲೆಯಲ್ಲಿ ವಂಶವಾಹಿಯನ್ನು ಸಂಪಾದಿಸುವ ತಂತ್ರಜ್ಞಾನದ ಪರ-ವಿರೋಧದ ಚರ್ಚೆಗಳು ಮತ್ತೆ ಶುರುವಾಗಿವೆ. ಈ ತಂತ್ರಜ್ಞಾನವನ್ನು ಬಳಸಿ ಇತ್ತೀಚಿನ ದಿನಗಳಲ್ಲಿ ಸಾಧಿಸಲಾದ ಕೆಲ ಹೊಸ ಬೆಳವಣಿಗೆಗಳನ್ನು ನೋಡೋಣ.
ಈಗಾಗಲೇ ಕಣ್ಮರೆಯಾಗಿರುವ ತಸ್ಮಾನಿಯಾ ಹುಲಿಯನ್ನು ಆಸ್ಟ್ರೇಲಿಯಾದಲ್ಲಿ ಮತ್ತು ಡೊಡೊ ಪಕ್ಷಿಯನ್ನು ಮಾರಿಷಸ್ನಲ್ಲಿ ಪುನರ್ ಸೃಷ್ಟಿಸುವ ಪ್ರಯತ್ನಗಳು ಕ್ರಿಸ್ಪರ್ ತಂತ್ರಜ್ಞಾನದ ಮೂಲಕ ಜಾರಿಯಲ್ಲಿವೆ. ಪರಿಣತರ ಪ್ರಕಾರ ಆಸ್ಟ್ರೇಲಿಯಾದಲ್ಲಿ ಜೈವಿಕ ಸರಪಳಿಯನ್ನು ಕಾಪಿಡಲು ತಸ್ಮಾನಿಯಾ ಹುಲಿಯ ಅಗತ್ಯವಿದ್ದು, ಇವುಗಳ ಕಣ್ಮರೆಯಿಂದ ಉಂಟಾದ ಅಸಮತೋಲನದಿಂದ ಸ್ಥಳೀಯ ತಸ್ಮಾನಿಯನ್ ಡೆವಿಲ್ನಂಥ ಪ್ರಾಣಿಗಳು ನಾಪತ್ತೆಯಾಗಿವೆ. ಇನ್ನು ಹದಿನೇಳನೆ ಶತಮಾನದಲ್ಲಿ ಮರೆಯಾದ ಡೊಡೊ ಪಕ್ಷಿಯು ಬೀಜಪ್ರಸರಣಕ್ಕೆ ಪ್ರಖ್ಯಾತಿ ಹೊಂದಿತ್ತು. ಮಾರಿಷಸ್ನಲ್ಲಿ ಹಸಿರಿನ ಉಳಿವಿಗೆ ಈ ಹಕ್ಕಿಗಳ ಮರುಪರಿಚಯ ಅಗತ್ಯವಿದೆ ಎಂಬುದು ಕೆಲ ಪರಿಸರ ವಿಜ್ಞಾನಿಗಳ ಅಂಬೋಣ.
ಗಾಮಾ ಎಮಿನೋ ಬ್ಯೂಟ್ರಿಕ್ ಆಸಿಡ್ ಎಂಬುದು ಮಾನವನ ಮಿದುಳಿನಲ್ಲಿರುವ ಆಮ್ಲವಾಗಿದ್ದು ಇದು ರಕ್ತದೊತ್ತಡವನ್ನು ಕುಗ್ಗಿಸುವ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ನೈಸರ್ಗಿಕವಾಗಿ ಟೊಮ್ಯಾಟೋಗಳಲ್ಲಿ ಕಂಡುಬರುತ್ತದೆ. ಇದೀಗ ಜಪಾನ್ ಮೂಲದ ಕಂಪನಿಯೊಂದು ಕ್ರಿಸ್ಪರ್ ತಂತ್ರಜ್ಞಾನವನ್ನು ಬಳಸಿ ಸ್ಥಳೀಯ ಟೊಮ್ಯಾಟೋ ತಳಿಯೊಂದರ ವಂಶವಾಹಿಯನ್ನು ಸಂಪಾದಿಸಿ ನೈಸರ್ಗಿಕ ಟೊಮ್ಯಾಟೋಗಳಲ್ಲಿ ಕಂಡುಬರುವ ಗಾಮಾ ಎಮಿನೋ ಬ್ಯೂಟ್ರಿಕ್ ಆಸಿಡ್ ಪ್ರಮಾಣಕ್ಕಿಂತ ಹಲವು ಪಟ್ಟು ಹೆಚ್ಚು ಪ್ರಮಾಣದಲ್ಲಿ ಆ ಆಮ್ಲವನ್ನು ಹೊಂದಿರುವ ತಳಿಯೊಂದನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ, ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಈ ತಂತ್ರಜ್ಞಾನವನ್ನು ಬಳಸಿ ತಯಾರಾದ ವಿಶ್ವದ ಮೊದಲ ಟೊಮ್ಯಾಟೋ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಇದರ ಹಿಂದೆಯೇ ದಕ್ಷಿಣ ಕೊರಿಯಾದ ವಿಜ್ಞಾನಿಗಳ ತಂಡವೊಂದು ಇದೇ ತಂತ್ರಜ್ಞಾನವನ್ನು ಉಪಯೋಗಿಸಿ ಟೊಮ್ಯಾಟೋಗಳಲ್ಲಿ ಹೆಚ್ಚಿನ ವಿಟಮಿನ್ ಡಿ ಯನ್ನು ಹೊಂದಿರುವ ತಳಿಯೊಂದನ್ನು ತಯಾರಿಸಿದ್ದಾರೆ. ಮತ್ತೊಂದೆಡೆ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯವೊಂದು ಕ್ರಿಸ್ಪರ್ ಕತ್ತರಿ ಹಿಡಿದುಕೊಂಡು ಆಲೂಗಡ್ಡೆಯ ಹಿಂದೆ ಬಿದ್ದಿದೆ.
ಆಲೂಗಡ್ಡೆಯನ್ನು ಶೈತ್ಯಾಗಾರದಲ್ಲಿಟ್ಟು ನಂತರ ಎಣ್ಣೆಯಲ್ಲಿ ಹುರಿದಾಗ ಅದು ಅಕ್ರೖೆಲಮೈಡ್ ಎಂಬ ರಾಸಾಯನಿಕವನ್ನು ಉತ್ಪಾದಿಸುತ್ತದೆ. ಈ ರಾಸಾಯನಿಕವು ಕ್ಯಾನ್ಸರ್ಗೆ ಕಾರಣವಾಗುತ್ತದೆಯೆಂಬ ಆಪಾದನೆ ಮೊದಲಿನಿಂದಲೂ ಇದೆ. ಇದೀಗ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ಕ್ರಿಸ್ಪರ್ ತಂತ್ರಜ್ಞಾನದ ಮೂಲಕ ಆಲೂಗಡ್ಡೆಯ ವಂಶವಾಹಿಯನ್ನು ಸಂಪಾದಿಸುವ ಮೂಲಕ ಅಕ್ರೖೆಲಮೈಡ್ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ ಎಂಬುದು ಇತ್ತೀಚಿನ ಸುದ್ದಿ.
ಬರಗಾಲ ಮತ್ತು ಕ್ಷಾಮದಲ್ಲೂ ಬೆಳೆಯಬಹುದಾದ ಭತ್ತದ ತಳಿಯ ಸಂಶೋಧನೆಯನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಕೈಗೆತ್ತಿಕೊಂಡಿದೆ. ಕ್ರಿಸ್ಪರ್ ತಂತ್ರಜ್ಞಾನದ ಮೂಲಕ ನಡೆಸುತ್ತಿರುವ ಈ ಸಂಶೋಧನೆ ಈಗ ಕೊನೆಯ ಹಂತದಲ್ಲಿದೆ. ರಷ್ಯಾದಲ್ಲಿ ಸ್ಥಳೀಯ ಹಂದಿಗಳು ಶ್ವಾಸಕೋಶ ಸಂಬಂಧಿ ಮಾರಕ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದವು.
ಇದೇ ಕಾರಣಕ್ಕೆ ಅವುಗಳ ವಂಶವಾಹಿಯನ್ನು ಸಂಪಾದಿಸಿ ಆವಿಷ್ಕರಿಸಿದ ನೂತನ ತಳಿಗಳು ಇದೀಗ ಸಂಪೂರ್ಣವಾಗಿ ಆ ಕಾಯಿಲೆಯಿಂದ ಮುಕ್ತವಾಗಿದೆ. ಇದೇ ಸಮಯದಲ್ಲಿ ಬಾಹ್ಯಾಕಾಶಕ್ಕೆ ಪಯಣಿಸುವ ಗಗನಯಾತ್ರಿಗಳ ಮೇಲೆ ಕ್ರಿಸ್ಪರ್ ಬಳಸಿ ವಂಶವಾಹಿಯನ್ನು ಸಂಪಾದಿಸುವ ಮೂಲಕ ಅಲ್ಲಿ ಎದುರಾಗುವ ವಿಕಿರಣ ಮತ್ತು ಆರೋಗ್ಯ ಸಂಬಂಧಿ ತೊಂದರೆಗಳಿಗೆ ಪರಿಹಾರ ರೂಪಿಸಬಹುದೇ ಎಂಬ ನಿಟ್ಟಿನಲ್ಲಿಯೂ ವಿಜ್ಞಾನಿಗಳ ಚಿತ್ತ ನೆಟ್ಟಿದೆ.
ವಂಶವಾಹಿ ಸಂಪಾದಿಸುವ ಹೊಸ ಕತ್ತರಿಯ ಮೂಲಕ ಇದೀಗ ನಾವು ಸೃಷ್ಟಿಕರ್ತನ ಸೃಷ್ಟಿಯ ಸ್ವರೂಪವನ್ನೇ ಬದಲಾಯಿಸಲು ಹೊರಟಿದ್ದೇವೆ. ಕೊನೆಗೆ ಭಸ್ಮಾಸುರನಂತೆ ಇದನ್ನು ನಮ್ಮ ಮೇಲೆಯೇ ಪ್ರಯೋಗಿಸಿ ಉರಿದು ಹೋಗದೆ ಇರಲಿ ಎಂಬ ಆಶಾವಾದದೊಂದಿಗೆ ಈ ನೂತನ ತಂತ್ರಜ್ಞಾನವನ್ನು ಎದುರು ನೋಡೋಣ. ಅಲ್ಲವೇ?
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)