

ಸರಿಯಾಗಿ 626 ವರ್ಷಗಳ ಹಿಂದೆ ಅಂದರೆ ಕ್ರಿ.ಶ. 1399ರಲ್ಲಿ ಯದುರಾಯರು ಈ ಮೈಸೂರು ಒಡೆಯರ್ ಸಂಸ್ಥಾನವನ್ನು ಸ್ಥಾಪಿಸಿದರು. ಈ ಅವಧಿಯಲ್ಲಿ 25 ರಾಜರುಗಳು ಸಾಂಸ್ಕೃತಿಕ ಬುನಾದಿಯಡಿಯಲ್ಲಿ ಸಮೃದ್ಧವಾದ ರಾಜ್ಯಭಾರ ನಡೆಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ 24ನೇ ರಾಜನಾಗಿ ಉನ್ನತ ಮಟ್ಟದ ರಾಜ್ಯಭಾರ ನಡೆಸಿದರು. ಇವರು ಹತ್ತನೇ ಚಾಮರಾಜ ಒಡೆಯರ್ ಮತ್ತು ಕೆಂಪನಂಜಮ್ಮಣ್ಣಿ ವಾಣಿವಿಲಾಸ ಅವರ ಮೂರನೆಯ ಮಗನಾಗಿದ್ದು, ಜಯಲಕ್ಷ್ಮಮ್ಮಣ್ಣಿ, ಕೃಷ್ಣಾಜಮ್ಮಣ್ಣಿ ಎಂಬ ಅಕ್ಕಂದಿರು ಮತ್ತು ಚೆಲುವಾಜಮ್ಮಣ್ಣಿ ಎಂಬ ತಂಗಿ ಹಾಗೂ ಕಂಠೀರವ ನರಸಿಂಹರಾಜ ಒಡೆಯರ್ ಎಂಬ ಕಿರಿಯ ಸಹೋದರ ಇದ್ದರು.ನಾಲ್ವಡಿಯವರು 1884ರ ಜೂನ್ 4ರಂದು ಜನಿಸಿದರು. ಆರನೇ ವಯಸ್ಸಿಗೆ ಶಾಸ್ತ್ರೋಕ್ತವಾಗಿ ಅಕ್ಷರಾಭ್ಯಾಸ ಪ್ರಾರಂಭವಾಗಿ ಕನ್ನಡ, ಇಂಗ್ಲಿಷ್, ಉರ್ದು ಭಾಷೆಗಳು, ವಿಜ್ಞಾನ, ಗಣಿತ, ಇತಿಹಾಸ, ಭೂಗೋಳ, ಸಂಗೀತ ಪಾಠಗಳನ್ನು ಹಾಗೂ ಕುದುರೆ ಸವಾರಿ ಇತ್ಯಾದಿಗಳನ್ನು ಚಿಕ್ಕ ವಯಸ್ಸಿನಲ್ಲೇ ಹೇಳಿಕೊಡಲಾಯಿತು.
1894ರ ಡಿಸೆಂಬರ್ನಲ್ಲಿ ಇವರ ತಂದೆ 10ನೇ ಚಾಮರಾಜ ಒಡೆಯರ್ ಅವರು ಡಿಫ್ತೀರಿಯಾ ಎಂಬ ಗಂಟಲು ಬೇನೆಯಿಂದ 31ನೇ ವಯಸ್ಸಿನಲ್ಲಿ ಕಲ್ಕತ್ತಾದಲ್ಲಿ ನಿಧನ ಹೊಂದಿದರು. ಅವರ ಸಮಾಧಿ ಕಲ್ಕತ್ತಾದ ಕಾಲಿಘಾಟ್ನಲ್ಲಿದ್ದು ಆಗ ನಾಲ್ವಡಿಯವರಿಗೆ ಕೇವಲ 10 ವರ್ಷ ವಯಸ್ಸಾಗಿದ್ದರಿಂದ ತಾಯಿ ರಾಜಮಾತೆ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಅವರನ್ನು ರೀಜೆಂಟ್ ಆಗಿ ನೇಮಿಸಿ ಕೆ. ಶೇಷಾದ್ರಿ ಅಯ್ಯರ್ ಅವರನ್ನು ದಿವಾನರಾಗಿ ಮುಂದುವರೆಸಲಾಯಿತು.
ಪಟ್ಟಾಭಿಷೇಕ ಮತ್ತು ಮದುವೆ: ನಾಲ್ವಡಿಯವರ ಪಟ್ಟಾಭಿಷೇಕ 1895ರ ಫೆ. 1ರಂದು ನಡೆಯಿತು. 1900ರ ಜೂ. 6ರಂದು ಅವರ ವಿವಾಹ ಕಾಥೇವಾಡ ಸಂಸ್ಥಾನದ ರಾಣಾ ವಿನಯಸಿಂಹ ಅವರ ಪುತ್ರಿ ಪ್ರತಾಪಕುಮಾರಿ ದೇವಿ ಅವರೊಡನೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆಯಿತು. ಆಗ ಅವರಿಗೆ 16 ವರ್ಷ ವಯಸ್ಸಾಗಿತ್ತು.
ಬಾಲಕ ಮಹಾರಾಜರಿಗೆ ಬಹಳ ಒಳ್ಳೆಯ ಶಿಕ್ಷಣ ನೀಡಲು ಗುರುಗಳನ್ನು ತಾಯಿ ನೇಮಿಸಿಕೊಟ್ಟರು. ಭಾಷೆಗಳು, ವಿಜ್ಞಾನ ವಿಷಯಗಳನ್ನು ಶ್ರೀಪೂರ್ಣ ರಾಘವೇಂದ್ರರಾಯರು ಕಲಿಸಿದರೆ, ಉತ್ತಮ ಮಾರ್ಗದರ್ಶನ, ಇತರ ತರಬೇತಿಗಳನ್ನು, ಶಿಸ್ತು, ಸಮಯಪಾಲನೆಯ ಹೊಣೆಯನ್ನು ಐಪಿಎಸ್ ಅಧಿಕಾರಿ ಎಸ್.ಎಂ. ಫ್ರೇಸರ್ ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸಿದರು.
ಫ್ರೇಸರ್ ಅವರು ಮೊದಲು ಮಾಡಿದ ಕೆಲಸವೆಂದರೆ ಅರಮನೆಯಲ್ಲಿ ನಡೆಯುತ್ತಿದ್ದ ಶಿಕ್ಷಣ ಮತ್ತು ತರಬೇತುಗಳಲ್ಲಿ ಸಮಯಪಾಲನೆ ಆಗುತ್ತಿರಲಿಲ್ಲ. ಶಿಸ್ತಿನ ಸಿಪಾಯಿ ಆಗಿದ್ದ ಫ್ರೇಸರ್ ಅವರು ತರಬೇತಿ ನೀಡಲು ಅರಮನೆಯಿಂದ ಹೊರಗೆ ಶಾಲೆ ನಡೆಸಲು ನಾಲ್ವಡಿಯವರ ತಾಯಿಗೆ ಬೇಡಿಕೆ ಇಟ್ಟರು. ಕಾರಣ ಬಾಲಕ ನಾಲ್ವಡಿಯವರು ತರಬೇತಿ ಸಮಯದಲ್ಲಿ ತಾಯಿ ಮತ್ತು ಇತರರು ಹೊರಗೆ ಕರೆದು ತರಬೇತಿಗೆ ಅಡ್ಡಿಪಡಿಸುತ್ತಿದ್ದರು. ಮಹಾರಾಣಿಯವರು 1892ರಲ್ಲಿ ನಜರ್ಬಾದ್ನಲ್ಲಿರುವ ವಸಂತಮಹಲ್ಗೆ ಸ್ಥಳಾಂತರಿಸಿ ರಾಯಲ್ ಸ್ಕೂಲ್ನಲ್ಲಿ ತರಬೇತಿಗೆ ಪೂರ್ಣಪ್ರಮಾಣದ ವ್ಯವಸ್ಥೆಗಳನ್ನು ಮಾಡಿಕೊಟ್ಟರು. ಬೆಳಗ್ಗೆ 5 ಗಂಟೆಗೆ ಎದ್ದು ಸಂಧ್ಯಾವಂದನೆ ಮತ್ತು ದೇವರ ಪೂಜೆ ಮುಗಿಸಿ, ಸಂಗೀತ ಅಭ್ಯಾಸ, ಕುದುರೆ ಸವಾರಿ ಮುಗಿಸಿ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶಾಲೆಯಲ್ಲಿ ಸಹಪಾಠಿಗಳ ಜತೆ ಡ್ರಿಲ್, ಟೆನ್ನಿಸ್, ಕ್ರಿಕೆಟ್ (ಇವರ ತಂದೆ ಬಹಳ ಒಳ್ಳೆಯ ಕ್ರಿಕೆಟ್ ಆಟಗಾರರಾಗಿದ್ದರು), ಪೋಲೋ, ಅಂಗ ಸಾಧನೆ, ಸಂಗೀತ, ಚಿತ್ರಕಲೆ, ವೀಣೆ ಇತ್ಯಾದಿಗಳನ್ನು ರಾತ್ರಿ 8 ಗಂಟೆಯವರೆಗೆ ಸಮರ್ಪಕವಾಗಿ ಕಲಿಯುತ್ತಿದ್ದರು.
ಇವರ ತರಬೇತಿಗಳು ಹೇಗಿದ್ದವೆಂದರೆ, 7ನೇ ವಯಸ್ಸಿನಲ್ಲೇ ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ದೇಶ-ವಿದೇಶಗಳಲ್ಲಿ ಪ್ರಯಾಣ ಮಾಡಿ ಹೆಚ್ಚಿನ ಅನುಭವ ಪಡೆದರು. ಫ್ರೇಸರ್ ಅನೇಕ ಕಚೇರಿಗಳಿಗೆ, ಕೋರ್ಟ್ಗಳಿಗೆ ಕರೆದುಕೊಂಡು ಹೋಗಿ ಶ್ರದ್ಧೆ, ಶಿಸ್ತು, ಸಮಯಪಾಲನೆ ಕಲಿಸಿದರು.
(ಲೇಖಕರು ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಮೈಸೂರು ವಿವಿ)