

ಒಂದು ದಿನ ಬಾಲಕೃಷ್ಣ ಬೆಣ್ಣೆ ಕದಿಯುವ ಸಂದರ್ಭದಲ್ಲಿ ತಾಯಿ ಯಶೋದೆ ಅಲ್ಲಿಗೆ ಬರುತ್ತಾಳೆ. ಕೃಷ್ಣನ ಬಾಯಿ, ಮುಖದಲ್ಲಿ ಮೆತ್ತಿರುವ ಬೆಣ್ಣೆಯನ್ನು ಕಂಡು ಗೋಪಾಲನನ್ನು ಗದರುತ್ತಾಳೆ. ‘ಬಾಯಿ ತೆರೆ’ ಎಂದೆನ್ನುತ್ತಾಳೆ. ಆಗ ಪುಟ್ಟ ಕೃಷ್ಣ ತಾನು ಬೆಣ್ಣೆ ಕದ್ದಿಲ್ಲಮ್ಮ ಎಂದು ಹೇಳುತ್ತಾನೆ. ತಾಯಿಗೆ ಆತನ ಮಾತಿನಿಂದ ಸಮಾಧಾನವಾಗದೇ ಇದ್ದಾಗ ಪುಟ್ಟ ಬಾಯಿ ತೆರೆದು ಅದರೊಳಗೆ ಬ್ರಹ್ಮಾಂಡವನ್ನು ಯಶೋದೆಗೆ ತೋರಿಸುತ್ತಾನೆ. ಇದನ್ನು ಕಂಡ ಯಶೋದೆ ತನ್ನ ಮಗ ಬಾಲಗೋಪಾಲ ಅಸಾಮಾನ್ಯನೆಂದು ಅರಿತುಕೊಳ್ಳುತ್ತಾಳೆ. ಆಗ ಆಕೆಗೆ ಶ್ರೀಕೃಷ್ಣನ ನಿಜ ದರ್ಶನವಾಗುತ್ತದೆ.
ಶ್ರೀಕೃಷ್ಣನ ಬಾಲಲೀಲೆಗಳು ವರ್ಣರಂಜಿತ, ವಿನೋದಪೂರ್ಣವಾಗಿವೆ. ಬೆಣ್ಣೆ ಕಳ್ಳತನದ ಪ್ರಸಂಗವಂತೂ ಬಹುಪರಿಚಿತ ಕಥೆಯಾಗಿದೆ. ಕೃಷ್ಣನ ಬಾಲಲೀಲೆಗಳಿಂದ ಗೋಪಿಕೆಯರು ಕೋಪಗೊಂಡರೂ ಮರುಕ್ಷಣ ಅತೀವವಾದ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಕೃಷ್ಣನನ್ನು ಎತ್ತಿ ಮುದ್ದಾಡುತ್ತಿದ್ದರು. ಇದು ಭಗವಂತ ಮತ್ತು ಭಕ್ತರ ನಡುವಿನ ಆಟದಂತೆ. ಒಮ್ಮೆ ತುಂಟಾಟ ಮಾಡುವ ಕೃಷ್ಣನನ್ನು ತಾಯಿಯು ಒರಳುಕಲ್ಲಿಗೆ ಕಟ್ಟಿ ಹೋಗುತ್ತಾಳೆ. ಸಾಕಷ್ಟು ಬಾರಿ ಬಿಚ್ಚಿಕೊಳ್ಳುವ ಕೃಷ್ಣನಿಗೆ ಕೊನೆಯ ಬಾರಿ ಪ್ರೀತಿಯಿಂದ ಗದರಿಸಿ ಇನ್ನು ಮುಂದೆ ಹಗ್ಗ ಬಿಚ್ಚಿಕೊಳ್ಳಬೇಡ ಎಂದು ಬೇಡಿಕೊಳ್ಳುತ್ತಾಳೆ. ಆಕೆಯ ಮುಗ್ಧ ಪ್ರೀತಿಗೆ ಶರಣಾಗಿ, ಅಸಾಮಾನ್ಯ ಶಕ್ತಿಯಿದ್ದರೂ ತಾಯಿ ಕಟ್ಟಿರುವ ಸಣ್ಣ ದಾರದ ಬಂಧನಕ್ಕೊಳಗಾಗುವುದು ವಿಶೇಷವೇ ಆಗಿದೆ. ಪ್ರೀತಿಯಿಂದ ಭಗವಂತನನ್ನು ಬಂಧಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ.
ಕೃಷ್ಣನ ಬಾಲ್ಯವೆಂದರೆ ತುಂಟಾಟ, ಆನಂದ ಹಾಗೂ ಪ್ರೀತಿ. ಜೊತೆಗೆ ಬಾಲಕನಾಗಿದ್ದುಕೊಂಡೇ ಮಾಡಿದ ಅನೇಕ ಕಾರ್ಯಗಳು ಪ್ರಾಮಾಣಿಕತೆ, ಸ್ನೇಹ, ಸತ್ಯ, ಧರ್ಮ ಮೊದಲಾದ ವಿಚಾರಗಳ ಅರಿವು ಮೂಡಿಸುತ್ತವೆ. ಕಾಳಿಂಗ ಮರ್ದನದ ಮೂಲಕ ದುಷ್ಟರ ಮೇಲೆ ಜಯ ಸಾಧಿಸುವ ಜೊತೆಗೆ ಪ್ರಕೃತಿಯನ್ನು ಸಂರಕ್ಷಿಸುವ ಸಂದೇಶವಿದೆ. ಗೋಪಾಲಕನಾಗಿ ಪ್ರಾಣಿ- ಪಕ್ಷಿಗಳ ಮೇಲೆ ಪ್ರೀತಿ ಹಾಗೂ ಪ್ರಕೃತಿಯೊಂದಿಗಿನ ಸಂಬಂಧವನ್ನು ತಿಳಿಸುತ್ತದೆ. ಗೋವರ್ಧನ ಗಿರಿಯನ್ನು ಕಿರು ಬೆರಳಿನಲ್ಲಿ ಮೇಲೆತ್ತಿ ಜನರನ್ನು ರಕ್ಷಿಸಿ ಇಂದ್ರನ ಸೊಕ್ಕಡಗಿಸುವ ಮೂಲಕ ದೇವಾನುದೇವತೆಗಳೂ ತಪ್ಪೆಸಗಿದರೆ ತಕ್ಕ ಪಾಠ ಕಲಿಸಲಾಗುವುದು ಎಂದು ತೋರಿಸಿಕೊಟ್ಟಿದ್ದಾನೆ.
ಭಗವಾನ್ ಶ್ರೀಕೃಷ್ಣನ ಬದುಕೇ ಒಂದು ಸಂದೇಶವಾಗಿದೆ. ಜೊತೆಗೆ ನಮ್ಮ ಬದುಕಿಗೆ ವಿವಿಧ ಸನ್ನಿವೇಶ, ಸಂದರ್ಭಗಳಲ್ಲಿ ಪ್ರಯೋಜನವಾಗುವಂತಹ ಅಂಶಗಳನ್ನು ಶ್ರೀಕೃಷ್ಣನ ಬದುಕಿನಿಂದ ಪಡೆಯಬಹುದಾಗಿದೆ. ಮಹಾಭಾರತದ ಯುದ್ಧದಲ್ಲಿ ಶ್ರೀಕೃಷ್ಣ ಧರ್ಮದ ಪರವಾಗಿ ನಿಂತು ಅಧರ್ಮದ ವಿರುದ್ಧ ಹೋರಾಟ ಮಾಡಿದ. ಕೊನೆಗೆ ಏನೇ ಆದರೂ ಸತ್ಯ, ಧರ್ಮಕ್ಕೇ ಜಯ ಎಂದು ತೋರಿಸಿಕೊಟ್ಟ. ಕುರುಕ್ಷೇತ್ರ ಯುದ್ಧಾರಂಭದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯ ಮೂಲಕ ‘ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ’ ಎನ್ನುತ್ತಾ ಫಲಾಫಲವನ್ನು ಇಚ್ಛಿಸದೆ ಶ್ರದ್ಧೆಯಿಂದ ನಮ್ಮ ಕೆಲಸ, ಕರ್ತವ್ಯವನ್ನು ಮಾಡಬೇಕು ಎಂದು ತಿಳಿಸಿ ಲೋಕಾಭ್ಯುದಯದ ಸಂದೇಶ ಸಾರಿದ್ದಾನೆ. ಚಂಚಲ ಮನಸ್ಸನ್ನು ಸಮತೋಲನಗೊಳಿಸಲು, ಕುಗ್ಗಿದ ಮನಸ್ಸಿಗೆ ಚೈತನ್ಯ ನೀಡಲು ಗೀತೋಪದೇಶಗಳು ನಮ್ಮ ಬಾಳಿಗೆ ದೀವಿಗೆಗಳಾಗಿವೆ.
ಸುಧಾಮನೊಂದಿಗಿನ ಸ್ನೇಹ, ರಾಧೆಯೊಂದಿಗಿನ ಪ್ರೇಮ ಇಂದಿಗೂ ಅಜರಾಮರವಾಗಿವೆ, ಉದಾಹರಣೆಯಾಗಿ ಮೇಲ್ಪಂಕ್ತಿಯಲ್ಲಿವೆ. ಬಡವನಾದರೂ ಸ್ನೇಹ ಕಳೆದುಕೊಳ್ಳದೆ ಗೆಳೆಯ ಕೊಟ್ಟ ಹಿಡಿ ಅವಲಕ್ಕಿ ತಿಂದು ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾನೆ. ತಾನು ರಾಧೆಯನ್ನು ಮದುವೆಯಾಗಲು ಸಾಧ್ಯವಾಗದಿದ್ದರೂ ಪ್ರೇಮದ ಮಹತ್ವವನ್ನು ಜಗತ್ತಿಗೇ ಸಾರಿದ. ಈ ಮೂಲಕ ನಿಃಸ್ವಾರ್ಥ ಸ್ನೇಹ ಹಾಗೂ ಪ್ರೀತಿಯ ಮೌಲ್ಯವನ್ನು ತಿಳಿಸಿಕೊಟ್ಟವನು ಭಗವಾನ್ ಶ್ರೀಕೃಷ್ಣ.
ಜ್ಞಾನ ಮತ್ತು ವಿವೇಕದ ಪ್ರತಿರೂಪವಾಗಿರುವ ಕೃಷ್ಣ ಯಾವುದೇ ಪರಿಸ್ಥಿತಿಯಲ್ಲಿ ತಾಳ್ಮೆ ಮತ್ತು ವಿವೇಕದಿಂದ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾನೆ. ಮಹಾಭಾರತದಲ್ಲಿ ಮುಂದೆ ನಡೆಯಬಹುದಾದ ಘೊರ ಯುದ್ಧವನ್ನು ನಿಲ್ಲಿಸುವ ಯತ್ನವನ್ನು ಶ್ರೀಕೃಷ್ಣ ಮಾಡುತ್ತಾನೆ. ಕೌರವರಿಗೆ ತಿಳಿಹೇಳುತ್ತಾನೆ. ಆದರೆ ಸಂಧಾನಕ್ಕೆ ಒಪ್ಪದ ಕೌರವರಿಗೆ ಇನ್ನು ಎಷ್ಟೇ ಬುದ್ಧಿ ಹೇಳಿದರೂ ಪ್ರಯೋಜನವಾಗದು ಎಂದು ಅರಿತು ಬಳಿಕ ಯುದ್ಧವೇ ಅಂತಿಮ ಆಯ್ಕೆ ಎಂದು ತಿಳಿದು ಯುದ್ಧಕ್ಕೆ ಸನ್ನದ್ಧರಾಗಲು ಪಾಂಡವರಿಗೆ ತಿಳಿಸುತ್ತಾನೆ. ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಪಾಂಡವರ ಪರ ನಿಂತು ನಾಯಕತ್ವ ಮತ್ತು ರಾಜತಂತ್ರ ನಡೆಯ ಮೂಲಕ ಧರ್ಮ ಸಂರಕ್ಷಣೆಗೆ ಮುಂದಾಗುತ್ತಾನೆ. ಹೀಗೆ ಶ್ರೀಕೃಷ್ಣ ಪ್ರತಿ ಹಂತದಲ್ಲೂ ಜಗತ್ತಿಗೆ, ಮನುಕುಲಕ್ಕೆ ಸಂದೇಶಗಳನ್ನು ತನ್ನ ಜೀವನದುದ್ದಕ್ಕೂ ನೀಡುತ್ತ ಬಂದಿದ್ದಾನೆ. ಸಾಮಾಜಿಕ ಮೌಲ್ಯ ಪ್ರತಿಪಾದನೆ ಮತ್ತು ಸುಧಾರಣೆಯಲ್ಲಿ ಶ್ರೀಕೃಷ್ಣನಂತೆಯೇ ಗಣಪತಿಯ ಪಾತ್ರ ಕೂಡ ಮಹತ್ವದ್ದಾಗಿದೆ. ಭಾರತೀಯ ಸಂಸ್ಕೃತಿ- ಸಂಪ್ರದಾಯಗಳಲ್ಲಿ ಶುಭಕಾರ್ಯಗಳನ್ನು ಆರಂಭಿಸುವುದು ವಿಘ್ನ ನಿವಾರಕ ಶ್ರೀ ಗಣಪತಿಯ ಆರಾಧನೆಯಿಂದ. ಹಾಗಾಗಿ ಆತನನ್ನು ಅಗ್ರ ಪೂಜಿತ ಎಂದು ಕರೆಯುತ್ತಾರೆ.
ಗಣೇಶನೂ ವೇಣುಗೋಪಾಲನಂತೆ ತನ್ನ ಜ್ಞಾನ, ಚತುರತೆಗೆ ಹೆಸರುವಾಸಿಯಾಗಿದ್ದಾನೆ. ಆತನ ಪ್ರತಿಯೊಂದು ಕಥೆಯೂ ಜೀವನ ಮೌಲ್ಯವಾಗಿದೆ. ಗಣಪತಿಯ ಜನ್ಮವೃತ್ತಾಂತವೇ ರೋಚಕವಾದುದು. ಆ ಬಳಿಕ ಆನೆಮೊಗವನ್ನು ಪಡೆದದ್ದೂ ಅಷ್ಟೇ ಕುತೂಹಲಕಾರಿ ಸಂಗತಿ. ಮಕ್ಕಳಿಗೆ ಇವೆಲ್ಲ ಖುಷಿ ಕೊಡುವ ಕಥೆಗಳಾಗಿವೆ. ಬರೀ ಕಥೆಗಳಲ್ಲ, ಜೀವನವನ್ನು ಸುಂದರವಾಗಿ ರೂಪಿಸಲು ಅಳವಡಿಸಿಕೊಳ್ಳಬೇಕಾದ ಮೌಲ್ಯಗಳಾಗಿವೆ. ಗಣಪತಿಯ ಜೀವನ ಅನೇಕ ಸಂದೇಶ, ಮಾರ್ಗದರ್ಶನ ಒದಗಿಸುತ್ತದೆ. ತಂದೆ- ತಾಯಿಯ ಮೇಲಿನ ಪ್ರೀತಿ ಹಾಗೂ ಆತನ ಜಾಣ್ಮೆಗೆ ಕೈಗನ್ನಡಿಯಾದ ಒಂದು ಕಥೆ ಇಲ್ಲಿದೆ.
ಒಂದು ಬಾರಿ ಶಿವ, ಪಾರ್ವತಿ ತಮ್ಮ ಮಕ್ಕಳಾದ ಕಾರ್ತಿಕೇಯ ಮತ್ತು ಗಣಪತಿಗೆ ‘ಯಾರು ಮೊದಲಿಗೆ ಭೂಮಂಡಲದ ಸುತ್ತು ಹಾಕುತ್ತಾರೋ ಅವರಿಗೆ ಬಹುಮಾನ’ ಎಂದು ಹೇಳಿದರು. ಕಾರ್ತಿಕೇಯ ತಕ್ಷಣ ನವಿಲಿನ ಮೇಲೇರಿ ಭೂಮಂಡಲ ಪ್ರದಕ್ಷಿಣೆ ಮಾಡಲು ಹೊರಟ. ಗಣಪತಿ ಅಲ್ಲೇ ಕುಳಿತಿದ್ದು ತುಸು ಹೊತ್ತಿನ ಬಳಿಕ ತನ್ನ ತಂದೆತಾಯಿಗೆ ಪ್ರದಕ್ಷಿಣೆ ಮಾಡಿ, ‘ಮಾತಾಪಿತೃಗಳೇ ನನ್ನ ಪ್ರಪಂಚ’ ಎಂದು ಹೇಳಿದ. ಈ ಕಥೆಯ ಮೂಲಕ ಗಣಪತಿಯ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಅವಲೋಕಿಸಬಹುದು.
ಬುದ್ಧಿಮತ್ತೆ ಮತ್ತು ವಿವೇಕವನ್ನು ಜಾಗೃತಗೊಳಿಸುವುದರಿಂದ ಗಣಪತಿಯನ್ನು ಬುದ್ಧಿಸಿದ್ಧಿದಾತ ಎನ್ನುತ್ತಾರೆ. ಸಮಾಜದಲ್ಲಿ ಜವಾಬ್ದಾರಿ, ತರ್ಕ ಮತ್ತು ವಿವೇಕದ ತಳಹದಿ ಮುಖ್ಯ. ಯಾವ ಸಂದರ್ಭದಲ್ಲಿ ಹೇಗೆ ಬುದ್ಧಿ ಉಪಯೋಗಿಸಬೇಕು ಎಂಬುದನ್ನು ಗಣಪತಿಯ ಕಥೆಗಳ ಮೂಲಕ ಕಲಿಯಬಹುದು. ಸಾಮಾಜಿಕ ನೈತಿಕತೆ, ಸನ್ಮಾರ್ಗ ಮತ್ತು ಸೌಹಾರ್ದಕ್ಕೆ ಗಣಪತಿಯ ಗುಣಗಳು ಪೂರಕವಾಗಿದೆ. ಗಣಪತಿ ಎಲ್ಲರಿಗೂ ಪ್ರಿಯ. ಆತನ ಪೂಜೆಯನ್ನು ಎಲ್ಲರೂ ಮಾಡುತ್ತಾರೆ. ಇದು ಸಮಾನತೆ, ಸಹೋದರತೆಯ ಸಂಕೇತ.
ಇನ್ನು ಗಣಪತಿಯ ಶ್ರದ್ಧೆ, ನಿಷ್ಠೆ ಮತ್ತು ಕಾರ್ಯ ಸಿದ್ಧಿಗಾಗಿ ಪರಿಶ್ರಮ ಎಷ್ಟಿತ್ತೆಂಬುದು ಮಹಾಭಾರತದ ರಚನೆಯ ಸಂದರ್ಭವನ್ನು ಗಮನಿಸಿದಾಗ ಅರಿವಿಗೆ ಬರುತ್ತದೆ. ವ್ಯಾಸರು ಹೇಳಿದ ಮಹಾಭಾರತದ ಕಥೆಯನ್ನು ಗಣಪತಿ ಬರೆಯುತ್ತಾ ಹೋಗುತ್ತಾನೆ. ಆದರೆ, ಗಣಪತಿ ಬರೆಯಲು ಪ್ರಾರಂಭಿಸುವ ಮೊದಲು, ಪ್ರತಿ ಪದವನ್ನೂ ಅರ್ಥ ಮಾಡಿಕೊಂಡು ಬರೆಯಬೇಕೆಂಬ ಷರತ್ತನ್ನು ವ್ಯಾಸರು ವಿಧಿಸಿದ್ದರು. ಆಗ ಗಣೇಶ ಯಾವುದೇ ಅಡೆತಡೆ ಇಲ್ಲದೆ ಬರೆಯಲು ಒಪ್ಪಿದ. ಆದರೆ ‘ವ್ಯಾಸರು ನಿರಂತರ ಕಥೆ ಹೇಳಬೇಕು, ಎಲ್ಲಿಯೂ ನಿಲ್ಲಿಸಬಾರದು’ ಎಂದು ಶರತ್ತು ಹಾಕಿದ. ಕಥೆ ಹೇಳುವಾಗ ವ್ಯಾಸರು ಮಧ್ಯೆ ಮಧ್ಯೆ ಕಠಿಣ ಪದಗಳನ್ನು ಬಳಸುತ್ತಿದ್ದರು, ಇದರಿಂದ ಗಣಪತಿಗೆ ಅರ್ಥ ಮಾಡಿಕೊಳ್ಳಲು ಸಮಯ ಹಿಡಿಯುತ್ತಿತ್ತು ಮತ್ತು ವ್ಯಾಸರಿಗೆ ಮುಂದಿನ ಕಥೆಯನ್ನು ಹೇಳಲು ಸಮಯ ಸಿಗುತ್ತಿತ್ತು. ಈ ಮಧ್ಯೆ ಗಣಪತಿಯ ಲೇಖನಿ ಮುರಿಯುತ್ತದೆ. ಆಗ ಬರವಣಿಗೆ ನಿಲ್ಲಬಾರದೆಂದು ತನ್ನ ದಂತವನ್ನೇ ಮುರಿದು ಬರೆಯಲು ಉಪಯೋಗಿಸಿದ. ಹೀಗಾಗಿ, ಗಣೇಶನಿಗೆ ‘ಏಕದಂತ’ ಎಂಬ ಹೆಸರು ಬಂತು. ಆರಂಭಿಸಿದ ಕೆಲಸವನ್ನು ಗುರಿ ಮುಟ್ಟಿಸುವತನಕ ನಿಲ್ಲಿಸಬಾರದು, ಎಷ್ಟೇ ಅಡೆತಡೆಗಳು ಎದುರಾದರೂ ಎದೆಗುಂದದೆ ಕಾರ್ಯ ಪ್ರವೃತ್ತರಾಗಬೇಕು ಎನ್ನುವುದೇ ಇದರ ತಾತ್ಪರ್ಯ. ಹೀಗೆ ಗಣಪತಿಯ ಅನೇಕ ಪುರಾಣ ಕಥೆಗಳು ಸಮಾಜಕ್ಕೆ ಮಾರ್ಗದರ್ಶಕವಾಗಿವೆ.
ಇನ್ನು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಗಣಪತಿಯ ಪಾತ್ರವಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಬಾಲಗಂಗಾಧರ ತಿಲಕರು 1893ರಲ್ಲಿ ಗಣೇಶ ಚತುರ್ಥಿಯನ್ನು ಸಾರ್ವಜನಿಕ ಉತ್ಸವವಾಗಿ ಆಚರಿಸಲು ಪ್ರಾರಂಭಿಸಿದರು. ಈ ಉತ್ಸವದ ಮೂಲಕ ಜನಜಾಗೃತಿ, ಸಂಸ್ಕೃತಿಯ ಉತ್ಥಾನ ಮತ್ತು ಜನರ ಆತ್ಮಬಲ ವೃದ್ಧಿಸಿ ಸ್ವಾತಂತ್ರ್ಯ ಹೋರಾಟದ ಒಬ್ಬ ಶಕ್ತಿ-ಪ್ರೇರಕನಾಗಿ ಕೆಲಸ ಮಾಡಿದ್ದು ಗಣಪತಿ. ವಿಭಿನ್ನ ಜಾತಿ, ಸಮುದಾಯದ ನಡುವಿನ ಜನರನ್ನು ಒಗ್ಗೂಡಿಸುವಲ್ಲಿ ಇದು ಸಹಾಯ ಮಾಡಿತು. ಸಾಮಾಜಿಕ ಏಕತೆ, ಸಾಮೂಹಿಕ ಚಿಂತನೆಗೆ ಎಡೆ ಮಾಡಿಕೊಟ್ಟಿತು. ಹೀಗೆ ಗಣಪತಿಯ ಆರಾಧನೆಯ ರೂಪದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ವಿಶೇಷ ಬಲ, ಉತ್ಸಾಹ ನೀಡಿತು. ಈ ಮೂಲಕ ಗಣಪತಿಯು ಸ್ವಾತಂತ್ರ್ಯ ಹೋರಾಟದಲ್ಲಿ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಬಲದ ಸಂಕೇತವಾಗಿ ದೇಶಭಕ್ತಿಯನ್ನು ಪ್ರತಿಯೊಬ್ಬರಲ್ಲೂ ಪ್ರೇರೇಪಿಸಿದ್ದ.
ಶ್ರೀಕೃಷ್ಣ ಮತ್ತು ಗಣಪತಿ ಇಬ್ಬರೂ ಭಾರತೀಯ ಸಂಸ್ಕೃತಿಯಲ್ಲಿ ಅಪಾರ ಪ್ರಭಾವ ಬೀರಿದ್ದಾರೆ. ಅವರು ಭಿನ್ನ ರೂಪ, ಭಿನ್ನ ತತ್ತ್ವಗಳ ಅವತಾರವಾಗಿದ್ದರೂ, ಅವರ ಮಧ್ಯೆ ಹಲವಾರು ಸಾಮ್ಯಗಳಿವೆ. ಇವು ನೈಸರ್ಗಿಕ, ಧಾರ್ವಿುಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ನೈತಿಕ ಮಟ್ಟದಲ್ಲಿ ಕೂಡ ಬಿಂಬಿತವಾಗಿವೆ. ಪ್ರಕೃತಿಯಿಂದಲೇ ಹುಟ್ಟಿದ ಗಣಪತಿ, ಗೋವುಗಳೊಂದಿಗೆ ಆಡುತ್ತಾ ಪರಿಸರದೊಂದಿಗೇ ಬೆಳೆದ ಬಾಲಗೋಪಾಲ ಪರಿಸರ ಸಂರಕ್ಷಣೆಯ ಹರಿಕಾರರು. ಇಬ್ಬರೂ ಕಲಾ ಪ್ರೀತಿ ಉಳ್ಳವರು. ಸಂಸ್ಕೃತಿ, ಪರಂಪರೆ ಉಳಿಸಿ ಧರ್ಮ ಸಂರಕ್ಷಿಸುವಲ್ಲಿ ಸದಾ ನಿರತರು. ಇಂತಹ ಮಹಾನ್ ದೈವೀ ಶಕ್ತಿಯನ್ನು ಆರಾಧಿಸುವ ಶ್ರೀಕೃಷ್ಣಾಷ್ಟಮಿ ಹಾಗೂ ಗಣೇಶೋತ್ಸವಗಳು ಸಮಾಜದಲ್ಲಿ ಕೇವಲ ಮನೋರಂಜನೆ, ಅಬ್ಬರದ ಆಚರಣೆಗೆ ಸೀಮಿತವಾಗದೆ ಸಂಸ್ಕೃತಿ ಉತ್ಥಾನದ ನೆಲೆಗಟ್ಟಿನಲ್ಲಿ ಆಚರಣೆಗೊಳ್ಳಲಿ. ಈ ಮೂಲಕ ಸಮಾಜದಲ್ಲಿ ಭಾರತೀಯ ಪರಂಪರೆ ಚಿರಸ್ಥಾಯಿಯಾಗಲಿ. ಹಬ್ಬಗಳ ಮಹತ್ವ ಅರಿತು ಆಚರಿಸಿದಾಗ ಸಂಸ್ಕೃತಿಯೂ ಉಳಿಯುವುದು, ಸಮಾಜವೂ ಸಮೃದ್ಧವಾಗುವುದು.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)