

ಭಾರತ 1983ರ ಏಕದಿನ ವಿಶ್ವಕಪ್ ಗೆಲ್ಲುವುದಕ್ಕೆ ಟರ್ನಿಂಗ್ ಪಾಯಿಂಟ್ ಎನಿಸಿದ್ದು ಫೈನಲ್ನಲ್ಲಿ ದಿಗ್ಗಜ ಕಪಿಲ್ದೇವ್ ಹಿಡಿದ ವಿವಿಯನ್ ರಿಚರ್ಡ್ಸ್ ಅವರ ಪ್ರಸಿದ್ಧ ಕ್ಯಾಚ್. 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಮಿಸ್ಬಾ ಉಲ್ ಹಕ್ ಇನ್ನೇನು ಪಾಕಿಸ್ತಾನವನ್ನು ಗೆಲ್ಲಿಸಿಯೇ ಬಿಡುತ್ತಾರೆ ಎಂಬ ವಾತಾವರಣ ಇದ್ದಾಗ ಭಾರತವನ್ನು ಗೆಲ್ಲಿಸಿದ್ದು ಜೋಗಿಂದರ್ ಶರ್ಮ ಬೌಲಿಂಗ್ನಲ್ಲಿ ಶ್ರೀಶಾಂತ್ ಹಿಡಿದ ಅದ್ಭುತ ಕ್ಯಾಚ್. ಕಳೆದ ವರ್ಷ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟಿ20 ವಿಶ್ವಕಪ್ ಗೆದ್ದಿದ್ದು ಸೂರ್ಯಕುಮಾರ್ ಯಾದವ್ ಬೌಂಡರಿ ಗೆರೆಯ ಬಳಿ ಹಿಡಿದ ಅದ್ಭುತ ಕ್ಯಾಚ್ನಿಂದ. ಮೊನ್ನೆ ಭಾರತದ ಮಹಿಳೆಯರು ದಕ್ಷಿಣ ಆಫ್ರಿಕಾ ಸವಾಲು ಹತ್ತಿಕ್ಕಿ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರುವ ಹಾದಿಯಲ್ಲಿ ಮಹತ್ವದ ಟರ್ನಿಂಗ್ ಪಾಯಿಂಟ್ ಆಗಿದ್ದು ಕೂಡ ಪಂಜಾಬ್ನ ಕಾರ್ಪೆಂಟರ್ ಮಗಳು ಅಮನ್ಜೋತ್ ಕೌರ್ ಹಿಡಿದ ಅದ್ಭುತವಾದ ಕ್ಯಾಚ್!
ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಹಾಗೂ ನಾಯಕಿ ಲಾರಾ ವೊಲ್ವಾರ್ಟ್ ಇಡೀ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಗಳಿಸಿ ಮುಂಚೂಣಿಯಲ್ಲಿದ್ದವರು. ಸೆಮಿಫೈನಲ್ನಲ್ಲಿ ಭರ್ಜರಿ ಶತಕ ಸಿಡಿಸಿ ಇಂಗ್ಲೆಂಡ್ ತಂಡವನ್ನು ರೇಸ್ನಿಂದ ಹೊರದಬ್ಬಿದ್ದರು. ಫೈನಲ್ನಲ್ಲೂ ಛಲದಾಟವಾಡಿ ಶತಕ ಸಿಡಿಸಿದ ಲಾರಾ, ಭಾರತದ 299 ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಬೆದರಿಕೆ ಒಡ್ಡಿದ್ದರು. ಒಂದು ಬದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ, ಲಾರಾ ಗಟ್ಟಿಯಾಗಿ ನಿಲ್ಲುವುದರೊಂದಿಗೆ ಆಫ್ರಿಕಾ 6 ವಿಕೆಟ್ಗೆ 220 ರನ್ ಗಳಿಸಿ, ಟ್ರೋಫಿಗೆ 79 ರನ್ಗಳಷ್ಟು ಸನಿಹದಲ್ಲಿತ್ತು. ಆದರೆ, ಆ ಹಂತದಲ್ಲಿ ದೀರ್ಪಿ ಶರ್ಮ ಬೌಲಿಂಗ್ನಲ್ಲಿ ಸಿಕ್ಸರ್ಗೆಂದು ಲಾರಾ ಚಚ್ಚಿದ ಚೆಂಡು ಗಗನಕ್ಕೆ ಚಿಮ್ಮಿತ್ತು. ದೂರದಿಂದ ಲಾಂಗ್ಆನ್ ಕಡೆ ಓಡಿ ಬಂದ ಅಮನ್ಜೋತ್ ಕೈಗೆ ಬಂದ ಚೆಂಡು ಬೆಣ್ಣೆಉಂಡೆಯಂತೆ ಜಾರಿ ನೆಲಕ್ಕೆ ಸೇರುವ ಧಾವಂತದಲ್ಲಿತ್ತು. ಆದರೆ, ಅಮನ್ಜೋತ್ ಆ ಕೈಯಿಂದ ಈ ಕೈಗೆ, ಈ ಕೈಯಿಂದ ಆ ಕೈಗೆ ಬ್ಯಾಲೆನ್ಸ್ ಮಾಡುತ್ತ ಕೊನೆಗೂ 4ನೇ ಯತ್ನದಲ್ಲಿ ಅದ್ಭುತವಾಗಿ ಚೆಂಡನ್ನು ಮುಷ್ಠಿಯಲ್ಲಿ ಗಟ್ಟಿಯಾಗಿ ಬಚ್ಚಿಟ್ಟುಕೊಳ್ಳುವ ಮೂಲಕ ಭಾರತದ ಗೆಲುವನ್ನು ನಿಶ್ಚಿತ ಪಡಿಸಿದರು. ಆನಂತರ ಉಳಿದಿದ್ದು ಔಪಚಾರಿಕತೆ ಮಾತ್ರ.
ಅಮನ್ಜೋತ್ರ ಈ ಕ್ಯಾಚ್ ಒಂದು ಟರ್ನಿಂಗ್ ಪಾಯಿಂಟ್ ಮಾತ್ರ. ಟೂರ್ನಿಯುದ್ದಕ್ಕೂ ಇಂಥ ಅನೇಕ ಸಾಹಸಿಕ ಪ್ರದರ್ಶನಗಳು ಈ ಏಕದಿನ ವಿಶ್ವಕಪ್ನಲ್ಲಿ ಭಾರತದ ಮಹಿಳೆಯರ ಟ್ರೋಫಿ ವಿಜಯಕ್ಕೆ ಕಾರಣವಾದವು. 5ನೇ ವಿಶ್ವಕಪ್ನಲ್ಲಿ ಆಡುತ್ತಿದ್ದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ’ಧೋನಿ’ಯಂಥ ಸಂಯಮದ ನಾಯಕತ್ವ, ಫೈನಲ್ನಲ್ಲಿ ಅವರು ಶೆಫಾಲಿ ವರ್ಮಗೆ ಬೌಲಿಂಗ್ ಕೊಟ್ಟು ಚಮತ್ಕಾರ ಮೆರೆದಿದ್ದು, ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಸತತ 3 ಸೋಲಿನಿಂದ ಕಂಗೆಟ್ಟು ನಿರ್ಗಮನದ ಆತಂಕದಲ್ಲಿದ್ದಾಗ ಭರ್ಜರಿ ಶತಕ ಸಿಡಿಸಿ ನ್ಯೂಜಿಲೆಂಡ್ ವಿರುದ್ಧ ದೊಡ್ಡ ಗೆಲುವು ಕೊಡಿಸಿದ ಸ್ಮೃತಿ ಮಂದಾನ ಮತ್ತು ಪ್ರತೀಕಾ ರಾವಲ್ರ ಪ್ರಚಂಡ ಬ್ಯಾಟಿಂಗ್, ದೀಪ್ತಿ ಶರ್ಮ ಆಲ್ರೌಂಡ್ ಆಟ, ಸೆಮಿಫೈನಲ್ನಲ್ಲಿ ಜೆಮಿಮಾ ರೋಡ್ರಿಗಸ್ರ ಮಾಂತ್ರಿಕ ಶತಕ, ಬದಲಿ ಆಟಗಾರ್ತಿಯಾಗಿ ಸೆಮಿಫೈನಲ್ಗೆ ಮುನ್ನ ತಂಡ ಸೇರಿಕೊಂಡು, ಫೈನಲ್ನಲ್ಲಿ ಪಂದ್ಯಶ್ರೇಷ್ಠರಾದ ಶೆಫಾಲಿ ವರ್ಮರ ‘ಅಭಿಷೇಕ್ ಶರ್ಮ ರೀತಿಯ’ ಆಟ, ಅಮೋಲ್ ಮುಜುಂದಾರ್ ಅವರ ‘ಕೂಲ್’ ಕೋಚಿಂಗ್.. ಇಂಥ ಹತ್ತು ಹಲವು ಅಂಶಗಳು ಭಾರತವನ್ನು ಗೆಲ್ಲಿಸಿದವು.
ಪುರುಷರ ಏಕದಿನ ವಿಶ್ವಕಪ್ ಆರಂಭವಾಗಿದ್ದು 1975ರಲ್ಲಿ. ಅದಕ್ಕೂ 2 ವರ್ಷ ಮೊದಲೇ ಮಹಿಳಾ ವಿಶ್ವಕಪ್ ನಡೆದಿತ್ತು. ಭಾರತ 1978ರ ವಿಶ್ವಕಪ್ಗೆ ಆತಿಥ್ಯ ವಹಿಸಿ ಮೊದಲ ಬಾರಿ ಸ್ಪರ್ಧಿಸಿತ್ತು. 1978, 1997, 2013ರಲ್ಲಿ ಮೂರು ಬಾರಿ ಟೂರ್ನಿಗೆ ಆತಿಥ್ಯ ವಹಿಸಿದ್ದ ಭಾರತ ಕೊನೆಗೂ 4ನೇ ಆತಿಥ್ಯದಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಇದಕ್ಕೆ ಮುನ್ನ 12 ವಿಶ್ವಕಪ್ಗಳಲ್ಲಿ ಆಸ್ಟ್ರೇಲಿಯಾ 7 ಬಾರಿ, ಇಂಗ್ಲೆಂಡ್ 4 ಬಾರಿ, ನ್ಯೂಜಿಲೆಂಡ್ (2000) ಒಮ್ಮೆ ಪ್ರಶಸ್ತಿ ಗೆದ್ದಿದ್ದು ಬಿಟ್ಟರೆ, ಬೇರಾರೂ ಗೆದ್ದಿರಲಿಲ್ಲ. ಆ ಲೆಕ್ಕದಲ್ಲಿ ಭಾರತ ಹೊಸ ಚಾಂಪಿಯನ್ ಪಟ್ಟಕ್ಕೇರಿರುವುದು ಮಹಿಳಾ ಕ್ರಿಕೆಟ್ನ ಶಕ್ತಿಕೇಂದ್ರ ಬದಲಾವಣೆಯ ಮುನ್ಸೂಚನೆಯಾಗಿದೆ. ಹೊಳೆ ದಾಟಿದ ಮೇಲೆ ದೋಣಿಯನ್ನು ಮರೆಯುವುದು, ಐಶ್ವರ್ಯ ಬಂದ ಮೇಲೆ ಕಷ್ಟದ ದಿನ ಮರೆಯುವುದು ಮನುಷ್ಯನ ಜಾಯಮಾನ. ಆದರೂ, ವಿಶ್ವ ವಿಜಯ ಸಂಭ್ರಮದ ಈ ಹೊತ್ತಿನಲ್ಲಿ ಮಹಿಳಾ ಕ್ರಿಕೆಟ್ನ ‘ಅಂದೊಂದಿತ್ತು ಕಾಲ’ದ ನೆನಪುಗಳನ್ನು ಮೆಲುಕು ಹಾಕುವುದು ಇಂದಿನ ಸುವರ್ಣಫಲದ ಬೀಜ ಬಿತ್ತಿ, ನೀರೆರೆದು ಪೋಷಿಸಿದ ಪೂರ್ವಸೂರಿಗಳಿಗೆ ಸಲ್ಲಿಸಬಹುದಾದ ಗೌರವ.
ಯಶಸ್ಸು ರಾತ್ರೋರಾತ್ರಿ ಸೃಷ್ಟಿಯಾಗುವ ಸರಕಲ್ಲ. ಅದರ ಹಿಂದೆ ವರ್ಷಗಳ ಪರಿಶ್ರಮವಿರುತ್ತದೆ. ಅನೇಕರ ನಿಸ್ವಾರ್ಥ ಸೇವೆ, ತ್ಯಾಗವಿರುತ್ತದೆ. ಭಾರತೀಯ ಮಹಿಳಾ ಕ್ರಿಕೆಟ್ ಕೂಡ 50 ವರ್ಷಗಳ ಕಠಿಣ ತಪಸ್ಸು, ಪ್ರಯತ್ನಗಳ ಸಿಹಿಫಲವನ್ನು ಉಣ್ಣುತ್ತಿದೆ. ಮನ್ಸೂರ್ ಅಲಿ ಖಾನ್ ಪಟೌಡಿ, ಜಿಆರ್ ವಿಶ್ವನಾಥ್, ದಿಲೀಪ್ ಸರ್ದೇಸಾಯಿ, ವಿನು ಮಂಕಡ್, ವಿಜಯ್ ಮಂಜ್ರೆಕರ್, ಸುನೀಲ್ ಗಾವಸ್ಕರ್, ಕಪಿಲ್ ದೇವ್ ಮೊದಲಾದ ದಿಗ್ಗಜರು ಭಾರತೀಯ ಕ್ರಿಕೆಟ್ನ ಸುವರ್ಣಯುಗಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟಂತೆ ಮಹಿಳಾ ಕ್ರಿಕೆಟ್ನಲ್ಲೂ ಅಪ್ರತಿಮ ಪ್ರತಿಭೆ, ನಿಸ್ವಾರ್ಥ ಸೇವೆ ಮೂಲಕ ಕೊಡುಗೆ ನೀಡಿದ ಶಾಂತಾ ರಂಗಸ್ವಾಮಿ, ಡಯಾನಾ ಎಡುಲ್ಜಿ, ಸುಧಾ ಶಾ, ಸಂಧ್ಯಾ ಅಗರ್ವಾಲ್, ಶುಭಾಂಗಿ ಕುಲಕರ್ಣಿ, ಮಮತಾ ರಾವ್, ಅಂಜು ಜೈನ್, ಮಮತಾ ಮಾಬೆನ್, ಹೇಮಲತಾ ಕಾಳ, ಜಯಾ ಶರ್ಮ, ನೂಶಿನ್ ಅಲ್ ಖದೀರ್, ಶಿಖಾ ಪಾಂಡೆ, ವೇದಾ ಕೃಷ್ಣಮೂರ್ತಿ.. ಹೀಗೆ ವಿವಿಧ ಕಾಲಘಟ್ಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಕೀರ್ತಿ ತಂದವರ ಸುದೀರ್ಘ ಯಾದಿ ಬೆಳೆಯುತ್ತದೆ.
ಭಾರತದಲ್ಲಿ ಪುರುಷರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳೆಯರಿಗೆ ಭಾರತೀಯ ಮಹಿಳಾ ಕ್ರಿಕೆಟ್ ಸಂಸ್ಥೆ (ಡಬ್ಲ್ಯುಸಿಎಐ) ರೂಪದಲ್ಲಿ ಕ್ರಿಕೆಟ್ ಎರಡು ದೋಣಿಯ ಪಯಣವಾಗಿತ್ತು. ಪುರುಷರ ಕ್ರಿಕೆಟ್ 1983ರಲ್ಲೇ ವಿಶ್ವಕಪ್ ಗೆದ್ದು, 1990ರ ದಶಕದಲ್ಲಿ ಜಾಗತೀಕರಣಕ್ಕೆ ತೆರೆದುಕೊಂಡ ಬಳಿಕ ವಿಶ್ವದ ಶ್ರೀಮಂತ ಸಂಸ್ಥೆಯಾಗಿ ಬಿಸಿಸಿಐ ಬೆಳೆಯಿತು. ಕ್ರಿಕೆಟ್ ಆಟಗಾರರು ಕುಬೇರರಾದರು. ಆದರೆ, ಮಹಿಳಾ ಕ್ರಿಕೆಟ್ ಪಾಲಿಗೆ ದೀಪದ ಬುಡದ ಕತ್ತಲು ಹಾಗೆಯೇ ಮುಂದುವರಿದಿತ್ತು. ಯಾವುದೇ ಪ್ರಾಯೋಜಕರಿಲ್ಲದೆ, ಆರ್ಥಿಕ ಸಂಪನ್ಮೂಲವಿಲ್ಲದೆ ಡಬ್ಲ್ಯುಸಿಎಐ ಟೂರ್ನಿಗಳ ಸಂಘಟನೆಗೆ, ಆಟಗಾರ್ತಿಯರಿಗೆ ಸೌಕರ್ಯ ಕಲ್ಪಿಸುವುದಕ್ಕೆ ಪರದಾಡುತ್ತಿತ್ತು.
ಪುರುಷ ಕ್ರಿಕೆಟಿಗರು ವಿಮಾನದಲ್ಲಿ, ಫಸ್ಟ್ ಕ್ಲಾಸ್, ಬಿಸಿನೆಸ್ ಕ್ಲಾಸ್ನಲ್ಲಿ ಪ್ರಯಾಣಿಸುತ್ತಿದ್ದರೆ, ಮಹಿಳಾ ಕ್ರಿಕೆಟಿಗರು ಟೂರ್ನಿಗಳಿಗಾಗಿ ರೈಲುಗಳಲ್ಲಿ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದರು. ಪಂಚತಾರಾ ಹೋಟೆಲ್ಗಳ ಬದಲು ಅಗ್ಗದ ಹೋಟೆಲ್ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಪಂದ್ಯ ಸಂಭಾವನೆಗಿಂತ, ಆಡುವುದೇ ಬಹುಮಾನ ಎಂಬ ಪರಿಸ್ಥಿತಿ ಇತ್ತು. ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೂಚನೆ ಮೇರೆಗೆ ಬಿಸಿಸಿಐನಲ್ಲಿ ಡಬ್ಲ್ಯುಸಿಎಐ ವಿಲೀನಗೊಂಡ ಬಳಿಕ ಪರಿಸ್ಥಿತಿ ಸುಧಾರಿಸಿತು. ಆದರೂ, ಪುರುಷರ ಕ್ರಿಕೆಟ್ಗೆ ಹೋಲಿಸಿದರೆ, ಶ್ರೀಕೃಷ್ಣನ ಕುಚೇಲ ಸ್ನೇಹಿತನಂತೆ ಮಹಿಳೆಯರ ಪರಿಸ್ಥಿತಿ ಮುಂದುವರಿದಿತ್ತು. ಕೊನೆಗೂ ಅಮಿತ್ ಷಾ ಪುತ್ರ ಜಯ್ ಷಾ ಬಿಸಿಸಿಐ ಅಧ್ಯಕ್ಷರಾದ ಬಳಿಕ ಮಹಿಳಾ ಕ್ರಿಕೆಟ್ ಆರ್ಥಿಕವಾಗಿ ಭಾಗ್ಯೋದಯ ಕಂಡಿತು. ಪುರುಷರಷ್ಟೇ ಸಂಭಾವನೆ ಜತೆಗೆ, ಐಪಿಎಲ್ ಮಾದರಿಯಲ್ಲಿ ಡಬ್ಲ್ಯುಪಿಎಲ್ ಆರಂಭದಿಂದಾಗಿ ಹೆಚ್ಚಿನ ಪ್ರತಿಭೆಗಳಿಗೆ ಅವಕಾಶದ ಬಾಗಿಲು ತೆರೆಯಿತು. ಇದರ ಪರಿಣಾಮ ಪಾರಂಪರಿಕ ಶಕ್ತಿಕೇಂದ್ರಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್ಗೆ ಸೆಡ್ಡು ಹೊಡೆಯುವುದು ಸಾಧ್ಯವಾಯಿತು. ಭಾರತ ವಿಶ್ವ ಚಾಂಪಿಯನ್ ಆಗುವುದೂ ಸಾಧ್ಯವಾಯಿತು.
ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೀಜಾಂಕುರವಾಗಿದ್ದು 1973ರಲ್ಲಿ. ಲಖನೌದಲ್ಲಿ ಸ್ಥಳೀಯ ಮಹಿಳಾ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದ ಮಹೇಂದ್ರ ಕುಮಾರ್ ಶರ್ಮ ಎನ್ನುವವರು, ಟೂರ್ನಿಗೆ ದೊರೆತ ಜನಬೆಂಬಲದಿಂದ ಉತ್ತೇಜಿತರಾಗಿ ಭಾರತೀಯ ಮಹಿಳಾ ಕ್ರಿಕೆಟ್ ಸಂಸ್ಥೆ (ಡಬ್ಲ್ಯುಸಿಎಐ) ಹುಟ್ಟಿಗೆ ಕಾರಣರಾದರು. ಈ ಸಂಸ್ಥೆಗೆ ಅದೇ ವರ್ಷ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಸಂಸ್ಥೆ ಮಾನ್ಯತೆಯೂ ದೊರಕಿತು. 1976ರಲ್ಲಿ ಶಾಂತಾ ರಂಗಸ್ವಾಮಿ ನಾಯಕತ್ವದ ಭಾರತ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆಡಿತು. ಮೊದಲ ಟೆಸ್ಟ್ ನಡೆದಿದ್ದು ಬೆಂಗಳೂರಿನಲ್ಲಿ ಎನ್ನುವುದು ವಿಶೇಷ. ಈ ಪಂದ್ಯ ಡ್ರಾ ಆಗಿತ್ತು. ಅಲ್ಲಿಂದೀಚೆಗೆ ಭಾರತ ಮಹಿಳಾ ತಂಡ 41 ಟೆಸ್ಟ್ (8 ಜಯ, 6 ಸೋಲು, 27 ಡ್ರಾ), 342 ಏಕದಿನ (188 ಜಯ, 147 ಸೋಲು, 2 ಟೈ, 5 ರದ್ದು), 204 ಟಿ20 (111 ಜಯ, 86 ಸೋಲು, 1 ಟೈ, 6 ರದ್ದು) ಪಂದ್ಯಗಳನ್ನಾಡಿದೆ. 2025ರ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರುವ ಮುನ್ನ 2005, 2017ರಲ್ಲಿ ಫೈನಲ್ಗೇರಿದ್ದ ಭಾರತ, 3 ಬಾರಿ ಟಿ20 ಏಷ್ಯಾ ಕಪ್ (2012, 2016, 2022) ಗೆದ್ದಿದ್ದರೆ, 2022ರಲ್ಲಿ ಏಷ್ಯನ್ ಗೇಮ್್ಸ ಚಿನ್ನ, ಕಾಮನ್ವೆಲ್ತ್ ಗೇಮ್್ಸ ಬೆಳ್ಳಿ ಜಯಿಸಿದೆ.
2005ರಲ್ಲಿ ಭಾರತದ ಮಹಿಳೆಯರು ಮೊಟ್ಟಮೊದಲ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿ ರನ್ನರ್ಅಪ್ ಆಗಿದ್ದರು. ಟೂರ್ನಿಯಲ್ಲಿ 8 ಪಂದ್ಯ ಆಡಿದ್ದಕ್ಕೆ ಆಗ ಆಟಗಾರ್ತಿಯರು ಪಂದ್ಯಕ್ಕೆ ತಲಾ 1000 ರೂ.ಗಳಂತೆ ಒಟ್ಟು 8000 ರೂ. ಸಂಭಾವನೆ ಪಡೆದುಕೊಂಡಿದ್ದರು. ಆಗಿನ್ನೂ ಮಹಿಳಾ ಕ್ರಿಕೆಟ್ ಭಾರತೀಯ ಮಹಿಳಾ ಕ್ರಿಕೆಟಿಗರ ಸಂಸ್ಥೆ ಅಡಿಯಲ್ಲಿತ್ತು. ಯಾವುದೇ ಪ್ರಾಯೋಜಕರಿಲ್ಲದೆ, ಸಂಸ್ಥೆಯ ಹಣಕಾಸು ಸ್ಥಿತಿ ದಯನೀಯವಾಗಿತ್ತು. ಕೊನೆಗೂ 2006ರಲ್ಲಿ ಈ ಸಂಸ್ಥೆ ಬಿಸಿಸಿಐನಲ್ಲಿ ವಿಲೀನಗೊಂಡ ಮೇಲೆ ಪರಿಸ್ಥಿತಿ ಸುಧಾರಿಸಿತು. ಅದರಲ್ಲೂ ಜಯ್ ಷಾ ಬಿಸಿಸಿಐ ಅಧ್ಯಕ್ಷರಾಗಿದ್ದಾಗ 2022ರಲ್ಲಿ ಬಿಸಿಸಿಐ ಪುರುಷ ಕ್ರಿಕೆಟಿಗರಿಗೆ ಸಮಾನವಾಗಿ ಮಹಿಳೆಯರಿಗೂ ಪಂದ್ಯ ಸಂಭಾವನೆ ಕೊಡುವ ನಿರ್ಧಾರ ತೆಗೆದುಕೊಂಡಿತು. ಸದ್ಯ ಭಾರತದ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರು ಪ್ರತೀ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ, ಏಕದಿನಕ್ಕೆ 6 ಲಕ್ಷ ರೂ. ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ.
ಮಹಿಳಾ ಕ್ರಿಕೆಟ್ ಪ್ರವರ್ಧಮಾನದಲ್ಲಿ ಕರ್ನಾಟಕ ಬಹಳ ಮೌಲಿಕ ಕೊಡುಗೆ ನೀಡಿದೆ. ಭಾರತ ಟೆಸ್ಟ್ ತಂಡದ ಮೊದಲ ನಾಯಕಿ ಶಾಂತಾ ರಂಗಸ್ವಾಮಿ ಅವರಿಂದ ಮೊದಲುಗೊಂಡು, ಮಮತಾ ಮಾಬೆನ್, ವಿ.ಆರ್. ವನಿತಾ, ಕರುಣಾ ಜೈನ್, ರಾಜೇಶ್ವರಿ ಗಾಯಕ್ವಾಡ್, ವೇದಾ ಕೃಷ್ಣಮೂರ್ತಿ, ಶ್ರೇಯಾಂಕಾ ಪಾಟೀಲ್ ಹೀಗೆ ಅನೇಕರು ಕರ್ನಾಟಕ ಹಾಗೂ ಭಾರತ ತಂಡ ಪ್ರತಿನಿಧಿಸಿ ಕೀರ್ತಿ ತಂದಿದ್ದಾರೆ. 2021-22ರಲ್ಲಿ ಏಕದಿನ ಹಾಗೂ 2018-19ರಲ್ಲಿ ಟಿ20 ಮಾದರಿಯಲ್ಲಿ ಕರ್ನಾಟಕ ರಾಷ್ಟ್ರ ಮಟ್ಟದಲ್ಲಿ ರನ್ನರ್ಅಪ್ ಆಗಿದೆ. ನಿಕಿ ಪ್ರಸಾದ್ ಕರ್ನಾಟಕ ಮಹಿಳಾ ತಂಡದ ಹಾಲಿ ನಾಯಕಿಯಾಗಿದ್ದಾರೆ.
ಎಲ್ಲ ದೊಡ್ಡ ಪಯಣಗಳೂ ಮೊದಲ ಹೆಜ್ಜೆಯಿಂದಲೇ ಆರಂಭಗೊಳ್ಳುತ್ತವೆ. ಭಾರತದಲ್ಲಿ ಮಹಿಳಾ ಕ್ರಿಕೆಟ್ನ ಪ್ರಾತಃಸ್ಮರಣೀಯರೆಂದು ನೆನಪಿಸಿಕೊಳ್ಳುವಾಗ ಮೊದಲು ಕಣ್ಮುಂದೆ ಸುಳಿಯುವ ಹೆಸರೇ ಶಾಂತಾ ರಂಗಸ್ವಾಮಿ. ಭಾರತದ ಪರ 1976ರಿಂದ 1991ರ ಅವಧಿಯಲ್ಲಿ 16 ಟೆಸ್ಟ್, 19 ಏಕದಿನ ಪಂದ್ಯ ಆಡಿರುವ ಶಾಂತಾ, ಭಾರತ ಮಹಿಳಾ ಕ್ರಿಕೆಟ್ ತಂಡದ ಮೊಟ್ಟಮೊದಲ ನಾಯಕಿ. ಭಾರತದ ಮಹಿಳೆಯರು ಮೊಟ್ಟ ಮೊದಲ ಟೆಸ್ಟ್ ಪಂದ್ಯ ಹಾಗೂ ಸರಣಿ ಜಯಿಸಿದ್ದು ಶಾಂತಾ ನಾಯಕತ್ವದಲ್ಲಿ; 1976ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ. ಭಾರತದ ಪರ ಪ್ರಪ್ರಥಮ ಶತಕ ಹಾಗೂ ಪ್ರಪ್ರಥಮ ಸಿಕ್ಸರ್ ಬಾರಿಸಿದ ಮಹಿಳೆ ಶಾಂತಾ ರಂಗಸ್ವಾಮಿ. ಮಹಿಳಾ ಕ್ರಿಕೆಟ್ ಸಂಸ್ಥೆ ಬಿಸಿಸಿಐನಲ್ಲಿ ವಿಲೀನಗೊಳ್ಳುವಲ್ಲಿ ಸಕ್ರಿಯ ಪಾತ್ರ ವಹಿಸಿದವರು, ಬಿಸಿಸಿಐನ ಮೊದಲ ಮಹಿಳಾ ಪದಾಧಿಕಾರಿ ಹಾಗೂ ಮಹಿಳಾ ಕ್ರಿಕೆಟಿಗರಿಗೆ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಮುಂಚೂಣಿಯ ಹೆಸರು ಶಾಂತಾ ರಂಗಸ್ವಾಮಿ.
ಕಳೆದ 50 ವರ್ಷಗಳಿಂದ ಆಟಗಾರ್ತಿಯಾಗಿ, ಆಡಳಿತಗಾರ್ತಿಯಾಗಿ ಕ್ರಿಕೆಟ್ನಲ್ಲಿ ಸಕ್ರಿಯರಾಗಿರುವ ಡಯಾನಾ ಎಡುಲ್ಜಿ ಮಹಿಳಾ ಕ್ರಿಕೆಟ್ ಕಂಡ ಶ್ರೇಷ್ಠ ಸ್ಪಿನ್ನರ್ಗಳಲ್ಲೊಬ್ಬರು. ಭಾರತವನ್ನು 54 ಪಂದ್ಯಗಳಲ್ಲಿ ಪ್ರತಿನಿಧಿಸಿರುವ ಅವರು 100ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. 20 ಟೆಸ್ಟ್ಗಳಲ್ಲಿ 404 ರನ್, 63 ವಿಕೆಟ್, 34 ಏಕದಿನಗಳಲ್ಲಿ 211 ರನ್, 46 ವಿಕೆಟ್ ಅವರ ಸಾಧನೆ.
ಭಾರತದ ಪರ 100 ಏಕದಿನ ಪಂದ್ಯ ಆಡಿದ ಮೊದಲ ಮಹಿಳೆ ಅಂಜುಂ ಚೋಪ್ರಾ 127 ಏಕದಿನ, 12 ಟೆಸ್ಟ್, 18 ಟಿ20 ಹಾಗೂ 4 ವಿಶ್ವಕಪ್ಗಳಲ್ಲಿ ಆಡಿದ ಅನುಭವಿ. 2005ರಲ್ಲಿ ಭಾರತ ಅಂಜುಂ ನಾಯಕತ್ವದಲ್ಲೇ ವಿಶ್ವಕಪ್ ಫೈನಲ್ ತಲುಪಿತ್ತು.
ಮಹಿಳಾ ಕ್ರಿಕೆಟ್ ಇತಿಹಾಸದ ಶ್ರೇಷ್ಠ ವೇಗದ ಬೌಲರ್ಗಳಲ್ಲೊಬ್ಬರಾದ ಜುಲನ್ 2 ದಶಕ ಕಾಲ ಭಾರತೀಯ ಬೌಲಿಂಗ್ ಆಧಾರಸ್ತಂಭವಾಗಿದ್ದರು. ಭಾರತದ ಪರ 200ಕ್ಕೂ ಹೆಚ್ಚು ಏಕದಿನ ಪಂದ್ಯ ಆಡಿದ ಮೊದಲ ಮಹಿಳೆ ಜುಲನ್ ಏಕದಿನ (255) ಮಾದರಿಯಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ವಿಕೆಟ್ ಕಬಳಿಸಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್ನ ಮೊದಲ ಸೂಪರ್ ಸ್ಟಾರ್ ಮಿಥಾಲಿ ರಾಜ್ ಭಾರತವನ್ನು ಮೂರೂ ಮಾದರಿಗಳಿಂದ 333 ಪಂದ್ಯಗಳಲ್ಲಿ ಪ್ರತಿನಿಧಿಸಿ 10868 ರನ್ ಗಳಿಸಿರುವ ದಂತಕಥೆ. 2017ರಲ್ಲಿ ಭಾರತ ಮಿಥಾಲಿ ನಾಯಕತ್ವದಲ್ಲೇ ವಿಶ್ವಕಪ್ ರನ್ನರ್ಅಪ್ ಆಗಿತ್ತು. ಮೊನ್ನೆ ವಿಶ್ವಚಾಂಪಿಯನ್ನರಾದ ಹರ್ಮನ್ಪ್ರೀತ್ ಕೌರ್, ಸ್ಮೃತಿ ಮಂದಾನ, ದೀಪ್ತಿ ಶರ್ಮ ಮೊದಲಾದವರು ಮಿಥಾಲಿ ನಾಯಕತ್ವದಲ್ಲೇ ಪ್ರವರ್ಧಮಾನಕ್ಕೆ ಬಂದವರು.
ಡಯಾನಾ ಎಡುಲ್ಜಿ ಪ್ರೇರಣೆಯಿಂದ ಸ್ಪಿನ್ ಬೌಲಿಂಗ್ ಕಲಿತ ನೀತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವೊಂದರಲ್ಲಿ 53ಕ್ಕೆ 8 ವಿಕೆಟ್ ಕಬಳಿಸಿದ್ದರು. 2005ರ ವಿಶ್ವಕಪ್ನಲ್ಲಿ 20 ವಿಕೆಟ್ ಪಡೆದಿದ್ದರು.