ಜೀವನ ಸಾರ್ಥಕತೆಯ ಬಗೆ

Water
Published on

| ಡಾ. ಗಣಪತಿ ಆರ್ ಭಟ್

ಬಹಳ ಹಿಂದೆ ಅದೊಂದೂರಲ್ಲಿ ಕಪಿಲಾಬಾವಿ ಇತ್ತು. ಆ ಬಾವಿಯ ನೀರನ್ನು ಸೇದಿ ಕೃಷಿಭೂಮಿಗೆ ಹಾಯಿಸುವುದಕ್ಕಾಗಿ ಅಲ್ಲಿ ಎರಡು ಬಿಂದಿಗೆಗಳಿದ್ದವು. ಒಂದಾದ ನಂತರ ಇನ್ನೊಂದರಂತೆ ದಿನವಿಡೀ ಆ ಬಿಂದಿಗೆಗಳು ಬಾವಿಯೊಳಗೆ ಇಳಿದು ನೀರು ತುಂಬಿಸಿಕೊಂಡು ತೋಟಕ್ಕೆ ನೀರನ್ನು ಹಾಯಿಸಿ ತಾವು ಬರಿದಾಗುತ್ತಿದ್ದವು. ಈ ಕೆಲಸವನ್ನು ನಿತ್ಯವೂ ಮಾಡಿ ಬೇಸರವೆನಿಸಿದಾಗ ಆ ಎರಡರ ಪೈಕಿ ಒಂದು ಬಿಂದಿಗೆಯು ಇನ್ನೊಂದು ಬಿಂದಿಗೆಯನ್ನು, ‘ಅಣ್ಣಾ, ಎಷ್ಟು ಬಾರಿ ನಾವು ನೀರು ತುಂಬಿಸಿಕೊಂಡು ಬಂದರೂ ನಮ್ಮ ಒಡಲು ಮತ್ತೆ ಬರಿದೇ ಆಗುತ್ತದಲ್ಲ. ಇದೇ ರೀತಿಯಾದರೆ ನಮ್ಮ ಜೀವನ ಹೇಗೆ ಸಾರ್ಥಕವೆನಿಸುತ್ತದೆ?’ ಎಂದು ಕೇಳಿತು.

ಆಗಷ್ಟೇ ತನ್ನ ಒಡಲನ್ನು ಬರಿದು ಮಾಡಿಕೊಂಡು ನೀರನ್ನು ತುಂಬಿಸಿಕೊಳ್ಳಲಿಕ್ಕಾಗಿ ಓಡುತ್ತ ಕೆಳಕ್ಕಿಳಿಯುತ್ತಿದ್ದ ಆ ಇನ್ನೊಂದು ಬಿಂದಿಗೆಯು, ‘ತಮ್ಮಾ, ಹಾಗೆನ್ನಬೇಡ. ನಾವು ಎಷ್ಟು ಸಲ ಬರಿದಾಗುತ್ತೇವೆಯೋ ಅಷ್ಟೇ ಸಲ ತುಂಬಿಕೊಂಡು ಮೇಲಕ್ಕೆ ಬರುತ್ತೇವೆ ಕೂಡ. ಪರಮಾತ್ಮನ ಕಾರುಣ್ಯ ಹೇಗಿರುತ್ತದೆಯೆಂದರೆ ನಮ್ಮೆಲ್ಲ ಸಾಮರ್ಥ್ಯವನ್ನು ನಾವು ನಿಃಸ್ವಾರ್ಥ ಭಾವನೆಯಿಂದ ಇತರರಿಗೆ ವಿನಿಯೋಗ ಮಾಡುತ್ತಲಿದ್ದರೆ ಪರಮಾತ್ಮ ಕೂಡ ನಮ್ಮೊಳಗೆ ಶಕ್ತಿಯನ್ನು ತುಂಬಿ ನಮ್ಮನ್ನು ಉದ್ದರಿಸುತ್ತಲೇ ಇರುತ್ತಾನೆ’ ಎಂದಿತು.

ಸಾಯಂಕಾಲದ ಸಮಯದಲ್ಲಿ ಆ ಎರಡು ಬಿಂದಿಗೆಗಳು ಬಾವಿಯ ಕಟ್ಟೆಯ ಮೇಲಿನ ಕಲ್ಲಿನ ಮೇಲೆ ಕುಳಿತು ತಮ್ಮೆದುರಿಗಿದ್ದ ಹಸಿರಿನಿಂದ ನಳನಳಿಸುತ್ತಿದ್ದ ತೋಟವನ್ನು, ಸಂಜೆಯ ಗಾಳಿಗೆ ತಲೆದೂಗುತ್ತಿದ್ದ ಪೈರನ್ನೂ ನೋಡುತ್ತ ತಮ್ಮ ಕಾರ್ಯ ಸದ್ವಿನಿಯೋಗವಾಯಿತೆಂದು ನೆಮ್ಮದಿ ಪಟ್ಟವು. ಲೋಭ-ಲಾಭಗಳ ದೃಷ್ಟಿಯಿರಿಸಿಕೊಳ್ಳದೆ ನಮ್ಮ ಸಾಮರ್ಥ್ಯವನ್ನು ಅನ್ಯರಿಗಾಗಿ ವಿನಿಯೋಗವಾಗುವುದೇ ಸೇವೆ. ಸೇವೆಯಿಂದಲೇ ಬದುಕು ಹೇಗೆ ಸಾರ್ಥಕವಾಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನವಷ್ಟೆ. ಇದನ್ನೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು, ‘ಫಲಗಳಲ್ಲಿ ಅನಾಸಕ್ತನಾಗಿದ್ದುಕೊಂಡು ಸಮರ್ಪಣಾಭಾವದಿಂದ ಕರ್ತವ್ಯಕರ್ಮವನ್ನು ಆಚರಿಸುತ್ತಿದ್ದರೆ ಮನುಷ್ಯನು ಶ್ರೇಷ್ಠಪದವನ್ನು ಅಲಂಕರಿಸುತ್ತಾನೆ’ ಎಂದಿದ್ದಾನೆ. ಇಂಥ ನೈಷ್ಕಾಮಕರ್ಮವನ್ನು ನಾವು ಆಚರಿಸಬೇಕು. ಅನೇಕರು ತಾವು ಯಾರಿಗೂ ತೊಂದರೆ ಕೊಡದಂತೆ ತಮ್ಮಷ್ಟಕ್ಕೆ ಜೀವನ ನಡೆಸುತ್ತಿದ್ದರೂ ಜೀವನದಲ್ಲಿ ನೆಮ್ಮದಿಯೊಂದಿಲ್ಲವೆಂದು ತಮ್ಮನ್ನೇ ತಾವು ದೂರಿಕೊಳ್ಳುತ್ತಿರುತ್ತಾರೆ. ಆದರೆ ಪರಪೀಡನೆ ಮಾಡದೆ ಇರುವುದಷ್ಟೇ ಅಲ್ಲ, ಪರೋಪಕಾರವೂ ಜೀವನ ಸಾಫಲ್ಯಕ್ಕೆ ಬೇಕೆನ್ನುವ ವಾಸ್ತವದ ಸಂಗತಿಯನ್ನು ಅಂಥವರು ಮನಗಾಣುವುದಿಲ್ಲ. ಸುತ್ತಣ ಜಗತ್ತಿನ ಬಗ್ಗೆ ನಾವು ಕಾರುಣ್ಯ ಹಾಗೂ ಮಮತೆಗಳನ್ನಿಟ್ಟುಕೊಳ್ಳದೆ ಮನುಷ್ಯರೆನಿಸಿಕೊಳ್ಳುವುದು ಹೇಗೆ? ಸುಂದರ ಜಗತ್ತು ನಿರ್ವಣವಾಗುವುದು ಹೇಗೆ?

ನಮ್ಮಿಂದ ಜಗತ್ತಿಗಾಗುವ ಒಳಿತನಲ್ಲಿ ನಮ್ಮ ನೆಮ್ಮದಿಯನ್ನು ಕಂಡರೆ ಮಾತ್ರವೇ ನಮ್ಮೆದುರು ಸುಂದರ ಜಗತ್ತೊಂದನ್ನು ಕಾಣಬಹುದು. ಜಗತ್ತಿನಲ್ಲಿರುವ ಒಳಿತನ್ನು ಪಡೆದು ಏಳ್ಗೆಯನ್ನು ಸಾಧಿಸಿದ ಮೇಲೆ ನಾವು ಅದೇ ಜಗತ್ತಿಗೆ ನಮ್ಮಲ್ಲಿರುವ ಒಳಿತನ್ನು ಪ್ರರ್ತÂಸಬೇಕು ಎಂಬುದೇ ಜಗನ್ನಿಯಮ. ಅದನ್ನೇ ಸೇವಾಯಜ್ಞ ಎನ್ನುತ್ತೇವೆ. ಅದರಲ್ಲಿ ನಮ್ಮನ್ನು ನಾವು ಸಮಿತ್ತಿನಂತೆ ಅರ್ಪಿಸಿಕೊಂಡಾಗಲೇ ಬದುಕಿಗೊಂದು ಅರ್ಥವೂ ಬರುತ್ತದೆ.

(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net