

ಅಯೋಧ್ಯೆಯಲ್ಲಿ ಕುಶಲಕರ್ವಿು ಬಡಗಿ ಇದ್ದ. ಆತ ಮರವನ್ನು ಕಡಿದು ಸುಂದರ ಕುಸುರಿ ಮೂಲಕ ಅಲಂಕಾರಿಕ ಕೆತ್ತನೆಗಳನ್ನು ಮಾಡುತ್ತಿದ್ದ. ಆಗೊಮ್ಮೆ ಅವನಿಗೆ ನೇರವಾಗಿ ಬೆಳೆದು ನಿಂತ ಸಾಗುವಾನಿ ಮರ ದೃಷ್ಟಿಗೆ ಬಿತ್ತು. ಅದು ಕೆತ್ತನೆಗೆ ಸೂಕ್ತವೆಂದು ಭಾವಿಸಿ, ತನ್ನಲ್ಲಿದ್ದ ಕೊಡಲಿಯಿಂದ ಅದರ ರೆಂಬೆ-ಕೊಂಬೆಗಳನ್ನು ಸವರಿದ. ಕೊಡಲಿಯ ಪೆಟ್ಟುಗಳಿಗೆ ಆ ಮರ ನೋವಿನಿಂದ ದುಃಖಿಸಿತಾದರೂ ತಾಳ್ಮೆವಹಿಸಿತು. ಆತ ಅದರ ದಿಮ್ಮಿಗಳನ್ನು ಹೊತ್ತೊಯ್ದು, ತನಗೆ ಬೇಕಾದ ಆಕೃತಿಗಳನ್ನು ತಯಾರಿಸಲು ನಿಂತ. ಕುಸುರಿ ಕೆಲಸ ಮಾಡುವಾಗಲೂ ಬಡಗಿಯ ಉಳಿಯ ಪೆಟ್ಟು ತಿನ್ನುತ್ತಿದ್ದ ಆ ಮರದ ತುಂಡು ನೋವುಂಡು ತಾಳ್ಮೆಯನ್ನೇ ಪ್ರದರ್ಶಿಸಿತು. ಕೆಲಸ ಮುಗಿದ ಮೇಲೆ ಉಳಿದ ಎರಡು ತುಂಡುಗಳಲ್ಲಿ ಸುಂದರ ಪಾದುಕೆಗಳನ್ನು ಮಾಡಿ ಅಯೋಧ್ಯೆಯ ನರೇಶ ದಶರಥನಿಗೆ ಕೊಡುಗೆಯಾಗಿ ನೀಡಲು ಆ ಬಡಗಿ ಯೋಚಿಸಿದ. ರಾಜ ಬಡಗಿಯಿಂದ ಆ ಪಾದುಕೆಗಳನ್ನು ಪ್ರೀತಿಯಿಂದ ಸ್ವೀಕರಿಸಿದನಾದರೂ ಅವು ರಾಜ ಧರಿಸುವ ಪಾದುಕೆಗಳಾಗಿರಲಿಲ್ಲ. ರಾಜ ಸೇವಕನಿಗೆ ಹೇಳಿ ಅವುಗಳನ್ನು ಉಗ್ರಾಣದಲ್ಲಿರಿಸಲು ಸೂಚಿಸಿದ. ಕಾಲಾಂತರದಲ್ಲಿ ಶ್ರೀರಾಮ ವನವಾಸಕ್ಕೆ ಹೋಗುವ ಸಂದರ್ಭ ಬಂತು. ಶ್ರೀರಾಮ ಕಾಶಾಯ ವಸ್ತ್ರಧಾರಿಯಾಗಿ ವನವಾಸಕ್ಕೆ ತೆರಳಲು ಸನ್ನದ್ಧನಾದ. ಆದರೆ ಆತ ಧರಿಸಿದ ಪಾದುಕೆಗಳಿಗೂ ಆತನ ವಸ್ತ್ರಕ್ಕೂ ಹೊಂದಾಣಿಕೆ ಇರಲಿಲ್ಲ. ಅದನ್ನು ಗಮನಸಿದ ಸೇವಕ ಎಂದೋ ರಾಜನಿರಿಸಿದ್ದ ಆ ಪಾದುಕೆಗಳನ್ನು ರಾಮನ ಮುಂದಿರಿಸಿದ. ಶ್ರೀರಾಮ ಅವುಗಳನ್ನು ಧರಿಸಿ ಅಮಾತ್ಯನ ರಥವೇರಿದ.
ಆ ಪಾದುಕೆಗಳು ಶ್ರೀರಾಮನ ಕಾಲಿನ ಸ್ಪರ್ಶಕ್ಕೆ ಪುನೀತಗೊಂಡು ತಾನು ಉಳಿ ಪೆಟ್ಟುಗಳಿಗೆ ತಾಳ್ಮೆ ತೋರಿದ ಪರಿಣಾಮ ತನಗಿಂಥ ಭಾಗ್ಯ ದೊರೆಯಿತೆಂದು ಭಾವಿಸಿದವು. ಅದೇ ಕಾಲಕ್ಕೆ ತನ್ನ ಭಾಗ್ಯ ಬೇರಾವ ಮರಕ್ಕೂ ಇಲ್ಲವೆಂದು ಅಹಂಕಾರದಿಂದ ಬೀಗಿದವು. ಇದು ರಾಮನ ಗಮನಕ್ಕೂ ಬಂತು, ರಥ ನದಿಯ ತೀರಕ್ಕೂ ಬಂತು. ಅಮಾತ್ಯ ಹಿಂದಿರುಗಬೇಕು, ಶ್ರೀರಾಮ ಮುಂದೆ ನಡೆದುಕೊಂಡು ಹೋಗಬೇಕು. ನದಿ ದಾಟಿ ಕಾಡಿನ ಹಾದಿಯಲ್ಲಿ ನಡೆಯುವಾಗ ಕಲ್ಲು, ಮುಳ್ಳುಗಳು ಪಾದುಕೆಗಳಿಗೆ ಚುಚ್ಚಿದಾಗ ಅವು ನೋವಿನಿಂದ ಚೀರಿದವಂತೆ. ಅವು ತನ್ನ ಅಹಂಕಾರಕ್ಕೆ ನಾಚಿ ಶ್ರೀರಾಮನ ಕ್ಷಮೆ ಕೇಳಿದವಂತೆ.
ಮುಂದೆ ಸಹೋದರ ಭರತ ರಾಮನನ್ನು ಅಯೋಧ್ಯೆಗೆ ಕರೊದೊಯ್ಯಲು ಬಂದಾಗ ರಾಮ ಹಿಂದಿರುಗಲು ನಿರಾಕರಿಸಿದ. ಆಗ ಭರತ ಅಣ್ಣನ ಪಾದುಕೆಗಳನ್ನೇ ಪಡೆದು ಅದನ್ನು ಸಿಂಹಾಸನದ ಮೇಲಿಟ್ಟು ಶ್ರೀರಾಮ ವನವಾಸ ಮುಗಿಸಿ ಬರುವವರೆಗೂ ಅದರ ಹೆಸರಲ್ಲಿ ರಾಜ್ಯಾಡಳಿತ ನಡೆಸಿದ. ಸಂಯಮದ ಕಾರಣ ಆ ಪಾದುಕೆ ಸಿಂಹಾಸನವನ್ನೇರಿತು. ಶ್ರೀರಾಮನ ಪಾದಸ್ಪರ್ಶದಿಂದ ಅದರ ಬದುಕು ಸಾರ್ಥಕ ಹೊಂದುವಂತಾಯಿತು.
ಹೌದು, ಇಲ್ಲಿ ಆ ಮರದ ತುಂಡುಗಳು ಪಾದುಕೆಗಳಾಗಿದ್ದು, ಕಷ್ಟ ಸಹಿಷ್ಣುತೆ ಮೂಲಕ. ಮನುಷ್ಯನ ಬದುಕು ಪೂರ್ಣತೆ ಪಡೆಯುವುದು ಸಂಕಷ್ಟದಲ್ಲಿ ತಾಳ್ಮೆ ವಹಿಸುವ ಮೂಲಕವೇ. ಅನೇಕ ನೋವುಗಳಿಂದ ಬಸವಳಿದವರ ಬದುಕು ಬಂಗಾರವಾಗುವುದು ಅವಶ್ಯಕತೆಯಿದ್ದಾಗ ಕಷ್ಟ ಸಹಿಸಿ ಮೌನಕ್ಕೆ ಜಾರಿದಾಗ. ಆ ಕಾರಣಕ್ಕೆ ಅನುಭಾವಿಗಳು ಹೇಳುವ ಮಾತು- ‘ಮಾತನಾಡಲು ಬಾಯಿ ಸಾಕು, ಮೌನವಾಗಿರಲು ವಿವೇಕ ಎಂದು’.
(ಲೇಖಕರು ಅಧ್ಯಾಪಕರು)