ಸ್ವಚ್ಛತಾ ಸೇನಾನಿಗಳ ಬದುಕು ದುಸ್ತರ

4-68d18cb0ce9b1
Published on

ನಗರ, ಅರೆನಗರಗಳ ಕೊಳೆಯನ್ನು ಸ್ವಚ್ಛ ಮಾಡುವ ಹೊಣೆ ಹೊತ್ತಿರುವ ಪೌರಕಾರ್ವಿುಕರು ತಮ್ಮ ಕೆಲಸವನ್ನು ಶ್ರದ್ಧೆವಹಿಸಿ ಮಾಡುತ್ತಿದ್ದಾರೆ. ಈ ಶುಚಿಗಾರರು ನಿತ್ಯವೂ ತಮ್ಮ ಕರ್ತವ್ಯ ನಿಭಾಯಿಸದಿದ್ದಲ್ಲಿ ಇಡೀ ನಗರ, ಪಟ್ಟಣ ದುರ್ನಾತ ಬೀರುವುದುಂಟು. ಈ ಅಂಶವನ್ನು ಗಮನಿಸಿಯೇ ನಗರಗಳಲ್ಲಿ ಪೌರಕಾರ್ವಿುಕರ ಸೇವೆಗೆ ಒತ್ತು ನೀಡಲಾಗಿದೆ. ಆದರೆ, ಸಿಟಿಯಲ್ಲಿನ ಕೊಳಕು ನಿವಾರಿಸುವವರ ಬದುಕು ದುಸ್ತರವಾಗಿದ್ದು, ಅವರಿಗೆ ಸಿಗಬೇಕಾದ ಸೌಲಭ್ಯಕ್ಕೆ ಗ್ಯಾರಂಟಿ ಇಲ್ಲವಾಗಿದೆ.

| ಆರ್.ತುಳಸಿಕುಮಾರ್ ಬೆಂಗಳೂರು

ಕೋವಿಡ್ ಸಾಂಕ್ರಾಮಿಕದ ವೇಳೆ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ ಹಗಲಿರುಳು ಕೆಲಸ ಮಾಡಿ ಜನರ ಜೀವ ಉಳಿಸಿದವರಲ್ಲಿ ಪೌರಕಾರ್ವಿುಕರ ಪಾತ್ರ ಶ್ಲಾಘನೀಯ. ಇದನ್ನು ಸರ್ಕಾರ ಹಾಗೂ ಸಮಾಜದ ಗಣ್ಯರು ಶ್ಲಾಘಿಸಿ ಗೌರವಾದಾರಗಳನ್ನು ನೀಡಿದರು. ಈಗಲೂ ಈ ಶುಚಿಗಾರರು ನೈರ್ಮಲ್ಯವಿಲ್ಲದ ಸ್ಥಳಗಳಲ್ಲಿ ರಿಸ್ಕ್ ತೆಗೆದುಕೊಂಡೇ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಆದರೂ, ಸ್ಥಳೀಯ ಸಂಸ್ಥೆಗಳ ಆಡಳಿತ ಪೌರಕಾರ್ವಿುಕರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿಸುತ್ತಿವೆ. ಜತೆಗೆ ಕರ್ತವ್ಯ ನಿರ್ವಹಿಸಲು ಬೇಕಾದ ಮೂಲಸೌಕರ್ಯ ನೀಡದಿರುವುದರಿಂದ ಶುಚಿಗಾರರು ಅನಾರೋಗ್ಯಕ್ಕೀಡಾಗಿ ಬೇಗನೆ ವೃದ್ಧಾಪ್ಯಕ್ಕೆ ಒಳಗಾಗುತ್ತಿದ್ದಾರೆ.

ಇಂತಹ ಸಂಕಷ್ಟದ ವೃತ್ತಿಗೆ ಹೆಚ್ಚಿನ ಮಂದಿ ಮೂಗು ಮುರಿಯುವವರಿದ್ದಾರೆ. ಹಾಗಾಗಿ ಯಾರೂ ಮಾಡದ ಕೆಲಸವನ್ನು ನಿಭಾಯಿಸುವ ಸವಾಲು ಎದುರಿಸುತ್ತಿರುವ ಪೌರಕಾರ್ವಿುಕರ ಸ್ಥಿತಿಗತಿ ಸುಧಾರಣೆಗೆ ಸರ್ಕಾರ ಸಮರ್ಪಕವಾದ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಸಂಸ್ಥೆಗಳ ಹೆಗಲಿಗೆ ವರ್ಗಾಯಿಸಿ ಕೈತೊಳೆದುಕೊಂಡ ಪರಿಣಾಮ, ಇವರ ಜೀವನ ಮುದುಡಿದ ತಾವರೆಯಂತಾಗಿದೆ. ಬೆರಳೆಣಿಕೆಯಷ್ಟು ಎನ್​ಜಿಒ ಮಂದಿ ಒಂದಿಷ್ಟು ಕೆಲಸ ಮಾಡುತ್ತಿದ್ದರೂ, ಅದು ಅತ್ಯಲ್ಪ ಸೇವೆಯಾಗಿದೆ. ‘ಕೋವಿಡ್ ವೇಳೆ ನಮಗೆ ಸಿಕ್ಕಿದ ಗೌರವ, ಮನ್ನಣೆ ಈಗ ಮಾಯವಾಗಿದ್ದು, ಮಾನವೀಯತೆ ದೃಷ್ಟಿಯಿಂದ ಪೌರಕಾರ್ವಿುಕರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು’ ಎಂಬ ಕೂಗು ಎದ್ದಿದೆ.

ಲಕ್ಷ ಶುಚಿಗಾರರ ಬಗ್ಗೆ ಅಲಕ್ಷ್ಯ

ರಾಜ್ಯದಲ್ಲಿ ಜಿಬಿಎ ಜತೆಗೆ ಹತ್ತು ಮಹಾನಗರ ಪಾಲಿಕೆಗಳು ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಸುಮಾರು 40 ಸಾವಿರ ಕಾಯಂ ಪೌರಕಾರ್ವಿುಕರು ಹಾಗೂ 60 ಸಾವಿರದಷ್ಟು ಗುತ್ತಿಗೆ ಕಾರ್ವಿುಕರಿದ್ದಾರೆ. ಅಂದರೆ, ನಗರಗಳಲ್ಲಿ ಲಕ್ಷ ಕಾರ್ವಿುಕರು ಶುಚಿ ಕಾರ್ಯದಲ್ಲಿ ನಿರತರಾಗಿದ್ದರೂ, ಈ ವರ್ಗದ ಜನರಿಗೆ ಸಿಗಬೇಕಾದ ಸೌಲಭ್ಯಗಳು ಮರೀಚಿಕೆಯಾಗಿವೆ. ಪೌರಕಾರ್ವಿುಕರು ಕೈಗವಸು, ಗಮ್ ಬೂತ್, ಮಾಸ್ಕ್ ಹಾಗೂ ಇತರ ಪರಿಕರಗಳಿಲ್ಲದೆ ಕರ್ತವ್ಯ ನಿಭಾಯಿಸಬೇಕಿದೆ. ರಜೆ ಇಲ್ಲದೆ ಕೆಲಸ ಮಾಡುತ್ತಿದ್ದರೂ, ಮೇಲ್ವಿಚಾರಕರು, ಅಧಿಕಾರಿಗಳ ಬೈಗುಳ ಮಾತ್ರ ನಿತ್ಯವೂ ಬೋನಸ್ ರೀತಿ ಸಿಗುತ್ತಿರುತ್ತದೆ. ಮಹಿಳಾ ಪೌರಕಾರ್ವಿುಕರಿಗೆ ತಿಂಗಳಿಗೊಮ್ಮೆ ರಜೆ ನೀಡದೆ ದುಡಿಸಿಕೊಳ್ಳಲಾಗುತ್ತಿದೆ. ಆರೋಗ್ಯ ಸೌಲಭ್ಯ, ವಿಮೆ, ಪಿಂಚಣಿ ಇಲ್ಲದೆ ಕೆಲಸ ನಿರ್ವಹಿಸಿ ನಿವೃತ್ತಿರಾಗಬೇಕಾದ ಸ್ಥಿತಿ ಇದೆ.

ರಾಜಧಾನಿಯಲ್ಲಿ ತುಸು ಸುಧಾರಣೆ

ಬಿಬಿಎಂಪಿಯಲ್ಲಿ (ಈಗ ಜಿಬಿಎ) ಕರ್ತವ್ಯ ನಿರ್ವಹಿಸುತ್ತಿದ್ದ 12,892 ಪೌರಕಾರ್ವಿುಕರನ್ನು ಸರ್ಕಾರ ಇತ್ತೀಚೆಗಷ್ಟೇ ಕಾಯಂಗೊಳಿಸಿದೆ. ಇಂತಹವರಿಗೆ ಮಾಸಿಕ ಮೂಲವೇತವಾಗಿ 39 ಸಾವಿರ ರೂ. ನೀಡಲಾಗುತ್ತಿದೆ. ಆಗಾಗ್ಗೆ ರಜೆಯೂ ಸಿಗುತ್ತಿದೆ. ಆದರೆ, ಈ ಸೌಲಭ್ಯ ಗುತ್ತಿಗೆ ಕಾರ್ವಿುಕರಿಗೆ ಸಿಗುತ್ತಿಲ್ಲ. ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬಂತೆ ಪಾಲಿಕೆಯು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿದರೂ, ವೇತನ ನೀಡುವಾಗ ಅರ್ಧದಷ್ಟು ಹಣವನ್ನು ಮಾತ್ರ ನೀಡಲಾಗುತ್ತಿದೆ.

ಪೌರಕಾರ್ವಿುಕರ ಬೇಡಿಕೆಗಳು

ಸ್ವಚ್ಛತಾ ಕೆಲಸದಲ್ಲಿ ನಿರತರಾದವ ರೆಲ್ಲರಿಗೂ ನಗದುರಹಿತ ಆರೋಗ್ಯ ಕಾರ್ಡ್.

ಪ್ರತಿ ತಿಂಗಳು ಸಂಕಷ್ಟ

ಭತ್ಯೆ ವಿತರಣೆ.

ಪಿಎಫ್ ವಂತಿಗೆ ಸಮರ್ಪಕವಾಗಿ ಪಾವತಿಸುವುದು.

ಆಕಸ್ಮಿಕ ನಿಧನ, ಅಪಘಾತದಿಂದ ಮೃತರಾದಾಗ ಕನಿಷ್ಠ 10 ಲಕ್ಷ ರೂ. ಪರಿಹಾರ.

ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ನೆರವು.

ಸರ್ಕಾರದ ಮಾನದಂಡದಂತೆ ಪಿಂಚಣಿ ಸೌಲಭ್ಯ.

ಗುತ್ತಿಗೆ ಕಾರ್ವಿುಕರಿಗೆ ನೇರ ವೇತನ ಪಾವತಿ ಸೌಲಭ್ಯ ಒದಗಿಸುವುದು.

ಯಾವುದೇ ನಗರ, ಪಟ್ಟಣಗಳಲ್ಲಿ ಸ್ವಚ್ಛತೆ ಕೈಗೊಂಡು ಅಲ್ಲಿನ ವಾತಾವರಣವನ್ನು ಶುದ್ಧಿ ಮಾಡುವವರು ಪೌರಕಾರ್ವಿುಕರು ಮಾತ್ರ. ಸಮಾಜದ ಕೊಳೆ ಹೆಕ್ಕಲು ಯಾರೂ ಮುಂದೆ ಬಾರದಿದ್ದಾಗ ನಮ್ಮಜನ ಕರ್ತವ್ಯ ನಿರ್ವಹಿಸುತ್ತಿದ್ದರೂ, ಸರಿಯಾದ ಸೌಲಭ್ಯ ಸಿಗದೆ ಸಮಸ್ಯೆಯಲ್ಲಿದ್ದಾರೆ. ಸರಿಯಾದ ಸಮಯಕ್ಕೆ ವೇತನ, ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯವನ್ನು ಸರ್ಕಾರ ಕಲ್ಪಿಸಲಿ. | ಡಾ. ಬಾಬು ಬೆಂಗಳೂರು ಸಿಟಿ ಕಾರ್ಪೆರೇಷನ್ ವರ್ಕರ್ಸ್ ಫೆಡರೇಷನ್​ನ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net