ಸ್ವಾತಂತ್ರ್ಯೋತ್ತರ ಆಶೋತ್ತರಗಳಿಗೆ ಎಸಗಿದ ಅಪಚಾರ: ಮಾಜಿ ಪ್ರಧಾನಿ ದೇವೇಗೌಡರ ವಿಶೇಷ ಲೇಖನ

ವಿಜಯವಾಣಿ (3)
Published on

(ಲೇಖಕರು ದೇಶದ ಮಾಜಿ ಪ್ರಧಾನಿ)

ನನ್ನ ರಾಜಕೀಯ ಜೀವನದಲ್ಲಿ ತುರ್ತು ಪರಿಸ್ಥಿತಿ ಒಂದು ಕರಾಳ ಅಧ್ಯಾಯವಾಗಿದೆ. ಇದನ್ನು ಅನೇಕ ಬಾರಿ ಹೇಳಿದ್ದೇನೆ. ಈ ನಿಲುವಿನಲ್ಲಿ ಬದಲಾವಣೆಯೂ ಇಲ್ಲ. ಪ್ರಜಾಪ್ರಭುತ್ವವನ್ನು ಕತ್ತಲೆಗೆ ದೂಡಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಬಹುದೊಡ್ಡ ತಪ್ಪು ಮಾಡಿಬಿಟ್ಟರು. ಅದನ್ನು ಕೇವಲ ತಪ್ಪು ಎಂದು ಹೇಳಿ ಸುಮ್ಮನಾಗಲು ಸಾಧ್ಯವಿಲ್ಲ, ಅದು ಸ್ವಾತಂತ್ರ್ಯೋತ್ತರ ಭಾರತದ ಭರವಸೆಯ ಆಶೋತ್ತರಗಳಿಗೆ ಎಸಗಿದ ಅಪಚಾರ ಎಂದು ನಾನು ಪ್ರತಿಪಾದಿಸಿದ್ದೇನೆ. ಕೆಲವರು ಅದನ್ನು ಕೇವಲ ಒಂದು ‘ರಾಜಕೀಯ ಪ್ರಮಾದ’ ಎಂದು ವಿಶ್ಲೇಷಿಸಿ ಸುಮ್ಮನಾಗುವುದನ್ನು ನೋಡಿದ್ದೇನೆ. ಹಾಗಲ್ಲ, ಅದು ರಾಷ್ಟ್ರೀಯ ವಿಪತ್ತಿನಂತೆ ಎರಗಿದ ಘೊರ, ಕೆಡುಕಿನ, ಸರ್ವಾಧಿಕಾರಿ ಮನಃಸ್ಥಿತಿಯ ವಿಲಕ್ಷಣ ನಿರ್ಧಾರವಾಗಿತ್ತು.

ನಾನು ಪ್ರತ್ಯಕ್ಷವಾಗಿ ಬಲ್ಲೆ. 1970ರ ದಶಕ ಭಾರತದ ಉದಾತ್ತ, ಮಾನವೀಯ, ನಿಸ್ತ್ರತ ಹೃದಯವೈಶಾಲ್ಯಕ್ಕೆ ಸವಾಲು ಎದುರಾದ ಸಂದರ್ಭ. ಆ ಹೊತ್ತಿಗೆ ಭಾರತ ಪಾಕಿಸ್ತಾನದೊಂದಿಗೆ ಯುದ್ಧ ಮಾಡಿತ್ತು. ಚೀನಾದೊಂದಿಗೆ ಕಾದಾಡಿತ್ತು. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಬಸವಳಿದಿತ್ತು. ಅಂಥ ಕ್ಲಿಷ್ಟ ಸನ್ನಿವೇಶದಲ್ಲಿ ಇಡೀ ರಾಷ್ಟ್ರವನ್ನೇ ಒಂದು ಸಮಷ್ಟಿ ಕುಟುಂಬವನ್ನಾಗಿಸಿಕೊಂಡು ಆಡಳಿತ ನಡೆಸುವುದು ಆ ಹೊತ್ತಿನ ನಾಯಕತ್ವದ ಆಯ್ಕೆ ಆಗಬೇಕಿತ್ತು. ಆದರೆ, ತಮ್ಮ ರಾಜಕೀಯ ಅಸ್ತಿತ್ವಕ್ಕೆ ಅಪಾಯ ಬಂತು ಎನ್ನುವ ಏಕೈಕ ಕಾರಣಕ್ಕೆ ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು ಕ್ಷಮೆಗೆ ಅರ್ಹವಲ್ಲದ ನಡವಳಿಕೆ. ಇವತ್ತಿಗೂ ನಮ್ಮ ರಾಷ್ಟ್ರ ಅಗಾಧ ಅಭಿವೃದ್ಧಿ ಸಾಧಿಸುತ್ತಿದ್ದರೂ ತುರ್ತು ಪರಿಸ್ಥಿತಿ ಎನ್ನುವ ‘ಕಪ್ಪುಚುಕ್ಕೆ’ ಹಾಗೆಯೇ ಉಳಿದುಬಿಟ್ಟಿದೆ.

ಆ ಸಂದರ್ಭದಲ್ಲಿ ದಿಲ್ಲಿಯಲ್ಲಿ ಅಧಿಕಾರದಲ್ಲಿದ್ದ ನಾಯಕತ್ವವು ನಿರಂತರವಾಗಿ ಜನವಿರೋಧಿ ಕೃತ್ಯಗಳಲ್ಲಿ ನಿರತವಾಗಿತ್ತು. ಆಗಲೇ ರಾಷ್ಟ್ರಮಟ್ಟದಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಕಾಂಗ್ರೆಸ್ ದುರಾಡಳಿತದ ವಿರುದ್ಧ ಹೋರಾಟಗಳನ್ನು ಶುರು ಮಾಡಿದ್ದರು. ಅನತಿ ಕಾಲದಲ್ಲೇ ತುರ್ತು ಪರಿಸ್ಥಿತಿಯಂತಹ ಘೊರ ವಿಪತ್ತು ಬಂದೆರಗಬಹುದು ಎಂದು ಜೇಪಿ ಅವರು ಮೊದಲೇ ಊಹಿಸಿದ್ದರು ಎಂದು ಕಾಣುತ್ತದೆ. ಹೀಗಾಗಿ ಅವರು ಪಟನಾದಲ್ಲಿ ಇಂದಿರಾ ಗಾಂಧಿ ಆಡಳಿತದ ವಿರುದ್ಧ ದೊಡ್ಡ ದನಿಯೆತ್ತಿ, ಆ ಹೋರಾಟವನ್ನು ರಾಷ್ಟ್ರಮಟ್ಟಕ್ಕೂ ವಿಸ್ತರಿಸುವ ಪ್ರಯತ್ನ ಮಾಡುತ್ತಿದ್ದರು. ಅದೇ ಹೊತ್ತಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ವಿರೋಧಿಗಳು ಜೇಪಿ ಅವರ ಸಂಘರ್ಷದ ಸದುದ್ದೇಶವನ್ನು ಸೂಕ್ಷ್ಮರಾಗಿ ಗ್ರಹಿಸಿದ್ದರು. ಅಂತಹ ಗುಂಪಿನಲ್ಲಿ ನಾನೂ ಇದ್ದೆ. 1975ರ ಜೂನ್ 23ರಂದು ಜೇಪಿ ಅವರು ಕೇರಳ ಪ್ರವಾಸ ಮುಗಿಸಿ ಕರ್ನಾಟಕಕ್ಕೆ ಬಂದರು. ರಾಜ್ಯದಲ್ಲಿ 4 ದಿನಗಳ ಕಾಲ ಸಭೆ, ಕಾಂಗ್ರೆಸ್ ವಿರೋಧಿ ನಾಯಕರ ಭೇಟಿ ಮುಗಿಸಿದ ನಂತರ ಕೋಲ್ಕತ್ತಕ್ಕೆ ತೆರಳುತ್ತಿದ್ದಂತೆಯೇ ಅವರನ್ನು ಬಂಧಿಸಲಾಯಿತು! ಜೇಪಿ ಅವರ ಬಂಧನ ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಕಾಂಗ್ರೆಸ್ ವಿರುದ್ಧ ದೊಡ್ಡ ಆಕ್ರೋಶಕ್ಕೆ ಕಾರಣವಾಯಿತು.

ಇಂದಿರಾ ಅವರ ಬಗ್ಗೆ ನನ್ನಲ್ಲಿ ಭುಗಿಲೆದ್ದಿದ್ದ ಆಕ್ರೋಶದ ಬಗ್ಗೆ ನಾನಿಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅಷ್ಟೊತ್ತಿಗೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿಗಳು ಯಾರು? ಇಂದಿರಾ ವಿರೋಧಿಗಳು ಯಾರು? ಎಂಬ ಪಟ್ಟಿಯನ್ನು ಆಡಳಿತಾರೂಢರು ತಯಾರು ಮಾಡುತ್ತಿದ್ದರು. ಆ ಪಟ್ಟಿಯಲ್ಲಿ ನನ್ನದೂ ಹೆಸರು ಇದ್ದೇ ಇರುತ್ತದೆ ಎನ್ನುವ ಎಚ್ಚರಿಕೆ ಇದ್ದೇ ಇತ್ತು. ಆದರೆ ಪಲಾಯನ ಮಾಡುವ, ಬೆನ್ನು ತೋರಿಸಿ ಓಡಿಹೋಗುವ ಜಾಯಮಾನ ನನ್ನದಾಗಿರಲಿಲ್ಲ. ಏಕೆಂದರೆ, ಕಾಂಗ್ರೆಸ್ ವಿರೋಧಿ ರಾಜಕಾರಣದ ಬೆಂಕಿ ನನ್ನೊಳಗೆ ಜ್ವಾಲಾಮುಖಿಯಂತೆ ಕುದಿಯುತ್ತಿತ್ತು. 1975ರ ಜೂನ್ 26 ಎಂದು ನೆನಪು. ಈ ಬಗ್ಗೆ ನನ್ನ ಆತ್ಮಚರಿತೆ ‘ನೇಗಿಲ ಗೆರೆಗಳು’ ಪುಸ್ತಕದಲ್ಲಿಯೂ ಉಲ್ಲೇಖವಿದೆ. ಆ ದಿನ ದಿಲ್ಲಿಯಿಂದ ಪ್ರತಿಪಕ್ಷಗಳ ಪ್ರಮುಖರಾದ ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ, ಮಧು ದಂಡವತೆ, ಎಸ್.ಎನ್. ಮಿಶ್ರಾ ಮುಂತಾದವರು ಬೆಂಗಳೂರಿಗೆ ಬಂದಿದ್ದರು.

ಇಲ್ಲಿಗೆ ಬಂದ ಕೂಡಲೇ ಪೊಲೀಸರು ಅವರನ್ನು ಬಂಧಿಸಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಇರಿಸಿದರು. ಅದೇ ಹೊತ್ತಿಗೆ ನಾನು ಜಮ್ಮು-ಕಾಶ್ಮೀರಕ್ಕೆ ಹೊರಟುನಿಂತಿದ್ದೆ. ಅಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಸಭೆ, ಹೋರಾಟಗಳಲ್ಲಿ ಭಾಗವಹಿಸುವುದು ನನ್ನ ಕಾರ್ಯಸೂಚಿ ಆಗಿತ್ತು. ಜೂನ್ 25ರಂದು ಇಂದಿರಾ ಗಾಂಧಿ ಅವರು ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಇಂಥ ಕಠೋರ ಆದೇಶಕ್ಕೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ ಎಂದು ತಿಳಿದಾಕ್ಷಣ ನನಗೆ ಆಘಾತವಾಯಿತು. ಜಮ್ಮು-ಕಾಶ್ಮೀರದ ಕಾರ್ಯಕ್ರಮದ ರದ್ದು ಮಾಡಿ ಬೆಂಗಳೂರಿಗೆ ವಾಪಸ್ ಬಂದೆ. ಇಲ್ಲಿಗೆ ಬರುತ್ತಿದ್ದಂತೆಯೇ ಪೊಲೀಸರು ಹುಡುಕಿಕೊಂಡು ಬಂದರು. ‘ನೀವು ಕಾಂಗ್ರೆಸ್ ವಿರೋಧಿ. ನಿಮ್ಮನ್ನು ಬಂಧಿಸುತ್ತಿದ್ದೇವೆ’ ಎಂದರು. ನಾನು ಪ್ರತಿರೋಧ ತೋರಲಿಲ್ಲ, ಯಾಕೆಂದರೆ ಇಂಥ ಕೆಟ್ಟ ಪರಂಪರೆಗೆ ಸಾತ್ವಿಕ ಪ್ರತಿಭಟನೆ ಹೆಚ್ಚು ಪರಿಣಾಮಕಾರಿ ಎಂದು ನಾನು ನಂಬಿದ್ದೆ. ನನ್ನನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರಿಸಿದರು. ಆಂತರಿಕ ಭದ್ರತಾ ಕಾಯ್ದೆ (ಮೀಸಾ ಕಾಯ್ದೆ) ಅಡಿಯಲ್ಲಿ ನನ್ನನ್ನು ಬಂಧಿಸಲಾಗಿತ್ತು.

ನಾನು ಈ ಅಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದೆ. ಅಂದು ವಿದ್ವತ್​ಪೂರ್ಣ ವಕೀಲರಾಗಿದ್ದ ಎನ್. ಸಂತೋಷ ಹೆಗ್ಡೆ ಅವರು ನನ್ನ ಪರ ವಕೀಲರಾಗಿದ್ದರು. ಹೆಚ್ಚೂಕಮ್ಮಿ 3 ತಿಂಗಳು ಸೆರೆವಾಸ ಅನುಭವಿಸಿದ ಮೇಲೆ ಕೋರ್ಟ್ ನನ್ನನ್ನು ಬಿಡುಗಡೆ ಮಾಡಿತು. ನನ್ನನ್ನು ಬಂಧಿಸಿದ್ದರ ಔಚಿತ್ಯವನ್ನು ನ್ಯಾಯಾಲಯ ಕಠಿಣ ಶಬ್ದಗಳಲ್ಲಿ ಪ್ರಶ್ನಿಸಿತು. ಇದಕ್ಕೆ ಕಾರಣಗಳನ್ನು ಕೊಡಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಸರಿ, ನ್ಯಾಯಾಲಯವೇನೋ ನನ್ನ ಬಿಡುಗಡೆಗೆ ಆದೇಶ ಕೊಟ್ಟಿತು. ನಾನು ಕಾರಾಗೃಹದಿಂದ ಬಿಡುಗಡೆಯಾಗಿ ಮನೆಗೆ ಬಂದು ಊಟ ಮಾಡುತ್ತಿದ್ದೆ. ಮತ್ತೆ ಪೊಲೀಸರು ನನ್ನನ್ನು ಮನೆಗೇ ಹುಡುಕಿಕೊಂಡು ಬಂದು ಬಂಧಿಸಿದರು. ಅದಕ್ಕೆ ಕಾರಣವಿಷ್ಟೇ, ನಾನು ಕಾಂಗ್ರೆಸ್ ಸೇರಬೇಕು ಎನ್ನುವುದು ಅವರ ಒತ್ತಡವಾಗಿತ್ತು. ಒತ್ತಡಕ್ಕೆ ಮಣಿಯುವ ಜಾಯಮಾನ ನನ್ನದಲ್ಲ. ಅಂದೂ ಇರಲಿಲ್ಲ, ಇವತ್ತೂ ಅದು ಸಾಧ್ಯವಿಲ್ಲ. ಅಷ್ಟೊತ್ತಿಗೆ ಕೆಲವರು ಬಂಧನದಿಂದ ತಪ್ಪಿಸಿಕೊಳ್ಳುವ ‘ಜಾಣ್ಮೆ’ಯನ್ನು ಪ್ರದರ್ಶಿಸತೊಡಗಿದ್ದರು. ಯಾವ ನಾಲಿಗೆಗಳು ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಅನುದಿನವೂ ನಿಂದಿಸುತ್ತಿದ್ದವೋ ಅದೇ ನಾಲಿಗೆಯುಳ್ಳ ಶರೀರಗಳು ಕಾಂಗ್ರೆಸ್ಸನ್ನು ಅಪ್ಪಿಕೊಳ್ಳಲು ಸಜ್ಜಾಗಿ, ಸಾಲಾಗಿ ನಿಂತಿದ್ದವು. ನನಗೆ ಇಂಥ ನಡವಳಿಕೆ ಅಸಾಧ್ಯವಾಗಿತ್ತು.

ನಿರ್ಧಾರ ಅಚಲವಾಗಿತ್ತು, ನನ್ನ ವಿಚಾರಗಳೂ ತೀಕ್ಷ ್ಣವಾಗಿದ್ದವು. 1975ರ ಜುಲೈ 4ರಂದು ಮತ್ತೆ ನನ್ನನ್ನು ಬಂಧಿಸಿ ಜೈಲಿಗೆ ಅಟ್ಟಿದರು. ಆಗಲೂ ನನ್ನ ಮೇಲೆ ಮೀಸಾ ಕಾಯ್ದೆಯನ್ನು ಪ್ರಯೋಗಿಸಲಾಯಿತು. ನಾನು ಹೆದರುವ ಪ್ರಮೇಯ ಇರಲಿಲ್ಲ. ವಿಚಿತ್ರವೆಂದರೆ ಜೈಲಿನಲ್ಲಿ ಕೈದಿಗಳನ್ನು ಎ, ಬಿ, ಸಿ ಎಂದು ವರ್ಗವಾರು ವಿಂಗಡಿಸಿ ಸೌಲಭ್ಯಗಳನ್ನು ನೀಡುತ್ತಿದ್ದರು. ನನಗೆ ‘ಬಿ’ ವರ್ಗ ಹಂಚಿಕೆ ಮಾಡಲಾಗಿತ್ತು. ನನಗೆ ಇಂಥ ವರ್ಗಗಳ ಬಗ್ಗೆ ಚಿಂತೆ ಇರಲಿಲ್ಲ. ಆಮೇಲೆ ನನಗೆ ಬಡ್ತಿ ಕೊಟ್ಟು ‘ಎ’ ವರ್ಗ ಕೊಡಲಾಯಿತು. ಜೈಲುವಾಸದಲ್ಲಿ ನಾನು ಅಲ್ಲಿದ್ದ ವ್ಯವಸ್ಥೆಗೆ ಹೊಂದಿಕೊಳ್ಳುವ ಪ್ರಯತ್ನ ಮಾಡಿದೆ. ಮನೆ ಊಟ ಕೇಳಲಿಲ್ಲ. ಸೌಲಭ್ಯ ಬಯಸಲಿಲ್ಲ. ಅವರಿಗೆ ನನ್ನ ಸಾತ್ವಿಕತೆಯನ್ನು ಸಹಿಸಿಕೊಳ್ಳುವುದು ಕಷ್ಟವಾಗಿತ್ತು. ಪ್ರತಿದಿನವೂ ನನ್ನನ್ನು ನೋಡಲು ಬರುತ್ತಿದ್ದ ಅಪಾರ ಸಂಖ್ಯೆಯ ಜನರಿಂದ ಹೊರಗಿನ ಮಾಹಿತಿಯೇನೋ ಸಿಗುತ್ತಿತ್ತು. ಮನೆಯವರು, ಬೆಂಬಲಿಗರು ಸೇರಿ ಎಲ್ಲರ ಕ್ಷೇಮ ಗೊತ್ತಾಗುತ್ತಿತ್ತು. ಆದರೆ, ಹೀಗೆ ದೊಡ್ಡ ಪ್ರಮಾಣದಲ್ಲಿ ನನ್ನನ್ನು ಅರಸಿ ಬರುತ್ತಿದ್ದ ಜನರಲ್ಲಿ ನನ್ನ ತಂದೆಯವರೂ ಇರುತ್ತಿದ್ದರು!

ಇದೊಂದು ಅಂಶ ನನ್ನಲ್ಲಿ ಇನ್ನಿಲ್ಲದ ವೇದನೆ ಉಂಟು ಮಾಡುತ್ತಿತ್ತು. ತಂದೆಯವರು ನನ್ನನ್ನು ನೋಡಿ ಅಳುತ್ತಿದ್ದರು. ಅವರ ಕಣ್ಣೀರು ನನಗೆ ಘಾಸಿ ಮಾಡುತ್ತಿತ್ತು. ಅವರು ಊರುಗೋಲು ಹಿಡಿದು ಜೈಲಿನ ಬಳಿಗೆ ಬರುತ್ತಿದ್ದರು. ನಾನು ಎಷ್ಟೇ ಧೈರ್ಯ, ಸಮಾಧಾನ ಹೇಳಿದರೂ ಅಪ್ಪ ಕೇಳುತ್ತಿರಲಿಲ್ಲ. ಮಾನಸಿಕ ವೇದನೆ ಅನುಭವಿಸುತ್ತಿದ್ದರು. ಅವರ ಪರಿಸ್ಥಿತಿ ನನಗೆ ದುಃಖ ಉಂಟು ಮಾಡುತ್ತಿತ್ತೇನೋ ಸರಿ. ಆದರೆ, ನಾನೇ ಆಯ್ಕೆ ಮಾಡಿಕೊಂಡಿದ್ದ ಕಠಿಣ ದಾರಿಗೆ ಬೆನ್ನು ತಿರುಗಿಸುವುದಾದರೂ ಹೇಗೆ? ಅದು ಸಾಧ್ಯವಿರಲಿಲ್ಲ. ಹೀಗಾಗಿ ಅನ್ನ ಸೇರುತ್ತಿರಲಿಲ್ಲ, ನಿದ್ರೆ ಕಷ್ಟವಾಗಿತ್ತು. ಅಪ್ಪನ ಬಗ್ಗೆ ವಿಪರೀತ ತಳಮಳವಿತ್ತು. ನನ್ನ ಜೈಲುವಾಸ ತಂದೆಯವರಿಗೆ ತೀವ್ರ ಆಘಾತವನ್ನೇ ಉಂಟು ಮಾಡಿತ್ತು. ‘ನಿಮ್ಮ ಮಗ ಜೈಲಿನಲ್ಲಿ ಇದ್ದಾನಂತೆ..!’ ಎಂದು ಯಾರಾದರೂ ಕೇಳಿದರೆ ಅಪ್ಪ ಕನಲಿಹೋಗುತ್ತಿದ್ದರಂತೆ.

ಒಟ್ಟಾರೆ, ತುರ್ತು ಪರಿಸ್ಥಿತಿಯ ಜೈಲುವಾಸ ನನ್ನ ದೃಷ್ಟಿಕೋನವನ್ನು ಬದಲಿಸಿತ್ತು. ನನ್ನ ಲೋಕದೃಷ್ಟಿಗೆ ಸಾಣೆ ಹಿಡಿದಿತ್ತು. ವಾಜಪೇಯಿ, ಆಡ್ವಾಣಿ, ಮಧು ದಂಡವತೆ ಅವರಂಥ ದಿಗ್ಗಜ ನಾಯಕರ ಜೊತೆ ನನ್ನ ರಾಜಕೀಯ ಸಂಘರ್ಷ ಬೆಸೆದುಕೊಂಡಿತ್ತು. ಜನತಾ ಪರಿವಾರದ ನನ್ನ ಸಂಗಾತಿ ರಾಮಕೃಷ್ಣ ಹೆಗಡೆ ಕೂಡ ನನ್ನೊಂದಿಗೆ ಕಾರಾಗೃಹದಲ್ಲಿದ್ದರು. ಮುಖ್ಯವಾಗಿ ಆಡ್ವಾಣಿ ಅವರೊಂದಿಗೆ ನನ್ನ ಮಾತು-ಮಂಥನ ಹೆಚ್ಚೇ ಇತ್ತು. ರಾಜಕೀಯ, ದೇಶದ ಆಗುಹೋಗು, ಕಾವೇರಿ ಕೊಳ್ಳದ ನೀರಾವರಿ ಸಮಸ್ಯೆ, ದೇವರಾಜ ಅರಸು ಸರ್ಕಾರದ ಬಗ್ಗೆ ವಿಶದವಾಗಿ ಚರ್ಚೆ ಮಾಡುತ್ತಿದ್ದೆವು. ಈ ನಡುವೆ ನನ್ನನ್ನು ಜೈಲಿನಿಂದ ಬಿಡುಗಡೆ ಮಾಡುವುದಕ್ಕೆ ದೇವರಾಜ ಅರಸು ಅವರು ಸಚಿವ ಸ್ಥಾನ ನೀಡುವ ಆಮಿಷ ಮುಂದು ಮಾಡಿದ್ದರು ಎಂಬುದು ನನ್ನ ಗಮನಕ್ಕೆ ಬಂತು. ನನಗೆ ಅಂತಹ ‘ವಿಮುಕ್ತಿ’ ಬೇಕಿರಲಿಲ್ಲ. ನಾನು ರಾಷ್ಟ್ರವಿರೋಧಿ ವ್ಯವಸ್ಥೆಯನ್ನು ಕಿತ್ತೆಸೆಯಲು ಹೋರಾಡುತ್ತಿದ್ದೇನೆಯೇ ಹೊರತು ಯಕಶ್ಚಿತ್ ಸಚಿವ ಸ್ಥಾನ ಪಡೆಯುವುದಕ್ಕಲ್ಲ ಎಂಬುದನ್ನು ಅರಿತಿದ್ದೆ. ರಾಜಿ ಮನಃಸ್ಥಿತಿ ನನ್ನ ಆತ್ಮಸಾಕ್ಷಿಗೆ ವಿರುದ್ಧವಾದುದು. ಅದು ಇಂದಿಗೂ ಹಾಗೆಯೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net