ವೃಕ್ಷಲೋಕದ ಮುತ್ತಜ್ಜನ ಅಂತರಂಗದ ಕಥೆ

Untitled design (1)
Published on

ಚಿಲಿ ದೇಶದಲ್ಲಿ ಕೆಲ ದಿನಗಳಿಂದ ಅಲ್ಲಿನ ರಾಷ್ಟ್ರೀಯ ಉದ್ಯಾನ ಅಲೆರ್ಸ್ ಕಾಸ್ಟೀರೊ ನಡುವೆ ಹೊಸ ರಸ್ತೆ ಮಾಡುವ ವಿಚಾರದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲಿನ ಸರ್ಕಾರಿ ವ್ಯಾಖ್ಯಾನದ ಪ್ರಕಾರ ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ರಸ್ತೆಯನ್ನು ನಿರ್ವಿುಸಲಾಗುತ್ತಿದೆಯಂತೆ. ಆದರೆ ಅಲ್ಲಿನ ಪರಿಸರವಾದಿಗಳು ಆ ಯೋಜನೆಯನ್ನು ವಿರೋಧಿಸಲು ಕಾರಣ- ಆ ರಸ್ತೆಯ ಹತ್ತಿರದಲ್ಲೇ ಸ್ಥಿತವಾಗಿರುವ ಒಂದು ಮರ. ಪಟಗಾಣಿಯನ್ ಸಿಪ್ರೆಸ್ ಎಂಬ ಜಾತಿಗೆ ಸೇರಿದ ಆ ಮರವು ಅಲ್ಲಿನ ಸ್ಥಳೀಯರ ಮತ್ತು ಪರಿಸರಪ್ರಿಯರ ಕಣ್ಮಣಿ.

ಆ ಮರವನ್ನು ತಮ್ಮ ಅಜ್ಜನಷ್ಟೇ ಪ್ರೀತಿಸುವ ಸ್ಥಳೀಯರು ಅದಕ್ಕಿಟ್ಟ ಹೆಸರು ಗ್ರಾನ್ ಅಬ್ಯೂಲೊ. ಸ್ಪಾ್ಯನಿಷ್ ಭಾಷೆಯಲ್ಲಿ ಮುತ್ತಜ್ಜ ಎಂದರ್ಥ. ಇದು ಬರೀ ಅಲ್ಲಿಯವರಿಗಷ್ಟೇ ಅಲ್ಲ ಪೂರ್ತಿ ಜಗಕ್ಕೇ ಮುತ್ತಜ್ಜ. ಏಕೆಂದರೆ ಗ್ರಾನ್ ಅಬ್ಯೂಲೊನ ವಯಸ್ಸು ಐದು ಸಾವಿರದ ನಾಲ್ಕು ನೂರು ವರ್ಷಗಳು. ಜಗತ್ತಿನ ಅತ್ಯಂತ ಹಿರಿಯ ಮರವೆಂಬ ಖ್ಯಾತಿಯ ಈ ಹೆಮ್ಮರದ ನೆರಳಿನಡಿ ಸಾವಿರಾರು ಕೋಟೆಗಳು ತಲೆ ಎತ್ತಿವೆ, ಉರುಳಿ ಹೋಗಿವೆ, ಭಾಷೆಗಳು ಹುಟ್ಟಿವೆ, ನಶಿಸಿವೆ. ಆದರೆ ಕಾಲನ ಎಲ್ಲ ರೂಪಗಳಿಗೂ ಸಾಕ್ಷಿಯಾಗಿ ಎದೆಯೆತ್ತಿ ಅದೇ ಡೌಲಿನಲ್ಲಿ ನಿಂತಿರುವ ಈ ಮುತ್ತಜ್ಜನ ಮೇಲೆ ಹಲವು ವರ್ಷಗಳಿಂದ ಹತ್ತು ಹಲವು ತಂಡಗಳು ಸಂಶೋಧನೆ ನಡೆಸುತ್ತಿವೆ.

ಪಟಗಾಣಿಯನ್ ಸಿಪ್ರೆಸ್ ಜಾತಿಯ ಮರಗಳು ದೀರ್ಘಾಯುಷ್ಯದ ಜೊತೆಗೆ ವಾತಾವರಣಕ್ಕೆ ಸೂಕ್ಷ್ಮವಾಗಿ ಸ್ಪಂದಿಸುವುದಕ್ಕೆ ಹೆಸರುವಾಸಿಯಾಗಿವೆ. ಇವುಗಳ ಕಾಂಡದಲ್ಲಿ ಕಂಡುಬರುವ ವೃತ್ತಗಳು ವರ್ಷವೊಂದರ ಹವಾಮಾನದ ರಿಪೋರ್ಟ್ ಕಾರ್ಡಗಳು. ಹೀಗಾಗಿ ಐದೂ ಚಿಲ್ಲರೆ ಸಾವಿರ ವರ್ಷದ ಸುದೀರ್ಘ ಹವಾಮಾನದ ರಹಸ್ಯವನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿರುವ ಈ ಮರವೊಂದು ಜೀವಂತ ವಿಶ್ವಕೋಶ. ಚಿಲಿಯ ದಟ್ಟಡವಿಯ ನಡುವೆ ಸ್ಥಿತವಾಗಿರುವ ಈ ಹೆಮ್ಮರವನ್ನು ಮೊದಲು ಗುರುತಿಸಿದ್ದು ಅನಿಬಾಲ್ ಎಂಬ ಅರಣ್ಯಾಧಿಕಾರಿ. 1972ರಲ್ಲಿ ಆ ಭಾಗದ ರೇಂಜರ್ ಆಗಿದ್ದ ಅನಿಬಾಲ್, ಅಡವಿಯಲ್ಲಿ ಸುತ್ತಾಡುವಾಗ ಈ ಮರವನ್ನು ಕಂಡರು. ಈ ಜಾತಿಯ ಮರಗಳು ಸಾವಿರ ವರ್ಷಕ್ಕೂ ಹೆಚ್ಚು ಕಾಲ ಬದುಕುವುದು ಅವರಿಗೆ ಗೊತ್ತಿದ್ದರೂ ಈ ಮರದಲ್ಲೇನೋ ವಿಶೇಷವನ್ನವರು ಕಂಡ ಕಾರಣ ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿ ಆ ಮರದ ವಯಸ್ಸನ್ನು ಅಳೆದಾಗ ಅದು ಐದು ಸಾವಿರದ ನಾಲ್ಕು ನೂರು ವರ್ಷ ಹಳೆಯ ಮರವೆಂದು ಗೊತ್ತಾಗಿದ್ದು.

ಅನಿಬಾಲ್ ಕಾಡುಮೇಡಿನಲ್ಲಿ ಅಲೆಯುತ್ತ ಅಲ್ಲಿನ ಅಪೂರ್ವ ವೃಕ್ಷಗಳ ಕುರಿತು ಸಂಶೋಧಿಸುತ್ತಿದ್ದಾಗ ಜೊತೆಗೆ ತಮ್ಮ ಮೊಮ್ಮಗ ಬೇರಿಚಿವಿಚ್ ಅವರನ್ನು ಕೂಡ ಕರೆದುಕೊಂಡು ಹೋಗುತ್ತಿದ್ದರು. ಇದು ಆ ಬಾಲಕನ ಮೇಲೂ ಪರಿಣಾಮ ಬೀರಿ ಅದನ್ನೇ ಆತ ತನ್ನ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿ ಆಯ್ದುಕೊಂಡು ಇದೀಗ ಅಲ್ಲಿಯ ಪ್ರಖ್ಯಾತ ಅರಣ್ಯಶಾಸ್ತ್ರಜ್ಞನಾಗಿದ್ದಾನೆ. ಗ್ರಾನ್ ಅಬ್ಯೂಲೊ ಮೇಲೆ ತನ್ನ ಸಂಶೋಧನೆಯನ್ನು ಮುಂದುವರೆಸಿರುವ ಬೇರಿಚಿವಿಚ್ ಆ ಮರದ ವೃತ್ತಗಳು ಹವಾಮಾನದಲ್ಲಿ ಆಗುವ ಬದಲಾವಣೆಗಳನ್ನು ತಿಳಿಸುವ ಜೊತೆಗೆ ಗತಕಾಲದಿಂದ ಈ ಭಾಗದಲ್ಲಿ ಸಂಭವಿಸಿರುವ ಪ್ರಾಕೃತಿಕ ಪ್ರಕೋಪಗಳ ಕುರಿತೂ ಬೆಳಕು ಚೆಲ್ಲುತ್ತವೆ ಎನ್ನುತ್ತಾರೆ. ಭೂಮಿಯ ಮೇಲಿನ ಶೇಕಡಾ ಮೂವತ್ಮೂರರಷ್ಟು ಇಂಗಾಲದ ಡೈ ಆಕ್ಸೈಡ್​ನ್ನು ಅರಣ್ಯಗಳು ಹೀರಿಕೊಳ್ಳುತ್ತವೆ. ಪರಿಸರದ ಮಾಲಿನ್ಯ ಹೆಚ್ಚುತ್ತಿದ್ದಂತೆಯೇ ಮರಗಳ ಈ ಹೀರಿಕೊಳ್ಳುವ ಕ್ಷಮತೆ ಬದಲಾಗುತ್ತದೆ. ಇದು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನೂ ಕಾಂಡದಲ್ಲಿನ ವೃತ್ತಗಳು ಹೇಳುತ್ತವೆ. ಹೀಗಾಗಿ ಇವು ಒಂಥರಾ ಶಿಲಾಶಾಸನಗಳು.

ಮರಗಳ ವಯಸ್ಸನ್ನು ನಿರ್ಧರಿಸಲು ಹಲವು ವಿಧಾನಗಳಿವೆ. ಅದರಲ್ಲಿ ಅತಿ ಸರಳ ಮತ್ತು ಹೆಚ್ಚು ಬಳಸಲ್ಪಡುವುದು ಅವುಗಳ ಅಡ್ಡಸೀಳಿದ ಕಾಂಡಗಳ ಮೇಲ್ಮೈಯಲ್ಲಿ ಕಂಡುಬರುವ ವೃತ್ತಗಳನ್ನು ಎಣಿಸುವ ಮೂಲಕ. ಆದರೆ ಕೆಲವೊಮ್ಮೆ ಹವಾಮಾನ ವೈಪರೀತ್ಯ ಅಥವಾ ರೋಗಗಳ ಕಾರಣ ಈ ಲೆಕ್ಕಾಚಾರ ಕೈಕೊಡುವ ಸಾಧ್ಯತೆಯುಂಟು. ಇಂತಹುದರಲ್ಲಿ ಮತ್ತು ಜೀವಂತ ಮರಗಳಲ್ಲಿ ಅವುಗಳಿಗೆ ಹಾನಿ ಮಾಡದೇ ಲೆಕ್ಕಾಚಾರ ಮಾಡುವ ಮತ್ತೊಂದು ಜನಪ್ರಿಯ ವಿಧಾನವೆಂದರೆ ಮರದ ಕೆಳಗೆ ನಿಂತು ಎದೆಯೆತ್ತರಕ್ಕೆ ಅಂದರೆ ಮರದ ಬುಡದಿಂದ ಐದು ಅಡಿ ಎತ್ತರದಲ್ಲಿ ಅದರ ವ್ಯಾಸವನ್ನು ಅಳೆಯುವುದರ ಮೂಲಕ ಮರದ ಜಾತಿಯ ಮೇಲೆ ಅದರ ವಯಸ್ಸಿಗೆ ಅನುಗುಣವಾಗಿ ವ್ಯಾಸ ನಿರ್ಧಾರವಾಗುವುದರಿಂದ ಈ ಮೂಲಕವೂ ಮರಗಳ ವಯಸ್ಸನ್ನು ಪತ್ತೆ ಹಚ್ಚಬಹುದು. ಕಾರ್ಬನ್ ಡೇಟಿಂಗ್ ಮತ್ತೊಂದು ಜನಪ್ರಿಯ ವಿಧಾನ. ಆದರೆ ಇದನ್ನು ಬಳಸುವುದು ಸತ್ತ ಮರಗಳ ವಯಸ್ಸನ್ನು ಅಳೆಯಲು. ಮರಗಳು ತಮ್ಮ ಜೀವಿತಕಾಲದಲ್ಲಿ ವಾತಾವರಣದಿಂದ ದ್ಯುತಿ ಸಂಶ್ಲೇಷಣೆಯ ಮೂಲಕ ಕಾರ್ಬನ್ 14ನ್ನು ಉತ್ಪಾದಿಸುತ್ತವೆ. ಮರಗಳ ಮರಣದ ನಂತರ ಈ ಪ್ರಕ್ರಿಯೆ ನಿಂತು ಕಾರ್ಬನ್ 14 ಸಾರಜನಕವಾಗಿ ಬದಲಾಗುತ್ತದೆ. ಈ ಬದಲಾವಣೆಯ ವೇಗ ಪೂರ್ವ ನಿರ್ಧರಿತವಾಗಿರುವ ಕಾರಣ ಮರವೊಂದರಲ್ಲಿ ಉಳಿದಿರುವ ಕಾರ್ಬನ್ 14 ಯಾನೆ ಇಂಗಾಲದ ಪ್ರಮಾಣವನ್ನು ಕಂಡು ಹಿಡಿಯುವುದರ ಮೂಲಕ ಮರಗಳ ಮರಣದ ಸಮಯವನ್ನು ಅಳೆಯುತ್ತಾರೆ.

ಚಿಲಿಯ ರಾಷ್ಟ್ರೀಯ ಉದ್ಯಾನದ ಪಕ್ಕದಲ್ಲಿ ಹಾದುಹೋಗುವ ಪ್ರಸ್ತಾವಿತ ರಸ್ತೆಯ ಬಗ್ಗೆ ವಿರೋಧಕ್ಕೆ ಹಲವು ಕಾರಣಗಳುಂಟು. ಮೊದಲಿಗೆ ಪರಿಣತರ ಅನುಭವದಂತೇ ಕಾಡಿನ ಪಕ್ಕದಲ್ಲಿ ಹಾದು ಹೋಗುವ ರಸ್ತೆಗಳಿಂದ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆ ಬಹಳಷ್ಟು ಹೆಚ್ಚಾಗುತ್ತದೆ. ಜೊತೆಗೆ ಅಲ್ಲಿ ಬರುವ ಪ್ರವಾಸಿಗರ ಮೋಜು ಮಸ್ತಿ ಈ ಅರಣ್ಯದಲ್ಲಿ ಎಲ್ಲವನ್ನೂ ನೋಡುತ್ತ ತಲೆತಲಾಂತರದಿಂದ ನಿಂತಿರುವ ಹೆಮ್ಮರಕ್ಕೆ ಹಾನಿ ಮಾಡುವ ಸಾಧ್ಯತೆ ಖಂಡಿತ ಹೆಚ್ಚಾಗುತ್ತದೆ. ಆದರೆ ಪರಿಸರವಾದಿಗಳ ಪ್ರಕಾರ, ಇದರ ಹಿಂದೆ ಲ್ಯಾಟಿನ್ ಅಮೆರಿಕಾದ ಮರಗಳ್ಳರ ಲಾಬಿ ಕೆಲಸ ಮಾಡುತ್ತಿದೆಯಂತೆ. ಇಲ್ಲಿನ ಮರಗಳನ್ನು ಕಡಿದು ಅವುಗಳಿಂದ ಪಲ್ಪ್ ಮಾಡುವ ದಂಧೆಕೋರರು ಈ ಅಭಯಾರಣ್ಯದ ಮರಗಳ ಮೇಲೆ ಕಣು ್ಣಾಕಿದ್ದಾರೆ ಎಂಬುದು ಅವರ ಆರೋಪ. ಈ ಹೋರಾಟ ಯಾವ ಅಂತ್ಯವನ್ನು ಕಾಣಲಿದೆ ಎಂದು ಎಲ್ಲ ಪರಿಸರಪ್ರೇಮಿಗಳು ಕಾತರದಿಂದ ಅಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ.

ಅಡಗೂಲಜ್ಜಿ ಕಥೆಗಳಲ್ಲಿ ವೃಕ್ಷ ದೇವತೆಯು ಕೆಳಗೆ ಮಲಗಿದವನಿಗೆ ದಿವ್ಯಜ್ಞಾನವನ್ನೋ, ಕಿವಿಮಾತನ್ನೋ ಹೇಳುವಂತಹ ಸನ್ನಿವೇಶಗಳನ್ನು ನಾವು ಸಾಕಷ್ಟು ಕೇಳಿದ್ದೇವೆ. ಅಂತಹ ಕಲ್ಪನೆಯು ಇದೀಗ ನಿಜವಾಗುತ್ತಿದೆ. ಐರ್ಲೆಂಡಿನ ಡಬ್ಲಿನ್​ನ ಟ್ರಿನಿಟಿ ಕಾಲೇಜಿನ ಆವರಣದಲ್ಲಿ ಸಂಶೋಧಕರ ತಂಡವೊಂದು ಇಂತಹುದೊಂದು ಪ್ರಥಮವನ್ನು ಸಾಧಿಸಿದೆ. ಅಲ್ಲಿನ ನೂರೈವತ್ತು ವರ್ಷ ಪ್ರಾಯದ ಓಕ್ ವೃಕ್ಷವೊಂದಕ್ಕೆ ಸೂಕ್ಷ್ಮ ಸಂವೇದಕಗಳನ್ನು ಅಳವಡಿಸಿ ಅವುಗಳನ್ನು ಡಿಜಿಟಲ್ ಸಂದೇಶಗಳನ್ನಾಗಿ ಪರಿವರ್ತಿಸಿ ಆನಂತರ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಧ್ವನಿಯ ರೂಪದಲ್ಲಿ ಕೇಳುಗರೊಡನೆ ಸಂವಹನ ನಡೆಸುವಂತಹ ವ್ಯವಸ್ಥೆಯನ್ನು ಈ ತಂಡವು ರೂಪಿಸಿದೆ. ನಮ್ಮ ಗೃಹ ಬಳಕೆಯ ವಿದ್ಯುತ್ ಶಕ್ತಿಯೆಂದರೆ ಎಲೆಕ್ಟ್ರಾನ್​ಗಳ ಹರಿವು ಎಂಬುದು ಗೊತ್ತೇ ಇದೆ. ಇದೇ ರೀತಿ ಜೈವಿಕ ವಿದ್ಯುತ್ ಮಾನವನೂ ಸೇರಿದಂತೆ ಮರಗಿಡಗಳಂತಹ ಜೀವಿಗಳಲ್ಲಿ ಹರಿಯುತ್ತದೆ. ಇದಕ್ಕೊಂದು ಸರಳ ಉದಾಹರಣೆಯೆಂದರೆ ನರಮಂಡಲದಿಂದ ಅಂಗಾಂಶಗಳಿಗೆ ಹರಿಯುವ ಸಂದೇಶಗಳು. ಅಸಲಿಗೆ ಈ ಜೈವಿಕ ವಿದ್ಯುತ್ ಅಯಾನುಗಳ ಹರಿವು ಮತ್ತು ಜೀವಕೋಶಗಳು ತಮ್ಮತಮ್ಮಲ್ಲಿ ಸಂವಹನವನ್ನು ನಡೆಸುವ ಸಂಭಾಷಣೆಯಾಗಿದೆ.

ಮರಗಿಡಗಳು ಹೊರಗಿನ ವಾತಾವರಣಕ್ಕೆ ಸೂಕ್ಷ್ಮಸಂವೇದಿಯಾಗಿದ್ದು ಹೊರಗಿನ ತಾಪಮಾನ ಗಾಳಿ ತೇವಾಂಶ ಆರ್ದ್ರತೆಗೆ ಸ್ಪಂದಿಸಿ ಅದಕ್ಕೆ ತಕ್ಕರೀತಿಯಲ್ಲಿ ಜೈವಿಕ ವಿದ್ಯುತ್ ಸಂದೇಶಗಳನ್ನು ಉತ್ಪಾದಿಸುತ್ತವೆ. ಈ ವಿದ್ಯುತ್ ಅತ್ಯಂತ ದುರ್ಬಲವಾಗಿರುವ ಕಾರಣಕ್ಕೆ ಇದನ್ನಳೆಯುವುದು ಒಂದು ಕಷ್ಟದ ಕಾರ್ಯ. ಅರಣ್ಯಶಾಸ್ತ್ರಜ್ಞರು ಕಾಡಿನಲ್ಲಿರುವ ಮರಗಳಿಗೆ ಸಂವೇದಕಗಳನ್ನು ಅಳವಡಿಸಿ ಇಂತಹ ಸಂದೇಶಗಳನ್ನು ಮತ್ತೆಲ್ಲೋ ಕೂತು ಕಾಡಿನ ಮತ್ತು ಅಲ್ಲಿನ ಪರಿಸರದ ಆರೋಗ್ಯವನ್ನು ಅಳೆಯುವತ್ತ ಚಿತ್ತ ಹರಿಸಿದ್ದಾರೆ. ಆದರೆ ಈ ಸಂವೇದಕಗಳು ಕಾರ್ಯ ನಿರ್ವಹಿಸಲು ಅತ್ಯಗತ್ಯವಾದ ವಿದ್ಯುತ್ ಹೇಗೆ ನೀಡುವುದು ಎಂಬ ಜಟಿಲ ಪ್ರಶ್ನೆಗೆ ಉತ್ತರ ಹುಡುಕುವತ್ತ ಇದೀಗ ಅವರ ಪ್ರಯತ್ನ ಸಾಗಿದೆ. ಏಕೆಂದರೆ ಬ್ಯಾಟರಿಯನ್ನು ಬಳಸಿದರೆ ಆಗಾಗ ಬದಲಿಸುತ್ತಿರಬೇಕು. ಸೌರಶಕ್ತಿಯು ದಟ್ಟ ಕಾಡೊಳಗೆ ತಲುಪುವುದು ಕಷ್ಟಕರ. ಹೀಗಾಗಿ ಇವೆರಡನ್ನು ಬಿಟ್ಟು ಮೂರನೇ ಆಯ್ಕೆಯ ಹುಡುಕಾಟ ಇದೀಗ ಜಾರಿಯಲ್ಲಿದೆ.

ಡಬ್ಲಿನ್​ನ ಮಾತನಾಡುವ ಮರವು ಇತ್ತೀಚಿನ ಚಾಟ್ ಬಾಟ್ ತರಹದ ವ್ಯವಸ್ಥೆಯೇನಲ್ಲ. ಇಲ್ಲಿ ಮರಕ್ಕೆ ಹೊರಗಿನ ವಾತಾವರಣ ಮತ್ತು ಮರದ ಭಾವನೆಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಅದು ಸೂಕ್ತ ಉತ್ತರವನ್ನು ಕೊಡುತ್ತದೆ. ಉದಾಹರಣೆಗೆ, ಸುಡು ಬೇಸಿಗೆಯಲ್ಲಿ ಮರಕ್ಕೆ ಅದರ ಮನಸ್ಸಿನ ಭಾವನೆಗಳ ಕುರಿತು ಕೇಳಿದರೆ ಅದು ‘ಭಯಂಕರ ಬಾಯಾರಿಕೆಯಾಗ್ತಿದೆ ಸ್ವಲ್ಪ ನೀರು ಕೊಡಿ’ ಎಂದು ಕೇಳಬಹುದು. ಅದೇ ಚುಮುಚುಮು ಚಳಿಯಲ್ಲಿ ಹೇಗಿದೆ ಎಂದರೆ ‘ಇವತ್ತು ವಾತಾವರಣ ತುಂಬಾ ಆಹ್ಲಾದಕಾರಿಯಾಗಿದೆಯಲ್ವಾ’ ಎಂದೆಲ್ಲ ಹೇಳುತ್ತದೆ. ಕಳೆದ ಮಳೆಗಾಲ ಹೇಗಿತ್ತು ಎಂದರೆ ‘ಈ ಬಾರಿ ಸ್ವಲ್ಪ ಜಾಸ್ತಿಯೇ ಮಳೆನಪ್ಪಾ’ ಎಂತೆನ್ನುತ್ತದೆ. ಈ ಎಲ್ಲ ಉತ್ತರಗಳು ಮರದಲ್ಲಿ ಹರಿಯುತ್ತಿರುವ ಜೈವಿಕ ವಿದ್ಯುತ್ತನ್ನು ಸಂವೇದಕಗಳಿಂದ ತಿಳಿದುಕೊಂಡು ಅದನ್ನು ಈ ವ್ಯವಸ್ಥೆಯಲ್ಲಿ ಅಳವಡಿಸಿರುವ ಸರ್ವರ್​ಗಳಲ್ಲಿ ಸಂಗ್ರಹಿಸಿ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಶ್ರೋತೃಗಳ ಜೊತೆಗೆ ಸಂವಹಿಸಲಾಗುತ್ತದೆ. ಮರವೇ ಮಾತಾಡುವ ವ್ಯವಸ್ಥೆ ನಿಜಕ್ಕೂ ಒಂದು ಅದ್ಭುತ ಕಲ್ಪನೆ. ಸದ್ಯಕ್ಕೆ ಇದನ್ನು ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಪರಿಸರ ಮತ್ತು ಅರಣ್ಯಗಳ ಕುರಿತು ಅರಿವು ಮೂಡಿಸಲು ರೂಪಿಸಲಾಗಿದೆ. ಮುಂದೆ ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರೆ ನಿಜಕ್ಕೂ ಅಧ್ಯಯನಕ್ಕೆ ಖಂಡಿತ ಬಹಳಷ್ಟು ಉಪಯೋಗವಾಗಲಿದೆ.

ಒಮ್ಮೆ ಯೋಚಿಸಿ ನೋಡಿ. ಇದೇ ವ್ಯವಸ್ಥೆಯನ್ನು ಚಿಲಿ ದೇಶದ ಮುತ್ತಜ್ಜ ಗ್ರಾನ್ ಅಬ್ಯೂಲೊಗೆ ಅಳವಡಿಸಿದರೆ ಅದು ಏನನ್ನಬಹುದು? ‘ಅಯ್ಯೋ ಕ್ರೂರಿಗಳೆ, ಈ ಮುದುಕನಿಗೆ ಯಾಕೋ ಗೋಳೋಯ್ಕೋತಿದ್ದೀರಾ’ ಅನ್ನಬಹುದಾ? ಅಥವಾ ಥೇಟ್ ಮುತ್ತಜ್ಜನಂತೆ ‘ನನ್ನನ್ನು ಸಾಯ್ಸಿ ನಿಮ್ಮ ಕೊನೆಯನ್ನು ನೀವೇ ತಂದುಕೊಳ್ತಿದ್ದೀರೋ’ ಅಂತ ಕಿವಿಮಾತು ಹೇಳಬಹುದಾ?

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net