

ವಾರದ ಹಿಂದೆ ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಅಮೆರಿಕ ಒಟ್ಟುಗೂಡಿ ಸೇನಾಕೂಟ ರಚಿಸಿಕೊಂಡವು. ಚೀನಾ ವಿರುದ್ಧದ ಈ ಕೂಟಕ್ಕೆ ಆ ಮೂರೂ ದೇಶಗಳ ಹೆಸರುಗಳ ಮೊದಲಕ್ಷರಗಳನ್ನು ಸೇರಿಸಿ ರೂಪಿಸಿದ ‘ಆಕಸ್’ (AUKUS: Australia-United Kingdom-United States) ಎಂಬ ಹೆಸರನ್ನಿಡಲಾಗಿದೆ. ಇದರೊಂದಿಗೆ ಆ ಕಮ್ಯೂನಿಸ್ಟ್ ರಾಷ್ಟ್ರದೊಂದಿಗೆ ಈ ಮೂರು ರಾಷ್ಟ್ರಗಳು ಕಳೆದ ಒಂದೂವರೆ ವರ್ಷದಿಂದ ನಡೆಸುತ್ತಿದ್ದ ಮಾತಿನ ಹಾಗೂ ಆರ್ಥಿಕ ಯುದ್ಧ ಇನ್ನೊಂದು ಮಜಲಿಗೇರಿದೆ. ಹಾಗೆ ನೋಡಿದರೆ ಪಶ್ಚಿಮ ಪೆಸಿಫಿಕ್ ವಲಯದಲ್ಲಿ ಅಥವಾ ಇತರ ಪ್ರದೇಶಗಳಲ್ಲಿ ಸೇನಾಕೂಟಗಳು ಹುಟ್ಟಿ ಸಾಯುವುದನ್ನು ದ್ವಿತೀಯ ಮಹಾಯುದ್ದ ಅಂತ್ಯವಾದಾಗಿನಿಂದಲೂ ನಾವು ನೋಡುತ್ತಲೇ ಇದ್ದೇವೆ. ಹಾಗೆ, ಅಮೆರಿಕ ಉತ್ತರ ಅಟ್ಲಾಂಟಿಕ್ನ ಆಚೀಚಿನ ತನ್ನ ನೇಹಿಗರನ್ನು ಒಟ್ಟುಗೂಡಿಸಿ ಸೃಷ್ಟಿಸಿದ ಮೊದಲ ಸೇನಾಕೂಟ ‘ನ್ಯಾಟೋ’ ಅಂದರೆ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೇಷನ್. 1949ರಲ್ಲಿ ಅಸ್ತಿತ್ವಕ್ಕೆ ಬಂದ ನ್ಯಾಟೋದ ಉದ್ದೇಶ ‘ಯುರೋಪ್ನಲ್ಲಿ ಜರ್ಮನಿಯನ್ನು ಕೆಳಗೆ ಒತ್ತಿಹಿಡಿಯುವುದು, ಸೋವಿಯತ್ ಯೂನಿಯನ್ ಅನ್ನು ಯುರೋಪ್ನಿಂದ ಹೊರಗಿಡುವುದು ಮತ್ತು ಅಮೆರಿಕವನ್ನು ಯುರೋಪ್ಗೆ ತರುವುದು’ ಎಂದಾಗಿತ್ತು. ನ್ಯಾಟೋಗೆ ಪ್ರತಿಯಾಗಿ ಸೋವಿಯತ್ ಯೂನಿಯನ್ ತನ್ನ ಮಿತ್ರದೇಶಗಳನ್ನು ಒಟ್ಟುಗೂಡಿಸಿ ಸೇನಾಕೂಟವನ್ನೇನೂ ರಚಿಸಲಿಲ್ಲ. ಅದಕ್ಕೆ ಅದು ಕೊಟ್ಟ ಕಾರಣ ನ್ಯಾಟೋದ ಗಡಿಗಳು ತನ್ನ ಹಾಗೂ ತನ್ನ ಕಮ್ಯೂನಿಸ್ಟ್ ಮಿತ್ರದೇಶಗಳ ಗಡಿಗಳನ್ನು ಸ್ಪರ್ಶಿಸುವುದಿಲ್ಲ ಎಂದು.
ಅಂತಾರಾಷ್ಟ್ರೀಯ ರಾಜಕಾರಣವನ್ನು ವಿದ್ವಾಂಸರು ವಿವಿಧ ಕಾರಣಗಳನ್ನೊಡ್ಡಿ ಒಂದಕ್ಕಿಂತ ಹೆಚ್ಚು ಸಲ ಎರಡಾಗಿ ವಿಭಾಗಿಸುತ್ತಾರೆ. ಹಾಗೆ ವಿಭಾಗಿಸುವ ಒಂದು ಬಗೆ ಪ್ರಜಾಪ್ರಭುತ್ವವಾದಿ ರಾಜಕಾರಣ ಮತ್ತು ಸರ್ವಾಧಿಕಾರಿ ರಾಜಕಾರಣ ಎಂದು. ಪ್ರಜಾಸತ್ತಾತ್ಮಕ ರಾಜಕಾರಣದಲ್ಲಿ ಭಾಗಿಯಾಗಿರುವ ರಾಷ್ಟ್ರಗಳೆಲ್ಲವೂ ಸಮಾನವಾದುವು, ಅವುಗಳಿಗೆ ತಾತ್ವಿಕವಾಗಿ ಯಾವ ನಾಯಕನೂ ಇರುವುದಿಲ್ಲ. ಹೀಗಾಗಿ ಯಾವುದೇ ಒಂದು ದೇಶ ಅದೆಷ್ಟೇ ದೊಡ್ಡದಾಗಿದ್ದರೂ, ಬಲಶಾಲಿಯಾಗಿದ್ದರೂ ಅದರ ಮಾತಿಗೆ ಇತರ ದೇಶಗಳು ಜೀ ಹುಜೂರ್ ಎನ್ನಬೇಕಾಗಿಲ್ಲ. ಹೀಗಾಗಿ ಇಲ್ಲಿ ಉಳಿದೆಲ್ಲರೂ ತನ್ನ ಮಾತು ಕೇಳಬೇಕು ಎಂದು ದೇಶವೊಂದು ಬಯಸಿದರೆ ಅವುಗಳನ್ನು ಲಿಖಿತ ಒಪ್ಪಂದದಲ್ಲಿ ಕಟ್ಟಿಹಾಕಬೇಕಾಗುತ್ತದೆ. ಆದರೆ ಸರ್ವಾಧಿಕಾರಿ ರಾಜಕಾರಣದಲ್ಲಿ ಅಂತಹ ಲಿಖಿತ ಒಪ್ಪಂದದ ಅಗತ್ಯವಿರುವುದಿಲ್ಲ. ಅಲ್ಲಿ ನಾಯಕ ಅಂತ ಒಂದು ದೇಶವಿರುತ್ತದೆ ಮತ್ತು ಉಳಿದೆಲ್ಲ ದೇಶಗಳು ಅದರ ಹಿಂಬಾಲಕರಷ್ಟೇ. ನಾಯಕ ದೇಶದ ಮಾತು ಅಲ್ಲಿ ವೇದವಾಕ್ಯ. ಅದನ್ನು ಮೀರುವ ಸ್ವಾತಂತ್ರ್ಯ ಹಿಂಬಾಲಕರಿಗಿರುವುದೇ ಇಲ್ಲ. ಅಮೆರಿಕ ಮತ್ತದರ ಪಶ್ಚಿಮ ಯುರೋಪಿಯನ್ ಸಹಯೋಗಿಗಳ ನಡುವಿನ ಸಂಬಂಧಗಳು ಪ್ರಜಾಪ್ರಭುತ್ವೀಯ ರಾಜಕಾರಣದಡಿ ಬರುತ್ತವೆ, ಆ ಕಾರಣದಿಂದ ಅಲ್ಲಿ ಒಟ್ಟಾಗಿ ಕೆಲಸ ಮಾಡಬೇಕೆಂದರೆ ಲಿಖಿತ ಒಪ್ಪಂದದ ಅಗತ್ಯವಿರುತ್ತದೆ. ಅದರಿಂದಾಗಿಯೇ ನ್ಯಾಟೋ ಕೂಟವನ್ನು ಒಪ್ಪಂದದ ಮೂಲಕ ಸ್ಥಾಪಿಸಬೇಕಾಯಿತು. ಇದಕ್ಕೆ ವಿರುದ್ಧವಾಗಿ ಸೋವಿಯತ್ ಯೂನಿಯನ್ ಮತ್ತದರ ಪೂರ್ವ ಯುರೋಪಿಯನ್ ಸಹಯೋಗಿಗಳ ನಡುವಿನ ಸಂಬಂಧಗಳು ಸರ್ವಾಧಿಕಾರಿ ರಾಜಕಾರಣಕ್ಕೆ ಉದಾಹರಣೆಯಾಗುತ್ತವೆ. ಅಲ್ಲಿ ಸೋವಿಯತ್ ಯೂನಿಯನ್ ನಿರಂಕುಶ ನಾಯಕ, ಪೂರ್ವ ಯುರೋಪ್ನ ಕಮ್ಯೂನಿಸ್ಟ್ ದೇಶಗಳೆಲ್ಲವೂ ಸ್ವಂತಿಕೆಯೇ ಇಲ್ಲದ ಹಿಂಬಾಲಕರು ಅಷ್ಟೇ. ಹೇಳಿಕೇಳಿ ಅವೆಲ್ಲ ಮಾಸ್ಕೋದ ಉಪಗ್ರಹಗಳು ಎಂದೇ ‘ಖ್ಯಾತಿ’ ಹೊಂದಿದ್ದವು! ಯಾವ ಲಿಖಿತ ಒಪ್ಪಂದವೂ ಇಲ್ಲದೆ ಸೋವಿಯತ್ ಯೂನಿಯನ್ ಅವುಗಳನ್ನು ಬೇಕಾದಂತೆ ಕುಣಿಸಬಹುದಾಗಿತ್ತು!
1955ರಲ್ಲಿ ಪಶ್ಚಿಮ ಜರ್ಮನಿ ನ್ಯಾಟೋಗೆ ಸೇರಿದಾಗ ಅದರ ಮೂಲಕ ನ್ಯಾಟೋದ ಗಡಿ ತನ್ನ ಸಹಯೋಗಿಗಳಾದ ಪೂರ್ವ ಜರ್ಮನಿ ಮತ್ತು ಜೆಕೋಸ್ಲೊವೇಕಿಯಾಗಳ ಗಡಿಗಳನ್ನು ರ್ಸ³ಸುತ್ತದೆ ಎಂದು ಹೇಳಿ (ವಾಸ್ತವವಾಗಿ ತನ್ನ ಹಿಂದಿನ ಮಾತಿನ ಬಂಧಿಯಾಗಿ) ಸೋವಿಯತ್ ಯೂನಿಯನ್ ತನ್ನ ಸಹಯೋಗಿಗಳನ್ನು ಪೋಲ್ಯಾಂಡ್ನ ರಾಜಧಾನಿ ವಾರ್ಸಾದಲ್ಲಿ ಒಟ್ಟುಗೂಡಿಸಿ ‘ಮಾತುಕತೆ’ (?) ನಡೆಸಿ ‘ವಾರ್ಸಾ ಪ್ಯಾಕ್ಟ್’ ಎಂಬ ಸೇನಾಕೂಟ ರಚಿಸಿತು. 1989-91ರಲ್ಲಿ ವಾರ್ಸಾ ಪ್ಯಾಕ್ಟ್ನ ಸದಸ್ಯ ದೇಶಗಳೆಲ್ಲ ಕಮ್ಯೂನಿಸಂ ಅನ್ನು ಕಸದ ಬುಟ್ಟಿಗೆಸೆದು, ಅದು ಸಾಲದು ಎಂಬಂತೆ ಸೋವಿಯತ್ ಯೂನಿಯನ್ ಛಿದ್ರವಾಗಿ ಇತಿಹಾಸ ಸೇರಿದಾಗಿ ವಾರ್ಸಾ ಪ್ಯಾಕ್ಟ್ ಸದ್ದಿಲ್ಲದೆ ಸಾವನ್ನಪ್ಪಿತು. ಅದಕ್ಕೆ ವಿರುದ್ಧವಾಗಿ ನ್ಯಾಟೋ ತನ್ನ ಹೊಸ ವೈರಿ ಇಸ್ಲಾಮಿಕ್ ಮೂಲಭೂತವಾದ ಎಂದು ಘೊಷಿಸಿ ಅದಕ್ಕನುಗುಣವಾಗಿ ತನ್ನ ಕಾರ್ಯಕ್ಷೇತ್ರವನ್ನು ಪಶ್ಚಿಮ ಏಷ್ಯಾಗೆ ವಿಸ್ತರಿಸಿತು. ಮುಂದಿನ ಒಂದು ದಶಕದಲ್ಲಿ ಅದು ಮಧ್ಯ ಏಷ್ಯಾಗೂ ಕಾಲಿಟ್ಟಿತು. ನ್ಯಾಟೋ ಸೇನೆ ಇದೇ ಆಗಸ್ಟ್ 31ರವರೆಗೂ ಅಫ್ಘಾನಿಸ್ತಾನದಲ್ಲಿದ್ದದ್ದನ್ನು ನೀವು ಮರೆತಿರಲಾರಿರಿ.
ನ್ಯಾಟೋ ಹುಟ್ಟಿದ ಆರು ತಿಂಗಳಲ್ಲಿ ಚೀನಾ ಕಮ್ಯೂನಿಸ್ಟರ ವಶವಾಗಿ ಅವರು ಸೋವಿಯತ್ ಕಮ್ಯೂನಿಸ್ಟ್ರ ಜತೆಗೂಡಿದ್ದರಿಂದ ತಮ್ಮ ಸುರಕ್ಷೆಗೆ ಅಪಾಯವಿದೆಯೆಂದು ರ್ತಸಿದ ಪೂರ್ವದ ಶ್ವೇತ ರಾಷ್ಟ್ರಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಅಮೆರಿಕದ ಜತೆಗೂಡಿ 1951ರಲ್ಲಿ ‘ಆಂಜ್ಯುಸ್’ (ANZUS: Australia-New Zealand-United States) ಎಂಬ ಸೇನಾಕೂಟವನ್ನು ರಚಿಸಿಕೊಂಡವು. ಈ ವಲಯದಲ್ಲಿ ಅದು ಮೊದಲ ಸೇನಾಕೂಟ. ಮುಂದಿನ ನಾಲ್ಕು ವರ್ಷಗಳಲ್ಲಿ ಚೀನಾ ಆಗ್ನೇಯ ಮತ್ತು ಪೂರ್ವ ಏಷ್ಯಾದ ದೇಶಗಳಲ್ಲಿನ ಮುಖ್ಯವಾಗಿ ಇಂಡೋ-ಚೀನಾದ ಕಮ್ಯೂನಿಸ್ಟ್ ಹೋರಾಟಗಾರರ ಬೆನ್ನಿಗೆ ನಿಂತು, ಆ ಮೂಲಕ ಇಡೀ ಪ್ರದೇಶವನ್ನು ಕೆಂಬಾವುಟದಡಿ ತರುವ ಮತ್ತು ಈ ವಲಯದಿಂದ ಅಮೆರಿಕವನ್ನು ಹೊರಗಟ್ಟುವ ಯೋಜನೆ ರೂಪಿಸಿದಾಗ ವಿಸõತವಾದ ಹೊಸದೊಂದು ಸೇನಾಕೂಟ ರಚಿಸುವ ಅಗತ್ಯವನ್ನು ಅಮೆರಿಕ ಮನಗಂಡಿತು. ಪರಿಣಾವಾಗಿ 1955ರಲ್ಲಿ ಅಸ್ತಿತ್ವಕ್ಕೆ ಬಂದದ್ದೇ ‘ಸಿಯಾಟೋ’ (SEATO: South East Asia Treaty Organization). 1975ರಲ್ಲಿ ವಿಯೆಟ್ನಾಂ ಯುದ್ಧ ಅಂತ್ಯಗೊಂಡು ವಿಯೆಟ್ನಾಂ ಜತೆಗೆ ಕಾಂಬೋಡಿಯಾ ಮತ್ತು ಲಾವೋಸ್ ಸಹ ಕಮ್ಯೂನಿಸ್ಟ್ ವಶವಾದಾಗ ಸಿಯಾಟೋದ ಉದ್ದೇಶ ವಿಫಲವಾಗಿ ಅದು ಸದ್ದಿಲ್ಲದೆ ಮರೆಯಾಗಿಹೋಯಿತು.
‘ಆಕಸ್’ ಈ ವಲಯದಲ್ಲಿ ಸೃಷ್ಟಿಯಾಗುತ್ತಿರುವ ಮೂರನೆಯ ಸೇನಾಕೂಟ. ಹಿಂದಿನ ಎರಡು ಸೇನಾಕೂಟಗಳಂತೆ ಇದೂ ಚೀನಾದ ವಿರುದ್ಧವಾಗಿದೆ. ಇದನ್ನು ಅಧ್ಯಕ್ಷ ಜೋ ಬೈಡೆನ್, ಪ್ರಧಾನಮಂತ್ರಿಗಳಾದ ಬೋರಿಸ್ ಜಾನ್ಸನ್ ಹಾಗೂ ಸ್ಕಾಟ್ ಮಾರಿಸನ್ ಬಾಯಿಬಿಟ್ಟು ಹೇಳದೇ ಇದ್ದರೂ ಅವರು ತಮ್ಮ ಮೂರೂ ದೇಶಗಳ ನಡುವಿನ ಮುಂದಿನ ಸಹಕಾರದ ಸ್ವರೂಪವನ್ನು ವಿವರಿಸಿದ ಬಗೆಯೇ ಆಕಸ್ನ ಉದ್ದೇಶವನ್ನು ಜಗತ್ತಿಗೆ ಸಾರಿತು. ನಂತರ ಅಮೆರಿಕದ ರಕ್ಷಣಾ ಸಚಿವ ಲಾಯ್್ಡ ಆಸ್ಟಿನ್ ಆಕಸ್ನ ಗುರಿ ‘ಅಂತಾರಾಷ್ಟ್ರೀಯ ನೀತಿನಿಯಮಗಳಿಗೆ ಗೌರವ ನೀಡದೆ, ಸುತ್ತಲಿನ ದೇಶಗಳ ಹಿತಾಸಕ್ತಿಗಳಿಗೆ ಹಾನಿಯೆಸಗುವ ಕೃತ್ಯದಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಚೀನಾ’ ಎಂದು ಸ್ಪಷ್ಟ ಶಬ್ದಗಳಲ್ಲಿ ಸಾರಿದರು.
ಚೀನಾ ಕಳೆದೊಂದು ದಶಕದಲ್ಲಿ ವಿಶ್ವ ವ್ಯಾಪಾರದ ಪ್ರಮುಖ ಸಮುದ್ರ ಮಾರ್ಗವಾಗಿರುವ ದಕ್ಷಿಣ ಚೀನಾ ಸಮುದ್ರದ ಶೇಕಡ 90 ಭಾಗವನ್ನು ತನ್ನದೆಂದು ಹೇಳಿಕೊಳ್ಳುತ್ತಿದೆ, ತೀರದ ಇತರ ದೇಶಗಳಿಗೆ ಅಡಿಗಡಿಗೆ ಸೇನಾ ಬೆದರಿಕೆ ಒಡ್ಡುತ್ತಿದೆ, ‘ಬೆಲ್ಟ್ ಆಂಡ್ ರೋಡ್’ ಎಂಬ ಚಂದದ ಮುಖವಾಡದ ಕರಾಳ ನವವಸಾಹತುಶಾಹಿ ಯೋಜನೆ ಮೂಲಕ ಸುತ್ತಲಿನ ಸಣ್ಣಪುಟ್ಟ ದೇಶಗಳನ್ನು ಸಾಲಸಂಕೋಲೆಯಲ್ಲಿ ಸಿಲುಕಿಸಿಕೊಂಡು ಅವುಗಳ ನೆಲವನ್ನು ಕಬಳಿಸುತ್ತಿದೆ. ಲಾಯ್್ಡ ಜಾರ್ಜ್ ಬೆರಳು ತೋರಿಸಿದ ಚೀನೀ ಕುಕೃತ್ಯಗಳ ಒಂದು ಪುಟ್ಟ ಪಟ್ಟಿ ಇದು. ಹೀಗೆ ಶಾಂತಿಕಂಟಕನಾಗಿ ಬೆಳೆಯುತ್ತಿರುವ ಚೀನಾ ವಿರುದ್ಧ ನೊಂದ ಹಾಗೂ ಜವಾಬ್ದಾರಿಯುತ ದೇಶಗಳು ಒಂದುಗೂಡಿ ಪ್ರತಿರೋಧ ಒಡ್ಡುವುದು ಅಗತ್ಯವಾಗಿ ಆಗಬೇಕಾಗಿದ್ದ ಕೆಲಸ.
ಆಕಸ್ ಒಪ್ಪಂದದ ಪ್ರಕಾರ ಆಸ್ಟ್ರೇಲಿಯಾಗೆ ಅಣುಶಕ್ತಿಚಾಲಿತ ಜಲಾಂತರ್ಗಾಮಿಗಳ ಪಡೆಯನ್ನೇ ಅಮೆರಿಕ ಒದಗಿಸಲಿದೆ. ಪುಟ್ಟ ನ್ಯೂಕ್ಲಿಯರ್ ರಿಯಾಕ್ಟರ್ ಅನ್ನು ಹೊಂದಿರುವ ಇಂಥ ಜಲಾಂತರ್ಗಾಮಿಯೊಂದು ನಾವಿಕರಿಗೆ ಆಹಾರ ಹಾಗೂ ಕುಡಿಯುವ ನೀರಿನ ಅಗತ್ಯಪ್ರಮಾಣದ ದಾಸ್ತಾನು ಹೊಂದಿದ್ದರೆ ವಾರ ತಿಂಗಳುಗಳಿರಲಿ, ವರ್ಷಗಟ್ಟಲೇ ಸಮುದ್ರದಾಳದಲ್ಲಿ ಕಾರ್ಯನಿರ್ವಹಿಸುತ್ತಿರಬಹುದು. ಇಂತಹ ಸಬ್ವೆುರೀನ್ಗಳ ತಂತ್ರಜ್ಞಾನವನ್ನು ಅಮೆರಿಕ ಇದುವರೆಗೆ ಹಂಚಿಕೊಂಡಿರುವುದು ಬ್ರಿಟನ್ ಜತೆ ಮಾತ್ರ, 1958ರಲ್ಲಿ. ಒಪ್ಪಂದದ ಪ್ರಕಾರ ಅಮೆರಿಕನ್ ಯುದ್ಧವಿಮಾನಗಳು ಆಸ್ಟ್ರೇಲಿಯಾದಲ್ಲಿ ನೆಲೆಗೊಳ್ಳಲಿವೆ. ಉತ್ತರದ ಡಾರ್ವಿನ್ ಬಂದರುನಗರದಲ್ಲಿ ಅಮೆರಿಕನ್ ಸೈನಿಕರೂ ಬರಲಿದ್ದಾರೆ. ಅಂದರೆ ಆಸ್ಟ್ರೇಲಿಯಾದ ರಕ್ಷಣೆಗೆ ಅಮೆರಿಕ ನಿಲ್ಲಲಿದೆ.
ಜಗತ್ತಿಗೆ ಕರೊನಾ ಮಾರಿಯನ್ನು ತಂದಿಟ್ಟ ಚೀನಾ ವಿರುದ್ಧ ತನಿಖೆ ನಡೆಸಬೇಕು ಎಂದು ಆಸ್ಟ್ರೇಲಿಯಾದ ಪ್ರಧಾನಿ ಮಾರಿಸನ್ ಹೇಳತೊಡಗಿದಾಗಿನಿಂದಲೂ ಚೀನಾ ಆ ದೇಶದ ಬಾರ್ಲಿ ಕಲ್ಲಿದ್ದಲು ಮುಂತಾದ ರಫ್ತುವಸ್ತುಗಳಿಗೆ ತನ್ನ ಬಾಗಿಲು ಮುಚ್ಚಿದ್ದಲ್ಲದೆ ದಕ್ಷಿಣದ ಆ ದೇಶವನ್ನು ಕೀಳುಭಾಷೆಯಲ್ಲಿ ನಿಂದಿಸಿದೆ. ಜತೆಗೆ ಸೇನಾ ಬೆದರಿಕೆಯನ್ನೂ ಒಡ್ಡುತ್ತಿರುವ ಆತಂಕಕಾರಿ ಸುದ್ದಿಗಳೂ ಬಂದದ್ದುಂಟು. ಆಕಸ್ ಒಪ್ಪಂದದ ಮಹತ್ವ ಅರಿವಾಗುವುದು ಇಲ್ಲಿ. ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ ಆಂಜ್ಯುಸ್ ಒಪ್ಪಂದವನ್ನೇ ಮತ್ತಷ್ಟು ಸದೃಢಗೊಳಿಸಬಹುದಿತ್ತಲ್ಲ, ಚೀನಾದಿಂದ ಅಪಾಯ ಎದುರಿಸುತ್ತಿರುವ ಆಗ್ನೇಯ ಏಷ್ಯಾದ ದೇಶಗಳನ್ನು ಆಕಸ್ನಿಂದ ಏಕೆ ಹೊರಗಿಡಲಾಗಿದೆ ಎಂಬ ಪ್ರಶ್ನೆಗಳೂ ಎದ್ದಿವೆ. ಇವುಗಳಿಗೆ ಉತ್ತರ ಸುಲಭ.
ಆಂಜ್ಯುಸ್ನ ಮೂರನೆಯ ಸದಸ್ಯ ನ್ಯೂಜಿಲ್ಯಾಂಡ್ ಕೋವಿಡ್ ಮಾರಿ ಆರಂಭವಾದ ಮೇಲೂ ಹಲವು ಸಂದರ್ಭದಲ್ಲಿ ಚೀನಾದ ಪರವಾಗಿ ನಿಂತು ತಾನು ಸಹಯೋಗಕ್ಕೆ ಅರ್ಹವಲ್ಲ ಎಂದು ತೋರಿಸಿಕೊಂಡಾಗಿದೆ. ಆಗ್ನೇಯ ಏಷ್ಯಾ ದೇಶಗಳ ಬಗ್ಗೆ ಹೇಳುವುದಾದರೆ, ಚೀನಾದ ಘಾತಕ ಶಕ್ತಿಯನ್ನು ಕುಂದಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರ್ಥಿಕ ಸಮರ ಆರಂಭಿಸಿದಾಗ ಈ ದೇಶಗಳು ಅಮೆರಿಕದ ಜತೆ ಸಹಕರಿಸಲಿಲ್ಲ. ಚೀನಾದಿಂದ ಅಪಾಯವಿದ್ದಾಗ್ಯೂ ಅದರ ಪರವಾಗಿಯೇ ಇವು ಒಂದಕ್ಕಿಂತ ಹೆಚ್ಚುಬಾರಿ ನಿಂತವು ಮತ್ತು ತಾವು ನಂಬಿಗಸ್ತ ಸಹಯೋಗಿಯಾಗಲಾರೆವು ಎಂದು ಅಮೆರಿಕ ಮತ್ತು ಆಸ್ಟ್ರೇಲಿಯಾಗೆ ತೋರಿಸಿಕೊಂಡವು.
ಆಕಸ್ನಿಂದ ತನ್ನನ್ನು ಹೊರಗಿಟ್ಟ ಬಗ್ಗೆ ಫ್ರಾನ್ಸ್ ಕುಪಿತಗೊಂಡಿದೆ. ಅದನ್ನು ಅಧ್ಯಕ್ಷ ಇಮ್ಯಾನುಯೇಲ್ ಮ್ಯಾಕ್ರೋ ವ್ಯಕ್ತಪಡಿಸಿಯೂ ಇದ್ದಾರೆ. ವಿದೇಶ ಮಂತ್ರಿ ಜೀನ್-ಯ್ವೆಸ್ ಲೆ ದ್ರಿಯಾ ಅಂತೂ ಆಕಸ್ ಒಪ್ಪಂದ ಫ್ರಾನ್ಸ್ನ ಬೆನ್ನಿಗೆ ಇರಿಯುವ ಕೃತ್ಯ ಎಂದು ಕಟುಶಬ್ದದಲ್ಲಿ ಟೀಕಿಸಿದ್ದಾರೆ. ಆದರೆ ಆಕಸ್ನಿಂದ ಫ್ರಾನ್ಸ್ ಅನ್ನು ಹೊರಗಿಟ್ಟಿದ್ಕಕ್ಕೆ ಕಾರಣಗಳು ಎಲ್ಲರಿಗೂ ಕಾಣುವಂತೇ ಇವೆ. ಚೀನಾದ ಕುಕೃತ್ಯಗಳನ್ನು ನೋಡಿಯೂ ಆ ದೇಶಕ್ಕೆ ಧಕ್ಕೆಯೊದಗುವ ಆರ್ಥಿಕ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಅಧ್ಯಕ್ಷ ಮ್ಯಾಕ್ರೋ ಇದೇ ಫೆಬ್ರವರಿಯಲ್ಲಿ ಹೇಳಿ ತಾವು ಅಮೆರಿಕ ಮತ್ತು ಆಸ್ಟ್ರೇಲಿಯಾ ಜತೆಗಿಲ್ಲ ಎಂದು ಸಾರಿದ್ದರು. ಫ್ರಾನ್ಸ್ನ ಸಿಟ್ಟಿಗೆ ಇರುವ ನಿಜವಾದ ಕಾರಣವೆಂದರೆ ಆಸ್ಟ್ರೇಲಿಯಾಗೆ ಸಬ್ವೆುರೀನ್ಗಳನ್ನು ಮಾರುವ ತನ್ನ 66 ಬಿಲಿಯನ್ ಡಾಲರ್ಗಳ ಭಾರಿ ಮೊತ್ತದ ವ್ಯವಹಾರ ಆಕಸ್ನಿಂದಾಗಿ ರದ್ದಾಗಿರುವುದು.
ಯುರೋಪ್ನಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯಾಗೆ ಸಿಕ್ಕಿರುವ ನಂಬಿಗಸ್ತ ಸಹಯೋಗಿ ಬ್ರಿಟನ್ ಮಾತ್ರ. ದಕ್ಷಿಣ ಚೀನಾ ಸಮುದ್ರದ ದೇಶಗಳನ್ನು ಚೀನಾ ಬೆದರಿಸತೊಡಗಿದಾಗ ಮತ್ತು ಸಮುದ್ರಮಾರ್ಗಕ್ಕೆ ಧಕ್ಕೆಯೊಡ್ಡುವ ಸೂಚನೆಯನ್ನೂ ನೀಡಿದಾಗ ಅಮೆರಿಕ ತನ್ನ ಯುದ್ಧನೌಕೆಗಳನ್ನು ಅಲ್ಲಿಗೆ ಕಳುಹಿಸಿತಷ್ಟೆ. ಆಗ ಅದರ ಜತೆಗೂಡಿದ್ದು ಬ್ರಿಟನ್. ಇಲ್ಲಿ ಜರ್ಮನಿಯ ನಗೆಪಾಟಲಿನ ನಡೆಯನ್ನೊಮ್ಮೆ ಉಲ್ಲೇಖಿಸಬೇಕು. ಯುರೋಪಿಯನ್ ಯೂನಿಯನ್ನ ನಾಯಕಿಯಾಗಿ ಜರ್ಮನಿಯ ಚಾನ್ಸಲರ್ ಏಂಗೆಲಾ ಮೆರ್ಕೆಲ್ ಕೋವಿಡ್ ಸಮಯದಲ್ಲೇ ಚೀನಾ ಪರವಾದ ಹಲವಾರು ನಿರ್ಣಯಗಳನ್ನು ಕೈಗೊಂಡದ್ದೀಗ ಇತಿಹಾಸ. ದಕ್ಷಿಣ ಚೀನಾ ಸಮುದ್ರಕ್ಕೆ ತಾವೂ ಒಂದು ಯುದ್ಧನೌಕೆ ಕಳುಹಿಸಿದರೂ ಚೀನಾದ ‘ಮನ ನೋಯಿಸಬಾರದೆಂದು’ ನೌಕೆಯನ್ನು ಮೊದಲಿಗೆ ಶಾಂಘೖ ಬಂದರಿಗೆ ಕಳುಹಿಸಲು ನೋಡಿದರು. ಅದಕ್ಕೆ ಚೀನೀಯರು ಪರವಾನಗಿ ನಿರಾಕರಿಸಿದ್ದೂ ಆಯಿತು. ಇಂತಹ ಅರೆಮನಸ್ಸಿನ ಸಹಯೋಗಿಗಳಿಂದ ಏನೂ ಉಪಯೋಗವಿಲ್ಲ ಎಂದು ಅಮೆರಿಕ, ಆಸ್ಟ್ರೇಲಿಯಾ ಮತ್ತು ಬ್ರಿಟನ್ ಸ್ಪಷ್ಟವಾಗಿಯೇ ಅರಿತಿವೆ.
ಆಕಸ್ ವಿಷಯದಲ್ಲಿ ಗಂಭೀರವಾಗಿ ಯೋಚಿಸಬೇಕಾದ ವಿಷಯವೆಂದರೆ ಅವಸರದಲ್ಲಿ ಅವತರಿಸಿದಂತಿರುವ ಅದು ತನ್ನ ಗುರಿ ಸಾಧಿಸುವಂತೆ ಸದಸ್ಯ ದೇಶಗಳು, ಮುಖ್ಯವಾಗಿ ‘ಬೈಡೆನ್ರ ಅಮೆರಿಕ’ ನೋಡಿಕೊಳ್ಳುತ್ತದೆಯೇ ಎನ್ನುವುದು.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)