

ಪ್ರಾರ್ಥನೆಯೆಂದರೆ ನಮ್ಮ ಬಯಕೆಗಳನ್ನು ಭಗವಂತನಲ್ಲಿ ಬೇಡುವುದು ಮಾತ್ರವಲ್ಲ- ಭಗವಂತನೊಡನೆ ಪ್ರೀತಿಯಿಂದ ಮಾತನಾಡುವುದು ಮತ್ತು ಅವನ ಮಹಾತ್ಮೆಯನ್ನು ಹೃನ್ಮನಗಳಿಂದ ವ್ಯಕ್ತಪಡಿಸುವುದು ಕೂಡ. ಪ್ರಾರ್ಥನೆ ಸತತವಾಗಿದ್ದು ಅದು ವ್ಯಾಕುಲತೆಯಿಂದ ಒಡಗೂಡಿದರೆ ಅದೇ ಧ್ಯಾನವಾಗಿ ಪರಿಣಮಿಸುವುದು. ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದಂತೆ ಕೇವಲ ಪ್ರಾರ್ಥನೆಯಿಂದ ಜೀವಾತ್ಮನು ಪರಮಾತ್ಮನೊಡನೆ ತಾದಾತ್ಮ್ಯ ಹೊಂದಲು ಸಾಧ್ಯ. ಅಲ್ಲದೆ ಭಕ್ತಿಪೂರ್ಣ ತೀವ್ರತೆಯ ಪ್ರಾರ್ಥನೆಯಿಂದ ಭಕ್ತ ಅವನ ಆತ್ಮಸ್ವರೂಪನಾದ ಇಷ್ಟದೇವತೆಯನ್ನು ಸಾಕ್ಷಾತ್ಕರಿಸಬಹುದು ಎಂಬ ಆಶ್ವಾಸನೆ ಕೊಡುತ್ತಾರೆ. ಯೋಗ್ಯ ಸ್ನೇಹಮಯ ಮತ್ತು ಸೌಹಾರ್ದಮಯ ಮಾತಿನ ಮೂಲಕ ಸಂಬಂಧ ಗಾಢವಾಗುವುದನ್ನು ಮನುಷ್ಯ ವ್ಯವಹಾರದಲ್ಲೇ ನೋಡುತ್ತೇವೆ. ಬಸ್ಸಿನಲ್ಲೋ, ರೈಲಿನಲ್ಲೋ ನಮ್ಮ ಜೊತೆ ಪ್ರಯಾಣಿಸುವವರೊಡನೆ ಮಾತನಾಡುವ ಹವ್ಯಾಸವಿದ್ದರೆ ಒಂದು ಸಹಜವಾದ ಸಂಬಂಧ ಬೆಳೆಯುತ್ತದೆ. ನಾವು ಮಾತನಾಡದೆ ಹಾಗೇ ಉಳಿದರೆ ಅವರು ಅಪರಿಚಿತರಾಗಿಯೇ ಉಳಿಯುತ್ತಾರೆ. ಹಾಗೆಯೇ ಭಗವಂತನೊಡನೆ ಸಖ್ಯ, ಸೇವಕ ಮತ್ತು ಮಾತೃಭಾವದಲ್ಲಿ ಸಂಬಂಧ ಬೆಳೆಸುವುದು ಭಕ್ತಿಮಾರ್ಗದ ಒಂದು ಮುಖ್ಯ ಸಾಧನೆ. ಪ್ರವಚನದ ಮೂಲಕ ಧರ್ಮಬೋಧನೆ ಮಾಡಿ ಧರ್ಮಪ್ರಸಾರದ ಕಾರ್ಯ ಮತ್ತು ಸತ್ಸಂಗವನ್ನು ಒದಗಿಸುವುದು ಎಲ್ಲ ಧರ್ಮಗಳಲ್ಲಿ ಸಹಜವಾಗಿದೆ. ಒಬ್ಬ ಕ್ರೖೆಸ್ತ ಸಂತ ಹೇಳುವಂತೆ ‘ಭಗವಂತನ ಬಗ್ಗೆ ಮಾತನಾಡುವುದಕ್ಕಿಂತ ಭಗವಂತನೊಡನೆ ಮಾತನಾಡುವುದು ಉತ್ತಮ’. ನಾವು ಇತರರೊಡನೆ ಭಗವಂತನ ಬಗ್ಗೆ, ಆಧ್ಯಾತ್ಮಿಕ ವಿಷಯಗಳನ್ನು ಬಹಳ ಸ್ಪೂರ್ತಿಯಿಂದ ಮಾತನಾಡುತ್ತೇವೆ. ಆದರೆ ಏಕಾಂತದಲ್ಲಿರುವಾಗ ಅಷ್ಟೇ ಆಸಕ್ತಿಯಿಂದ ಭಗವತ್ ಚಿಂತನೆ ಮಾಡಲಾರೆವು.
ಪ್ರಾರ್ಥನೆಯು ಭಗವಂತನನ್ನು ಉದ್ದೇಶಿಸಿ ಮಾಡುವ ಸರಳ, ಸುಲಭ ಮಾನಸಿಕ ಪ್ರಕ್ರಿಯೆ. ಪ್ರಾರ್ಥನೆಯನ್ನು ಪೂರ್ಣ ಅರಿವಿನಿಂದ ಸಾಮಾನ್ಯ ಜನರು ಮಾಡಲು ಸಾಧ್ಯವಾಗುವುದು. ಅದು ಯಾಂತ್ರಿಕ ಮತ್ತು ಅಪ್ರಜ್ಞೆಯ ಮನಸ್ಸಿನ ಸ್ತರವನ್ನು ಸಹಜವಾಗಿ ಪ್ರವೇಶಿಸಲಾರದು. ಯಾಕೆಂದರೆ, ಪ್ರಾರ್ಥನೆಯು ಪ್ರಜ್ಞಾಪೂರ್ವಕವಾಗಿಯೇ ಭಗವಂತನನ್ನು ಕುರಿತು ನಾವು ಮಾಡುವ ಬೇಡಿಕೆ. ಆದುದರಿಂದ ಅದು ಮನಸ್ಸಿನ ಅಪ್ರಜ್ಞೆಯ (Unconscious and Mechanical) ಸ್ತರವನ್ನು ಪ್ರವೇಶಿಸಲಾರದು. ಆದರೆ, ಜಪ ಮತ್ತು ಧ್ಯಾನ ಪ್ರಾಥಮಿಕ ಹಂತದಲ್ಲಿಯೇ ಏಕಾಗ್ರತೆ ಮತ್ತು ಪೂರ್ಣ ಅರಿವಿನಿಂದ ಮಾಡುವುದು ಸುಲಭವಲ್ಲ. ಅದಕ್ಕೆ ಸತತವಾದ ಅಭ್ಯಾಸ ಮತ್ತು ಮಾರ್ಗದರ್ಶನ ಬೇಕು. ಆದರೆ, ಪ್ರಾರ್ಥನೆ ಎಂಬುದು ಅರಿವಿನಿಂದ ಮತ್ತು ಏಕಾಗ್ರತೆಯಿಂದ ಮಾಡಲು ಸಾಮಾನ್ಯ ಜನರಿಗೂ ಸಾಧ್ಯವಾಗುವುದು.
ಪ್ರಾರ್ಥನೆಯಲ್ಲಿ ಎರಡು ವಿಧ- (1) ಪ್ರಾಪಂಚಿಕ ಮತ್ತು ಆಧ್ಯಾತ್ಮಿಕ. ಅರ್ಥಾರ್ಥಿ ಭಕ್ತರು ಹಣ, ಆರೋಗ್ಯ, ಪ್ರಾಪಂಚಿಕ ಯಶಸ್ಸಿಗಾಗಿ ದೇವರನ್ನು ಪ್ರಾರ್ಥಿಸುವುದು ಸಹಜ. ಅವರು ಭಕ್ತಿಭಾವದಿಂದ ಪ್ರಾರ್ಥಿಸಿದರೆ ಆ ಭಕ್ತಿ ಮೂಲಕ ಕಾಲಾಂತರದಲ್ಲಿ ಪ್ರಾಪಂಚಿಕತೆಯಲ್ಲಿ ಆಸಕ್ತಿ ಕಡಿಮೆಯಾಗಿ, ದೇವರ ಕಡೆ ಮನಸ್ಸು ತಿರುಗುವುದು. (2) ಆಧ್ಯಾತ್ಮಿಕ ಪ್ರಾರ್ಥನೆ: ಆಧ್ಯಾತ್ಮಿಕ ಸಾಧಕನು ಭಗವಂತನನ್ನು ಜ್ಞಾನ, ಭಕ್ತಿ ವೈರಾಗ್ಯಗಳಿಗಾಗಿ ಪ್ರಾರ್ಥಿಸುತ್ತಾನೆ. ಅವನು ಭಗವಂತನಿಂದ ತನಗಾಗಿ ಏನನ್ನೂ ಬಯಸದೆ ಭಗವಂತನನ್ನೇ ಬಯಸುತ್ತಾನೆ. ಅವನಿಗೆ ಪ್ರಪಂಚಕ್ಕಿಂತ ಭಗವಂತನೇ ಹೆಚ್ಚು ಸತ್ಯ ಎಂಬ ವಿವೇಕ ಪ್ರಾಪ್ತವಾದುದರಿಂದ ತಾತ್ಕಾಲಿಕ ಮತ್ತು ಪ್ರಾಪಂಚಿಕ ವಿಷಯಗಳನ್ನು ಪ್ರಾರ್ಥಿಸಲು ಬಯಸಲಾರನು. ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದಂತೆ- ರಾಜನ ಬಳಿ ಒಬ್ಬ ಪ್ರಜೆಗೆ ಸ್ನೇಹಮಯ ಸಂಬಂಧ ಪ್ರಾಪ್ತವಾಗಿದ್ದರೂ ಅವನೊಡನೆ ಎರಡು ದೊಡ್ಡ ಕುಂಬಳಕಾಯಿ ಬೇಡದೆ ಅರ್ನ್ಯಘವಾಗಿರತಕ್ಕಂಥ ಸಂಪತ್ತನ್ನು ಬೇಡುವುದು ಬುದ್ಧಿವಂತನ ಲಕ್ಷಣ.
ಪ್ರಾರ್ಥನೆ ಅನೇಕ ರೂಪಗಳಲ್ಲಿರಬಹುದು. ಸ್ತೋತ್ರ, ಭಜನೆ ಅಥವಾ ಮಾತಿನ ರೂಪದಲ್ಲಿರಬಹುದು ಹಾಗೂ ಕೇವಲ ಮಾನಸಿಕವಾಗಿ, ಆಂತರಿಕವಾಗಿಯೂ ಇರಬಹುದು. ಹಿಂದಿನ ಋಷಿಮುನಿಗಳು ಸ್ತೋತ್ರಗಳ ಮೂಲಕ ತಮ್ಮ ಭಗವದ್ ವ್ಯಾಕುಲತೆಯನ್ನು ಮತ್ತು ಭಗವಂತನ ಮಹಾತ್ಮ್ಯ ಜ್ಞಾನವನ್ನು ಮನಮೋಹಕ ಕಾವ್ಯರೂಪದಲ್ಲಿ ಹರಿಸಿರುವರು. ಅನೇಕ ಸಾಧಕರು ಇವುಗಳ ಮೂಲಕ ಭಗವಂತನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇನ್ನೂ ಕೆಲವು ಸಂತರು ಭಕ್ತಿಪರವಶತೆಯಿಂದ ಹೃದಯದ ಹಂಬಲವನ್ನು ಮನೋಜ್ಞವಾದ ಹಾಡುಗಳ ಮೂಲಕ ದೇದೀಪ್ಯಮಾನಗೊಳಿಸಿರುವರು. ಇವೆಲ್ಲವು ಸಾಮಾನ್ಯ ಜನರೂ ನಿತ್ಯಜೀವನದಲ್ಲಿ ಅನುಸರಿಸಬಹುದಾದ ಭಕ್ತಿಮಾರ್ಗದ ಮುಖ್ಯ ಸಾಧನೆಗಳು.
ಪ್ರಾರ್ಥನೆ ಆಳವಾದಷ್ಟೂ ಮಾತು ನಿಂತುಹೋಗುವುದು. ನಿಜವಾದ ಭಕ್ತರು ಸಾಮಾನ್ಯವಾಗಿ ಒಂದು ಪ್ರಾರ್ಥನೆಯ ಭಾವವನ್ನು ಯಾವಾಗಲೂ ಹೊಂದಿರುತ್ತಾರೆ. ಅವರು ಏನೇ ಮಾಡುತ್ತಿರಲಿ ಅವರ ಒಳಮನಸ್ಸು ಭಗವಂತನನ್ನು ಪ್ರಾರ್ಥಿಸುತ್ತಿರುತ್ತದೆ. ಹೀಗೆ ಪ್ರಾರ್ಥನೆ ಅವರ ಜೀವನದ ಉಸಿರಾಗಿರುತ್ತದೆ. ಸೋದರಿ ನಿವೇದಿತಾ ಅವರು ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯ ಪ್ರಸ್ತಾವನೆಯಲ್ಲಿ ಹೇಳಿದಂತೆ-“It is this which adds its crowning significance to our master’s life... no distinction henceforth between sacred and secular to labour is to pray. To conquer is to renounce. Life is itself religion...
ಪ್ರಾರ್ಥನೆ ಮಾಡಿದರೆ ಭಗವಂತ ಓಗೊಡುವನೇ? ನಾವು ಪ್ರಾರ್ಥಿಸಿರುವುದನ್ನು ಕೊಡುವನೇ? ಎಂಬುದು ಮುಖ್ಯವಲ್ಲ. ಭಗವಂತ ತನ್ನದೇ ಆದ ರೀತಿಯಲ್ಲಿ ನಮ್ಮ ಪ್ರಾರ್ಥನೆಯನ್ನು ಈಡೇರಿಸುವನು. ನಾವು ಅದನ್ನು ಒಂದು ಆಧ್ಯಾತ್ಮಿಕ ಸಾಧನೆಯ ಅಂಗವಾಗಿ ಅನುಸರಿಸಬೇಕು. ಸಾಮಾನ್ಯವಾಗಿ ನಮ್ಮ ಮನಸ್ಸು ಕೆಳಮಟ್ಟದಲ್ಲಿರುತ್ತದೆ ಮತ್ತು ವಿಷಯಾಸಕ್ತವಾಗಿರುತ್ತದೆ. ತೀವ್ರ ಪ್ರಾರ್ಥನೆ ನಮ್ಮ ಕೆಳಗಿನ ಪ್ರಜ್ಞೆಯನ್ನು ಮೇಲೇರಿಸಿ ಅದು ಹೃದಯದಲ್ಲಿ ನೆಲೆಗೊಳ್ಳುವಂತೆ ಮಾಡುವುದು. ಹೀಗೆ ಭಗವಂತನನ್ನು ಹೃದಯದಲ್ಲಿ ಧ್ಯಾನಿಸುವುದಕ್ಕೆ ಪ್ರಾರ್ಥನೆ ಸಹಾಯಕವಾಗುವುದು. ಇದನ್ನು ನಾವು ಪ್ರಾರ್ಥನಾಯೋಗವೆನ್ನಬಹುದು.
ಧ್ಯಾನದ ಅಭ್ಯಾಸ ಮತ್ತು ಮಹತ್ವ: ಭಾರತದ ಸಹಸ್ರಾರು ವರ್ಷದ ಆಧ್ಯಾತ್ಮಿಕ ಸಂಸ್ಕೃತಿಯ ನಿಜವಾದ ತಿರುಳು ಧ್ಯಾನ. ನಿಜವಾದ ಧ್ಯಾನದ ಅನುಷ್ಠಾನದಿಂದ ಮಾತ್ರ ಒಬ್ಬ ಸಾಧಕನ ಜೀವನದಲ್ಲಿ ವಿಶ್ವಪ್ರೇಮ, ತ್ಯಾಗ ಮತ್ತು ಸೇವೆ ಯೋಗ್ಯ ರೀತಿಯಲ್ಲಿ ಅಭಿವ್ಯಕ್ತವಾಗುವುದು. ಭಾರತೀಯ ಆಧ್ಯಾತ್ಮಿಕ ಜೀವನದ ಆದರ್ಶಗಳನ್ನು ಅರಿಯಲು ಒಂದು ಪರಿಣಾಮಕಾರಿಯಾದ ಸಾಧನವೆಂದರೆ ಪ್ರಾರ್ಥನೆ ಮತ್ತು ಧ್ಯಾನ. ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿ, ಹಂತದಲ್ಲಿರುವ ಎಲ್ಲರೂ ಯೋಗ್ಯ ಮಾರ್ಗದರ್ಶನ ಪಡೆದು ಧ್ಯಾನಜೀವನವನ್ನು ಪ್ರಾರಂಭಿಸಬಹುದು. ಎಲ್ಲ ಜಾಗತಿಕ ಧರ್ಮಗಳು ಧ್ಯಾನವೆಂಬ ಆಧ್ಯಾತ್ಮಿಕ ಕೇಂದ್ರದಲ್ಲಿ ಸಮ್ಮಿಲನಗೊಂಡಾಗ ಜಗತ್ತಿನಾದ್ಯಂತ ಧರ್ಮಸಾಮರಸ್ಯ ಮತ್ತು ಶಾಂತಿ ಹೊಂದಲು ಸಾಧ್ಯವಾಗುವುದು.
ನಮ್ಮ ಬದುಕಿನಲ್ಲಿ ನಾವು ಸಾಕ್ಷಿಯಾಗಿ ನಿಂತು ಸಾಮಾನ್ಯ ದೇಹೇಂದ್ರಿಯ ಸೀಮಿತ ವ್ಯಕ್ತಿತ್ವವನ್ನು ದಾಟಿ, ನಮ್ಮ ಮನೋವ್ಯಾಪಾರಗಳನ್ನು ನಿರ್ಲಿಪ್ತವಾಗಿ ಅರಿಯುವ ಮುಹೂರ್ತವೇ ನಿಜವಾದ ಧ್ಯಾನಜೀವನದ ಆರಂಭ. ಈ ಕ್ಷಣಿಕ ಬಾಳಿನ ಮರುಭೂಮಿಯಲ್ಲಿ ಕೀರ್ತಿ, ಸ್ಥಾನಮಾನ ಮತ್ತು ಸುಖಗಳನ್ನು ಮರೀಚಿಕೆಯಂತೆ ಬೆನ್ನಟ್ಟಿ ಹೋಗುತ್ತಿರುತ್ತೇವೆ. ಬರೀ ನಮ್ಮ ಇಂದ್ರಿಯಗಳನ್ನು ನೆಚ್ಚಿ ನಡೆದರೆ, ಅವು ಸುಖದುಃಖಗಳ ಸೆಳೆತಕ್ಕೆ ನಮ್ಮನ್ನು ಸಿಕ್ಕಿಸುತ್ತವೆ ಎಂಬುದು ವಿವೇಕ ಜಾಗೃತಿಯಾದ ಎಲ್ಲ ಸಾಧಕರಿಗೆ ತಿಳಿದ ವಿಷಯ. ಸರಿಯಾಗಿ ವಿವೇಚಿಸಿ ನೋಡಿದರೆ ಬಾಳೆಂಬ ಪಾಠಶಾಲೆ ನಮಗೆ ಇದನ್ನು ತಿಳಿಸಿಕೊಡುತ್ತದೆ.
ದಿಕ್ಕುದೆಸೆ, ಗೊತ್ತುಗುರಿಯಿಲ್ಲದೆ ನಮ್ಮ ಮನಸ್ಸಿನಲ್ಲಿ ಉದ್ಭವವಾಗುವ ಆಲೋಚನೆ, ಭಾವನೆ ಸಂವೇದನಗಳ ತರಂಗಗಳನ್ನು ಹೇಗೆ ಪರಿಷ್ಕೃತಗೊಳಿಸು ವುದು ಎಂಬುದು ಎಲ್ಲರನ್ನೂ ಜೀವನದುದ್ದಕ್ಕೂ ಕಾಡುವ ಒಂದು ಸಮಸ್ಯೆ. ನಮ್ಮ ಆಲೋಚನೆಗಳನ್ನು ನಿರ್ದಿಷ್ಟ ಗುರಿಯುಳ್ಳ ಪೂರ್ಣ ಅರಿವಿನಿಂದ ಕೂಡಿದ ಉಪಯುಕ್ತ ಆಲೋಚನೆಗಳಾಗಿ ಪರಿವರ್ತಿಸಲು ಪ್ರಯತ್ನ ಮಾಡಬೇಕು. ಹೊರಜಗತ್ತಿನಂತೆಯೇ ಒಂದು ಒಳಜಗತ್ತು ಇದೆ. ಇಲ್ಲಿ ನಮ್ಮ ನಿಜವಾದ ಸ್ವಭಾವದ ಅಸ್ತಿತ್ವವೊಂದಿರುತ್ತದೆ. ಅದು ಬಾಹ್ಯಪ್ರಪಂಚಕ್ಕಿಂತಲೂ ಬಹಳ ವೈಭವಯುತವಾಗಿ ನಮ್ಮ ಹೃದಯಾಂತರಾಳದಲ್ಲಿ ಇರುವುದು. ಎತ್ತರದ ಪರ್ವತ- ಪ್ರದೇಶದಲ್ಲಿ ನಿಂತರೆ ಪ್ರವಾಹಗಳು ನಮ್ಮನ್ನು ಕೊಚ್ಚಿಕೊಂಡು ಹೋಗಲಾರವು. ಅದೇ ರೀತಿ ಮನಸ್ಸನ್ನು ಪೂರ್ಣ ಅರಿವಿನಿಂದ ಕೂಡಿರುವ ಎತ್ತರದ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಇರಿಸಲು ಪ್ರಯತ್ನ ಮಾಡಿದರೆ ಜೀವನ ಸುಗಮವಾಗುವುದು. ಇದಕ್ಕೆ ಇರುವ ಏಕೈಕ ಮಾರ್ಗ ಎಂದರೆ ಧ್ಯಾನದ ಅಭ್ಯಾಸ.
ಧ್ಯಾನದಲ್ಲಿ ನಿರತವಾದಾಗ ಆಲೋಚನೆಗಳೆಲ್ಲ ನಿಯಂತ್ರಿಸಲ್ಪಟ್ಟು ಮನಸ್ಸಿನಲ್ಲಿ ಒಂದು ಹೊಸ ಅರಿವು ಮೂಡಲು ಸಹಾಯವಾಗುತ್ತದೆ. ಈ ಅರಿವಿನ ಜಾಗೃತಿಯ ಬೆಳಕಿನಲ್ಲಿ ನಮ್ಮ ನಿತ್ಯಜೀವನದ ಕರ್ತವ್ಯಗಳನ್ನು ಪ್ರಜ್ಞಾಪೂರ್ವಕವಾಗಿ ಭಗವತಾರ್ಪಣ ಭಾವದಿಂದ ಮತ್ತು ಪರಿಪೂರ್ಣತೆಯಿಂದ ನಿರ್ವಹಿಸಲು ಸಾಧ್ಯವಾಗುವುದು. ಧ್ಯಾನದ ಅಭ್ಯಾಸ ಮತ್ತು ಆಧ್ಯಾತ್ಮಿಕ ವಿಜ್ಞಾನ ಮನೆ-ಮನೆಗಳಲ್ಲಿ ಮತ್ತು ಶಾಲಾ-ಕಾಲೇಜುಗಳಲ್ಲಿ ಶಿಕ್ಷಣದ ಅವಿಭಾಜ್ಯ ಅಂಗವಾದಲ್ಲಿ ವ್ಯಕ್ತಿಗತ ಜೀವನ ಮತ್ತು ಸಮಾಜದಲ್ಲಿ ಕಂಡುಬರುವ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಆಂತರಿಕ ಶಕ್ತಿ ಮತ್ತು ಜ್ಞಾನ ನಮ್ಮದಾಗುವುದು.
ಈ ಹೊಸ ಅರಿವಿನ ಬೆಳಕಿನಲ್ಲಿ ನಮ್ಮ ಜೀವನದ ಅನುಭವಗಳನ್ನು ಚೆನ್ನಾಗಿ ಆಳವಾಗಿ ಚಿಂತಿಸಿ ಮಥಿಸಬೇಕು. ಮಾತ್ರವಲ್ಲದೆ ತದನಂತರವೂ ಬದುಕಲ್ಲಿ ಹೊಸ ನಿಲುವು, ಹೊಸ ಜಾಗೃತಿ ಮತ್ತು ಹೊಸ ಸಂಕಲ್ಪಗಳ ಸೃಜನೆಯಾಗಬೇಕು. ಈ ಅಂತರಾತ್ಮನ ಬೆಳಕಿನಿಂದ ನಮ್ಮ ಬುದ್ಧಿ ಬೆಳಗುವುದು ಹಾಗೂ ವಿವೇಕ ಜಾಗೃತಿಯಾಗುವುದು. ಈ ವಿವೇಕ ಜಾಗೃತಿಯ ಬೆಳಕಿನಲ್ಲಿ ಉತ್ಪತ್ತಿಯಾದ ಆಲೋಚನೆಗಳು ಮಾತ್ರ ನಮ್ಮ ಜೀವನವನ್ನು ಪರಿವರ್ತಿಸಿ ನಿಜವಾದ ಶ್ರೇಯಸ್ಸು ಮತ್ತು ಪರಮಶಾಂತಿಯನ್ನು ಕೊಡಬಲ್ಲದು. ಇದನ್ನೇ ಶ್ರೀಕೃಷ್ಣನು ಗೀತೆಯಲ್ಲಿ ವ್ಯವಸಾಯತ್ಮಿಕಾ ಬುದ್ಧಿ, ನಿಶ್ಚಯಾತ್ಮಿಕಾ ಬುದ್ಧಿ ಮತ್ತು ಅಧ್ಯಾತ್ಮ ಚೇತಸಾ ಎಂದು ಹೇಳಿದ್ದಾನೆ.
ನಮ್ಮ ಪ್ರತಿಯೊಂದು ಆಲೋಚನೆಯನ್ನೂ, ಅನುಭವವನ್ನೂ ವಿವೇಕದ ಬೆಳಕಿನಲ್ಲಿ ಪರಿಷ್ಕರಿಸಲು ಸಾಧ್ಯವಾದಲ್ಲಿ ಜೀವನ ಆನಂದ, ಶಾಂತಿ ಮತ್ತು ಪರಿಪೂರ್ಣತೆಯಿಂದ ತುಂಬುವುದು. ಆಗ ಜೀವನದ ಪ್ರತಿಯೊಂದು ಕ್ಷಣವನ್ನೂ, ಪ್ರತಿಯೊಂದು ಕರ್ಮವನ್ನೂ ಸಹಜ ಸಂಯಮದಿಂದ ಪರಿವರ್ತಿಸಿ ಬದುಕನ್ನು ಸಾರ್ಥಕಗೊಳಿಸಬಹುದು. ಧ್ಯಾನದಲ್ಲಿ ನಮಗೆ ಬರುವ ಸದ್ಭಾವನೆಗಳ ಅಮೃತಸಿಂಚನವನ್ನು ಜಗತ್ತೆಂಬ ಮರುಭೂಮಿಯ ಯಾತ್ರೆಯಲ್ಲಿ ಸಂಗಾತಿಯನ್ನಾಗಿ ಮಾಡಿಕೊಂಡರೆ ಜೀವನವನ್ನು ಶಾಂತಿಮಯ ಮತ್ತು ಆನಂದಮಯವಾಗಿ ಪರಿವರ್ತಿಸಬಹುದು. ಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ನಿಜವಾದ ತಿರುಳು ಧ್ಯಾನ, ವಿಶ್ವಪ್ರೇಮ, ತ್ಯಾಗ ಮತ್ತು ಸೇವೆ. ಭಾರತೀಯ ಚೈತನ್ಯ ಮತ್ತು ಅದರ ಆದರ್ಶಗಳನ್ನು ಅರಿಯಲು ಪರಿಣಾಮಕಾರಿಯಾದ ಸಾಧನವೆಂದರೆ ಪ್ರಾರ್ಥನೆ ಮತ್ತು ಧ್ಯಾನ. ಧ್ಯಾನವನ್ನು ಸಾರ್ಥಕ ಬದುಕಿಗೆ ದಾರಿದೀಪ ಹಾಗೂ ಜೀವನ ಸಂಜೀವಿನಿ ಎನ್ನಬಹುದು. ನಮ್ಮ ಬದುಕಿನಲ್ಲಿ ನಾವು ಸಾಕ್ಷಿಯಾಗಿ ನಿಂತು ಸಾಮಾನ್ಯ ವ್ಯಕ್ತಿತ್ವವನ್ನು ದಾಟಿ, ನಮ್ಮ ಮನೋವ್ಯಾಪಾರಗಳನ್ನು ನಿರ್ಲಿಪ್ತವಾಗಿ ಅರಿಯುವ ಮುಹೂರ್ತವೇ ಧ್ಯಾನದ ಆರಂಭ.
(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)