ಸನಾತನ ಧರ್ಮದಲ್ಲಿ ಉತ್ಸವಗಳ ಮಹತ್ವ

Column F1
Published on
ಭಾರತೀಯ ಉತ್ಸವಗಳಿಗೆ ಮನಸುಗಳನ್ನು ಅರಳಿಸುವ, ಆಧ್ಯಾತ್ಮಿಕ ಬೇರುಗಳೊಂದಿಗೆ ಜೋಡಿಸುವ ಶಕ್ತಿ ಇದೆ. ದೈನಂದಿನ ಬದುಕಿನ ಜಂಜಾಟಗಳನ್ನು ಮರೆಸಿ ಸಂಬಂಧ, ಬಾಂಧವ್ಯಗಳಿಗೆ ಮಹತ್ವ ನೀಡುವ ಪರ್ವಗಳು ಸಂಸ್ಕೃತಿಯ ಹಿರಿಮೆಯನ್ನು, ಪರಂಪರೆಯ ಶ್ರೇಷ್ಠತೆಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಸಾರ್ಥಕ ಕೆಲಸ ಮಾಡುತ್ತವೆ.

ಸನಾತನ ಧರ್ಮದ ಪ್ರಾಚೀನ ಪರಂಪರೆಯಲ್ಲಿ ವರ್ಷದುದ್ದಕ್ಕೂ ಆಗಾಗ ಬರುವ ಉತ್ಸವಗಳು, ಹಬ್ಬ-ಹರಿದಿನಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಉತ್ಸವಗಳ ಆಚರಣೆ ಸಹಸ್ರಾರು ವರ್ಷಗಳ ಹಿಂದೆ ಸಂಭವಿಸಿದ ದಿವ್ಯ ಘಟನೆಗಳನ್ನು ಪುನಃ ಪುನಃ ಸ್ಮರಣೆಗೆ ತರುವುದು ಮಾತ್ರವಲ್ಲದೆ, ದೇಶದ ಬಹು ಸಂಪದ್ಭರಿತ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯವನ್ನು ಮುಂದಿನ ಪೀಳಿಗೆಗಳಿಗೆ ಪರಿಚಯಿಸಿ ಜನರ ಹೃನ್ಮನಗಳಲ್ಲಿ ಸ್ಥಾಪಿಸಿ, ಅವರು ಸದಾ ತಮ್ಮ ಭವ್ಯ ಪರಂಪರೆಯ ಬೇರುಗಳ ಸಂಪರ್ಕದಲ್ಲಿ ಇರುವಂತೆ ಮಾಡುತ್ತದೆ. ಅಷ್ಟು ಮಾತ್ರವಲ್ಲದೆ ಅದು ಸಮಕಾಲೀನ ಪೀಳಿಗೆಯನ್ನು ಉಲ್ಲಾಸ-ಸಂಭ್ರಮಗಳ ಭಾವನೆಗಳಿಂದ ಒಟ್ಟುಗೂಡಿಸಿ ಸಮಾಜದಲ್ಲಿ ಐಕ್ಯತೆಯನ್ನು ಮೂಡಿಸುತ್ತದೆ. ಪ್ರಾಚೀನ ಕಾಲದಿಂದಲೂ ಹರಿದುಬರುತ್ತಿರುವ ಉತ್ಸವಗಳ ಆಚರಣೆಯ ಸಂಪ್ರದಾಯ ಅನೇಕ ಪರಕೀಯ ಅತಿಕ್ರಮಣ ಹಾಗೂ ಆಳ್ವಿಕೆಗಳಿಗೆ ತುತ್ತಾದ ನಮ್ಮ ದೇಶದ ಇತಿಹಾಸದಲ್ಲಿ ಸನಾತನ ಧರ್ಮದ ಅನುಯಾಯಿಗಳಲ್ಲಿ, ಐಕ್ಯತೆಯ ಭಾವನೆಯನ್ನು ಜೀವಂತವಾಗಿರಿಸಿ, ಅವರಲ್ಲಿ ಧಾರ್ವಿುಕತೆ ನಿರಂತರವಾಗಿ ಚ್ಯುತಿಯಿಲ್ಲದೆ ಮುಂದುವರಿಯುವಂತೆ ಮಾಡಿದೆ; ಹಾಗೂ ಸಮಾಜದ ಎಲ್ಲ ವರ್ಗಗಳ ಜನರಲ್ಲಿ ಐಕ್ಯತೆಯ ತಾದಾತ್ಮ್ಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಚಾಂದ್ರಮಾನ ಪಂಚಾಂಗ (Lunar Calendar) ಪದ್ಧತಿ ಆಚರಣೆಯಲ್ಲಿರುವ ನಮ್ಮ ದೇಶದಲ್ಲಿ ಸನಾತನ ಧರ್ಮದ ಹೆಚ್ಚಿನ ಉತ್ಸವಗಳು ಬಹುತೇಕ ಅಮಾವಾಸ್ಯೆ ಅಥವಾ ಪೌರ್ಣಿಮೆಯ ದಿನಗಳಂದು ಘಟಿಸುತ್ತವೆ. ಚಾಂದ್ರಮಾನ ಪದ್ಧತಿ ಪ್ರಕಾರ, ಒಂದು ಮಾಸದಲ್ಲಿ ಚಂದ್ರನ ವೃದ್ಧಿ ಹಾಗೂ ಕ್ಷಯಗಳ ಎರಡು ಪಕ್ಷಗಳ 29.5 ದಿನಗಳಿದ್ದು, ವರ್ಷದಲ್ಲಿ 354 ದಿನಗಳು ಮಾತ್ರ ಇರುತ್ತವೆ. ಗ್ರಿಗೋರಿಯನ್ ಪಂಚಾಂಗ ಪದ್ಧತಿಯಲ್ಲಿರುವಂತೆ 365 ದಿನಗಳು ಇರುವುದಿಲ್ಲ. ವರ್ಷದ ದಿನಗಳ ಸಂಖ್ಯೆಯಲ್ಲಿನ ಈ ವ್ಯತ್ಯಾಸವನ್ನು 30 ತಿಂಗಳುಗಳಲ್ಲಿ ಒಮ್ಮೆ ಒಂದು ಅಧಿಕ ಮಾಸವನ್ನು ಸೇರಿಸುವುದರಿಂದ ತುಂಬಲಾಗುತ್ತದೆ. ಈ ಚಾಂದ್ರಮಾನ ಪಂಚಾಂಗ ಪದ್ಧತಿಯ ಮೂಲವು ವೇದಾಂಗವಾದ ಜ್ಯೋತಿಷದಲ್ಲಿ ಇದ್ದು, ನಂತರ ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಸೂರ್ಯಸಿದ್ಧಾಂತವಾಗಿ ನಿಷ್ಕರ್ಷೆಯಾಗಿದೆ. ದಕ್ಷಿಣ ಭಾರತದಲ್ಲಿ ಶುಕ್ಲ ಪಕ್ಷದ ಆರಂಭದ ದಿನ ಅಮಾವಾಸ್ಯೆಯಂದು ನೂತನ ಮಾಸ ಪ್ರಾರಂಭವಾದರೆ, ಉತ್ತರ ಭಾರತದಲ್ಲಿ ಕೃಷ್ಣ ಪಕ್ಷದ ಆರಂಭದ ದಿನ ಪೌರ್ಣಿಮೆಯಂದು ಪ್ರಾರಂಭವಾಗುತ್ತದೆ. ಅಥರ್ವಣವೇದದಲ್ಲಿ ಹೇಳಿರುವಂತೆ ವರ್ಷದ 12 ತಿಂಗಳುಗಳ ಹೆಸರುಗಳನ್ನು ಆಯಾ ತಿಂಗಳಿನಲ್ಲಿ ಪೌರ್ಣಿಮೆಯ ಚಂದ್ರನು ಯಾವ ತಾರಾಗಣದಲ್ಲಿ (Constellation) ಕಾಣಿಸಿಕೊಳ್ಳುತ್ತಾನೆಂಬ ಆಧಾರದಲ್ಲಿ ನಿರ್ಣಯಿಸಲಾಗಿದೆ. ಉದಾಹರಣೆಗೆ ಚಿತ್ರಾ ನಕ್ಷತ್ರದ ಗಣದಲ್ಲಿ ಪೌರ್ಣಿಮೆಯ ಚಂದ್ರನು ಕಾಣಿಸಿಕೊಳ್ಳುವ ತಿಂಗಳನ್ನು ಚೈತ್ರಮಾಸವೆಂದು ಕರೆಯಲಾಗಿದೆ. ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಅಶ್ವಯುಜ, ಕಾರ್ತಿಕ, ಮಾರ್ಗಶಿರ, ಪೌಷ್ಯ, ಮಾಘ ಮತ್ತು ಫಾಲ್ಗುಣ- ಇವು ಭಾರತೀಯ ಮಾಸಗಳಾಗಿವೆ. ಈಗ ನಾವು ಪ್ರತೀ ತಿಂಗಳಲ್ಲಿ ಬರುವ ಉತ್ಸವಗಳ ಕುರಿತಾಗಿ ತಿಳಿದುಕೊಳ್ಳೋಣ.

ಚೈತ್ರದ ಚಿಗುರು: ನೂತನ ವರ್ಷದ ಪ್ರಾರಂಭದಲ್ಲಿ ಬರುವ ಚೈತ್ರ ಮಾಸದಲ್ಲಿ (ಮಾರ್ಚ್-ಏಪ್ರಿಲ್) ಯುಗಾದಿಯು ವರ್ಷದ ಮೊದಲ ಉತ್ಸವವಾಗಿರುತ್ತದೆ. ಈ ಉತ್ಸವವನ್ನು ‘ವಿಷು’, ‘ಗುಡಿ ಪಾಡ್ವಾ’ ಹಾಗೂ ‘ಬಿಹು’ವೆಂದೂ ದೇಶದ ವಿವಿಧ ಪ್ರದೇಶಗಳಲ್ಲಿ ಕರೆಯಲಾಗುತ್ತದೆ. ಇದೇ ತಿಂಗಳಲ್ಲಿ ನಿಸರ್ಗದಲ್ಲಿ ಸೌಂದರ್ಯ ವೃದ್ಧಿಸುವ ವಸಂತ ಋತು ಇರುತ್ತದೆ. ಸುತ್ತಮುತ್ತ ಪುಷ್ಪಗಳು ಅರಳಿ ಕಂಗೊಳಿಸುವ ಈ ಕಾಲದಲ್ಲಿ ಸಹಜವಾಗಿ ಜನಮನದಲ್ಲಿ ಸುಂದರ ಭಾವನೆಗಳು ಕೆರಳಿ, ಕವಿತಾ ಸಾಮರ್ಥ್ಯ ಹಾಗೂ ಸೃಜನಶೀಲತೆಗಳು ವೃದ್ಧಿಯಾಗುತ್ತವೆ. ಶ್ರೀಕೃಷ್ಣನು, ‘ಎಲ್ಲ ಋತುಗಳ ಪೈಕಿ ನಾನು ಕುಸುಮಾಕರನಾದ ವಸಂತ ಋತು’ ಎಂದು ಘೊಷಿಸಿದ್ದಾನೆ. ವಸಂತ ನವರಾತ್ರಿಯ ಒಂಬತ್ತು ದಿನಗಳಲ್ಲಿ ಜಗನ್ಮಾತೆಯನ್ನು ಸರ್ವಕ್ರಿಯೆಗಳಿಗೆ ಮೂಲವಾದ ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಗೂ ಜ್ಞಾನಶಕ್ತಿಗಳ ರೂಪದಲ್ಲಿ ಆರಾಧಿಸಲಾಗುತ್ತದೆ. ಲಕ್ಷ್ಮೀದೇವಿ ಇಚ್ಛಾಶಕ್ತಿಯ ದ್ಯೋತಕವಾದರೆ, ದುರ್ಗಾಮಾತೆ ಕ್ರಿಯಾಶಕ್ತಿಗೆ ಸಂಕೇತ ಹಾಗೂ ಸರಸ್ವತೀದೇವಿ ಜ್ಞಾನಶಕ್ತಿಯ ರೂಪ. ಚೈತ್ರಮಾಸದ ಶುಕ್ಲ ಪಕ್ಷದ ನವಮಿಯಂದು ಅವತಾರೀ ಪುರುಷ ಶ್ರೀರಾಮಚಂದ್ರನ ಜನ್ಮದಿನವನ್ನು ಶ್ರೀರಾಮನವಮಿಯೆಂದು ಆಚರಿಸಲಾಗುತ್ತದೆ.

ವೈಶಾಖ ವೈವಿಧ್ಯ: ನೂತನ ವರ್ಷದ ಪ್ರಾರಂಭದ ಉತ್ಸವವು ವೈಶಾಖ ಮಾಸದಲ್ಲಿಯೂ (ಏಪ್ರಿಲ್-ಮೇ) ಮುಂದುವರಿದು ಪಂಜಾಬ್ ಪ್ರಾಂತ್ಯದಲ್ಲಿ ‘ಬೈಶಾಖಿ’ಯೆಂದು ಕರೆಯಲಾಗುತ್ತದೆ. ಬೈಶಾಖಿ ಸಂಗೀತ-ನೃತ್ಯಗಳ ಸಂಭ್ರಮದಿಂದ ಮನಸ್ಸನ್ನು ಕುಣಿಸುವ ಉತ್ಸವವಾದರೆ, ವೈಶಾಖ ಮಾಸದ ಪೂರ್ಣಿಮೆಯಂದು ಶಾಂತಿ-ನೆಮ್ಮದಿಗಳಿಂದ ಮನಸ್ಸನ್ನು ತಣಿಸುವ ಬುದ್ಧ ಪೂರ್ಣಿಮೆ ಬರುತ್ತದೆ. ವೈಶಾಖ ಪೂರ್ಣಿಮೆ ಗೌತಮ ಬುದ್ಧನು ಜನಿಸಿದ ದಿನ ಮಾತ್ರವಲ್ಲ, ಅದುವೇ ಆತನ ಜ್ಞಾನೋದಯದ ದಿನ ಹಾಗೂ ಅಂತ್ಯದಲ್ಲಿ ಮಹಾನಿರ್ವಾಣದ ದಿನವೂ ಆಗಿರುತ್ತದೆ. 2500 ವರ್ಷಗಳ ಹಿಂದೆ ಆಗಿಹೋದ ಗೌತಮ ಬುದ್ಧನನ್ನು ವೈಶಾಖ ಪೂರ್ಣಿಮೆ ನೆನಪಿಗೆ ತರುತ್ತದೆ. ಇದೇ ಮಾಸದಲ್ಲಿ ‘ಅಕ್ಷಯ ತೃತೀಯ’ ದಿನದಂದು ಜನರು ಅಕ್ಷಯ ಸಂಪತ್ತಿನ ವರವನ್ನು ಬೇಡುವುದಲ್ಲದೆ, ಅದಕ್ಕೆ ದ್ಯೋತಕವಾಗಿ ಚಿನ್ನವನ್ನು ಕೊಂಡುಕೊಳ್ಳುತ್ತಾರೆ. ಈ ದಿನ ಜನರ ಮನಸ್ಸಿನಲ್ಲಿ ಉಳಿತಾಯ ಹಾಗೂ ಬಂಡವಾಳ ಹೂಡಿಕೆಯ ಮನೋಭಾವನೆಯನ್ನು ಪ್ರೇರೇಪಿಸುತ್ತದೆ.

ಜ್ಯೇಷ್ಠ ಮಹಿಮೆ: ಮೂರನೆಯ ತಿಂಗಳಾದ ಜ್ಯೇಷ್ಠ ಮಾಸದಲ್ಲಿ (ಮೇ-ಜೂನ್) ಉತ್ತರ ಭಾರತದಲ್ಲಿ ಗೃಹಿಣಿಯರು ಪತಿಯ ದೀರ್ಘ ಆಯುಷ್ಯಕ್ಕಾಗಿ ‘ವಟಸಾವಿತ್ರೀ ವ್ರತ’ವನ್ನು ಆಚರಿಸುತ್ತಾರೆ. ಗತಿಸಿಹೋದ ತನ್ನ ಪತಿ ಸತ್ಯವಾನನನ್ನು ಛಲಹಿಡಿದು ಯಮದೇವನ ಹಸ್ತಗಳಿಂದ ಬಿಡಿಸಿಕೊಂಡು ಬಂದ ಸತಿ ಸಾವಿತ್ರಿಯ ಸ್ಮರಣೆಗೆ ಈ ದಿನ ಮೀಸಲಾಗಿದೆ. ಈ ಮಾಸದ ಹತ್ತನೇ ದಿನದಂದು ಗಂಗಾನದಿ ತೀರ ಪ್ರದೇಶದಲ್ಲಿ ‘ಗಂಗಾ ದಸರಾ’ ಹಬ್ಬವನ್ನು ಜನರು ಗಂಗಾಮಾತೆಗೆ ಕೃತಜ್ಞತೆಯನ್ನು ಸಲ್ಲಿಸಲು ಆಚರಿಸುತ್ತಾರೆ.

ಆಷಾಢದ ಆಚರಣೆ: ಆಷಾಢವು (ಜೂನ್-ಜುಲೈ) ನಾಲ್ಕನೆಯ ಮಾಸ. ಈ ತಿಂಗಳಲ್ಲಿ ಪ್ರಮುಖ ಉತ್ಸವವೆಂದರೆ ‘ವ್ಯಾಸ ಪೂರ್ಣಿಮೆ’. ಆಷಾಢದ ಪೌರ್ಣಿಮೆ ದಿನವು ವೇದಗಳನ್ನು ವಿಭಜಿಸಿದ ಹಾಗೂ ಮಹಾಭಾರತ ಮತ್ತು ಹದಿನೆಂಟು ಪುರಾಣಗಳನ್ನು ರಚಿಸಿದ ವ್ಯಾಸ ಮಹರ್ಷಿಯ ಜನ್ಮದಿನ. ಗುರುಪೂರ್ಣಿಮೆಯೆಂದು ಕರೆಯಲ್ಪಡುವ ಈ ದಿನದಂದು ಶಿಷ್ಯರು ತಮ್ಮ ಗುರುಗಳನ್ನು ಆರಾಧಿಸಿ ಕೃತಜ್ಞತೆ ಸಲ್ಲಿಸುತ್ತಾರೆ. ಆಷಾಢ ಏಕಾದಶಿಯಂದು ಮಹಾರಾಷ್ಟ್ರದಲ್ಲಿ ವಿಠ್ಠಲನ ಭಕ್ತರು ತಮ್ಮ ತಮ್ಮ ಸ್ಥಳಗಳಿಂದ ಹಾಡಿ ನಲಿಯುತ್ತ ನಡೆದು ಬಂದು ಪಂಢರಾಪುರವನ್ನು ತಲುಪಿ ಭಕ್ತಿಯ ಆನಂದದಲ್ಲಿ ಸಂಭ್ರಮಿಸುತ್ತಾರೆ. ಪಾದಯಾತ್ರೆಯಲ್ಲಿ ಬರುವ ಈ ಭಕ್ತರನ್ನು ‘ವಾರಕರಿ’ಗಳೆಂದು ಕರೆಯುತ್ತಾರೆ. ಈ ಏಕಾದಶಿಯನ್ನು ‘ದೇವಶಯನಿ ಏಕಾದಶಿ’ಯೆಂದು ದೇಶದ ನಾನಾ ಕಡೆಗಳಲ್ಲಿ ಆಚರಿಸುತ್ತಾರೆ. ಮಳೆಗಾಲ ಪ್ರಾರಂಭಗೊಂಡು ಭಕ್ತರಿಗೆ ತೀರ್ಥಯಾತ್ರೆಗಳು ಕಷ್ಟಕರವಾಗುವ ಈ ಸಮಯದಲ್ಲಿ ದೇವ-ದೇವತೆಗಳು ವಿಶ್ರಾಂತಿ ಪಡೆಯುತ್ತಾರೆಂಬ ಪ್ರತೀತಿಯಿದೆ.

ಶ್ರಾವಣ ಸಂಭ್ರಮ: ಶ್ರಾವಣ ಮಾಸದಲ್ಲಿ (ಜುಲೈ-ಆಗಸ್ಟ್) ಮಳೆಗಾಲ ತೀವ್ರವಾಗುತ್ತದೆ. ಈ ಸಂದರ್ಭದಲ್ಲಿ ಶಿವನ ಭಕ್ತರು ಪ್ರತಿದಿನವೂ ತಮ್ಮ ಆರಾಧ್ಯದೇವತೆಯನ್ನು ಅನೇಕ ರೀತಿಯಲ್ಲಿ ಪೂಜಿಸುತ್ತಾರೆ. ಪ್ರತಿ ಸೋಮವಾರದಂದು ಪವಿತ್ರ ನದಿಗಳ ನೀರನ್ನು ಒಂದು ಕೋಲಿನ ಎರಡು ತುದಿಗಳಿಂದ ನೇತುಹಾಕಲ್ಪಟ್ಟ ಪಾತ್ರೆಗಳಲ್ಲಿ (ಕಾವಡಿ) ಹೊತ್ತು ತಂದು ಅಭಿಷೇಕ ಪ್ರಿಯನಾದ (ಲಿಂಗದ ರೂಪದಲ್ಲಿರುವ) ಶಿವನಿಗೆ ಅಭಿಷೇಕವನ್ನು ಮಾಡುತ್ತಾರೆ. ಶಿವನ ಆಭರಣಗಳಾದ ಸರ್ಪಗಳನ್ನು ನಾಗಪಂಚಮಿಯಂದು ಆರಾಧಿಸುತ್ತಾರೆ. ಸೋದರ-ಸೋದರಿಯರ ನಡುವಿನ ಒಲವಿನ ಬಾಂಧವ್ಯವನ್ನು ‘ರಕ್ಷಾಬಂಧನ’ದೊಂದಿಗೆ ಆಚರಿಸುತ್ತಾರೆ. ಪೌರ್ಣಿಮೆ ದಿನದಂದು ಗೃಹಿಣಿಯರು ತಮ್ಮ ಕುಟುಂಬಗಳ ಐಶ್ವರ್ಯ ವೃದ್ಧಿಗಾಗಿ ವರಲಕ್ಷ್ಮಿಯನ್ನು ಪೂಜಿಸುತ್ತಾರೆ.

ಭಾದ್ರಪದ ಸಡಗರ: ಆರನೆಯ ತಿಂಗಳಾದ ಭಾದ್ರಪದ ಮಾಸದಲ್ಲಿ (ಆಗಸ್ಟ್ -ಸೆಪ್ಟೆಂಬರ್) ದೇಶದಾದ್ಯಂತ ಪರಮಾತ್ಮನ ಜನಪ್ರಿಯ ರೂಪಗಳಾದ ಕೃಷ್ಣ ಹಾಗೂ ವಿನಾಯಕರ ಜನ್ಮದಿನವನ್ನು ಆಚರಿಸುತ್ತಾರೆ. ಶ್ರೀಕೃಷ್ಣನ ಜನ್ಮಸ್ಥಳ ಹಾಗೂ ಲೀಲಾ ಸ್ಥಳವಾದ ಮಥುರೆ-ಬೃಂದಾವನಗಳಲ್ಲಿ ಸಂತಸ-ಸಂಭ್ರಮದ ಉತ್ಸವಗಳನ್ನು ವೀಕ್ಷಿಸಬಹುದು. ಅದೇ ರೀತಿಯಲ್ಲಿ ವಿನಾಯಕ ಚೌತಿ ಮಹಾರಾಷ್ಟ್ರ ಪ್ರಾಂತ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲ್ಪಡುವ ಉತ್ಸವವಾಗಿದೆ. ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಈ ಹಬ್ಬವನ್ನು ಸಾಮೂಹಿಕವಾಗಿ ಆಚರಿಸಲು ಸ್ಪೂರ್ತಿ ನೀಡಿ, ಭಕ್ತಿಯ ವಾತಾವರಣದಲ್ಲಿ ಭಾರತದಾದ್ಯಂತ ಭಾವೈಕ್ಯತೆಯನ್ನು ಮೂಡಿಸಿದರು. ಸಂವತ್ಸರಗಳು ಉರುಳಿದಂತೆ, ಈ ಉತ್ಸವ ದೇಶದಲ್ಲಿ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ. ದಕ್ಷಿಣ ಭಾರತದಲ್ಲಿ ದೇವರ ನಾಡೆಂದೇ ಪ್ರಸಿದ್ಧವಾದ ಕೇರಳ ಪ್ರಾಂತ್ಯದಲ್ಲಿ, ಜನರು ಬಲಿ ಚಕ್ರವರ್ತಿಗೆ ಸ್ವಾಗತ ಕೋರುತ್ತ ‘ಓಣಂ’ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಸ್ತ್ರೀಯರು ಸಂಗೀತ-ನೃತ್ಯಗಳೊಡನೆ ಮಳೆಗಾಲವನ್ನು ಸ್ವಾಗತಿಸುತ್ತಾರೆ; ಅಂತೆಯೇ ಪರಮಶಿವ ಹಾಗೂ ಪಾರ್ವತೀ ದೇವಿಯ ಸಂಗಮವನ್ನು ಹಾಡಿ ಹೊಗಳುತ್ತಾರೆ. ಪಾರ್ವತಿ ಪ್ರಕೃತಿಯ ದ್ಯೋತಕವಾದರೆ, ಪುರುಷನಾದ ಪರಮಶಿವನು ಆಕಾಶದಿಂದ ವರ್ಷಿಸಲ್ಪಡುವ ಜಲಧಾರೆಗೆ ಸಂಕೇತ. ಈ ಮಾಸದ ‘ಪಿತೃಪಕ್ಷ’ದಲ್ಲಿ ಜನರು ತಮ್ಮ ಪೂರ್ವಜರಿಗೆ ಕೃತಜ್ಞತೆಯಿಂದ ಶ್ರದ್ಧಾಪೂರ್ವಕವಾಗಿ ಪಿಂಡ ಪ್ರದಾನ ಮಾಡಿ ಅವರ ಆಶೀರ್ವಾದಗಳನ್ನು ಬೇಡುತ್ತಾರೆ. ಉಳಿದ ಆರು ಮಾಸಗಳಲ್ಲಿ ಬರುವ ಪ್ರಮುಖ ಉತ್ಸವಗಳು, ಅವುಗಳ ಪ್ರಾಮುಖ್ಯದ ಕುರಿತು ಮುಂದಿನ ಅಂಕಣದಲ್ಲಿ ತಿಳಿಯೋಣ.

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net