ಪ್ರೀತಿಯಲ್ಲಿ ಬೀಳುವುದರ ಮಹತ್ವ…

ವಿಜಯವಾಣಿ (3)
Published on
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ)

ಪ್ರೀತಿ ಇಲ್ಲದಿರುವಾಗ ಮನುಷ್ಯರು ಕಠೋರವಾಗಿರುತ್ತಾರೆ. ಒಮ್ಮೆ ಪ್ರೀತಿಯಲ್ಲಿ ಬಿದ್ದರೆಂದರೆ, ಯಾವ ರೀತಿಯಲ್ಲಿ ಬೇಕಾದರೂ ಬಗ್ಗುತ್ತಾರೆ; ಇದೊಂದು ಅದ್ಭುತ ಆಧ್ಯಾತ್ಮಿಕ ಪ್ರಕ್ರಿಯೆಯಾಗಬಲ್ಲದು, ಏಕೆಂದರೆ ಅದರ ಅರ್ಥ ನೀವು ಮೃದು ಸ್ವಭಾವದವರಾಗುತ್ತಿದ್ದೀರಿ. ಒಮ್ಮೆ ನಿಮ್ಮೊಳಗೆ ಬದುಕಿನ ಪ್ರತಿ ಕ್ಷಣವೂ ಆ ಆಹ್ಲಾದತೆಯನ್ನು ಕಂಡಿರಾದರೆ, ನೀವು ಎಲ್ಲರನ್ನೂ ಪ್ರೀತಿಸಬಲ್ಲಿರಿ.

ಎಲ್ಲೆಡೆ ‘ದೈವಿಕ ಪ್ರೀತಿ’ ಎಂಬ ಮಾತುಗಳನ್ನು ಕೇಳಿದ್ದೇವೆ. ಇದರ ಹಿನ್ನೆಲೆ ಏನೆಂದರೆ ಪ್ರೀತಿ ಸ್ವರ್ಗದಿಂದ ಆಮದು ಮಾಡಿಕೊಳ್ಳಬೇಕಾದ ಗುಣ ಎಂದು. ಜನರು ಒಂದೋ ದೇವರನ್ನು ಪ್ರೀತಿಸುವುದಾಗಿ ಹೇಳುತ್ತಾರೆ ಅಥವಾ ದೇವರು ತಮ್ಮನ್ನು ಪ್ರೀತಿಸುವುದಾಗಿ ನಂಬುತ್ತಾರೆ. ಎಲ್ಲ ಮನುಷ್ಯರೂ ಪ್ರೀತಿಸಬಲ್ಲರು. ನೀವು ಜೀವಿಯಾಗಿದ್ದರೆ ಪ್ರೀತಿಸುವುದು ಸಹಜ. ಅದನ್ನು ನಿಮಗೆ ಕಲಿಸಬೇಕಾದ ಅಗತ್ಯ ಇಲ್ಲ. ಅದಕ್ಕಾಗಿ ಯಾವುದೇ ಗ್ರಂಥ ಬೇಕಿಲ್ಲ. ಯಾವುದೇ ದೇವರು ನಿಮ್ಮ ಕಡೆ ನೋಡಬೇಕಾಗಿಲ್ಲ. ಸ್ವರ್ಗದಲ್ಲಿ ಪ್ರೀತಿ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಮನುಷ್ಯರು ಪ್ರೀತಿಸಲು ಶಕ್ತರು ಎಂದು ಖಂಡಿತವಾಗಿ ಗೊತ್ತು. ನಿಮ್ಮನ್ನು ಪ್ರೀತಿಸುವ ಒಬ್ಬ ವ್ಯಕ್ತಿ ನಿಮಗೆ ಸಿಗಲಿಲ್ಲ ಎಂದರೆ, ನಾನು ನಾಯಿಯನ್ನು ಶಿಫಾರಸ್ಸು ಮಾಡುತ್ತೇನೆ. ಮನುಷ್ಯರು ಕೆಲವೊಮ್ಮೆ ಚಂಚಲ, ನಾಯಿಯಾದರೆ 12 ವರ್ಷದ ಪ್ರೇಮಪ್ರಕರಣ ಗ್ಯಾರಂಟಿ!

ಈ ಭೂಮಿಯ ಮೇಲೆ ನಮಗೆ ಪ್ರೀತಿಯ ಅವಶ್ಯಕತೆ ಇದೆ. ಎರಡು ಸಾವಿರ ವರ್ಷಗಳ ಹಿಂದೆ ಜೀಸಸ್ ‘ಲವ್ ದೈ ನೈಬರ್’ (ನಿನ್ನ ನೆರೆಯವರನ್ನು ಪ್ರೀತಿಸು) ಎಂದು ಹೇಳುವ ಮೂಲಕ, ‘ಈ ಕ್ಷಣದಲ್ಲಿ ನಿನ್ನ ಪಕ್ಕ ಯಾರಿದ್ದಾರೋ ಅವರನ್ನು ಒಪ್ಪಿಕೋ’ ಎಂದು ತಿಳಿಸಿದರು. ಹೌದು, ಪ್ರತಿಯೊಬ್ಬರೂ ದೇವರನ್ನು ಪ್ರೀತಿಸಬಹುದು. ಏಕೆಂದರೆ ಅವನು ಎದುರುಗಡೆ ಇಲ್ಲವಲ್ಲ! ಅಲ್ಲದೆ ದೇವರು ಪ್ರೀತಿಯ ಸ್ವರೂಪವೇ ಆಗಿರುವಾಗ ಅವನಿಗೆ ನಿಮ್ಮ ಪ್ರೀತಿಯ ಅಗತ್ಯವೇನಿದೆ? ದೇವರನ್ನು ಅವನ ಪಾಡಿಗೆ ಬಿಟ್ಟುಬಿಡಿ. ಅವನು ಅವನ ಕೆಲಸ ಮಾಡಲಿ; ನಿಮ್ಮದನ್ನು ನೀವು ಮಾಡಿ. ಆದರೆ ಜನರು ಕೃಷ್ಣ, ರಾಮ, ಜೀಸಸ್ ಜೊತೆ ಸಂಭಾಷಿಸುತ್ತಾರೆ, ಆದರೆ ಪಕ್ಕದವರೊಂದಿಗೆ ಮಾತುಕತೆ ಇರುವುದಿಲ್ಲ!

ಹೆಚ್ಚಿನ ಜನರು ಪ್ರೀತಿ ಎಂದು ಹೇಳುವುದು ಪರಸ್ಪರ ಲಾಭ ಯೋಜನೆಗಾಗಿ ಮಾತ್ರ. ಅವಶ್ಯಕತೆ ಪೂರೈಸಿಕೊಳ್ಳಬೇಕಾಗಿದೆ, ಹಾಗಾಗಿ ಯಾರೊಂದಿಗೋ ಒಂದು ವ್ಯವಸ್ಥೆ ಮಾಡಿಕೊಂಡಿದ್ದೀರಿ: ನೀನು ನನಗೆ ಇದನ್ನು ಕೊಡು, ನಾನು ನಿನಗೆ ಅದನ್ನು ಕೊಡುತ್ತೇನೆ ಎಂದು. ಜನರಿಗೆ ದೈಹಿಕ, ಭಾವನಾತ್ಮಕ, ಮಾನಸಿಕ, ಸಾಮಾಜಿಕ, ಆರ್ಥಿಕ ಮತ್ತು ಇನ್ನೂ ಅನೇಕ ಅವಶ್ಯಕತೆಗಳಿವೆ. ಇದೆಲ್ಲವನ್ನು ಪೂರೈಸಿಕೊಳ್ಳಲು ಬೇರೆ-ಬೇರೆ ಸಂಬಂಧಗಳನ್ನು ಮಾಡಿಕೊಂಡಿದ್ದೀರಿ. ಆದರೆ, ನಾಳೆ ನಿಮ್ಮ ಒಪ್ಪಂದದಿಂದ ಹಿಂದೆ ಸರಿದರೆ ಆ ಇನ್ನೊಬ್ಬರೂ ಅದನ್ನೇ ಮಾಡುತ್ತಾರೆ. ಆ ಕಾರಣಕ್ಕೇ ಸಂಬಂಧಗಳು ಯಾವಾಗಲೂ ಅಪಾಯದಲ್ಲಿರುತ್ತವೆ. ಅದು ಏಕೆಂದರೆ ಇಬ್ಬರೂ ಪರಸ್ಪರರಿಂದ ಸಂತೋಷ ಮತ್ತು ಜೀವನವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಎಲ್ಲಿಯವರೆಗೆ ಬೇರೆಯವರ ಮೂಲಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸುತ್ತೀರೋ ಅಲ್ಲಿಯವರೆಗೆ ಈ ಹೋರಾಟ ನಡೆಯುತ್ತಿರುತ್ತದೆ. ಅವಶ್ಯಕತೆಗಳ ಪೂರೈಕೆಯ ಅಗತ್ಯ ಇರುವವರೆಗೆ ಪ್ರೀತಿ ಏನೆಂಬುದು ತಿಳಿಯಲು ಸಾಧ್ಯವೇ ಇಲ್ಲ.

ಎಲ್ಲ ಸಂಬಂಧಗಳೂ ಅಗತ್ಯಗಳಿಂದಾಗಿ ಹುಟ್ಟಿಕೊಂಡಿವೆ. ಅದರಲ್ಲಿ ಸರಿ ಅಥವಾ ತಪ್ಪು ಎಂದೇನಿಲ್ಲ. ಆದರೆ ನಿಮ್ಮ ನೀತಿಯ ಚೌಕಟ್ಟಿನಲ್ಲಿ ಅದನ್ನು ಪವಿತ್ರಗೊಳಿಸುವುದೋ ಅಥವಾ ಅಸಹ್ಯವಾಗಿಸುವುದೋ ಮಾಡಬೇಡಿ. ಮಿತಿಗಳಿಗೆ ಸ್ವರ್ಣಲೇಪ ಮಾಡುವುದು ಬೇಡ ಹಾಗೂ ಕೋಳಗಳನ್ನು ಆಭರಣ ಮಾಡುವುದು ಬೇಡ. ಬೇಕಿರುವ ವ್ಯವಸ್ಥೆ ಮಾಡಿಕೊಳ್ಳುವುದೇನೋ ಸರಿ, ಆದರೆ ಅದು ಪ್ರೀತಿ ಎಂದು ನಂಬಿ ನಿಮಗೆ ನೀವೇ ಮೋಸ ಮಾಡಿಕೊಳ್ಳುವುದು ಬೇಡ.

ಹಾಗಾದರೆ ಪ್ರೀತಿ ಎಂದರೇನು? ಪ್ರೀತಿ ಮನುಷ್ಯರ ಒಂದು ಭಾವನೆ. ಅದರ ಅರ್ಥ ಭಾವನಾತ್ಮಕ ನೆಲೆಯಲ್ಲಿ ಬೇರೊಂದರ ಜೊತೆ ಒಂದಾಗಲು ಹಂಬಲಿಸುತ್ತೀರಿ. ಅದೊಂದು ಸಹಜ ಆಸೆ. ಆಹಾರ ಅಥವಾ ಲೈಂಗಿಕ ಸುಖ ಅಥವಾ ಪ್ರೀತಿ ಅಥವಾ ದೇವರು ಅಥವಾ ಸ್ವರ್ಗ ಯಾವುದನ್ನೇ ಆಸೆಪಡಿ, ಅದೊಂದು ಆಸೆ. ಮೂಲಭೂತ ಆಸೆ ಏನೆಂದರೆ ವಿಸ್ತರಣೆಗೊಳ್ಳುವುದು ಹಾಗೂ ಬೇರೆ ಏನನ್ನೋ ನಿಮ್ಮದೇ ಭಾಗವಾಗಿ ಸೇರಿಸಿಕೊಳ್ಳುವುದು. ಈ ಬೇರೊಂದರ ಜೊತೆ ಒಂದಾಗುವ ಹಂಬಲ ಎಲ್ಲ ಸ್ತರಗಳಲ್ಲಿ ನಡೆಯುತ್ತಿರುತ್ತದೆ. ಅದು ಮೂಲವಾದ ದೈಹಿಕ ರೀತಿಯಲ್ಲಿ ವ್ಯಕ್ತವಾದರೆ ನಾವು ಅದನ್ನು ಹಸಿವು ಅಥವಾ ಲೈಂಗಿಕತೆ ಎನ್ನುತ್ತೇವೆ. ಒಂದಾಗುವ ಹಂಬಲ ಮಾನಸಿಕವಾಗಿ ವ್ಯಕ್ತವಾದರೆ ಅದನ್ನು ಸಾಮಾನ್ಯವಾಗಿ ಅತಿ ಆಸೆ ಅಥವಾ ಮಹತ್ವಾಕಾಂಕ್ಷೆ ಅಂತ ಹೇಳುತ್ತಾರೆ. ಅದು ಭಾವನಾತ್ಮಕವಾಗಿ ವ್ಯಕ್ತಗೊಂಡರೆ ಪ್ರೀತಿ ಎಂದು ಕರೆಸಿಕೊಳ್ಳುತ್ತದೆ.

ಮಾನವರ ಒಂದು ಭಾಗ ಭಾವನೆಯಾಗಿದೆ; ಅದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಪ್ರಾಣಶಕ್ತಿಯ ಒಂದಷ್ಟು ಅಂಶ ಭಾವನೆಗೆ ಹಂಚಲಾಗಿದೆ. ಅದನ್ನು ಖರ್ಚು ಮಾಡಬೇಕು. ಇಲ್ಲದಿದ್ದಲ್ಲಿ ಅದು ನಿಮ್ಮ ಮೇಲೆ ಒಂದು ಹೊರೆಯಂತೆ ಇರುತ್ತದೆ. ಯೋಗ ಎಂದರೆ ಒಂದಾಗುವುದು. ಆದ್ದರಿಂದ, ಯಾವಾಗ ಪ್ರೀತಿಯನ್ನು ಅರಸುತ್ತೀರೋ, ಆಗ ಸಣ್ಣ ರೀತಿಯಲ್ಲಿ, ಭಾವನಾತ್ಮಕ ಮಾರ್ಗದಿಂದ ಯೋಗ ಮಾಡುವ ಪ್ರಯತ್ನ ಮಾಡುತ್ತಿದ್ದೀರಿ. ಹೆಚ್ಚಿನ ಮತಧರ್ಮಗಳು ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ದು ಅದನ್ನು ಭಕ್ತಿ ಎಂದು ಕರೆದರು. ಭಕ್ತಿ ಮೂಲತಃ ತರ್ಕ ಮೀರಿದ ಭಾವನೆ. ತರ್ಕಬದ್ಧವಾಗಿ ನೋಡಿದಾಗ ಅದು ಅಸಂಬದ್ಧ ಅನಿಸುತ್ತದೆ. ಆದರೆ ಅದನ್ನು ಅನುಭವಿಸುತ್ತಿರುವವರಿಗೆ ಅದು ಒಂದು ಅದ್ಭುತ ಅನುಭವ-ಪ್ರೇಮ ಪ್ರಸಂಗದ ರೀತಿ.

ಭೌತಿಕ ದೇಹ ಸುಖಕರವಾಗಿದ್ದರೆ ಸಾಮಾನ್ಯವಾಗಿ ಅದನ್ನು ಆರೋಗ್ಯ ಮತ್ತು ತೃಪ್ತಿ ಎನ್ನುತ್ತೇವೆ. ಮನಸ್ಸು ಆಹ್ಲಾದಕರವಾಗಿದ್ದರೆ ಅದನ್ನು ಶಾಂತಿ ಮತ್ತು ಸಂತೋಷ ಎನ್ನುತ್ತೇವೆ. ಭಾವನೆಗಳು ಮಧುರವಾಗಿದ್ದರೆ ಅದನ್ನು ಪ್ರೀತಿ ಮತ್ತು ಕರುಣೆ ಎನ್ನುತ್ತೇವೆ. ಪ್ರಾಣಶಕ್ತಿಗಳು ಹಿತಕರವಾಗಿದ್ದರೆ ಅದನ್ನು ಆನಂದ ಮತ್ತು ಭಾವಪರವಶತೆ ಎನ್ನುತ್ತೇವೆ. ಆದ್ದರಿಂದ ನೀವು ಹೇಳುವ ಪ್ರೀತಿ ಕೆಲವು ಕ್ಷಣಗಳ ಒಳಗಿನ ಆಹ್ಲಾದ.

ಬೇರೆಯವರು ನಿಮ್ಮೊಳಗಿನ ಆಹ್ಲಾದಕ್ಕೆ ಕಾರಣರು ಎಂದು ನಂಬುತ್ತೀರಿ. ಬೇರೆಯವರು ಪ್ರಚೋದಕ ಅಥವಾ ಉದ್ದೀಪಕ ಅಥವಾ ಪ್ರೇರೇಪಕ ಇರಬಹುದು, ಆದರೆ ಅವರೇ ಅಂತಿಮವಲ್ಲ. ಅವರು ಗುರಿ ಮುಟ್ಟಿಸಲಾರರು. ಏಕೆಂದರೆ ಪ್ರೀತಿ ಕೊನೆಯಿಲ್ಲದ ಹಂಬಲ. ಅದು ನೀವು ಹುಡುಕುತ್ತಿರುವ ಏಕಾಂತಕ್ಕೆ ನಿಮ್ಮನ್ನು ತಲುಪಿಸಲಾರದು. ಕೆಲವು ಕ್ಷಣ ಪ್ರೀತಿಪಾತ್ರರೊಂದಿಗೆ ಐಕ್ಯವಾದಂತೆ ಅನಿಸಬಹುದು, ಆದರೆ ಅದು ನಿಜವಲ್ಲ. ಯಾವಾಗ ಅಗತ್ಯಗಳು ಇಲ್ಲವೋ ಆಗ ಪ್ರೀತಿ ಸಾಧ್ಯ. ಪ್ರೀತಿ ನಿಜವಾಗಿದ್ದರೆ, ಅದು ಯಾವುದೇ ವಸ್ತುವಿಲ್ಲದೆ ಘಟಿಸುತ್ತದೆ. ಅದು ಗಂಡು-ಹೆಣ್ಣು, ಇರುವೆ, ಆನೆ ಅಥವಾ ಮರ ಇವೆಲ್ಲ ಅಪ್ರಸ್ತುತ; ನೀವು ನೋಡುವ ಎಲ್ಲದರ ಬಗ್ಗೆಯೂ ಆಹ್ಲಾದಕರ ಭಾವನೆ ಬರುತ್ತದೆ. ಅದು ಪ್ರೀತಿ. ಅದು ಬುದ್ಧಿವಂತಿಕೆಯಿಂದ ಬದುಕುವ ರೀತಿ. ಒಮ್ಮೆ ನಿಮ್ಮೊಳಗೆ ಬದುಕಿನ ಪ್ರತಿ ಕ್ಷಣವೂ ಆ ಆಹ್ಲಾದತೆಯನ್ನು ಕಂಡಿರಾದರೆ, ನೀವು ಎಲ್ಲರನ್ನೂ ಪ್ರೀತಿಸಬಲ್ಲಿರಿ.

ಹೆಚ್ಚಿನ ಜನರು ಪ್ರೀತಿಯನ್ನು ಅರಸಿ ಹೋಗುತ್ತಾರೆ, ಏಕೆಂದರೆ ಅವರು ತಮ್ಮಷ್ಟಕ್ಕೆ ತಾವೇ ಜೀವದೊಂದಿಗೆ ಆರಾಮವಾಗಿ ಇರುವ ಮಟ್ಟಕ್ಕೆ ಇನ್ನೂ ಬೆಳೆದಿಲ್ಲ. ಅವರು ತಮ್ಮ ಸುತ್ತಲಿರುವ ಲಕ್ಷಾಂತರ ಜೀವಜಂತುಗಳೊಂದಿಗೆ ಪೂರ್ಣ ಆರಾಮದಿಂದಿರಲು ಅಶಕ್ತರು, ಹಾಗಾಗಿ ಅವರು ಕೊನೇಪಕ್ಷ ಒಬ್ಬ ವ್ಯಕ್ತಿಯಲ್ಲಿ ಹುಡುಕುತ್ತಾರೆ. ಕುಟುಂಬ, ಸಮಾಜ ಮತ್ತು ರಾಷ್ಟ್ರನಿರ್ವಣದ ಎಲ್ಲ ಕಲ್ಪನೆ ಈ ಕಾರಣಕ್ಕಾಗಿಯೇ. ಕೇವಲ, ನಿಮ್ಮ ರಕ್ಷಣಾ ವ್ಯವಸ್ಥೆಯನ್ನು ಕೆಲ ಸಮಯ ಬದಿಗಿಡಲು ಸಾಧ್ಯವಾಗುವಂಥ, ವ್ಯವಸ್ಥೆಯ ನಿರ್ವಣ.

ಪ್ರೀತಿ ಎಂದರೆ ಸ್ವಂತದ ಸರ್ವ ನಾಶವಾಗುವಿಕೆ. ಅದರ ಅರ್ಥ ಮೂಲಭೂತವಾಗಿ ನಿಮಗಿಂತಲೂ ಬೇರೊಬ್ಬರು ಅತಿ ಮುಖ್ಯವಾದವರು ಎಂದು. ಹಾಗಾಗಿ ಇಂಗ್ಲಿಷ್​ನ ‘ಫಾಲಿಂಗ್ ಇನ್ ಲವ್’ (ಪ್ರೇಮದಲ್ಲಿ ಬೀಳುವುದು) ಅರ್ಥಪೂರ್ಣ. ಪೂರ್ತಿಯಾಗಿ ಅಲ್ಲದಿದ್ದರೂ ಕೊನೇಪಕ್ಷ ಒಂದು ಭಾಗವಾದರೂ ಕಳಚಬೇಕು. ಅದು ಆಗದಿದ್ದರೆ ಅಲ್ಲಿ ಪ್ರೀತಿ ಇಲ್ಲ, ಬರೀ ಲೆಕ್ಕಾಚಾರವಷ್ಟೆ. ಪ್ರೀತಿ ಇಲ್ಲದಿರುವಾಗ ಮನುಷ್ಯರು ಕಠೋರವಾಗಿರುತ್ತಾರೆ. ಒಮ್ಮೆ ಪ್ರೀತಿಯಲ್ಲಿ ಬಿದ್ದರೆಂದರೆ, ಯಾವ ರೀತಿಯಲ್ಲಿ ಬೇಕಾದರೂ ಬಗ್ಗುತ್ತಾರೆ; ಇದೊಂದು ಅದ್ಭುತ ಆಧ್ಯಾತ್ಮಿಕ ಪ್ರಕ್ರಿಯೆಯಾಗಬಲ್ಲದು, ಏಕೆಂದರೆ ಅದರ ಅರ್ಥ ನೀವು ಮೃದು ಸ್ವಭಾವದವರಾಗುತ್ತಿದ್ದೀರಿ.

ಶಿವ ಲಯಕರ್ತ ಎಂದರೆ ಅವನೊಬ್ಬ ನಿರ್ಬಂಧಿಯಾದ ಪ್ರೇಮಿ. ಯಾವುದೇ ಶುದ್ಧಪ್ರೇಮ ನಿಮ್ಮನ್ನು ನಾಶ ಮಾಡಬೇಕು. ನಾಶ ಎಂದು ಹೇಳಿದಾಗ ಅದು ನಿಮ್ಮ ಮನೆ ಅಥವಾ ವ್ಯವಹಾರದ ನಾಶ ಎಂದಲ್ಲ. ನೀವು ಹೇಳುವ ‘ನಾನು’- ನಿಮ್ಮ ಗಡಸು ವ್ಯಕ್ತಿತ್ವ- ಪ್ರೀತಿಸುವ ಪ್ರಕ್ರಿಯೆಯಲ್ಲಿ ನಾಶವಾಗುತ್ತದೆ. ಅದು ಸ್ವಂತದ ಸರ್ವನಾಶ.

ಈಗ ನಡೆಯುತ್ತಿರುವ ಜೀವನ ಪ್ರಕ್ರಿಯೆ ಹಾಗೆಯೇ ಅರಿವಿಗೆ ಬಂದರೆ, ಸುತ್ತಲಿರುವ ಎಲ್ಲದರೊಂದಿಗೆ ಆರಾಮವಾಗಿರುತ್ತೀರಿ, ಮತ್ತು ದೇಹದ ಪ್ರತಿಯೊಂದು ಜೀವಕೋಶವು ಅಸ್ತಿತ್ವದ ಎಲ್ಲದರ ಜೊತೆ ನಿರಂತರ ಸಂವಹನದಲ್ಲಿರುತ್ತದೆ ಎಂದು ಅರಿಯುತ್ತೀರಿ. ಒಂಟಿ ಜೀವಕೋಶ ಒಂದು ಕ್ಷಣವೂ ಈ ಸಂವಹನವಿಲ್ಲದೆ ಬದುಕಿರಲಾರದು. ಈ ಪ್ರಜ್ಞೆ ಜೀವನದ ವಾಸ್ತವವಾದರೆ, ಪ್ರೀತಿ ಅಥವಾ ಕರುಣೆ ಬಗ್ಗೆ ಬೋಧನೆ ಮಾಡಬೇಕಿಲ್ಲ. ಯಾವಾಗ ಎಲ್ಲವೂ ನಿಮ್ಮ ಒಂದು ಭಾಗ ಎಂಬುದು ಅರಿವಿಗೆ ಬಂದರೆ, ಯಾವುದೇ ಬೋಧನೆ ಅವಶ್ಯಕತೆ ಇಲ್ಲ. ಈಗ ಪೂರ್ತಿ ಆರಾಮ ಸ್ಥಿತಿಯಲ್ಲಿರಲು ಯಾವುದೇ ಒಬ್ಬ ವ್ಯಕ್ತಿಯ ಜೊತೆ ಸಂಬಂಧ ಬೆಳೆಸಬೇಕಾಗಿಲ್ಲ. ಸುಲಭವಾಗಿ ಅದನ್ನು ಜೀವನದೊಂದಿಗೇ ಮಾಡುವಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net