ಮರೀಚಿಕೆಯಾದ ಕಲಿಕಾ ಸುಧಾರಣೆ

5-6837503df3d9d
Published on

| ಎನ್.ಎಲ್. ಶಿವಮಾದು ವಿಜಯವಾಣಿ ಬೆಂಗಳೂರು

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2023-24ನೇ ಸಾಲಿನಿಂದ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುತ್ತಿದೆ. ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಪರೀಕ್ಷಾ ಗುಣಮಟ್ಟದ ದೃಷ್ಟಿಯಿಂದ ನೋಡಿದಾಗ ಮೂರು ಪರೀಕ್ಷೆಗಳು ಅಗತ್ಯವಿರಲಿಲ್ಲ, ಎರಡು ಪರೀಕ್ಷೆಗಳು ಸಾಕಿತ್ತು. ಮೂರು ಪರೀಕ್ಷೆ ನಡೆಸುವುದರಿಂದ ಶಿಕ್ಷಕರಿಗೆ ಅನಗತ್ಯ ಹೊರೆ, ಮಕ್ಕಳಿಗೆ ಒಂದೆಡೆ ಸುಲಭವಾದರೆ ಮತ್ತೊಂದೆಡೆ ಪಾಲಕರ ಒತ್ತಡದಿಂದ ಅನಿವಾರ್ಯವಾಗಿ ಎರಡನೇ ಪರೀಕ್ಷೆ ಬರೆಯಬೇಕಾಗಿದೆ.

ಆದರೆ, ಸರ್ಕಾರಿ ಶಾಲಾ ಶಿಕ್ಷಣದ ಗುಣಮಟ್ಟ, ಕಲಿಕೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅನುಪಾತ, ಸರ್ಕಾರಿ ಶಾಲೆಗಳಲ್ಲಿರುವ ಮೂಲಸೌಕರ್ಯಗಳನ್ನು ಅವಲೋಕಿಸಿದಾಗ ಮೂರು ಪರೀಕ್ಷೆಗಳು ಮಾದರಿಯಾಗಿವೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ನಿರಂತರ ಪ್ರಯತ್ನ ಮಾಡಿದಾಗ ಉನ್ನತ ಶಿಕ್ಷಣದತ್ತ ದಾಪುಗಾಲು ಹಾಕಲು ಇರುವ ಹೊಸ ಮಾರ್ಗ ಎನಿಸಿದೆ.

ದೇಶದಲ್ಲಿಯೇ ಮಾದರಿ ಎನಿಸುವಂತೆ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗೆ ವೆಬ್​ಕಾಸ್ಟಿಂಗ್ ಜಾರಿಗೊಳಿಸಿರುವ ನಿಯಮವು ಶ್ಲಾಘನೆಗೆ ಪಾತ್ರವಾಗಿದೆ. ಈ ಎಲ್ಲ ಕಾರಣದಿಂದ ರಾಜ್ಯದಲ್ಲಿ ಪರೀಕ್ಷಾ ಸುಧಾರಣೆ, ಪಾರದರ್ಶಕತೆ ಸಾಧಿಸುವಲ್ಲಿ ಶಾಲಾ ಶಿಕ್ಷಣ ಇಲಾಖೆ ಯಶಸ್ವಿಯಾಗಿದೆ. ಆದರೆ, ಈ ಶಾಲಾ ಪರೀಕ್ಷೆಯಲ್ಲಿ ಸುಧಾರಣೆ ಕಂಡುಕೊಳ್ಳುವ ಜತೆಗೆ ಇಲಾಖೆಯಿಂದ ಬುನಾದಿ ಹಂತದ ಮತ್ತು ಪ್ರಾಥಮಿಕ ಶಾಲೆಯಲ್ಲಿನ ಕಲಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಕಾರ್ಯ ಅತ್ಯಗತ್ಯವಾಗಿ ಆಗಬೇಕಿದೆ. ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರ ಶಿಕ್ಷಕ ಮತ್ತು ವಿದ್ಯಾರ್ಥಿ ಅನುಪಾತವು 1:30 ಇರಬೇಕು. ವಾಸ್ತವವಾಗಿ 1:50, 1:70ವರೆಗೂ ಇದೆ.

ಶಿಕ್ಷಣ ಇಲಾಖೆ ದತ್ತಾಂಶಗಳ ಪ್ರಕಾರವೇ 61,525 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ 41,905 ಪ್ರಾಥಮಿಕ ಮತ್ತು 4,871 ಪ್ರೌಢ ಶಾಲೆ ಸೇರಿ ಒಟ್ಟು 46,776 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾಥಮಿಕ ಶಾಲೆಗಳಿಗೆ 1,88,531 ಹುದ್ದೆಗಳು ಮಂಜೂರಾಗಿದ್ದು, 1,38,802 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 49,729 ಹುದ್ದೆಗಳು ಖಾಲಿ ಇವೆ. ಹಾಗೆಯೇ ಪ್ರೌಢ ಶಾಲೆ ವಿಭಾಗದಲ್ಲಿ 44,406 ಹುದ್ದೆಗಳು ಮಂಜೂರಾಗಿದ್ದು, 32,610 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 11,796 ಹುದ್ದೆಗಳು ಖಾಲಿ ಇವೆ. 5,539 ಸರ್ಕಾರಿ ಪ್ರಾಥಮಿಕ ಶಾಲೆಗಳು ಏಕ ಶಿಕ್ಷಕರನ್ನು ಹೊಂದಿವೆ. ಹೀಗಾಗಿ ಗುಣಮಟ್ಟದ ಕಲಿಕೆ ಮರೀಚಿಕೆಯಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಈ ಭಾಗದ ಏಳು ಜಿಲ್ಲೆಗಳಲ್ಲಿ 20,875 ಹುದ್ದೆಗಳು ಖಾಲಿ ಇವೆ. ಅದರಲ್ಲಿಯೂ ರಾಯಚೂರಿನಲ್ಲಿ 5,401 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪರಿಣಾಮ, ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಈ ಭಾಗದ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿಯೇ ಇರುತ್ತವೆ. ಹೀಗಿರುವಾಗ ಮಕ್ಕಳಿಂದ ಗುಣಮಟ್ಟದ ಕಲಿಕೆಯನ್ನು, ಉತ್ತಮ ಫಲಿತಾಂಶವನ್ನು ನಿರೀಕ್ಷಿಸುವುದು ಹೇಗೆ?

6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆ (ಆರ್​ಟಿಇ)ಯನ್ನು ಜಾರಿಗೊಳಿಸಿತು. ರಾಜ್ಯದಲ್ಲಿ 2012ರಲ್ಲಿ ಆರ್​ಟಿಇ ಜಾರಿಗೊಂಡಿದೆ. ಮಕ್ಕಳನ್ನು ಅನುತ್ತೀರ್ಣಗೊಳಿಸಿದರೆ ಅವರು ಶಾಲೆಯಿಂದ ಹೊರಗುಳಿಯುತ್ತಾರೆ ಎಂಬ ಕಾರಣದಿಂದ ಅನುತ್ತೀರ್ಣ ಮಾಡುವಂತಿಲ್ಲ ಎಂಬ ನಿಯಮ ಜಾರಿಯಾಯಿತು. ಅದಾದ ನಂತರ ರಾಜ್ಯದಲ್ಲಿ ಕಲಿಕಾ ಗುಣಮಟ್ಟ ಕುಸಿತವಾಗುತ್ತಿದೆ ಎಂಬುದನ್ನು ಶಿಕ್ಷಣ ಇಲಾಖೆಯ ವರದಿಗಳೇ ಹೇಳುತ್ತಿವೆ. ಶಾಲಾ ಶಿಕ್ಷಣ ಇಲಾಖೆಯ 2020ರ ವರದಿ ಪ್ರಕಾರ 5ನೇ ತರಗತಿಯ ಮಕ್ಕಳಿಗೆ 2ನೇ ತರಗತಿಯ ಪಠ್ಯವನ್ನೂ ಓದಲು ಬರುತ್ತಿಲ್ಲ. ಸರ್ಕಾರಿ ಶಾಲೆಗಳ ಶೇಕಡ 32.8 ಹಾಗೂ ಖಾಸಗಿ ಶಾಲೆಗಳ ಶೇ.35.5 ಮಕ್ಕಳು ಮಾತ್ರ ಓದುವ ಸಾಮರ್ಥ್ಯ ಹೊಂದಿದ್ದಾರೆ.

ವಿಷಯವಾರು ಶಿಕ್ಷಕರು ಇಲ್ಲದಿರುವುದು ಕಾರಣ: ಕಲಿಕೆಯಲ್ಲಿ ಹಿಂದುಳಿಯಲು ವಿಷಯ ಶಿಕ್ಷಕರು ಇಲ್ಲದಿರುವುದು ಕೂಡ ಕಾರಣವಾಗಿದೆ. ರಾಜ್ಯದಲ್ಲಿ ಈ ವರ್ಷದ ಮಾರ್ಚ್-ಏಪ್ರಿಲ್​ನಲ್ಲಿ ನಡೆದ ಎಸ್​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಎಲ್ಲ ವಿಷಯಗಳಿಗಿಂತ ಗಣಿತ ಮತ್ತು ವಿಜ್ಞಾನದಲ್ಲಿಯೇ ಫಲಿತಾಂಶ ಕುಸಿತವಾಗಿದೆ. ಒಟ್ಟು 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಎಲ್ಲ ವಿಷಯಗಳಲ್ಲಿಯೂ ಸರಾಸರಿ 7.90 ಲಕ್ಷವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪ್ರಥಮ ಭಾಷೆಯಲ್ಲಿ 6.39 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದ್ವಿತೀಯ ಭಾಷೆಯಲ್ಲಿ 6.22 ಲಕ್ಷ, ತೃತೀಯ ಭಾಷೆಯಲ್ಲಿ 6.31 ಲಕ್ಷ, ಸಮಾಜ ವಿಜ್ಞಾನದಲ್ಲಿ 6.30 ಲಕ್ಷ ಮಕ್ಕಳು ಪಾಸ್ ಆಗಿದ್ದಾರೆ. ಆದರೆ, ಗಣಿತದಲ್ಲಿ 5.91 ಲಕ್ಷ (ಶೇ.74.82) ಮತ್ತು ವಿಜ್ಞಾನದಲ್ಲಿ 5.92 ಲಕ್ಷ (ಶೇ.84.93) ಮಕ್ಕಳು ಮಾತ್ರ ಪಾಸ್ ಆಗಿದ್ದಾರೆ. ಅಂದರೆ, ಸರಾಸರಿ ತಲಾ ಎರಡು ಲಕ್ಷ ಮಕ್ಕಳು ಗಣಿತ ಮತ್ತು ವಿಜ್ಞಾನದಲ್ಲಿ ಅನುತ್ತೀರ್ಣರಾಗಿದ್ದಾರೆ. ಇದಕ್ಕೆಲ್ಲ ಕಾರಣ ಪ್ರಾಥಮಿಕ ಶಾಲೆಗಳಲ್ಲಿ ಪರಿಣಾಮಕಾರಿ ಬೋಧನೆ ಆಗದಿರುವುದು. ಶಾಲೆಗಳಿಗೆ ಸಮರ್ಪಕವಾಗಿ ಶಿಕ್ಷಕರನ್ನು ಒದಗಿಸಿದಾಗ ಕಲಿಕೆ ಮತ್ತು ಫಲಿತಾಂಶದಲ್ಲಿ ಪ್ರಗತಿ ಕಾಣಲು ಸಾಧ್ಯ.

ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವಂತಿಲ್ಲ ಎಂಬ ನಿಯಮವೂ ಪ್ರಾಥಮಿಕ ಹಂತದಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಲು ಪರೋಕ್ಷವಾಗಿ ಪಾತ್ರ ವಹಿಸಿದೆ. ಹಾಗಾಗಿಯೇ, 2025-26ನೇ ಸಾಲಿನಿಂದ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ವಿದ್ಯಾಲಯ, ನವೋದಯ ಸೇರಿ ಹಲವು ಶಾಲೆಗಳಲ್ಲಿ 5 ಮತ್ತು 8ನೇ ತರಗತಿಯಲ್ಲಿ ಕಲಿಕಾ ಮೌಲ್ಯಮಾಪನ ಮಾಡಲಾಗುತ್ತಿದೆ. ಒಂದು ವೇಳೆ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿದರೆ, ಮತ್ತೊಂದು ಬಾರಿ ಅದೇ ತರಗತಿಯಲ್ಲಿ ಕಲಿಸಲಾಗುತ್ತದೆ. ಈ ಮೂಲಕ ಅನುತ್ತೀರ್ಣ ನಿಯಮವನ್ನು ಅಳವಡಿಸಲಾಗಿದೆ. ಈ ನಿಯಮವನ್ನು ರಾಜ್ಯದಲ್ಲಿಯೂ ಜಾರಿಮಾಡುವ ಸಂಬಂಧ ಕಳೆದ ವರ್ಷವೇ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅದನ್ನು ಜಾರಿ ಮಾಡಲು ಸಾಧ್ಯವಾಗಿಲ್ಲ.

ಪ್ರಾಥಮಿಕ ಹಂತದಲ್ಲಿ ಮಕ್ಕಳ ಕಲಿಕಾ ವ್ಯವಸ್ಥೆಯನ್ನು ಸುಧಾರಿಸಿದರೆ, ಪರೀಕ್ಷೆಯಲ್ಲಿ ಫಲಿತಾಂಶ ವೃದ್ಧಿಯಾಗುತ್ತದೆ. ಪ್ರೌಢಶಾಲಾ ಹಂತದಲ್ಲಿ ಕಲಿಕೆಗೆ ವಿಜ್ಞಾನ ಮತ್ತು ಗಣಿತ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಇವುಗಳ ಸಮರ್ಪಕ ಅನುಷ್ಠಾನ ಮಾಡಿ ಈ ವರ್ಷದಿಂದ ಕಲಿಕೆಯಲ್ಲಿಯೂ ಪ್ರಗತಿ ಕಾಣಲಿ ಎಂದು ಆಶಿಸೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net