ಘೊರಯುದ್ಧ ಮುಗಿದ ನಂತರದ ಭೀಕರ ದೃಶ್ಯ

Shrirama
Published on

ಶ್ರೀವಸಿಷ್ಠರು ಶ್ರೀರಾಮನಿಗೆ ಹೇಳುತ್ತಿರುವ ಮಂಡಪೋಪಾಖ್ಯಾನ ದಲ್ಲಿ ವಿದೂರಥನ ರಾಜಧಾನಿಯ ಸಮೀಪದಲ್ಲಿ ನಡೆಯುತ್ತಿರುವ ಯುದ್ಧವು ಕೊನೆಯ ಹಂತವನ್ನು ತಲುಪಿದೆ. ವಿದೂರಥ ಹಾಗೂ ಸಿಂಧುರಾಜ ಎಂಬ ಇಬ್ಬರು ಯುದ್ಧದಲ್ಲಿ ಭಾಗವಹಿಸಿದ ಎರಡು ಪಕ್ಷಗಳ ಪ್ರಮುಖ ರಾಜರು. ಬೆಳಗಿನಿಂದ ಸಂಜೆಯವರೆಗೂ ಘೊರಯುದ್ಧ ನಡೆದು ಅನೇಕ ಸಾವು-ನೋವುಗಳು ಆಗಿವೆ. ಆದರೂ ಸೋಲು ಗೆಲುವುಗಳು ನಿರ್ಧಾರವಾಗಲಿಲ್ಲ. ಸಾಯಂಕಾಲ ಸೇನಾನಾಯಕರು ತಮ್ಮ ಸಹವರ್ತಿ ರಾಜರು ಹಾಗೂ ಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದರು. ಎರಡು ಪಕ್ಷಗಳ ಸೇನೆಗಳು ತಂಗಿರುವ ಬಿಡಾರಗಳು ಪರಸ್ಪರ ದೂರ ಇದ್ದಿದ್ದರಿಂದ ಸಮಾಲೋಚನೆಗಳು ಪರಸ್ಪರ ಗೊತ್ತಿಲ್ಲವಾದರೂ ಎರಡೂ ಬಿಡಾರಗಳಿಂದ ಹೊರಟ ನಿರ್ಣಯ ಒಂದೇ ತೆರನಾಗಿತ್ತು. ಯುದ್ಧವನ್ನು ನಿಲ್ಲಿಸಬೇಕೆಂಬ ನಿರ್ಣಯವನ್ನು ದೂತರ ಮೂಲಕ ಸಂದೇಶವಾಗಿ ಇಬ್ಬರೂ ಕಳುಹಿಸಿದರು.

ಶ್ರೀ ವಸಿಷ್ಠರು ಮುಂದುವರಿಸಿದರು. ‘ಶ್ರೀರಾಮ ! ಈ ಸಂದರ್ಭದಲ್ಲಿ ಯುದ್ಧವನ್ನು ನಿಲ್ಲಿಸಬೇಕೆಂಬ ನಿರ್ಣಯವನ್ನು ಎಲ್ಲರೂ ಒಪ್ಪಿಕೊಂಡರು. ಯಾಕೆಂದರೆ ಎಲ್ಲರಿಗೂ ತುಂಬಾ ಶ್ರಮವಾಗಿತ್ತು. ಆದ್ದರಿಂದ ಅವರ ಯಂತ್ರಗಳು, ಶಸ್ತ್ರಗಳು ಮತ್ತು ಪರಾಕ್ರಮಗಳು ಮಂದವಾಗಿದ್ದವು. ಇದಾದ ನಂತರ ಎರಡೂ ಪಕ್ಷಗಳಲ್ಲಿರುವ ದೊಡ್ಡ ರಥಗಳ ಎತ್ತರದ ಧ್ವಜಗಳ ಸಮೀಪದಲ್ಲಿರುವ ದೀರ್ಘವಾದ (ಎತ್ತರವಾದ) ಬಿದಿರು ಸ್ಥಂಬಗಳನ್ನು ಒಬ್ಬೊಬ್ಬ ಯೋಧರು ಏರಿದರು. ಹಾಗೆ ಏರಿದ ಯೋಧರು ಬಿಳಿಯ ಬಟ್ಟೆಗಳನ್ನು ಎಲ್ಲಾ ದಿಕ್ಕುಗಳಲ್ಲಿಯೂ ತಿರುಗಿಸುತ್ತಾ ಯುದ್ಧವು ನಿಲ್ಲಲಿ ಎಂಬ ಸಂದೇಶವನ್ನು ಎಲ್ಲರಿಗೆ ನೀಡಿದರು. ರಾತ್ರಿಯು ದೀರ್ಘ ಮತ್ತು ಶುದ್ಧ ಕಿರಣಗಳುಳ್ಳ ಚಂದ್ರನನ್ನು ತಿರುಗಿಸುವಂತೆ (ರಾತ್ರಿಯ ಆರಂಭದಲ್ಲಿ ಇದ್ದ ಸ್ಥಳದಲ್ಲಿಯೇ ಚಂದ್ರನು ಅನಂತರ ಇರುವುದಿಲ್ಲ. ಬೇರೆಯ ಜಾಗಕ್ಕೆ ಹೋಗಿರುತ್ತಾನೆ. ಬೆಳಗಾ ಗುವ ಹೊತ್ತಿಗೆ ಸಂಪೂರ್ಣ ದಿಕ್ಕನ್ನೇ ಬದಲಾಯಿಸಿರುತ್ತಾನೆ. ಇದೇ ಇಲ್ಲಿ ಹೇಳಿರುವ ತಿರುಗಿಸುವಿಕೆ) ಅವರು ಬಿಳಿಯ ಬಟ್ಟೆಯನ್ನು ಎಲ್ಲಾ ದಿಕ್ಕಿಗೆ ತೋರಿಸಿದರು.ಇದರಿಂದ ಯುದ್ಧರಂಗದ ವಾತಾವರಣ ಬದಲಾಯಿತು. ಮಹಾಪ್ರಳಯದ ಮುಕ್ತಾ ಯದಲ್ಲಿ ಪುಷ್ಕರಾವರ್ತ ಎಂಬ ಮೇಘಗಳು ಘರ್ಜಿಸುವಂತೆ ದುಂದುಭಿಗಳು ಎಲ್ಲಾ ದಿಕ್ಕುಗಳಲ್ಲಿ ಪ್ರತಿಧ್ವನಿಯನ್ನು ಉಂಟುಮಾಡುತ್ತಾ ಮೊಳಗಿದವು’.

‘ವಿಸ್ತಾರವಾದ ಗಗನಮಂಡಲವು ಮೇಲೆ ಇರುವಾಗ ಅಲ್ಲಿಂದ ಕೆಳಗೆ ಈಗಾಗಲೇ ಪ್ರಯೋಗಿಸಲ್ಪಟ್ಟಿರುವ ಬಾಣಗಳೇ ಮೊದಲಾದ ಆಯುಧಗಳ ನದೀ ಪ್ರವಾಹಗಳು ಯಾವುದೇ ಪ್ರತಿಬಂಧಕವಿಲ್ಲದೇ ಕೆಳಕ್ಕೆ ಭೂಮಿಗೆ ಬಂದು ಬೀಳತೊಡಗಿದವು. (ಯುದ್ಧವು ಮುಂದುವರಿಯುತ್ತಿದ್ದರೆ ಮತ್ತೆ ಪ್ರಯೋಗಿಸಲ್ಪಟ್ಟ ಆಯುಧಗಳು ಕೆಳಗಿನಿಂದ ಮೇಲಕ್ಕೆ ಹೋಗುವ ದೃಶ್ಯ ಇರುತ್ತಿತ್ತು. ಈಗ ಆ ದೃಶ್ಯವಿಲ್ಲದೇ, ಈಗಾಗಲೇ ಪ್ರಯೋಗಿಸಲ್ಪಟ್ಟ ಆಯುಧಗಳು ಆಕಾಶದಿಂದ ಕೆಳಗೆ ಬೀಳುವ ದೃಶ್ಯಮಾತ್ರ ಈ ಸಂದರ್ಭದಲ್ಲಿ ಕಂಡುಬರುತ್ತಿತ್ತು). ಮಾನಸ ಸರೋವರವೇ ಮೊದಲಾದ ಎತ್ತರದ ಸರೋವರದಿಂದ ಹರಿದು ಬರುತ್ತಿರುವ ನದಿಗಳಂತೆ ಈ ದೃಶ್ಯ ಕಂಡುಬರುತ್ತಿತ್ತು’.‘ಇಷ್ಟುಹೊತ್ತಿನ ತನಕ ಕಂಪಿಸುತ್ತಿ ರುವ ಯೋಧರೆಂಬ ಮರಗಳ ಕಂಪನಗಳೆಲ್ಲವೂ ಈಗ ನಿಧಾನವಾಗಿ ಕ್ಷೀಣವಾಗತೊಡಗಿತು. ಭೂಕಂಪದ ಕಾಲದಲ್ಲಿ ಕಂಪಿಸುತ್ತಿರುವ ವನಗಳೆಲ್ಲವೂ ಭೂಕಂಪದ ಕೊನೆಯಲ್ಲಿ ಕಂಪಿಸುವಿಕೆಯನ್ನು ಕಡಿಮೆಮಾಡಿಕೊಳ್ಳು ವಂತೆ ಅಥವಾ ಶರತ್ಕಾಲದ ಕೊನೆಯಲ್ಲಿ ಸಮುದ್ರವು ಶಾಂತ ಅಗುವಂತೆ ಯೋಧರ ಚಲನವಲನಗಳು ಶಾಂತವಾಗತೊಡಗಿದವು.

ಹಾಗೆಯೇ ಸ್ವಲ್ಪ ಹೊತ್ತಿನಲ್ಲಿ ಎರಡೂ ಸೇನೆಗಳು ಯುದ್ಧರಂಗದಿಂದ ಹೊರಡಲು ಪ್ರಾರಂಭಿಸಿದವು. ಪ್ರಳಯಕಾಲದಲ್ಲಿ ಒಂದೇ ಮಹಾಸಮುದ್ರದಲ್ಲಿ ಸೇರಿಕೊಂಡಿರುವ ಜಲಪ್ರವಾಹಗಳು ಪ್ರಳಯದ ಕೊನೆಯಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ಹರಡಿಹೋಗುವಂತೆ ಸೇನಾ ಸಮೂಹಗಳು ಹೊರಗಡೆಗೆ ಹೋಗಲು ಪ್ರಾರಂಭಿಸಿದವು. ಸಮುದ್ರ ಮಥನವು ಮುಗಿದ ನಂತರ ಕಂಗೋಲಾಗಿ ಬಳಸಿದ್ದ ಮಂದರ ಪರ್ವತವನ್ನು ಹೊರಕ್ಕೆ ತೆಗೆದಿಟ್ಟಿದ್ದರಿಂದ ಕ್ಷೀರಸಮುದ್ರವು ಯಾವುದೇ ಅಡೆತಡೆಯಿಲ್ಲದೆ ಶಾಂತಗೊಳ್ಳುವಂತೆ, ಎಲ್ಲ ಆವರ್ತ(ತೆರೆ)ಗಳನ್ನು ಕಡಿಮೆ ಮಾಡಿಕೊಳ್ಳುತ್ತಿರುವ ಸೈನ್ಯವು ಕ್ರಮೇಣ ಶಾಂತವಾಯಿತು. ಕ್ರಮೇಣ ಒಂದು ಮುಹೂರ್ತದಷ್ಟು ಕಾಲದಲ್ಲಿ ಆ ರಣಾಂಗಣವು, ಪೂತನಿಯ ಹೊಟ್ಟೆಯಂತೆ ಭಯಂಕರವೂ, ಅಗಸ್ತ್ಯರಿಂದ ಕುಡಿಯಲ್ಪಟ್ಟ ಸಮುದ್ರದಂತೆ ಶೂನ್ಯವೂ ಆಯಿತು. (ಯುದ್ಧದಲ್ಲಿ ಕೊಲ್ಲಲ್ಪಟ್ಟ ಸೈನಿಕರ ಶವಗಳು ಮತ್ತು ಆನೆ, ಕುದುರೆಗಳ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಮನುಷ್ಯರನ್ನೇ ತಿನ್ನುವ ರಾಕ್ಷಸರ ಹೊಟ್ಟೆಯೊಳಗಿನ ದೃಶ್ಯದಂತೆ ಯುದ್ಧಾಂಗಣವು ಭಯಂಕರವಾಗಿತ್ತು. ಬದುಕಿರುವ ಜನಗಳೆಲ್ಲಾ ಖಾಲಿಯಾದ್ದರಿಂದ ಶೂನ್ಯವೂ ಆಗಿತ್ತು)’.

‘ಈ ಸ್ಥಿತಿಯಲ್ಲಿರುವ ರಣಾಂಗಣದ ದೃಶ್ಯವನ್ನು ವರ್ಣಿಸಲು ಶಬ್ದಗಳು ಸಾಲದು. ಶವಗಳು ಗುಂಪುಗುಂಪಾಗಿ ತುಂಬಿಕೊಂಡಿವೆ. ರಕ್ತದ ಕಾಲುವೆಗಳು ಇನ್ನೂ ಹರಿಯುತ್ತಿರುವುದರಿಂದ ನೋಡಿದವರಿಗೆ ಜಿಗುಪ್ಸೆ ಹುಟ್ಟಿಸುವಂತಿತ್ತು. ಝಿಲ್ಲಿ ಎಂಬ ಕಾಡಿನ ಪತಂಗಗಳು ಝೇಂಕಾರ ಮಾಡುತ್ತಾ ಆ ಶವಗಳನ್ನು ಮುತ್ತುತ್ತಿರುವುದರಿಂದ ಪತಂಗಗಳಿಂದ ತುಂಬಿದ ಕಾಡಿನಂತೆ ಯುದ್ಧರಂಗವು ಕಾಣುತ್ತಿತ್ತು. ಅಲ್ಲಲ್ಲಿ ರಕ್ತವು ನದಿಯಂತೆ ಹರಿಯುತ್ತಿರುವುದರಿಂದ ತಗ್ಗುಗಳಲ್ಲಿ ಬೀಳುತ್ತಾ ತರಂಗಗಳನ್ನು ಉಂಟುಮಾಡುತ್ತಾ ಹರಿಯುತ್ತಿರುವ ರಕ್ತದ ಶಬ್ದವು ಕ್ರೂರವಾಗಿ ಕೇಳಿಬರುತ್ತಿತ್ತು. ಅರ್ಧಮರ್ಧ ಸತ್ತಿರುವ ಸೈನಿಕರು ಆಕ್ರಂದನ ಗೈಯ್ಯುತ್ತಾ ತಮ್ಮ ಆತ್ಮೀಯರನ್ನು ಕೂಗಿ ಕರೆಯುತ್ತಿರುವ ದೃಶ್ಯ ಮತ್ತು ಅದನ್ನು ಕೇಳಿ ಕಳವಳಗೊಂಡು ಚಡಪಡಿಸುತ್ತಿರುವ ಜೀವಂತ ಮನುಷ್ಯರ ದೃಶ್ಯ. ಈಗತಾನೇ ಮೃತರಾದವರ ಶರೀರಗಳಿಂದ ಬರುತ್ತಿರುವ ರಕ್ತದ ಝುರಿಯಂತಹ ಪ್ರವಾಹದ ದೃಶ್ಯ. ಅಲ್ಲಲ್ಲಿ ಜೀವಂತ ಮನುಷ್ಯರು ಮೃತ ವ್ಯಕ್ತಿಗಳ ಶರೀರಗಳನ್ನು ಹೆಗಲಿಗೆ ಏರಿಸಿಕೊಂಡು ಒಯ್ಯುತ್ತಿರುವಾಗ ಶವಗಳು ಅಲುಗಾಡುತ್ತಿರುವುದನ್ನು ನೋಡಿದರೆ ಬದುಕಿದ್ದಾರೋ ಎಂಬ ಭ್ರಾಂತಿ ಎಂಥವರಿಗೂ ಬರುವಂತಿತ್ತು.

(ಪ್ರತಿಕ್ರಿಯಿಸಿ: vvsudina@gmail.com, info.swarnavalli@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net