ಸಂಪಾದಕೀಯ: ನವಭಾರತದ ಆಶಯ

untitled-design-3-689e27dd1373d
Published on

ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಕಳೆದಿವೆ. ಸ್ವತಂತ್ರ ಭಾರತದ ಶತಮಾನೋತ್ಸವದ ಸಂದರ್ಭಕ್ಕೆ ನವಭಾರತದ ನಿರ್ವಣವಾಗಬೇಕು, ಹಳೆಯ ಸಮಸ್ಯೆಗಳಿಂದ ಕೊಡವಿಕೊಂಡು ಎದ್ದು ಹೊಸ ಉತ್ಸಾಹದಿಂದ ಎಲ್ಲ ರಂಗಗಳಲ್ಲೂ ವಿಕಾಸದ ಎತ್ತರ ತಲುಪಬೇಕು ಎಂಬ ಆಶಯ ಗರಿಗೆದರಿದೆ. ರಾಷ್ಟ್ರನಿರ್ವಣದ ಈ ಕೈಂಕರ್ಯದಲ್ಲಿ ಸರ್ಕಾರ ಮಾತ್ರವಲ್ಲದೆ ದೇಶದ 140 ಕೋಟಿ ಜನರೂ ತಮ್ಮ ಕೊಡುಗೆ ನೀಡಬೇಕಿದೆ. ಹಾಗಾದಲ್ಲಿ, ಬಲಿಷ್ಠ ಭಾರತದ ನಿರ್ಮಾಣ ಕಷ್ಟವಾಗಲಿಕ್ಕಿಲ್ಲ.

ಭಾರತ ಬದಲಾಗುತ್ತಿದೆ ಮತ್ತು ಪರಿವರ್ತನೆಯ ಹಾದಿ ಸಕಾರಾತ್ಮಕ ದಿಕ್ಕಿನಲ್ಲಿ ಸಾಗಿದೆ ಎಂಬುದು ಸಂತಸದ ಸಂಗತಿ. ಆರ್ಥಿಕ, ಸಾಮಾಜಿಕ, ಸಾಮರಿಕ, ರಾಜತಾಂತ್ರಿಕ ಸೇರಿ ಎಲ್ಲ ರಂಗಗಳಲ್ಲೂ ಭಾರತದ ಹೆಜ್ಜೆಗಳು ದೃಢವಾಗುತ್ತಿವೆ. ಹಾಗಾಗಿಯೇ, ಅಂತಾರಾಷ್ಟ್ರೀಯ ವಲಯ ಭಾರತವನ್ನು ನೋಡುವ ಪರಿಯೇ ಬದಲಾಗಿದೆ. ವಿಶ್ವದ ಹಲವು ಶಕ್ತಿಗಳು ಭಾರತದ ಸ್ನೇಹ ಬಯಸಿ, ಬಾಂಧವ್ಯದ ಹಸ್ತ ಚಾಚಿವೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಜಾಗತಿಕ ನಾಯಕರು ಭಾರತದ ದನಿಯನ್ನು ಗಂಭೀರವಾಗಿ ಆಲಿಸುತ್ತಿದ್ದಾರೆ. ಭಾರತ ತನ್ನ ಅಭಿವೃದ್ಧಿ ಹಾದಿಯಲ್ಲಿ ಕೈಗೊಳ್ಳುತ್ತಿರುವ ಕ್ರಮಗಳಿಗೆ ಬೆಂಬಲವನ್ನೂ ನೀಡುತ್ತಿದ್ದಾರೆ. ಅಲ್ಲದೆ, ವಿನಾಕಾರಣ ಭಾರತವನ್ನು ಕೆಣಕಿದರೆ ಸುಮ್ಮನಿರದೆ, ಶತ್ರುಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂಬುದು ‘ಆಪರೇಶನ್ ಸಿಂಧೂರ’ ಸಾಬೀತುಪಡಿಸಿದೆ.

ಇನ್ನು, ನಮ್ಮ ದೇಶದ ಪ್ರತಿಭೆಗಳಂತೂ ವಿಶ್ವದ ಬಹುತೇಕ ದೇಶಗಳಲ್ಲಿ ಸಾಧನೆಯ ಹೆಜ್ಜೆಗುರುತು ಮೂಡಿಸಿರುವುದು ಹೆಮ್ಮೆಯ ಸಂಗತಿಯೇ. ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊಮ್ಮಿರುವ ಭಾರತ, ಹಲವು ರಂಗಗಳಲ್ಲಿ ಪ್ರಗತಿಯ ವೇಗ ಹೆಚ್ಚಿಸಿಕೊಂಡಿರುವುದು ಮಹತ್ವದ ಸಂಗತಿ. ಸಾಧನೆಗಳಿಂದ ಸ್ಪೂರ್ತಿ ಪಡೆಯುತ್ತಲೇ, ಭಾರತ ಹಲವು ಸವಾಲುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಬಡತನದ ನಿವಾರಣೆ ಸಂಪೂರ್ಣ ಸಾಧ್ಯವಾಗಬೇಕಿದೆ. ಹಾಗೆಯೇ ಅನೈರ್ಮಲ್ಯ, ಅನಕ್ಷರತೆ, ಅಪೌಷ್ಟಿಕತೆ, ಭ್ರಷ್ಟಾಚಾರ, ಭಯೋತ್ಪಾದನೆ, ಜಾತೀಯತೆ, ಕೋಮುವಾದ ಇತ್ಯಾದಿ ಕಾಡುವ ಸಮಸ್ಯೆಗಳ ಸಾಲು ಸಾಲೇ ಇದೆ. ಇದರೊಂದಿಗೆ ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ಇಂಧನ, ಕಾನೂನು ಮೊದಲಾದ ಎಲ್ಲ ಕ್ಷೇತ್ರದಲ್ಲಿ ಮುಂದಡಿ ಇಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಿಂದೆದಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ.

ಹೊಸ ಚಿಂತನೆ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದ್ದಲ್ಲಿ ಕ್ರಮೇಣ ಈ ಎಲ್ಲ ಸವಾಲುಗಳು ಪರಿಹಾರದ ದಾರಿಗೆ ಬಂದು ನಿಲ್ಲುತ್ತವೆ. ಆದರೆ, ಆ ನಿಟ್ಟಿನಲ್ಲಿ ನಮ್ಮೊಳಗಿನ ಮತಭೇದಗಳು, ಭಿನ್ನಾಭಿಪ್ರಾಯಗಳು ಗೌಣವಾಗಬೇಕು. ಭಾರತಕ್ಕೆ ಬ್ರಿಟಿಷರ ಕಪಿಮುಷ್ಟಿಯಿಂದ ಸ್ವಾತಂತ್ರ್ಯ ದೊರಕಿಸಿ ಕೊಡಲು ಲಕ್ಷಾಂತರ ಜನರ ಬಲಿದಾನ ನಡೆದಿದೆ ಎಂಬುದನ್ನು ಮರೆಯಬಾರದು. ಅವರ ತ್ಯಾಗ, ಬಲಿದಾನಗಳ ಆದರ್ಶಗಳನ್ನು ಕಣ್ಮುಂದೆ ಇರಿಸಿಕೊಂಡೇ ಸತ್ವಶಾಲಿ ಭಾರತದ ನಿರ್ವಣವಾಗಬೇಕಿದೆ. ಅದು ಈ ಸ್ವಾತಂತ್ರ ್ಯ ದಿನದ ಸಂಕಲ್ಪವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net