

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
"What Israel Can Learn From Modi: National Honour as a Strategic Asset' ಇದೇ ಭಾನುವಾರ ‘ಜೆರುಸಲೇಂ ಟೈಮ್್ಸ’ ಪತ್ರಿಕೆಯಲ್ಲಿ ಪ್ರಕಟವಾದ ಅಭಿಪ್ರಾಯ ಲೇಖನವೊಂದರ ಶೀರ್ಷಿಕೆ ಇದು! ‘ಮೋದಿಯವರಿಂದ ಇಸ್ರೇಲ್ ಕಲಿಯಬಹುದಾದುದೇನು: ರಣತಂತ್ರೀಯ ಆಸ್ತಿಯಾಗಿ ರಾಷ್ಟ್ರೀಯ ಗೌರವ’ ಎಂಬ ಈ ಲೇಖನದಲ್ಲಿ ಡೊನಾಲ್ಡ್ ಟ್ರಂಪ್ ಮತ್ತವರ ಸರ್ಕಾರದ ಸಹಯೋಗಿಗಳು ಭಾರತದ ಕುರಿತು ಬಳಸುವ ಅಪಶಬ್ದಗಳು ಮತ್ತು ಒತ್ತಡಗಳ ವಿವರ ನೀಡಿ, ಅದೆಲ್ಲಕ್ಕೂ ಸೊಪ್ಪು ಹಾಕದೇ ಮೋದಿ ಸರ್ಕಾರ ದೇಶದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡಿ ರಾಷ್ಟ್ರೀಯ ಗೌರವವನ್ನು ಕಾಪಾಡಿಕೊಳ್ಳುತ್ತಿರುವುದನ್ನು ಮುಕ್ತವಾಗಿ ಶ್ಲಾಘಿಸಲಾಗಿದೆ.
ಜತೆಗೆ, ಇಸ್ರೇಲ್ ಸಹ ಟ್ರಂಪ್ರ ನಡವಳಿಕೆಗಳನ್ನು ವಿರೋಧಿಸಿ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬಾರದೇಕೆ? ಎಂಬ ಪ್ರಶ್ನೆಯನ್ನೂ ಎತ್ತಲಾಗಿದೆ. ಈ ಲೇಖನವನ್ನು ಹಿನ್ನೆಲೆಯಾಗಿಟ್ಟುಕೊಂಡು ಕಳೆದ ನಾಲ್ಕು ತಿಂಗಳುಗಳಲ್ಲಿ ಟ್ರಂಪ್ ಆಡಳಿತ ಭಾರತದ ಬಗ್ಗೆ ಬಹಿರಂಗವಾಗಿ ತಳೆದಿರುವ ನಿಲುವುಗಳನ್ನು ನೆನಪು ಮಾಡಿಕೊಂಡು, ಅದರಿಂದಾಗಿ ಮೋದಿ ಸರ್ಕಾರ ಎದುರಿಸುತ್ತಿರುವ ಸವಾಲುಗಳನ್ನು ವಿಶ್ಲೇಷಿಸಲು ಮತ್ತು ಮೋದಿ ಸರ್ಕಾರವನ್ನು ಉರುಳಿಸಲು ಟ್ರಂಪ್ ಆಡಳಿತ ಪಿತೂರಿ ಹೂಡಿ ಅದರಲ್ಲಿ ವಿಫಲವಾದ ಪ್ರಕರಣದ ಪರಿಚಯವನ್ನೂ ಈ ಲೇಖನದಲ್ಲಿ ಮಾಡಿಕೊಳ್ಳೋಣ.
ಟ್ರಂಪ್ ಹೊರಜಗತ್ತಿನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವುದು, ಬೆದರಿಕೆಯ ತಂತ್ರಗಳನ್ನು ಬಳಸುವುದು ಹೊಸದೇನಲ್ಲ. ತಮ್ಮ ಮೊದಲ ಆಡಳಿತಾವಧಿಯಲ್ಲಿ ಅವರು ಅವೆಲ್ಲವನ್ನೂ ಚೀನಾ ಮತ್ತು ಪಾಕಿಸ್ತಾನಗಳ ವಿರುದ್ಧ ಸಾಕಷ್ಟು ಮಾಡಿದ್ದರು. ಈ ಬಾರಿ ಅವರು ತಿರುಗಿದ್ದು ನೆರೆಯ ಕೆನಡಾ ಕಡೆಗೆ. ಕೆನಡಾ ಸ್ವತಂತ್ರ ದೇಶವಲ್ಲ, ಅದು ಅಮೆರಿಕಾದ 51ನೇ ರಾಜ್ಯ ಎಂದು ಮತ್ತೆಮತ್ತೆ ಹೇಳಿದ್ದಲ್ಲದೆ ಆ ದೇಶದ ಆಗಿನ ಪ್ರಧಾನಿ ಜಸ್ಟಿನ್ ತ್ರೂಡೋ ಅವರನ್ನು ‘ಕೆನಡಾ ಎಂಬ ಮಹಾ ರಾಜ್ಯದ ಗವರ್ನರ್’ ಎಂದೂ ಒಂದಕ್ಕಿಂತ ಹೆಚ್ಚುಬಾರಿ ಕರೆದಿದ್ದರು.
ಎರಡೂ ದೇಶಗಳ ಜನತೆಗಳ ನಡುವಿನ ಸಾಂಸ್ಕೃತಿಕ ಬಂಧ ಹಾಗೂ ಪರಸ್ಪರ ಆರ್ಥಿಕ ಅವಲಂಬನೆಗಳ ಆಧಾರದ ಮೇಲೆ ಅವೆರಡೂ ಒಂದಾಗುವುದು ವ್ಯಾವಹಾರಿಕ ಎಂದು ನನಗೂ ಅನಿಸಿತ್ತು, ಆ ಬಗ್ಗೆ ಬರೆದಿದ್ದೆ ಕೂಡ. ಆದರೆ ಆ ಹಾದಿಯಲ್ಲಿ ಟ್ರಂಪ್ ತಪ್ಪಲಾಗದ ಬಗೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಎನ್ನುವುದೂ ಅಷ್ಟೇ ಸತ್ಯವಾಗಿತ್ತು. ಒಂದಾಗಬೇಕಾದರೆ ಪರಸ್ಪರ ಗೌರವ ಅತ್ಯಗತ್ಯ ಎಂಬ ಸ್ವರ್ಣಸೂತ್ರವನ್ನು ಅವರು ಗಾಳಿಗೆ ತೂರಿದ್ದು ಅಕ್ಷಮ್ಯ. ಪರಿಣಾಮವನ್ನು ನಾವೆಲ್ಲ ನೋಡಿಯೇ ಇದ್ದೇವೆ. ಚುನಾವಣೆಗಳಲ್ಲಿ ಪರಾಭವವನ್ನು ಎದುರಿಸುತ್ತಿದ್ದ ಲೇಬರ್ ಪಕ್ಷ ಟ್ರಂಪ್ರ ಒರಟು ಬೆದರಿಕೆಗಳಿಗೆ ತಕ್ಕ ಪ್ರತಿಕ್ರಿಯೆ ನೀಡುವುದರ ಮೂಲಕ ತನ್ನ ಜನಪ್ರಿಯತೆಯನ್ನು ತ್ವರಿತವಾಗಿ ವೃದ್ಧಿಸಿಕೊಂಡು ಚುನಾವಣೆಗಳಲ್ಲಿ ಜಯ ಸಾಧಿಸಿತು.
ಟ್ರಂಪ್ ಉತ್ತರದ ಗ್ರೀನ್ಲ್ಯಾಂಡ್ ಮೇಲೆ ಕಣ್ಣುಹಾಕುವುದು ಹೊಸ ವಿಷಯವೇನೂ ಆಗಿರಲಿಲ್ಲ. ಆದರೆ ಈ ಬಾರಿ ಅದು ಸ್ವಲ್ಪ ಅತಿರೇಕಕ್ಕೆ ಹೋಯಿತೆಂದೇ ಹೇಳಬೇಕು. ಗ್ರೀನ್ಲ್ಯಾಂಡ್ ಅಮೆರಿಕಾದ ಭಾಗವಾಗುವುದು ಹಲವು ಬಗೆಗಳಲ್ಲಿ ಅಗತ್ಯ ಹಾಗೂ ಶ್ರೇಯಸ್ಕರವೆನಿಸಿದರೂ ಅದಕ್ಕಾಗಿ ಟ್ರಂಪ್ ಹಿಡಿಯಹೊರಟ ಅವಹೇಳನಕಾರಿ ಬೆದರಿಕೆಯ ಮಾರ್ಗ ಉಚಿತವಾಗಿರಲಿಲ್ಲ. ಹೀಗಾಗಿ ಗ್ರೀನ್ಲ್ಯಾಂಡ್ ಅನ್ನು ಒಂದು ಸ್ವಾಯತ್ತ ಪ್ರದೇಶವಾಗಿ ಹೊಂದಿರುವ ಡೆನ್ಮಾರ್ಕ್ ಮತ್ತದರ ಯೂರೋಪಿಯನ್ ಮಿತ್ರದೇಶಗಳಿಗೆ ಇರಿಸುಮುರಿಸಾಯಿತು.
ಹೀಗೆ ಕೆನಡಾ, ಡೆನ್ಮಾರ್ಕ್, ಪನಾಮಾ ಮುಂತಾದ ದೇಶಗಳ ಕುರಿತಾಗಿ ಅಪಶಬ್ದಗಳನ್ನಾಡುತ್ತಲೇ ಶ್ವೇತಭವನ ಪ್ರವೇಶಿಸಿದ ಟ್ರಂಪ್ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕುರಿತಾಗಿ ಸದ್ಭಾವನೆಯನ್ನು ಸಾರ್ವಜನಿಕವಾಗಿ ಒಂದಕ್ಕಿಂತ ಹೆಚ್ಚು ಬಾರಿ ವ್ಯಕ್ತಪಡಿಸಿದ್ದರು. ಅವರ ಪ್ರಮಾಣವಚನ ಸಮಾರಂಭದಲ್ಲಿ ವಿದೇಶಮಂತ್ರಿ ಎಸ್.ಜೈಶಂಕರ್ ಅವರನ್ನು ಪ್ರಮುಖ ಸ್ಥಾನದಲ್ಲಿ ಆಸೀನರಾಗಿಸಲಾಗಿತ್ತು. ಅಲ್ಲದೆ ಅಧಿಕಾರ ವಹಿಸಿಕೊಂಡ ಮೂರು ದಿನಗಳೊಳಗೆ ಟ್ರಂಪ್ ಪ್ರಧಾನಿ ಮೋದಿಯವರ ಜತೆ ದೂರವಾಣಿಯಲ್ಲಿ ಸಂಭಾಷಿಸಿದರು ಮತ್ತು ಮೂರು ವಾರಗಳಲ್ಲಿ ವಾಷಿಂಗ್ಟನ್ಗೆ ಆಹ್ವಾನಿಸಿ ಮಾತುಕತೆ ನಡೆಸಿದರು. ಮೋದಿ ಸರ್ಕಾರವನ್ನು ಉರುಳಿಸಲು ಹಿಂದಿನ ಜೋ ಬೈಡೆನ್ ಆಡಳಿತದ ಸಮಯದಲ್ಲಿ ಯುಎಸ್ಎಐಡಿ ಪ್ರಯತ್ನಿಸಿತ್ತೆಂದೂ, ತನಿಖೆಗೋಸ್ಕರ ಆ ವಿವರಗಳನ್ನು ಮೋದಿ ಸರ್ಕಾರಕ್ಕೆ ಒದಗಿಸುವುದಾಗಿಯೂ ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಜಗತ್ತಿಗೇ ಸಾರಿದ್ದಂತೂ ಮೋದಿ ಸರ್ಕಾರ ಮತ್ತು ಟ್ರಂಪ್ ಆಡಳಿತದ ನಡುವಿನ ಉತ್ತಮ ಸಂಬಂಧಗಳ ಪರಾಕಾಷ್ಠೆ.
ಆದರೆ ‘ಆಪರೇಷನ್ ಸಿಂಧೂರ’ದ ನಂತರ ಟ್ರಂಪ್ ಭಾರತದ ವಿರುದ್ಧವಾಗಿ ತಿರುಗಿದರು. ಅದಕ್ಕೆ ಮುಖ್ಯ ಕಾರಣ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯಲ್ಲಿ ಅಮೆರಿಕಾ ರಹಸ್ಯವಾಗಿ ಹೊಂದಿದ್ದ ವಾಯುಸೇನಾ ಸವಲತ್ತುಗಳ ಮೇಲೆ ಭಾರತ ಬ್ರಹ್ಮೋಸ್ ಕ್ಷಿಪಣಿ ದಾಳಿ ನಡೆಸಿ ಹಾನಿಯೆಸಗಿದ್ದು ಮತ್ತು ಇತರ ಪಾಕಿಸ್ತಾನಿ ವಾಯುನೆಲೆಗಳ ಮೇಲೂ ದಾಳಿಯೆಸಗಿ ಅವು ಮುಂದೆ ಆಗಬಹುದಾಗಿದ್ದ ಅಮೆರಿಕಾ-ಇರಾನ್ ಸಂಘರ್ಷದಲ್ಲಿ ನಿರುಪಯುಕ್ತವಾಗುವಂತೆ ಮಾಡಿದ್ದು. ಜತೆಗೆ ಟ್ರಂಪ್ ಕುಟುಂಬದ ಮಾಲಿಕತ್ವದ ಕ್ರಿಪ್ಟೋ ಕರೆನ್ಸಿ ವ್ಯವಹಾರ ಸಂಸ್ಥೆ ‘ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್’ (ಡಬ್ಲ್ಯೂ ಎಲ್ಎಫ್) ಪಾಕಿಸ್ತಾನದಲ್ಲಿ ಆರಂಭಿಸಹೊರಟ ರಹಸ್ಯ ವ್ಯವಹಾರಗಳೂ ಟ್ರಂಪ್ ಅವರನ್ನು ಪಾಕಿಸ್ತಾನದತ್ತ ಸೆಳೆದವು. ಈ ಬಗ್ಗೆ ಇದೇ ಅಂಕಣದಲ್ಲಿ ಹಿಂದೆ ವಿವರವಾಗಿ ಹೇಳಲಾಗಿದೆ.
ಇದೆಲ್ಲದರ ನಡುವೆ ಭಾರತದ ಸರಕುಗಳ ಮೇಲೆ ಟ್ರಂಪ್ ಸುಂಕ ವಿಧಿಸಿದ್ದೂ ಆಯಿತು. ಅವರೇನೋ ಎಲ್ಲ ದೇಶಗಳ ಮೇಲೆ ಪಾರಸ್ಪರಿಕ ಸುಂಕವನ್ನು ವಿಧಿಸಿದರು. ಹೀಗಾಗಿ ಹಲವಾರು ಅಮೆರಿಕನ್ ವಸ್ತುಗಳ ಮೇಲೆ ಭಾರತ ಅತ್ಯಧಿಕ (ಶೇಕಡ 70ರಿಂದ 140) ಸುಂಕ ವಿಧಿಸುತ್ತಿರುವುದರಿಂದ ಭಾರತದ ಸರಕುಗಳ ಮೇಲೂ ಅದೇ ರೀತಿ ಟ್ರಂಪ್ ಸುಂಕ ವಿಧಿಸುವುದನ್ನು ಸಮರ್ಥಿಸಬಹುದಾಗಿತ್ತು. ಆದರೆ ಅಧಿಕ ಸುಂಕಕ್ಕೆ ಅವರು ಮತ್ತವರ ಸಹೋದ್ಯೋಗಿಗಳು ನೀಡತೊಡಗಿದ ಕಾರಣ ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವುದು. ಇದು ಕಳೆದ ಮೂರು ವರ್ಷಗಳಿಂದ ಅಮೆರಿಕಾ ಪಾಲಿಸಿಕೊಂಡು ಬಂದಿದ್ದ ನೀತಿಗೇ ಸಂಪೂರ್ಣ ವಿರುದ್ಧ. ಇದೆಷ್ಟು ಅತಿರೇಕಕ್ಕೆ ಹೋಯಿತೆಂದರೆ ಟ್ರಂಪ್ ಮತ್ತವರ ಸಹೋದ್ಯೋಗಿಗಳು ಭಾರತದ ಮೇಲೆ ಅರ್ಥಹೀನ ಆಪಾದನೆಗಳನ್ನು ಹೊರಿಸಿದ್ದು ಮತ್ತು ಅನಾವಶ್ಯಕ ಟೀಕೆಗಳನ್ನು ಮಾಡತೊಡಗಿದ್ದು ತಪ್ಪಾಗಿತ್ತು. ಆದರೆ ಅದೆಲ್ಲವೂ ನೀಡಿದ ಸ್ಪಷ್ಟ ಸಂಕೇತ ಟ್ರಂಪ್ ಆಡಳಿತದ ಸೂಚನೆ ಮೋದಿ ಸರ್ಕಾರದ ವಿರುದ್ಧವಾಗಿ ತಿರುಗಿದೆ ಎಂದು.
ಆರ್ಥಿಕ ಘಟಾನುಘಟಿಗಳಾದ ಐರೋಪ್ಯ ಒಕ್ಕೂಟ ಮತ್ತು ಜಪಾನ್ಗಳು ಟ್ರಂಪ್ರ ಒತ್ತಡ ಮತ್ತು ಬೆದರಿಕೆಗೆ ಬಾಗಿ ಅವರಿಷ್ಟದಂತೆ ವ್ಯಾಪಾರ ಒಪ್ಪಂದ ಮಾಡಿಕೊಂಡರೆ ಭಾರತ ಅಂತಹದೇನಕ್ಕೂ ತಲೆಬಾಗದೇಹೋದದ್ದು, ‘ಅಮೆರಿಕಾದ ಕೃಷಿ, ಡೈರಿ ಮತ್ತು ಸಮುದ್ರ ಉತ್ಪನ್ನಗಳಿಗೆ ಬಾಗಿಲು ತೆರೆದು ನಮ್ಮ ಕೃಷಿಕರು, ಪಶುಪಾಲಕರು ಮತ್ತು ಮತ್ಸೋದ್ಯಮಿಗಳ ಹಿತಕ್ಕೆ ನಾವೆಂದೂ ಧಕ್ಕೆ ತರಲಾರೆವು’ ಎಂದು ಪ್ರಧಾನಿ ಮೋದಿ ಘೊಷಿಸಿದ್ದು ಟ್ರಂಪ್ರನ್ನು ಕೆರಳಿಸಿತು. ಯಾಕೆಂದರೆ ಬೇರಾವ ಜಾಗತಿಕ ನಾಯಕರೂ ಮಹಾಶಕ್ತಿ ಅಮೆರಿಕಾದ ಮಹಾ ಅಧ್ಯಕ್ಷನನ್ನು ಈ ಬಗೆಯಲ್ಲಿ ನಿರ್ಲಕ್ಷಿಸಿಲ್ಲ.
ಹೀಗೆ ಪ್ರಧಾನಿ ಮೋದಿ ಇತರರಂತೆ ತಲೆಬಾಗದೆ ರಾಷ್ಟ್ರೀಯ ಗೌರವವನ್ನು ಕಾಪಾಡಿಕೊಂಡದ್ದು, ಭಾರತೀಯರ ಹಿತಾಸಕ್ತಿಗಳು ಧಕ್ಕೆಗೊಳಗಾಗದಂತೆ ನೋಡಿಕೊಂಡಿದ್ದನ್ನು ಇಸ್ರೇಲಿ ಪತ್ರಿಕೆ ಶ್ಲಾಘಿಸಿದೆ. ಗಾಜಾ ವಿಷಯದಲ್ಲಿ ಪೂರ್ಣವಾಗಿ ಇಸ್ರೇಲ್ ಪರ ನಿಲ್ಲದ ಹಾಗೂ ಪ್ಯಾಲೆಸ್ತೀನ್ ರಾಷ್ಟ್ರದ ಪರವಾಗಿ ನಿಂತಿರುವ ಯೂರೋಪಿಯನ್ ದೇಶಗಳ ಮನಸ್ಸನ್ನು ಬದಲಾಯಿಸಲು ಪ್ರಯತ್ನ ಪಡದಿರುವುದನ್ನು ಉಲ್ಲೇಖಿಸಿ, ಅದಕ್ಕೆ ಪ್ರತಿಯಾಗಿ ಟ್ರಂಪ್ರ ನೀತಿಗಳ ಪರವಾಗಿ ಸಾರಾಸಗಟಾಗಿ ನಿಲ್ಲುವ ನೀತಿಯನ್ನು ಬೆಂಜಮಿನ್ ನೇತನ್ಯಾಹು ಸರ್ಕಾರ ತೊರೆಯಬೇಕು ಎಂದಿದೆ. ಮೋದಿಯವರ ನಿಲುವುಗಳು ಇಸ್ರೇಲ್ನಲ್ಲಿ ಮೆಚ್ಚುಗೆ ಪಡೆದಿವೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅಂತೂ ಪೂರ್ಣವಾಗಿ ಭಾರತದ ಪರ ನಿಂತಿದ್ದಾರೆ. ಆತ್ಮಗೌರವವಿರುವ ಯಾವುದೇ ರಾಷ್ಟ್ರ ಟ್ರಂಪ್ರ ನಿಲುವುಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಘೊಷಿಸಿದ್ದಾರೆ.
ಅಷ್ಟೇ ಅಲ್ಲ, ಬಡ ಭಾರತವೇ ಹೀಗೆ ಟ್ರಂಪ್ರ ಬೆದರಿಕೆಗೆ ಬಗ್ಗದೇ ನಿಂತಿರುವಾಗ ನಾವು ಶ್ರೀಮಂತ ದೇಶಗಳು ಅದು ಹೇಗೆ ತಾನೇ ಶರಣಾಗತರಾಗಿಬಿಟ್ಟೆವು ಎಂಬ ಆತ್ಮಾವಲೋಕನ ಜಪಾನ್ ಮತ್ತು ಯೂರೋಪ್ನಲ್ಲಿ ಈಗ ಆರಂಭವಾಗಿದೆ! ವ್ಯಾಪಾರ ಒಪ್ಪಂದಕ್ಕೆ ಬದಲಾಗಿ ಅಮೆರಿಕಾದಲ್ಲಿ 550 ಬಿಲಿಯನ್ ಡಾಲರ್ಗಳನ್ನೂ ಹೂಡಲು ತಾವು ಒಪ್ಪಿಕೊಂಡದ್ದು ಆತ್ಮಘಾತಕ ಎಂದರಿತ ಜಪಾನ್ ಸರ್ಕಾರ ಅಮೆರಿಕಾ ಜತೆ ವ್ಯಾಪಾರ ಮಾತುಕತೆಗಳನ್ನು ಸ್ಥಗಿತಗೊಳಿಸಿದೆ. ಅಲ್ಲಿನ ಸರ್ಕಾರಿ ವ್ಯಾಪಾರ ನಿಯೋಗ ತನ್ನ ಅಮೆರಿಕಾ ಭೇಟಿಯನ್ನು ರದ್ದುಮಾಡಿದೆ. ಇದೇ ಚಿಂತನೆ ಐರೋಪ್ಯ ಒಕ್ಕೂಟದಲ್ಲೂ ನಡೆಯತೊಡಗಿದೆ. ಪುಟ್ಟ ಡೆನ್ಮಾರ್ಕ್ ಅಂತೂ ಗ್ರೀನ್ಲ್ಯಾಂಡ್ನಲ್ಲಿ ಪಿತೂರಿ ನಡೆಸಲು ಬಂದಿದ್ದ ಸಿಐಎ ಅಧಿಕಾರಿಗಳನ್ನು ಹೊರಹಾಕಿದೆ ಮತ್ತು ಕೋಪನ್ ಹೇಗನ್ನಲ್ಲಿರುವ ಅಮೆರಿಕಾದ ರಾಜತಂತ್ರಜ್ಞರನ್ನು ಕರೆದು ಛೀಮಾರಿ ಹಾಕಿದೆ!
ಹೀಗೆ ಅಮೆರಿಕಾವನ್ನೂ ಎದುರು ಹಾಕಿಕೊಂಡು ತಲೆಯೆತ್ತಿ ನಿಲ್ಲಬಹುದು ಎಂದು ತೋರಿಸಿದ ಮೋದಿಯವರ ಬಗ್ಗೆ ಟ್ರಂಪ್ ಹೇಗೆ ಆಲೋಚಿಸಿರಬಹುದು? ಅದರ ವಿವರಗಳು ಹೀಗೆ ಹೊರಬರುತ್ತಿವೆ. ಶಾಂಘೈ ಸಹಕಾರ ಒಕ್ಕೂಟ ಸಮಾವೇಶದಲ್ಲಿ ಜತೆಗೂಡಿದ ಮೋದಿ, ಜಿನ್ಪಿಂಗ್ ಹಾಗೂ ಪುತಿನ್ರ ಬಗ್ಗೆ, ‘ನಾವು ಭಾರತವನ್ನು ಚೀನಾ ಮತ್ತು ರಷ್ಯಾಗೆ ಕಳೆದುಕೊಂಡುಬಿಟ್ಟೆವು’ ಎಂದು ಟ್ರಂಪ್ ಕಳೆದವಾರ ತಮ್ಮ ‘ಟ್ರೂತ್ ಸೋಷಿಯಲ್’ನಲ್ಲಿ ಅಲವತ್ತುಕೊಂಡರಷ್ಟೇ. ಅದರ ಕುರಿತಾಗಿ ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತ ಟ್ರಂಪ್, ‘ಮೋದಿ ನನ್ನ ಮಿತ್ರ, ಅವರೊಬ್ಬರು ಮಹಾನಾಯಕ’ ಎಂದು ಹೇಳಿದ್ದು ಎಲ್ಲೆಡೆ ಸುದ್ದಿಯಾಯಿತು. ಈ ಮನಪರಿವರ್ತನೆ ಟ್ರಂಪ್ರಲ್ಲಿ ಆದದ್ದು ಹೇಗೆ?
ಮೋದಿ ಸರ್ಕಾರದ ವಿರುದ್ಧ ಯುಎಸ್ಎಐಡಿ ನಡೆಸಿದ ಪಿತೂರಿಯ ಬಗ್ಗೆ ಫೆಬ್ರವರಿಯಲ್ಲಿ ಹೇಳಿ, ತಾವು ಮೋದಿಯವರ ಪರ ಎಂದು ಘೊಷಿಸಿದ ಟ್ರಂಪ್ ಐದೇ ತಿಂಗಳಲ್ಲಿ ಪೂರ್ಣವಾಗಿ ಬದಲಾಗಿ ಮೋದಿ ಸರ್ಕಾರವನ್ನು ಉರುಳಿಸಲು ‘ಪಿತೂರಿ ಆರಂಭಿಸಿದ’ ವಿವರಗಳು ಈಗ ಲಭ್ಯವಾಗಿವೆ. ಅದಕ್ಕಾಗಿ ಸಿಐಎ ಹೂಡಿದ್ದು ಎರಡು ಹಂತದ ಯೋಜನೆ. ಒಂದು- ಮೋದಿಯವರ ವಿರುದ್ಧ ಬಿಜೆಪಿಯಲ್ಲೇ ಬೇರೊಬ್ಬ ನಾಯಕನನ್ನು ಹುಡುಕಿ ಬೆಳೆಸುವುದು. 75 ವರ್ಷ ಪೂರೈಸಿದ ಮೇಲೆ ಮೋದಿ ಅಧಿಕಾರ ತ್ಯಜಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಈ ಯೋಜನೆ ಮಾಡಲಾಯಿತು. ಆದರೆ ಹಾಗೇನೂ ಆಗುವುದಿಲ್ಲ ಎಂಬ ಸೂಚನೆ ಸಿಕ್ಕಿದಂತೆ ಯೋಜನೆ ಮಾರ್ಪಾಡುಗೊಂಡಿತು. ಎರಡು- ಪ್ರಸಕ್ತ ಬಿಜೆಪಿ ನೇತೃತ್ವದ ಸರ್ಕಾರವೇ ಉರುಳುವಂತೆ, ಬದಲಿಗೆ ಬೇರೊಂದು ಸರ್ಕಾರ ರೂಪುಗೊಳ್ಳುವಂತೆ ಸಂಚು ಹೂಡುವುದು.
ಅದಕ್ಕಾಗಿ ಮೂವತ್ತೇಳು ಸಂಸದರನ್ನು ಬಲೆಗೆ ಹಾಕಿಕೊಳ್ಳುವ ಪಿತೂರಿ ನಡೆಯಿತು ಎಂದು ಹೇಳಲಾಗುತ್ತದೆ. ಇದೆಲ್ಲ ಸಂಚುಗಳ ಯಶಸ್ಸಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲೂ ಸಿಐಎ ಕಾರ್ಯಯೊಜನೆ ರೂಪಿಸಿತ್ತಂತೆ. ‘ನರೇಂದರ್ ಸರೆಂಡರ್ ಎಂದು ಟ್ರಂಪ್ ಹೇಳಿದ ಕೂಡಲೇ ಮೋದಿ ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಿಬಿಟ್ಟರು’ ಎಂದು ರಾಜಕಾರಣಿಯೊಬ್ಬರು ಹೇಳಿದ್ದು ಮೋದಿಯವರ ವಿರುದ್ಧ ಜನಾಭಿಪ್ರಾಯ ಮೂಡಿಸುವ ಸಿಐಎ ತಂತ್ರದ ಭಾಗವಾಗಿರಬಹುದು. ಹಾಗೆಯೇ ‘ರಷ್ಯಾ ಮತ್ತು ಭಾರತದ್ದು ಮೃತ ಅರ್ಥವ್ಯವಸ್ಥೆಗಳು, ಅವೆರಡೂ ಹಾಳಾಗಿಹೋಗಲಿ’ ಎಂದು ಟ್ರಂಪ್ ಹತಾಶೆಯಲ್ಲಿ ಹೇಳಿದಾಗ ಇಲ್ಲಿನ ರಾಜಕಾರಣಿಯೊಬ್ಬರು, ‘ಹೌದು, ಟ್ರಂಪ್ ಸತ್ಯ ಹೇಳಿದ ಬಗ್ಗೆ ನನಗೆ ಸಂತೋಷವಾಗುತ್ತಿದೆ; ಎಲ್ಲರಿಗೂ ಗೊತ್ತಿರುವ, ಆದರೆ ಮೋದಿ ಮತ್ತು ಅರ್ಥಮಂತ್ರಿಗೆ ಮಾತ್ರ ಗೊತ್ತಿಲ್ಲದ ಸತ್ಯವೊಂದನ್ನು ಅವರು ಹೇಳಿದ್ದಾರೆ’ ಎಂದು ಹೇಳಿದ್ದೂ ಮೋದಿಯವರ ವಿರುದ್ಧ ಜನಾಭಿಪ್ರಾಯ ಮೂಡಿಸುವ ಅದೇ ಸಿಐಎ ಸಂಚಿನ ಭಾಗವಾಗಿರಬೇಕು.
ಆದರೆ ಅಂತಿಮವಾಗಿ ಇದಾವುದೂ ಯಶಸ್ವಿಯಾಗಲಿಲ್ಲ. ಭಾರತದ ಅರ್ಥವ್ಯವಸ್ಥೆ ಮೃತವಾಗಿಲ್ಲ, ಯಪಿಎ ಕಾಲದಲ್ಲಿ ಹನ್ನೊಂದನೆಯದಾಗಿದ್ದ ಅದು ಹನ್ನೊಂದು ವರ್ಷಗಳಲ್ಲಿ ನಾಲ್ಕನೆಯ ಸ್ಥಾನಕ್ಕೆ ಏರಿದೆ ಎಂದು ಭಾರತೀಯರಿಗೆ ಗೊತ್ತೇ ಇದೆ. ಹಾಗೆಯೇ ಟ್ರಂಪ್ ಹೇಳಿದಂತೆ ಮೋದಿ ಆಪರೇಷನ್ ಸಿಂಧೂರ್ ಅನ್ನು ನಿಲುಗಡೆಗೆ ತರಲಿಲ್ಲ, ಅದರಲ್ಲಿ ಟ್ರಂಪ್ರ ಪಾತ್ರವೇನೂ ಇರಲಿಲ್ಲ ಎನ್ನುವುದೂ ಜನತೆಗೆ ಗೊತ್ತಿದೆ. ಇಲ್ಲಿನ ಕೆಲವು ರಾಜಕಾರಣಿಗಳು ಅಧಿಕಾರದಾಸೆಯಿಂದ ಕನಸಿನ ಲೋಕದಲ್ಲಿ ತೇಲಾಡುತ್ತಿದ್ದಾರೆ ಅಷ್ಟೇ. ‘ಮೊಹೊಬ್ಬತ್ ಕಾ ಬಜಾರ್ ಮೆ ನಫ್ರತ್ ಕಾ ದುಕಾನ್’ ತೆರೆಯುವ ಅವರ ಈ ಕೃತ್ಯ ಅವರು ಬಯಸುವ ಅಧಿಕಾರದಿಂದ ಅವರನ್ನು ದೂರದೂರಕ್ಕೆ ಒಯ್ಯುತ್ತಿದೆ ಎನ್ನವುದನ್ನು ಅವರು ಅರಿಯುತ್ತಿಲ್ಲ. ಅವರ ಸಾಲಿಗೇ ನಿಲ್ಲುವವರು ರಷ್ಯನ್ ತೈಲ ಆಮದಿನಿಂದ ಭಾರತದಲ್ಲಿ ಬ್ರಾಹ್ಮಣರಿಗೆ ಲಾಭವಾಗುತ್ತಿದೆ ಎಂಬ ಮೂರ್ಖತನದ ಮಾತಾಡಿದ ಟ್ರಂಪ್ರ ಸಲಹೆಗಾರ ನವಾರೋ.
ಟ್ರಂಪ್ ಮತ್ತು ಸಿಐಎ ಪಿತೂರಿ ಮೋದಿ ಸರ್ಕಾರಕ್ಕೆ ತಿಳಿದೇ ಇತ್ತು. ಹೀಗಾಗಿಯೇ ಅವರು ‘ಅಮೆರಿಕಾದ ವ್ಯಾಪಾರ ನಿಬಂಧನೆಗಳಿಗೆ ಒಪ್ಪದ ಕಾರಣ ನನಗೆ ವೈಯಕ್ತಿಕ ಹಾನಿಯಾದರೂ ಸರಿ’ ಎಂದು ಹೇಳಿದ್ದು. ಮೋದಿ ಸರ್ಕಾರಕ್ಕೆ ಸಿಐಎ ಪಿತೂರಿಯ ವಿಷಯ ತಲುಪಿದ್ದು ವಾಷಿಂಗ್ಟನ್ನಲ್ಲೇ ಇರುವ ‘ಒಳಗಿನವರಿಂದಲೇ’ ಎಂಬ ವಿಷಯವೂ ಈಗ ಹೊರೆಬಿದ್ದಿದೆ. ತಮ್ಮ ತಂತ್ರಗಳೆಲ್ಲವೂ ಮೋದಿ ಸರ್ಕಾರಕ್ಕೆ ತಿಳಿದುಹೋಗಿವೆ ಎಂದು ಅರಿತಾಗಲೇ ಟ್ರಂಪ್ರ ಮಾತಿನ ವರಸೆ ಬದಲಾದದ್ದು. ಆದರೆ ಅವರಲ್ಲಿ ನಿಜವಾಗಿಯೂ ಮನಪರಿವರ್ತನೆಯಾಗಿದೆಯೇ? ಉತ್ತರ ಇಲ್ಲ ಎಂದು.
ಮೋದಿ ಮಹಾ ನಾಯಕ ಎಂದ ಬೆನ್ನಲ್ಲೇ ‘ಮೋದಿ ಈಗ ಮಾಡುತ್ತಿರುವುದು ನನಗೆ ಸಮ್ಮತವಿಲ್ಲ’ ಎಂದು ಟ್ರಂಪ್ ಹೇಳಿದ್ದು ಧ್ವಂಸಗೊಂಡ ನೂರ್ ಖಾನ್ ನೆಲೆಯನ್ನು ಪುನರ್ನಿರ್ವಿುಸಲು ಅಮೆರಿಕಾ ವಾಯುಸೇನೆಯ ಉನ್ನತಾಧಿಕಾರಿಗಳು ಸಿ-17 ಗ್ಲೋಬ್ವಾಸ್ಟರ್ ಸರಕು ಸಾಗಾಣಿಕೆಯ ವಿಮಾನಗಳಲ್ಲಿ ಅಗತ್ಯ ಸರಂಜಾಮುಗಳನ್ನು ಹೇರಿಕೊಂಡು ಇದೇ ಸೆಪ್ಟೆಂಬರ್ 5ರಂದು ಅಲ್ಲಿ ಕಾಲೂರಿರುವುದು ನಾವು ಇನ್ನೂ ಹೆಚ್ಚಿನ ಎಚ್ಚರಿಕೆಯಿಂದಿರಬೇಕು ಎನ್ನುವುದರ ಸ್ಪಷ್ಟ ಸೂಚನೆ.