

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶಕ್ಕೆ ವಿದೇಶಗಳಿಂದ ಆಯಾತವಾಗುವ ಸರಕುಗಳ ಮೇಲೆ ತಮ್ಮದೇನೋ ಲೆಕ್ಕಾಚಾರದಲ್ಲಿ ಸುಂಕ ವಿಧಿಸುವ ಘೊಷಣೆ ಮಾಡಿದ್ದಾರಷ್ಟೆ. ಬ್ರಿಟನ್, ತುರ್ಕಿ, ಬ್ರೆಜಿಲ್, ಆಸ್ಟ್ರೇಲಿಯಾದಂಥ ಕೆಲವು ದೇಶಗಳ ಆಯಾತಗಳ ಮೇಲೆ ಶೇಕಡ ಹತ್ತರಷ್ಟು ಸುಂಕವಿರುವುದಾದರೆ ವಿಯೆಟ್ನಾಂನಂಥ ದೇಶಗಳ ಮೇಲೆ ಅದು ಶೇಕಡ ನಲವತ್ತೇಳರಷ್ಟಿರುತ್ತದೆ! ಭಾರತದ ಸರಕುಗಳ ಮೇಲೆ 26% ಸುಂಕವಾದರೆ ಬಾಂಗ್ಲಾದೇಶದ ಸರಕುಗಳ ಮೇಲೆ ಅದಕ್ಕಿಂತ ಇನ್ನೂ ಹತ್ತು ಪರ್ಸೆಂಟ್ ಅಧಿಕ! ಚೀನಾದ ಕಥೆಯಂತೂ ಕೇಳಲೇಬೇಡಿ.
ಆ ದೇಶದ ಸರಕುಗಳ ಮೇಲೆ ಮೊದಲೇ 20% ಸುಂಕವಿತ್ತು. ಈಗ ಅದಕ್ಕೆ ಇನ್ನೂ 34% ಸೇರಿಸುವ ನಿರ್ಧಾರ ಟ್ರಂಪ್ ಅವರದು. ಆ ಕಮ್ಯೂನಿಸ್ಟ್ ದೇಶಕ್ಕೆ ಒಟ್ಟಾರೆ 54% ಸುಂಕದ ಹೊರೆ! ಇದು ಇಷ್ಟಕ್ಕೇ ನಿಲ್ಲುವಂತಿಲ್ಲ. ವ್ಯಗ್ರಗೊಂಡ ಚೀನಾ ತಾನೂ ಅಮೆರಿಕಾದ ಸರಕುಗಳ ಮೇಲೆ 34% ಸುಂಕ ವಿಧಿಸುವುದಾಗಿ ಹೇಳುತ್ತಿದ್ದಂತೆ ಆ ದೇಶದ ಮೇಲೆ ಇನ್ನೂ 50% ಸುಂಕ ಹೆಚ್ಚಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಅಂದರೆ ಚೀನೀ ಸರಕುಗಳ ಮೇಲೆ ಸುಂಕ 104% ಆಗಲಿದೆ!
ಟ್ರಂಪ್ರ ಲೆಕ್ಕಾಚಾರ ಹೀಗೇ ಅಂತ ಹೇಳಲಾಗದು. ಆಸ್ಟ್ರೇಲಿಯಾದ ಮೇಲೆ ಕೇವಲ ಹತ್ತು ಪರ್ಸೆಂಟ್ ಸುಂಕವಿದ್ದರೆ ಅದರದ್ದೇ ಭಾಗವಾದ ನಾರ್ಫ್ಲಾಕ್ ದ್ವೀಪಗಳ ಮೇಲೆ 29% ಸುಂಕವಂತೆ! ಅಲ್ಲಿರುವ ಸುಮಾರು ಎರಡು ಸಾವಿರದಷ್ಟು ಜನರು ಅದೇನು ಪಾಪ ಮಾಡಿದ್ದರು ಎಂದು ಟ್ರಂಪ್ ಅವರೇ ಹೇಳಬೇಕು. ಇನ್ನೂ ಒಂದು ಕಥೆ ಕೇಳಿ. ಅದೇ ಆಸ್ಟ್ರೇಲಿಯಾದ್ದೇ ಭಾಗವಾದ ಹರ್ಡ್ ಮತ್ತು ಮೆಕ್ಡೊನಾಲ್ಡ್ ದ್ವೀಪಗಳ ಸರಕುಗಳ ಮೇಲೂ ಸುಂಕ ವಿಧಿಸುವುದಾಗಿ ಟ್ರಂಪ್ ಹೇಳಿಬಿಟ್ಟಿದ್ದಾರೆ. ಪ್ರಶ್ನೆಯೆಂದರೆ ಅಲ್ಲಿಂದ ಅಮೆರಿಕನ್ನರು ಏನು ತರಿಸಿಕೊಳ್ಳುತ್ತಾರೆ ಎನ್ನವುದು. ಯಾಕೆಂದರೆ ಆ ದ್ವೀಪಗಳಲ್ಲಿರುವುದು ಪೆಂಗ್ವಿನ್ಗಳು ಮಾತ್ರ! ಅಮೆರಿಕನ್ನರು ದಿನಬೆಳಗಾದರೆ ತಿನ್ನುವ ಮೆಕ್ಡೊನಾಲ್ಡ್ ತಿನಿಸುಗಳೆಲ್ಲ ಶೀತವಲಯದಲ್ಲಿರುವ ಮೆಕ್ಡೊನಾಲ್ಡ್ ದ್ವೀಪದಿಂದ ಬರುತ್ತದೆಂದು ಅಧ್ಯಕ್ಷರು ಮತ್ತವರ ಆರ್ಥಿಕ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿದಿದ್ದಾರೆನೋ.
ಇರಲಿ, ಟ್ರಂಪ್ರ ಸುಂಕ ಜಾರಿಯಾಗುವುದು ಏಪಿಲ್ 9ರ ಮಧ್ಯರಾತ್ರಿ 12ರಿಂದ ಅಂತೆ. ಅಷ್ಟರಲ್ಲಿ ಏನೇನೋ ಆಗಬಹುದು. ಸುಂಕ ಕಡಿಮೆ ಮಾಡಿ ಅಂತ ಸುಮಾರು ಐವತ್ತು ದೇಶಗಳು ಟ್ರಂಪ್ ಆಡಳಿತದ ಜತೆ ಮಾತುಕತೆ ಆರಂಭಿಸಿವೆ. 17% ಸುಂಕಕ್ಕೇ ಸಂಕಟಪಟ್ಟು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ವಾಷಿಂಗ್ಟನ್ಗೆ ಓಡಿದ್ದಾರೆ. ಬಾಂಗ್ಲಾದೇಶದ ಮಹಮದ್ ಯೂನುಸ್ ಪತ್ರ ಬರೆದು, ‘ನಿಮಗೆ ಬೇಕಾದಂತೆ ನಮ್ಮ ಸುಂಕ ನೀತಿಯನ್ನು ಮಾರ್ಪಾಡುಗೊಳಿಸುತ್ತೇವೆ, ಅದಕ್ಕೆ ನಮಗೆ ಮೂರು ತಿಂಗಳ ಕಾಲಾವಕಾಶ ಕೊಡಿ, ಅಲ್ಲಿಯವರೆಗೆ ಯಾವುದೇ ಸುಂಕ ವಿಧಿಸಬೇಡಿ’ ಎಂದು ಅಂಗಲಾಚಿಕೊಂಡಿದ್ದಾರೆ.
ಇದೆಲ್ಲ ಬೆಳವಣಿಗೆಗಳಿಂದಾಗಿ ಟ್ರಂಪ್ ಏಪ್ರಿಲ್ 2ರಂದು ಹೇಳಿದ್ದನ್ನೇ ಏಪ್ರಿಲ್ 9ರಂದು ಮಾಡಲಾರರು ಎಂದೆನಿಸುತ್ತದೆ. ಚೀನಾ ಒಂದನ್ನುಳಿದು ಇತರೆಲ್ಲ ದೇಶಗಳ ಮೇಲಿನ ಸುಂಕ ಕಡಿಮೆಯಾಗುವ ಸೂಚನೆಗಳು ದಟ್ಟವಾಗಿವೆ. ಹೀಗಾಗಿ ಈ ಸುಂಕಗಳ ನಿಖರ ಚಿತ್ರಣ ನಮಗೆ ದೊರೆಯುವುದು ಏಪ್ರಿಲ್ 9-10ರ ನಂತರವೇ. ಹೀಗಾಗಿ ಈಗಲೇ ಎಲ್ಲ ಬಿಟ್ಟು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಅನಗತ್ಯ. ಇದನ್ನು ಮೊಟ್ಟಮೊದಲು ಅರಿಯಬೇಕಾದವರು ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಹಣ ಹೂಡಿರುವವರು. ಅವರೆಷ್ಟು ಹೆದರಿ ತಮ್ಮಲ್ಲಿದ್ದ ಷೇರುಗಳನ್ನು ಸಾಗಹಾಕಿ ಹಣಮಾಡಿಕೊಳ್ಳಲು ಹೋದರೆಂದರೆ ಏಪಿಲ್ 2ರ ನಂತರ ನ್ಯೂಯಾರ್ಕ್ನಿಂದ ಹಿಡಿದು ಟೋಕಿಯೋವರೆಗೆ ಎಲ್ಲ ಷೇರು ಮಾರುಕಟ್ಟೆಗಳಲ್ಲೂ ಕಾಣುತ್ತಿರುವುದು ‘ರಕ್ತಪಾತ’.
ಇದೇ ಸೋಮವಾರವಂತೂ ‘ಬ್ಲಾ್ಯಕ್ ಮಂಡೇ’ ಆಗಿಹೋಯಿತು. ಏಪ್ರಿಲ್ 10ರ ನಂತರ ಇದು ಸುಧಾರಣೆಯಾಗುವುದು ನಿಶ್ಚಿತ. ಈ ಮಾತುಗಳನ್ನು ಬರೆಯುತ್ತಿರುವಾಗಲೇ (ಏಪ್ರಿಲ್ 8ರ ಮಧ್ಯಾಹ್ನ) ಭಾರತವೂ ಸೇರಿದಂತೆ ಏಷ್ಯಾದ ಎಲ್ಲ ಷೇರು ಮಾರುಕಟ್ಟೆಗಳೂ ಭರ್ಜರಿಯಾಗಿ ಚೇತರಿಸಿಕೊಂಡಿವೆ ಎಂಬ ಸುದ್ದಿ ಬಂದಿದೆ. ಹೀಗಾಗಿ ಈ ವಾರಾಂತ್ಯದ ಹೊತ್ತಿಗೆ ಸ್ಪಷ್ಟ ಚಿತ್ರಣ ದೊರೆತಾಗ ವಿರಾಮವಾಗಿ ಕೂತು ಟ್ರಂಪ್ರ ಸುಂಕ ನೀತಿಗಳನ್ನು ವಿಶ್ಲೇಷಿಸೋಣ. ಅಲ್ಲಿಯವರೆಗೆ ಈ ಸುಂಕದ ಬಿಂಕ, ಮಿದುಳು ಬಿಡಿ ಬೆನ್ನುಮೂಳೆಯೂ ಇಲ್ಲದ ‘ಷೇರು’ ಬಗ್ಗೆ ಗೊಂದಲ ಮಾಡಿಕೊಳ್ಳುವುದರ ಬದಲು ಮನಸ್ಸು ಮುದಗೊಳ್ಳುವ, ಹೃದಯವೂ ಆಹ್! ಎನ್ನುವ ಯಾವುದಾದರೊಂದು ವಿಷಯದ ಬಗ್ಗೆ ಒಂದಷ್ಟು ಹೊತ್ತು ಮಾತಾಡೋಣ. ಅಂತಹ ವಿಷಯ ದೂರದ ಫಿಲಿಪ್ಪೀನ್ಸ್ನ ‘ಮಹಾರಾಜ ರಾವಣ’ನ ಬಗೆಗಲ್ಲದೆ ಇನ್ನಾರ ಬಗ್ಗೆ ಇರಲು ಸಾಧ್ಯ?
ಭಾರತೀಯ ಸಾಂಸ್ಕೃತಿಕ ಹಾಗೂ ಭಾಷಿಕ ಪ್ರಭಾವಕ್ಕೊಳಗಾಗಿರುವ ದಕ್ಷಿಣ ಮತ್ತು ಆಗ್ನೇಯ ಏಷ್ಯಾ ದೇಶಗಳನ್ನು ಒಟ್ಟುಗೂಡಿಸಿ ನಾವು ಹೆಮ್ಮೆಯಿಂದ ‘ಕಲ್ಚರಲ್ ಗ್ರೇಟರ್ ಇಂಡಿಯಾ’ ಅಥವಾ ‘ಸಾಂಸ್ಕೃತಿಕ ಬೃಹದ್ಭಾರತ’ ಎಂದು ಕರೆಯುವುದನ್ನು ವಿದೇಶಿ ವಿದ್ವಾಂಸರು ‘ಇಂಡೋಸ್ಪಿಯರ್’ ಅಂದರೆ ‘ಭಾರತವಲಯ’ ಎಂದು ಕರೆಯುತ್ತಾರೆ. ಹೆಸರಾಂತ ಭಾಷಾಶಾಸ್ತ್ರಜ್ಞ ಹಾಗೂ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಪ್ರೋಫೆಸರ್ ಎಮಿರೇಟಸ್ ಡಾ. ಜೇಮ್ಸ್ ಅಲನ್ ಮ್ಯಾಟಿಸೋಪ್ ಸೃಷ್ಟಿಸಿದ ಈ ಪದ ಅಕ್ಯಾಡೆಮಿಕ್ ವಲಯದಲ್ಲಿ ವಿಸ್ತೃತವಾಗಿ ಬಳಕೆಯಾಗುತ್ತದೆ. ಮ್ಯಾಟಿಸೋಫ್ ಮತ್ತಿತರ ಇಂಡೋಸ್ಪಿಯರ್ ವಿದ್ವಾಂಸರ ಪ್ರಕಾರ ಪೂರ್ವದಲ್ಲಿ ಇಂಡೋನೇಷ್ಯಾ ನಂತರ ಭಾರತೀಯ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿರುವ ಮತ್ತೊಂದು ದ್ವೀಪರಾಷ್ಟ್ರವೆಂದರೆ ಫಿಲಿಪ್ಪೀನ್ಸ್.
ಆಧುನಿಕ ಯುಗದಲ್ಲಿ ಫಿಲಿಪ್ಪೀನ್ಸ್ನ ಹೆಸರು ನಮಗೆ ಮೊದಲು ಕಾಣಿಸಿಕೊಳ್ಳುವುದು ಜಗದ್ವಿಖ್ಯಾತ ನಾವಿಕ ಫರ್ಡಿನೆಂಡ್ ಮ್ಯಾಗೆಲಾನ್ಗೆ ಸಂಬಂಧಿಸಿದಂತೆ. ಪೋರ್ಚುಗೀಸ್ ಮೂಲದ ಸ್ಪಾ್ಯನಿಷ್ ನಾವಿಕನಾದ ಆತ ಇಡೀ ಭೂಗೋಳವನ್ನೇ ಸುತ್ತಿಬರುವ ಯೋಜನೆ ಹಾಕಿದ್ದನ್ನು ನಾವೆಲ್ಲ ಶಾಲೆಯಲ್ಲಿ ಓದಿದ್ದೇವೆ. ಅಟ್ಲಾಂಟಿಕ್ ಸಾಗರದಲ್ಲಿ ಯಾನಗೈದು, ದಕ್ಷಿಣ ಅಮೆರಿಕಾವನ್ನು ಸುತ್ತುವರಿದು, ವಿಶಾಲ ಪೆಸಿಫಿಕ್ ಸಾಗರವನ್ನೂ ಯಶಸ್ವಿಯಾಗಿ ದಾಟಿ ಕೊನೆಗೆ 1521ರಲ್ಲಿ ಅವನು ತಲುಪಿದ ದ್ವೀಪಗಳೇ ಫಿಲಿಪ್ಪೀನ್ಸ್. ಅಲ್ಲಿನ ಜನರನ್ನು ಕ್ರಿಶ್ಚಿಯಾನಿಟಿಗೆ ಮತಾಂತರಿಸಲು ಪ್ರಯತ್ನಿಸಿ, ಅದಕ್ಕಾಗಿ ಅವರ ಮೇಲೆ ಶಕ್ತಿಪ್ರದರ್ಶನ ಮಾಡಹೊರಟ ಅವನನ್ನು ಮಕ್ಟಾನ್ ದ್ವೀಪದ ನಿವಾಸಿಗಳು ಕೊಂದುಹಾಕಿದರು. ಹೀಗೆ ಫಿಲಿಪ್ಪೀನ್ಸ್ ಯೂರೋಪಿಯನ್ನರಿಗೆ ಪರಿಚಯವಾಯಿತು. ಆಮೇಲೆ ಅಲ್ಲಿಗೆ ಸ್ಪಾ್ಯನಿಷರು ಇನ್ನಷ್ಟು ದೊಡ್ಡ ನೌಕಾದಳದೊಂದಿಗೆ ಬಂದು ದ್ವೀಪವಾಸಿಗಳನ್ನು ಸೋಲಿಸಿ, ಪೂರ್ವದಲ್ಲಿ ತಮ್ಮ ವಸಾಹತುಶಾಹಿ ಸಾಮ್ರಾಜ್ಯವನ್ನು ಸ್ಥಾಪಿಸುವುದರಲ್ಲಿ ಯಶಸ್ವಿಯಾದರು. ಮೂರೂವರೆ ಶತಮಾನಕ್ಕೂ ಅಧಿಕ ಕಾಲದ ನಂತರ 1898ರಲ್ಲಿ ಈ ದ್ವೀಪಗಳನ್ನು ಅಮೆರಿಕನ್ನರು ಸ್ಪಾ್ಯನಿಷರಿಂದ ಕಿತ್ತುಕೊಂಡು ನಲವತ್ತೆಂಟು ವರ್ಷಗಳು ಆಳಿ, ದ್ವಿತೀಯ ಮಹಾಯುದ್ಧದ ನಂತರ 1946ರಲ್ಲಿ ಬಿಟ್ಟುಹೋದರು. ಅಲ್ಲಿಂದೀಚೆಗೆ ಅದೊಂದು ಸ್ವತಂತ್ರ ನಾಡು.
ಸ್ಪ್ಯಾನಿಷ್ ವಸಾಹತುಶಾಹಿ ಆಡಳಿತಕ್ಕೊಳಪಟ್ಟು, ಕ್ರಿಶ್ಚಿಯಾನಿಟಿಗೆ ಸಾರಾಸಗಟಾಗಿ ಮತಾಂತರಗೊಳ್ಳುವ ಮೊದಲು ಫಿಲಿಪ್ಪೀನ್ಸ್ ದ್ವೀಪವಾಸಿಗಳ ಬದುಕನ್ನು ಹಿಂದೂ ಮತ್ತು ಬೌದ್ಧ ಧರ್ಮಗಳು ಪ್ರಭಾವಿಸುತ್ತಿದ್ದವು ಎಂದು ಫಿಲಿಪ್ಪೀನ್ಸ್ನ ಖ್ಯಾತ ಮಾನವಶಾಸ್ತ್ರಜ್ಞ ಫೆಲಿಪೆ ಲಾಂಡಾ ಜೊಕಾನೋ (1930-2013) ಸೇರಿದಂತೆ ಹಲವರು ವಿದ್ವಾಂಸರು ಹೇಳುತ್ತಾರೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಯೂರೋಪಿಯನ್ನರು ಬರುವವರೆಗೆ ಫಿಲಿಪ್ಪೀನ್ಸ್ ಜತೆ ಭಾರತ ನೇರವಾದ ಆರ್ಥಿಕ ಸಂಬಂಧಗಳನ್ನು ಹೊಂದಿರಲಿಲ್ಲ. ಎರಡೂ ನಾಡುಗಳ ನಡುವೆ ಯಾವ ಬಗೆಯ ರಾಜಕೀಯ ಸಂಬಂಧಗಳೂ ಇರಲಿಲ್ಲ. ಬದಲಾಗಿ, ಭಾರತ ಮತ್ತು ಫಿಲಿಪ್ಪೀನ್ಸ್ ನಡುವೆ ಸೇತುವೆಯಾದದ್ದು ಇಂಡೋನೇಷ್ಯಾ. ಕ್ರಿ.ಶ. 10 ಮತ್ತು 14ನೇ ಶತಮಾನಗಳ ನಡುವೆ ಇಂಡೋನೇಷ್ಯಾದ ಶ್ರೀವಿಜಯ, ಅದಕ್ಕಿಂತಲೂ ಮುಖ್ಯವಾಗಿ ಮಹಾಪಾಲಿತ್ ಸಾಮ್ರಾಜ್ಯಗಳ ಜತೆ ನಿಕಟ ಆರ್ಥಿಕ ಹೊಕ್ಕುಬಳಕೆ ಹೊಂದಿದ್ದ ಫಿಲಿಪ್ಪೀನ್ಸ್ ದ್ವೀಪವಾಸಿಗಳು ಅಲ್ಲಿಂದ ಹಿಂದೂ ಮತ್ತು ಬೌದ್ಧ ಧರ್ಮಗಳನ್ನೂ, ಭಾರತೀಯ ಸಂಸ್ಕೃತಿಯನ್ನೂ, ಸಾಹಿತ್ಯವನ್ನೂ ಮುಖ್ಯವಾಗಿ ರಾಮಾಯಣವನ್ನೂ ಪಡೆದುಕೊಂಡರು.
ಅಂದರೆ ಇಂಡೋನೇಷ್ಯಾ ನೇರವಾಗಿ ‘ಭಾರತೀಕರಣ’ಗೊಂಡರೆ ಫಿಲಿಪ್ಪೀನ್ಸ್ ಪರೋಕ್ಷವಾಗಿ ಭಾರತೀಕರಣಗೊಂಡಿತು ಎಂದು ಫಿಲಿಪಿನೋ ವಿದ್ವಾಂಸರು ಹೇಳುತ್ತಾರೆ. ಇದಕ್ಕೆ ಜೊಕಾನೋ ಅವರು ಕೊಡುವ ಕಾರಣ ಭಾರತದಿಂದ ಫಿಲಿಪ್ಪೀನ್ಸ್ಗೆ ನೇರ ಸಂಪರ್ಕಮಾರ್ಗವಿರಲಿಲ್ಲ. ಜತೆಗೆ ಎರಡರ ನಡುವಿದ್ದ ಇಂಡೋನೇಷ್ಯಾ ದ್ವೀಪಗಳು ನೇರ ಸಂಪರ್ಕಕ್ಕೆ ಅವಕಾಶವನ್ನೂ ಕೊಡಲಿಲ್ಲ ಎಂದು. ಭಾರತೀಯ ಸಂಸ್ಕೃತಿ ಫಿಲಿಪ್ಪೀನ್ಸ್ನಲ್ಲಿ ಸ್ಥಳೀಕರಣಗೊಂಡಿತು ಅಂದರೆ ಸ್ಥಳೀಯರು ತಮ್ಮ ಮೌಲ್ಯಗಳಿಗೆ ಅನುಗುಣವಾಗಿ ಮಾರ್ಪಡಿಸಿಕೊಂಡರು ಎಂದೂ ಆ ಪ್ರಕ್ರಿಯೆಯನ್ನು ವರ್ಣಿಸುವುದುಂಟು. ನಂತರದ ಶತಮಾನಗಳಲ್ಲಿ ಇಂಡೋನೇಷ್ಯಾದಿಂದ ಫಿಲಿಪ್ಪೀನ್ಸ್ಗೆ ಇಸ್ಲಾಂ ಸಹ ಹೋದರೂ ಅದು ದಕ್ಷಿಣದ ಸುಲು ದ್ವೀಪಕ್ಕಷ್ಟೇ ಸೀಮಿತಗೊಂಡಿತು. ಹೀಗಾಗಿ ಆ ದ್ವೀಪದಲ್ಲಿ ಇಸ್ಲಾಂ-ಪ್ರೇರಿತ ಪ್ರತ್ಯೇಕತಾ ಆಂದೋಲನ, ರಕ್ತಪಾತ ಹಲವು ದಶಕಗಳಿಂದಲೂ ನಡೆಯುತ್ತಿದೆ.
ಯೂರೋಪಿಯನ್ನರ ಆಕ್ರಮಣ, ಕ್ರಿಶ್ಚಿಯಾನಿಟಿಯ ಒತ್ತಡದಿಂದ ಫಿಲಿಪ್ಪೀನ್ಸ್ ದ್ವೀಪಗಳಲ್ಲಿ ಭಾರತೀಯ ಸಂಸ್ಕೃತಿ ಹಿನ್ನೆಲೆಗೆ ಸರಿದರೂ ಅದು ಪೂರ್ಣವಾಗಿ ಮಾಯವಾಗಿಲ್ಲ. ಕೆಲವು ಭೌತಿಕ ಕುರುಹುಗಳು ಆಗಾಗ ಪತ್ತೆಯಾಗುತ್ತಲೇ ಇರುತ್ತವೆ. ಇವುಗಳಲ್ಲಿ ಬಹು ಮುಖ್ಯವಾದುದು 1.79 ಕಿಲೋಗ್ರಾಂ ತೂಕದ, 21 ಕ್ಯಾರೆಟ್ ಚಿನ್ನದ ‘ಅಗುಸಾನ್ ಸ್ವರ್ಣಪ್ರತಿಮೆ’ ಎಂದು ಹೆಸರಾಗಿರುವ ದೇವಿ ಪಾರ್ವತಿಯ ಪುತ್ಥಳಿ. ಬಿಲಾಯ್ ಕಾಪೋಸ್ ಎಂಬ ಮಹಿಳೆಗೆ 1918ರಲ್ಲಿ ಆಗುಸಾನ್ನ ಎಸ್ಪರಾಂಜಾ ಎಂಬಲ್ಲಿ ಸಿಕ್ಕಿದ್ದರಿಂದ ಅದಕ್ಕೆ ಆ ಹೆಸರನ್ನಿಡಲಾಗಿದೆ. ದಕ್ಷಿಣದ ಮಿಂಡನಾವೋ ದ್ವೀಪದ ಸ್ಥಳೀಯ ಕುಶಲಕರ್ವಿುಗಳಿಂದ ತಯಾರಿಸಲ್ಪಟ್ಟ ಕಾರಣ ಭಾರತ ಅಥವಾ ಇಂಡೋನೇಷ್ಯನ್ ಪುತ್ಥಳಿಗಳಿಗಿಂತ ಇದು ತುಸು ಭಿನ್ನವಾಗಿದೆ. ಈ ಭಿನ್ನತೆ ಎದ್ದು ಕಾಣುವುದು ದೇವಿಯ ಕೈಗಳು ಇರುವ ಬಗೆಯಲ್ಲಿ.
1989ರಲ್ಲಿ ಪತ್ತೆಯಾದ ಹತ್ತನೆಯ ಶತಮಾನದ ‘ಲಾಗುಣ ತಾಮ್ರಪತ್ರ ಶಾಸನ’ ಫಿಲಿಪ್ಪೀನ್ಸ್ನ ಹಿಂದೂ ಗತದ ಬಗೆಗಿನ ಮತ್ತೊಂದು ಉದಾಹರಣೆ. 1992ರಲ್ಲಿ ಈ ಶಾಸನವನ್ನು ಬಿಡಿಸಿದ ಡಚ್ ಮಾನವಶಾಸ್ತ್ರಜ್ಞ ಆಂಟೂನ್ ಪೋಸ್ಟ್ಮಾ ಹೇಳುವುದು ಇದು ಫಿಲಿಪ್ಪೀನ್ಸ್ನಲ್ಲಿ ಬರವಣಿಗೆಯ ಬಗ್ಗೆ ದೊರೆತಿರುವ ಅತಿ ಹಳೆಯ ಮಾದರಿ ಎಂದು. ಪ್ರಾಚೀನ ಕಾವಿ ಲಿಪಿಯಲ್ಲಿ ಪ್ರಾಚೀನ ಮಲಯ ಭಾಷೆಯಲ್ಲಿ ರಚಿತವಾಗಿರುವ ಈ ಶಾಸನದಲ್ಲಿ ಸಂಸ್ಕೃತ ಪದಗಳು ಹೇರಳವಾಗಿವೆ. ಹಾಗೆಯೇ ಫಿಲಿಪಿನೋ ಆಡುನುಡಿಯಲ್ಲಿ, ಮುಖ್ಯವಾಗಿ ಆಡಳಿತ ಮತ್ತು ಧರ್ಮಗಳಿಗೆ ಸಂಬಂಧಿಸಿದ ನೂರಾರು ಸಂಸ ್ಕೃ ಶಬ್ದಗಳಿವೆ. ವಸಾಹತುಪೂರ್ವ ಫಿಲಿಪ್ಪೀನ್ಸ್ನ ಅರಸುಮನೆತನಗಳಲ್ಲಿ ರಾಜ, ರಾಣಿ, ಮಹರ್ಲಿಕಾ, ದಾತು ಎಂಬ ಸಂಸ್ಕೃತ ಮೂಲದ ಉಪಾಧಿಗಳು ಸರ್ವೆಸಾಮಾನ್ಯವಾಗಿದ್ದವು.
ಫಿಲಿಪ್ಪೀನ್ಸ್ನಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಹೇಳುವಾಗ ನಾವು ‘ಮಹಾರಾದಿಯ ಲಾವಣ’ವನ್ನು ಉಲ್ಲೇಖಿಸಲೇಬೇಕು. ‘ಮಹಾರಾಧ್ಯ ಲಾವಣ’, ‘ಮಹಾರಾಜ ರಾವಣ’ ಎಂದೂ ಕರೆಯಲ್ಪಡುವ ಈ ಕಾವ್ಯ ಸಂಪೂರ್ಣವಾಗಿ ‘ಸ್ಥಳೀಕರಣ’ಗೊಂಡ ರಾಮಾಯಣ. ಮಿಂಡನಾವೋ ದ್ವೀಪದ ಲನಾವೋ ಸರೋವರದ ಸುತ್ತಲಿನ ಮರನಾವೋ ನಿವಾಸಿಗಳು ಅದೆಷ್ಟೋ ತಲೆಮಾರುಗಳಿಂದ ಹಾಡುತ್ತ ಬಂದಿದ್ದ ಈ ಜನಪದ ‘ಹಾಡುಗಬ್ಬ’ ಹೊರಜಗತ್ತಿಗೆ ಪರಿಚಯವಾದದ್ದು 1960ರ ದಶಕದ ಉತ್ತರಾರ್ಧದಲ್ಲಿ, ಗುರುತಿಸಿ ಪರಿಚಯಿಸಿದವರು ಮನಿಲಾ ವಿಶ್ವವಿದ್ಯಾಲಯದ ಇಂಡಾಲಜಿಸ್ಟ್ ಅಂದರೆ ಭಾರತಶಾಸ್ತ್ರಜ್ಞ ಪ್ರೋ. ಜುವಾನ್ ಆರ್. ಫ್ರಾನ್ಸಿಸ್ಕೋ.
ಲನಾವೋ ಸರೋವರ ಪ್ರದೇಶದಲ್ಲಿ ಸಂಶೋಧನಾನಿರತರಾಗಿದ್ದ ಫ್ರಾನ್ಸಿಸ್ಕೋ ಅವರಿಗೆ ಮರನಾವೋ ನಿವಾಸಿಗಳು ಹಾಡುತ್ತಿದ್ದ ಈ ಹಾಡುಗಬ್ಬ 1968ರಲ್ಲಿ ಕಿವಿಗೆ ಬಿದ್ದಾಗ ಅಚ್ಚರಿ, ಏನೋ ಛಳಕು! ಹಾಡಿನಲ್ಲಿನ ಹೆಸರುಗಳು ರಾಮಾಯಣದಲ್ಲಿನ ಹೆಸರುಗಳಂತೇ ಇವೆಯಲ್ಲ ಎಂಬ ಕುತೂಹಲ. ಸರಿ, ತಮ್ಮ ಸಂಶೋಧನೆಯನ್ನು ಈ ದಿಕ್ಕಿಗೆ ತಿರುಗಿಸಿದರು. ಮರನಾವೋ ವಿದ್ವಾಂಸ ನಾಗಾಸುರ ಮಾದಲೆ ಅವರ ಸಹಕಾರದೋಂದಿಗೆ ‘ಮಹಾರಾದಿಯ ಲಾವಣ’ವನ್ನು ಇಂಗ್ಲಿಷ್ಗೆ ಭಾಷಾಂತರಿಸಿದರು. ದೇವತೆಗಳಿಂದ ಹಲವು ವರಗಳನ್ನು ಪಡೆದಿದ್ದ ಲಾವಣ ಎಂಬ ವಾನರ ರಾಜನ ಸಾಹಸಗಾಥೆಯನ್ನು ‘ಮಹಾರಾದಿಯ ಲಾವಣ’ ಹೇಳುತ್ತದೆ. ಇದರಲ್ಲಿ ರಾಮಾಯಣದ ಪಾತ್ರಗಳಿವೆ, ಘಟನೆಗಳಿವೆ ಪ್ರಕರಣಗಳಿವೆ; ಆದರೆ ಎಲ್ಲವೂ ಕಲಸುಮೇಲೋಗರವಾಗಿಬಿಟ್ಟಿವೆ! ಹೀಗಾಗಿರುವುದಕ್ಕೆ ಕಾರಣಗಳನ್ನು ಹುಡುಕಲು ಪೊ›. ಫ್ರಾನ್ಸಿಸ್ಕೋ ಪ್ರಯತ್ನಿಸುತ್ತಾರೆ. ಅವರು ಹೇಳುವುದು, ಈ ಮರನಾವೋ ರಾಮಾಯಣದ ಮೂಲ ಮಲಯಾದ ರಾಮಾಯಣ, ಭಾರತದಿಂದ ಮಲಯಾಗೆ ಬಂದಾಗಲೇ ಅದು ಸಾಕಷ್ಟು ಬದಲಾಗಿತ್ತು, (ಇಂಡೋನೇಷ್ಯಾದ ರಾಮಾಯಣದ ನಾಯಕ ಹನುಮಂತ ಎನ್ನುವುದನ್ನು ನೆನಪಿಸಿಕೊಳ್ಳಿ)
ಅಲ್ಲಿಂದ ಫಿಲಿಪ್ಪೀನ್ಸ್ಗೆ ಬಂದಮೇಲೆ ಇದು ಲಿಖಿತ ರೂಪಕ್ಕಿಳಿಯಲೇ ಇಲ್ಲ. ತಲೆಮಾರಿನಿಂದ ತಲೆಮಾರಿಗೆ ಬಾಯಿ ಮೂಲಕವೇ ಹರಿದುಬಂದ ಇದು ಆ ಹಾದಿಯಲ್ಲಿ ತನ್ನ ಮೂಲರೂಪವನ್ನೇ ಕಳೆದುಕೊಂಡುಬಿಟ್ಟಿತು ಎಂದು ಫ್ರಾನ್ಸಿಸ್ಕೋ ಹೇಳುತ್ತಾರೆ. ಈ ಪ್ರಕ್ರಿಯೆಯನ್ನು ಅವರು ‘ರಾಮಾಯಣದ ಸ್ಥಳೀಕರಣ’ ಎಂದು ವಿವರಿಸುತ್ತಾರೆ. ಇನ್ನೂ ಒಂದು ವಿಚಿತ್ರ ಹಾಗೂ ಅಚ್ಚರಿಯ ವಿಷಯವೆಂದರೆ ಮಹಾರಾದಿಯ ಲಾವಣ ಗಾಥೆಯನ್ನು ಹಾಡುವ ಮರನಾವೋ ಜನರು ಮುಸ್ಲಿಂ ಧರ್ಮದ ಅನುಯಾಯಿಗಳು! ಅಂದರೆ ಶತಮಾನಗಳ ಹಿಂದೆ ಹಿಂದೂ ಧರ್ವನುಯಾಯಿಗಳಾಗಿದ್ದಾಗ ಕಲಿತ ರಾಮಾಯಣವನ್ನು ಈಗಿನ ಸ್ಥಿತಿಯಲ್ಲಾದರೂ ಅವರು ಇನ್ನೂ ಉಳಿಸಿಕೊಂಡಿದ್ದಾರೆ ಎನ್ನುವುದು ಸಂತೋಷದ ವಿಷಯ. ಇದು ದಕ್ಷಿಣದ ಮಿಂಡಾನಾವೋ ದ್ವೀಪದ ಅಚ್ಚರಿಯಾದರೆ ಉತ್ತರದ ಲೂಜಾನ್ ದ್ವೀಪದ ಇಲಕಾನೋ ಜನರ ಮಹಾಕಾವ್ಯ ‘ಬಿಯಾಗ್ ನಿ ಲಾಮ್ಆಂಗ್’ ಕಾವ್ಯಕ್ಕೆ ಪ್ರೇರಣೆ ಮಹಾಭಾರತ ಮತ್ತು ರಾಮಾಯಣ ಎಂದು ಫಿಲಿಪ್ಪೀನ್ಸ್ನ ಹೈಸ್ಕೂಲ್ ಪಠ್ಯಪುಸ್ತಕಗಳೇ ಹೇಳುತ್ತವೆ!
ಹೀಗೆ ಹಿಂದೆ ಸಾಂಸ್ಕೃತಿಕ ಸಂಬಂಧಗಳನ್ನು ಪರೋಕ್ಷವಾಗಿಯಾದರೂ ಸ್ಥಾಪಿಸಿಕೊಂಡು, ವಸಾಹತುಶಾಹಿ ಆಳ್ವಿಕೆಯಲ್ಲೂ ಉಳಿಸಿಕೊಂಡ ಭಾರತ ಮತ್ತು ಫಿಲಿಪ್ಪೀನ್ಸ್ ದ್ವಿತೀಯ ಮಹಾಯುದ್ಧದ ತರುವಾಯ ಸರಿಸುಮಾರು ಏಕಕಾಲದಲ್ಲಿ ಸ್ವಾತಂತ್ರ್ಯ ಗಳಿಸಿ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿಕೊಂಡರೂ ಶೀತಲ ಸಮರದ ಕಾರಣದಿಂದ ಎರಡೂ ದೇಶಗಳು ದೂರದೂರವಾಗಿಯೇ ಉಳಿದವು. ಅಮೆರಿಕಾದ ಪರ ನಿಂತ ಫಿಲಿಪ್ಪೀನ್ಸ್, ಅಲಿಪ್ತ ಚಳವಳಿಯ ಪರದೆಯ ಹಿಂದೆ ಸೋವಿಯತ್ ಪರವಹಿಸಿದ ಭಾರತ ಹತ್ತಿರವಾಗಲು ಸಾಧ್ಯವಾಗದ್ದು ಸಹಜವೇ. ಇತ್ತೀಚಿನ ದಿನಗಳಲ್ಲಿ ಹೊಸ ಗಾಳಿ ಬೀಸತೊಡಗಿದೆ. ಕಮ್ಯೂನಿಸ್ಟ್ ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಪ್ಪೀನ್ಸ್ನ ಹಿತಾಸಕ್ತಿಗಳಿಗೂ, ಹಿಂದೂ ಮಹಾಸಾಗರದಲ್ಲಿ ಭಾರತದ ಹಿತಾಸಕ್ತಿಗಳಿಗೂ ಧಕ್ಕೆಯೊಡ್ಡುತ್ತಿದೆ. ಪರಿಣಾಮವಾಗಿ ನವದೆಹಲಿ ಮತ್ತು ಮನಿಲಾ ತಂತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಒಂದಾಗಿ ಪ್ರಯತ್ನಿಸುವ ಹಾದಿಗಿಳಿದಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಫಿಲಿಪ್ಪೀನ್ಸ್ಗೆ ಭೇಟಿ ನೀಡಿ ಉಭಯ ದೇಶಗಳ ನಡುವಿನ ಸಂಬಂಧಗಳು ಮತ್ತು ಸಹಕಾರದಲ್ಲಿ ನವಯುಗವೊಂದಕ್ಕೆ ಚಾಲನೆ ನೀಡಿದ್ದಾರೆ.