

ಕಳೆದ ಅಂಕಣದಲ್ಲಿ ಭಾರತೀಯ ಸಂಸ್ಕೃತಿಯ ಹಬ್ಬ-ಉತ್ಸವಗಳ ಬಗ್ಗೆ, ಅವುಗಳ ವೈಶಿಷ್ಟ್ಯಗಳ ಕುರಿತಾಗಿ ತಿಳಿದುಕೊಂಡೆವು. ಅದರ ಮುಂದುವರಿದ ಭಾಗ ಇಲ್ಲಿದೆ.
ನವರಾತ್ರಿಪರ್ವ: ಅಶ್ವಯುಜ ಮಾಸವು (ಸೆಪ್ಟೆಂಬರ್-ಅಕ್ಟೋಬರ್) ಶರದೃತುವನ್ನು ಬರಮಾಡಿಕೊಳ್ಳುತ್ತದೆ. ಈ ತಿಂಗಳ ಶರವನ್ನವರಾತ್ರಿಯ ಒಂಬತ್ತು ದಿನಗಳಲ್ಲಿ ಜಗನ್ಮಾತೆಯನ್ನು ಆರಾಧಿಸುತ್ತಾರೆ. ಈ ಆಚರಣೆ ವಿಜಯದಶಮಿಯಂದು ಅಂತ್ಯಗೊಳ್ಳುತ್ತದೆ. ಇದನ್ನು ‘ದಶಹರ’ ಅಥವಾ ‘ದಸರಾ’ ಎಂದೂ ಕರೆಯುತ್ತಾರೆ. ಈ ದಿನವು ದೈವೀಪುರುಷನಾದ ಭಗವಾನ್ ಶ್ರೀರಾಮನು ದುಷ್ಟಶಕ್ತಿಗಳಿಗೆ ಪ್ರತೀಕವಾದ ರಾವಣಾಸುರನನ್ನು ವಧಿಸಿದ ದಿನ. ಇದು ‘ಸೀಮೋಲ್ಲಂಘನ’ ದಿನವೂ ಹೌದು. ಅಂದು ಹಿಂದಿನ ಕಾಲದಲ್ಲಿ ರಾಜರು ಸೈನ್ಯದೊಂದಿಗೆ ತಮ್ಮ ರಾಜ್ಯಗಳ ಸೀಮೆಗಳನ್ನು ದಾಟಿ ನೆರೆಹೊರೆಯ ರಾಜ್ಯಗಳನ್ನು ಪ್ರವೇಶಿಸಿ ಆಕ್ರಮಿಸುತ್ತಿದ್ದರು. ವಿಜಯದಶಮಿ ಯಾವುದೇ ಹೊಸ ಕಾರ್ಯ-ಯೋಜನೆಗಳನ್ನು ಪ್ರಾರಂಭಿಸಲು ಪ್ರಶಸ್ತವಾದ ದಿನವೆಂಬುದು ಭಾರತೀಯರ ವಿಶ್ವಾಸ. ಈ ತಿಂಗಳ ಅಂತ್ಯದಲ್ಲಿ ಜನರು ‘ಧನತೇರಸ್’ ಹಬ್ಬವನ್ನು ಸುವರ್ಣ ಆಭರಣಗಳನ್ನು ಕೊಂಡು ಅಥವಾ ತಮ್ಮ ಬಂಡವಾಳವನ್ನು ಹೂಡಿ ಹೊಸ ವ್ಯಾಪಾರ ಆರಂಭಿಸುತ್ತಾರೆ.
ಕಾರ್ತಿಕದ ಬೆಳಕು: ಶರದೃತುವು ಅಂತ್ಯವಾಗಿ ಶೀತವು ವಾತಾವರಣದಲ್ಲಿ ಕಾಣಿಸಿಕೊಳ್ಳುವ ಸಮಯದಲ್ಲಿ ಕಾರ್ತಿಕ ಮಾಸವು (ಅಕ್ಟೋಬರ್-ನವೆಂಬರ್) ಪ್ರವೇಶಿಸುತ್ತದೆ. ಈ ತಿಂಗಳ ಪ್ರಮುಖ ಹಬ್ಬವೆಂದರೆ ಅಮಾವಾಸ್ಯೆಯಂದು ಆಚರಿಸಲ್ಪಡುವ ದೀಪಾವಳಿ. ಗೃಹಗಳನ್ನು ಶುಭ್ರಗೊಳಿಸಿ, ದೀಪಗಳಿಂದ ಅಲಂಕರಿಸಿ ನೂತನ ವಸ್ತ್ರ್ರಳನ್ನು ಧರಿಸಿ ಸಿಹಿತಿಂಡಿ ಇತ್ಯಾದಿ ಉಡುಗೊರೆಗಳನ್ನು ಬಂಧು-ಮಿತ್ರರಿಗೆ ನೀಡಿ ಸಂಭ್ರಮಿಸುವ ದೀಪಾವಳಿಯನ್ನು ಮಕ್ಕಳು ಎದುರು ನೋಡುತ್ತಾರೆ. ಬಾಣ-ಬಿರುಸುಗಳನ್ನು ಹಚ್ಚಿ, ಪಟಾಕಿಗಳನ್ನು ಸಿಡಿಸಿ ಮಕ್ಕಳು ಕುಣಿದು ಕುಪ್ಪಳಿಸುತ್ತಾರೆ. ಅವರ ಜೊತೆಗೆ ಹಿರಿಯರೂ ಸೇರಿ ನಲಿಯುತ್ತಾರೆ. ದೀಪಗಳ ಹಾಗೂ ಬಾಣ-ಬಿರುಸುಗಳ ಪ್ರಕಾಶದಲ್ಲಿ ತಮ್ಮ ಪೂರ್ವಜರು ಆಕಾಶಮಾರ್ಗವಾಗಿ ಸ್ವರ್ಗವನ್ನು ಸೇರುತ್ತಾರೆಂಬುದು ಇನ್ನೊಂದು ನಂಬಿಕೆ. ಹದಿನಾಲ್ಕು ವರ್ಷಗಳ ವನವಾಸದ ನಂತರ ಶ್ರೀರಾಮನು ಅಸುರೀ ಶಕ್ತಿಗಳನ್ನು ನಾಶಮಾಡಿ ಪುನಃ ಅಯೋಧ್ಯೆಯನ್ನು ಪ್ರವೇಶಿಸಿದ್ದು ದೀಪಾವಳಿಯ ದಿನದಂದು. ಅಂದು ಲಕ್ಷ್ಮಿಪೂಜೆಯೂ ಇರುತ್ತದೆ. ಈ ತಿಂಗಳಲ್ಲಿ ಆಚರಿಸಲ್ಪಡುವ ‘ಭಾಯ್ದೂಜ್’ ಹಬ್ಬದಂದು ತಮ್ಮ ವಿವಾಹಿತ ಸೋದರಿಯರ ಮನೆಗೆ ಸೋದರರು ತೆರಳಿ ಅವರನ್ನು ಅಭಿನಂದಿಸುತ್ತಾರೆ. ಅದೇ ರೀತಿಯಲ್ಲಿ ‘ಕರ್ವಾಚೌತ್’ ದಿನದಂದು ಗೃಹಿಣಿಯರು ಪತಿಯರ ದೀರ್ಘ ಜೀವನಕ್ಕಾಗಿ ಉಪವಾಸ ವ್ರತ ಆಚರಿಸುತ್ತಾರೆ. ಆದರೆ ನಾವು ಒಂದು ಪ್ರಶ್ನೆಯನ್ನು ಕೇಳಬೇಕಾಗಿದೆ- ಎಷ್ಟು ಜನ ಸಹೋದರಿಯರು ತಮ್ಮ ಸಹೋದರರ ಶ್ರೇಯಸ್ಸಿಗಾಗಿ ಹಾಗೂ ಎಷ್ಟು ಜನ ಗಂಡಂದಿರು ತಮ್ಮ ಸತಿಯರ ಶ್ರೇಯಸ್ಸಿಗಾಗಿ ಉಪವಾಸ ಮಾಡುತ್ತಾರೆ? ಈ ಮಾಸದ ಏಕಾದಶಿಯನ್ನು ‘ಪ್ರಬೋಧಿನಿ’ ಏಕಾದಶಿ’ಯೆಂದು ಕರೆಯುತ್ತಾರೆ. ಈ ದಿನದಂದು ದೇವ-ದೇವತೆಗಳು ನಾಲ್ಕು ತಿಂಗಳ ವಿಶ್ರಾಂತಿಯನ್ನು ಮುಗಿಸಿ ಪುನರಾಗಮಿಸುತ್ತಾರೆ ಹಾಗೂ ಭಕ್ತರು ತೀರ್ಥಯಾತ್ರೆಗಳನ್ನು ಪ್ರಾರಂಭಿಸುತ್ತಾರೆ. ಮದುವೆ-ಮುಂಜಿಗಳಿಗೂ ಪ್ರಶಸ್ತವಾದ ಕಾಲ ಇಲ್ಲಿಂದ ಪ್ರಾರಂಭವಾಗುತ್ತದೆ.
ಮೋಕ್ಷಕ್ಕೆ ಮಾರ್ಗ: ಒಂಬತ್ತನೆಯ ತಿಂಗಳೆಂದರೆ ಮಾರ್ಗಶೀರ್ಷ ಅಥವಾ ಅಗ್ರಹಾಯಣ ಮಾಸ (ನವೆಂಬರ್-ಡಿಸೆಂಬರ್); ಹೇಮಂತ ಋತುವಿನ ಪ್ರಾರಂಭ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು, ‘ಎಲ್ಲ ಮಾಸಗಳ ಪೈಕಿ ನಾನು ಮಾರ್ಗಶೀರ್ಷ ಮಾಸ’ವೆಂದು ಘೊಷಿಸಿದ್ದಾನೆ. ಇದು ಈ ತಿಂಗಳ ಪಾವಿತ್ರ ್ಯ ಹಾಗೂ ಪ್ರಾಧಾನ್ಯವನ್ನು ಎತ್ತಿ ತೋರುತ್ತದೆ.
ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛಂದಸಾಮಹಂ |
ಮಾಸಾನಾಂ ಮಾರ್ಗಶೀಷೋಹಮೃತೂನಾಂ ಕುಸುಮಾಕರಃ || 10.35 ||
‘ನಾನು ಸಾಮಗಳಲ್ಲಿ ಬೃಹತ್ಸಾಮ, ಛಂದಸ್ಸುಗಳಲ್ಲಿ ಗಾಯತ್ರೀ, ಮಾಸಗಳಲ್ಲಿ ಕುಸುಮಾಕರನಾದ ಮಾರ್ಗಶೀರ್ಷ ಮತ್ತು ಋತುಗಳಲ್ಲಿ ವಸಂತ’. ಈ ಮಾಸದಲ್ಲಿ ಕೃಷ್ಣ ಪಕ್ಷದ ಏಕಾದಶಿಯನ್ನು ‘ವೈಕ ುಂಠ ಏಕಾದಶಿ’ಯೆಂದು ಆಚರಿಸುತ್ತಾರೆ. ಅಂದು ಮಹಾವಿಷ್ಣುವಿನ ದಿವ್ಯ ನಿವಾಸ ವೈಕುಂಠದ ದ್ವಾರಗಳು ತೆರೆದುಕೊಂಡಿರುವುದರಿಂದ ಭಕ್ತರು ಆ ದಿನದಂದು ದೇಹಬಂಧನವನ್ನು ಕಳಚಿಕೊಳ್ಳ ಬೇಕೆಂದು ಬಯಸುತ್ತಾರೆ. ಆದ್ದರಿಂದಲೇ ಈ ದಿನವನ್ನು ‘ಮೋಕ್ಷದಾ ಏಕಾದಶಿ’ಯೆಂದೂ ಕರೆಯುತ್ತಾರೆ.
ಪೌಷ್ಯಮಾಸ: ತೀವ್ರ ಚಳಿಗಾಲದೊಂದಿಗೆ ಆಗಮಿಸುವ ಪೌಷ್ಯ ಮಾಸವು (ಡಿಸೆಂಬರ್-ಜನವರಿ) ಕೃಷಿ ಪ್ರಧಾನವಾಗಿರುವ ನಮ್ಮ ದೇಶದಲ್ಲಿ ಸುಗ್ಗಿಯ ಸಂಭ್ರಮದ ಸಮಯ; ಹೊಲ-ತೋಟ-ಗದ್ದೆಗಳಲ್ಲಿ ಬೆಳೆದ ಬೆಳೆಯನ್ನು ರೈತರು ಕೊಯ್ಲುಮಾಡಿ ಶೇಖರಿಸುವ ಸಮಯ. ಸುಗ್ಗಿಯ ಈ ಹಬ್ಬವನ್ನು ‘ಪೊಂಗಲ್’, ‘ಮಕರ ಸಂಕ್ರಾಂತಿ’ ಹಾಗೂ ‘ಲೋಹಾರಿ’ ಎಂದು ಆಚರಿಸುತ್ತಾರೆ. ಈ ಹಬ್ಬವನ್ನು ದೇಶದಲ್ಲಿ ಉತ್ಸಾಹ-ಸಂಭ್ರಮಗಳಿಂದ ಆಚರಿಸುತ್ತಾರೆ. ಹೊಸದಾಗಿ ಬೆಳೆದ ಧಾನ್ಯಗಳಿಂದ ಆಹಾರವನ್ನು ಸಿದ್ಧಪಡಿಸಿ, ಕೃತಜ್ಞತೆಯಿಂದ ದೇವ-ದೇವತೆಗಳಿಗೆ ಅರ್ಪಿಸುತ್ತಾರೆ. ನೂತನ ವಸ್ತ್ರಗಳನ್ನು ತೊಟ್ಟು, ಗಾಳಿಪಟಗಳನ್ನು ಆಕಾಶದಲ್ಲಿ ತೇಲಿ ಬಿಡುತ್ತ, ಬಂಧು-ಮಿತ್ರರೊಡನೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ನಲಿಯುತ್ತಾರೆ. ಇದೇ ಸಮಯದಲ್ಲಿ ಸೂರ್ಯನು ತನ್ನ ದಕ್ಷಿಣದ ಪಯಣವನ್ನು ಮುಗಿಸಿ ಕರ್ಕಾಟಕ ಸಂಕ್ರಾಂತಿ ವೃತ್ತವನ್ನು ದಾಟಿ ಉತ್ತಾರಾಭಿಮುಖವಾಗಿ ಮಕರ ಸಂಕ್ರಾಂತಿ ವೃತ್ತದೆಡೆಗೆ ಚಲಿಸುತ್ತಾನೆ. ಪ್ರಶಸ್ತವಾದ ಉತ್ತರಾಯಣ ಕಾಲ ಇದರೊಂದಿಗೆ ಪ್ರಾರಂಭವಾಗುತ್ತದೆ. ಈ ಮಾಸದ ಪೌರ್ಣಿಮೆಯಂದು ತಮಿಳುನಾಡಿನಲ್ಲಿ ‘ಥೈ ಪೂಸಂ’ ಹಬ್ಬವನ್ನು ಆಚರಿಸಿ ಕಾರ್ತಿಕೇಯನಿಗೆ ಗಡಿಗೆಗಳಲ್ಲಿ ಹಾಲನ್ನು ತೆಗೆದುಕೊಂಡು ಹೋಗಿ ಸಮರ್ಪಿಸುತ್ತಾರೆ.
ಶಿಶಿರ ಋತುವಿನ ಚಳಿಯು ತೀಕ್ಷ್ಣವಾಗುತ್ತಿದ್ದಂತೆ, ಜನರು ಮೈಯನ್ನು ಬೆಚ್ಚಗೆ ಮಾಡಿಕೊಂಡು, ನಿಸರ್ಗದ ಸೌಂದರ್ಯ ಆಸ್ವಾದಿಸಲು ವಸಂತ ಋತುವನ್ನು ಎದುರು ನೋಡುತ್ತ, ಅದರ ಆಗಮನಕ್ಕೆ ನಲವತ್ತು ದಿನಗಳ ಮೊದಲೇ ಮಾಘ ಮಾಸದಲ್ಲಿ (ಜನವರಿ-ಫೆಬ್ರವರಿ) ‘ವಸಂತ ಪಂಚಮಿ’ಯನ್ನು ಆಚರಿಸುತ್ತಾರೆ. ಸಾಸಿವೆಯನ್ನು ಬೆಳೆಯುವ ಪ್ರದೇಶದಲ್ಲಿ ಭೂಮಿ ಆ ಪುಷ್ಪಗಳಿಂದ ಆಚ್ಛಾದಿತವಾಗಿ ಹಳದಿಮಯವಾಗುವ ಈ ಸಮಯದಲ್ಲಿ ವಸಂತ ಪಂಚಮಿಯ ದಿನ ಜನರು ಹಳದಿ ವಸ್ತ್ರಗಳನ್ನು ಧರಿಸುತ್ತಾರೆ. ಸರಸ್ವತೀ ಮಾತೆಯನ್ನು ಪೂಜಿಸಿ ಹೊಸ ವಿಷಯಗಳನ್ನು ಅಧ್ಯಯನ ಮಾಡುತ್ತಾರೆ. ಈ ಮಾಸದ ಅಮಾವಾಸ್ಯೆಯಂದು ಮಹಾಶಿವರಾತ್ರಿ. ಪುರಾಣ ಪ್ರಣೀತವಾಗಿರುವಂತೆ ಪರಮಶಿವನು ಸಮುದ್ರ ಮಥನ ಕಾಲದಲ್ಲಿ ಉದ್ಭವವಾದ ಹಾಲಾಹಲವನ್ನು ಕುಡಿದು ನೀಲಕಂಠನಾಗಿ ಪ್ರಪಂಚವನ್ನು ರಕ್ಷಿಸಿದ ಈ ದಿನದಂದು ಭಕ್ತರು ಉಪವಾಸ ಆಚರಿಸಿ, ರಾತ್ರಿಯಲ್ಲಿ ಜಾಗರಣೆ ಮಾಡಿ ಕರುಣಾಮಯನಾದ ಶಿವನನ್ನು ಆರಾಧಿಸುತ್ತಾರೆ. ಇದು ಆಧ್ಯಾತ್ಮಿಕ ಶಕ್ತಿಯ ಬಲದಿಂದ ದೇಹದ ಪಶುಪ್ರವೃತ್ತಿಗಳಾದ ಕ್ಷುಧೆ ಹಾಗೂ ನಿದ್ರೆಗಳನ್ನು ಜಯಿಸುವುದಕ್ಕೆ ಸಂಕೇತ. ಇದೇ ತಿಂಗಳಲ್ಲಿ ಭೂಮಿ ಮೇಲಿನ ಸಕಲ ಜೀವರಾಶಿಗಳಿಗೆ ಜೀವನದಾತನಾದ ಸೂರ್ಯದೇವನನ್ನು ರಥಸಪ್ತಮಿಯಂದು ಆರಾಧಿಸುತ್ತಾರೆ.
ವಸಂತಾಗಮನದ ಸಂಭ್ರಮ: ಭಾರತೀಯ ಪಂಚಾಂಗದ ಅಂತಿಮ ಮಾಸವೆಂದರೆ ಫಾಲ್ಗುಣ (ಫೆಬ್ರವರಿ-ಮಾರ್ಚ್). ಮೈನಡುಗಿಸುವ ಚಳಿ ತೊಲಗಿ ಮೈಮನಗಳನ್ನು ತಣಿಸಿ ಕುಣಿಸುವ ವಸಂತ ಋತುವಿನ ಆಗಮನದ ಸಮಯ, ಕವಿ ಹೃದಯದವರಿಗೆ ಶೃಂಗಾರ ರಸಕ್ಕೆ ಆಹ್ವಾನ. ರಾಧೆ ಹಾಗೂ ಕೃಷ್ಣರ ಮಧುರಪ್ರೇಮವನ್ನು ಸ್ಮರಿಸಿ ಜನರು ಆಹ್ಲಾದದಿಂದ ಬಹು ವರ್ಣರಂಜಿತ ‘ಹೋಳಿಹಬ್ಬ’ವನ್ನು ಆಚರಿಸುತ್ತಾರೆ. ಇದೇ ದಿನದಂದು ‘ಕಾಮದಹನ’ಕ್ಕೆ ಸಂಕೇತವಾಗಿ ತಮ್ಮ ಹಳೆಯ ಅನಗತ್ಯ ವಸ್ತುಗಳನ್ನು ರಾಶಿಮಾಡಿ ದಹಿಸುತ್ತಾರೆ. ಹೀಗೆ ಇದು ಕಾಮರಹಿತ ದಿವ್ಯಪ್ರೇಮಕ್ಕೆ ದ್ಯೋತಕ; ಅನವಶ್ಯಕ ಭೌತಿಕ ವಸ್ತುಗಳ ಬಗ್ಗೆ ಆಸೆಗಳನ್ನು ತ್ಯಜಿಸುವುದರ ಪ್ರತೀಕವೂ ಹೌದು. ಕೆಲವು ಪ್ರದೇಶಗಳಲ್ಲಿ ಇದನ್ನು ‘ಹೋಲಿಕಾ ದಹನ’ವೆಂದು ಆಚರಿಸುತ್ತಾರೆ. ಹೋಲಿಕಾ ಪುರಾಣ ಪ್ರಸಿದ್ಧ ಪ್ರಹ್ಲಾದನ ಸೋದರತ್ತೆ. ತಂದೆ ಹಿರಣ್ಯಕಶ್ಯಪನು ಕ್ರೋಧಕ್ಕೆ ತುತ್ತಾಗಿ ಮಗನನ್ನು ಹೋಲಿಕಾಳೊಂದಿಗೆ ಅಗ್ನಿಗೆ ಆಹುತಿ ಮಾಡಿದಾಗ, ಹೋಲಿಕಾ ಸುಟ್ಟು ಭಸ್ಮವಾಗುತ್ತಾಳೆ; ಆದರೆ ಶ್ರೀಮನ್ನಾರಾಯಣನ ಅನುಗ್ರಹದಿಂದ ಪ್ರಹ್ಲಾದನು ರಕ್ಷಿಸಲ್ಪಡುತ್ತಾನೆ.
ಸಂಸ್ಕೃತ ಭಾಷೆಯಲ್ಲಿ ‘ಉತ್’ ಮತ್ತು ‘ಸವ’- ಇವೆರಡರ ಕೂಡುವಿಕೆಯಿಂದ ‘ಉತ್ಸವ’ ಪದದ ಆವಿರ್ಭಾವವಾಗುತ್ತದೆ. ಸವ ಎಂದರೆ ದುಃಖ. ಉತ್ ಎಂದರೆ ಪರಿಹಾರ. ದುಃಖದ ಪರಿಹಾರಕ್ಕಾಗಿ ಜನರು ಉತ್ಸವಗಳನ್ನು ಆಚರಿಸುತ್ತಾರೆ. ಮಾನವನು ಆನಂದಪಿಪಾಸು; ಆನಂದವನ್ನರಸುವುದು ಅವನ ಸಹಜ ಸ್ವಭಾವ. ಉತ್ಸವಗಳು ಬಂಧು-ಮಿತ್ರರೊಡನೆ ನಲಿದು ಸಂಭ್ರಮಿಸಲು
ಚಾತುರ್ಮಾಸದ ಮಹತ್ವ: ಆಷಾಢ ಮಾಸದ ಏಕಾದಶಿಯಿಂದ ಪ್ರಾರಂಭವಾಗಿ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಅಂತ್ಯವಾಗುವ ಚಾತುರ್ವಸವು ಸಂವತ್ಸರದಲ್ಲಿ ಪವಿತ್ರ ಆಧ್ಯಾತ್ಮಿಕ ಸಮಯವಾಗಿರುತ್ತದೆ. ಈ ಸಮಯದಲ್ಲಿ ಮಳೆಗಾಲದ ಪ್ರವಾಹಗಳಿಂದಾಗಿ ತೀರ್ಥಕ್ಷೇತ್ರಗಳಿಗೆ ಪ್ರಯಾಣ ದುರ್ಗಮವಾಗುತ್ತದೆ. ತೀರ್ಥಕ್ಷೇತ್ರಗಳಲ್ಲಿ ಈ ಸಮಯದಲ್ಲಿ ದೇವ-ದೇವತೆಗಳು ವಿಶ್ರಾಂತಿ ಪಡೆಯುತ್ತಾರೆಂದು ಪುರಾಣಗಳು ಸಾಂಕೇತಿಕವಾಗಿ ಹೇಳುತ್ತವೆ. ಈ ನಾಲ್ಕು ಮಾಸಗಳಲ್ಲಿ ಭಕ್ತರು, ಸಾಧಕರು ಹಾಗೂ ಸಾಧು-ಸಂನ್ಯಾಸಿಗಳು ಹೊರಗೆ ತೆರಳದೆ, ತಾವಿದ್ದ ಸ್ಥಳಗಳಲ್ಲಿಯೇ ಆಧ್ಯಾತ್ಮಿಕ ಸಾಧನೆಯ ಕಾರ್ಯಕ್ರಮಗಳಲ್ಲಿ ನಿರತರಾಗುತ್ತಾರೆ. ಜನರು ಸಾಧು-ಸಂತರನ್ನು ತಮ್ಮ ಸ್ಥಳಗಳಿಗೆ ಆಹ್ವಾನಿಸಿ ಅವರ ಸೇವೆ ಮಾಡಿ, ಬೋಧನೆಗಳನ್ನು ಕೇಳಿ ಮನಸ್ಸನ್ನು ಪರಮಾತ್ಮನೆಡೆಗೆ ಕೊಂಡೊಯ್ಯುತ್ತಾರೆ. ಒಟ್ಟಿನಲ್ಲಿ ಚಾತುರ್ವಸವು ವರ್ಷದ ಹಿಂದಿನ ಎಂಟು ತಿಂಗಳ ಸಮಯದ ಅವಿರತ ಕಾರ್ಯಗಳ ಶ್ರಮವನ್ನು ಪರಿಹರಿಸಿಕೊಂಡು, ಆಧ್ಯಾತ್ಮಿಕ ಕೃಷಿಯಲ್ಲಿ ತೊಡಗುವ ಸಮಯ; ಇದು ತಮ್ಮ ಸ್ಥಳಗಳಲ್ಲಿಯೇ ಇದ್ದು ಬಂಧು-ಬಾಂಧವರೊಂದಿಗೆ ಸಂಬಂಧವನ್ನು ಬೆಸೆದುಕೊಳ್ಳುವ ಸಮಯವೂ ಹೌದು. ಈ ಸಮಯದಲ್ಲಿ ಮಕ್ಕಳು ಸಾಧು-ಸಂತರು ಹಾಗೂ ಹಿರಿಯರಿಂದ ದೇವ-ದೇವತೆಗಳ ಕಥೆಗಳನ್ನು ಕೇಳಿ ನಮ್ಮ ಆಧ್ಯಾತ್ಮಿಕ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಹೀಗೆ ಉತ್ಸವಗಳ ಆಚರಣೆ ಮೂಲಕ ಸನಾತನ ಧರ್ಮ ಒಂದು ಪೀಳಿಗೆಯಿಂದ ನಿರಂತರವಾಗಿ ಮುಂದಿನ ಪೀಳಿಗೆಗೆ ಹರಿದು ಬರುತ್ತಿದೆ.
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)