ಹಿತವಚನವನ್ನು ಯಾವತ್ತೂ ಅಲಕ್ಷಿಸಬಾರದು: ಮನೋಲ್ಲಾಸ

Manollasa
Published on
| ಕಾಂತೇಶಾಚಾರ್ಯ ಕದರಮಂಡಲಗಿ

ರಾಮಾಯಣದ ಸಂದರ್ಭ. ರಾಮನ ಮೇಲಿನ ದ್ವೇಷ, ಸೀತೆಯ ಮೇಲಿನ ಮೋಹ, ಈ ಎರಡು ಕಾರಣಗಳಿಂದಾಗಿ ರಾವಣ ಸೀತೆಯನ್ನು ಅಪಹರಿಸಿ ಕರೆತಂದ. ಸುಗ್ರೀವನೊಡನೆ ಸಖ್ಯ ಮಾಡಿ, ವಾನರಸೇನೆಯ ಸಹಾಯದಿಂದ ಸೇತುವೆಯ ಮೂಲಕ ಅಗಾಧವಾದ ಸಾಗರವನ್ನು ದಾಟಿ, ಲಂಕಾಪಟ್ಟಣಕ್ಕೆ ಮುತ್ತಿಗೆ ಹಾಕಿದ ಶ್ರೀರಾಮ. ಯುದ್ಧದ ಪರಿಸ್ಥಿತಿ ಎದುರಾದಾಗ, ತನ್ನ ಎಲ್ಲ ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಿದ ರಾವಣ. ರಾಮ-ಲಕ್ಷ್ಮಣರ, ವಾನರಪ್ರಮುಖರ ಶಕ್ತಿ-ಸಾಮರ್ಥ್ಯಗಳನ್ನು ಗೂಢಚಾರರು ಬಂದು ತಿಳಿಸಿದಾಗ ಸಭೆಯಲ್ಲಿ ಮೌನ ವಾತಾವರಣ. ಮುಂದೇನು ಮಾಡಬೇಕು? ಗಾಢವಾದ ಚರ್ಚೆ ಆರಂಭವಾಯಿತು. ರಾಮನ ಬಗ್ಗೆ ಎದೆಯಲ್ಲಿ ಭಾರೀ ಭಯ ಉಂಟಾಗಿದ್ದರೂ, ರಾಜನಾದ ರಾವಣನ ಪ್ರೀತಿಗಾಗಿ ಪ್ರಹಸ್ತ-ಮಹೋದರ ಮೊದಲಾದ ಪ್ರಮುಖನಿಶಾಚರರು ರಾವಣನ ಭುಜಬಲಪರಾಕ್ರಮವನ್ನು ವರ್ಣಿಸಿ, ಯುದ್ಧಕ್ಕೆ ಹುರಿದುಂಬಿಸಿದರು.

ವಿಭೀಷಣ ಮಾತ್ರ ರಾಮಬಾಣದ ಹಿರಿಮೆ ತಿಳಿಸಿಕೊಟ್ಟ. ‘ಕಲ್ಲಿನ ಮೇಲೆ ಮಣ್ಣಿನಹೆಂಟೆ ಹಾಕಿದರೆ ಒಡೆದು ಹೋಗುವುದು ಮಣ್ಣಿನಹೆಂಟೆಯೇ. ರಾಮನು ಬಿಡುವ ಬಾಣಕ್ಕೆ ಎಲ್ಲರೂ ನಶಿಸಿಹೋಗುವುದು ನಿಶ್ಚಿತ! ಯುದ್ಧ ಬೇಡ, ಸೀತೆಯನ್ನು ಕಳಿಸಿಬಿಡು’ ಎಂದು ವಿಭೀಷಣ ಎಚ್ಚರಿಸಿದ. ತನ್ನ ಮಾತನ್ನು ರಾವಣ ಕೇಳದಂತಾದಾಗ, ಲಂಕಾ ಪಟ್ಟಣವನ್ನೇ ಬಿಟ್ಟುಹೋಗಲು ನಿರ್ಧರಿಸಿ, ಕೂಡಲೇ ಅಲ್ಲಿಂದ ಹೊರಟುಬಿಟ್ಟ. ಹೋಗುವಾಗ ಒಂದು ಮಹತ್ವದ ಮಾತನ್ನು ಹೇಳಿದ-

ಸುಲಭಾಃ ಪುರುಷಾ ರಾಜನ್ ಸತತಂ ಪ್ರಿಯವಾದಿನಃ |

ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ||

‘ನಿನ್ನ ಪ್ರೀತಿಸಂಪಾದನೆಗಾಗಿ ಎಲ್ಲರೂ ನಿನ್ನ ಭುಜಬಲವನ್ನು ವರ್ಣಿಸಿ, ನಿನಗೆ ಉತ್ತೇಜನ ನೀಡುತ್ತಿರಬಹುದು. ಆದರೆ ಅವರ ಮಾತು ಸದ್ಯಕ್ಕೆ ಪ್ರಿಯವೆನಿಸಿದರೂ ನಿನಗೆ ಅದರ ಪರಿಣಾಮ ಅನರ್ಥವೇ. ರಾಮನೊಂದಿಗೆ ಯುದ್ಧ ಮಾಡಿದರೆ ಪುತ್ರ-ಪರಿವಾರಸಮೇತ ನಾಶವಾಗುತ್ತಿ ಎಂಬ ನನ್ನ ಮಾತು ತತ್ಕಾಲದಲ್ಲಿ ನಿನಗೆ ಕಹಿ ಆದರೂ ಅದರ ಹಿಂದೆ ನಿನ್ನ ಹಿತ ಅಡಗಿದೆ. ರಾಜನೇ! ನಮಗೆ ಯಾವಾಗಲೂ ಪ್ರಿಯವಾದದ್ದನ್ನೇ ಹೇಳುವವರು ಸುಲಭವಾಗಿ (ಹೇರಳವಾಗಿ) ಸಿಗುತ್ತಾರೆ. ಆದರೆ ಅಪ್ರಿಯವಾದರೂ ಹಿತವಾದದ್ದನ್ನು ಹೇಳುವವರು ಬಹಳ ವಿರಳ’.

ವಿಭೀಷಣ ಹೇಳಿದ ಆ ಮಾತು ಅದು ರಾವಣನಿಗೆ ಮಾತ್ರ ಸಂಬಂಧಿಸಿ ದ್ದಲ್ಲ. ನಮ್ಮ-ನಿಮ್ಮೆಲ್ಲರ ನಿತ್ಯಜೀವನಕ್ಕೆ ಅನ್ವಯಿಸುವಂತಹದ್ದು. ತಿಳಿವಳಿಕೆ ಇಲ್ಲದ ಚಿಕ್ಕವಯಸ್ಸಿನಲ್ಲಿ ಸ್ನೇಹಿತರು, ಪರಿಚಿತರು ಹರಟೆ ಹೊಡೆಯಲು, ಆಟವಾಡಲು ಕರೆಯುತ್ತಾರೆ. ಆಗ ಅವರ ಮಾತು ನಮಗೆ ಸಿಹಿಯಾಗಿ ಕಾಣಿಸುತ್ತದೆ. ಆದರೆ ಪರಿಣಾಮ ಮಾತ್ರ ಅನರ್ಥವೇ. ತಂದೆ-ತಾಯಿಗಳು, ಗುರುಗಳು ಯಾವಾಗಲೂ ಓದುವಂತೆ, ಬರೆಯುವಂತೆ, ದುಶ್ಟಟಗಳಿಗೆ ಬಲಿಯಾಗದಂತೆ, ಕೆಟ್ಟ ಹಾದಿ ತುಳಿಯದಂತೆ ತಿಳಿಹೇಳುತ್ತಾರೆ. ಆಗ ಅವರ ಮಾತು ನಮಗೆ ಕಹಿ ಎನಿಸುತ್ತದೆ. ಆದರೆ ತತ್ಕಾಲದಲ್ಲಿ ಅವರ ಮಾತು ಕಹಿ ಆದರೂ ನಮ್ಮ ಉಜ್ವಲಭವಿಷ್ಯಕ್ಕೆ ಹಿತಕಾರಿ ಯಾಗಿರುತ್ತದೆ. ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ನಮಗೆ ಪ್ರಿಯವಾದದ್ದನ್ನು ಮಾತ್ರವೇ ಹೇಳುವವರು ಸರಳವಾಗಿ ಸಿಗುತ್ತಾರೆ. ಆದರೆ ಅಪ್ರಿಯವಾದರೂ ಹಿತವಾದದ್ದನ್ನು ಹೇಳುವವರು ವಿರಳವಾಗಿ ಸಿಗುತ್ತಾರೆ. ಇದು ಕಹಿಸತ್ಯ! ಹಾಗಾಗಿ, ಪ್ರಾಜ್ಞರು, ತಿಳಿದವರು ಹೇಳಿದ ಹಿತವಚನಕ್ಕೆ ಕಿವಿಯಾಗಿ, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಆ ಮೂಲಕ ಸುಪಥದಲ್ಲಿ ಸಾಗೋಣ.

(ಲೇಖಕರು ಸಂಸ್ಕೃತ ವಿದ್ವಾಂಸರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net