ಪರಮಹಂಸರು ಹೇಳಿದ ಏಳು ಕೊಪ್ಪರಿಗೆ ಚಿನ್ನದ ಕಥೆ!

ffffff
Published on

‘ಮನುಷ್ಯಾಣಾಂ ಸಹಸ್ರೇಷು...’ ಎಂಬ ಗೀತೆಯ ವಾಕ್ಯದಂತೆ ಸಹಸ್ರ ಜನರಲ್ಲಿ ಒಬ್ಬರು ಮಾತ್ರ ಆಸೆ ಎಂಬ ವಿಷವರ್ತಲದಿಂದ ಮುಕ್ತರಾಗಬಹುದು. ಉಳಿದ ಎಲ್ಲ್ಲೂ ಆಸೆಯ ದಾಸರೇ. ಹಾಗಾದರೆ ಈ ಆಸೆಯ ಮಹತ್ವವೇನು? ಇದನ್ನೇಕೆ ಭಯಾನಕ ವರ್ತಲ ಎನ್ನುವರು? ಈ ವಿಷವರ್ತಲದಿಂದ ಹೊರಬರುವುದೆಂತು? ಮುಂತಾದ ಪ್ರಶ್ನೆಗಳು ಸಹಜ. ಈ ಪ್ರಶ್ನೆಗಳಿಗೆಲ್ಲ ಉತ್ತರವೆಂಬಂತೆ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಕಥೆಯೊಂದನ್ನು ಹೇಳುತ್ತಾರೆ. ಆ ಮೂಲಕ ಆಸೆಯ ಅನಾಹುತಗಳನ್ನು ತಿಳಿಸುತ್ತಾರೆ.

ಆ ಕಥೆ ಹೀಗಿದೆ: ಅದೊಂದು ದಿನ ಒಂದು ಮರದ ಕೆಳಗೆ ಒಬ್ಬ ಕ್ಷೌರಿಕ ಹೊಗುತ್ತಿದ್ದ. ಆಗ ಒಂದು ಅಶರೀರವಾಣಿ, ನೀನು ಏಳು ಕೊಪ್ಪರಿಗೆ ಚಿನ್ನವನ್ನು ತೆಗೆದುಕೊಳ್ಳುವೆಯಾ? ಎಂದಿತು. ಕ್ಷೌರಿಕ ಸುತ್ತಲೂ ನೋಡಿದ. ಯಾರೂ ಕಾಣಲಿಲ್ಲ. ಆದರೆ ಏಳು ಕೊಪ್ಪರಿಗೆ ಹಣದ ಆಸೆ ಕಾಡಿತು. ನಾನು ಅದನ್ನು ಸ್ವೀಕರಿಸುತ್ತೇನೆ ಎಂದ. ನೀನು ಮನೆಗೆ ಹೋಗು, ಅಲ್ಲಿ ನಾನು ಏಳು ಕೊಪ್ಪರಿಗೆ ಚಿನ್ನ ಇಟ್ಟಿರುವೆ ಎಂದಿತು ಅಶರೀರವಾಣಿ. ಕ್ಷೌರಿಕ ಓಡಿ ಮನೆ ಸೇರಿದ. ಅದು ನಿಜವಾಗಿತ್ತು. ಆದರೆ ಕೊನೆಯ ಕೊಪ್ಪರಿಗೆಯಲ್ಲಿ ಅರ್ಧ ಮಾತ್ರ ಚಿನ್ನದ ನಾಣ್ಯಗಳಿದ್ದವು. ಆತನಿಗೆ ಚಿಂತೆಯಾಯಿತು. ಆ ಕೊಪ್ಪರಿಗೆಯನ್ನೂ ತುಂಬಿಸುವ ಆಸೆ ಬಲವಾಯಿತು. ತನ್ನಲ್ಲಿದ್ದ ಒಡವೆಗಳನ್ನೆಲ್ಲಾ ನಾಣ್ಯಕ್ಕೆ ಪರಿವರ್ತನೆ ಮಾಡಿ ಕೊಪ್ಪರಿಗೆಗೆ ಹಾಕತೊಡಗಿದ.

ಪತ್ನಿಯ ಒಡವೆ, ಮಕ್ಕಳ ಆಭರಣಗಳನ್ನೆಲ್ಲಾ ಚಿನ್ನದ ನಾಣ್ಯವಾಗಿಸಿ ಹಾಕತೊಡಗಿದ. ಏನು ಮಾಡಿದರೂ ಆ ಕೊಪ್ಪರಿಗೆ ಮಾತ್ರ ತುಂಬಲೇ ಇಲ್ಲ! ತಾನು ಮಾಡುತ್ತಿದ್ದ ಕ್ಷೌರಿಕ ಕಾಯಕದ ಸಂಬಳ ಹೆಚ್ಚಿಸಲು ರಾಜನಲ್ಲಿ ಕೇಳಿಕೊಂಡ. ಕ್ಷೌರಿಕನ ಮೇಲೆ ರಾಜನಿಗೆ ತುಂಬಾ ವಿಶ್ವಾಸವಿತ್ತು. ಸಂಬಳವನ್ನು ಎರಡರಷ್ಟು ಹೆಚ್ಚಿಸಿದ. ಈ ಹಣವನ್ನೆಲ್ಲಾ ಉಳಿತಾಯ ಮಾಡಿದ ಕ್ಷೌರಿಕ ಕೊಪ್ಪರಿಗೆಗೆ ಹಾಕಿದ. ಆದರೆ ಅತಿಯಾಸೆಯ ಕೊಪ್ಪರಿಗೆ ಭರ್ತಿಯಾಗಲೇ ಇಲ್ಲ. ಅವನು ಅನಂತರ ಬಿಡುವಿದ್ದಾಗ ಭಿಕ್ಷಾಟನೆಯನ್ನೂ ಮಾಡತೊಡಗಿದ. ಎಲ್ಲವನ್ನೂ ಮಾಯಾ ಕೊಪ್ಪರಿಗೆಗೆ ಹಾಕತೊಡಗಿದ. ಹಲವು ತಿಂಗಳು ಹೀಗೆ ಸಾಗಿದವು. ಆದರೆ ಆ ಕ್ಷೌರಿಕನ ಸಂಕಟ ಜಾಸ್ತಿಯಾಗುತ್ತಾ ಬಂತು. ಇದನ್ನು ಗಮನಿಸಿದ ರಾಜ, ‘ಏನಯ್ಯಾ, ನಿನಗೆ ಸಂಬಳ ಅರ್ಧದಷ್ಟು ಇದ್ದಾಗ ತೃಪ್ತನಾಗಿದ್ದೆ, ಈಗ ಸಂಬಳ ಎರಡರಷ್ಟು ಹೆಚ್ಚು ಮಾಡಿದ ಮೇಲೆಯೂ ದುಃಖಿಯಾಗಿ ಕಾಣುವೆ, ನಿನಗೇನಾಗಿದೆ? ನಿನಗೇನಾದರೂ ಏಳು ಕೊಪ್ಪರಿಗೆ ಹಣ ಸಿಕ್ಕಿದೆಯೇ?’ ಎಂದು ಕೇಳಿದ. ಇದನ್ನು ಕೇಳಿ ಆಶ್ಚರ್ಯವಾಯಿತು.

‘ರಾಜರೆ, ಯಾರು ನಿಮಗೆ ಇದನ್ನು ಹೇಳಿದರು?’ ಎಂದು ಕೇಳಿದ. ಆಗ ರಾಜ ಹೇಳಿದ: ಯಕ್ಷ ಯಾರಿಗೆ ಏಳು ಕೊಪ್ಪರಿಗೆ ಹಣವನ್ನು ಕೊಡುತ್ತಾನೋ ಅವನ ಲಕ್ಷಣವೇ ಇದು. ನೀನು ತೆಗೆದುಕೊಳ್ಳುತ್ತೀಯೇನು ಎಂದು ಅವನು ನನ್ನನ್ನೂ ಕೇಳಿದ್ದ. ಆಗ ನಾನು ಈ ಹಣವನ್ನು ಖರ್ಚು ಮಾಡಲೋ ಅಥವಾ ಸುಮ್ಮನೆ ಇಟ್ಟಿರಬೇಕೋ? ಎಂದು ಕೇಳಿದೆ. ತಕ್ಷಣ ಯಕ್ಷ ಯಾವ ಮಾತನ್ನೂ ಆಡದೆ ಓಡಿ ಹೋದ. ಯಾರೂ ಆ ಹಣವನ್ನು ಖರ್ಚು ಮಾಡುವುದಕ್ಕೆ ಆಗುವುದಿಲ್ಲ ಎಂಬುದನ್ನು ನೀನು ಅರ್ಥಮಾಡಿಕೊಂಡಿಲ್ಲ. ಅದನ್ನು ಸ್ವೀಕರಿಸಿದರೆ ಕೂಡಿಹಾಕಬೇಕೆಂಬ ಆಸೆ ಬಲವಾಗುತ್ತದೆ. ತಕ್ಷಣವೇ ಹೋಗಿ ಆ ಕೊಪ್ಪರಿಗೆಗಳನ್ನು ಹಿಂದುರಿಗಿಸಿಬಿಡು.

ಕ್ಷೌರಿಕನಿಗೆ ಬುದ್ದಿ ಬಂತು. ಯಕ್ಷನಿರುವ ಮರದ ಬಳಿಗೆ ಬಂದು ನೀನು ಕೊಟ್ಟ ಚಿನ್ನದ ನಾಣ್ಯದ ಕೊಪ್ಪರಿಗೆೆಗಳನ್ನು ವಾಪಸ್ ತೆಗೆದುಕೊಂಡು ಬಿಡು, ನನಗೆ ಬೇಕಿಲ್ಲ ಎಂದ. ಯಕ್ಷ ಆಗಲಿ ಎಂದ. ಕ್ಷೌರಿಕ ಮನೆಗೆ ಬಂದು ನೋಡಿದ, ಏಳು ಕೊಪ್ಪರಿಗೆ ಹಣವೆಲ್ಲಾ ಮಾಯವಾಗಿತ್ತು! ಜೊತೆಗೆ ಅರ್ಧ ಕೊಪ್ಪರಿಗೆ ತುಂಬಿಸಲು ಇವನು ಏನೆಲ್ಲಾ ಹಣವನ್ನು ಹಾಕಿದ್ದನೋ ಅದೂ ಮಾಯವಾಗಿತ್ತು. ಈ ಉದಾಹರಣೆಯ ಮೂಲಕ ಪರಮಹಂಸರು ಜಗತ್ತಿಗೆ ಒಂದು ಅದ್ಭುತ ಸಂದೇಶವನ್ನು ನೀಡುತ್ತಾರೆ. ಅದೆಂದರೆ ನಿಜವಾದ ಜಮಾ ಮಾತ್ರ ಉಳಿದುಕೊಳ್ಳುತ್ತದೆ. ಮಿಕ್ಕಿದ್ದೆಲ್ಲಾ ನಮ್ಮದಲ್ಲ, ಆದರೆ ನಮ್ಮದು ಎಂದೂ ಹಗಲಿರುಳು ಆ ಕ್ಷೌರಿಕ ಕಷ್ಟಪಟ್ಟಂತೆ ದುಡಿದೂ ದುಡಿದೂ ಹಣವನ್ನು ವೃಥಾ ಕೂಡಿಡುತ್ತಾ ಬಂದಲ್ಲಿ ಸಂಪೂರ್ಣವಾಗಿ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಪ್ರಪಂಚದಲ್ಲಿ ನಾವು ಕಾಣದ ಒಂದು ಅಂಶವೆಂದರೆ ತೃಪ್ತಿ. ಸಿಕ್ಕಿದಷ್ಟೇ ಸಾಕು ಎಂದು ತೃಪ್ತಿಯಿಂದಿದ್ದರೆ ಮನುಷ್ಯ ದೈವತ್ವದೆಡೆಗೆ ಸಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net